ಮೊದಲನೆಯ ಗ್ರಂಥಿ

ನಾವು ಈ ಚೇತನತೆಯೊಂದಿಗೆ ಸಂಪೂರ್ಣ ಬೆರೆತು ಹೋಗಿ ಅದರ ಪ್ರಭಾವವನ್ನು ನಮ್ಮಲ್ಲಿ ಅರಗಿಸಿಕೊಂಡು ಅದರಲ್ಲಿ ಲಯಹೊಂದುವುದೇ ವಾಸ್ತವವಾಗಿ ಜ್ಞಾನದ ಅವಸ್ಥೆ. ಈ ದಶೆಯನ್ನುಂಟು ಮಾಡಿಕೊಂಡು ಇದರಲ್ಲಿ ಲಯವಾದಾಗಲೇ ನಿಜಕ್ಕೂ ಆ ಗ್ರಂಥಿಯ ನಾಲ್ಕೂನಿಟ್ಟಿನ ಜ್ಞಾನವು ಪ್ರಾಪ್ತವಾಗಿ ಅಷ್ಟರ ಮಟ್ಟಿಗೆ ಜ್ಞಾನಿಗಳಾದೆವು. ನಾವು ಯಾವಾಗ ಅದರಲ್ಲಿ ಲಯಾವಸ್ಥೆಯನ್ನು ಪಡೆದೆವೋ, ಅದರ ಆನಂದವನ್ನು ಸವಿದು ಹೃದಯವು ಮುಂದೆ ಹೋಗಲು ಕಾತರಿಸತೊಡಗಿತೋ, ಆಗ ನಮ್ಮಲ್ಲಿ ಉಂಟಾಗಿದ್ದ ಜ್ಞಾನದ ಸಂಬಂಧವು ನಮ್ಮನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಲು ವಿವಶಗೊಳಿಸಿತು. ಸಾಹಸ ಹೆಚ್ಚಿತು; ಮುಂದೆ ಹೋದ ಸಂತೋಷಕರ ಸುದ್ದಿಯು ಬಂದಿತು. ಪ್ರತಿಯೊಂದು ಲಯ ಅವಸ್ಥೆಯ ನಂತರ ಬರುವ ವಾಸ್ತವಿಕ ಜೀವನವು ನಮ್ಮಲ್ಲಿ ಮೂಡಿತು. ಇದು ನಮಗೆ ಮತ್ತಷ್ಟು ಸಹಾಯ ಮಾಡಿತು. ನಾವು ಇನ್ನೂ ಮುಂದುವರಿದೆವು. ಎರಡನೆಯ ಗ್ರಂಥಿ ಬಂದಿತು. ಈಗ ನಮ್ಮಲ್ಲಿ ಕಳವಳವೇನೋ ಇದೆ. ಆದರೆ, ಅದರೊಡನೆ ತತ್ಪರತೆಯೂ ಸಾಕಷ್ಟಿದ್ದು, ಅದರಲ್ಲಿ ಪರಿಶ್ರಮಪೂರ್ವಕ ತೊಡಗಿದರೆ, ಹಿಂದಿನ ಅವಸ್ಥೆಗಿಂತ ಶ್ರೇಷ್ಠ ದಶೆಯು ಬಂದೇ ಬರುವುದು. ಪ್ರತಿಯೊಂದು ವಸ್ತುವೂ ಸಮೀಪವೇ ಇದ್ದು, ನಾವು ಎಲ್ಲಿಗೆ ಹೋಗಬೇಕಾಗಿಲ್ಲವಾದರೂ ಅಂತಿಮದಶೆಯನ್ನಂತೂ ಮುಟ್ಟಲೇ ಬೇಕಾಗಿದೆ. ಒಂದು ವೇಳೆ ಯೋಗ್ಯ ಗುರುವು ದೊರೆತು ಈ ವಿಷವನ್ನು ಹೀರಿಕೊಂಡುಬಿಟ್ಟರೆ ವಿಷದ ಔಷಧಿ-ವಿಷಹಾರಿ ಮಾತ್ರವೇ ಬಾಕಿ ಉಳಿಯುವುದು. ತಮ್ಮ ಪ್ರಯತ್ನದಿಂದ ಜನರು ಬಹುದೂರ ಮುಟ್ಟುವರಾದರೂ ಸಮಯ ಬಹಳ ಬೇಕಾಗುವುದು. ಆದುದರಿಂದ ಈ ತಿರುಗಣಿಯ ಸುಳಿಯಲ್ಲಿ ಸಿಕ್ಕಿಬೀಳುವ ಅಂಜಿಕೆ ಸದಾ ಇರುವುದು, ಇದೇ ಪ್ರಕಾರ ಅಗಣಿತ ಗ್ರಂಥಿಗಳಿವೆ. ಮತ್ತು ಪ್ರತಿಯೊಂದು ಗ್ರಂಥಿಗೂ ಅವೇ ಲಯ ಹಾಗೂ ಸಾರೂಪ್ಯತೆಯ ಅವಸ್ಥೆಗಳು ಬರುತ್ತ ಹೋಗುವವು.

ಈಗ ನಾನು ಮೊದಲನೆಯ ಗ್ರಂಥಿಯ ಅನಂತರ ಬರುವ ಚೇತನತೆಯನ್ನು ಕುರಿತು ಸ್ವಲ್ಪ ಹೇಳುವೆನು, ನಾವು ಆ ಗ್ರಂಥಿಯನ್ನು ದಾಟಿ ಈ ಚೇತನತೆಯನ್ನು ಹೊಂದಿದಾಗ ಜಗತ್ತು ಅವಶ್ಯವಾಗಿ ಸ್ವಲ್ಪ ಬದಲಾಯಿಸುವುದು. ನಾವು ಅದರಲ್ಲಿ ಲಯಾವಸ್ಥೆಯನ್ನು ಪಡೆದರೆ ಈಶ್ವರೀಯ ದಶೆಯು ಆರಂಭವಾಗುವುದು. ಇದರಲ್ಲಿ ಸಾರೂಪ್ಯ ಹೊಂದಿದಾಗ ಸಮಸ್ತ ಜಡಚೇತನ ಸಮುದಾಯವನ್ನು ಒಂದು ವಿಚಿತ್ರ ದಶೆಯು ಆವರಿಸಿದಂತೆ ನಮಗೆ ಕಂಡು ಬರುವುದು, ಅದರಲ್ಲಿ ಈಶ್ವರೀಯ ದಶೆಯ ಆಭಾಸವಾಗುವುದು. ಶಬ್ದಗಳಿಂದ ವ್ಯಕ್ತಮಾಡಲಾಗದ ಒಂದು ಉನ್ಮಾದ ಬರುವುದು, ಇಲ್ಲಿ ಒಂದು ವೇಳೆ ಯಾರಿಗಾದರೂ ಯೋಗ್ಯ ಗುರು ಸಿಗದಿದ್ದರೆ ಜನರು ಬಹುಶಃ ಈ ಮೊದಲನೆಯ ಅವಸ್ಥೆಯಲ್ಲಿಯೇ ಅವಧೂತರಾಗುವರು. ಆಗ ಅವರ ಪ್ರಯತ್ನವೆಲ್ಲ ನಿಂತು ಹೋಗುವುದು. ಜೀವನಾವಧಿಯೆಲ್ಲ ಇಲ್ಲಿಯೇ ಸಿಕ್ಕಿಬೀಳುವರು. ವಾಸ್ತವವಾಗಿ, ಜ್ಞಾನದ ಮೊದಲನೆಯ ಅಧ್ಯಾಯದ ಆರಂಭದಂತಿರುವ ಈ ಸ್ಥಿತಿಯು ತಾವು ಧುರಂಧರ ಜ್ಞಾನಿಗಳೆಂದು ಸಾರುವ ಜನರಿಗೆ ಎಂದಾದರೂ ಪ್ರಾಪ್ತವಾಗಿದೆಯೇ ಎಂಬುದನ್ನು ಕೇಳಿ ನೋಡಿರಿ, ಇದೇ ದಶೆಯನ್ನು ಧ್ಯಾನಿಸುತ್ತ ಕುಳಿತರೆ ವಾಸ್ತವಿಕತೆ ಹೊರಟುಹೋಗಿ ಕೃತ್ರಿಮತೆ ಬರುವುದು.