ಈಗ ನಾವು ಒಂಬತ್ತನೆಯ ಗ್ರಂಥಿಯನ್ನು ಪ್ರವೇಶಿಸುವೆವು. ನಮ್ಮ ಅನುಭವದ ರೂಪವೂ ಬದಲಾಯಿತು. ಎಲ್ಲಿಂದ ಭೂಮಾದ ವಾಸ್ತವಿಕ ಸಂಬಂಧ ಪ್ರಾರಂಭವಾಗುವುದೋ ಆ ದಶೆಗೆ ಬಂದೆವು. ಯಾವುದೋ ಒಂದು ಬೇರೆ ಪ್ರಪಂಚದಲ್ಲಿ ನಮ್ಮ ಹೊಸ ಜನ್ಮವಾಯಿತೆಂಬುದನ್ನು ಅನುಭವಿಸುವ ಲೋಕವನ್ನು ನಾವೀಗ ಪ್ರವೇಶಿಸುವೆವು. ಇದರಲ್ಲಿ ಪ್ರಸಾರ ಹೊಂದಿ ರಸಾಸ್ವಾದನ ಮಾಡುತ್ತ, ಮಾಡುತ್ತ ನಾವು ಪುನರ್ಜನ್ಮ ಹೊಂದಿದ ಲೋಕವು ಯಾರದೆಂಬುದರ ಅರಿವಾಗುವುದು, ಅದರ ಗುರುತನ್ನೂ, ಅನುಮಾನವನ್ನೂ ಹೃದಯವು ತೋರಿಸತೊಡಗುವುದು. ಒಡೆಯನ ಇರುವಿಕೆಯನ್ನು ಗ್ರಹಿಸತೊಡಗುವುದು, ಆತನ ಮಹಿಮೆಯು ಎಷ್ಟು ಆಳವಾದ ಪ್ರಭಾವವನ್ನುಂಟು ಮಾಡುವುದೆಂದರೆ ತಾನಾಗಿಯೇ ಆತನ ಪೂಜೆಯು ಆರಂಭವಾಗುವುದು. ಈ ದಶೆಯಲ್ಲಿ ಬರುವ ಮುನ್ನ ಸಾಂಸಾರಿಕ ಕ್ರಿಯಾ ಶೀಲತೆಯು ಹೆಚ್ಚು ಕಡಿಮೆ ಮುಕ್ತಾಯಹೊಂದುವುದು. ಸ್ವಾಮಿ ಮತ್ತು ಸೇವಕ-ಈ ಸಂಬಂಧವೇ ನಮ್ಮ ಮುಂದೆ ಇರುವುದು. ಆತನು ಸ್ವಾಮಿ, ನಾವು ಸೇವಕರು ಎಂಬ ಅನುಭವವೇ ಈ ಗ್ರಂಥಿಯಲ್ಲಿರುವುದು. ಒಡೆಯನ ಇರುವಿಕೆ ಮತ್ತು ಸಂಮಾನ ಪ್ರತಿಯೊಂದು ಸ್ಥಾನದಲ್ಲಿಯೂ ದೃಷ್ಟಿ ಪಥದಲ್ಲಿರುವುದು, ಒಂದು ವಿಚಿತ್ರ ರೀತಿಯ ಅಧೀನತೆಯ ದಶೆಯು ನಮ್ಮದಾಗುವುದು ಸ್ವಭಾವದಲ್ಲಿ ಒಂದು ವಿಲಕ್ಷಣವಾದ ಮಾರ್ದವವಿರುವುದು, ದ್ವೇಷಭಾವವು ನಷ್ಟವಾಗುವುದು. ವಾಸ್ತವವಾಗಿ ಇಲ್ಲಿ ಈಶ್ವರನನ್ನು ಗುರುತಿಸುವ ಮೊದಲನೆಯ ಮೆಟ್ಟಲು ಆರಂಭವಾಗುವುದು. ಈ ಸ್ಥಾನದಿಂದ ನಮ್ಮ ಅಸ್ತಿತ್ವವು ಅಳಿಸಿ ಹೋಗಲು ಮೊದಲಾಗುವುದು. ಇದರಲ್ಲಿ ನಾವು ಆಳವಾಗಿ ಪ್ರವೇಶಿಸಿದಷ್ಟೂ ಅಸ್ತಿತ್ವವನ್ನು ಲಯಗೊಳಿಸುವುದರಲ್ಲಿ ಸಫಲತೆ ಸಿಗುವುದು. ದರ್ಶನದ ಸುಳುವು ಇಲ್ಲಿಂದಲೇ ಆರಂಭವಾಗುವುದು. ಈಗ ನಮ್ಮ ದಶೆಯು ಹೇಗಿರುವುದು? ಹೆಚ್ಚು ಕಡಮೆ ಹನುಮಂತನ ಅವಸ್ಥೆಯೊಂದಿಗೆ ಹೊಲವುದೆಂದು ಹೇಳಬಹುದು. ಯಾರಾದರೂ ಆತನಿಗೆ ಆತನ ಶಕ್ತಿಯ ಬಗ್ಗೆ ಎಚ್ಚರ ತಂದುಕೊಟ್ಟರೆ ಮಾತ್ರ ಆತನ ಉತ್ಸಾಹ ಜಾಗೃತವಾಗುತ್ತಿತ್ತು. ಇಲ್ಲವಾದರೆ ಆತನು ವಿಸ್ಕೃತನಂತೆ ಇದ್ದನು. ಇನ್ನೂ ಮುಂದೆ ನಡೆಯಿರಿ, ಪ್ರತಿಯೊಂದು ಸ್ಥಾನದಲ್ಲಿಯೂ ಲಯಾವಸ್ಥೆ ಮತ್ತು ಸಾರೂಪ್ಯತೆಯ ಸಂಬಂಧವಿದೆ. ಕೆಲವೆಡೆ ಲಯಾವಸ್ಥೆಯಿದ್ದರೆ ಮತ್ತೆ ಕೆಲವೆಡೆ ಸಾರೂಪ್ಯತೆಯಿದೆ. ಈಗ ಅವಸ್ಥೆಗಳು ಕ್ರಮವಾಗಿ ಲಯಹೊಂದಿ ನಮ್ಮನ್ನು ಸಾರೂಪ್ಯತೆಯಲ್ಲಿ ಒಯ್ಯುವವು. ಸಾರೂಪ್ಯತೆಯ ಲಯಾವಸ್ಥೆಗೆ ಬಂದಾಗ ಹತ್ತನೆಯ ಗ್ರಂಥಿಯನ್ನು ತಲುಪಿದ ಶುಭ ಸಮಾಚಾರ ದೊರೆಯುವುದು.