ನನ್ನ ಅನುಭವವು ಶಕ್ಯಗೊಳಿಸಿದ ಮಟ್ಟಿಗೆ ಸಾಕಷ್ಟು ವಿಷಯಗಳನ್ನು ಚರ್ಚಿಸಿದ್ದೇನೆ. ಸಾಧಕರ ಯಶಸ್ಸಿನ ರಹಸ್ಯವನ್ನು ಕುರಿತು ಈಗ ಕೆಲವು ಮಾತುಗಳನ್ನು ಸೇರಿಸಬಹುದು. ಧ್ಯಾನವು ಆಧ್ಯಾತ್ಮದ ಅಡಿಗಲ್ಲು, ನಿಮ್ಮ ನಿಜವಾದ ಗುರಿಯನ್ನು ಎದುರಿಗಿಟ್ಟುಕೊಂಡು ಧ್ಯಾನ ಮಾಡಿದುದಾದರೆ ನೀವು ನಿಶ್ಚಯವಾಗಿ ಧ್ಯೇಯವನ್ನು ತಲುಪುವಿರಿ. ನಿಜವಾದ ಗುರಿಯ ಕಡೆಗೆ ಅನೇಕ ದಾರಿಗಳಿದ್ದು ಶಾಸ್ತ್ರಗಳಲ್ಲಿ ಅವನ್ನು ಕುರಿತು ಸಾಕಷ್ಟು ಚರ್ಚಿಸಲಾಗಿದೆ. ಮಾರ್ಗದರ್ಶನವು ಸರಿಯಾಗಿದ್ದರೆ, ಬಾಹ್ಯ ಶಕ್ತಿಗಳೂ ನಮ್ಮನ್ನು ಗುರಿಯ ಕಡೆಗೆ ಒಯ್ಯಲು ಸಹಾಯಕವಾಗುವವು. ಪೌರಾತ್ಯ ದಾರ್ಶನಿಕರು ಆಹಾರದ ಬಗ್ಗೆ ವಿಶೇಷ ಗಮನ ಕೊಟ್ಟಿದ್ದಾರೆ. ಸ್ವಚ್ಛತೆಯ ಕಡೆಗೆ ಲಕ್ಷ್ಯವಿಟ್ಟು ಯೋಗ್ಯ ರೀತಿಯಲ್ಲಿ ಅಡುಗೆ ಮಾಡಬೇಕು. ಅದು ಆರೋಗ್ಯದ ದೃಷ್ಟಿಯಾಯಿತು. ಇನ್ನು, ಅಡುಗೆಯು ಸಾತ್ವಿಕವಾಗಿದ್ದು ನಿರಂತರವಾಗಿ ಭಗವಂತನ ಸ್ಮರಣೆಯಲ್ಲಿ ಮಾಡಿದುದಾದರೆ ಅದರ ಪರಿಣಾಮವು ಅದ್ಭುತವಾಗುವುದು. ಭಗವಂತನನ್ನು ಧ್ಯಾನಿಸುತ್ತಲೇ ಅದನ್ನು ತೆಗೆದುಕೊಂಡುದಾದರೆ, ಎಲ್ಲ ಆಧ್ಯಾತ್ಮಿಕ ವ್ಯಾಧಿಗಳನ್ನೂ, ನಮ್ಮ ಪ್ರಗತಿಗೆ ಬಾಧಕವಾಗುವ ಎಲ್ಲ ವಿಷಯಗಳನ್ನೂ ದೂರ ಮಾಡುವುದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಈ ಬಗ್ಗೆ ವಿಸ್ತಾರವಾಗಿ ಹೇಳಲಾದುದರಿಂದ ನಾನಿಲ್ಲಿ ಹೆಚ್ಚಿಗೆ ಹೇಳಬಯಸುವುದಿಲ್ಲ. “ಆದರೆ ನಿಜವಾಗಿಯೂ ಅಗತ್ಯವಾದ ಆಹಾರದ ಆಧ್ಯಾತ್ಮಿಕ ಹಾಗೂ ಆರೋಗ್ಯದ ತಳಹದಿಯನ್ನು ದುರ್ಲಕ್ಷಿಸಿ ಅನ್ಯಮತದವರು ಅದನ್ನು ಮುಟ್ಟಿದರೆ ಅದು ಅಪವಿತ್ರ ವಾಗುವುದೆಂಬ ಭ್ರಾಮಕ ಕಲ್ಪನೆಯನ್ನಿಟ್ಟುಕೊಳ್ಳಬಾರದು. ಕದಾಚಿತ್ ಅವರು ಹೆಚ್ಚು ಸಾತ್ವಿಕರೂ ಪವಿತ್ರರೂ ಆಧ್ಯಾತ್ಮದಲ್ಲಿ ಉನ್ನತ ಸ್ಥಿತಿಯನ್ನು ಹೊಂದಿದವರೂ ಇರಬಹುದು. ಹಿಂದುಗಳೂ ಈ ದಿಶೆಯಲ್ಲಿ ಸಾಕಷ್ಟು ಅನುಭವಿಸಿದ್ದಾರೆ. ಆಹಾರದ ಇಂದಿನ ನೀತಿಯು ಸಾಮಾಜಿಕವೂ ಅಲ್ಲ ಅಧ್ಯಾತ್ಮಿಕವೂ ಆಗಿಲ್ಲ ವೆಂಬುದನ್ನು ಅವರು ತಿಳಿದುಕೊಳ್ಳಬೇಕು’ ಈ ಅಭಿಪ್ರಾಯವನ್ನು ಪುಷ್ಟಿಗೊಳಿಸಲು, ಆಧ್ಯಾತ್ಮಿಕ ವಿಷಯಗಳಲ್ಲಿ ಪ್ರಮಾಣರಾಗಿರುವ ಸ್ವಾಮಿ ವಿವೇಕಾನಂದರ ನುಡಿಗಳನ್ನು ಉದಾಹರಿಸುವೆನು: “ನಮ್ಮ ಅನೇಕ ಮತಗಳಲ್ಲಿ ಕಾಣುವಂತೆ ನಿರರ್ಥಕವಾದ ಅಳತೆಗೆಟ್ಟ ಮತಾಂಧತೆಯು, ಧರ್ಮವನ್ನು ಅಡುಗೆಯ ಮನೆಯೊಳಗೆ ಅಟ್ಟಿಬಿಟ್ಟಿದೆ. ಅಂಥ ಧರ್ಮದಲ್ಲಡಗಿದ ಸತ್ಯವು ಎಂದಿಗೂ ಆಧ್ಯಾತ್ಮದ ಬೆಳಕಿಗೆ ಬರುವ ಆಶೆಯೇ ಇರುವುದಿಲ್ಲ. ಅದೊಂದು ವಿಲಕ್ಷಣವಾದ ಶುದ್ದ ಭೌತಿಕತೆಯೇ ಆಗಿದೆ. ಅದು ಜ್ಞಾನವೂ ಅಲ್ಲ, ಕರ್ಮವೂ ಅಲ್ಲ; ಭಕ್ತಿಯೂ ಅಲ್ಲ. ಅದೊಂದು ವಿಶಿಷ್ಟ ರೀತಿಯ ಬುದ್ದಿ ಭ್ರಂಶವಾಗಿದೆ. ಇದಕ್ಕೆ ಅಂಟಿಕೊಂಡವರು ಬ್ರಹ್ಮಲೋಕಕ್ಕೆ ಹೋಗುವುದರ ಬದಲಾಗಿ ಹುಚ್ಚರ ಆಸ್ಪತ್ರೆಗೆ ಹೋಗುವ ಸಂಭವವು ಹೆಚ್ಚಾಗಿರುತ್ತದೆ.” ಆರಂಭದ ಸಾಧಕನಿಗೆ ಅಗತ್ಯವಾದ ಇನ್ನೊಂದು ಬಾಹ್ಯ ವಸ್ತುವೆಂದರೆ ಅವನು ಅನ್ಯರ ಹೃದಯವನ್ನು ಚುಚ್ಚಿ ಮನಸ್ಸನ್ನು ನೋಯಿಸದಂತೆ ವಿಚಾರದಲ್ಲಿಯೂ ಮಾತಿನಲ್ಲಿಯೂ ಕೃತಿಯಲ್ಲಿಯೂ ಸಂಯಮವನ್ನು ಅಭ್ಯಸಿಸಬೇಕು. ಹೀಗೆ ಮಾಡದಿದ್ದರೆ ಅವನು ತನ್ನ ಹೃದಯವನ್ನೇ ಕೆಡಿಸಿಕೊಳ್ಳುವನು. ಆತನಿಗೆ ತಿಳಿಯದಂತೆ ಇದರ ಪ್ರತಿಕ್ರಿಯೆಯಾಗುವುದು.
ಅಭ್ಯಾಸಿಯು ಸಾಧಿಸಬೇಕಾದ ಇನ್ನೊಂದು ಸಂಗತಿಯೆಂದರೆ ಅವನು ಯಾವಾಗಲೂ ಉತ್ಸಾಹಪೂರ್ಣನಾಗಿರಬೇಕಲ್ಲದೆ ಗುರಿಯನ್ನು ಮುಟ್ಟಲಾರೆನೆಂಬ ಭಾವನೆಗೆ ಎಂದೂ ಅವಕಾಶ ಕೊಡಬಾರದು. ದೃಢ ಸಂಕಲ್ಪವು ಈ ದಿಶೆಯಲ್ಲಿ ಅಗತ್ಯವಾದುದು. ಈ ಮಾರ್ಗದಲ್ಲಿ ದೊಡ್ಡ ಪ್ರತಿಬಂಧಕವಾದ ವಿಷಣ್ಣತೆಗೆ ಎಡೆಗೊಡಬಾರದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಖಿನ್ನತೆಗೆ ಕಾರಣವೆಂದರೆ, ಸಾಮಾನ್ಯವಾಗಿ ಜನರು ಅದನ್ನು ಅತ್ಯಂತ ಕಠಿಣವೆಂದೂ ತೊಡಕಿನದೆಂದೂ ತಿಳಿಯುವರು. ನಾವು ದೊರಕಿಸಬೇಕಾದ ವಸ್ತುವು ನಿಜವಾಗಿಯೂ ಅತಿ ಸರಳವಾಗಿದ್ದು ಸುಲಭಪ್ರಾಪ್ತವಾಗಿದೆ. ನಿಜ ಹೇಳಬೇಕಾದರೆ ಈ ಸರಳವಸ್ತುವನ್ನು ದೊರಕಿಸಲು ಅನುಸರಿಸಲಾಗಿರುವ ಕಠಿಣ ಮಾರ್ಗಗಳು ಅದನ್ನು ವಕ್ರವಾಗಿಯೂ ತೊಡಕಿನದನ್ನಾಗಿಯೂ ಮಾಡಿವೆ. ಇದು ಒಂದು ಉದಾಹರಣೆಯಿಂದ ಸ್ಪಷ್ಟವಾಗಬಹುದು. ಸೂಜಿಯೊಂದು ನೆಲದ ಮೇಲೆ ಬಿದ್ದಿತೆಂದು ತಿಳಿಯಿರಿ. ಅದನ್ನು ಕೈಯಿಂದ ಸುಲಭವಾಗಿ ಎತ್ತಬಹುದು. ಅದೇ ಒಂದು ದೊಡ್ಡ ಭಾರವೆತ್ತುವ ಯಂತ್ರವನ್ನಾಗಲೀ ಬೇರೆ ಯಾವುದಾದರೊಂದು ಅದ್ಭುತ ಯಂತ್ರವನ್ನಾಗಲೀ ಉಪಯೋಗಿಸಿದರೆ ಆ ಸೂಜಿಯನ್ನೆತ್ತಲು ಕಠಿಣವಾಗುವುದು ಮತ್ತು ನಿಮ್ಮ ಪ್ರಯತ್ನವೆಲ್ಲ ನಿಷ್ಪಲವಾಗಬಹುದು. ಅದರಂತೆಯೇ ಅತ್ಯಂತ ಸರಳವಾದ ಸತ್ಯವಸ್ತುವನ್ನು ಪಡೆಯಲು ಕಠಿಣ ಮತ್ತು ತೊಡಕಿನ ಮಾರ್ಗಗಳನ್ನು ಚಿಂತಿಸಿದರೆ ಹಾಗೆಯೇ ಆಗುವುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜನರ ಪ್ರಯತ್ನಗಳೆಲ್ಲ ಸೂಜಿಯನ್ನೆತ್ತಲು ಭಾರವೆತ್ತುವ ಯಂತ್ರದ ಸಹಾಯವನ್ನು ಪಡೆಯ ಬಯಸಿದಂತೆಯೇ. ಇದು ಕೇವಲ ತಪ್ಪು ಕಲ್ಪನೆಯಾಗಿದ್ದು ಇದನ್ನು ತೆಗೆದು ಹಾಕಿದರೆ ಖಿನ್ನತೆಯು ಸಂಪೂರ್ಣವಾಗಿ ದೂರವಾಗುವುದು.
ಪೂರ್ಣತೆಯನ್ನು ಪಡೆದ ಹಾಗೂ ಯೌಗಿಕ ಪ್ರಾಣಾಹುತಿಯ ಸಾಮರ್ಥ್ಯವನ್ನುಳ್ಳ ಗುರುವಿನ ಮಾರ್ಗದರ್ಶನದಲ್ಲಿ ಹೃದಯದ ಮೇಲೆ ಧ್ಯಾನ ಮಾಡುವುದೇ ಈ ಪದ್ಧತಿಯ ಆರಂಭದ ಹೆಜ್ಜೆ. ಇಂಥ ಸದ್ಗುರು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಬಾಧಕವಾಗುವ ಎಲ್ಲ ವಸ್ತುಗಳನ್ನು ತೊಡೆದು ಹಾಕುವನು. ಆತನಿಂದ ಆಧ್ಯಾತ್ಮಿಕ ತರಂಗಗಳು ನಮ್ಮ ಹೃದಯದಲ್ಲಿ ಹರಿದುಬಂದು ದಿನೇ ದಿನೇ ನಮ್ಮಲ್ಲಿ ಶಾಂತಿಯನ್ನು ಬೆಳೆಸುವವು. ನಾವು ಧ್ಯಾನದಲ್ಲಿ ತನ್ಮಯರಾದಾಗ ಅಂತರಾತ್ಮನೊಂದಿಗೆ ನಮ್ಮನ್ನು ಜೋಡಿಸಿ ಕೊಳ್ಳುವೆವು. ಭಕ್ತಿಯು ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸಿ ದಾರಿಯನ್ನು ಸುಗಮಗೊಳಿಸುವುದು. ನಮ್ಮ ಹೃದಯವನ್ನು ಗುರುವಿನ ಶಕ್ತಿಯ ಗುರಿಯನ್ನಾಗಿ ಮಾಡಿದರೆ ನಮ್ಮ ಆಂತರ್ಯವು ವಿಸ್ತಾರವಾಗುತ್ತ ಹೋಗಿ ಈ ತತ್ಪರಿಣಾಮವಾಗಿ ಕಟ್ಟಕಡೆಗೆ ಭಗವದ್ರಾಜ್ಯದ ತುಂಬ ನಾವು ಪಸರಿಸಿದಂತೆ ಅನುಭವಿಸುವೆವು. ಕೇಂದ್ರಮಂಡಲದ ಹೃದಯದಲ್ಲಿ ನೆಲೆಸಿದವರ ಬಗೆಗೆ ನಾನೀ ಮಾತುಗಳನ್ನು ಹೇಳುತ್ತಿದ್ದೇನೆ. ಇಂಥ ಮನುಷ್ಯನು ತನ್ನ ಇಚ್ಛಾ ಶಕ್ತಿಯಿಂದ ಮಾಡಬಲ್ಲ ಕಾರ್ಯಗಳನ್ನು ಇತರರು ಶಸ್ತ್ರಗಳ ಬಲದಿಂದಲೂ ಮಾಡಲಾರರು. ಭೌತಿಕವಾದಿಗಳ ದೃಷ್ಟಿಯಲ್ಲಿ ಈ ಜಗತ್ತು ಚಿಕ್ಕದಾಗಿರುವುದರಿಂದ ಅವರು ಈ ಮಾತನ್ನೊಪ್ಪಲಿಕ್ಕಿಲ್ಲ. ಜನರು ಈ ತರದ ಅಂತ ದೃಷ್ಟಿಯನ್ನು ಬೆಳೆಸಿಕೊಂಡಿಲ್ಲವಾದುದರಿಂದ ಅವರಿಗೆ ಈ ವಿಷಯವು ಅರ್ಥಹೀನವೆನಿಸಬಹುದು. ಅಂತೂ ಹಿಂದೆ ವರ್ಣಿಸಲಾದ ವಿಭೂತಿಯ ನಿರ್ವೈರನೂ ನಿಷ್ಪಕ್ಷಪಾತಿಯೂ ಆಗಿರುವನು. ಆತನು ತನ್ನ ಎಲ್ಲ ಕಾರ್ಯಗಳಲ್ಲಿಯೂ ಸಮತ್ವವನ್ನು ಕಾಯ್ದುಕೊಂಡು ಹೋಗುವನು. ಒಂದು ವೇಳೆ ಕ್ಷಣ ಕಾಲವೇ ಆಗಲಿ ಅವನ ಸಮತ್ವದಲ್ಲಿ ಸ್ವಲ್ಪಾದರೂ ವ್ಯತ್ಯಾಸವಾದರೆ ತತ್ಪರಿಣಾಮವಾಗಿ ವಾಯುಮಂಡಲವು ಕಲುಷಿತವಾಗಿ ನಿರಾಶೆಯಾವರಿಸುವುದು. ಅದು ಸ್ವಲ್ಪ ಕಾಲ ಮುಂದುವರಿದರೆ ಜನರ ಛಾಯಾಗ್ರಸ್ತ ಹೃದಯವು ನಿಷ್ಕ್ರಿಯವಾಗುವುದು. ಈ ಸ್ಥಿತಿಯಲ್ಲಿ ಚಟುವಟಿಕೆಗಳೆಲ್ಲ ಮಾಯವಾಗಿ ಆತನ ಕಾರ್ಯಗಳು ಸ್ವಯಂಪ್ರೇರಿತವಾಗಿರುವವು. ಒಂದುವೇಳೆ ಚಟುವಟಿಕೆಗಳು ಉಳಿದುಕೊಂಡರೆ ಜೀವನ ಸಮಸ್ಯೆಯು ಇನ್ನೂ ಪರಿಹಾರವಾಗಿಲ್ಲವೆಂದೇ ಹೇಳಬಹುದು.
ಮುಕ್ತಿ ಮಾರ್ಗದ ನಮ್ಮ ನಡೆಯಲ್ಲಿ ನಾವು ವಿವಿಧ ರೂಪಗಳ, ವಿವಿಧ ವರ್ಣಗಳ ಚಕ್ರಗಳನ್ನು ದಾಟುವೆವು. ಅವೆಲ್ಲ ಹೃದಯಮಂಡಲದಲ್ಲಿ ಇರುವವು. ಅದರ ಆಚೆಗಿನ ಸ್ಥಿತಿಯು ನೀವು ಈಗಾಗಲೇ ಅನುಭವಿಸಿದಕ್ಕಿಂತ ಭಿನ್ನವಾಗಿರುವುದು. ಚಕ್ರಗಳೆಲ್ಲ ಮಾಯವಾಗಿರುವವು. ನೀವು ಮುಂದುವರಿದಂತೆಲ್ಲ ರಚನೆಯು ಬಿದ್ದು ಹೋಗುವುದು. ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನದ ಮೂಲಕ ಇದು ಅತ್ಯಂತ ಸುಲಭವಾಗುವುದು. ಧ್ಯೇಯಸಾಧನೆಯಲ್ಲಿ ದೃಢ ನಿರ್ಧಾರವೂ ನಿರಂತರ ತವಕವೂ ಲವಲವಿಕೆಯೂ ಸುಲಭವಾಗಿ ಯಶಸ್ಸನ್ನು ತಂದುಕೊಡುವವು.
ಮೊದಲು ರಾಜಯೋಗದಲ್ಲಿ ಭಗವಾನ್ ಶ್ರೀಕೃಷ್ಣನು ಯೋಗಿಗಳಿಗೆ ತಿಳಿದ ರೀತಿಯಲ್ಲಿ, ಭಕ್ತಿಯನ್ನು ಸಮಾವೇಶಗೊಳಿಸಿದ್ದನು. ಏಕೆಂದರೆ ಮುಂದೆ ಜೀವನವೇ ಅನಿಶ್ಚಿತವಾಗುವಂಥ ಕಾಲ ಬರುವುದೆಂಬುದನ್ನು ಆತನು ಅರಿತಿದ್ದನು. ಸಿದ್ದಾಂತ ಮತ್ತು ಪ್ರಯೋಗಗಳಲ್ಲಿ ಮಹದಂತರವಿದೆ. ನಾನು ಅದೇ ವಿಷಯವನ್ನೇ ನಿಮಗೆ ಹಗಲಿರುಳೂ ಹೇಳುತ್ತ ಹೋದರೆ, ಕ್ಷಣಕಾಲ ಮಾತ್ರ ನಿಮ್ಮ ಮಾನಸಿಕ ಅಭಿರುಚಿಯು ಬೆಳೆಯಬಹುದೇ ಹೊರತು ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಅಹಂಕಾರದ ಕಲ್ಪನೆಗಳನ್ನು ಬಿಸುಟು ಅಭ್ಯಾಸಕ್ಕೆ ಸಿದ್ಧರಾಗಿ ಶ್ರದ್ಧೆ-ವಿಶ್ವಾಸಗಳಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬನ್ನಿರಿ. ಮತ್ತೆ ಮತ್ತೆ ಶಾಸ್ತ್ರಾಭ್ಯಾಸ ಮಾಡುವುದರಿಂದ ಆಧ್ಯಾತ್ಮದ ಶಿಖರಕ್ಕೇರಬಹುದೆಂಬ ಕಲ್ಪನಾ ರಾಜ್ಯದಲ್ಲಿ ನೀವು ಭ್ರಮಿಸುವುದು ನನಗೆ ಇಷ್ಟವಿಲ್ಲ. ಹೀಗೆ ಮಾಡುವದರಿಂದ ನೀವು ವಿದ್ವಾಂಸರಾಗಬಹುದು. ತತ್ತ್ವಜ್ಞಾನಿಗಳಾಗಬಹುದು; ಆದರೆ ಪ್ರೇಮ-ಭಕ್ತಿಗಳಿಂದ ಕೂಡಿದ ಪ್ರತ್ಯಕ್ಷ ಸಾಧನೆಯಿಲ್ಲದೆ ನೀವು ಯೋಗಿಯಾಗಲಾರಿರಿ. ನೀವೆಷ್ಟೋ ಸಲ ಗೋದಿಯನ್ನುಂಡಿದ್ದರೂ ಅದರ ರುಚಿಯನ್ನು ಹೇಗೆ ವರ್ಣಿಸಲಾರಿರೋ ಹಾಗೆಯೇ ಅನುಭವಗಮ್ಯವಾದ ಸಂಗತಿಯನ್ನು ಶಬ್ದಗಳಲ್ಲಿಡುವುದು ಬಹಳ ಕಠಿಣ ಮೇಲೆ ಹೇಳಲಾದ ಸಂಗತಿಗಳ ವಾಸ್ತವಿಕತೆಯನ್ನು ಜನತೆಯು ಮನಗಾಣುವ ದಿನವು ಬೇಗನೆ ಬರಲೆಂದು ಹಾರೈಸುವೆನು.