ಪ್ರಿಯ ಸೋದರ, ಸೋದರಿಯರೆ,
ನಾನು ರಾಯಚೂರಿನಿಂದ ಬಂದಿರುವೆ. ನನ್ನಂತೆ ಅನೇಕ ಸ್ಥಳಗಳಿಂದ ಬಹಳಷ್ಟು ಜನರು ಗುರುಗಳ ದರ್ಶನಕ್ಕಾಗಿ ಬಂದಿರುವರು. ಗುರುಗಳು ನಮ್ಮನ್ನು ಆಕರ್ಷಿಸಿದರು ಮತ್ತು ನಾವು ಇಲ್ಲಿಗೆ ಬಂದೆವು. ಇಲ್ಲಿ ನಾವು ಕೇವಲ ಗುರುಗಳ ದರ್ಶನಕ್ಕಾಗಿ ಬಂದೆವೋ ಅಥವಾ ಹೆಚ್ಚಿಗೆ ಏನಾದರೂ ಬೇಕಾಗಿ ಬಂದೆವೋ ? ಯಾವ ಉದ್ದೇಶಕ್ಕಾಗಿ ? ಯಾವ ವಿಚಾರದಿಂದಾಗಿ ? ಈ ವಿಷಯಗಳನ್ನು ನಾವು ಯೋಚಿಸಬೇಕಾಗಿದೆ. ನಾನು ಎಲ್ಲ ಅಭ್ಯಾಸಿಗಳನ್ನು ಉದ್ದೇಶಿಸಿ ಹೇಳುತ್ತಿರುವೆ.
ನಾವು ಧ್ಯಾನದ ಅಭ್ಯಾಸವನ್ನು ಕೈಕೊಂಡಿದ್ದೇವೆ. ಇಲ್ಲಿ ನಮ್ಮ ಚಿಂತನೆ ಕೆಲಸ ಮಾಡಬೇಕಾಗಿದೆ. ನಿಮಗೆ ಚಿಂತನವನ್ನು ನಿಲ್ಲಿಸಬೇಕಾಗಿದ್ದರೆ, ನೀವು ಅದಕ್ಕೆ ಭಯಭೀತರಾಗಿದ್ದರೆ ಹಾಗೂ ನೀವು ಅದನ್ನು ನಿರ್ವಹಿಸಲಾರಿರಾದರೆ, ಅದು ನಿಮಗಾಗಿ ಅಲ್ಲ. ಧ್ಯಾನವು ನಿಮಗಾಗಿ ಅಲ್ಲ. ನಿಮಗೆ ಚಿಂತನೆ ಮಾಡಬೇಕಿಲ್ಲವಾದರೆ, ಇತರ ಪದ್ಧತಿಗಳೆಂದು ಕರೆಯಲ್ಪಡುವ, ಗುರುಗಳೆಂದು ಕರೆಯಲ್ಪಡುವ, ಯೋಗದ ಪದ್ಧತಿಗಳೆಂದು ಕರೆಯಲ್ಪಡುವವು ಬಹಳಷ್ಟು ಇದ್ದು, ಅಲ್ಲಿ ನೀವು ಸ್ವಾನುಕೂಲಕ್ಕಾಗಿ ನಿಮ್ಮ ಚಿಂತನಶಕ್ತಿಯನ್ನು ಪರಿತ್ಯಜಿಸಿ ನಿದ್ದೆ ಹೋಗಬಹುದು. ನಿಷ್ಕ್ರಿಯತೆ ಹಾಗೂ ಶಾಂತಿಯ ಬಗೆಗೆ ಒಂದು ವಿಚಾರಗೊಂದಲವುಂಟು. ಇಲ್ಲಿ, ನಾವು ನಮ್ಮ ಚಿಂತನ ಶಕ್ತಿಯನ್ನು ಉಪಯೋಗಿಸಬೇಕಾಗಿದೆ. ನಮ್ಮ ತಿಳಿವಳಿಕೆ. ಯುಕ್ತಿಯನ್ನು ಉಪಯೋಗಿಸಬೇಕಾಗಿದೆ. ಅದನ್ನೆಲ್ಲ ಬೆಳೆಸಿಕೊಳ್ಳಲು ಧ್ಯಾನವು ಸಹಾಯಮಾಡುವದು. ಅದು ಯಾವಾಗ ಅಭಿವೃದ್ಧಿಗೊಳ್ಳುವದೋ ಆವಾಗ ಸ್ವಾಭಾವಿಕವಾಗಿ ತತ್ಸಂಬಂಧಿತವಾದ ನಮ್ಮ ವರ್ತನೆ ಪರಿವರ್ತನಗೊಳ್ಳಬೇಕಾಗುವದು ಅಥವಾ ಅದನ್ನು ಅನುಸರಿಸಬೇಕಾಗುವದು. ಇದು ಆವಶ್ಯಕವಾಗಿದೆ.
ಧ್ಯಾನ ಅಥವಾ ಪೂಜೆ ಅಥವಾ ಅಭ್ಯಾಸ, ಇವು ಒಂದು ತಾಸಿನ ವರೆಗೆ ಮಾಡಿ ಮರೆತುಬಿಡುವ ಸಾಂಪ್ರದಾಯಿಕ ವಿಷಯವಲ್ಲ. ಇದು ಆ ರೀತಿಯದಲ್ಲ. ನೀವು ಅದರ ನಿಜತತ್ತ್ವವನ್ನು ಗ್ರಹಿಸಿರಿ. ಸಹಜಮಾರ್ಗದ ಅಭ್ಯಾಸವನ್ನು ಏತಕ್ಕಾಗಿ ಮಾಡುತ್ತಿರುವಿರಿ ? ನಿಮ್ಮ ಜೀವನವನ್ನು ಸಂಪೂರ್ಣವಾಗಿ ರೂಪಿಸುವದಕ್ಕಾಗಿಯೇ ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕಾಗಿಯೇ ? ಒಂದು ದೃಢವಾದ ನಿರ್ಧಾರ ಇರುವದಕ್ಕಾಗಿಯೇ ? ಆ ಅಂತಿಮ ಗುರಿಯ ಪ್ರಾಪ್ತಿಗಾಗಿಯೇ ಅಥವಾ ಅದನ್ನು ಇದೇ ಜೀವನದಲ್ಲಿ ಸಾಕ್ಷಾತ್ಕರಿಸಿಕೊಳ್ಳುವದಕ್ಕಾಗಿಯೇ ? ಅದನ್ನು ನಿಮಗೆ ದೊರಕಿಸಬೇಕಾಗಿದ್ದರೆ ಅಭ್ಯಾಸವನ್ನು ಮುಂದುವರಿಸಿರಿ ಹಾಗೂ ನಿಮ್ಮ ಅಭ್ಯಾಸವನ್ನು ಒಬ್ಬ ಪ್ರಶಿಕ್ಷಕನ ಆದೇಶದಡಿಯಲ್ಲಿ ಮುಂದುವರಿಸುವದಾದರೆ, ಇಂಥ ಪ್ರಶಿಕ್ಷಕನ ಆದೇಶವನ್ನು ಪೂರ್ಣ ವಿಶ್ವಾಸದಿಂದ ಅನುಸರಿಸಿರಿ ಹಾಗೂ ನಿಮ್ಮ ಜೀವನಕ್ಕೊಂದು ರೂಪಕೊಡಿರಿ. ನಿಮ್ಮ ವರ್ತನೆಯನ್ನು ಹಾಗೂ ನಿಮ್ಮ ಮಾತಿನ ಶೈಲಿಯನ್ನು ಅದೇ ರೀತಿಯಲ್ಲಿ ರೂಪಿಸಿರಿ.
ನಾನು ಹೈದ್ರಾಬಾದಿಗೆ ಭೆಟ್ಟಿಯಿತ್ತಾಗಲೆಲ್ಲ ತಮ್ಮ ಪ್ರಗತಿಯ ಬಗೆಗೆ, ತಮ್ಮ ಆಂತರಿಕ ಸ್ಥಿತಿಯ ಬಗೆಗೆ ಮತ್ತೂ ತಮ್ಮ ಮಟ್ಟ ಏನಿದೆಯೋ ಅದರ ಬಗೆಗೆ ಕೇಳುವ ಅನೇಕ ಹೈದ್ರಾಬಾದಿನ, ಅಷ್ಟೇ ಅಲ್ಲ, ಬೇರೆ ಎಲ್ಲ ಅಭ್ಯಾಸಿಗಳನ್ನು ಸಂಧಿಸಿರುವೆ. ಅದರ ಬಗ್ಗೆ ತಿಳಿಯುವದಕ್ಕಾಗಿ ಅವರು ಸ್ವಾಭಾವಿಕವಾಗಿ ಚಿಂತಾತುರರೂ ಅನ್ವೇಷಣಾಶೀಲರೂ ಆಗಿರುವರು. ಇದು ಬಹಳ ಉತ್ತಮ ಸಂಗತಿ. ಅದನ್ನು ನೀವು ಬೆಳೆಯಿಸಿಕೊಳ್ಳಿರಿ ಹಾಗೂ ನೀವೇ ಅದನ್ನು ಕಂಡು ಹಿಡಿಯಲು ಪ್ರಯತ್ನಿಸಿರಿ. ನೀವು ಎಷ್ಟರ ಮಟ್ಟಿಗೆ ಪರಿವರ್ತಿತರಾದಿರಿ, ಎಷ್ಟರ ಮಟ್ಟಿಗೆ ನಿಮ್ಮ ಚಟಗಳು ಬದಲಾದವು, ಎಷ್ಟರ ಮಟ್ಟಿಗೆ ನಿಮ್ಮ ನಡವಳಿಕೆ ಬದಲಾಯಿತು ಹಾಗೂ ಇತರರಿಗೆ ಎಷ್ಟರ ಮಟ್ಟಿಗೆ ಉಪಯುಕ್ತರಾಗಿದ್ದೀರಿ ಅನ್ನುವದನ್ನು ಕಂಡುಹಿಡಿಯಲು ಪ್ರಯತ್ನಿಸಿರಿ. ಈ ರೀತಿ ವಿಚಾರ ಮಾಡುವದು ಅತ್ಯಂತ ಆವಶ್ಯಕವಾಗಿದೆ. ತದನಂತರವೇ ನೀವು ನಿಮಗೆ ಸಹಾಯಮಾಡಲು ಮಾತ್ರ ಅಷ್ಟೇ ಅಲ್ಲ, ಆದರೆ ಸಮಾಜ ಹಾಗೂ ಸಮಸ್ತ ಮಾನವತೆಗೆ ಸರಿಯಾದ ದಿಶೆಯಲ್ಲಿ ಪ್ರಭಾವ ಬೀರಲು ಶಕ್ತರಾಗುವಿರಿ. ಇಲ್ಲ ವಾದರೆ ಗುರುಗಳೆನಿಸಿಕೊಳ್ಳುವವರು ಹಾಗೂ ಸ್ವಾಮಿಗಳು ಮತ್ತು ಧರ್ಮಗಳು ನೀಡಿದ ಬೋಧಿಸಿದ ಹಳೆಯ ಭಾವನೆಗಳನ್ನು ನೀವು ಈಗಲೂ ಕಾಪಾಡಿಕೊಂಡಿರುವಿರಾದರೆ, ಆ ಎಲ್ಲ ಬಂಧನಗಳು ಹಾಗೂ ಅವುಗಳ ಭಾರ ನಿಮಗೆ ಇದ್ದುದಾದರೆ, ನೀವು ನಿಮ್ಮ ಹೃದಯಕ್ಕೆ ಸ್ಥೂಲತೆಯನ್ನು ಸೇರಿಸುವಿರಿ ಹಾಗೂ ನಿಮ್ಮ ಪ್ರಗತಿಗೆ ಅಡ್ಡಿ ಮಾಡಿಕೊಳ್ಳುವಿರಿ.
ನೀವು ಮೂರ್ತಿ ಪೂಜೆಯನ್ನು ಬಿಟ್ಟು ಬಿಡಲು ಸಿದ್ಧರಿರಬೇಕು, ಮೂರ್ತಿಪೂಜೆಯು ಯಾಂತ್ರಿಕ ವಿಚಾರ ಪ್ರಣಾಲಿಯಿಂದಾಗಿ ಅಭಿವೃದ್ಧಿಗೊಳ್ಳುವದು. ನಿಮಗೆ ಅದರಿಂದ ಬಿಡುಗಡೆಯಾಗಬೇಕಾಗಿದೆ. ಅದಕ್ಕಾಗಿ ನಿಮ್ಮ ವಿವೇಕವನ್ನು ಬಳಸಿರಿ ಮತ್ತು ಯಾವುದಕ್ಕಾಗಿ ಹಾಗೂ ಯಾವ ಕಾರಣಕ್ಕಾಗಿ ಮೂರ್ತಿ ಪೂಜೆ ಮಾಡುತ್ತಿರುವಿರಿ ಅಂತ ಕಂಡುಹಿಡಿಯಲು ಪ್ರಯತ್ನಿಸಿರಿ. ನೀವು ಯಾಂತ್ರಿಕವಾಗಿ ಮಾಡಿದ್ದರೆ, ನೀವು ನಿಮ್ಮ ಚಿಂತನಶಕ್ತಿಯನ್ನು ಉಪಯೋಗಿಸಿದಂತಾಗಲಿಲ್ಲ. ಮೂಢ ಉದಾಹರಣೆ ಕೊಡಬೇಕೆಂದರೆ (ಅದೆಷ್ಟು ಅಡ್ಡಾ ತಿಡ್ಡಿಯಾದ ಅವಿವೇಕದ್ದಾಗುವದು ಅಂತ ನಾನು ನಿಮಗೆ ಹೇಳಿದರೆ, ) ಸೇವೆ ಮಾಡುವ ಅಭ್ಯಾಸದ ಬಗೆಗೆ, ನಾವು ನಮ್ಮ ಗುರುವನ್ನು ಪ್ರೀತಿಸುತ್ತೇವೆ, ಹಾಗೂ ಅವನ ಸೇವೆ ಮಾಡಬಯಸುತ್ತೇವೆ. ಅದರ ಪರಿಣಾಮಗಳನ್ನು ಕಲ್ಪಿಸಿರಿ. ಅದೊಂದು ದಿನ ಏನಾಯಿತೆಂದರೆ, ಗುರುಗಳು ಮದ್ರಾಸದಿಂದ ರಾಯಚೂರಿಗೆ ಶೀಘ್ರ ವೇಗದ ರೈಲಿನಿಂದ ಬರುತ್ತಿದ್ದರು. ರೈಲು ನಿಲ್ದಾಣದಲ್ಲಿ ನಿಂತಿತು. ಹಾಗೂ ನಮ್ಮ ಅಭ್ಯಾಸಿಗಳು ರೈಲಿನೊಂದಿಗೆ ಓಡತೊಡಗಿದರು. ರೈಲು ಬೋಗಿಯಲ್ಲಿ ನಮ್ಮ ಗುರುಗಳನ್ನು ಕಂಡು, ಬೋಗಿಯಲ್ಲಿ ನುಗ್ಗಿ, ಅವರಿಗೆ ಅಲುಗಾಡಲೂ ಸಹ ಬಿಡಲಿಲ್ಲ. ಬಹಳ ಕಷ್ಟದಿಂದ ಅವರು ಹೊರಗೆ ಬರಬೇಕಾಯಿತು. ಹಾಗೂ ಅಭ್ಯಾಸಿಗಳು ಅವರ ಸಾಮಾನುಗಳನ್ನು ತೆಗೆದುಕೊಂಡು ಓಡಿದರು. ಆಗಲಿ. ಈ ಗದ್ದಲದಲ್ಲಿ ಏನಾಗಿರಬೇಕೆಂಬುದನ್ನು ಕಲ್ಪಿಸಿರಿ.
ವಾಸ್ತವಿಕವಾಗಿ ಪ್ರತಿಯೊಬ್ಬನೂ ಸೇವೆಗೋಸ್ಕರ ಪ್ರೀತಿಯಿಂದಲೇ ವರ್ತಿಸಿದನು. ಪ್ರತಿಯಾಗಿ ಪರಿಣಾಮ ಏನಾಯಿತು ? ಸರಿ, ಗುರುಗಳಿಗೆ ಸ್ವಲ್ಪ ಸಮಯ ಕಾಯಬೇಕಾಯಿತು. “ನನ್ನ ಸಾಮಾನುಗಳೆಲ್ಲಿ” “ನನ್ನ ಸಾಮಾನುಗಳೆಲ್ಲಿ” ಅಂತ ಕೇಳಬೇಕಾಯಿತು. ಹೀಗೆ ಸಹಾಯಕರಾಗುವದಕ್ಕೆ ಬದಲಾಗಿ ನಾವು ನಿಶ್ಚಿತವಾಗಿ ಅನಾನುಕೂಲತೆ ಉಂಟು ಮಾಡುವ ಹಾಗೂ ಪ್ರಯೋಜನಕ್ಕೆ ಬಾರದವರೂ ಆಗುತ್ತೇವೆ ಮತ್ತು ಇದೊಂದು ಸಮಯ ಹಾಳು ಮಾಡುವ ಉಪದ್ರವವಾಗುವದು. ಸಾಮಾನುಗಳನ್ನೆಲ್ಲ ಮತ್ತೆ ಒಂದೆಡೆ ಸೇರಿಸುವದಕ್ಕಾಗಿ ಕಾಯುತ್ತ ಗುರುಗಳಿಗೆ ೧೫ ನಿಮಿಷ ಕಾಯಬೇಕಾಯಿತು. ಇದೊಂದು ಸಣ್ಣ ವಿಷಯ. ಇದರಿಂದಾಗಿ ನಾವು ಅಭ್ಯಾಸಿಗಳ ಪ್ರೀತಿ ಹಾಗೂ ವಾತ್ಸಲ್ಯಗಳನ್ನು ತಿಳಿದುಕೊಳ್ಳಬಹುದು. ಆದರೆ, ಇದನ್ನೆಲ್ಲ ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡಿದರೆ ಅದು ಸಹಾಯಕವಾಗುವದು.
ನಮ್ಮನ್ನೆಲ್ಲ ಆಮಂತ್ರಿಸಿದ ಹೈದ್ರಾಬಾದ ಅಭ್ಯಾಸಿಗಳನ್ನು ನಾನು ಅಭಿನಂದಿಸುವೆ. ನಮ್ಮ ಕರ್ತವ್ಯವೇನು ? ಹೊರಗಿನಿಂದ ಬಂದವರ ಕರ್ತವ್ಯವೇನು ? ಮುನ್ಸೂಚನೆ ಕೊಡದೆ, ಬೇಕಾದ ಸಮಯಕ್ಕೆ ಹೋಗಬಹುದಾದ ಹಾಗೊಮ್ಮೆ ಮೈಮೇಲೆ ಬೂದಿ ಬಳಿದುಕೊಂಡು ಅವರ ಹಾಗೆ ಆಗಲು, ಇದೊಂದು ಸನ್ಯಾಸಿಗಳ ಆಶ್ರಮವಲ್ಲ. ಇಲ್ಲಿ. ನಾವೆಲ್ಲರೂ ಹಣ ಸಂಪಾದಿಸುವ ಸದಸ್ಯರು, ಗೃಹಸ್ಥರು ಇದ್ದೇವೆ. ನಮಗೆಲ್ಲ ಆ ಜವಾಬ್ದಾರಿಯ ಅರಿವಿರಬೇಕು. ನಿರ್ದಿಷ್ಟ ಸಮಯಕ್ಕೆ ಮುಂಚಿತವಾಗಿಯೇ ವ್ಯವಸ್ಥಾಪಕರು ನಮಗೆಲ್ಲ ಆಹಾರ ಮುಂತಾದವುಗಳ ವ್ಯವಸ್ಥೆ ಮಾಡುವಂತೆ ಅವರಿಗೆ ನಾವು ಸೂಚನೆ ಕೊಡಬೇಕು. ಒಮ್ಮೆಲೆ ಮಧ್ಯರಾತ್ರಿಯಲ್ಲಿ ೨೦ ಜನರು ಬಂದು, ಆಹಾರ ಮುಂತಾದವುಗಳ ಬೇಡಿಕೆ ಮುಂದಿಡುವದು ಅವರಿಗೆ ಅನಾನುಕೂಲತೆಯನ್ನುಂಟು ಮಾಡುವದು. ನಾವು ಇಲ್ಲಿಗೆ ಬಂದಿರುವೆವು, ನಮಗೆ ಆಹಾರ ಬೇಕು. ಅವರು ಆಮಂತ್ರಿಸಿರುವದು ನಿಜ, ಅದು ಅವರ ಒಳ್ಳೆಯತನ. ಆದರೆ, ನಾವು ಅವರಿಗೆ ಭಾರವಾಗಬಾರದು. ಹೀಗೆ ಅನೇಕ ವಿಷಯಗಳಿದ್ದು, ಅವುಗಳ ಬಗೆಗೆ ನಾವು ಬುದ್ದಿ ಅಥವಾ ಮೆದುಳನ್ನು ಉಪಯೋಗಿಸಬೇಕು. ನಮಗೆ ನಮ್ಮ ಮೆದುಳನ್ನು, ವಿವೇಕವನ್ನು ಉಪಯೋಗಿಸಲು ಬರದಿದ್ದರೆ, ಈ ಪೂಜೆಯನ್ನು ಮಾಡುವದರ, ಹಾಗೂ ನಾನು ಹತ್ತು ವರ್ಷಗಳಿಂದ ಪೂಜೆ ಮಾಡುತ್ತಿರುವೆ, ೫ ವರ್ಷದಷ್ಟು ಹಿರಿಯ ಅಭ್ಯಾಸಿ” ಎಂದು ಅದರ ಪ್ರದರ್ಶನ ಮಾಡುವದರ ಅರ್ಥವೇನು ? ಪ್ರಗತಿಯೆಂಬುದನ್ನು ಅಭ್ಯಾಸದ ಅವಧಿಯಿಂದ ಅಳೆಯಲು ಬಾರದು.
ಗುರುಗಳು ಆಗಮಿಸಿದಾಗ ಅವರಿಗೆ ಚಲಿಸಲೂ ಬಾರದಂತೆ ನಾವು ಅವರಿಗೆ ಅನಾನುಕೂಲ ಮಾಡುವೆವು. ಅದರ ಬಗೆಗೆ ಯೋಚಿಸಿರಿ. ಅದನ್ನು ನೀವು ಇಚ್ಛಾಪೂರ್ವಕ ಮಾಡುವಿರಿ ಅಂತಲ್ಲ. ನೀವು ಗುಂಪು-ಮನೋಭಾವಕ್ಕೆ ವಶವಾಗುವಿರಿ. ಒಬ್ಬನು ಗುರುವಿನ ಚರಣಸ್ಪರ್ಶ ಮಾಡಲಾರಂಭಿಸುವನು, ಬೇರೆ ಎಲ್ಲರೂ ಅವನನ್ನು ಅನುಸರಿಸುವರು. ಚರಣ ಸ್ಪರ್ಶ ಮಾಡುವದು ಸರಿಯಾದುದೇ, ಅದರ ಬಗೆಗೆ ನನಗೆ ಜಗಳ ಇಲ್ಲ. ಆದರೆ ನಮ್ಮ ಬುದ್ದಿಯನ್ನು ಉಪಯೋಗಿಸದೇ, ವಿವೇಕವನ್ನು ಬಳಸದೇ, ಅದನ್ನು ಒಂದು ಯಾಂತ್ರಿಕ ಅಭ್ಯಾಸವನ್ನಾಗಿ ಮಾಡುವದು ನಿಶ್ಚಿತವಾಗಿಯೂ ಪೀಡೆಯನ್ನುಂಟುಮಾಡುವ ಒಂದು ತಲೆನೋವು. ಆದ್ದರಿಂದ ನಾನು ಹೇಳುವದರ ಅರ್ಥವೇನೆಂದರೆ, ನಾವು ಒಂದು ವಿಷಯದ ಅಭ್ಯಾಸಮಾಡುತ್ತಿದ್ದರೆ, ನಮ್ಮ ಬುದ್ದಿಯನ್ನು ನಾವು ವಿಕಾಸಗೊಳಿಸಬೇಕು. ಅದು ನಮ್ಮ ವಿವೇಕವನ್ನು ಪ್ರಕಾಶಿಸಬೇಕು. ಈ ಎರಡು ಸಂಗತಿಗಳು ಅಭಿವೃದ್ಧಿಗೊಳ್ಳದಿದ್ದರೆ, ಧ್ಯಾನಾಭ್ಯಾಸ ಸರಿಯಾಗಿಲ್ಲ ಅಥವಾ ನೀವು ಸಹಜಮಾರ್ಗಾನುಸಾರ ಧ್ಯಾನ ಮಾಡುವದಿಲ್ಲ, ಅದರಲ್ಲಿ ಏನಾದರೂ ನ್ಯೂನತೆ ಇರಬೇಕೆಂದು ತಿಳಿಯಿರಿ.
ಪ್ರಶಿಕ್ಷಕನ ಕಡೆಗೆ ಒಬ್ಬನೇ ಖಾಸಗಿಯಾಗಿ ಹೋಗು, ನಿನ್ನ ಕಷ್ಟಗಳನ್ನು ತೊಂದರೆಗಳನ್ನು ತಿಳಿಸು. ಅವನು ಸಹಾಯ ಮಾಡಲು ಶಕ್ತನಿರುವನು. “ನೀನು ನನ್ನ ಪಾದಗಳಿಗೆ ಎರಗಲೇಬೇಕು, ತದನಂತರವೇ ನಿನಗೆ ಸ್ವರ್ಗಕ್ಕೆ ತಿಕೀಟು ಸಿಗುವದು. ಎಂದು ಹೇಳುವ ಗುರುಗಳೆಂಬವರ ಭಾಷಣಕ್ಕೆ ಕಿವಿಗೊಡುವಷ್ಟು ನಾವು ನಮ್ಮ ಎಲ್ಲ ಸ್ಥೂಲತೆಯನ್ನೂ ಹಾಗೂ ನಾವು ಸಂಗ್ರಹಿಸುತ್ತ ಬಂದ ಪ್ರಾರಂಭಿಕ ವಿಚಾರಗಳನ್ನೂ ಕಳೆದುಕೊಳ್ಳಬೇಕು. ಇದು ಮೂರ್ಖತನವಾಗಿದೆ. ಆ ವಿಚಾರದ ಸಂಸ್ಕಾರವನ್ನು ತೊಳೆದು ಹಾಕು. ಇದು ಅತ್ಯಾವಶ್ಯಕವಾಗಿದೆ. ಈ ಎಲ್ಲ ಸಂಗತಿಗಳನ್ನು ನೀವು ಎಲ್ಲಿಯವರೆಗೆ ತೊಳೆದು ಹಾಕುವದಿಲ್ಲವೋ ಹಾಗೂ ಆ ಎಲ್ಲ ಸ್ಥೂಲತೆಗಳನ್ನು, ಜಟಿಲತೆಗಳನ್ನು ಬೀಸಾಕಿ ಶುದ್ಧಗೊಳ್ಳುವದಿಲ್ಲವೋ, ನೀವು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾರಿರಿ. ನಮಗೆ ಒಬ್ಬ ಸಶಕ್ತ ಮಾರ್ಗದರ್ಶಕನಿದ್ದಾಗ, ನೀನು ಕೇಳಿದೆ ಎಂಬ ಒಂದೇ ಕಾರಣಕ್ಕಾಗಿಯೇ ಶ್ರೇಷ್ಠ ವರ್ಗಗಳು ಕ್ಷಣಾರ್ಧದಲ್ಲಿ ಲಭ್ಯವಾಗುವವು. ಆದರೆ ಈ ಶುದ್ದೀಕರಣ ಮಾಡಿಕೊಳ್ಳುವದು ಹೇಗೆ ? ಅದಕ್ಕಾಗಿ ನಾವು ಅರ್ಹರಾಗಿರುವೆವೇ ? ನಮ್ಮನ್ನು ನಾವು ಅದಕ್ಕಾಗಿ ಯೋಗ್ಯರನ್ನಾಗಿ ಮಾಡಿಕೊಂಡಿರುವೆವೋ ? ನಾವು ಆತನಿಗೆ
ಸಂಪೂರ್ಣವಾಗಿ ಶರಣಾಗಿರುವೆವೋ ? ಆತನು ಸೂಚಿಸಿದ ಬೋಧನೆಗಳನ್ನು ಸ್ವೀಕರಿಸಲು ಹಾಗೂ ಪ್ರತಿಯೊಂದನ್ನೂ ಅನುಸರಿಸಲು ಸಿದ್ಧರಿರುವೆವೇ ? ನಾವು ನಮ್ಮ ಹಳೆಯ ಯಾಂತ್ರಿಕ ವಿಚಾರಶೈಲಿಯನ್ನು ಬಿಟ್ಟುಬಿಡಲು ಸಿದ್ಧರಿರುವೆವೇ ?
ಆಗಲಿ ಶ್ರೀಯುತರೆ, ಸಹಜಮಾರ್ಗ ಹೇಡಿಗಳಿಗಾಗಿ ಅಲ್ಲ. ಅದು ಇರುವದು ಸಿಂಹರ ಹೃದಯದವರಿಗೆ. ಆಧ್ಯಾತ್ಮದ ಇತಿಹಾಸದಲ್ಲಿ ಒಂದು ದೊಡ್ಡ ಮಹಾನ್ ಕ್ರಾಂತಿ ಬರಲಿದೆ. ಒಂದು ಸಂಪೂರ್ಣ ಹೊಸದಾದ ಹಾಗೂ ಕ್ರಾಂತಿಕಾರಕ ಪದ್ಧತಿಯನ್ನು ನಿಮಗೆ ನೀಡಲಾಗುವದು. ಅದಕ್ಕಾಗಿ ಸಿದ್ಧರಾಗಿರಿ. ಎಲ್ಲ ಸ್ಥೂಲತೆಯನ್ನು ಕಾಪಾಡಿಕೊಂಡಿರಬಯಸುವಿರಾದರೆ, ಇದು ನಿಮಗಾಗಿ ಅಲ್ಲ.
ಪ್ರಿಯ ಸೋದರನೆ. ಆಧ್ಯಾತ್ಮ ಕ್ಷೇತ್ರದಲ್ಲಿ ಶೀಘ್ರಗತಿಯಿಂದ ಮುಂದುವರಿಯಲು ನಾವು ನಿಶ್ಚಯಪೂರ್ವಕವಾಗಿ ನಿರ್ಧಾರ ಮಾಡಬೇಕು. ನಿಮ್ಮ ಎಲ್ಲ ಪೂರ್ವಗ್ರಹಿತ ಭಾವನೆಗಳನ್ನು ಹಾಗೂ ಎಲ್ಲ ಆಂತರಿಕ ಶಿಥಿಲತೆಗಳನ್ನು ಹಾಗೂ ಗುರುಗಳೆಂದೆನಿಸಿಕೊಳ್ಳುವವರ ಸಮ್ಮೋಹನಗೊಳಿಸುವ ನಿರಂತರ ಸೂಚನೆಗಳ ಬಗೆಗೆ, ನೀವು ಬೆಳೆಯಿಸಿಕೊಂಡಿರುವ ಭಾವನೆಗಳನ್ನು ತ್ಯಜಿಸಬೇಕು, ಹಾಗೂ ನಾವು ನಿಶ್ಚಯಪೂರ್ವಕವಾಗಿ ಅದರ ಆಯ್ಕೆ ಮಾಡಬೇಕು. ನಿಮ್ಮನ್ನು ನೀವು ಸಮ್ಮೋಹನ ಸ್ಥಿತಿಯಿಂದ ಹೊರತನ್ನಿರಿ. ಕೇವಲ ಅಂತಿಮ ಸ್ಥಿತಿಯನ್ನೇ ನಾವು ಹೊಂದಬಯಸಬೇಕು, ನಮ್ಮ ಮನೋಭಾವನೆ ಅಂತಿಮ ಸತ್ಯದಬಗ್ಗೆಗಾಗಿರಬೇಕು. ಗುರಿಯು ನಿಮ್ಮೆದುರಿಗೆ ಇರಲಿ, ನಮ್ಮ ಎಲ್ಲ ಇಚ್ಛೆಗಳು ಗುರಿಗೆ ಬಾಧಕಗಳಾಗಿವೆ. ಅದೊಂದು ಸ್ವಯಂಸಿದ್ಧ ಪ್ರಮಾಣವಾಗಿದೆ. ಎಲ್ಲ ಇಚ್ಛೆಗಳು ನಮ್ಮ ಪ್ರಗತಿಯನ್ನು ತಡೆಹಿಡಿಯುತ್ತವೆ. ನಮ್ಮನ್ನು ಅಂತಿಮಸ್ಥಿತಿಗೆ ಕರೆದೊಯ್ಯಲು ಅವನೇ ಏಕೈಕ ಸಹಾಯಕನಿರುವನು.
ದಿನ ನಿತ್ಯವೂ ನಮಗೆ ಈ ಪ್ರಾರ್ಥನೆಯನ್ನು ಪುನರುಚ್ಚರಿಸಬೇಕಾಗುವದು : “ಓ ನಾಥ ನೀನೇ ಮಾನವ ಜೀವನದ ಗುರಿ, ನಮ್ಮ ಇಚ್ಛೆಗಳು ಆತ್ರೋನ್ನತಿಯಲ್ಲಿ ಬಾಧಕಗಳಾಗಿವೆ. ನೀನೇ ನಮ್ಮೆಲ್ಲರ ಏಕಮಾತ್ರ ಸ್ವಾಮಿ ಹಾಗೂ ಇಷ್ಟದೈವ. ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿಯು ಅಸಂಭವ.” ಅವನ ಸಹಾಯವಿಲ್ಲದೇ ನಾವು ಒಂದು ಹೆಜ್ಜೆಯಷ್ಟು ಸಹ ಪ್ರಗತಿ ಹೊಂದಲಾರೆವು. ನಾವು ಅದಕ್ಕಾಗಿ ಇಚ್ಛಿಸಲೇಬೇಕು. ಯಾವುದನ್ನೂ ಸ್ವಂತಕ್ಕಾಗಿ ಇಟ್ಟುಕೊಳ್ಳಲಾರದೇ, ನಮ್ಮನ್ನು ನಾವು ಅದಕ್ಕಾಗಿ ಪೂರ್ಣವಾಗಿ ಸಮರ್ಪಿಸಲೇಬೇಕು. ನಾವೇ ಬೆಳೆಸಿಕೊಂಡ ಆಲೋಚನೆಗಳನ್ನು ಕಳೆದುಕೊಳ್ಳಲು ನಮ್ಮ ಕೈಲಾದ ಮಟ್ಟಿಗೆ ನಾವು ಸ್ಪಂದಿಸಬೇಕು.
ನಮಗೆ ಸಾಧ್ಯವಿರುವ ಉತ್ತಮವಾದುದಕ್ಕೆಲ್ಲ ಪ್ರಯತ್ನಿಸಬೇಕು. ಹಾಗೂ ನಮ್ಮ ಗುರುಗಳ ಶ್ರಮವನ್ನು ಕಡಿಮೆ ಮಾಡಬೇಕು. ನಾನು ನಿಲುವಂಗಿಯನ್ನು ಧರಿಸಬೇಕೋ ಅಥವಾ ಅಂಗಿಯನ್ನೋ, ಅಥವಾ ಷರಾಯಿ ಅಥವಾ ಧೋತರವನ್ನು ಧರಿಸಬೇಕೋ ಮುಂತಾದ ಕ್ಷುಲ್ಲಕ ವಿಷಯಗಳ ಬಗೆಗೆ ಹಾಗೂ ನಾವೇ ನಿರ್ಧರಿಸಬೇಕಾದ ಅನ್ಯ ಹಲವು ಸಂಗತಿಗಳ ಬಗ್ಗೆ ಹೇಳುತ್ತಾ ಹೋಗುವದು ಅತಿ ಶ್ರಮದಾಯಕ ಕೆಲಸವಾಗುವದು. ಆಗಲಿ, ಆ ಎಲ್ಲ ವಿಷಯಗಳಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಗುರುಗಳು ಇಲ್ಲಿಲ್ಲ. ಅನ್ಯರಿಗೆ ಅನಾನುಕೂಲವಾಗದಂತೆ, ಆದರೆ ಅದು ನಿನಗೆ ಸಹಾಯಕವಾಗುವಂತೆ ನೋಡಿಕೊಳ್ಳುವದನ್ನು ನಿನ್ನಷ್ಟಕ್ಕೆ ನೀನೇ ನಿರ್ಧರಿಸಬೇಕು. ಅದಕ್ಕಾಗಿಯೇ ವಿವೇಕವನ್ನು ಬೆಳೆಯಿಸಿಕೊ. ನೀನು ಸರಿಯಾಗಿ ಅಭ್ಯಾಸ ಮಾಡುತ್ತಿದ್ದರೆ ನಿನ್ನ ವಿವೇಕ ನಿನಗೆ ಸಹಾಯ ಮಾಡುವದು. ಈ ಎರಡು ವಿಷಯಗಳೇ ನಿನಗೆ ಆವಶ್ಯಕವಾಗಿವೆ. ಅದರ ವಿಧಾನ ಉಚಿತವಾದುದಿರಬೇಕು. ಹಾಗೂ ನೀವು ಅದನ್ನು ಸರಿಯಾಗಿ ಅನುಸರಿಸಬೇಕು. ಸಹಜಮಾರ್ಗವು ಅತ್ಯುತ್ತಮ ಪದ್ಧತಿಯೂ ಆಗಿದೆ. ಹಾಗೂ ಅದು ಎಲ್ಲ ಅಭ್ಯಾಸಿಗಳಿಂದ ಪರೀಕ್ಷಿಸಲ್ಪಟ್ಟುದೂ ಹಾಗೂ ತಿಳಿದುಕೊಳ್ಳಲ್ಪಟ್ಟುದೂ ಆಗಿದೆ. ಇದು ತಮಗೆ ಅತ್ಯುತ್ತಮವಾದುದು ಅಂತ ಅವರು ಅರಿತಿದ್ದಾರೆ.
ಪ್ರಿಯ ಸೋದರರೆ, ನಾನು ವಿಶೇಷವಾಗಿ ಅಭ್ಯಾಸಿಗಳನ್ನು ಉದ್ದೇಶಿಸಿ ಸಂಬೋಧಿಸುತ್ತಿದ್ದೇನೆ. ತಮ್ಮ ಶೀಘ್ರ ಪ್ರಗತಿಗಾಗಿ, ಅವರು ಬಹಳ ಸಮಯದಿಂದ ಸಾಧನೆ ಮಾಡುತ್ತಿದ್ದಾರೆ. ಇಂಥ ಶೀಘ್ರ ಪ್ರಗತಿಯ ಅರ್ಥವೇನು ? ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ? ನೀವು ಯೋಚಿಸಬೇಕು. ನೀವು ಮತ್ತೆ ಮತ್ತೆ ವಿಚಾರಿಸಿ ಪ್ರಶಿಕ್ಷಕನ ಎದುರು ವ್ಯಕ್ತಗೊಳಿಸಿ ಅದನ್ನು ಪರೀಕ್ಷಿಸಬೇಕು. ಹಾಗೂ ನಿಮ್ಮ ಆಲೋಚನೆ ನಿಮ್ಮ ವರ್ತನೆಯಲ್ಲಿ ಪ್ರತಿಫಲಿಸಲೇಬೇಕು. ಒಂದು ವೇಳೆ ನಿಮ್ಮ ವರ್ತನೆ ಸರಿಯಾಗಿರದಿದ್ದರೆ, ಅದನ್ನು ಸರಿಪಡಿಸದಿದ್ದರೆ, ಅದು ಸುಧಾರಿಸದಿದ್ದರೆ ನಮ್ಮ ಧ್ಯಾನದ ಅಭ್ಯಾಸದಲ್ಲಿ ಏನೋ ಕುಂದಿದೆ. ಇಚ್ಚೆಗಳು ಕ್ಷೀಣಿಸಲೇಬೇಕು. ಅಥವಾ ಕಡಿಮೆಯಾಗುತ್ತ ಹೋಗಬೇಕು. ನಾವು ಧ್ಯೇಯದೆಡೆಗೆ ಸಾಗಬೇಕು. ಧ್ಯೇಯದೆಡೆ ಮೇಲಕ್ಕೇರಬೇಕು. ಹಾಗೂ ನಾವು ಧ್ಯೇಯದ ಹತ್ತಿರ ಹೋಗಬೇಕು. ಗುರಿಯನ್ನು ನಿಮ್ಮ ದೃಷ್ಟಿಯಲ್ಲಿಟ್ಟುಕೊಳ್ಳಿರಿ ಹಾಗೂ ಆತಂಕಗಳನ್ನು ಹೃದಯದೊಳಗಿನಿಂದ ತೆಗೆದುಹಾಕಿರಿ. ಒಬ್ಬ ಪ್ರಶಿಕ್ಷಕನಲ್ಲಿ ಪೂರ್ಣ ಸಮರ್ಪಣದ ಭಾವನೆಯನ್ನು ಬೆಳೆಯಿಸಿಕೊಳ್ಳುವದಕ್ಕಾಗಿ ಆತಂಕಗಳನ್ನು ನಿವಾರಿಸಿರಿ ಹಾಗೂ ಆ ಮಹಾನ್ ಪ್ರಶಿಕ್ಷಕ (ಗುರು)ನಲ್ಲಿ ನೀವು ಪೂರ್ಣ ಶರಣಾಗತಿ ಬೆಳೆಸಿಕೊಳ್ಳಿರಿ. ಆಧ್ಯಾತ್ಮದಲ್ಲಿ ಉನ್ನತ ಮಟ್ಟಗಳನ್ನು ತಲುಪಲು ಕೇವಲ ಇದೊಂದೇ ಸಹಾಯಕವಾಗಬಲ್ಲದು.
ಈ ಶಬ್ದಗಳೊಂದಿಗೆ ನನ್ನ ಭಾಷಣವನ್ನು ಮುಗಿಸುವೆನು.
(ಪೂಜ್ಯ ಗುರು ಶ್ರೀ ರಾಮಚಂದ್ರಜೀಯವರು ಹೈದ್ರಾಬಾದ ಕೇಂದ್ರಕ್ಕೆ ಜೂನ ೧೪, ೧೯೭೧ ರ ಭೆಟ್ಟಿಯಿತ್ತಂದು ಸಂದರ್ಭದಲ್ಲಿ ಮಾಡಿದ ಭಾಷಣ)