ಜ್ಞಾನಿ ಆಗುವದಕ್ಕೆ ಆಕಾಂಕ್ಷಿಸುವದು ಮಾನವ ಜೀವಿಗಳ ಸ್ವಾಭಾವಿಕ ಹಂಬಲವಾಗಿದೆ. ಕೆಲವರು ತಮ್ಮನ್ನು ತಾವು ಜ್ಞಾನಿಗಳೆಂದು ಪರಿಗಣಿಸುತ್ತಾರೆ. ಹಾಗೂ ಹೆಚ್ಚಿಗೆ ಜ್ಞಾನಿಗಳಾಗಿ ಬೆಳೆಯಲು ಇಚ್ಚಿಸುತ್ತಾರೆ. ಬೇರೆ ಕೆಲವರು ತಮ್ಮ ಸ್ವಂತದ ಜಾಣತನದಿಂದ ಬೇಸತ್ತು ಒಂದು ತರಹದ ಉಚ್ಚಮಟ್ಟದ ದೈವೀ ಜ್ಞಾನಕ್ಕಾಗಿ ಪರಿತಪಿಸುತ್ತಾರೆ. ಮಾನವಕುಲವನ್ನು ಪೀಡಿಸುವ ಎಲ್ಲ ಕೆಡಕುಗಳನ್ನೂ ಪರಿಹರಿಸುವದು ವಿವೇಕವೇ ಎಂಬ ಮೂಲಭೂತ ನಂಬಿಕೆಯೊಂದಿದೆ.

ಯಾವಾಗ ಹೃದಯಗ್ರಂಥಿಯಿಂದುತ್ಪನ್ನವಾದ ಇಚ್ಛೆಗಳು, ಮನುಷ್ಯರ ಚಿಂತನ ಶಕ್ತಿಯ ಚಟುವಟಿಕೆಯ ತಳಹದಿ ಅಥವಾ ನಿಯಂತ್ರಕ ಕರ್ತೃವಾಗುವದೋ, ಜ್ಞಾನಕ್ಕಾಗಿರುವ ಆಸಕ್ತಿಯೂ ಅಸಂಖ್ಯಾತ ಇಚ್ಛೆಗಳ ಒಂದು ಭಾಗವಾಗುವದು. ಜ್ಞಾನದ ಅರ್ಥವು ಹೃದಯವನ್ನು ಆಕ್ರಮಿಸುವ ಇಚ್ಛೆಗಳಿಂದ ರೂಪಗೊಳ್ಳುತ್ತದೆ. ಹಲವು ಸಲ, ಜ್ಞಾನವನ್ನು ಸೌಖ್ಯ ಹಾಗೂ ಸಂತೃಪ್ತಿಯ ಪ್ರಾಪ್ತಿಗಾಗಿ ಬಳಸಲಾಗುವ ಭೌತ ವಸ್ತುಗಳ ವಿಶೇಷ ಗುಣಧರ್ಮಗಳ ತಿಳಿವಳಿಕೆ ಎಂದು ಅರ್ಥೈಸಲಾಗುವದು. ಬೇರೆ ಕೆಲವು ಸಮಯ, ಜ್ಞಾನವನ್ನು ಒಬ್ಬನ ತಿಳಿವಳಿಕೆಯ ವಿಸ್ತರಣೆಗಾಗಿ ಅಥವಾ ಒಬ್ಬನ ಅಹಂಕಾರ ಹಾಗೂ ಪ್ರತಿಷ್ಠೆಯನ್ನು ತೃಪ್ತಗೊಳಿಸುವ ವಿವೇಚನಾ ಶಕ್ತಿ ಮತ್ತು ವಾದಸರಣಿಯ ಸಾಮರ್ಥ್ಯದ ಬೆಳವಣಿಗೆಗಾಗಿ ಇರುವದೆಂಬ ಅರ್ಥದಲ್ಲಿ ತಿಳಿದುಕೊಳ್ಳಲಾಗಿದೆ.

ಜ್ಞಾನವೆನ್ನುವದನ್ನು ಲೌಕಿಕ ಹಾಗೂ ದೈವೀಜ್ಞಾನ ಎಂಬ ಎರಡು ಅರ್ಥದಲ್ಲಿ ಸಾರ್ವತ್ರಿಕವಾಗಿ ಸ್ವೀಕರಿಸಲಾಗಿದೆ. ಸೃಷ್ಟಿ ಕಾರ್ಯ ಪ್ರಾರಂಭವಾದಾಗ, ಅದು ದೈವೀ ಶಕ್ತಿಯ ಪ್ರವಾಹದ ಅವರೋಹಣವೇ ಅನ್ನುವಂತಿತ್ತು. ಅವರೋಹಣದ ಒಂದು ಘಟ್ಟದವರೆಗೆ ಅದು ಒಂದು ಪ್ರಮುಖ ಪ್ರವಾಹವಾಗಿತ್ತು. ಅಲ್ಲಿಂದ ಅದು ಎರಡು ಪ್ರಮುಖ ಪ್ರವಾಹಗಳಾಗಿ ಕವಲೊಡೆಯಿತು. ನಿಜಕ್ಕೂ ಅಲ್ಲಿ ಕೆಲವು ಕಿರಿಯ ಪ್ರವಾಹಗಳೂ ಕೂಡ ಇದ್ದವು. ಮೇಲೆ ತಿಳಿಸಲಾದ ಎರಡು ಪ್ರವಾಹಗಳಲ್ಲಿ ಒಂದು ಅಧೋಮುಖ ಮತ್ತೊಂದು ಬಲಗಡೆಗೆ ಊರ್ಧ್ವಮುಖ ಪ್ರವೃತ್ತಿಯದಾಗಿತ್ತು. ಅಧೋಮುಖ ಪ್ರವಾಹವು ಬಹುಶಃ ಭೌತಿಕತೆಗೆ ಹಾಗೂ ಸ್ಥೂಲತೆಗೆ ಸಂಬಂಧಿಸಿದುದಾಗಿದ್ದು, ಬಲಬದಿಯ ಪ್ರವಾಹವು ಆಧ್ಯಾತ್ಮಿಕವೂ ಅಥವಾ ಉದಾತ್ತಮಯವೂ ಆಗಿತ್ತು. ದೈವೀಜಾಣ್ಮೆಯು ಬಲಬದಿಯ ಪ್ರವಾಹಕ್ಕೆ ಸಂಬಂಧಿಸಿದ್ದು, ಐಹಿಕ ಜಾಣ್ಮೆಯು ಬಹುಶಃ ಅಧೋಮುಖಿ ಪ್ರವಾಹಕ್ಕೆ ಸಂಬಂಧಿಸಿದುದಾಗಿತ್ತು.

ದೈವೀ ಜ್ಞಾನದ ಹಂಬಲ ಭಾರತ ದೇಶದ ಯೋಗಿಗಳ ಹಾಗೂ ಋಷಿಗಳ ವೈಶಿಷ್ಟ್ಯವಾಗಿತ್ತು. ಇದಕ್ಕಾಗಿ ಮೊದಲ ಅವಶ್ಯಕತೆಯೆಂದು ಪ್ರತಿಯೊಬ್ಬ ಮಹಾನ್ ಸಂತನು ಹೃದಯವನ್ನು ಶುದ್ಧಗೊಳಿಸುವ ಹಾಗೂ ಅದರ ಅಧೋಮುಖಿ ಪ್ರವೃತ್ತಿ ಪಡೆಯುವ ಕಟ್ಟಳೆ ಮಾಡಿದನು. ಯಾರು ತನ್ನ ಹೃದಯ ಗ್ರಂಥಿಯನ್ನು ಸೀಳಿ ಹಾಕಿರುವನೋ ಅವರಲ್ಲಿ ದೈವೀಜ್ಞಾನ ಉದಯಿಸುವದೆಂದು ಅವರು ಹೇಳಿದರು.

ಎಲ್ಲಿಂದ ದೈವೀಧಾರೆಗಳು ಕೆಳಮುಖವಾಗಿ ಹರಿಯಲಾರಂಭಿಸಿದವೋ, ಅದರ ಸ್ವಲ್ಪ ಕೆಳಗೆ ಜ್ಞಾನದ ಬಿಂದುವಿದೆ. ದೈವೀ ಜ್ಞಾನದ ಬಿಂದುವನ್ನು ತಲುಪುವ ಇಚ್ಛೆಯುಳ್ಳವನಿಗೆ ಮೊದಲು ಬಲಬದಿಗೆ ಹರಿಯುವ ದೈವೀಪ್ರವಾಹಕ್ಕನುಗುಣವಾಗಿ ತನ್ನ ಚಲನೆಯನ್ನು ಬಲಬದಿಗೆ ತಿರುಗಿಸಬೇಕಾಗುವದೆಂದು, ಮಹಾಯೋಗಿಗಳು ಕಂಡುಹಿಡಿದರು. ಹೃದಯಮಂಡಲದಲ್ಲಿ ಐದು ಪ್ರಮುಖ ಬಿಂದುಗಳಿವೆ. ಈ ಐದು ಬಿಂದುಗಳ ಆಧ್ಯಾತ್ಮಿಕ ಯಾತ್ರೆಯನ್ನು ಪೂರ್ಣಗೊಳಿಸಿದನಂತರ, ಮುಂಬರುವ ಪ್ರತಿ ಬಿಂದು ಬಲಬದಿಗೆ ಅಥವಾ ಹಿಂದಿರುವ ಬಿಂದುವಿಗಿಂತ ಮೇಲ್ಮಟ್ಟದಲ್ಲಿದೆ. ಆಧ್ಯಾತ್ಮ ಕ್ಷೇತ್ರದ ಒಬ್ಬ ಯಾತ್ರಿಕನು ದೈವೀಜ್ಞಾನದ ವಲಯದಲ್ಲಿ ಪ್ರವೇಶಿಸುವನು.

ದೈವೀಜ್ಞಾನವನ್ನು ಸಂಪಾದಿಸಬೇಕೆಂಬ ಇಚ್ಛೆಯುಳ್ಳವನಿಗೆ ಎಲ್ಲ ಬಿಂದುಗಳನ್ನು ದಾಟಿಹೋದ ಹಾಗೂ ದೈವೀವಲಯವನ್ನು ಪ್ರವೇಶಿಸಿದ ಒಬ್ಬನು ಧಾರೆಯೆರೆಯುವ ದೈವೀ ಕಂಪನಗಳು ಬಹಳ ಸಹಾಯಕವಾಗುವವು. ಉಚ್ಚಮಟ್ಟದಲ್ಲಿಯ ಜಾರುವಿಕೆ ಎಷ್ಟಿದೆಯೆಂದರೆ, ಯಾರ ಸಹಾಯವೂ ಇಲ್ಲದೆ ಅಲ್ಲಿ ನೆಲೆಗೊಳ್ಳುವದು ಅಸಾಧ್ಯವಾಗಿದ್ದು. ಈ ಪ್ರಾಣಾಹುತಿಯು ಉನ್ನತ ಮಟ್ಟದಲ್ಲಿ ನಿಜಕ್ಕೂ ಅತ್ಯಾವಶ್ಯಕವಾಗಿದೆ. ಒಬ್ಬ ಸಮರ್ಥ ಹಾಗೂ ಸುಯೋಗ್ಯ ಗುರುವಿನ ಪ್ರಾಣಾಹುತಿಯು ಮಾತ್ರ ಸಾಧಕನನ್ನು ಉನ್ನತ ಮಟ್ಟಗಳಿಗೆ ತಳ್ಳುವದಕ್ಕೆ ಸಹಾಯಕವಾಗುವದು. ಜ್ಞಾನಕ್ಕಾಗಿ ಯಾರಿಗೆ ತೀವ್ರತರವಾದ ಆಸಕ್ತಿಯಿದೆಯೋ ಅವರು ದೈವೀಜ್ಞಾನದ ಈ ಕ್ಷೇತ್ರದಲ್ಲಿ ಸಂಶೋಧನ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಹಾಗೂ ಈ ಕ್ಷೇತ್ರದಲ್ಲಿ ಇದುವರೆಗೂ ತಿಳಿವಳಿಕೆಗೆ ಬಾರದ ಸಾಧ್ಯತೆಗಳನ್ನು, ಹಾಗೂ ನವೀನ ದೃಷ್ಟಿಪಥಗಳನ್ನು ಕಂಡುಹಿಡಿಯಬೇಕೆಂದು ಬಿನ್ನವಿಸುವೆನು.

(ಸಹಜ ಮಾರ್ಗ ಪತ್ರಿಕೆ ೧೯೬೮)