ನಮ್ಮ ಪ್ರಿಯ ಗುರುಬಂಧು ಶ್ರೀ ರಾಘವೇಂದ್ರ ರಾವ್, ರಾಯಚೂರು ಅವರ ಲೇಖನಗಳ ಹಾಗೂ ಭಾಷಣಗಳ ಸಂಗ್ರಹ “Call of the Fellow Traveller’ ಗ್ರಂಥದ ಕನ್ನಡ ಅನುವಾದವನ್ನು 2001ರಲ್ಲಿ ನಾವು ‘ಸಹಪಥಿಕನ ಕರೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದೆವು.
ಅನಂತರ ಶ್ರೀ ರಾಘವೇಂದ್ರರಾಯರ ಇನ್ನೂ ಕೆಲವು ಲೇಖನಗಳು (ಇಂಗ್ಲಿಷ್ ಮತ್ತು ಹಿಂದಿ) ಶ್ರೀ ರವಿಕುಮಾರ, ರಾಯಚೂರು ಮತ್ತು ಶ್ರೀಮತಿ ನಲಿನಿ ಶ್ಯಾಮರಾವ್, ಕಲಬುರ್ಗಿ ಅವರಿಂದ ಲಭ್ಯವಾದವು. ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಈ ಆವೃತ್ತಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಅಲ್ಲದೆ, 2001ರ ಪ್ರಥಮ ಕನ್ನಡ ಆವೃತ್ತಿಯಲ್ಲಿ, ಕಾರಣಾಂತರಗಳಿಂದ, ಕೆಲವು ಕಡೆಗಳಲ್ಲಿ ಉಳಿದು ಹೋದ ಅಕ್ಷರದೋಷಗಳನ್ನು ಸರಿಪಡಿಸಬೇಕಿತ್ತು. ಇನ್ನು ಕೆಲವು ಕಡೆಗಳಲ್ಲಿ ಕ್ಲಿಷ್ಟವೆನಿಸುವ, ಅಥವಾ ಅಸ್ಪಷ್ಟವೆನಿಸುವ ಮತ್ತು ದೂರಾನ್ವಯವಾಗುವ ಪದಗಳನ್ನು, ವಾಕ್ಯಗಳನ್ನು, ಈ ಹೊತ್ತಿನಲ್ಲಿ ಸರಿಪಡಿಸುವ ಅಗತ್ಯತೆಯನ್ನು ಅನೇಕ ಅಭ್ಯಾಸಿ ಬಂಧುಗಳು ನಮ್ಮ ಗಮನಕ್ಕೆ ತಂದಿದ್ದರು. ಹಾಗಾಗಿ, ಅವುಗಳನ್ನು ಪರಿಷ್ಕರಣೆ ಮಾಡುವುದು ಸೂಕ್ತವಾದೀತೆಂದು ಭಾವಿಸಿ, ತಕ್ಕ ಮಾರ್ಪಾಡುಗಳನ್ನು ಮಾಡಿ, ಓದುಗರ ಸುಲಭ ಮತ್ತು ಸರಳ ಅರ್ಥಗ್ರಹಣಕ್ಕೆ ಅನುಕೂಲವಾಗುವಂತೆ ಪರಿಷ್ಕರಿಸುವ, ಯಥಾಸಾಧ್ಯ ಪ್ರಯತ್ನ ಮಾಡಲಾಗಿದೆ.
ಹೊಸ ಲೇಖನಗಳನ್ನು ಒದಗಿಸಿದ ಶ್ರೀ ರವಿಕುಮಾರ, ರಾಯಚೂರು ಹಾಗೂ ಸಹೋದರಿ ನಲಿನಿ ಶ್ಯಾಮರಾವ್ ಅವರಿಗೆ ನಾವು ಕೃತಜ್ಞರು.
ಈ ಆವೃತ್ತಿಯನ್ನು ಶ್ರೀ ರಾಘವೇಂದ್ರರಾಯರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿರುವದು ಸಂತೋಷದ ಸಂಗತಿ.
ಅಭ್ಯಾಸಿ ಬಂಧುಗಳು ಹೆಚ್ಚು ವಿಸ್ಕೃತಗೊಂಡ ಈ ಪರಿಷ್ಕೃತ ಆವೃತ್ತಿಯನ್ನು ಸ್ವಾಗತಿಸುವರೆಂದು ಮತ್ತು ಅದರಿಂದ ಲಾಭಾನ್ವಿತರಾಗುವರೆಂದು ಆಶಿಸುತ್ತೇವೆ.
ಧಾರವಾಡ
12-9-2025
ಎಂ. ಕೆ. ಹೆಗಡೆ ಯಲ ಅಧ್ಯಕ್ಷರು
ಯೋಗಾಶ್ರಮ ಟ್ರಸ್ಟ್ ಕಮೀಟಿ ಮತ್ತು ರಾ.ರಾ.ಬ.ಸೆಂ.ಸೆ. ಕಮೀಟಿ