ಜ್ಞಾನ ಪ್ರಕರಣ

ಸೃಷ್ಟಿ ನಿರ್ಮಾಣದ ಸಮಯ ಬಂದಾಗ ಸಿದ್ಧತೆಗಳಾಗತೊಡಗಿದವು. ಧಾರೆಗಳು ಪ್ರವಹಿಸಿದುವು. ಕಂಪನ ಹುಟ್ಟಿತು; ತೊಡಕುಗಳು ಬೀಳತೊಡಗಿದುವು. ವೇಗವು ಹುಟ್ಟಿಕೊಂಡಿತು. ಮಂಥನ ಕಾರ್ಯವು ಆರಂಭವಾಯಿತು, ಕ್ರಿಯೆ ಪ್ರತಿಕ್ರಿಯೆಗಳಾಗತೊಡಗಿದವು. ಈ ಕ್ರಮವು ಬಹುದಿನಗಳವರೆಗೆ ನಡೆಯಲು, ವಸ್ತುಗಳು ವ್ಯಕ್ತವಾಗಲಾರಂಭಿಸಿದುವು. ಸೃಷ್ಟಿಯು ರಚನೆಯಾಗತೊಡಗಿತು. ಜಡ-ಚೇತನ ಸಮುದಾಯವು ಉತ್ಪನ್ನವಾಗ ತೊಡಗಿತು. ಮೆಲ್ಲ ಮೆಲ್ಲನೆ ಎಲ್ಲ ವಸ್ತುಗಳೂ ಪ್ರಕಾಶಕ್ಕೆ ಬಂದವು. ಪ್ರಪಂಚವು ರಚಿತವಾಯಿತು. ಗತಿಶೀಲತೆಯು ಆರಂಭವಾಗಿ ಎಲ್ಲಿಯವರೆಗೆ ಮುಂದುವರಿಯಿತೆಂದರೆ, ಅದರ ಮೂಲದಲ್ಲಿದ್ದ ಗತಿಹೀನತೆಯ ವಿಚಾರವು ತರಂಗಿತವಾಗತೊಡಗಿತು. ಇದೇ ದರ್ಶನ ಶಾಸ್ತ್ರದ ಆಧಾರವಾಯಿತು. ಬುದ್ಧಿಯ ಓಡಾಟವು ಇಲ್ಲಿಂದಲೇ ಆರಂಭವಾಗುವುದು. ತನಗಿಂತ ಮೇಲಿನ ವಸ್ತುವಿನ ಶೋಧವು ಇಲ್ಲಿಯೇ ಆರಂಭವಾಯಿತು ಅರ್ಥಾತ್, ಧರ್ಮದ ತಳಪಾಯ ಬಿದ್ದಿತು. ಗತಿಶೀಲತೆಯಂತೂ ನಮ್ಮಲ್ಲಿ ಇದ್ದೇ ಇತ್ತು. ಈಗ ನಾವು ಅದರ ಅನಸ್ತಿತ್ವವನ್ನು ಕುರಿತು ವಿಚಾರಮಾಡತೊಡಗಿದೆವು. ಅನಸ್ತಿತ್ವದ ವಿಷಯವಾಗಿ ಆಲೋಚನೆ ಮಾಡಿದಾಗ ಅದಕ್ಕಿಂತ ಮೊದಲಿನ ವಸ್ತು ಅರ್ಥಾತ್ ಗತಿಹೀನತೆಯ ತಿಳಿವಳಿಕೆಯಾಯಿತು. ಈ ಪ್ರಕಾರ ಗತಿ ಶೀಲತೆಯು ನಮಗೆ ಅದಕ್ಕಿಂತ ಮೊದಲಿನ ದಶೆಯ- ಎಂದರೆ, ಗತಿಹೀನತೆಯ ಸಮಾಚಾರ ಕೊಟ್ಟಿತು ಮತ್ತು ಗತಿಹೀನತೆಯೇ ನಮಗೆ ಗತಿಶೀಲತೆಯು ಅರ್ಥವನ್ನು ತಿಳಿಸಿತು. ಈಗ ಪರಸ್ಪರ ವಿರೋಧಿ ವಸ್ತುಗಳ ಅರ್ಥ ನಮಗೆ ತಿಳಿಯಿತು. ಗತಿಶೀಲತೆಯ ಮಂಚಿನ ಸ್ಥಿತಿಯು ನಮ್ಮ ವಿಚಾರದಲ್ಲಿ ಬಂದಾಗ ಅದು ಗತಿಹೀನತೆಯ ಸ್ಥಿತಿಯೇ ಇದ್ದಿತು. ಈಗ ನಾವು ಗತಿಶೀಲತೆಯ ಆನಂದ ದೊಂದಿಗೆ ಪರಿಚಿತರಾಗಿದ್ದೆವು; ಅದರ ಆಸ್ವಾದನವನ್ನು ಎಷ್ಟರಮಟ್ಟಿಗೆ ಮಾಡಿದ್ದೇವೆಂದರೆ, ನಮ್ಮಲ್ಲಿ ಶಾಂತಿಯ ವಿಚಾರವು ತಾನಾಗಿಯೇ ಹುಟ್ಟಿಕೊಂಡಿತು. ಗತಿಹೀನತೆಯ ಶೋಧವು ಪ್ರಾರಂಭವಾದಾಗ ನಮ್ಮ ದೃಷ್ಟಿಯು ಶಾಂತಿಯ ಮೇಲೆ ನೆಲೆಸಿತ್ತು, ಅದೊಂದು ಆನಂದದಾಯಕ ವಸ್ತುವೆಂದು ಊಹಿಸಿದೆವು. ಆದರೆ ವಾಸ್ತವವಾಗಿ ಈ ಶಾಂತಿ ಮತ್ತು ಆನಂದ ಏನಿದೆ? ಇದರ ಸ್ವಾದವೆಂತಹುದು ?- ಎಂಬುದು ಇದುವರೆಗೂ ನಮಗೆ ತಿಳಿದಿಲ್ಲ. ಅನುಭವವು ತಿಳಿವಳಿಕೆಯನ್ನು ಹೆಚ್ಚಿಸಿತು. ಇದೇನೋ ಒಂದು ಪದಾರ್ಥವಿದೆಯೆಂದು ತಿಳಿದಿರುವೆವಾದರೂ ಅದರ ರುಚಿಯನ್ನು ಇದುವರೆಗೂ ನೋಡಿಲ್ಲ. ಇದು ಜ್ಞಾನದ ಆರಂಭಾವಸ್ಥೆ. ಸಾಂಸಾರಿಕರು ಈ ತಿಳಿವಳಿಕೆಗೆ ಜ್ಞಾನವೆನ್ನುವರು. ಇದರರ್ಥವೇನೆಂದರೆ, ಶಾಂತಿಯೆಂಬ ಅವಸ್ಥೆಯ ಅಸ್ತಿತ್ವವೂ ಇದೆಯೆಂದು ನಮಗೆ ತಿಳಿದಿದೆ. ಸಾಮಾನ್ಯವಾಗಿ ಪ್ರಾಪಂಚಿಕ ಜನರ ಸ್ಥಿತಿಯು ಇದೇ ಆಗಿದೆ. ಇಷ್ಟು ಮಾತು ತಿಳಿದರೆ ಸಾಕು, ಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಬರೆಸಲಾಗುವುದು. ಪ್ರಾಪಂಚಿಕ ಜನರ ದೃಷ್ಟಿಯಲ್ಲಿ ಇದೇ ಜ್ಞಾನದ ಮಹತ್ವ.

ಈಗ, ಈ ಪದಾರ್ಥ ಏಕೆ ಬಂದಿತು? ಜಡ ಹಾಗೂ ಚೈತನ್ಯದ ಗ್ರಂಥಿಯೇ ಇದರ ಮೂಲವಾಗಿದೆ, ವಿಷ ಮತ್ತು ವಿಷನಾಶಕ ಹೆಚ್ಚಾಗಿ ಒಂದಕ್ಕೊಂದು ಸಮೀಪವೇ ಸಿಕ್ಕುತ್ತವೆ, ನಾವು ಜಡತೆಯಲ್ಲಿದ್ದಾಗ ಚೇತನತೆಯ ವಿಚಾರ ಬರುವುದು ಅವಶ್ಯಕವಾಗಿದ್ದಿತು. ಕಾರಣವೇನೆಂದರೆ, ಜಡತೆಯ ಆಧಾರವಾದರೂ ಚೇತನತೆಯೇ ಆಗಿದ್ದು, ಇದು ಸಂಮಿಶ್ರ ದಶೆಯಾಗಿದೆ. ಈಗ, ನಮ್ಮಲ್ಲಿ ಬಂದ ಮೊದಲನೆಯ ವಿಚಾರವೆಂದರೆ, ಚೇತನತೆಯಲ್ಲಿ ಪ್ರವೇಶಮಾಡಬೇಕೆಂಬುದು. ಅರ್ಥಾತ್ ನಮಗೇ ಚೇತನತೆಯಲ್ಲಿ ಹೋಗಲು ಮೊದಲನೆಯ ಸೂಚನೆ ಸಿಕ್ಕಿದ್ದಿತು. ತೀರ ಎತ್ತರವಾದ ಅಥವಾ ತೀರ ಕೆಳಗಿರುವ ವಸ್ತುವಿನ ಮೇಲೆ ನಮ್ಮ ದೃಷ್ಟಿ ಹರಿಯುವುದಿಲ್ಲವೆಂದು ನಿಯಮವಿದೆ. ಅದು ನಮ್ಮ ತಿಳಿವಳಿಕೆಗೆ ನಿಲುಕುವುದೂ ಇಲ್ಲ. ಮನುಷ್ಯನಲ್ಲಿ ಮದ್ಯದ ಸ್ಥಿತಿಯಿದ್ದ ಕಾರಣ ಅವನು ಸಮ-ಅವಸ್ಥೆಗೆ ಅಧಿಕಾರಿಯಾದನು. ಆ ನಡುವಿನ ವಸ್ತು ನಮ್ಮೊಳಗೆ ಯಾವುದಾಗ ಬಲ್ಲುದು? ಅದು ಹೃದಯವೇ, ಜಡ ಹಾಗೂ ಚೇತನ ಗ್ರಂಥಿಯ ಅನುಭವವು ಸ್ಪಷ್ಟರೂಪದಿಂದ ಇಲ್ಲಿಯೇ ಆಗುವುದು. ಆದುದರಿಂದ ಹೃದಯದ ಮೇಲೆ ಧ್ಯಾನಮಾಡುವುದು ಅತ್ಯಂತ ಲಾಭದಾಯಕವಾಗಿದೆ. ನಮಗೆ ಈ ಮಾತು ತನ್ನಿಂದ ತಾನೇ ಹೊಳೆದಿರಬಹುದು; ಇಲ್ಲವೇ ಚೇತನತೆಯ ಕಡೆಗೆ ಹೋಗಲು ಘಟನೆಗಳು ನಮ್ಮನ್ನು ವಿವಶಗೊಳಿಸಿರಬಹುದು. ಅದೇನೇ ಇರಲಿ, ಚೇತನತೆಯ ಕಡೆಗೆ ನಾವು ಒಲಿದವು. ಎಲ್ಲಿಯವರೆಗೆ ಚೇತನತೆಯ ಅರಿವು ನಮಗಿದೆಯೋ ಅಲ್ಲಿಯವರೆಗೆ ಸಾಂಸಾರಿಕತೆಯ ವಿಚಾರ ನಮ್ಮಲ್ಲಿದೆ. ಇದನ್ನೇ ಕಠವೈದ್ಯರ ಜ್ಞಾನವೆಂದು ಕರೆದಿದ್ದಾರೆ.