ಭಾಗ್ಯೋದಯವಾಗಿ ಅಭ್ಯಾಸವು ಸಹಾಯ ಮಾಡಿದಾಗ ನಾವು ಎಂಟನೆಯ ಗ್ರಂಥಿಗೆ ಬಂದೆವು. ಈಗ ಇಲ್ಲಿ ದೃಶ್ಯವೇ ಬದಲಾಯಿತು. ಏಳನೆಯ ಗ್ರಂಥಿಯಲ್ಲಿ ಪ್ರಾಪ್ತವಾದ ದಶೆಗಳ ಸೂಕ್ಷ್ಮ ರೂಪವು ಇಲ್ಲಿ ದೊರೆಯುವುದು. ಇಲ್ಲಿ, ಅಭ್ಯಾಸಿಗೆ ‘ಸಂಸಾರವು ಸ್ವಪ್ನದಂತೆ’ ಎಂಬ ಅನುಭವ ಬರುವದು. ಇದು ಪ್ರಕೃತಿಯ ಕ್ರೀಡಾ ಸ್ಥಳ. ಇಲ್ಲಿಗೆ ಬಂದ ಮೇಲೆ ವೈರಾಗ್ಯವು ಸುದೃಢವಾಗುವುದು. ಇಲ್ಲಿಂದ ಮುಂದೆ ವೈರಾಗ್ಯದ ಸುಳಿವಿಲ್ಲವಾದರೂ ಅದರ ರೂಪವು ಬದಲಾಗುವುದು. ಇಲ್ಲಿ ವೈರಾಗ್ಯವು ಪರಿಪಕ್ವವಾಗುವುದು. ಪ್ರತಿಯೊಂದು ವಸ್ತುವೂ ಹಗುರಾಗಿ ಕಾಣುವುದು, ವಿಚಾರದಲ್ಲಿ ಭಾರವಿರುವುದಿಲ್ಲ. ಅಭ್ಯಾಸಿಯು ಶಾಂತಿ, ಸ್ಥಿರತೆ ಹಾಗೂ ಸಮಾಧಾನಗಳನ್ನನುಭವಿಸುವನು. ಈ ಶಾಂತಿಯು ಹೆಚ್ಚು ಹೆಚ್ಚುತ್ತ ಕೊನೆಗೆ ವಾಸ್ತವಿಕತೆಯಲ್ಲಿ ಪರಿವರ್ತನ ಹೊಂದುವ ದಶೆಯ ಆನಂದವನ್ನು ಸವಿಯುವನು, ಆದರೆ, ಬಂಧು, ಯಾರಲ್ಲಿ ಶಾಂತಿಯೊಂದಿಗೆ ವೇದನೆ ಹಾಗೂ ಅಸಮಧಾನಗಳಿವೆಯೋ ಆತನೇ ನಿಜವಾದ ಅಭ್ಯಾಸಿ. ಈ ವಸ್ತುವು ಕಸ-ಕಡ್ಡಿ, ಗಿಡ-ಗಂಟಿಗಳನ್ನು ಸ್ವಚ್ಛ ಮಾಡಿ ಮುಂದುವರಿಯಲು ಬಯಲನ್ನುಂಟುಮಾಡುವುದು, ಸಂಸಾರವು ಕನಸಿನಂತೆ ಎಂಬುದನ್ನು ನಾವು ಕೇಳಿದ್ದೇವೆ; ಅದನ್ನು ಹಾಗೆಯೇ ಭಾವಿಸಬೇಕೆಂಬುದನ್ನೂ ಓದಿದ್ದೇವೆ, ಆದರೆ ನನಗೆನಿಸುವ ಮಟ್ಟಿಗೆ, ಕೇವಲ ಓದುವವರಿಗೆ ಆ ರೀತಿಯ ಪ್ರತೀತಿಯೇ ಆಗಿಲ್ಲ. ಹೇಳುವವರಾದರೂ ಯಾವಾಗಲೂ ಇದನ್ನೇ ಒತ್ತಿ ಒತ್ತಿ ಹೇಳುವರು. ಇದಂತೂ ನಿಯಮಿತ ರೂಪದಿಂದ ಅಭ್ಯಾಸ ಮಾಡುತ್ತ ಮಾಡುತ್ತ ಇಲ್ಲಿಯವರೆಗೆ ಬಂದ ಮೇಲೆ ವಿಕಾಸ ಹೊಂದುವ ಸ್ಥಿತಿಯಾಗಿದೆ. ಒಂದುವೇಳೆ ನಾವು “ಸಂಸಾರವು ಕನಸಿನಂತೆ” ಎಂಬ ವಿಚಾರವನ್ನು ಬಲ ಪೂರ್ವಕ ದೃಢಮಾಡಿ ಕೊಂಡುದಾದರೆ ಅದು ಕೃತ್ರಿಮವಾಗುವುದೇ ಹೊರತು ವಾಸ್ತವಿಕ ಸ್ಥಿತಿ ಬರಲಾರದು. ಇದಂತೂ ದಾರಿಕಾರನಿಗೆ ಆತನ ದಾರಿಯಲ್ಲಿ ಸಿಕ್ಕುವ ವಿಶೇಷ ಸ್ಥಾನದ ದಶೆಯಾಗಿದೆ. ಇದನ್ನು ಕೃತ್ರಿಮ ಉಪಾಯಗಳಿಂದ ಪರಿಪಕ್ವಗೊಳಿಸಿಕೊಂಡೆವಾದರೆ ನಮ್ಮಷ್ಟಕ್ಕೆ ನಾವು ಮೋಸ ಹೋದಂತೆಯೇ. ಈ ಸ್ಥಾನದ ನಿಜವಾದ ದಶೆಯು ಶಾಂತಿಯದು. ನಾವು ಇದರಲ್ಲಿ ಲಯಹೊಂದಿದಾಗ ಇಲ್ಲಿಯ ದಶೆಯನ್ನು ಆತ್ಮಸಾಕ್ಷಾತ್ಕಾರ ಮಾಡಿಕೊಂಡಿರುವೆವೆಂದರ್ಥ. ಇಲ್ಲಿಂದ ಹೊರಗೆ ಬಂದು ಸಾರೂಪ್ಯತೆಯ ದಶೆಯಲ್ಲಿ ಪ್ರವೇಶಿಸಿದೆವೆಂದರೆ ಆ ಸ್ಥಿತಿಯ ಅನುಭವವಾಗುವುದು. ಈ ಸ್ಥಿತಿಯಲ್ಲಿ ಒಂದು ಹೊಸಚೈತನ್ಯವಿರುವುದು, ಬೇಸಗೆಯ ದಿನಗಳಲ್ಲಿ ಬಿಸಿಲಿನ ಜಳದಿಂದ ಪೀಡಿತನಾದ ಮನುಷ್ಯನೊಬ್ಬನು ನದಿಯಲ್ಲಿ ಮುಳುಗಿ ಸ್ನಾನಮಾಡಿ ಬಂದ ನಂತರ ಹೇಗೆ ಸ್ಫೂರ್ತಿಯನ್ನನುಭವಿಸುವನೋ ಹಾಗೆ ಈ ಸ್ಥಿತಿಯಿದೆ. ಈಗ ನಾವು ಸಾರೂಪ್ಯತೆಯ ದಶೆಯಲ್ಲಿ ಬಂದೆವು ಅಥವಾ ಇಲ್ಲಿಯ ಜೀವನದಲ್ಲಿ ಜೀವಪಡೆದೆವೆಂದು ಹೇಳಬಹುದು. ಈ ಜೀವನವನ್ನೂ ಲಯಗೊಳಿಸಿದಾಗ ಉಂಟಾಗುವ ಸ್ಥಿತಿಯು ನಾವು ಒಂಬತ್ತನೆಯ ಗ್ರಂಥಿಯನ್ನು ಮುಟ್ಟಿದ ಶುಭ ಸಂದೇಶವನ್ನಿಯುವುದು.