ಮನೋಮಂಡಲವನ್ನು ದಾಟಿದ ಮೇಲೆ ಕೇಂದ್ರಮಂಡಲ ಬರುವುದು. ಈ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠವಾದ ಪ್ರಜ್ಞಾನ ವಿರುವುದು. ‘ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ ದಲ್ಲಿ ತಿಳಿಸಲಾದಂತೆ ಇಲ್ಲಿ ಮತ್ತೆ ‘ವಿಲೋಮ’ ದ ಸಿದ್ಧಾಂತವು ಅನ್ವಯಿಸುವುದು.

ಆಕ್ರತಿ ೫


ಹೃದಯದ ಬಲಭಾಗದಲ್ಲಿರುವುದೆಲ್ಲ ಈ ಪ್ರದೇಶದಲ್ಲಿಯೂ ಇದೆ. ‘ಡ ೩’ ಎಂಬ ಬಿಂದುವು ಪ್ರಜ್ಞಾನದ ಚರಮಾವಸ್ಥೆಯಾಗಿದೆ. ಅಲ್ಲಿ ಎಲ್ಲವೂ ಕೊನೆಗೊಂಡು ಶೂನ್ಯದ ಸ್ಥಿತಿಯಿರುವುದು. ಅದು ಪ್ರಜ್ಞಾನದ ಅತ್ಯಂತ ಶ್ರೇಷ್ಠವಾದ ಸ್ಥಿತಿ.
ಇಂಥ ಪ್ರಜ್ಞಾನ ವಿಶೇಷವು ಭಗವದವತಾರಕ್ಕಾಗಿ ಮೀಸಲಾಗಿದೆ. ಬಹು ವಿರಳ ಹಾಗೂ ಅಸಾಧಾರಣವಾದ ಹಲವು ಸಂದರ್ಭಗಳಲ್ಲಿ ಜಗತ್ತಿನ ಬದಲಾವಣೆಗಾಗಿ ಬಂದ ವಿಭೂತಿಗೂ ಇದನ್ನು ಕರುಣಿಸಲಾಗುವುದು. ಭಗವದವತಾರದ ನಂತರ ಆತನ ಸ್ಥಾನವು ಬರುವುದು. ನಿಸರ್ಗದ ಕಾರ್ಯಕ್ಕಾಗಿ ಆತನು ವಸ್ತುತಃ  ಅದೇ ಸ್ಥಾನವನ್ನು ಪಡೆದಿರುವನು.

ಈಗ ನಿಸರ್ಗದಲ್ಲಿ ಅಮೂಲಾಗ್ರ ಪರಿವರ್ತನವಾಗಬೇಕಾಗಿದೆ ಮತ್ತು ಈ ಕಾರ್ಯಕ್ಕಾಗಿ ವಿಭೂತಿಯೊಬ್ಬನುದಯಿಸಿ ಸುಮಾರು ಎರಡೂವರೆ ವರ್ಷಗಳಿಂದ * ಆ ಕಾರ್ಯದಲ್ಲಿ ತೊಡಗಿರುವನೆಂದು ನಾನು ನಿಮಗೆ ಆಶ್ವಾಸನೆ ಕೊಡಬಲ್ಲೆ. ಜಗತ್ತಿಗೆ ಸಾಮಾನ್ಯವಾಗಿ ಅಜ್ಞಾತವಾಗಿಯೇ ಉಳಿದ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಮಟ್ಟದಲ್ಲಿರುವ ಇಂದಿನ ಮಹರ್ಷಿಗಳು ಈತನ ನಿರ್ದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಮುಂದಿನ ಕಾರ್ಯಕ್ಕಾಗಿ ವ್ಯಕ್ತಿಗಳು ತರಬೇತಿ ಹೊಂದುತ್ತಿದ್ದಾರೆ. ದರ್ಶನ ಶಕ್ತಿಯನ್ನು ಪಡೆದವರು ಆತನ ಕೆಲಸವನ್ನೂ ಅದರ ಪರಿಣಾಮವನ್ನೂ. ಅರಿಯಬಲ್ಲರು. ಮುಂದಿರುವ ಕೆಲಸವು ಬಹಳ ಮಹತ್ವದ್ದಾಗಿದೆ. ಕೊನೆಗೆ ಅದರ ಪರಿಣಾಮವೆಂದರೆ ಪರಿವರ್ತನೆ. ಇದಕ್ಕಾಗಿ ಆತನಿಗೆ ತುಂಬ ಸಮಯ ಹಿಡಿಯಬಹುದಾದರೂ ಪರಿಣಾಮವು ಅಪರಿಹಾರ್ಯವಾಗಿದೆ. ಅನಂತರ ಜಗತ್ತು ತನ್ನ ನಿಜ ರೂಪದಿಂದ ಶೋಭಿಸುವುದು. ಆತನ ಅಧೀನದಲ್ಲಿರುವ ನಿಸರ್ಗದ ವಿವಿಧ ಶಕ್ತಿಗಳು,ಕ್ಷೇತ್ರವನ್ನುಸಿದ್ಧಗೊಳಿಸಿದ ನಂತರ, ಆತನ ನಿರ್ದೇಶದಂತೆ ಕೆಲಸದಲ್ಲಿ ತೊಡಗುವ ಕಾಲವು ಶೀಘ್ರದಲ್ಲಿಯೇ ಬರಲಿದೆ.ಆ ಶಕ್ತಿಗಳೆಲ್ಲ ಆ ಕಾರ್ಯಕ್ಕಾಗಿ ಕಾಯ್ದು ಕುಳಿತಿವೆ. ಇಂಥ ವಿಭೂತಿಯು ನಿಸರ್ಗದ ಯಂತ್ರೋಪಕರಣವನ್ನು ಸರಿಯಾಗಿ ನಡೆಸುವಂತೆ ಮಾಡಲು ನೇರವಾಗಿ ಶಕ್ತಿಯನ್ನು ಪಡೆಯುವನು. ಶ್ರೇಷ್ಠವಾದ ಅತೀಂದ್ರಿಯ ದರ್ಶನ ಶಕ್ತಿಯುಳ್ಳ ಹಾಗೂ ಮುಕ್ತಾತ್ಮರೊಂದಿಗೆ ವ್ಯವಹರಿಸುವ ಶಕ್ತಿಯುಳ್ಳ ಮಹಾತ್ಮರು ಆ ವಿಭೂತಿಯೊಂದಿಗೆ ನೇರವಾಗಿ ಸಂಲಾಪಿಸಿಯಾಗಲಿ, ನಿಸರ್ಗವನ್ನು ವಿಕ್ಷೀಸಿಯಾಗಲಿ ಈ ಸಂಗತಿಗಳನ್ನು ಮನಗಾಣಬಹುದು. ಉಳಿದವರು ಕಾಲ ಕ್ರಮದಲ್ಲಿ ಪರಿಣಾಮಗಳು ವ್ಯಕ್ತವಾದಾಗ ನೋಡುವರು.

ಈಗ ಮತ್ತೆ ಮೂಲ ವಿಷಯಕ್ಕೆ ಬರೋಣ. ಇಲ್ಲಿ ನಮ್ಮ ಚಟುವಟಿಕೆಗಳೆಲ್ಲ ಕೊನೆಗೊಂಡು ನಾವೀಗ ಶುದ್ಧರೂಪದಲ್ಲಿ ಭಗವತ್ ಕ್ಷೇತ್ರವನ್ನು ಪ್ರವೇಶಿಸಿದ್ದೇವೆ. ನಾವು ಗುರಿಯನ್ನು ಮುಟ್ಟಿ ಅದರಲ್ಲಿ ಪ್ರವೇಶ ಹೊಂದಿದ್ದೇವೆ . ಆತ್ಮ ಸಾಕ್ಷಾತ್ಕಾರ ವಾಗಿದೆ. ಹೃದಯ ಮಂಡಲದಲ್ಲಿರುವ ಪ್ರಜ್ಞೆ ಹಾಗೂ ಮನೋಮಂಡಲದಲ್ಲಿ ಬೇರು ಬಿಟ್ಟಿರುವ ಅದರ ಮೂಲ ಶಕ್ತಿಗಿಂತ ನಾವು ಬಹಳ ಮೇಲ್ಮಟ್ಟದಲ್ಲಿದ್ದೇವೆ‌. ಈಗ ನಾವು ಕೊನೆಯಿಲ್ಲದ ಪುನರ್ಜನ್ಮದ ಚಕ್ರದಿಂದ ಮುಕ್ತರಾಗಿರುವೆವು.

ಜನರು ಈ ಘಟ್ಟವನ್ನು ‘ಸತ್ಯ’ವೆಂದು. ಕರೆಯಬಹುದು. ಆದರೆ ನಾವು ಸೇರಿದುದು ‘ಸತ್ಯ’ವನ್ನಲ್ಲ. ಸತ್ಯವು ಬಹಳ ಹಿಂದುಳಿದಿದ್ದು ಈಗ ನಾವು ಅದರಲ್ಲಿ ನೆಲೆಸಿರುವುದಿಲ್ಲ. ‘ಸತ್ಯ’ದ ಅರ್ಥವು. ಏನಾದರೊಂದರ ಇರುವಿಕೆಯನ್ನು ಸೂಚಿಸುವುದು. ಆದರೆ ಇಲ್ಲಿ ಅದಿಲ್ಲ. ನಿಜವಾಗಿ,’ಸತ್ಯ’ವು ‘ಶೂನ್ಯ’ವೆಂದು. ವರ್ಣಿಸಲಾದ ಸ್ಥಿತಿಯ ಅವಶೇಷ. ಹೆಚ್ಚು ಸ್ಪಷ್ಟಪಡಿಸಬೇಕಾದರೆ, ಪ್ರಜ್ಞೆಯ ಸ್ಥಿತಿಯಲ್ಲಿ ಕಾಣುವುದನ್ನೆಲ್ಲ ಜನರು ‘ಸತ್ಯ’ವೆಂದು ಹೊಗಳುವರು.ಆದರೆ ಪ್ರಜ್ಞೆಯು. ನಮ್ಮ ಗುರಿಯಲ್ಲ. ಅದು ಕೇವಲ ಮಕ್ಕಳ ಆಟಿಕೆಯ ವಸ್ತುವಾಗಿದೆ. ಪ್ರಜ್ಞೆಯು ಎಲ್ಲಿ ತನ್ನ ನೈಜ ರೂಪವನ್ನು ತಾಳಿರುವುದೋ ಆ ಬಿಂದುವನ್ನು ನಾವು ಮುಟ್ಟಬೇಕಾಗಿದೆ. ಯಾವುದರಿಂದ ಔಷಧಗಳು ಸಿದ್ಧವಾಗುವವೋ ಆ ‘ಮೂಲಾರ್ಕ’ವನ್ನು ನಾವು ಶೋಧಿಸಬೇಕಾಗಿದೆ. ಪ್ರಜ್ಞೆಯನ್ನು ಸೃಷ್ಟಿಸುವ ಶಕ್ತಿಯನ್ನು ನಾವು ಶೋಧಿಸುತ್ತಿದ್ದೇವೆ. ಅದೂ ಇಲ್ಲದಂತಾದಾಗ ನಾವು ಶುದ್ಧ ಸರಳ ‘ಸತ್ಯ’ದ ದಂಡೆಗೆ ಬರುವೆವು. ಈ ತತ್ವವು ಶಬ್ದಗಳಿಂದ ಸರಿಯಾಗಿ ವರ್ಣಿಸಲು ಬಾರದಷ್ಟು ಸೂಕ್ಮವಾಗಿದೆ.

ಮೂಲಶಕ್ತಿಯನ್ನು ಹುಡುಕಬೇಕೆಂದು ನಾನು ಹೇಳುವುದರ ಅರ್ಥವಾಯಿತೆ? ಅದರ ಮೂಲವಾವುದು? ಅಥವಾ ಅದು ಎಲ್ಲಿಂದ ಬರುವುದು? ನಿಜವಾದ ಯೋಗಿಯ ವಿಶ್ರಾಮ ಧಾಮವಾದ ‘ತಮ’ ದಿಂದ ಅದು ಉದ್ಭವಿಸುವುದು. ಅದು ತ್ರಿಗುಣಗಳಲ್ಲೊಂದಾದ ‘ತಮ’ವಲ್ಲ; ಆದರೆ ‘ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ವೆಂಬ ನನ್ನ ಪುಸ್ತಕದಲ್ಲಿ ವರ್ಣಿಸಲಾದ ಸ್ಥಿತಿಯನ್ನು ಸೂಚಿಸುವ ಪದವಾಗಿದೆ. ಮುಕ್ತಾತ್ಮರು ತಮ್ಮ ತಮ್ಮ ಅಂತಸ್ತಿಗನುಸಾರವಾಗಿ ಆ ನಿಜ ಸ್ಥಿತಿಯಲ್ಲಿ ಭಾಗಿಗಳಾಗುವರು. ಕೆಲ ತತ್ವ ಜ್ಞಾನಿಗಳು ತಿಳಿಯುವಂತೆ,ಮುಕ್ತಾತ್ಮರು ಪ್ರತ್ಯಕ್ಷ ಪ್ರಜ್ಞೆಯನ್ನು ಹೊಂದಿರದೆ ಕೇವಲ ಪ್ರಜ್ಞೆಯ ಬೀಜವನ್ನು ಮಾತ್ರ ಪಡೆದಿರುವ. ರೆಂಬುದು ತಪ್ಪುಗ್ರಹಿಕೆಯಾಗಿದೆ. ನಿಸ್ಸಂದೇಹವಾಗಿ ಮುಕ್ತಾತ್ಮರು ತಮ್ಮ ಸಾಮರ್ಥ್ಯವನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಳ್ಳುವರೆಂದರೆ, ಅವರು ಪ್ರಜ್ಞೆ ಹಾಗೂ ಅದರ ಬೀಜವೆರಡನ್ನೂ ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಬಲ್ಲವರಾಗಿದ್ದರೂ ಅವೆರಡಕ್ಕಿಂತ ಮೇಲಿನ ಮಟ್ಟದಲ್ಲಿರುವರು ಮತ್ತು ಆಗ ಮಾತ್ರವೇ ಮುಕ್ತಿಯು ಸಾಧ್ಯವಾಗುವುದು. ನಿಮ್ಮಲ್ಲಿ ಬೀಜವಿದ್ದರೆ ‘ಶೂನ್ಯಾವಸ್ಥೆ’ಯ ಕಲ್ಪನೆಯಿಂದ ಬಹುದೂರವಿರೆಂದು ಅದರರ್ಥವಾಯಿತು.

ಸಾಮಾನ್ಯವಾಗಿ ತತ್ವ ಜ್ಞಾನಿಗಳು ತಮ್ಮ ವಿಚಾರಗಳಿಗನುಸಾರವಾಗಿಯೇ ಜನರನ್ನು ಎಳೆಯಲು ಯತ್ನಿಸುವರು. ಆದರೆ ಅದು ಸರಿಯಾದ ದಾರಿಯಲ್ಲವೆಂದು ನನಗೆನಿಸುವುದು. ಆತ್ಮ ಸಾಕ್ಷಾತ್ಕಾರದಲ್ಲಿ ಪ್ರತ್ಯಕ್ಷಾನು ಭವವೇ ಸಹಾಯಕಾರಿಯಾಗುವುದು. ಈ ದಿಶೆಯಲ್ಲಿ ಬೇರೆ ಯಾವುದೇ ಮಾರ್ಗವಾಗಲಿ ಗ್ರಂಥವಾಗಲಿ ಶಾಸ್ತ್ರವಾಗಲಿ ಪ್ರಯೋಜನಕ್ಕೆ ಬರುವುದಿಲ್ಲ.
‘ಏಕತ್ವ’ದ ಅಥವಾ ‘ಶೂನ್ಯಾವಸ್ಥೆ’ಯ ಸಾಕ್ಷಾತ್ಕಾರವನ್ನು ‘ಸತ್ಯ’ದ
ಸಾಕ್ಷಾತ್ಕಾರವೆಂದು ಹೇಳುವುದು ಎಂಥ ವಿಪರ್ಯಾಸ! ‘ಸತ್ಯಕ್ಕೆ ತನ್ನದೇ ಆದ ಒಂದು ವ್ಯಾಖ್ಯೆಯಿದೆ. ಆದರೆ ನಾವು ಕಟ್ಟಕಡೆಗೆ ತಲುಪಬೇಕಾದುದು ಎಲ್ಲವುಗಳ ಆಚೆಗಿದೆ.

ಕೇಂದ್ರಮಂಡಲದ ಶೋಧಕ್ಕಿಂತ ಮುಂಚೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ‘ಸತ್ಯ’ವೇ ಪ್ರಧಾನವಾಗಿದ್ದಿತು. ಸತ್ಯವು ಎಲ್ಲೆಡೆಯಲ್ಲಿಯೂ ಇದೆ; ಅದು ಮಾನವ ಜೀವನದ ವಿಕಾಸದ ಪ್ರತಿಯೊಂದು ಘಟ್ಟದಲ್ಲಿಯೂ ಇದೆ. ಆಧ್ಯಾತ್ಮ ವಿಜ್ಞಾನದಲ್ಲಿ ಪದಾರ್ಥಗಳ ಸತ್ಯತೆಯನ್ನು ತೋರಿಸಲು ಜನರು ಸಾಮಾನ್ಯವಾಗಿ ಈ ಪದವನ್ನು ಬಳಸುವರು. ಭೌತ ವಸ್ತುವಿನಿಂದ ದೂರವಾದ ಯಾವುದೇ ಪದಾರ್ಥವನ್ನು ಅರ್ಥಾತ್ ಭೌತಿಕತ್ವವು ಮುಗಿದ ನಂತರ ಉಳಿಯುವುದನ್ನು ‘ಸತ್ಯ’ವೆಂದು ಹೇಳಬಹುದು. ಆದರೆ ಇವೆರಡೂ ಕೊನೆಗೊಂಡಾಗ ನೀವು ಏನೆನ್ನುವಿರಿ ? ಅದನ್ನು ‘ಸತ್ಯ’ವೆಂದು ಕರೆಯಲಾದೀತೇ ?
ಇಲ್ಲ. ಏಕೆಂದರೆ ಭೌತಿಕತ್ವ ಅಥವಾ ಜಡತ್ವವು ಮುಗಿದಾಗ ಪ್ರವೃತ್ತಿ ಅಥವಾ ಚೈತನ್ಯತೆಯು ಬರುವುದು. ಇವೆರಡರ ಆಚೆ ನೀವು ನಡೆದಾಗ ಈ ವಸ್ತುಗಳು ಎಲ್ಲಿಂದ ಬಂದುವೋ ಆ ಸ್ಥಿತಿಯನ್ನು ಆ ತಲುಪುವಿರಿ. ಅವುಗಳನ್ನು ದಾಟದೆ ಇರುವವರೆಗೆ ನೀವು ‘ಸತ್ಯ’ದ ಸೀಮೆಯಲ್ಲಿಯೇ ಇರುವಿರಿ. ಅದನ್ನು ದಾಟಿದಾಗ ಸತ್ಯವೂ ಹೊರಟುಹೋಗಿ “ನಿಷ್ಕ್ರಿಯತೆ’ ಅಥವಾ ‘ಶೂನ್ಯತೆ’ಯೇ ಉಳಿಯುವುದು.

ಜನರು ಅಹಂಕಾರದ ಬೆನ್ನು ಹತ್ತಿದ್ದು ಅದಕ್ಕೆ ಬಲಿಯಾಗುತ್ತಿದ್ದಾರೆ. ಅದು ಜಡ ಶರೀರದ ರೂಪದಲ್ಲಾಗಲಿ ಅದರ ಸೂಕ್ಷ್ಮರೂಪದಲ್ಲಾಗಲಿ ಅದಕ್ಕಿಂತ ಮೇಲಾಗಲಿ ಕಾಣಿಸಿಕೊಳ್ಳುತ್ತದೆ. ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಇದೊಂದು ಪ್ರತಿಬಂಧಕವಾಗಿದೆ. ಅದು ಹೃದಯ ಮಂಡಲದಿಂದ ಪ್ರಾರಂಭವಾಗಿ ಅದನ್ನು ದಾಟಿದ ಮೇಲೆ ತನ್ನ ಜಡತ್ವವನ್ನು ಕಳೆದು ಕೊಳ್ಳುವುದು. ಬೇರೆ ಶಬ್ದಗಳಲ್ಲಿ ಹೇಳುವುದಾದರೆ ‘ಅಹಂ’ಕಾರವು ತೊಲಗಿ ಹೋಗುವುದು. ಹೃದಯಮಂಡಲವನ್ನು ದಾಟಿದ ನಂತರ ‘ಮಮ’ಕಾರವೂ ಅಪ್ಪಣೆ ತೆಗೆದುಕೊಳ್ಳುವುದು. ಈಗ ಆತನು ಭಗವಂತನ ಮನೋಮಂಡಲದಲ್ಲಿ ಪ್ರವೇಶಿಸಿದ್ದಾನೆ. ಈ ವಲಯದಲ್ಲಿ ಬಹು ಸೂಕ್ಷ್ಮವಾದ ಅಹಂಕಾರವಿರುವುದು. ಅದನ್ನು ನಯವಾದ ಅಹಂಕಾರವೆಂದು ಹೇಳಬಹುದು. ಆದರೆ ದೋಷವು ಎಷ್ಟೆಂದರೂ ದೋಷವೇ.ಅದು ತನ್ನ ವಾಸಸ್ಥಾನವಾದ ಮನೋಮಂಡಲಕ್ಕೆ ಬಂದಾಗ ಅದರ ಶಕ್ತಿಯು ಹೆಚ್ಚಾಗುವುದು. ಏಕೆಂದರೆ ನೀವು ಅದರೊಂದಿಗೇ ಮುಂದುವರಿಯುತ್ತ ಕಂಪನಗಳ ರೂಪದಲ್ಲಿ ಕಾಣಿಸಿಕೊಳ್ಳುವ ಚಲನದಿಂದ ಶಕ್ತಿಯನ್ನು ಪಡೆಯುವಿರಿ. ಈಗ ನಿಮ್ಮ ಗುರಿಯು ಯಥಾರ್ಥವಾದುದಾಗಿದ್ದು ಅದನ್ನು ಸಾಧಿಸಬೇಕೆಂಬ ನಿಮ್ಮ ಸಂಕಲ್ಪವಾದರೂ ದೃಢವೂ ಪೂರ್ಣವೂ ಆಗಿದ್ದರೆ ನೀವು ಕೇಂದ್ರಮಂಡಲದಿಂದ ಶಕ್ತಿಯನ್ನು ಹೀರತೊಡಗುವಿರಿ. ಆಗ ಮುಂದಿನ ನಿಮ್ಮ ಪ್ರಗತಿಗೆ ಈ ಶಕ್ತಿಯು ಸಂಕಲ್ಪವನ್ನು ರೂಪಿಸುತ್ತ ಹೋಗುವುದು. ನೀವು ಕೇಂದ್ರಮಂಡಲದಲ್ಲಿ ಮುಂದುವರಿದಾಗ ಆ ಅಹಂಕಾರವು ಸಾರೂಪ್ಯವಾಗಿ ಕಾಣಿಸಿ ಕೊಳ್ಳುವುದು. ನೀವು ನಿಮ್ಮ ಶರೀರವನ್ನು ಬಿಡುವವರೆಗೂ ಅದು ಆ ಕ್ಷೇತ್ರ ದಲ್ಲಿ ಕಾರ್ಯ ಮಾಡುವುದು. ಅಲ್ಲಿ ಚಿತ್ತವಿಲ್ಲ. ಒಂದು ರೀತಿಯಿಂದ ನೀವು ಆವರಣರಹಿತರಾಗುವಿರಿ. ಆದುದರಿಂದ ಅಹಂಕಾರವಾದರೂ ಆವರಣರಹಿತವಾಗಿರುವುದು. ಕೊನೆಗೆ ಅದು ಮುಕ್ತಾತ್ಮರ ಸಾರೂಪ್ಯ ಚಿನ್ನವಾಗುವುದು. ಅದೀಗ ಬಹುಮಟ್ಟಿಗೆ ನಾಶವಾಗಿದೆ ಎಂದೇ ಹೇಳಬಹುದು.

ಹೊರಟುಹೋಗಿ “ನಿಷ್ಕ್ರಿಯತೆ’ ಅಥವಾ ‘ಶೂನ್ಯತೆ’ಯೇ ಉಳಿಯುವುದು.

ಬೇರೆ ಬೇರೆ ವಲಯಗಳಲ್ಲಿಯ ಅಹಂಕಾರದ ಸ್ಥಿತಿಗಳನ್ನು ಓದುಗರು ನಿರ್ಣಯಿಸಲೆಂಬ ದೃಷ್ಟಿಯಿಂದ ಈ ವಿಷಯವಾಗಿ ಸ್ವಲ್ಪಮಟ್ಟಿಗೆ ಹೆಚ್ಚು ವಿವರಣೆ ಮಾಡಿದರೆ ಅಪ್ರಸ್ತುತವಾಗಲಾರದು. ಅಹಂಕಾರದ ಕಲ್ಪನೆಯು ದೇಹದಿಂದ ಆರಂಭವಾಗುವುದು. ಈ ಪ್ರಭಾವದಲ್ಲಿ ನೀವು ಯಾವುದಾದರೊಂದು ಕಾರ್ಯವನ್ನು ಮಾಡಿದಾಗ ಅದನ್ನು ನೀವು (ನಿಮ್ಮ ದೇಹವು) ಮಾಡುತ್ತಿರುವಿರೆಂಬ ಕಲ್ಪನೆಯಿಂದ ವಿಷಯಗಳ ಸ್ಥೂಲತೆಯನ್ನು ಅನುಭವಿಸುವಿರಿ. ಇದು ಅತ್ಯಂತ ಕೆಳದರ್ಜೆಯ ಅಥವಾ ಸ್ಥೂಲತಮವಾದ ಈ ಸ್ಥಿತಿಯಲ್ಲಿ ಮನುಷ್ಯನ ದೃಷ್ಟಿಯು ತನ್ನ ಶರೀರದ ಮೇಲೆಯೇ ನೆಟ್ಟಿರುವುದು. ಅವನು ತನ್ನ ಶರೀರವೇ ಕರ್ತೃವೆಂದು ತಿಳಿದು ಹಾಗೆ ಅನುಭವಿಸಿ ಅದಕ್ಕಿಂತ ಮುಂದೆ ಹೋಗಲಾರನು. ಅವನಿಗೆ ಸ್ಥೂಲ ದೇಹದ ಹೊರತಾಗಿ ಬೇರೆ ಯಾವ ಕಲ್ಪನೆಯೂ ಇರುವುದಿಲ್ಲ. ಇದು ಜಗತ್ತಿನ ಸಾಮಾನ್ಯ ಜನರ ಸ್ಥಿತಿ.

ನೀವು ಮುಂದುವರಿದಂತೆಲ್ಲ ನಿಮ್ಮ ದೇಹದಿಂದ ಬೇರೆಯಾದ ಯಾವುದೋ ಒಂದು, ಕಾರ್ಯಗಳ ಕರ್ತೃವೆಂಬುದನ್ನು ಅನುಭವಿಸುವಿರಿ. ಇದು ಅಹಂಕಾರದ ಎರಡನೆಯ ಘಟ್ಟ. ಇಲ್ಲಿ ಮನುಷ್ಯನ ದೃಷ್ಟಿಯು ಭೌತಿಕ ಶರೀರವನ್ನು ದಾಟಿ ಒಳಗಡೆ ಸೂಕ್ಷ್ಮ ವಸ್ತುವಿನ ಮೇಲೆ ಬೀಳುವುದು. ಜನರು ತಮ್ಮ ತಮ್ಮ ವಿಚಾರ-ವಿಶ್ವಾಸಗಳಿಗನುಗುಣವಾಗಿ ಬೇರೆ ಬೇರೆ ಅನುಭವಗಳನ್ನು ಪಡೆಯುವರು. ಕೆಲವರು ಆತ್ಮವೇ ಎಲ್ಲ ಕೆಲಸಗಳನ್ನು ಮಾಡುತ್ತಿ ರುವುದಾಗಿಯೂ ದೇಹವು ಕಾರ್ಮಿಕನ ಕೈಯಲ್ಲಿಯ ಯಂತ್ರದಂತೆಯೊ
ಉಪಕರಣದಂತೆಯೊ ಕೆಲಸ ಮಾಡುತ್ತಿರುವುದಾಗಿಯೂ ಅನುಭವಿಸುವರು.
ನಿಜವಾಗಿ ಕೆಲಸ ಮಾಡುತ್ತಿರುವವನು ಕಾರ್ಮಿಕನು, ಉಪಕರಣಗಳು ಆತನ ಸಹಾಯಕ್ಕಾಗಿ ಮಾತ್ರ. ಅದರಂತೆಯೇ ನಿಜವಾದ ಕರ್ತೃವು ಆತ್ಮವೇ ಹೊರತು ದೇಹವಲ್ಲ. ಕೆಲವರು, ಪ್ರಜ್ಞಾನ, ದೇವರು, ಗುರು ಅಥವಾ ತಾವು ಆದರ್ಶವಾಗಿಟ್ಟುಕೊಂಡ ಯಾವುದೇ ವಸ್ತುವು ನಿಜವಾದ ಕರ್ತೃವೆಂದು ಅನುಭವಿಸುವರು. ಇಲ್ಲಿ ಭೌತಿಕ ಶರೀರವು ಕಾರ್ಯ ಮಾಡುತ್ತಿರುವುದೆಂಬ ಕಲ್ಪನೆಯು ಮರೆತುಹೋಗಿದೆ. ಹೀಗೆಯೇ ಮುಂದುವರಿದರೆ ನೀವು ಮಾಡುವುದೆಲ್ಲ ನಿಮ್ಮ ದೇಹದ ಮೂಲಕವಾಗಿಯೂ ಅಲ್ಲ, ಮೇಲೆ ಹೇಳಿದಂತೆ ಒಳಗಡೆಯ ಯಾವುದೊಂದು ವಸ್ತುವಿನ ಮೂಲಕವಾಗಿಯೂ ಅಲ್ಲ ವೆಂಬುದನ್ನು ನೀವು ಕಾಣುವಿರಿ. ಈಗ ನೀವು ಸರಿಯಾದ ದಾರಿಯನ್ನನು ಸರಿಸುವಿರಿ ಮತ್ತು ಕೆಲಸವು ಕರ್ತೃವಿನ ಭಾವನೆಯಿಲ್ಲದೆ ತಾನಾಗಿಯೇ ನಡೆದಿದೆ ಎಂಬುದನ್ನು ಅನುಭವಿಸುವಿರಿ, ಕರ್ತೃವು ನಿಮ್ಮ ದೇಹವೂ ಅಲ್ಲ, ಮನಸೂ ಅಲ್ಲ ಅಥವಾ ಮತ್ತಾವುದಾದರೂ ಕೆಲಸ ಮಾಡುತ್ತಲಿಲ್ಲ. ಆದರೆ ಅದು ತನ್ನಿಂದತಾನೇ ಹೇಗೋ ಆಗುತ್ತಿದೆಯೆಂಬುದು ಅನುಭವಕ್ಕೆ ಬರುವುದು. ಈ ಸ್ಥಿತಿಯಲ್ಲಿ ‘ಹೇಗೆ’, ‘ಯಾರಿಂದ ಅಥವಾ ‘ಯಾರ ಮೂಲಕ’ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಬರುವುದೂ ಇಲ್ಲ.

ಇದಕ್ಕಿಂತಲೂ ಮುಂದೆ ಹೋಗಿ, ನೀವು ಕಾರ್ಯವಾಗುವುದಕ್ಕಿಂತ ಮುಂಚೆಯಾಗಲಿ ಅದು ನಡೆದ ಮೇಲಾಗಲಿ ಅದರ ಯಾವ ಕಲ್ಪನೆಯೂ ಇಲ್ಲದಿರುವುದನ್ನೂ ಅವಶ್ಯಕತೆಗನುಸಾರವಾಗಿ ಕಾರ್ಯವು ತನ್ನಿಂದ ತಾನೇ ನಡೆಯುತ್ತಿರುವುದನ್ನೂ ಅನುಭವಿಸುವಿರಿ. ಮುಂದಿನ ಉದಾಹರಣೆಯಿಂದ ಇದು ಸ್ಪಷ್ಟವಾಗಬಹುದು: ಒಬ್ಬ ಮನುಷ್ಯ ಮಲಗಿದ್ದಾನೆ; ನಿದ್ದೆಯಲ್ಲಿ ಸೊಳ್ಳೆಗಳೋ ಇರುವೆಗಳೋ ಅವನನ್ನು ಕಚ್ಚುವವು ಅಥವಾ ಅವನಿಗೆ ನವೆಯ ಅನುಭವವಾಗುವುದು. ಆತನ ಕೈ ತಾನಾಗಿಯೇ ಆ ಭಾಗಕ್ಕೆ ಹೋಗಿ ಅವಶ್ಯ ವೆನಿಸಿದಷ್ಟು ಕೆರೆಯುವುದು. ಆದರೂ ಅವನು ನಿದ್ದೆಯಲ್ಲಿಯೇ ಇರುವನು. ಈಗ, ಈ ಕಾರ್ಯದ ಮೊದಲಾಗಲಿ ಅನಂತರವಾಗಲಿ ಆತನಿಗೆ ಈ ಬಗ್ಗೆ ಯಾವ ಕಲ್ಪನೆಯೂ ಇರುವುದಿಲ್ಲ. ಎಚ್ಚರ ಹೊಂದಿದಾಗ ಇದರ ವಿಷಯವೇನೂ ಆತನ ನೆನಪಿಗೆ ಬಾರದು. ಈ ಸ್ಥಿತಿಯು ಪ್ರಾಪ್ತವಾದಾಗ, ಎಂದರೆ ಜಾಗ್ರತಾವಸ್ಥೆಯಲ್ಲಿ ನಿದ್ದೆಯ ಸ್ಥಿತಿಯು ಬಂದು, ಪ್ರಸಂಗಾನುಸಾರ ಕಾರ್ಯದ ಅಥವಾ ಕರ್ತೃವಿನ ಭಾವನೆಯಿಲ್ಲದೆ ಮುಂದುವರಿದಾಗ ನೀವು ಮಾಡುವ ಕಾರ್ಯಗಳು ನಿಮ್ಮ ಮೇಲೆ ಯಾವ ಸಂಸ್ಕಾರವನ್ನೂ ಉಂಟು ಮಾಡುವುದಿಲ್ಲ. ಇದಕ್ಕಿಂತ ಸ್ವಲ್ಪ ಮುಂದೆ ಹೋದರೆ ಇದು ಸಾರೂಪ್ಯದಲ್ಲಿ ಪರಿಣಮಿಸುವುದು.

ಅಹಂಕಾರದ ಇವೇ ಹಲವು ಸ್ಥಿತಿಗಳು, ಕೇಂದ್ರಮಂಡಲವನ್ನು ಪ್ರವೇಶಿಸುವಾಗ ನಷ್ಟಪ್ರಾಯವಾಗುವವು. ನಾನು ಹೇಳಿದ ‘ಸಾರೂಪ್ಯ’ ಅಥವಾ ‘ಮುಕ್ತಾತ್ಮರ ಸಾಮಾನ್ಯ ಕುರುಹುʼ ಇನ್ನೂ ಉಳಿದಿರುವುದು. ಅದು ಮಹಾಪ್ರಳಯದ ಕಾಲಕ್ಕೆ ಮಾತ್ರ ಎಲ್ಲವೂ ನಷ್ಟವಾದಾಗ ಇಲ್ಲದಂತಾಗುವುದು. ‘ಶೂನ್ಯ’ವೆಂಬುದು ಆಗಲೂ ಉಳಿಯುವುದು. ಎಂದರೆ ಮುಕ್ತಾತ್ಮರ ಎಲ್ಲ ಸಾರೂಪ್ಯಗಳೂ, ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವಿನ ಸಾರೂಪ್ಯವೂ ತಮ್ಮ ಪೃಥಕ್ ಚಿಹ್ನೆಗಳನ್ನು ಕಳೆದುಕೊಂಡು ಒಂದರಲ್ಲಿ ಲಯವಾಗುವವು ಮತ್ತು ಸಮಯ ಬಂದಾಗ ಮುಂದೆ ಹೊಸ ಸೃಷ್ಟಿಯನ್ನು ರಚಿಸಲು ಇದು ಸ್ವಯಂ ಒಂದು ಸಾರೂಪ್ಯವಾಗುವುದು.

ಆ ಸ್ಥಾನವನ್ನು ಸೇರಿದಾಗ ಮನುಷ್ಯನು ತಾನು ಆದೇಶ ಪಡೆದ ರೀತಿಯಲ್ಲಿ ವಿಶ್ವವನ್ನು ನಿಯಂತ್ರಿಸುವನು. ಆದೇಶಗಳು ಕೇವಲ ಮೂಲದಿಂದ ಬರುವವು. ಅವು ಹೇಗೆ ಬರುವವೆಂಬುದನ್ನು ನಾನು ಹೇಳಬಹುದಾಗಿತ್ತು. ಆದರೆ, ಅಂಥ ಅನುಭವವು ಪ್ರಾಪ್ತವಾಗದೆ, ತಪ್ಪು ತಿಳುವಳಿಕೆಯಾಗುವ ಸಂಭವವಿರುವುದರಿಂದ ಅದನ್ನಿಲ್ಲಿ ಹೇಳುವುದಿಲ್ಲ.. ಆತನಿಗೆ ವಿಶಿಷ್ಟ ಶಕ್ತಿಗಳನ್ನು ಕೊಡಲಾಗುತ್ತದೆ ಮತ್ತು ಅವನು ಅವುಗಳಿಂದ ಕೆಲಸ ಮಾಡಲಾರಂಭಿಸುತ್ತಾನೆ. ಆತನು ಭಗವತ್ಕಾರ್ಯದ ತರಂಗವನ್ನು ಅನುಭವಿಸಿ ಅದರಂತೆ ಮಾಡತೊಡಗುವನು. ಭಗವಂತನ ಪ್ರತಿಯೊಂದು ಆಜ್ಞೆಯೂ ಆತನ ಮೂಲಕ ವಾಗಿಯೇ ಹೊರಡುತ್ತದೆ. ಅವನು ನಿಸರ್ಗದಲ್ಲಿಯ ಪ್ರತಿಯೊಂದನ್ನೂ ಗ್ರಹಿಸುವನು ಆತನ ದೃಷ್ಟಿಗೆ ಎಲ್ಲವೂ ಸ್ಪಷ್ಟವಾಗುವುದು. ಐಕ್ಯವು ಸಂಪೂರ್ಣ ವ್ಯಾಪಿಸಿ ಒಳಗೂ ಹೊರಗೂ ಅದನ್ನೇ ಅನುಭವಿಸುವನು. ಆತನು ಕಲ್ಲು, ಮನುಷ್ಯ ಅಥವಾ ಸಸ್ಯವನ್ನು ಜಡರೂಪದಲ್ಲಿರುವ ಹಾಗೆ ಗುರುತಿಸಲಾರನು. ಇಲ್ಲಿಗೆ ಬಂಧನಗಳೆಲ್ಲ ಮುಗಿದುಹೋಗುವವು. ಇದು ಚರಮ ಗುರಿಯಾಗಿದ್ದು ಜೀವನದ ಸಮಸ್ಯೆಯು ಪೂರ್ಣವಾಗಿ ಪರಿಹಾರವಾಯಿತು. ಇಲ್ಲಿ ಯಾವುದೇ ತರದ ಧ್ಯಾನವಾಗಲಿ ಪೂಜೆಯಾಗಲಿ ಬೇಕಾಗುವುದಿಲ್ಲ. ನಿಸರ್ಗದ ವಿವಿಧ ಶಕ್ತಿಗಳು ಆತನ ಅಂಕಿತದಲ್ಲಿದ್ದು ಅವುಗಳಿಂದ ಕೆಲಸ ತೆಗೆದುಕೊಳ್ಳುವನು. ಅವೆಲ್ಲ ಅವನ ಆಜ್ಞೆಯನ್ನು ಪಾಲಿಸುವವು. ಯಾವುದೇ ಒಂದು ಕಾಲಕ್ಕೆ ಇಂಥ ವಿಭೂತಿಯು ಸಮಸ್ತ ವಿಶ್ವದಲ್ಲಿ ಕೇವಲ ಒಬ್ಬನೇ ಒಬ್ಬನಿರುವನು. ಮಹಾಪ್ರಳಯದ ಕಾಲ ಬಂದಾಗ ಆಗ ಇರುವ ವಿಭೂತಿಯು, ಸೃಷ್ಟಿಯನ್ನು ಲಯಗೊಳಿಸಲು ನಿಯಮಿತನಾದ ಮುಕ್ತಾತ್ಮನೊಂದಿಗೆ ಕೆಲಸ ಮಾಡುವನು. ಈ ಮುಕ್ತಾತ್ಮನು ಇತರರಿಗಿಂತ ಕೇಂದ್ರಕ್ಕೆ ಅತಿ ಸಮೀಪವಾಗಿರುವನು. ಆರನೆಯ ಆಕೃತಿಯಲ್ಲಿ ಮುಕ್ತಾತ್ಮರ ತರಣಸ್ಥಾನವನ್ನು ತೋರಿಸಲಾಗಿದೆ. ಅವರು ಕೇಂದ್ರಕ್ಕೆ ಸಮೀಪದಲ್ಲಿಯೇ, ವಿಶಾಲವಾದ ಅನಂತ ಕ್ಷೇತ್ರದಲ್ಲಿ ಈಜಾಡುತ್ತಿರುವರು. ಮೇಲೆ ವಿವರಿಸಲಾದಂತೆ ಮಹಾ ಪ್ರಳಯ ಬಂದಾಗಲೇ ಮುಕ್ತಾತ್ಮರು ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವರು. ‘ಕ’ ಎಂದು ಗುರುತಿಸಲಾದ ಕೇಂದ್ರದ ಸುತ್ತಮುತ್ತಲಿನ ಸ್ಥಾ ಕೇಂದ್ರದ ಸುತ್ತಮುತ್ತಲಿನ ಸ್ಥಾನವು ಮುಕ್ತಾತ್ಮರು ಜಾಡುವ ಹಾಗೂ ಉತ್ತರಣ ಮಾಡುವ ಸ್ಥಾನವಾಗಿದೆ. ಇದು ಎಷ್ಟು ವಿಸ್ತಾರವಾಗಿದೆ .
ಎಂದರೆ, ಸೃಷ್ಟಿಯ ಆರಂಭದಲ್ಲಿಯ ಮೊಟ್ಟಮೊದಲನೆಯ ಋಷಿಯು ಇನ್ನೂ ಈಜುತ್ತಿದ್ದು ಈ ಸಾಗರದ ಮಧ್ಯ ಹಂತವನ್ನು ಕೂಡ ಮುಟ್ಟಲು ಶಕ್ತನಾಗಿಲ್ಲ. ದಿವ್ಯದೃಷ್ಟಿಯುಳ್ಳವರು ಅರ್ಥಾತ್ ಕೇಂದ್ರ ಮಂಡಲವನ್ನು ಮುಟ್ಟಿದಾಗ ಇರಬೇಕಾದ ದೃಷ್ಟಿ ಯುಳ್ಳವರು ನಾನು ಹೇಳಿದುದರ ಯಥಾರ್ಥತೆಯನ್ನು ಮನಗಾಣಬಹುದು.

ಈ ಕ್ಷೇತ್ರದಲ್ಲಿ, ನಾನು ‘ಶೂನ್ಯತೆ’ಯೆಂದು ವರ್ಣಿಸಿದ ಸ್ಥಿತಿಯು ಶಕ್ತಿರಾಹಿತ್ಯದ ಕಲ್ಪನೆಯನ್ನು ಕೊಡುವುದು, ಕೇಂದ್ರದ ಸುತ್ತಮುತ್ತಲೂ ನಿಸ್ಸಂದೇಹವಾಗಿ ಅವ್ಯಕ್ತ ಚಲನಗಳಿದ್ದರೂ ಸ್ವಯಂ ಕೇಂದ್ರದಲ್ಲಿ ಯಾವ
ಕ್ರಿಯೆಯೂ ಇಲ್ಲ. ಅದು ನಿಷ್ಕ್ರಿಯ ಮತ್ತು ಮೂಕ ವಸ್ತುವಿನ ಕಲ್ಪನೆಯನ್ನು ಕೊಡುವುದು. ಇದಕ್ಕಿಂತ ಹೆಚ್ಚಿಗೇನಾದರೂ ಹೇಳಿದರೆ ಜನರು ಗೊಂದಲದಲ್ಲಿ ಬೀಳಬಹುದು. ಅದು ಸ್ವತಃ ಅನಂತವಾಗಿದ್ದು, ಯಾರಾದರೂ ಅದರೊಳಗೆ ಮುಂದುವರಿದರೆ ಆಶ್ಚರ್ಯಸಾಗರದಲ್ಲಿ ಮುಳುಗುವರು. ಅದು ಕೇವಲ ಅತ್ಯುಚ್ಚತರದ ಅನುಭವಕ್ಕೆ ಸಂಬಂಧಿಸಿದುದು. ಕಲ್ಪನೆಯಾಗಲಿ, ಅಭಿವ್ಯಕ್ತಿಯಾಗಲಿ ಸಂಪೂರ್ಣ ನಿಂತುಹೋಗುವುದು. ಉಚ್ಚ ಸ್ಥಿತಿಯನ್ನು ಹೊಂದಿದ ಯಾರಾದರೂ ಇದನ್ನನುಭವಿಸಲು ಸಿದ್ಧರಾಗಿ ನನ್ನ ಈ ಅಲ್ಪಸೇವೆಗೆ ಅವಕಾಶ ಕೊಟ್ಟರೆ ನನಗೆ ತುಂಬ ಸಂತೋಷವಾಗುವುದು. ಈಗ, ಸರ್ವಸಾಮಾನ್ಯವಾಗಿ ದೇವರು ಸರ್ವಶಕ್ತನೆಂದು ವರ್ಣಿಸಲಾಗುತ್ತದೆ. ನಮ್ಮಲ್ಲಿರುವ ಶಕ್ತಿಯು ಆ ಮಹತೀ ಶಕ್ತಿಯ ಅಂಶವೆಂದು ತಿಳಿದೇ ನಾವು ಆತನನ್ನು ಸರ್ವಶಕ್ತನೆಂದು ಕರೆಯುವೆವು. ನಮ್ಮಲ್ಲಿರುವ ಶಕ್ತಿಯು ಆ ‘ದೊಡ್ಡ ಚಲನ’ದ ಪರಿಣಾಮವಾಗಿದ್ದು ಅದು ಕ್ರಮೇಣ ಶಕ್ತಿಯಾಗಿ ಬೆಳೆದಿದೆ. ವಿದ್ಯುಜ್ಜನಕದ ಉದಾಹರಣೆಯನ್ನು ತೆಗೆದುಕೊಂಡರೆ ನಿಮಗಿದು ಚೆನ್ನಾಗಿ ತಿಳಿಯುವುದು. ಇದು ಆಯಸ್ಕಾಂತಗಳನ್ನು ಒಂದು ವಿಧವಾಗಿ ಜೋಡಿಸಿ ತಯಾರಿಸಲಾದ ಯಂತ್ರ, ಸ್ವಯಂ ಈ ಜನಕದಲ್ಲಿ ಶಕ್ತಿಯಿಲ್ಲ. ಆದರೆ ಅದು ಚಲಿಸಿದಾಗ ಒಂದು ರೀತಿಯ ವಿದ್ಯುತ್‌ ಕ್ಷೇತ್ರವನ್ನು ನಿರ್ಮಿಸುವುದು; ಮತ್ತು ಆ ಕ್ಷೇತ್ರದಿಂದ ಶಕ್ತಿಯು ಹೊರಹೊಮ್ಮತೊಡಗುವುದು. ಕ್ಷೇತ್ರದ ಕೆಲವು ವಿಶಿಷ್ಟ ಸ್ಥಾನಗಳಲ್ಲಿ ಇರಿಸಲಾದ ತುದಿಗಳು ಆ ಶಕ್ತಿಯನ್ನು ಆಕರ್ಷಿಸಿ ಕೊಳ್ಳುವುದರಿಂದ,ತುದಿಗಳನ್ನು ಜನಕದ ಆಯಸ್ಕಾಂತಗಳಿಗೆ ಕೂಡಿಸಿರದಿದ್ದರೂ ಅವುಗಳಿಂದ ವಿದ್ಯುತವಾಹವು ಬರತೊಡಗುವುದು. ಅದರಂತೆ ಕೇಂದ್ರದ ಸಮೀಪದಲ್ಲಿರುವ ಅವ್ಯಕ್ತ ಚಲನಗಳು ಶಕ್ತಿಯ ಕ್ಷೇತ್ರವನ್ನು ನಿರ್ಮಿಸುವವು. ಅದನ್ನು ನೀವು ಕೇಂದ್ರಮಂಡಲವೆಂದು ಕರೆಯಬಹುದು. ಆದರೆ ಅಲ್ಲಿ ಯಾವ ಕ್ರಿಯೆಯೂ ಇಲ್ಲದೆ ಶಾಂತವಾಗಿದೆ. ಅದು ಕೇವಲ ಯೋಗ್ಯ ದ್ವಾರಗಳ ಮೂಲಕ ನಿಸರ್ಗದ ವಿವಿಧ ಶಕ್ತಿಗಳ ರೂಪದಲ್ಲಿ ಕೇಂದ್ರ ಮಂಡಲದಿಂದ ಹೊರಹೊಮ್ಮಲಾರಂಭಿಸುವುದು.

ನಿಮಗೆ ‘ನಾಸ್ತಿತ್ವ’ ಅಥವಾ ‘ಶೂನ್ಯ’ದ ಕಲ್ಪನೆಯಾಯಿತೆ ? ನಾನು ನಿಮ್ಮೆದುರಿಗಿಡುತ್ತಿರುವುದು ಬಹುದೊಡ್ಡ ತತ್ವದರ್ಶನ. ಜನರು ಅದನ್ನು ಮೊದ ಮೊದಲು ತಿಳಿಯಲಿ ತಿಳಿಯದಿರಲಿ, ಕಾಲಾಂತರದಲ್ಲಿ ಇದರ ಸತ್ಯತೆಯನ್ನು ಮನಗಾಣುವರು. ಭಗವಂತನ ಕಾರ್ಯಗಳು ರಹಸ್ಯಮಯವೆಂದು ಹೇಳುವರು. ಕಾರಣವೆಂದರೆ, ದೃಶ್ಯ ಜಗತ್ತಿನ ಹಿಂದಿರುವ ರಹಸ್ಯವು ಮರೆಯಾಗಿದೆ. ಯಾರು ತರಂಗಗಳಲ್ಲಿ ಈಜುತ್ತ ಹೋಗಿ ಕೇಂದ್ರದ ಸಾಮೀಪ್ಯವನ್ನು ಹೊಂದುವರೋ ಅವರಿಗೆ ಮಾತ್ರ ಭಗವಂತನ ನಿಜಸ್ವರೂಪವು ಕಂಡು ಬರುವುದು. ಇದೆಲ್ಲವೂ ನನ್ನ ವಾಸ್ತವಿಕ ಅನುಭವವೆಂದು ದೃಢವಾಗಿ ಹೇಳಬಲ್ಲೆ. ಇದೆಲ್ಲ, ರಾಜಯೋಗದ ಸಂಪೂರ್ಣ ಅಭ್ಯಾಸದಿಂದಲೂ ನನ್ನ ನರನರಗಳಲ್ಲಿ ಪ್ರವಹಿಸುವ ನನ್ನ ಸದ್ಗುರುಗಳ ಆಶೀರ್ವಾದದಿಂದಲೂ ಸಾಧ್ಯವಾಗಿದೆ.

ಕೇಂದ್ರದಿಂದ ಬರುವ ಪ್ರಕಾಶವು ಕೇಂದ್ರ ಮಂಡಲದ ತುದಿಯ ವರೆಗೂ ಹೊರಹೊಮ್ಮಿ, ಅದು ಮುಗಿಯುವಲ್ಲಿ ವರ್ತುಳಾಕಾರದಂಥ ಏನೋ ಒಂದನ್ನು ರಚಿಸಿರುವುದೆಂದು ಹೇಳಿದರೆ ಜನರು ಆಶ್ಚರ್ಯಪಡಬಹುದು. ‘ಪ್ರಕಾಶ’ವೆನ್ನುವುದು ಆ ವಸ್ತುವಿನ ಸರಿಯಾದ ವ್ಯಾಖ್ಯೆಯಲ್ಲ. ಪ್ರಕಾಶವು ಅಲ್ಲಿರುವ ವಸ್ತುವಿಗಿಂತ ಬಹಳ ಜಡವಾಗಿದ್ದು ಹಿಂದೆ ಬಹು ದೂರವುಳಿದಿದೆ. ಕೇವಲ ತಿಳುವಳಿಕೆಗಾಗಿ ಹೀಗೆ ಹೇಳಲಾಗಿದೆ, ಅಷ್ಟೇ. ಕೇಂದ್ರ ಮಂಡಲದಲ್ಲಿ ನಾವು ಕಾಣುವುದೆಲ್ಲ, ಶುದ್ಧ ಹಾಗೂ ನೈಜರೂಪದಲ್ಲಿರುವ ಸತ್ಯ ವಸ್ತುವೆ. ಅಲ್ಲಿ ಯಾವ ತರದ ಸಮ್ಮಿಶ್ರಣವೂ ಇಲ್ಲ. ಈಗ, ಈ ಕ್ಷೇತ್ರವನ್ನು ಪ್ರವೇಶಿಸ ಬೇಕಾದರೆ ವರ್ತುಳವೆಂದು ಮೇಲೆ ವರ್ಣಿಸಲಾದುದನ್ನು ದಾಟಬೇಕಾಗುವುದು. ತಿಳುವಳಿಕೆಗಾಗಿಯೇ ಏಕಾಗಲೊಲ್ಲದು, ‘ಪ್ರಕಾಶ’ವೆಂದು ಕರೆಯಲಾದ ಪ್ರಬಲ ಪದಾರ್ಥವು ಇಲ್ಲಿ ಕೊನೆಗೊಳ್ಳುವುದು. ಗುರುವಿನ ಶಕ್ತಿಯಿಂದ ಮಾತ್ರ ಈ ಕೇಂದ್ರಮಂಡಲದ ಮಾರ್ಗವು ಸುಗಮವಾಗುವುದು. ಪ್ರಕಾಶವು ಕೊನೆಗೆ ಒಂದು ತರದ ಶಕ್ತಿಯನ್ನು ನಿರ್ಮಿಸುವುದು. ಅದನ್ನು ನಾವು ದಾಟಬೇಕಾಗುವುದು. ಗುರುವೇ ನಮ್ಮನ್ನು ದಾಟಿಸುವ ಸಮರ್ಥಶಕ್ತಿ, ಆತನು ಮನೋ ಮಂಡಲದಿಂದ ನಮ್ಮನ್ನು ಮುಂದಕ್ಕೆ ತಳ್ಳಿದಾಗ ಮಾತ್ರ ಇದು ಸಾಧ್ಯ.

ಆರನೆಯ ಆಕೃತಿಯಲ್ಲಿ ‘ಕ’ ಎಂದು ಗುರುತಿಸಲಾದ ಬಿಂದುವು ಕೇಂದ್ರವಾಗಿದೆ. ಇದನ್ನು ಬೇಕಾದರೆ ದೇವರೆಂದೆನ್ನಲಿ ಅಥವಾ ಅಭಿವ್ಯಕ್ತಿಗಾಗಿ ಮತ್ತೇನಾದರೂ ಹೇಳಲಿ, ಇದೇ ಮುಖ್ಯ ಬಿಂದು. ಈ ಬಿಂದುವು ಕೇವಲ ಅಚಲವಾಗಿರುವುದು. ಅಲ್ಲಿ ಯಾವುದೇ ತರದ ಶಕ್ತಿಯಾಗಲಿ, ಇನ್ನೇನಾಗಲಿ ಇರುವುದಿಲ್ಲ. ಅದಕ್ಕೆ ತೀರ ಸಮೀಪದಲ್ಲಿ, ಶಕ್ತಿಯನ್ನು ಹುಟ್ಟಿಸುವ ಗುಪ್ತ ಚಲನವಿದೆ. ಕೇಂದ್ರವು ಆ ಗುಪ್ತ ಚಲನವನ್ನು ಕಾಪಾಡುವುದು ಮಾತ್ರ. ಈ ಸ್ಥಳದ ಬಣ್ಣವು ವರ್ಣರಾಹಿತ್ಯದ ಮಸಕಾದ – ಪ್ರತಿಚ್ಛಾಯೆಯೆಂದು ಹೇಳಬಹುದು. ಕೇಂದ್ರವು ತನ್ನ ಮಂಡಲದಲ್ಲಿ, ಮೇಲೆ ‘ಪ್ರಕಾಶ’ವೆಂದು ಕರೆಯಲಾದ ಯಾವುದೋ ಒಂದು ವಸ್ತುವನ್ನು ಛಾಯಾರೂಪದಲ್ಲಿ ಎಸೆಯುತ್ತಿದೆ. ಈ ಛಾಯಾವಲಯವು ಅದರ ದೆಸೆಯಿಂದಲೇ ಉಂಟಾಗಿದ್ದು ಅದು ಮುಕ್ತಾತ್ಮರು ಈಜುವ ಸ್ಥಾನವಾಗಿದೆ. ನಾವು ಸದೇಹರಾಗಿಯೇ ಅಲ್ಲಿ ತಲುಪಬಹುದು ಮತ್ತು ಈ ಜನ್ಮದಲ್ಲಿಯೇ ಅಲ್ಲಿ ಮುಕ್ತಾತ್ಮರಂತೆ ಈಜಾಡ ಬಹುದು. ಇದು ನನ್ನ ಪೂಜ್ಯ ಗುರುಗಳಾದ ಫತಹಗಡ ನಿವಾಸಿ (ಉತ್ತರ ಪ್ರದೇಶ) ಮಹಾತ್ಮಾ ಶ್ರೀರಾಮಚಂದ್ರಜಿಯವರ ಶೋಧಗಳಲ್ಲೊಂದಾಗಿದ್ದು ಇದನ್ನು ಎಲ್ಲರಿಗೂಡಿ ಶಕ್ಯವಾಗುವಂತೆಯೂ ಸುಲಭವಾಗುವಂತೆಯೂ ಮಾಡಿದ್ದಾರೆ. ನನ್ನ ಅಂತರ್ದೃಷ್ಟಿಯ ಮೇರೆಗೆ ಆಧ್ಯಾತ್ಮಿಕ ಸಿದ್ಧಿಗಳ ಇತಿಹಾಸದಲ್ಲಿಯೇ ಇಂಥ ಬೇರೊಂದು ಉದಾಹರಣೆಯಿಲ್ಲ. ಈ ಸ್ಥಿತಿಯನ್ನು ನಾವು ಬೆಳೆಸಿಕೊಂಡುದಾದರೆ, ಈ ದೇಹವನ್ನು ಬಿಡುವುದಕ್ಕೆ ಮುಂಚಿತವಾಗಿಯೇ ಅಲ್ಲಿ ನೆಲೆಸುವೆವು ಮತ್ತು ದೇಹ ಬಿಟ್ಟ ನಂತರ ನಮ್ಮ ಈಜು ಹಾಗೆಯೇ ಮುಂದುವರಿಯುವುದು. ಈಗ ನಾವು ಪೂರ್ಣ ‘ಶೂನ್ಯತೆ’ಯಲ್ಲಿ ಎಂಬಂತೆ ಈಜುತ್ತಿರುವೆವು.

ಗುಪ್ತ ಚಲನಗಳು ಶಕ್ತಿಯನ್ನು ಹುಟ್ಟಿಸಿದುವು. ಆ ಶಕ್ತಿಯು ಮುನ್ನುಗ್ಗಿ ಯಾವುದೋ ಒಂದು ವಸ್ತುವನ್ನು ನಿರ್ಮಿಸಿತು. ಅದನ್ನು, ತಿಳಿವಳಿಕೆಗಾಗಿ ಮೀನಾಂಡದಲ್ಲಿರುವ ಮೊಟ್ಟೆಯೆಂದು ಹೇಳಬಹುದು. ಮೊಟ್ಟೆ ಗಳಂತಿರುವ ಈ ವಸ್ತುಗಳು ಅವ್ಯಕ್ತ ಚಲನೆಗಳಿಂದ ನಿರ್ಮಿತವಾದ ಶಕ್ತಿಯ ಸಾರಸರ್ವಸ್ವದಿಂದ ತುಂಬಿವೆ. ಈಗ ಈ ಮೂರು ವಸ್ತುಗಳು ಕೇಂದ್ರ, ಗುಪ್ತಚಲನ ಮತ್ತು ಮೊಟ್ಟೆಯಂತಿರುವ ವಸ್ತುಗಳು – ಒಂದಕ್ಕೊಂದು ‘ಎಷ್ಟು ಸಮೀಪದಲ್ಲಿರುವುದೆಂದರೆ, ಅವು ಮೂರು ಒಂದೇ ಎಂಬಂತಿದ್ದು, ಅವುಗಳನ್ನು ಬೇರೆ ಬೇರೆಯಾಗಿ ಗುರುತಿಸುವುದು ಸಾಧ್ಯವಿಲ್ಲ. ಈ ಸ್ಥಾನವು ಉಷಃಕಾಲದಂತೆ ಬೂದಿ ಬಣ್ಣವುಳ್ಳುದೆಂದು ಹೇಳಬಹುದು ಅಥವಾ ಆ ಬಣ್ಣದ ಮಸುಕಾದ ಪ್ರತಿಬಿಂಬವಾಗಲಿ, ಪ್ರಭಾತವು ಯಾವುದರ ಮೂರ್ತ ಸ್ವರೂಪವಾಗಿದೆಯೋ ಆ ಬಣ್ಣದ ಸತ್ವವಾಗಲಿ ಆಗಿದೆಯೆಂದು ಹೇಳಿದರೆ ಹೆಚ್ಚು ಸಮಂಜಸವಾಗುವುದು.

ಇನ್ನು ಮತ್ತೆ ಮೂಲವಿಷಯಕ್ಕೆ ಬರೋಣ. ಒಂದು ಜೀವಕೋಶವು (ಮೇಲೆ ವಿವರಿಸಲಾದ ತತ್ತಿಯಂಥ ಪದಾರ್ಥ) ಒಂದು ಸೃಷ್ಟಿಯ ಅಧಿಪತಿಯಾಗಿದ್ದು ವಿಶ್ವದ ಆ ಭಾಗಕ್ಕೆ ಜೀವಕಳೆಯನ್ನು ಕೊಟ್ಟು ಅದನ್ನು ನಿಯಂತ್ರಿಸುವುದು ಕೇಂದ್ರದ ಸುತ್ತುಮುತ್ತಲೂ ಎಷ್ಟು ಜೀವಕೋಶ (ತತ್ತಿಯಂಥ ವಸ್ತು)ಗಳಿವೆಯೋ ಅಷ್ಟೇ ಜಗತ್ತುಗಳು ಈ ವಿಶ್ವದಲ್ಲಿವೆ. ಯೋಗಿಯು ಈ ಜೀವಕೋಶಗಳಲ್ಲಡಗಿದ ಶಕ್ತಿಯನ್ನು ವಿಭಜನೆ ಮಾಡಿ ಉಪಯೋಗಿಸಿದ್ದಾದರೆ ಜನರು ಅಣ್ವಸ್ತ್ರವನ್ನು ಮರೆತುಬಿಡುವರು. ಅರ್ಜುನನು ಈ ಶಕ್ತಿಯನ್ನು ವಿಭಾಗಿಸುವ ಸಾಮರ್ಥ್ಯವನ್ನು, ಹೊಂದಿದ್ದು ಅದನ್ನು ಬೇಕಾದಾಗ ಬಳಸಿ ಅನಾಹುತವನ್ನೆಸಗಲು ಶಕ್ತನಾಗಿದ್ದನು. ಆದರೆ ಅಂದಿನ ಯುದ್ಧ ನೀತಿಗನುಸರಿಸಿ, ಉಪಸಂಹರಿಸಲು ಬಾರದ ಯಾವ ಅಸ್ತ್ರವನ್ನೂ ಯಾರು ಉಪಯೋಗಿಸು ವಂತಿರಲಿಲ್ಲವಾದುದರಿಂದ ಅರ್ಜುನನಾದರೂ ಅದನ್ನು ಉಪಯೋಗಿಸಲಿಲ್ಲ. ಮುಂಬರುವ ಕುರುಕ್ಷೇತ್ರ ಯುದ್ಧದ ಬಗ್ಗೆ ದುರ್ಯೋಧನನು ಭೀಷ್ಮ ಪಿತಾಮಹರ `ಸಲಹೆ ಪಡೆಯಲು ಹೋದಾಗ ಅವರು ಈ ವಿಷಯವನ್ನು ಅವನಿಗೆ ಹೇಳಿದರು.

ಆದುದರಿಂದ ಇಂದಿನ ಕಾಲದಲ್ಲಿ ಅಣುಶಕ್ತಿಯನ್ನು ವಿಭಜಿಸುವುದು ಇದುವರೆಗೂ ಜಗತ್ತಿಗೆ ಗೊತ್ತಿರದ ತೀರ ಹೊಸ ಸಂಗತಿಯೇನಲ್ಲ. ಮಹಾಭಾರತಕ್ಕಿಂತಲೂ ಪುರಾತನವಾದ ಮತ್ತೊಂದು ಉದಾಹರಣೆಯು ನನಗೆ ಪ್ರಕಟವಾಗಿದೆ. ರಾಮಾಯಣ ಕಾಲದಲ್ಲಿ ಹನುಮಂತನು ರಾವಣನ ಪಟ್ಟಣ ಹಾಗೂ ಕೋಟೆಗಳನ್ನು ಸುಡುವುದಕ್ಕಾಗಿ ತನ್ನ ಸಂಕಲ್ಪಶಕ್ತಿಯಿಂದ ಲಂಕೆಯ ಸುತ್ತಮುತ್ತಲಿನ ಸಮುದ್ರದ ನೀರಿನಲ್ಲಿದ್ದ ಯಾವುದೋ ಶಕ್ತಿಯನ್ನುಪಯೋಗಿಸಿದನು. ಅದು ಇನ್ನೂ ಅಲ್ಲಿದೆಯೋ ಹೇಗೆಂಬುದನ್ನು ಆಧುನಿಕ ವಿಜ್ಞಾನಿಗಳು ಶೋಧ ಮಾಡಲಿ.. ಯಾವುದರ ಉಪಯೋಗಕ್ಕಾಗಿ ಆತನಿಗೆ ಕೇವಲ ಸಂಕಲ್ಪ ಶಕ್ತಿ ಮಾತ್ರ ಸಾಕಾಯಿತೋ, ಪಾಶ್ಚಿಮಾತ್ಯ ವಿಜ್ಞಾನಿಗಳಿಗಿಂದು ಯಂತ್ರೋಪಕರಣಗಳು ಬೇಕಾಗುವವು.

ಕೇಂದ್ರದ ಸುತ್ತಮುತ್ತಲಿರುವ ಶಕ್ತಿಯು ತತ್ತಿಗಳಂಥ ವಸ್ತು ಗಳಲ್ಲೀಗ ಕಾಣಿಸಿಕೊಂಡ ಪ್ರಯುಕ್ತ ಈ ವಸ್ತುಗಳೂ ಕೇಂದ್ರದ ಅವಿಭಾಜ್ಯ ಅಂಶವಾಗಿವೆ. ಹೀಗೆ ಕೇಂದ್ರವು ಸ್ವಯಂ ಒಂದು ಗೂಡಾಗಿದೆ” ಎಂದು ಜನರು ಆಕ್ಷೇಪಿಸಬಹುದು. ಆದರೆ ಅವು ಈ ರೀತಿ ಘನರೂಪದ ಉದಾಹರಣೆ ಯೊಂದಿಗೆ ವರ್ಣಿತವಾದುದು ಕೇವಲ ಅಭಿವ್ಯಕ್ತಿ ಹಾಗೂ ತಿಳುವಳಿಕೆಗಾಗಿ ಮಾತ್ರ, ಎಂಬುದನ್ನು ಅವರು ಗಮನಿಸಬೇಕು. ಕೇಂದ್ರದ ಸಮೀಪದಲ್ಲಿ ತತ್ತಿಯಂಥ ವಸ್ತುಗಳಿವೆ ಎಂಬುದೇನೋ ನಿಜ. ಅವನ್ನು ನೀವು, ನಿರ್ದಿಷ್ಟ ಕ್ರಮದಿಂದ ಕೆಲಸ ಮಾಡುತ್ತಿರುವ ಶಕ್ತಿಯೆಂದು ಕರೆಯಬಹುದು. ಅದನ್ನು ಉಕ್ತರೀತಿಯಲ್ಲಿ ಮಾತ್ರ ಅಭಿವ್ಯಕ್ತಗೊಳಿಸಲು ಸಾಧ್ಯ. ಆಯಸ್ಕಾಂತ ಧ್ರುವದ ಕ್ಷೇತ್ರವನ್ನು ಉದಾಹರಣೆಗೆ ತೆಗೆದುಕೊಂಡರೆ ನಿಮಗಿನ್ನೂ ಹೆಚ್ಚು ಸ್ಪಷ್ಟ ವಾದೀತು. ಅದರ ಕ್ಷೇತ್ರ ಮತ್ತು ಶಕ್ತಿಯನ್ನಾಗಲಿ ಅದು ಕೆಲಸ ಮಾಡುವ ದಿಶೆ ಮತ್ತು ಸ್ಥಾನಗಳನ್ನಾಗಲಿ ಗುರುತಿಸಬೇಕಾದರೆ ಒಂದು ಕಾಗದದ ತುಂಡನ್ನೋ ಕಾಜಿನ ಹಲಗೆಯನ್ನೂ ಇಟ್ಟು ಸ್ವಲ್ಪ ಕಬ್ಬಿಣದ ಪುಡಿಯನ್ನು ಹಾಕಿರಿ. ಕೆಳಗಡೆ ಒಂದು ಆಯಸ್ಕಾಂತವನ್ನಿಟ್ಟು ಕಾಗದವನ್ನು ಸ್ವಲ್ಪ ತಟ್ಟಿರಿ. ಚೂರ್ಣವು ಒಂದು ವಿಶಿಷ್ಟ ರೀತಿಯಲ್ಲಿ ಹರಡಿಕೊಳ್ಳುವುದು. ಅದನ್ನು ಕಲಸಿ ಮತ್ತೆ ತಟ್ಟಿದರೆ ಮತ್ತೆ ಅದೇ ರೀತಿಯಲ್ಲಿ ಕೂಡಿಕೊಳ್ಳುವವು. ಇದು ಆಯಸ್ಕಾಂತ ಧ್ರುವದ ಆಕರ್ಷಣ ಶಕ್ತಿಯ ರೇಖೆಗಳನ್ನೂ ಸ್ಥಾನಗಳನ್ನೂ ತೋರಿಸುವುದು. ಆದರೆ ಆ (ಕಬ್ಬಿಣದ ತುಂಡುಗಳಿಂದ ಸೂಚಿತವಾಗುವ) ರೇಖೆಗಳು ಪ್ರತ್ಯಕ್ಷವಾದ ಕ್ಷೇತ್ರವಾಗಲಿ `ಶಕ್ತಿಯಾಗಲಿ ಅಲ್ಲ. ಅದರ ಕ್ಷೇತ್ರವನ್ನೂ ಶಕ್ತಿಯನ್ನೂ ಸೂಚಿಸಲು ಅಥವಾ ತಿಳಿಯಲು ಅವನ್ನು ಉಪಯೋಗಿಸ ಲಾಗಿದೆ. ಅದರಂತೆಯೆ ಕೇಂದ್ರದ ಸುತ್ತಲೂ ಕೆಲಸಮಾಡುವ ಹಾಗೂ ಕೇಂದ್ರ ದಿಂದ ನಿಯಂತ್ರಿಸಲ್ಪಡುವ ಶಕ್ತಿಗಳನ್ನು ಅಭಿವ್ಯಕ್ತಗೊಳಿಸಲು ಮೀನದತ್ತಿಗಳ ಉದಾಹರಣೆಯನ್ನು ಕೊಡಲಾಗಿದೆ. ಹೀಗೆ, ಇದರ ಪರಿಣಾಮವಾಗಿ ಸೂರ್ಯ ಮಂಡಲವೂ ವಿಶ್ವದೊಳಗಿನ ಬೇರೆ ಪ್ರತಿಯೊಂದು ವಸ್ತುವೂ ಪರಿಪೂರ್ಣವಾಗಿದೆ. ಆದರೆ ಅದು ಬೇರೆ ವಿಷಯವಾದ್ದರಿಂದ ಅದನ್ನು ನಾನಿಲ್ಲಿ ಚರ್ಚಿಸುವದಿಲ್ಲ. ಸಮಯ ದೊರೆತರೆ ಮತ್ತೊಂದು ಕಡೆಗೆ ನಿರೂಪಿಸುವೆನು. ಉಳಿದೆಲ್ಲ ವುಗಳಿಗಿಂತ ದೊಡ್ಡದಾದ ಹಾಗೂ ಹೆಚ್ಚು ಪ್ರಕಾಶಮಾನವಾದ ಒಂದು ಜೀವ ಕೋಶವಿದೆ. ಅದನ್ನು ನೀವು ಪ್ರಧಾನಕೋಶವೆಂದು ಹೇಳಬಹುದು. ಪ್ರಧಾನ ಕೋಶವು ನಾವು ವಾಸಿಸುತ್ತಿರುವ ಜಗತ್ತಿಗೆ ನೇರವಾಗಿ ಸಂಬಂಧಪಟ್ಟಿದ್ದು ಅದನ್ನು ನಿಯಂತ್ರಿಸುವುದು. ಅಲ್ಲದೇ ಇದೇ ಕಾರಣದಿಂದಾಗಿ ಈ ಜಗತ್ತಿನಲ್ಲಿ ನಮಗೆ ಕಾಣಬರುವಂಥ ವಿಭೂತಿಗಳು ಬೇರೆ ಯಾವ ಲೋಕದಲ್ಲಿಯೂ ಕಂಡುಬರುವುದಿಲ್ಲ. ನಾವು (ಅರ್ಥಾತ್ ನಮ್ಮ ಜಗತ್ತು ದೊಂದಿಗೆ ಸಂಬಂಧಪಟ್ಟಿರುವುದರಿಂದ ಅದರ ಶಕ್ತಿಗಳೇ ನಮ್ಮಲ್ಲಿಯೂ ಇರುವವು.

ಸೃಷ್ಟಿರಚನೆಯ ಕುರಿತಾದ ನಿಜಾಂಶವನ್ನು ಕೂಡ ನಾನೀಗ ಹೇಳಿ ಬಿಡುವೆನು. ಜಗತ್ತು ಹುಟ್ಟುವ ಮುಂಚೆ ಕೇಂದ್ರದ ಸಮೀಪದಲ್ಲಿ ಅವ್ಯಕ್ತ ಗತಿಯಿದ್ದು ಅದರಲ್ಲಿ ಹಾಗೂ ಅದರ ಹತ್ತಿರವೇ ಕ್ಷೋಭವಿದ್ದಿತು. ಅದನ್ನು ನೀವು ಚಲನವೆಂದಾಗಲಿ ಕಂಪನವೆಂದಾಗಲಿ ಶಕ್ತಿಯೆಂದಾಗಲಿ, ನಿಮ್ಮ ತಿಳುವಳಿಕೆಗಾಗಿ ಏನಾದರೂ ಕರೆಯಬಹುದು. ಅದು ಸೃಷ್ಟಿಯ ಹಾಗೂ ಅದಕ್ಕೆ ಬೇಕಾಗುವ ಇತರ ಸಾಮಗ್ರಿಯ ಮೂಲ ಕಾರಣವಾಗಿದ್ದಿತು. ಸೃಷ್ಟಿ ರಚನೆಯ ಕಾಲವು ಸಮೀಪಿಸಿದಾಗ ಅವ್ಯಕ್ತ ಚಲನದಲ್ಲಿದ್ದ ಸುಪ್ತ ಕಲ್ಪನೆಯು ಪರಿಪಕ್ವವಾಗಿ ಇಡೀ ಚಲನವನ್ನು ಮಥಿಸಿದಾಗ ಒಂದು ಶಕ್ತಿಯು ಹುಟ್ಟಿಕೊಂಡು ಹೊರಹೊಮ್ಮಿತು. ಧಕ್ಕೆಗಳು, ಮೇಲೆ ವರ್ಣಿಸಲಾದ ಜೀವಕೋಶಗಳ ಅಥವಾ ಮೊಟ್ಟೆಯಂತಹ ವಸ್ತುಗಳ ರೂಪದಲ್ಲಿ, ಶಕ್ತಿ ಯನ್ನು ಈ ಘನೀಕರಿಸಿದುವು. ಪ್ರಧಾನಕೋಶವು ಮೊದಲನೆಯ ಧಕ್ಕೆಯ ಪರಿಣಾಮವಾಗಿರುವುದರಿಂದ ಅದರಲ್ಲಿ ಎಲ್ಲ ಶಕ್ತಿಗಳ ಕೇಂದ್ರೀಕರಣವು ಹೆಚ್ಚಿನ ಪ್ರಮಾಣದಲ್ಲಾಗಿದ್ದು ಅದು ಉಳಿದವುಗಳಿಗಿಂತ ದೊಡ್ಡದೂ ಹೆಚ್ಚು ಪ್ರಕಾಶಮಾನವೂ ಆಗಿರುವುದು. ಉಳಿದ ಮೊಟ್ಟೆಗಳು ಪ್ರವಹಿಸುವ ಶಕ್ತಿಯ ಘನೀಕರಣದಿಂದ ಉಂಟಾದುವು. ಆದುದರಿಂದ ಅವು ಅಷ್ಟು ಶಕ್ತಿಯುತವೂ ಹೊಳಪುಳ್ಳವುಗಳೂ ಆಗಿಲ್ಲ. ನಾವು ಒಂದು ಮದ್ದಿನ ಕುಳ್ಳಿಯ ಉದಾಹರಣೆಯನ್ನು ತೆಗೆದುಕೊಂಡರೆ ಈ ವಿಷಯವು ಚೆನ್ನಾಗಿ ತಿಳಿಯುವುದು. ಮುಖ್ಯ ಧಾರೆಯು ನೇರವಾಗಿ ತುಂಬ ರಭಸದಿಂದ ಬರುವುದು. ಉಳಿದ ಕಿಡಿಗಳಿಗೆ ಅಷ್ಟು ಬಲವಿರುವುದಿಲ್ಲ. ಆದರೆ ಎಲ್ಲವೂ ಒಟ್ಟುಗೂಡಿ ಕಿಡಿಗಳ ತುಷಾರವೇ ಉಂಟಾಗುವುದು.

ಕೇಂದ್ರದ ಅಡಿಯಲ್ಲಿರುವ ವಸ್ತುವು ಜೀವನದ ಅಧಿಷ್ಠಾನವಾಗಿರುವಂತೆ, ಮುಖ್ಯ ಕೋಶವಾದರೂ ಮೊಟ್ಟೆಗಳಂತಹ ವಸ್ತುಗಳೆಂದು ವರ್ಣಿಸಲಾದ ರೂಪವುಳ್ಳ ಪದಾರ್ಥಗಳ ಸಾರಸರ್ವಸ್ವವಾಗಿದೆ. ಉಳಿದ ಚಿಕ್ಕವುಗಳು ದೊಡ್ಡದರಲ್ಲಿಯೇ ಸಮಾವೇಶವಾಗಿದ್ದು ಮುಖ್ಯ ಕೋಶವೆಂದು ಕರೆಯ ಲಾದುದರೊಂದಿಗೆ ಸಂಬಂಧಪಟ್ಟಿವೆ. ಅದು ನೊರೆಗಳು ತೇಲಾಡುತ್ತಿರುವ ಸಾಗರದಲ್ಲಿ ಒಂದು ದೊಡ್ಡ ಹನಿಯಂತಿದೆ. ಬೇರೆ ಶಬ್ದಗಳಲ್ಲಿ ಹೇಳುವು ದಾದರೆ, ಅದು ಈ ದೊಡ್ಡ ಹನಿಯೊಂದಿಗೆ ಸಂಬಂಧಿಸಿದ ಸೃಷ್ಟಿಗಳ ಶಕ್ತಿ ಕೇಂದ್ರವಾಗಿದೆ. ಮುಖ್ಯ ಕೋಶದಲ್ಲಿಯೂ ಅದೇ ತರಂಗವು ಪ್ರವಹಿಸುತ್ತಿದ್ದು ಅದರ ಶಕ್ತಿಯು ಇತರ ಕೋಶಗಳಿಗೂ ಅನ್ವಯಿಸುವುದು. ಇದು
ಮೊದಲನೆಯ ಚಲನದಿಂದ ಕಡೆದು ತೆಗೆದ ಕೆನೆಯಂತಿದೆ. ಮಹಾ ವಿಭೂತಿಯು ಈ ಲೋಕದಲ್ಲಿ ಯಾವಾಗಲೂ ವಾಸಿಸುತ್ತಿರುವುದನ್ನು ನೀವು ಕಾಣಬಹುದು. ಈ ಲೋಕದಲ್ಲಿ ಹುಟ್ಟಿದ ಋಷಿಗಳು ಎಷ್ಟೋ ಸಲ, ಕೇಂದ್ರ ಮಂಡಲದಲ್ಲಿ ಸ್ಪಂದನರೂಪದಿಂದ ಬರುವ ಮೂಲ ಆಧಾರದ ನಿರ್ದೇಶಗಳಂತೆ ಇತರ ಲೋಕಗಳನ್ನೂ ನಿಯಂತ್ರಿಸಿದ್ದಾರೆ.

ನಿಮಗೆ ನಿಜ ಹೇಳಬೇಕಾದರೆ, ಈಗ ಪರಿವರ್ತನೆಗಾಗಿ ಅವತರಿಸಿದ ವಿಭೂತಿಯು ಇಡೀ ವಿಶ್ವದಲ್ಲಿ ಒಬ್ಬನೇ ಆಗಿದ್ದಾನೆ. ಆತನು ಸೂಕ್ಷ್ಮ ರೂಪದಲ್ಲಿ ಸೂರ್ಯನಲ್ಲಿಯೂ ಚಂದ್ರನಲ್ಲಿಯೂ ತನಗೆ ಬೇಕಾದಾಗ ಕಾಣಿಸಿಕೊಳ್ಳಬಲ್ಲನು. ಈ ಲೋಕದ ಕೆಲಸವನ್ನಲ್ಲದೆ ಬೇರೆ ಲೋಕಗಳ ಕೆಲಸವನ್ನೂ ಅವನು ಕೈಗೊಳ್ಳುವನು. ನೀವು ಅಂತರ್ದೃಷ್ಟಿಯನ್ನು ಬೆಳೆಸಿಕೊಂಡುದಾದರೆ, ಇಂಥ ವಿಭೂತಿಯು ತನ್ನ ಭೌತಿಕ ಶರೀರವು ಒಂದೇ ಕಡೆಗಿದ್ದರೂ ಭಗವಂತನ ಸಾಮ್ರಾಜ್ಯದ ತುಂಬ ವ್ಯಾಪಿಸಿದುದನ್ನು ಕಾಣುವಿರಿ. ಜನರಿಗೆ ಇದು ಕೇವಲ ಒಂದು ಕಾಲ್ಪನಿಕ ನಾಟಕವೆಂದೆನಿಸಬಹುದು. ಆದರೆ ನನ್ನ ಅಭಿಪ್ರಾಯ ಬೇರೆಯಾಗಿದೆ. ಆತನು ನಿಜವಾದ ಅರ್ಥದಲ್ಲಿ ಪ್ರಕೃತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ.

ಸರ್ವಸಾಮಾನ್ಯವಾಗಿ, ದೇವರು ತನ್ನ ರೂಪದಂತೆಯೇ ಮನುಷ್ಯನನ್ನು ಹುಟ್ಟಿಸಿದನೆಂದು ನಂಬಲಾಗುತ್ತಿದೆ. ಈ ಬಗ್ಗೆ ಪ್ರಪಂಚದ ಎಲ್ಲ ಧರ್ಮಗಳೂ ದರ್ಶನಗಳು ಹಾಗೂ ವಿಜ್ಞಾನಗಳೂ ಒಮ್ಮತವಾಗಿವೆ. ಅಸ್ತಿ ಮಾಂಸಾದಿಗಳಿಂದ ರಚಿತವಾಗಿ ಕೈಕಾಲು ಮುಂತಾದ ಅವಯವ ಗಳನ್ನುಳ್ಳ ಮನುಷ್ಯನ ರೂಪದಂತೆಯೇ ದೇವರ ಭೌತಿಕ ರೂಪವಿದೆ ಎಂದು ಇದರರ್ಥವಲ್ಲ. ಅದರ ನಿಜಾರ್ಥವಿಷ್ಟೆ: ನಿಸರ್ಗದಲ್ಲಿದ್ದ ಕ್ರಮದಲ್ಲಿಯೇ ಮನುಷ್ಯನಲ್ಲಿಯೂ ಎಲ್ಲ ಶಕ್ತಿ-ಸಾಮರ್ಥ್ಯಗಳೂ ಇವೆ.

ಒಬ್ಬ ಕವಿ ಹೀಗೆ ಹೇಳಿದ್ದಾನೆ:

“ಯಹ್ ಜೋ ಸೂರತ್ ಹೈ ತೇರೀ ಸೂರತ್-ಎ-ಜನಾನ್ ಹೈ ಯಹಿ ಯಹೀ ನಕ್ತಾ ಹೈ, ಯಹೀ ರಂಗ ಹೈ, ಸಾಮಾನ್ ಹೈ ಯಹೀ ||’

ನಿನ್ನ ರೂಪವು ಪ್ರಿಯತಮನ ರೂಪದ ಹಾಗೆಯೇ ಇದೆ. ಅದರ ಆಕಾರ, ಬಣ್ಣ ಮುಂತಾದವು ತದ್ರೂಪವಾಗಿಯೇ ಇವೆ.”

ಈಗ, ಮನುಷ್ಯ ದೇಹದಲ್ಲಿ ಇವುಗಳ ಸ್ಥಾನವನ್ನು ಕುರಿತು ಹೇಳುವೆನು. ನಾನು ತಿಳಿಸಿದಂತೆ, ಕೇಂದ್ರವು ಮನುಷ್ಯನ ಕಪಾಲದ ಹಿಂದುಗಡೆಯ ಉಬ್ಬಾದ ಭಾಗ (occipital prominence) ದಲ್ಲಿದೆ . ಇದನ್ನು ೫ನೆಯ ಆಕೃತಿಯಲ್ಲಿ ತೋರಿಸಲಾಗಿದೆ. ಕೇವಲ ಸತ್ಯ ವಸ್ತುವಿನೊಂದಿಗೆ ಅದರ ಸಂಬಂಧವಿದೆ. ಅದು ಜೀವನದ ಸಾರವಾಗಿದ್ದು ಶರೀರ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಶಕ್ತಿಗಳೂ ಅಲ್ಲಿವೆ. ಅದು ಕೂದಲೆಳೆಗಿಂತ ಸೂಕ್ಷ್ಮವೂ ಬಹಳ ಮೃದುವೂ ಆದ ಪದಾರ್ಥವಾಗಿದ್ದು ನಸುಕಿನ ಬಣ್ಣದಂತೆ ಅಥವಾ ಕೇವಲ ಅದರ ಮಸುಕು ಪ್ರತಿಬಿಂಬದಂತೆ ಬೂದಿಬಣ್ಣವುಳ್ಳುದಾಗಿದೆ. ಈಗಾಗಲೇ ವರ್ಣಿಸಲಾದ ಕೇಂದ್ರದ ಹತ್ತಿರವಿದ್ದ ಜೀವಕೋಶಗಳು ಆ (ಮೊಟ್ಟೆಗಳಂತಹ ವಸ್ತುಗಳು) ಈ ಬಿಂದುವಿನ ಹತ್ತಿರದಲ್ಲಿಯೇ ಭೌತಿಕ ರೂಪದಲ್ಲಿಯೂ ಇವೆ. ಕೇಂದ್ರದ ಹತ್ತಿರದ ಮುಖ್ಯ ಕೋಶದೊಂದಿಗೆ ಅವುಗಳ ಸಂಬಂಧವಿದೆ. ಈ ಕಲ್ಪನೆಯನ್ನು ಪೂರ್ಣವಾಗಿ ಸ್ಪಷ್ಟಪಡಿಸಲು ನನಗೆ ಕ್ಯವಾಗಿದೆಯೋ ಇಲ್ಲವೋ ತಿಳಿಯದು. ಅದನ್ನು ಶಬ್ದಗಳಿಂದ ವ್ಯಕ್ತಪಡಿಸಲು ಬಾರದುದರಿಂದ ಅನುಭವಿಸಿಯೇ ಅರಿತುಕೊಳ್ಳ ಬೇಕು. ಸಾಧ್ಯವಾದ ಮಟ್ಟಿಗೆ ಅದನ್ನು ಅಭಿವ್ಯಕ್ತಗೊಳಿಸಲು ಸಾಕಷ್ಟು ಹೇಳಿದ್ದೇನೆ. ಇದು ನಿಸರ್ಗದ ಸೂಕ್ಷ್ಮಾವಲೋಕನದಿಂದ ಅಥವಾ ಅನುಭವದಿಂದ ನಾನು ಮಾಡಿದ ಸಂಶೋಧನೆ, ನನ್ನ ಗುರುಗಳು ಪರಮ ಕೃಪೆಯಿಂದ ನನಗೆ ಅನುಗ್ರಹಿಸಿದ ದಿವ್ಯದೃಷ್ಟಿಯ ಫಲವೇ ಇದಾಗಿದೆ.

ಈಗ ಮುಖ್ಯ ವಿಷಯವನ್ನು ನಾವು ನಿಜವಾಗಿ ಮುಗಿಸಿದಂತಾಯಿತು. ಮನುಷ್ಯ ದೇಹದಲ್ಲಿ ಕೇಂದ್ರಮಂಡಲದ ಕೆಳಗಿರುವ ಇನ್ನೊಂದು ಬಿಂದುವನ್ನು ತೆಗೆದುಕೊಳ್ಳೋಣ. ಅದು ಕೇಂದ್ರದ ಸ್ಥೂಲ ರೂಪವಾಗಿದ್ದು
ಪ್ರತಿಘಾತಾತ್ಮಕವಾಗಿದೆ. ಅದನ್ನು ನಾನು ವಿಧ್ವಂಸಕ ನೇತ್ರ’ವೆಂದು ಕರೆಯುವೆನು. ಅದರ ಪರಿಣಾಮದಿಂದ ಅನಾಹುತಗಳನ್ನೆಸಗಬಹುದಲ್ಲದೆ ಪ್ರಪಂಚವನ್ನೇ ಸಂಪೂರ್ಣವಾಗಿ ನಷ್ಟಗೊಳಿಸಬಹುದು. ಮುಖ್ಯ ವಿಷಯ ದೊಂದಿಗೆ ಇದರ ಸಂಬಂಧವಿಲ್ಲವಾದ ಕಾರಣ ಅದರ ನಿಜಸ್ಥಾನವನ್ನು ನಾನು ಹೇಳುವುದಿಲ್ಲ; ಹೇಳಲು ನನಗೆ ಅಪ್ಪಣೆಯೂ ಇಲ್ಲ. ಇದಕ್ಕೆ ಸಂಬಂಧಪಡ ಬಹುದಾದ ಎಲ್ಲವನ್ನೂ, ಸಂಕ್ಷೇಪವಾಗಿಯೇ ಏಕಾಗಲ್ಲೊಲ್ಲದು, ಸಂಪೂರ್ಣ ವಾಗಿ ಚರ್ಚಿಸಿದ್ದೇನೆ. ವರ್ಣನೀಯಾಂಶಗಳ ಮಾಲೆಯನ್ನು ಪೂರ್ತಿಗೊಳಿಸಲು ಇದರ ಬಗೆಗೂ ಸ್ವಲ್ಪ ಹೆಚ್ಚು ವಿವರಿಸುವೆನು.

ಮಹಾಭಾರತ ಕಾಲದಲ್ಲಿ, ಅವಶ್ಯಕವಾದ ವಿನಾಶವನ್ನುಂಟು ಮಾಡಲು ರಣರಂಗದಲ್ಲಿ ಹದಿನೆಂಟು ದಿನಗಳವರೆಗೆ ಶ್ರೀಕೃಷ್ಣನು ಈ ‘ವಿಧ್ವಂಸಕ ನೇತ್ರ’ವನ್ನು ತೆಗೆದಿಟ್ಟಿದ್ದನು. ಅದನ್ನು ಮತ್ತೊಂದು ಸಲ ತೆರೆಯಲಾಗುವುದು. ಶ್ರೀ ಕೃಷ್ಣನು ಪರಿವರ್ತನ ಮಾಡಲು ಅವತರಿಸಿದ್ದನು. ಆ ಕಾಲದ ಹಲವು ಪರಿಸ್ಥಿತಿಗಳಿಂದ ವಾತಾವರಣವೆಲ್ಲ ವಿಷಪೂರಿತವಾದುದನ್ನು ಆತನು ಕಂಡನು. ಕಟ್ಟ ಕಡೆಗೆ ಆತನು ಮಹಾಭಾರತ ಯುದ್ಧದ ಯೋಜನೆಯನ್ನು ಚಿಂತಿಸಿದನು. ಪ್ರತ್ಯಕ್ಷವಾಗಿ ಯುದ್ಧ ವಾಗುವುದಕ್ಕಿಂತ ಇಪ್ಪತ್ನಾಲ್ಕು ವರ್ಷಗಳ ಮುಂಚೆಯೇ ಆತನು ತನ್ನ ಸಂಕಲ್ಪಶಕ್ತಿಯಿಂದ ದೂಷಿತಾಂಶಗಳನ್ನು ನಾಶಗೊಳಿಸತೊಡಗಿದನು. ಮಹಾಭಾರತ ಯುದ್ಧದ ಕಾಲವೊದಗಿ, ಯೋಧರು ರಣರಂಗದಲ್ಲಿ ನಿಂತಾಗ ಆತನು ತನ್ನ ವಿಧ್ವಂಸಕ ನೇತ್ರ’ವನ್ನು ತೆರೆದನು. ಆ ಕಾಲದಲ್ಲಿದ್ದಷ್ಟು, ಉಗ್ರರೂಪದಲ್ಲಿ ಅಲ್ಲದಿದ್ದರೂ ಅವೇ ಚಿಹ್ನೆಗಳು ಮತ್ತೆ ಕ್ಷಿತಿಜದಲ್ಲಿ ಕಾಣ ಬರುತ್ತಿವೆ. ಅಂಧಕಾರವು ವ್ಯಾಪಿಸುತ್ತಿದೆ. ವಿಷ ಬೀಜಗಳು ವಿಶ್ವವನ್ನು ಪ್ರವೇಶಿಸಿವೆ. ಜಗತ್ತಿಗೆ ಪರಿವರ್ತನೆ ಬೇಕಾಗಿದೆ. ಈ ಕಾರ್ಯವನ್ನು ಸ್ವತಃ ನಿಸರ್ಗವೇ ಒಬ್ಬ ವ್ಯಕ್ತಿಗೆ ಒಪ್ಪಿಸಿಬಿಟ್ಟಿದೆ.

ನಾನು ರಾಜಯೋಗದ ಪ್ರಭಾವವನ್ನು ತೋರಿಸಿಕೊಟ್ಟುದಾಯಿತು. ಅದೃಷ್ಟವನ್ನು ರೂಪಿಸಬಲ್ಲ ವಸ್ತುವೆಂದರೆ ಅದೊಂದೇ. ಅದು ಸ್ವಯಂಪೂರ್ಣವಾಗಿದೆ. ಅಭ್ಯಾಸ ಹಾಗೂ ಅನುಭವಗಳೇ ಇದನ್ನು ತೋರಿಸಿ ಕೊಡಬಲ್ಲುವು. ನಾನು ಹೇಳಿದುದನ್ನು ಕುರುಡರಂತೆ ನಂಬಿರೆಂದು ನಾನೆನ್ನುವುದಿಲ್ಲ. ಆದರೆ ಮನಃಪೂರ್ವಕ ಅಭ್ಯಾಸಮಾಡಿ ಮನಗಾಣಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ. ರಾಜಯೋಗವನ್ನು ಅಭ್ಯಾಸ ಮಾಡಲು ಬೇರೆ ಪದ್ಧತಿಗಳೂ ಇವೆ. ಆದರೆ ಈ (ಪುಸ್ತಕದಲ್ಲಿ ವಿವರಿಸಲಾದ) ಪದ್ಧತಿಯೇ ಅತ್ಯಂತ ಯೋಗ್ಯವಾದುದು. ಇದರಲ್ಲಿ ಸಿದ್ಧಿ ಪಡೆದವರನ್ನೇ ಹುಡುಕಬೇಕೆಂದು ಓದುಗರಿಗೆ ನನ್ನ ಹೃತ್ತೂರ್ವಕ ಸೂಚನೆಯಿದೆ. ಇಂಥವರನ್ನು ಹುಡುಕುವುದು ಬಹಳ ಕಠಿಣವಾದರೂ ಈ ಪ್ರಪಂಚದಲ್ಲಿ ನಿಸ್ಸಂದೇಹವಾಗಿ ಅಂತಹವರಿದ್ದಾರೆ.

ಅವರನ್ನು ಹುಡುಕಲು ಒಂದು ಸುಲಭೋಪಾಯವನ್ನು ಹೇಳಿ ಕೊಡುವೆನು. ಇಂಥ ವ್ಯಕ್ತಿಯ ಮುಂದೆ ನೀವು ಕುಳಿತರೆ – ಆತನು ಸಂನ್ಯಾಸಿ ಯಿರಲಿ, ಗೃಹಸ್ಥನಿರಲಿ ಆತ್ಮದ ಸಹಜ ಗುಣವಾದ ಶಾಂತಿಯು ಪ್ರಬಲವಾಗಿ ಕೆಲಕಾಲ ನೀವು ನಿಶ್ಚಿಂತರಾಗಿರುವಿರಿ. ಆತನೊಂದಿಗೆ ಇರುವಷ್ಟು ಕಾಲ ನೀವು ಸತ್ಯ . ವಸ್ತುವಿನ ಸಂಪರ್ಕದಲ್ಲಿರುವಿರಿ. ಪರಿಣಾಮವು ತಾನಾಗಿಯೇ ಎಂದರೆ ಇದಕ್ಕಾಗಿ ಆತನು ಶ್ರಮಪಡದಿದ್ದರೂ ಆಗುವುದು. ಆದುದರಿಂದ ನೀವು ಇಂಥ ವ್ಯಕ್ತಿಯನ್ನು ನಿಜವಾಗಿ ಹುಡುಕ ಬಯಸಿದರೆ, ನಿಮ್ಮ ಹೃದಯದ ಕಡೆಗೆ ದೃಷ್ಟಿಯನ್ನಿಟ್ಟು ನಿಮ್ಮ ಮನಸ್ಸಿನ ಸ್ಥಿತಿಯನ್ನು ಗಮನಿಸಬೇಕು. ಅದು ಮೊದಲಿಗಿಂತಲೂ ಹೆಚ್ಚು ಶಾಂತವೂ ಸ್ಥಿರವೂ ಆಗುವುದು. ನಿಮ್ಮ ಮನಸ್ಸಾನವರಿಸಿ ಯಾವಾಗಲೂ ತೊಂದರೆ ಕೊಡುತಿದ್ದ ಬೇರೆ ಬೇರೆ ವಿಚಾರಗಳು ಆತನೊಂದಿಗೆ ನೀವು ಇರುವಷ್ಟು ಕಾಲ ದೂರವಾಗುವವು.. ಆದರೆ ಒಂದು ವಿಷಯವನ್ನು ಮಾತ್ರ ಸ್ಪಷ್ಟವಾಗಿ ನೆನಪಿನಲ್ಲಿಡತಕ್ಕದ್ದು. ಅದೆಂದರೆ ಮನಸ್ಸಿಗೆ ಯಾವ ವಿಧದಿಂದಲೂ ಶ್ರಮ ವಾಗಕೂಡದು ಮತ್ತು ಅದರಲ್ಲಿ ಜಡತ್ವವು ಬರಕೂಡದು. ಏಕೆಂದರೆ, ಇಂದ್ರಜಾಲ, ಸಂಮೋಹನವಿದ್ಯೆ ಮುಂತಾದ ಕೆಳದರ್ಜೆಯ ಶಾಸ್ತ್ರಗಳನ್ನು ಅಭ್ಯಾಸ ಮಾಡಿದವರೂ ಈ ಪರಿಣಾಮವನ್ನು (ವಿಚಾರಗಳನ್ನು ದೂಡಿ ಮನಸ್ಸಿನ ಕಾರ್ಯವನ್ನು ಸ್ಥಗಿತಗೊಳಿಸುವುದು; ಮನಸ್ಸನ್ನು ವಿಚಾರಶೂನ್ಯ ಮಾಡುವುದು) ಉಂಟು ಮಾಡಬಲ್ಲರು. ಆದರೆ ಇವೆರಡರಲ್ಲಿ ಭೇದವಿಷ್ಟೆ: ಎರಡನೆಯದರಲ್ಲಿ ದೇಹದ ಹಾಗೂ ಮನಸ್ಸಿನ ಭಾರವೂ ದಣಿವೂ ಮಂದತೆಯೂ ಅನುಭವಕ್ಕೆ ಬಂದರೆ ಮೊದಲನೆಯದರಲ್ಲಿ ಲಘುತ್ವವೂ ಶಾಂತಿಯೂ ನೆಲೆಸಿರುವವು. ಮೊದಲ ನೋಟದಲ್ಲಿ ಇದನ್ನು ಗುರುತಿಸಲು ಕದಾಚಿತ್, ನಿಮಗೆ ಶಕ್ಯವಾಗಲಿಕ್ಕಿಲ್ಲ. ಆದರೆ ಆ ವ್ಯಕ್ತಿಯ ಸತತ ಸಂಪರ್ಕದಿಂದ ಈ ವಿಷಯದಲ್ಲಿ ನಿಮಗೆ ನಿಚ್ಚಳವಾದ ಸೂಚನೆಗಳು ನಿಶ್ಚಿತವಾಗಿ ದೊರೆಯುವವು.

ಇತ್ತೀಚೆಗೆ ಈ ಶಾಸ್ತ್ರದಲ್ಲಿ ಸಂಶೋಧನೆಗಳ ಬಗೆಗೆ ಅನಾದರವುಂಟಾಗಿದೆ. ನಾವಿನ್ನೂ ಅನೇಕ ಸಂಗತಿಗಳನ್ನು ಹುಡುಕಿ ತೆಗೆದು ತಿಳಿದುಕೊಳ್ಳಬೇಕಾಗಿದೆ. ಆದರೆ ಸಾಗರದ ಆಳಕ್ಕಿಳಿದರೆ ಮಾತ್ರ ಮುತ್ತುಗಳನ್ನು ಆಯ್ದುಕೊಳ್ಳಬಹುದು.

***


ಕೇಂದ್ರ ಮಂಡಲ -page number ೩೩. * ಎರಡೂವರೆ ವರ್ಷಗಳೆಂದರೆ ಈ ಪುಸ್ತಕವು ಬರೆಯಲ್ಪಟ್ಟ ಕಾಲದಿಂದ ಅರ್ಥಾತ್ ಇದು ಮೊಟ್ಟಮೊದಲು ಪ್ರಕಾಶಿತವಾದ ವರ್ಷಕ್ಕಿಂತ(೧೯೫೦)ಆರು ವರ್ಷ ಹಿಂದೆ.ಎಂದರೆ ಕ್ರಿ.ಶ.೧೯೪೪ನೆಯ ಇಸ್ವಿಯಿಂದಲೂ ಸೃಷ್ಟಿಯ ಪರಿವರ್ತನೆ ಗಾಗಿ ಈ ವಿಭೂತಿ ಪುರುಷನು ಕಾರ್ಯೋನ್ಮುಖನಾಗಿದ್ದಾನೆ.