ಸೃಷ್ಟಿ ರಚನೆಯಲ್ಲಿ ಪ್ರತಿಯೊಂದು ವಸ್ತುವಿನ ಅಗತ್ಯವಿರುತ್ತದೆ. ಒಂದೊಂದು ತತ್ತ್ವವೂ ಇದಕ್ಕೆ ಸಾಕ್ಷಿಯಾಗಿದೆ. ಈಗ ನಾವು ಇದರ ಮುಂದಿನ ದಶೆಯನ್ನು ಮುಟ್ಟುವೆವು. ಅಲ್ಲಿ ದಿವ್ಯಪ್ರಕಾಶದ ಸಮೂಹವು ಒಂದು ಜ್ವಾಲೆಯ ರೂಪದಲ್ಲಿ ಕಾಣಿಸುವುದು. ಭಕ್ತನು ಈ ಕಾವನ್ನು ಪ್ರೇಮದ ಕಾವಿನೊಂದಿಗೆ ಸಂಬಂಧಿಸಿಕೊಳ್ಳುವನು. ಇನ್ನೊಂದು ಮಾತು: ಧಾರೆಗಳು ಪ್ರವಹಿಸತೊಡಗಿದಾಗ ಅವುಗಳ ಕೇಂದ್ರವು ತಣ್ಣಗಿದ್ದಿತು; ಏಕೆಂದರೆ ಅದರಲ್ಲಿ ಪದಾರ್ಥವು (matter) ಬೆರೆತಿರಲಿಲ್ಲ. ಧಾರೆಗಳು ಇಳಿಯುತ್ತಲೇ ಅವುಗಳಿಂದ ಆಘಾತಗಳು ಹೆಚ್ಚುತ್ತಲೇ ನಡೆದವು. ಇವು ವಾಸ್ತವವಾಗಿ ಸೃಷ್ಟಿಯು ಎಲ್ಲಿಂದ ಪ್ರಾರಂಭವಾಗಿದ್ದಿತೋ ಅಲ್ಲಿಯೇ ಹೆಚ್ಚಾಗಿ ಉಂಟಾದವು. ಇದನ್ನು ತಿಳಿದುಕೊಳ್ಳಲು ನಾವು ಮೂರು ಭಾಗಗಳನ್ನು ಕಲ್ಪಿಸಿಕೊಂಡರೆ ಈ ಮಾತು ಮತ್ತಷ್ಟು ಸ್ಪಷ್ಟವಾಗುವುದು. ಎಲ್ಲಿ ಶೀತಲತೆಯು ತನ್ನದೇ ಆದ ಕ್ರಿಯೆಯಿಂದ ಕಾವನ್ನು ಹುಟ್ಟಿಸಿಕೊಂಡಿದ್ದಿತೋ ಆ ಪ್ರದೇಶವನ್ನು ಹೊಕ್ಕಾಗ ಅದು ಅಲ್ಲಿಂದಲೇ ವ್ಯಕ್ತ ರೂಪವನ್ನು ತಳೆಯಿತು. ಇದು ನಡುವಿನ ಭಾಗವಾಗಿದ್ದಿತು. ಇದರಂತೆಯೇ ಈಗ ಅದೇ ಮಧ್ಯ ಭಾಗವು ಒಂದು ಗ್ರಂಥಿಯ ರೂಪದಲ್ಲಿ ನಮ್ಮೆದುರು ಬರುವುದು. ಅದರಲ್ಲಿ ನಮಗೆ ತಿರುಗುವ ಚಕ್ರಗಳಂತೆ ಕಾಣುವವು. ನಿಜಸಂಗತಿಯೇನೆಂದರೆ, ಅದೇ ಮೂಲತತ್ತ್ವವು ತಾನೇ ಒಂದು ಗ್ರಂಥಿಯಾಯಿತು. ಕ್ರಿಯೆ ಪ್ರತಿಕ್ರಿಯೆಗಳು ಹೆಚ್ಚಿದ ಕಾರಣ ಅದು ಪದಾರ್ಥದ ರೂಪವನ್ನು ಪಡೆಯುವಷ್ಟು ಗಟ್ಟಿಯಾಯಿತು. ಈ ಗ್ರಂಥಿಯಲ್ಲಿ ನಾವು ನಮ್ಮ ವಿಚಾರಗಳೊಂದಿಗೆ ಸಮಾವಿಷ್ಟರಾಗಿ ಮುಂದಿನ ದಶೆಯನ್ನು ಮುಟ್ಟುವ ಧ್ಯಾನದಲ್ಲಿಯೇ ಇದರಲ್ಲಿ ಭ್ರಮಣ ಮಾಡುತ್ತಿದ್ದೇವೆ. ನಮ್ಮ ದೃಢವಾದ ತತ್ಪರತೆಯಿಂದ ಯಶ ದೊರೆತಾಗ ಈ ಗ್ರಂಥಿಯ ವಾಸ್ತವಿಕ ದಶೆಗೆ ಬರುವೆವು. ಇಲ್ಲಿಯ ಪ್ರಕಾಶವು ಸ್ವಲ್ಪ ಅಗ್ನಿ ತತ್ತ್ವದೊಂದಿಗೆ ಸಂಬಂಧಪಟ್ಟಿದೆ.

ಮನುಷ್ಯನು ಈ ಗ್ರಂಥಿಯಲ್ಲಿ ಲಯ ಅವಸ್ಥೆಯನ್ನು ಪಡೆದುದಾದರೆ ಅಗ್ನಿ ತತ್ತ್ವದ ಮೇಲೆ ಅಧಿಕಾರವುಂಟಾಗುವುದು. ಈ ಗ್ರಂಥಿಯಿಂದ ಹೊರಬಿದ್ದಾಗ ನಾವು ಇದರ ವಾಸ್ತವಿಕತೆಯನ್ನು ಮುಟ್ಟುವೆವು. ಇದು ನಮ್ಮ ಉನ್ನತಿಗೆ ಸೋಪಾನಪ್ರಾಯವಾಗಿದ್ದು ಆ ಸ್ಥಾನದ ದಶೆಯ ತಿಳಿವಳಿಕೆಯನ್ನುಂಟು ಮಾಡಿಕೊಡುವುದು. ಇದರಲ್ಲಿ ನಾವು ಲಯ ಅವಸ್ಥೆಯನ್ನು ಹೊಂದಿದಾಗ ಇಲ್ಲಿಯ ಜ್ಞಾನದ ದಶೆಯು ನಮ್ಮೊಳಗೆ ಉಂಟಾಗುವುದು. ಈಗ ಈ ವಸ್ತು ನಮ್ಮದಾಯಿತು. ಇದರ ಮೇಲೆ ನಮಗೆ ಪ್ರಭುತ್ವ ಬಂದಿತು. ಈ ಸೀಮೆಯವರೆಗೆ ನಾವು ಜ್ಞಾನಿಗಳಾದೆವು. ಅದರ ವೈಶಿಷ್ಟ್ಯವು ನನಗೆ ತಿಳಿಯಿತು; ಅದರಲ್ಲಿ ನಾವು ಲಯ ಕೂಡ ಹೊಂದಿದೆವು. ವಾಸ್ತವವಾಗಿ ಜ್ಞಾನಿಯ ದಶೆ ಹೇಗಿರುವುದು? ಈ ಪದಾರ್ಥವೆಂಥದು? ಆ ಸ್ಥಾನದ ಲಯ ಅವಸ್ಥೆಯ ನಂತರ ಬರುವ ಸಾರೂಪ್ಯತೆಯ ದಶೆಯೇ ನಿಜವಾಗಿ ಆ ಸ್ಥಾನದ ಜ್ಞಾನ. ಈ ಅವಸ್ಥೆಯಲ್ಲಿ ನಾವು ಜಾಗೃತರಾಗುವೆವು. ಆದುದರಿಂದ ಅದನ್ನು ನಾವು ಆ ಸ್ಥಾನದ ಸಾರೂಪ್ಯತಾ-ಜೀವನವೆಂದು ಕರೆಯುವೆವು ಮತ್ತು ಸಜೀವ ವಸ್ತುವೇ ಈ ಜೀವನದ ಅನುಭವ ಪಡೆಯಬಲ್ಲದು. ಈಗ ನಮ್ಮ ಸಾಹಸ ಮತ್ತಷ್ಟು ಹೆಚ್ಚಿತು. ಇದಕ್ಕಿಂತ ಮುಂದಿನ ಜ್ಞಾನ ಪಡೆಯುವ ಹಂಬಲವುಂಟಾಯಿತು.