ಈಗ ನಾವು ಏಳನೆಯ ಗ್ರಂಥಿಯ ಕಡೆಗೆ ಸಾಗುವೆವು. ಈ ಸ್ಥಾನವು ಬ್ರಹ್ಮಾಂಡದೇಶದೊಳಗಡೆಯೇ ಇದೆ. ಇದನ್ನು ವಿರಾಟ್ ದೇಶವೆಂದು ಹೇಳುವರು. ಇದನ್ನು ಕುರಿತು ಹೇಳುವುದೇನಿದೆ? ಭಗವಂತನು ಈ ಸ್ಥಿತಿಯನ್ನು ಎಲ್ಲರಿಗೂ ಕರುಣಿಸಲಿ. ಮುಂದುವರಿದ ಸುವಾರ್ತೆಯು ದೊರಕುವಂತಾಗಲಿ. ಇಲ್ಲಿ ಪವಿತ್ರತೆಯ ಅನುಭವವು ಬಹಳಷ್ಟಾಗುವುದು. ಆದರೂ ಇನ್ನೂ ಪದಾರ್ಥದ ಪ್ರಭಾವವಿದ್ದೇ ಇದೆ. ಮಹಾಭಾರತದಲ್ಲಿ ಪ್ರಯೋಗವಾಗಿದ್ದ ಅಣುವಿನ ಶಕ್ತಿ ಇಲ್ಲಿ ಅಧಿಕವಾಗಿದೆ. ಯೋಗಿಯು ಈ ದಶೆಯ ಮೇಲೆ ಪೂರ್ಣವಾಗಿ ಪ್ರಭುತ್ವ ಪಡೆಯುವುದೊಳ್ಳೆಯದು. ಭಾರತದ ಯೋಗಿಗಳು ಇದರ ಮೇಲೆ ಪೂರ್ಣ ಅಧಿಕಾರ ಪಡೆದಿದ್ದರು. ಇಲ್ಲಿ ವಿದ್ಯುತ್ ಶಕ್ತಿಯ ಅನುಭವವು ವಿಶೇಷವಾಗಿ ಉಂಟಾಗುವುದು. ಬಹುತೇಕ ಜನರಿಗೆ ಇದು ಪ್ರಿಯವಾಗುವುದಾದ್ದರಿಂದ ಅವರು ಇದರಲ್ಲಿಯೇ ಸಿಕ್ಕಿಬೀಳುತ್ತಾರೆ. ಇದರ ಪರಿಣಾಮವಾಗಿ ಅವರ ಪ್ರಗತಿಯು ಕುಂಠಿತವಾಗುವುದು. ಈ ಸ್ಥಿತಿಯು ಪ್ರಶಂಸನೀಯವಾಗಿದ್ದರೂ ಇದು ಮಕ್ಕಳಾಟಿಕೆಯ ವಸ್ತುವೇ. ಈ ಸ್ಥಾನದ ಶಕ್ತಿಯಿರದ ಭಾರತ ವರ್ಷದ ಪ್ರಾಚೀನ ಋಷಿಗಳು ತೀರ ಕಡಮೆ. ದೂರ್ವಾಸ ಋಷಿಗಳಲ್ಲಿ ಈ ಸ್ಥಾನದ ಶಕ್ತಿ ಬಹಳ ಹೆಚ್ಚಿದ್ದಿತು. ಎರಡನೆಯವರನ್ನು ಅಳುವಂತೆ ಮಾಡುವ-ರೌದ್ರ ಶಕ್ತಿಯೂ, ಚಕಿತಗೊಳಿಸುವ ಶಕ್ತಿಯೂ, ಹಾಗೂ, ತಲೆಯಲ್ಲಿ ಗೊಂದಲವೆಬ್ಬಿಸುವ ಶಕ್ತಿಯೂ ಪ್ರಧಾನವಾಗಿರುವ ಕೇಂದ್ರದೊಡನೆ ಅವರ ಸಂಬಂಧವುಂಟಾಗಿದ್ದಿತು. ನಮ್ಮ ಭಾರತವರ್ಷದಲ್ಲಿ ಋಷಿಗಳನ್ನು ಎಷ್ಟರ ಮಟ್ಟಿಗೆ ಗೌರವಿಸಲಾಗುತ್ತಿದ್ದಿತೆಂದರೆ ದೂರ್ವಾಸರನ್ನು ರುದ್ರನ ಅವತಾರವೆಂದು ತಿಳಿಯಲಾಗಿತ್ತು. ದುರ್ವಾಸರಿಗೆ ಈ ಸ್ಥಿತಿ ಉಂಟಾಗಿದ್ದುದರಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಮಟ್ಟವು ಎಷ್ಟಿದ್ದಿತೆಂಬ ಬಗೆಗೂ, ಮಾನವ ಜೀವನದ ಗುರಿಯನ್ನು ಸಾಧಿಸುವುದರಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾದರೆಂಬುದನ್ನೂ ನಾನಿಲ್ಲಿ ಪ್ರಸ್ತಾಪಿಸ ಬಯಸುವುದಿಲ್ಲ.
ಪಿಂಡದಲ್ಲಿದ್ದ ಪ್ರತಿಯೊಂದು ವಸ್ತುವಿಗೂ ಅಲ್ಲಿಂದಲೇ ಶಕ್ತಿಯು ದೊರೆಯುವುದು. ಅಲ್ಲಿ ಅಗಣಿತ ಶಕ್ತಿಗಳಿವೆ. ಈ ಗ್ರಂಥಿಯಲ್ಲಿ ನಾವು ಲಯಾ ವಸ್ಥೆಯನ್ನು ಪಡೆದಂತೆಲ್ಲ ಹೆಜ್ಜೆ ಹೆಜ್ಜೆಗೂ ಅಸೀಮ ಶಕ್ತಿಯ ಅನುಭವವುಂಟಾಗುವುದು. ವಿದ್ಯುತ್ತಿನ ತೀಕ್ಷತೆ ಎಲ್ಲೆಡೆಯಲ್ಲಿಯೂ ದೃಷ್ಟಿಗೋಚರವಾಗುವುದು. ಇಲ್ಲಿ ಪ್ರತಿಯೊಂದು ವಸ್ತುವೂ ಬೀಜ ರೂಪದಲ್ಲಿರುವುದು, ನಾವು ಇದರ ತಿಳಿವಳಿಕೆಯನ್ನುಂಟು ಮಾಡಿಕೊಂಡುದೇ ಆದರೆ ನಮಗೆ ಪ್ರತಿಯೊಂದು ಶಕ್ತಿಯ ಚೇತನವು ಪ್ರಾಪ್ತವಾಗುವುದು. ಈ ಗ್ರಂಥಿಯಲ್ಲಿ ನಾವು ಲಯ ಹೊಂದಲಾರಂಭಿಸಿದಾಗ ನಮ್ಮ ವಿಸ್ತಾರವು ಹೆಚ್ಚುತ್ತ ನಡೆದು, ನಾವು ಪ್ರಪಂಚದ ತುಂಬ ವ್ಯಾಪಿಸಿದ ಅನುಭವವುಂಟಾಗುವುದು. ಏಕೆಂದರೆ, ಅಲ್ಲಿಯ ಪ್ರಸಾರದ ಅವಸ್ಥೆಯ ಪ್ರಭಾವದಿಂದಲೇ ನಾವು ಪಿಂಡದೇಶದಲ್ಲಿ ಪ್ರಸಾರ ಹೊಂದುವೆವು, ಯೋಗಿಗಳು ಇಲ್ಲಿಯ ಶಕ್ತಿಗಳನ್ನು ಬಳಸಿಕೊಂಡು ಪ್ರಕೃತಿ ನಿಯಮವನ್ನು ಕೆಲಕಾಲ ಸ್ಥಗಿತಗೊಳಿಸಬಹುದು. ನಾವು ಪೂರ್ಣರೂಪದಿಂದ ಲಯಾವಸ್ಥೆಯನ್ನು ಹೊಂದಿದುದಾದರೆ ಈ ಶಕ್ತಿಯನ್ನು ನಾವು ಬೇಕಾದಷ್ಟು ದೊಡ್ಡ ಕಾರ್ಯದಲ್ಲಿ ಪ್ರಯೋಗಿಸಬಹುದು. ಇಲ್ಲಿಯ ಶಕ್ತಿಯಿಂದ ಮದ್ದು – ಗುಂಡುಗಳ ಶಕ್ತಿಯನ್ನು ಜಯಿಸಬಹುದು. ಈ ಪ್ರಪಂಚದಲ್ಲಿ ಜರುಗುವ ಎಲ್ಲ ಘಟನೆಗಳೂ ಮೊಟ್ಟ ಮೊದಲು ಇಲ್ಲಿಯೇ ಸಂಭವಿಸುವುವು; ಮತ್ತು ಅವು ಘಟಿಸುವ ಮುಂಚೆಯೇ ಅವನ್ನು ನಾವು ತಿಳಿದುಕೊಳ್ಳಬಹುದು, ನಮ್ಮ ಅನುಭವವು ತೀವ್ರವಾಗಿದ್ದರೆ, ನಮಗೆ ಬ್ರಹ್ಮಾಂಡದೇಶದ ಸಣ್ಣ ಸಣ್ಣ ಕೇಂದ್ರಗಳಲ್ಲಿ ಆಯಾ ಬಿಂದುಗಳಿಗೆ ಸಂಬಂಧಪಟ್ಟ ಭೂಭಾಗಗಳ ಮೇಲೆ ಪ್ರಭಾವ ಬೀರುವ ವಿಭಿನ್ನ ಶಕ್ತಿಗಳು ದೊರೆಯುವುವು. ವೈಜ್ಞಾನಿಕ ರೀತಿಯಿಂದ ಈ ಶಕ್ತಿಗಳ ಅನುಸಂಧಾನ ಮಾಡಿದ್ದಾದರೆ ಅವನ್ನು ಶಸ್ತ್ರಾಸ್ತ್ರಗಳಲ್ಲಿ ಬಳಸಬಹುದು. ಆದರೆ ಕೇವಲ ಪಾಶ್ಚಾತ್ಯ ನಾಗರಿಕತೆಯನ್ನುಳ್ಳ ಜನರಷ್ಟೇ ಈ ರೀತಿಯ ಅನುಭವವನ್ನು ಬೆಳೆಸಿಕೊಳ್ಳಬಲ್ಲರು. ಏಕೆಂದರೆ, ಅವರ ದೃಷ್ಟಿಯು ಈಶ್ವರ ಪ್ರಾಪ್ತಿಯ ಕಡೆಗಿರದೆ ಭೌತಿಕ ಪದಾರ್ಥಗಳ ಕಡೆಗಿರುತ್ತದೆ. ನಮ್ಮಲ್ಲಿಯ ಯೋಗಿ ಗಳು ಈ ಕಡೆಗೆ ಲಕ್ಷ ಕೊಡುವುದಿಲ್ಲ. ಏಕೆಂದರೆ ಅವರ ಧ್ಯೇಯವು ಭಗವತ್ ಪ್ರಾಪ್ತಿಯಾಗಿದ್ದು, ಪ್ರಪಂಚದ ಕಲ್ಯಾಣಕ್ಕಾಗಿ ಆ ಶಕ್ತಿಯನ್ನುಪಯೋಗಿಸುವರು. ಆದರೆ, ಯಾವ ಸ್ಥಿತಿಯಲ್ಲಿ ನಿಯತಿಯು ಪ್ರಪಂಚದಲ್ಲಿ ವಿನಾಶಕಾರಿ ಪ್ರಯೋಗವನ್ನಪೇಕ್ಷಿಸಿ ನಾಶವನ್ನುಂಟುಮಾಡುತ್ತ ಹೋಗುವುದೋ ಆ ಸ್ಥಿತಿಗಳು ಮಾತ್ರ ಅಪವಾದಾತ್ಮಕವಾಗಿವೆ. ಈ ಸ್ಥಾನವು ಎಷ್ಟು ದೊಡ್ಡದಿದೆಯೆಂದರೆ ಸಾವಿರಾರು ವರ್ಷ ಇದರಲ್ಲಿ ಸಂಚರಿಸಿದರೂ ಸಾಲದು. ಯೋಗ್ಯ ಮಾರ್ಗದರ್ಶಕನು ದೊರೆತು ತನ್ನ ಶಕ್ತಿಯಿಂದ ತೀವ್ರ ಸಂಚಾರ ಮಾಡಿಸಿದರೆ ಮಾತ್ರ ಇದು ಸಾಧ್ಯವಾಗುವುದು. ಆದುದರಿಂದಲೇ ನಮ್ಮನ್ನು ಈಯೆಲ್ಲ ಗ್ರಂಥಿಗಳಿಂದ ದಾಟಿಸಿ ಧ್ಯೇಯದವರೆಗೆ ತಲುಪಿಸುವ ಗುರುವಿನ ಅವಶ್ಯಕತೆ ಇದೆ. ಚಂದ್ರ ಹಾಗೂ ನಕ್ಷತ್ರಗಳ ಪ್ರಕಾಶ ಇಲ್ಲಿಯೇ ಇದೆ, ಸೂರ್ಯನೂ ಇಲ್ಲಿಯೇ ಬೆಳಗುವುದರಿಂದ ಆತನ ಪ್ರಕಾಶವು ಭೂಮಿಯವರೆಗೆ ತಲುಪುವುದು. ಈಗ ನಾವು ನಮ್ಮನ್ನು ಈ ಗ್ರಂಥಿಯಲ್ಲಿ ಲಯಗೊಳಿಸುವ ಅಗತ್ಯವುಂಟಾಗುವುದು. ನಮಗೆ ಸ್ವಲ್ಪ ಹೆಚ್ಚಿನ ಜ್ಞಾನವುಂಟಾಗಬೇಕೆಂಬ ದೃಷ್ಟಿಯಿಂದ ನಾವು ಇದರಲ್ಲಿ ಸಂಚರಿಸಿ ಲಯ ಹೊಂದಿದ ಮೇಲೆ ಅದರ ಸಾರೂಪ್ಯತೆಯ ದಶೆಯನ್ನು ಪಡೆ ಯಲು ಯತ್ನಿಸುವೆವು. ಈ ಬಿಂದುವಿನಲ್ಲಿ ಸಾಧಕರು ಅವಧೂತರಾಗಿ ಬಿಡುವರು. ಇಲ್ಲಿಯ ದಶೆಯು ಮುಂದೆ ಹೋಗಲು ಮನಸ್ಸಾಗದಷ್ಟು ಚಿತ್ತಾಕರ್ಷಕವಾಗಿದೆ. ಆದರೂ ನಾವು ಹೇಗೋ ಲಯಾವಸ್ಥೆಯನ್ನು ಪಡೆದು ಅದರ ಸಾರೂಪ್ಯತೆಯ ದಶೆಯಲ್ಲಿ ಪ್ರವೇಶಿಸಿದಾಗ ದೃಶ್ಯವು ಬದಲಾಗಿ ನಮಗೆ ಆ ಸ್ಥಾನದ ಜ್ಞಾನ ಬರುವುದು. ಇಲ್ಲಿ ಶುದ್ಧತೆಯಿದ್ದರೂ ಅದರಲ್ಲಿ ಸ್ವಲ್ಪ ಮಟ್ಟಿಗೆ ತೀವ್ರತೆಯಿರುತ್ತದೆ. ಆದುದರಿಂದ ಅದರಲ್ಲಿ ಸ್ವಲ್ಪ ಶಕ್ತಿ ಇದ್ದೇ ಇರುತ್ತದೆ. ಈ ಕಾಲದ ಜ್ಞಾನಿಗಳಿಗೆ ಅವರ ಜ್ಞಾನದ ಮಟ್ಟ ಎಷ್ಟೆಂಬುದನ್ನು ಕೇಳಿರಿ. ನಿಜವಾಗಿ ನೋಡಿದರೆ ವಾಸ್ತವಿಕ ಜ್ಞಾನದ ದಶೆಯು ಇನ್ನೂ ಅವರಲ್ಲಿ ಬಂದಿಲ್ಲ. ತಮ್ಮನ್ನು ತಾವು ಅವಾಸ್ತವ ರೂಪದಲ್ಲಿ ಜನತೆಯ ಮುಂದೆ ಪ್ರದರ್ಶಿಸಿಕೊಳ್ಳುವುದು ಶೋಚನೀಯ ಸಂಗತಿ. ಒಂದು, ಅವರು ಈ ವಸ್ತುವನ್ನು ತಪ್ಪು ತಿಳಿದು ಕೊಂಡಿದ್ದಾರೆ; ಇಲ್ಲವೇ ತಮ್ಮ ಪ್ರತಿಷ್ಠೆಯನ್ನು, ಮೆರೆಯಲು ಹೀಗೆ ಹೇಳುತ್ತಾರೆ. ಏಕೆಂದರೆ, ಕಣ್ಣಿದ್ದವರು ಕ್ವಚಿತ್ತಾಗಿಯೇ ದೊರೆಯುವರೆಂಬುದು ಅವರಿಗೆ ಗೊತ್ತು. ಒಂದುವೇಳೆ ಈ ವಸ್ತುಗಳನ್ನು ನೋಡುವವನು ದೊರೆತರೂ ಆತನನ್ನು ನಂಬುವವರಾರು? ಆ ಜನರೇ ಎಲ್ಲರೂ ಕೂಡಿ ಅವನ ಮಾತನ್ನು ಅಲ್ಲಗಳೆಯಲು ಸಿದ್ದರಾಗಬಹುದು.
ಬಂಧು, ಇದು ಎಂತಹ ಸೊಗಸಾದ ಸ್ಥಾನ! ಈ ಗ್ರಂಥಿಯ ಪ್ರಶಂಸೆಯನ್ನು ಎಷ್ಟೊಂದು ಮಾಡಬೇಕು ! ಈ ದಶೆಯ ವರ್ಣನೆಯನ್ನು ವಿಸ್ತಾರವಾಗಿ ಬರೆದುದಾದರೆ ವಿಷಯವು ಬಹಳ ದೀರ್ಘವಾಗುವುದು. ಆದುದರಿಂದ ಸಂಕ್ಷೇಪವಾಗಿ ಬರೆಯುವೆನು, ಕೃಷ್ಣ ಚಕ್ರದ ವಿಷಯವಾಗಿ ಗ್ರಂಥಗಳಲ್ಲಿ ಬಹಳಷ್ಟು ಹೇಳಲಾಗಿದೆ. ಅದರಲ್ಲಿ ಇದೇ ಶಕ್ತಿಯಿದ್ದಿತು. ಈಗ ನಾನು ಈ ಗ್ರಂಥಿಯನ್ನು ಭೇದಿಸಿ ಕೆಲವು ಸಂಗತಿಗಳನ್ನು ಹೇಳುವೆನು, ಅಭ್ಯಾಸಿಯು ಈ ರಹಸ್ಯದಲ್ಲಿ ಕಾಲಿಟ್ಟಾಗ ಚಕ್ರದಂಥ ಏನನ್ನೂ ಅನುಭವಿಸುವನು. ಇವರಲ್ಲಿ ಎಷ್ಟು ಶಕ್ತಿಯಿದೆ ಎಂದರೆ, ಅದನ್ನು ಅತ್ಯಂತ ದೊಡ್ಡ ವಸ್ತುವಿನ ಮೇಲೆ ಪೂರ್ಣವಾಗಿ ಪ್ರಯೋಗಿಸಿದರೆ ಅದು ಬರೀ ಅಲ್ಲಾಡುವುದಷ್ಟೇ ಅಲ್ಲ, ಚೂರು ಚೂರಾಗುವುದು. ಅಭ್ಯಾಸಿಯು ಈ ದಶೆಗೆ ಬಂದಾಗ ಅವನಿಗೆ ಇದರಲ್ಲಿ ಎಷ್ಟೋ ಸಂಗತಿಗಳು ತಿಳಿಯುವವು. ಈಗ, ಈ ಶಕ್ತಿಯು ಹೇಗೆ ಹುಟ್ಟಿಕೊಂಡಿತು? ಬೇರೆ ಬೇರೆ ಗ್ರಹಗಳು ಒಂದೆಡೆ ಸೇರಿದಾಗ ಅವುಗಳನ್ನು ತಮ್ಮ ತಮ್ಮ ಸ್ಥಾನದಲ್ಲಿ ಹಿಡಿದು ನಿಲ್ಲಿಸುವ ಒಂದು ಶಕ್ತಿಯುಂಟಾಗುತ್ತದೆ. ಈ ಬಿಂದುವಿನ ಮೇಲೆ ಪೂರ್ಣ ಅಧಿಕಾರ ಪಡೆದಾಗ ಇಂಥ ಶಕ್ತಿಯು ಲಭಿಸುವುದು. ಪೂರ್ಣ ಅಧಿಕಾರ ಪಡೆಯುವುದೆಂದರೆ ಇದರಲ್ಲಿ ನಮ್ಮನ್ನು ಲಯಗೊಳಿಸುವುದೇ ಹೊರತು ಮತ್ತೇನೂ ಅಲ್ಲ; ಅದೂ ಔಷಧವು ಶರೀರದಲ್ಲಿ ಹೇಗೆ ಬೆರೆತು ಹೋಗುವುದೋ ಹಾಗೆ, ಇಷ್ಟನ್ನು ಮಾಡಿದ ನಂತರ ಇದಕ್ಕಿಂತ ಮೇಲೆಯೂ ಒಂದು ವಸ್ತು ದೊರೆಯುವುದು, ತಿಳಿವಳಿಕೆಗೋಸ್ಕರ ಅದನ್ನು ಮಹಾಕಾಲಚಕ್ರವೆಂದು ಕರೆಯುವೆನು. ಇದರ ಪ್ರಭಾವದಿಂದ ಎಲ್ಲ ನಕ್ಷತ್ರಗಳೂ ತಮ್ಮ ಸ್ಥಳದಲ್ಲಿ ಅಚಲವಾಗಿ ನಿಲ್ಲುವಂತಹ ಒಂದು ಕ್ಷೇತ್ರವು ಸಿದ್ಧವಾಯಿತು. ಇದು ಸುದರ್ಶನ ಚಕ್ರಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಕಾಲವನ್ನು ಪರಿವರ್ತಿಸುವುದರಲ್ಲಿ ಈ ಅಸ್ತ್ರವು ಅತ್ಯಂತ ಪ್ರಬಲ ಸಾಧನವಾಗಿದೆ. ಈ ವಸ್ತುವು ಏಳನೆಯ ಗ್ರಂಥಿಯು ಕೊನೆಗೊಳ್ಳುವ ಸ್ಥಾನದಲ್ಲಿದೆ. ಜನರು ನನ್ನನ್ನು ಕ್ಷಮಿಸುವುದಾದರೆ, ಶ್ರೀಕೃಷ್ಣನಿಗೆ ಇದರ ಅಗತ್ಯವಿರದ ಕಾರಣ ಆತನಿಗೂ ಈ ಅಸ್ತ್ರವು ದೊರೆತಿರುವ ಸಂಭವವಿಲ್ಲವೆಂದು ಹೇಳಬಯಸುತ್ತೇನೆ. ಆದರೆ ಈಗ ಅದರ ಅವಶ್ಯಕತೆಯಿದ್ದ ಕಾರಣ ನಿಯತಿಯು ಅದನ್ನು ಯಾರಿಗಾದರೂ ಕೊಟ್ಟಿರುವ ಸಂಭವವಿದೆ.
ಒಂದು ಆಶ್ಚರ್ಯಕರ ಸಂಗತಿಯನ್ನು ಬರೆಯುವೆನು. ಕೆಲ ಜನರಿಗೆ ಇದರಿಂದ ಆಘಾತವುಂಟಾಗುವ ಸಂಭವವಿದ್ದರೂ ನಿಜ ಸಂಗತಿ ಪ್ರಕಟವಾಗಲೇ ಬೇಕು. *ಅಹಂ ಬ್ರಹ್ಮಾಸ್ಮಿ’ ಯ ಸ್ಥಿತಿಯು ಎಲ್ಲಕ್ಕೂ ದೊಡ್ಡದೆಂದೂ, ಅದನ್ನು ಪಡೆದವನು ಜ್ಞಾನಿಯೆಂದೂ ತಿಳಿಯಲಾಗುತ್ತದೆ, ಆದರೆ ಯಾರಾದರೂ ತಮಗೆ ಈ ದಶೆಯುಂಟಾಗಿದೆಯೆಂದು ಎದೆತಟ್ಟಿ ಹೇಳಬಲ್ಲರೋ? ಗೋಧಿಯ ರುಚಿ ಕೇಳಿದರೆ ಜನರು ಸ್ವಲ್ಪ ಸಿಹಿ ಎಂದು ಹೇಳಿಬಿಡುವರು. ಆದರೆ ಅದನ್ನು ತಿನ್ನುವವರೆಗೆ ಅದರ ನಿಜವಾದ ಸ್ವಾದದ ಅರಿವಾಗಲಾರದು. ಬಹುಶಃ ನಮ್ಮಲ್ಲಿಯ ಜ್ಞಾನಿಗಳ ಗತಿ ಇದೇ ಆಗಿದೆ. ವಸ್ತುವನ್ನು ಆಸ್ವಾದಿಸಲಾರದೆಯೇ ಓದಿ, ಓದಿಸಿ ವರ್ಣಿತ ಪರಿಣಾಮದ ತಿಳಿವಳಿಕೆಯನ್ನು ಪಡೆಯುವರು. ‘ಸತ್ಯೋದಯ’ ದಲ್ಲಿ ಈ ದಶೆಯನ್ನು ಕುರಿತು ಸಾಕಷ್ಟು ಹೇಳಲಾಗಿದೆ. ಇಲ್ಲಿ ಸಂಕ್ಷೇ ಪವಾಗಿ ಇಷ್ಟು ಹೇಳಬಹುದು: ಆತ್ಮ ಮತ್ತು ಶರೀರದ ಮಿಲನ ಬಿಂದುವಿನ ಮೇಲೆ ಪ್ರತಿಯೊಂದು ಗ್ರಂಥಿಯಲ್ಲಿಯೂ ಹೆಚ್ಚು ಕಡಮೆ ಇದರ ಅನುಭವ ಬರುವುದು, ಆದರೆ ಈ ಗ್ರಂಥಿಯಲ್ಲಿ ಬಂದ ನಂತರವೇ ಈ ಅನುಭವವು ಸ್ಪಷ್ಟವಾಗಿಯೂ, ನಿಚ್ಚಳವಾಗಿಯೂ ಇರುವಂಥ ಮನಃಸ್ಥಿತಿ ಉಂಟಾಗುವುದು, ಸೂರ್ಯನಲ್ಲಿ ಪ್ರಕಾಶ ಹಾಗೂ ಉಷ್ಣತೆ, ಚಂದ್ರನಲ್ಲಿಯ ತೇಜ ಮತ್ತು ಶೀತಲತೆ, ನಕ್ಷತ್ರಗಳಲ್ಲಿಯ ಹೊಳಪು- ಇವೆಲ್ಲ ನನ್ನದೆಂದೇ ಅನುಭವವಾಗುವುದು, ಯಾರಾದರೂ ರಾಮ, ಕೃಷ್ಟ ಅಥವಾ ಮೇಲಿನ ದೊಡ್ಡ ಆತ್ಮಗಳ ಬಗೆಗೆ ಚರ್ಚಿಸಿದರೆ ಆ ಚರ್ಚೆ ನನ್ನದೆಂದೇ ನಿಸ್ಸಂದೇಹವಾದ ಅನುಭವ ಬರುವುದು. ಈ ಗ್ರಂಥಿಯಲ್ಲಿ ಸಂಚರಿಸುತ್ತ ಈ ದಶೆಯು ಪೂರ್ಣವಾದಾಗ ಬೇರೆ ರಹಸ್ಯ ಹೊಳೆಯುವುದು, ಅರ್ಥಾತ್, ನಾವು ಈ ದಶೆಯೊಂದಿಗೆ ಸಮರಸವಾದಾಗ, ಇಲ್ಲವೇ ಈ ಅನುಭವವನ್ನು ಲಯಗೊಳಿಸಿದಾಗ ಮೇಲೆ ಕಾಣ ತೊಡಗುವುದು. ಆಗ ಇರುವುದೆಲ್ಲ ಅದೇ ಎಂಬ ಪ್ರತೀತಿ ಬಲವತ್ತರವಾಗುವುದು, ಪ್ರತಿಯೊಂದು ಲಯಾವಸ್ಥೆಯ ನಂತರ “ಇದ್ದುದೆಲ್ಲ ಅದೇ” ಎಂಬ ದಶೆಯು ಸಂಕೇತರೂಪದಲ್ಲಿ ಅವಶ್ಯ ಉಳಿಯುವುದು, ಆದರೆ ಇಲ್ಲಿ ಆ ವಸ್ತುವು ಸ್ಪಷ್ಟ ರೂಪದಲ್ಲಿ ಬರುವುದು; ಏಕೆಂದರೆ, ಈಗ ನಾವು ಈಶ್ವರೀಯ ಮಂಡಲದ ದೊಡ್ಡ ಕ್ಷೇತ್ರದಲ್ಲಿರುವೆವು. ನಾವು ಇನ್ನೂ ಮುಂದುವರಿದು ”ಇದ್ದುದೆಲ್ಲ ಅದೇ’ ಎಂಬ ಸ್ಥಿತಿಯಲ್ಲಿ ಲಯಹೊಂದಿದಾಗ ನಮಗೆ ಎಲ್ಲವೂ ಅವನಿಂದಲೇ” (ಸರ್ವಂ ಬ್ರಹ್ಮಣಃ) ಎಂಬ ಅನುಭವದ ಹೊರತಾಗಿ ಬೇರೆ ಯಾವ ಅನುಭವವೂ ಆಗುವುದಿಲ್ಲ.
ಇದು ಬಹು ದೊಡ್ಡ ಗ್ರಂಥಿ. ಇದರಲ್ಲಿ ಯಾವ ಯಾವ ದಶೆಗಳ ಸಾರವಿದೆಯೋ ತಿಳಿಯದು, ಈ ಸ್ಥಾನದ ವಿಶೇಷದಶೆಯೊಂದನ್ನು ಬರೆದು ಬಿಡುವೆನು. ಅಭ್ಯಾಸಿಯು ಇಲ್ಲಿಗೆ ಬಂದು ಪ್ರಗತಿ ಹೊಂದಿದಾಗ ಅವನು ಪದಾರ್ಥಗಳನ್ನು ನೋಡಿದರೂ ಅವುಗಳ ಅಸ್ಮಿತ್ರದ ಭಾನವಿರುವುದಿಲ್ಲ. ಈ ಪದಾರ್ಥಗಳ ಅಸ್ತಿತ್ವದ ಪ್ರಭಾವವು ಹೃದಯದ ಮೇಲೆ ಎಳ್ಳಷ್ಟೂ ಆಗುವುದಿಲ್ಲ. ನಾನು ಇದರ ಮುಖ್ಯಾಂಶಗಳನ್ನಷ್ಟೇ ವಿವರಿಸಿದ್ದೇನೆ. ಈ ಗ್ರಂಥಿಯ ಬಗೆಗೆ ಅಭ್ಯಾಸಿಗೆ ಅಭಿರುಚಿಯಿದ್ದುದಾದರೆ, ಹಾಗೂ ಜೊತೆಗೆ ಸಮರ್ಥ ಮಾರ್ಗದರ್ಶಿ ದೊರೆತುದಾದರೆ ಲಯಾವಸ್ಥೆ ಮತ್ತು ಸಾರೂಪ್ಯತೆಯ ನಂತರ ಅದರ ಕೊನೆಯ ಅವಸ್ಥೆ ಬರುವುದು. ಆಗ ಮುಂದಿನ ಗ್ರಂಥಿಗೆ ಹೋದ ಶುಭ ಸೂಚನೆ ದೊರೆಯುವುದು.