“ಬೆಳಗು ಮು೦ಜಾನೆ ಏಳಿರಿ. ಸಂದ್ಯೋಪಾಸನೆಯನ್ನು ನಿಯಮಿತ ಸಮಯಕ್ಕೆ ಮುಗಿಸಿರಿ. ಸೂರ್ಯೋದಯಕ್ಕಿಂತ ಮುಂಚಿತವಾದರೆ ಬಹಳ ಒಳಿತು. ಪೂಜೆಗಾಗಿ ಪ್ರತ್ಯೇಕವಾಗಿ ಸ್ಥಳವನ್ನೂ ಆಸನವನ್ನೂ ಇರಿಸಿಕೊಳ್ಳಿರಿ. ಆದಷ್ಟು ಮಟ್ಟಿಗೆ ಒಂದೇ ಆಸನದಲ್ಲಿ ಕುಳಿತುಕೊಳ್ಳುವ ರೂಢಿಯನ್ನು ಹಾಕಿಕೊಳ್ಳಿರಿ. ಶಾರೀರಿಕ ಹಾಗೂ ಮಾನಸಿಕ ಪವಿತ್ರತೆಯ ಕಡೆಗೆ ವಿಶೇಷ ಲಕ್ಷವಿರಲಿ. “

ಸೃಷ್ಟಿಯು ಪ್ರಾರಂಭವಾದ ದಿನದಿಂದ ಪ್ರಜ್ವಲಿಸುತ್ತಿರುವ ಉರಿ ಇನ್ನೂ ಆರಿಲ್ಲ. ಸೃಷ್ಟಿಯು ಪ್ರಕಟವಾಗುವ ಸಮಯ ಬರಲು, ಕ್ಷೋಭವುಂಟಾಯಿತು. ಪರಮಾಣುಗಳಲ್ಲಿ ಕಾವು ಮೂಡಿತು. ಹೀಗೆ ಆದಿಯಿಂದಲೇ ಮೊದಲನೆಯ ಆವರಣ ಉಂಟಾಯಿತೆನ್ನಬಹುದು. ಈ ಬೆಂಕಿಯು ಪರಮಾಣುಗಳನ್ನು ಸತತವಾಗಿ ಕಾಯಿಸಿ ಅವುಗಳಿಗೆ ಚಾಲನ ಕೊಡಲಾರಂಭಿಸಿತು. ಅದರ ಪ್ರಖರತೆ ಹೆಚ್ಚುತ್ತ ಹೋದಂತೆಲ್ಲ ಆವರಣಗಳ ಮೇಲೆ ಆವರಣಗಳು ಬೆಳೆಯುತ್ತ ಹೋದುವು. ಸ್ಥೂಲತೆಯು ಹೆಚ್ಚತೊಡಗಿ ಚಟುವಟಿಕೆಯುಂಟಾಗುತ್ತಲೇ ನಡೆಯಿತು. ಎಲ್ಲವೂ ತಮ್ಮ ತಮ್ಮ ಕ್ರಿಯೆಗಳನ್ನಾರಂಭಿಸಿದುವು. ಅದರ ಪರಿಣಾಮವಾಗಿ ಸತ್ಯವು ರೇಷ್ಮೆಹುಳದಂತೆ ಗೂಡಿನಲ್ಲಿ ಮರೆಯಾಯಿತು. ತತ್ತಿಯ ಬಿಳಿಯ ಭಾಗವಷ್ಟೆ ಗೋಚರವಾಗತೊಡಗಿತು. ಭಾವಸಂಬಂಧವು ಅಸ್ತಿತ್ವದಲ್ಲಿ ಬರತೊಡಗಿತು. ಯಾರು ಅದರೊಂದಿಗೆ ಹೆಚ್ಚು ನಿಕಟವರ್ತಿಗಳಾಗಿ ಸ್ನೇಹವಶರಾದರೋ ಅವರ ಪಾಲಿಗೆ ಈ ವಸ್ತು ಹೆಚ್ಚು ದೊರೆಯಿತು; ಮತ್ತು ಮೊದಲನೆಯ ದಿನವಿದ್ದ ಉಷ್ಣತೆಯೆ ಮನುಷ್ಯನಲ್ಲಿ ಪ್ರಕಟವಾಗಿ ಮೆಲ್ಲಮೆಲ್ಲನೆ ವೃದ್ಧಿ ಹೊಂದಿ ಸುಸ್ಪಷ್ಟ ಆಕಾರವನ್ನು ತಳೆಯಿತು, ಪ್ರತಿಯೊಂದು ಕಣದ ಮೇಲೂ ಅದರ ಪರಿಣಾಮವಾಗಿ ಅದು ಅದರಲ್ಲಿ ಪಾಲುಗೊಂಡಿತು. ಹೀಗೆ ಕೂಡಿದ ವಸ್ತುವು ಪಾರ್ಥಿವವಾಗಿದ್ದಿತು. ಯವುದರಲ್ಲಿ ಇದರ ಪಾಲು ಇದೆಯೋ ಅದರ ಅಧೀನವಾಗಿಯೇ ಇದು ಉಳಿಯಿತು. ಅರ್ಥಾತ್ ಉಷ್ಣತೆಯಿಂದುಂಟಾದ ಆ ದೊಡ್ಡ ಕವಚವು ಇದರೊಂದಿಗೆ ಹೆಚ್ಚು ಸಂಬಂಧವನ್ನಿಟ್ಟುಕೊಂಡಿತು. ಈಗ ಆ ದೊಡ್ಡ ವಸ್ತುವಿನ ಮೇಲೆ ಉಂಟಾದ ಪರಿಣಾಮವು ಸಣ್ಣ ವಸ್ತುಗಳಲ್ಲಿಯೂ ಅವುಗಳ ಗಾತ್ರಕ್ಕೆ ತಕ್ಕಂತೆ ಪ್ರಕಟವಾಗುವುದು ಸ್ವಾಭಾವಿಕವಾಗಿದೆ. ಈ ವಸ್ತುಗಳ ಮೇಲೆ ಬಾಹ್ಯ ಪರಿಣಾಮಗಳೂ ಉಂಟಾಗುವುವು. ಕಿರಣಗಳ ಪರಿಣಾಮವು ಎಲ್ಲ ವಸ್ತುಗಳ ಮೇಲೂ ಆಗುತ್ತದೆ. ಎರಡರ ಕಾರ್ಯಗಳೂ ಅವುಗಳ ಗಾತ್ರವನ್ನನುಸರಿಸಿ ಬಹುಶಃ ಒಂದೇ ಆಗುವುವು. ಬಾಹ್ಯ ಪರಿಣಾಮಗಳಿಂದುಂಟಾದ ಉಷ್ಣತೆಯು ಶಾಂತವಾಗಲಾರಂಭಿಸುವುದು. ಅದು ಶಾಂತವಾದಾಗಲೆ ನಿಜವಾದ ಸುಖ ದೊರೆಯುವುದು. ಉದಾಹರಣೆಗಾಗಿ, ಬೇಸಗೆಯ ಕಾಲವನ್ನೇ ತೆಗೆದುಕೊಳ್ಳಿರಿ. ಹೊರಗಿನ ಉಷ್ಣತೆಯ ಪರಿಣಾಮವು ಸಂಪೂರ್ಣವಾಗಿ ಕಡಿಮೆಯಾದಾಗಲೇ ಸ್ವಲ್ಪ ಸುಖ-ಶಾಂತಿಗಳು ಲಭಿಸುತ್ತವೆ. ಈ ಹೊರಗಿನ ಉಷ್ಣತೆಯ ಕಡಿಮೆಯಾಗುವ ಸಮಯವನ್ನು ಮಹಾತ್ಮರು ಗಣನೆಗೆ ತೆಗೆದುಕೊಂಡರು. ಈ ಉಷ್ಣತೆಯು ನಾಶವಾಗತೊಡಗಿದಾಗ ತಂಪಿನ ಪರಿಣಾಮ ತಲೆದೋರಲಾರಂಭಿಸುವುದು. ಇವೆರಡೂ ಕೂಡುವ ವೇಳೆಗೆ ಸಂಧಿಗತಿಯೆನ್ನುವರು. ಈ ಸಂಧಿಗತಿಯಲ್ಲಿ ಪೂಜೆ-ಉಪಾಸನೆಗಳನ್ನು ಮಾಡುವುದು ಕರ್ತವ್ಯವೆಂದು ಮಹಾತ್ಮರು ವಿಧಿಸಿದ್ದಾರೆ. ಈ ಸಮಯದಲ್ಲಿ ಉಷ್ಣತೆಗೆ ವಿರುದ್ಧವಾದ ವಸ್ತುವು ಪ್ರಕಟವಾಗುವುದು. ಉಷ್ಣತೆಯು ಹುಟ್ಟುವದಕ್ಕಿಂತ ಮುಂಚೆ ಅನಾದಿಕಾಲದಿಂದ ಯಾವುದು ಇದ್ದಿತೋ ಅದು. ಇದೆಂಥ ಉತ್ತಮ ಸಮಯವೆಂಬುದನ್ನು ಸ್ವಲ್ಪ ಯೋಚಿಸಿರಿ. ಇದು ನಿಸರ್ಗದೊಂದಿಗೆ ತೀರ ಸರಿಹೊಂದುತ್ತದೆ. ಇದನ್ನು ತಿಳಿದೇ ಹೀಗೆ ವಿಧಿಸಲಾಗಿದೆ. ನಾವು ಮುಟ್ಟಬೇಕಾದ ಅವಸ್ಥೆಯ ಸ್ಥೂಲ ಸ್ವರೂಪವೇ ಇದೆಂದು ಹೇಳಲು ಅಡ್ಡಿಯಿಲ್ಲ. ಇದು ಮೂಲದ ಪ್ರತಿಕೃತಿಯೆ ಆದುದರಿಂದ ನಮಗೆ ಮುಂದುವರಿಯಲು ಪ್ರೇರಣೆ ದೊರೆಯುವುದು. ಹೀಗೆ ನಾವು ಹೊರಡುವ ಬಿಂದುವು ಎಲ್ಲ ವಿಧದಲ್ಲಿಯೂ ನಮ್ಮ ಗುರಿಯೊಂದಿಗೆ ಹೋಲುವುದು.

‘ತಮ’ದ ಸಂಧ್ಯೆಯನ್ನು ಕುರಿತಾದರೂ ಒತ್ತಿ ಹೇಳಲಾಗಿದೆ. ಆದರೆ ಆ ಶಕ್ತಿಯ ಉಪಯೋಗವನ್ನು ಬೇರೆ ವಿಧದಲ್ಲಿ ಮಾಡಲಾಗಿದೆ. ಸೂರ್ಯನ ಕಿರಣಗಳು ಆ ಕಾಲದಲ್ಲಿ ನೇರವಾಗಿ ಬೀಳುವುದರಿಂದ ಹೆಚ್ಚು ಉಷ್ಣತೆಯನ್ನು ಹುಟ್ಟಿಸುವವು. ಈ ಉಷ್ಣತೆಯಾದರೂ ಪ್ರತಿಯೊಂದು ಪದಾರ್ಥದ ಮೂಲವಾದ ನಿಸರ್ಗದಿಂದಲೇ ಬಂದುದು. ಈಗ ನಾವು ಬಾಹ್ಯ ಉಷ್ಣತೆಯ ಮೂಲಶಕ್ತಿಯ ಸಮೀಪಕ್ಕೆ ಹೋಗುತ್ತೇವೆ. ಈ ಕ್ರಿಯೆಯು ಶಾಂತವಾಗುವವರೆಗೂ ನಡೆಯುವುದು. ಈ ಪ್ರಕಾರ ನಾವು ಇದರಿಂದ ತುಂಬ ಲಾಭ ಪಡೆದು ಅದರ ಅತ್ಯಂತ ಸಾಮೀಪ್ಯವನ್ನು ಹೊಂದಿದೆವು. ಈಗ ನಾವು ಕ್ರಮೇಣ ಅದರ ಸಮೀಪದಲ್ಲಿರುವ – ಆದರೂ ಅದನ್ನು ” ಬಿಟ್ಟು ಇರುವ – ಸ್ಥಿತಿಯ ಅನುಭವ ಪಡೆಯುವ ಕಾಲ ಬಂದಂತಾಯಿತು. ಇನ್ನು ನಾವು ಅದರ ತೀರ ಹತ್ತಿರ ಹೋಗುವ ಕಾಲ ಬಂದಿತು. ಈ ಕ್ರಿಯೆಯು ನಾವು ಅದರಲ್ಲಿ ಪ್ರವೇಶಿಸಲು ಸಹಾಯ ಮಾಡಿತು. ಆದುದರಿಂದಲೇ ಮಹಾತ್ಮರು ಮಧ್ಯಾಹ್ನ ಸಂಧ್ಯೆಯನ್ನು ಕುರಿತು ಹೇಳಿದ್ದಾರೆ. ಕಾರಣವಿಷ್ಟೇ:  ಸೂರ್ಯನ ಕಿರಣಗಳು, ಪರಿಣಾಮ ಮಾಡುತ್ತ ಮಾಡುತ್ತ  ಯಾವ ಸ್ಥಳದಿಂದ ಬಂದುವೋ, ಹಾಗು ಯಾವುದು ಅನಂತರದ ಸ್ಥಿತಿಯಿದೆಯೋ , ಆ ಭಾಗದೊಂದಿಗೆ ತಮ್ಮ ಸಂಬಂಧವನ್ನು ಸ್ಥಾಪಿಸುವುವು. ಈ ಕಿರಣಗಳು ಮಧ್ಯಾಹ್ನದಲ್ಲಿ ನೇರವಾಗಿ ಬೀಳುವುವು. ಆದುದರಿಂದ ಅವು  ನಮಗೆ ಸಮೀಪತರವಾಗಿ ಅವುಗಳ ಪರಿಣಾಮವು ನೇರವಾಗಿ ನಮ್ಮ ಮೇಲೆ ಉಂಟಾಗುವುದು. ಸೂರ್ಯನಿಂದ ಬಂದ ಉಷ್ಣತೆಯು ನಿಜವಾಗಿ ಕಣಗಳ ಉಷ್ಣತೆ. ಈಗ ನಾವು ಮಧ್ಯಾಹ್ನ ಕುಳಿತುಕೊಂಡು ಧ್ಯಾನ ಮಾಡಹತ್ತಿದರೆ ಅದು ನಮಗೆ ತಿಳಿಯದಂತೆ ಮೂಲ ಗುರಿಯಕಡೆಗೆ ಎಳೆಯುವುದು. ನಾವು ಕೆಲವೊಂದು ಸಲ ಪ್ರಮೇಯ ಬಿಡಿಸಲು ಉತ್ತರವನ್ನು ಮೂದಲೇ ಕಲ್ಪಿಸಿಕೊಳ್ಳುವೆವು. ಅದರಂತೆಯೆ, ಮಾನವ ಜೀವನದ ಸಮಸ್ಯೆ- ಯನ್ನು ಬಿಡಿಸಲು ನಾವು ಆ ಮೂಲವಸ್ತುವನ್ನು ಮೊದಲೇ ಕಲ್ಪಿಸಿಕೊಳ್ಳ- ಬೇಕಾಗುವುದು. ಅದರ ಚಿತ್ರವು ನಮ್ಮ ಕಲ್ಪನೆಯಲ್ಲಿ ಎಷ್ಟೇ ಅಸ್ಪಷ್ಟ ವಾಗಿದ್ದರೂ ಚಿಂತೆಯಿಲ್ಲ. ಏಕೆಂದರೆ, ಯಾವುದಾದರೊಂದು ಅವಸ್ಥೆಯ ಶಿಖರವನ್ನು ಮುಟ್ಟಿದಾಗ ನಮಗೆ ಅದರ ಹಿಂದಿನ ಸ್ಥಿತಿಯ ಬೋಧವಿರುವುದಿಲ್ಲ. ಆದುದರಿಂದ ಆ ಅಂತಿಮ ಪ್ರಖರತೆಯಿಂದ ನಾವು ಕೆಲಸ ತೆಗೆದು ಕೊಂಡೆವು, ಕಣಗಳ ಭೌತಿಕ ಉಷ್ಣತೆಯಾದರೂ ಆಗ ಹೆಚ್ಚಾಗಿರುವುದರಿಂದ  ಮಧ್ಯಾಹ್ನದ ಸಂಧ್ಯೋಪಾಸನೆಯನ್ನು ನಮ್ಮಲ್ಲಿ ಅನಿವಾರ್ಯವೆಂದು ಎಣಿಸಿಲ್ಲ.

ಮಧ್ಯಾಹ್ನದ ಸಂಧ್ಯೆ ಮುಗಿಯುತ್ತ ಮುಗಿಯುತ್ತ ಮತ್ತೆ ಸಾಯಂಕಾಲ ಬರುವುದು. ಆಗ ಉಷ್ಣತೆ ತಕ್ಕಮಟ್ಟಿಗೆ ಶಾಂತವಾಗಿರುವುದು. ಆಗ ನೀವು ಶೈತ್ಯದ ಸಮೀಪವಿರುವಿರಿ. ಕಾಲ ಕಳೆದಂತೆಲ್ಲ ಅದಕ್ಕೆ ತೀರ ಸಮೀಪವಾಗುವಿರಿ. ಕಟ್ಟಕಡೆಗೆ ನಾವು ಅದರ ಸಮೀಪತಮ ಬಿಂದುವನ್ನು ತಲುಪುವೆವು. ಇದು ಪ್ರಾತಃಕಾಲವಿದ್ದಿತು. ಆಗ ಸೂರ್ಯನ ಉಷ್ಣತೆ ಇನ್ನೂ ಕಾಲಟ್ಟಿರಲಿಲ್ಲ. ಇದು ವೈಜ್ಞಾನಿಕ ವಿಷಯವಾಗಿದ್ದು ಅದೇ ರೀತಿ ಯಲ್ಲಿ ಉಷ್ಣತೆ-ಶೈತ್ಯಗಳಿಗನುಸಾರವಾಗಿ ಕಾಲವಿಭಾಗ ಮಾಡಲಾಗಿದೆ.

ಇಲ್ಲಿ ಒಂದು ಪ್ರಶ್ನೆಯೇಳುವುದು. ‘ಸತ್’ ಮತ್ತು ‘ತಮ’ಗಳ ವೇಳೆಯಲ್ಲಿಯೆ ಸಂಧ್ಯೆಯನ್ನು ವಿಧಿಸಲಾಗಿದ್ದು ‘ರಜ’ದ ಕಾಲದಲ್ಲಿ ಏಕೆ ವಿಧಿಸಲಾಗಿಲ್ಲ? ಬಹುಶಃ ನಿಮಗೆ ಅನುಪಾತಗಳ ವಿಲೋಮ (Invertendo)ದ ಪರಿಚಯವಿದೆ. ಎರಡು ತುದಿಗಳನ್ನು ಅರ್ಥಾತ್ ಮೊದಲು ಮತ್ತು ಕೊನೆಗಳನ್ನು ತೆಗೆದುಕೊಳ್ಳಲಾಗಿದೆ. ಆರಂಭವು ‘ಸತ್’; ಕೊನೆಯು ‘ತಮ’, ಇದನ್ನು ವಿಲೋಮಗೊಳಿಸಿರಿ. ಆರಂಭವು ಕೊನೆಯಾಗುವುದು; ಕೊನೆಯು ಆರಂಭ, ಮಧ್ಯದಲ್ಲಿರುವುದು ಏನೂ ಅಲ್ಲ- ಇವೆರಡನ್ನೂ ಕೂಡಿಸಿರುವ ಒಂದು ಕಾಲ್ಪನಿಕ ರೇಖೆ ಮಾತ್ರ.

ಇಂದು ನಾನು ದೊಡ್ಡ ತತ್ತ್ವಜ್ಞಾನವನ್ನು ನಿಮ್ಮೆದುರಿಗೆ ಇಡುತ್ತಿರುವೆನು. ಜನರು ಅದನ್ನು ಬಹಳ ಕಡಿಮೆ ತಿಳಿದುಕೊಂಡಿದ್ದಾರೆ. ಸಾಮಾನ್ಯ ವಾಗಿ ಜನರು ಸತ್ತನ್ನೇ ಮೂಲವೆಂದು ಭಾವಿಸುವರು. ಭಗವಂತನನ್ನು ತಿಳಿಯಲು ಅದನ್ನೇ ಅಳತೆಗೋಲಾಗಿ ಮಾಡಿರುವರು. ಆದರೆ ಅದರ ಹಿಂದಿರುವ ರಹಸ್ಯ ಅವರಿಗೆ ತಿಳಿಯದು. ಇದರ ತಳದಲ್ಲಿರುವ ಆ ವಿಶಿಷ್ಟ ವಸ್ತು ಇದುವರೆಗೂ ಅವರ ದೃಷ್ಟಿಗೆ ಬಿದ್ದಿಲ್ಲ. ಈ ಸಂಗತಿಗಳೆಲ್ಲ ಕೇವಲ `ತಮ’ಕ್ಕೆ ಸಂಬಂಧಪಟ್ಟುವು. ಯೋಗಿಗಳು ಪಡೆಯಬೇಕಾದ ವಿಶಿಷ್ಟ ವಸ್ತು ಇದೇ. ಈ ಬಿಂದುವಿನವರೆಗೆ ಬಂದು ಮುಟ್ಟುವುದು ಬಹಳ ಕಠಿಣ.ಸತ್ತನ್ನು ಪಡೆಯುವುದು ತೀರ ಸುಲಭ. ಆದರೆ ನಾನು ‘ತಮ’ವೆಂದು ಕರೆದಿರುವುದು ಅಷ್ಟು ಸುಲಭಪ್ರಾಪ್ಯವಲ್ಲ. ಅದರಾಚೆಗೆ ಏನೂ ಇಲ್ಲ. ಸಾಮಾನ್ಯವಾಗಿ ಜನರು ಮಾತುಗಳನ್ನೇನೋ ಬಹಳಷ್ಟು ಆಡುತ್ತಾರೆ. ಆದರೆ ವಸ್ತುಗಳ ತಳಕ್ಕೆ ಯಾರೂ ಹೋಗುವುದಿಲ್ಲ. ಸ್ವಚ್ಛತೆ, ಸರಳತೆ ಮತ್ತು ಶಾಂತಿಗಳೂ ಇದರ ಮುಂದೆ ಏನೂ ಅಲ್ಲ. ಅದು ಇವೆಲ್ಲವುಗಳಿಂದ ಬೇರೆಯಾಗಿದೆ. ನೀವು ವರ್ಷಗಟ್ಟಲೆಯ ಪರಿಶ್ರಮದಿಂದಲೂ ಅಗಣಿತ ಜನ್ಮಾಂತರಗಳ ಅನಂತರವೂ ಪಡೆಯುವ ವಸ್ತು ಇದೇ. ಜಗತ್ತಿನ ದೊಡ್ಡ ದೊಡ್ಡ  ಸಂತರು ಸಹ ಈ ದೃಶ್ಯದಿಂದ ವಂಚಿತರಾಗಿದ್ದಾರೆ. ನೀವು ಶೋಧಿಸುವ, ಮತ್ತು ನಿಜವಾದ ಜೀವನವಾಗಿರುವ ಆತ್ಮನಿರಸನದ ಸ್ಥಿತಿ ಇದರಲ್ಲಿಯೆ ಇದೆ. ಎಲ್ಲ ಚಟುವಟಿಕೆಗಳೂ ಈ ಬಿಂದುವಿಗೆ ಬರುವ ಮೊದಲೇ ಮುಗಿದು ಹೋಗುವುವು. ನಿಸರ್ಗದ ರಹಸ್ಯವನ್ನು ನಾನಿಂದು ಬಯಲಿಗಿಡುತ್ತಿದ್ದೇನೆ. ಈಶ್ವರ ಅಥವಾ ಮೂಲ ಅವಸ್ಥೆಯ ಕೀಲು ಇದೇ. ಜನರು ಎಷ್ಟೋ ಕಾಲದಿಂದ ಜಿಜ್ಞಾಸೆ ನಡೆಸಿದರು; ಶೋಧ ಮಾಡಿದರು. ಆದರೆ ಯಾಗಲೂ ಮೂಲವಸ್ತುವಿನ ಹಿಂದೆಯೆ ಉಳಿದರು. ಇಲ್ಲಿ ಬೋಧೆಯ ಪ್ರವೇಶವಿಲ್ಲ. ಜನರು ‘ತಮ’ದ ಈ ಅವಸ್ಥೆಯನ್ನು ತಮ್ಮ ಕಡುವೈರಿಯೆಂದು ಇಳಿಯುವರು. ಆದರೆ ಇಂಥ ಪೂರ್ಣ ಅಜ್ಞಾನದ ಸ್ಥಿತಿಯಲ್ಲಿರುವ ಯಾವ – ಸರಳ ಮನುಷ್ಯನನ್ನು ನೀವು ನೋಡಿರುವಿರಾ ? ಆತನ ಸ್ಥಿತಿ ಹೇಗಿರುತ್ತದೆ ? ಆತನು ಪ್ರಗತಿ ಹೊಂದುತ್ತ ಪೂರ್ಣತ್ವವೆನಿಸುವ ಅವಸ್ಥೆಯನ್ನು – ಮುಟ್ಟಿದಾಗ ಒಬ್ಬ ತಿಳಿಗೇಡಿ ಬಾಲಕನು ಹೇಗೋ ಹಾಗೆ ತನ್ನ ಸ್ಮೃತಿಯನ್ನು ಅಭಿವ್ಯಕ್ತಗೊಳಿಸಲಾರ. ಆದರೆ, ಅದೇ ಸತ್ಯದ ಒಂದು ಸಣ್ಣ ಹನಿ ಆತನನ್ನು ಸೋಂಕಿದುದೇ ಆದರೆ ಆತನಿಗೆ ತನ್ನ ‘ತಮ’ದ ಅವಸ್ಥೆಯ ಅಂದಾಜು ಹೊಳೆಯತೊಡಗುವುದು. ಹೀಗೇಕೆ ? ಏಕೆಂದರೆ, ಅವೆರಡರ ಸಂಗಮ ಬಿಂದುವು ಒಂದು ಹೊಸ ವಸ್ತುವನ್ನೇ ನಿರ್ಮಿಸುವುದು, ಸೃಷ್ಟಿಯ ಆರಂಭದಲ್ಲಿ ಇದ್ದುದಾದರೂ ಅದೇ. ಈಗ ಮತ್ತೆ ಅದೇ ಮೇಲೆ ವಿವರಿಸಲಾದ ವಿಲೋಮದ ಸಮಸ್ಯೆ ಬರುವುದು.

ಮೂಲತತ್ತ್ವದ ಮೂರನೆಯ ಅವಸ್ಥೆಯೇ ನಿಸರ್ಗದ ಸುಂದರ ದೃಶ್ಯ. ಜನರು ವಾಸ್ತವವಾಗಿ ಇದರಲ್ಲಿಯೇ ಮಗ್ನರಾಗಿರುವರು. ಮತ್ತು ಚಿತ್ರವನ್ನು ಅತ್ತಿತ್ತ ಹರಿಬಿಟ್ಟು ಇಚ್ಛೆಗಳ ರಾಶಿಯನ್ನೇ ಕೂಡಿಹಾಕುವರು. ಸತ್ ಎಂದು ನೀವು ಕರೆಯುವ ಹೊಳಪುಳ್ಳ ವಸ್ತುವಿನ ಮೇಲೆ ಮೊದಲು ನಿಮ್ಮ ದೃಷ್ಟಿ ಬೀಳುತ್ತದೆ. ಈ ಹೊಳೆಯುವ ಪದಾರ್ಥವು ಮಾಯೆಯ ಹೊರತು ಬೇರೇನೂ ಅಲ್ಲ. ಜನರು ಇದರ ಬಗ್ಗೆ ಯೇ ದೊಡ್ಡ ದೊಡ್ಡ ಮಾತುಗಳನ್ನಾಡುವರು. ಆದರೆ ನಿಜವಾಗಿ ಅದು ಸತ್ಯದ ಹಾಗು ಅಧ್ಯಾತ್ಮವಲಯದಿಂದ ಬಹು ದೂರವಾಗಿದೆ. ಜನರು ತಮ್ಮ ಅವಸ್ಥೆಯನ್ನು ಎಷ್ಟು ಮೂಕಗೊಳಿಸಿರುವರೆಂದರೆ ಇದನ್ನು ಕೇಳಲು ಸಹ ಒಲ್ಲರು; ಅಥವಾ ಇದು ಆನುಭವ ಪಡೆಯವ ಪ್ರಯತ್ನವನ್ನೂ ಮಾಡಲಾರರು. ಯಾವುದರ ಆಚೆ ಬೆಳಕಾಗಲಿ, ಕತ್ತಲೆಯಾಗಲಿ ಯಾವುದೂ ಇಲ್ಲವೋ ಆ ಮೂಲವಸ್ತುವನ್ನು ಕಳೆದುಕೊಂಡು ಬಿಟ್ಟಿದ್ದಾರೆ. ನಾನು ನಮ್ಮ ಸಂಸ್ಥೆಯ ಸಂಕೇತಮುದ್ರೆಯಲ್ಲಿ ತೋರಿಸಿದ ವಸ್ತು ಇದೇ, ಮಾನವನ ಉನ್ನತಿಯ ಮೂಲಸ್ಥಿತಿ ಇದೆ ಆಗಿದೆ. ಇಲ್ಲಿಂದ ಕೆಳಗೆ ಬೀಳುವ ಸಂಭವವುಳಿಯುವುದಿಲ್ಲ. ತತ್ತ್ವಜ್ಞಾನ ಬಹು ಸೂಕ್ಷ್ಮವಾಗಿದೆ. ಎಲ್ಲಿ ಬೆಳಕು, ಕತ್ತಲೆ ಯಾವುದೂ ಇಲ್ಲವೋ ಆ ಅವಸ್ಥೆಯನ್ನು ಮಹಾತ್ಮರು ‘ಸತ್ಯಪದ’ವೆಂದು ಕರೆದಿದ್ದಾರೆ. ಆದರೆ ಅವರ ಈ ವಿಚಾರ ಸರಿಯಲ್ಲ. ಆ ವಸ್ತು ಇದಕ್ಕಿಂತಲೂ ಆಚೆಗಿದೆ. ಇದು ಮೂಲದ ಕೇವಲ ಪ್ರತಿಬಿಂಬ ಅಥವಾ ಛಾಯೆ ಮಾತ್ರ. ನಿಜವಾಗಿ, ಸತ್ಯವು ಅದರ ನಂತರ ಇದೆ.

ಜನರಿಗೆ ಈ ಮಾತುಗಳನ್ನು ತಿಳಿದು ಆಶ್ಚರ್ಯವಾಗಬಹುದು. ಆದರೆ ಅಧ್ಯಾತ್ಮದಲ್ಲಿ ಸಾಕಷ್ಟು ಮುಂದುವರಿದವರಿಗಾಗಿ ಮತ್ತು ನಾನು ಉಲ್ಲೇಖಿಸುವ ಶಾಸ್ತ್ರದಲ್ಲಿ ಪರಿಣತಿಯುಳ್ಳವರಿಗಾಗಿ ಇದನ್ನು ಬರೆಯುತ್ತಿದ್ದೇನೆ. ಕೇವಲ ಅನುಭವವೇ ಇದನ್ನು ತೋರಿಸಿಕೊಡಬಲ್ಲುದು. ಇದು ಧಾತ್ಮಿಕ ಕಟ್ಟುನಿಟ್ಟುಗಳಲ್ಲಿ ದೊರೆಯಲಾರದು. ಇದರ ದಾರಿಯೆ ಬೇರೆ. ಈ ವಿದ್ಯೆಯು ಸ್ವಯಂ ಒಂದು ವಿಜ್ಞಾನವೇ ಆಗಿದೆ. ನಿಸರ್ಗವನ್ನು ಒಳಗಣ್ಣಿನಿಂದ ನೋಡುವ ಯೋಗ್ಯತೆಯನ್ನು ಸಂಪಾದಿಸುವವರೆಗೆ ಯಾರೂ ಇದರ ಜ್ಞಾನವನ್ನು ಪಡೆಯಲಾರರು. ಅವರ ನಿಲುಕು ಅದರ ಬಾಗಿಲಿನವರೆಗೆ ಕೂಡ ಹೋಗಲಾರದು. ತಿಳಿವಳಿಕೆಯಂತೂ ದೂರ ಉಳಿಯಿತು. ನಿಸರ್ಗದಲ್ಲಿ ನೋಡತಕ್ಕುದು ಇನ್ನೂ ಇದೆಯೆಂಬುದನ್ನು ತಿಳಿಯಲು ಮಾತ್ರ ಧರ್ಮವು ಮಾಡಬಲ್ಲುದು. ಆದರೆ ರತ್ನಗಳನ್ನಾಯ್ದುಕೊಳ್ಳಲು ಸ್ವತಃ ಒಳಗೆ ಪ್ರವೇಶಿಸಬೇಕಾಗುವುದು. ನಿಜವೆಂದರೆ, ಸತ್ಯದ ಸರಳತೆ, ಪವಿತ್ರತೆ ಮುಗ್ಧತೆ ಇವೆ ಅದಕ್ಕೆ ಆವರಣವಾಗಿವೆ. ಆಧ್ಯಾತ್ಮವಿದ್ಯೆಯ ಆರಂಭದ  ವಿದ್ಯಾರ್ಥಿಗಳಿಗಾಗಿ ಈ ಪುಸ್ತಕವನ್ನು ಬರೆಯಲಾಗಿಲ್ಲ. ಇದು ಈ ಪ್ರವಾಹದಲ್ಲಿ ಸಾಕಷ್ಟು ಮುಂದುವರಿದವರಿಗಾಗಿ ಎಂಬುದನ್ನು ಗಮನಿಸಬೇಕು.

ಸೂರ್ಯೋದಯಕ್ಕಿಂತ ಮುಂಚೆ ಸಂಧ್ಯೆಯನ್ನು ಮುಗಿಸಬೇಕೆಂದು ಹೇಳಿದುದರ ಉದ್ದೇಶವಿಷ್ಟೆ : ಶರೀರದಿಂದ ಹೊರಗೆ ಹೋದ ಉಷ್ಣತೆ ತೊಲಗಿ ಹೋದ ದುಷ್ಪರಿಣಾಮಗಳು ಬಿಸಿಲಿನ ಪ್ರಭಾವದಿಂದ ಮತ್ತೆ ಉಂಟಾಗಿ ನಾವು ಸಮಯದ ಲಾಭಪಡೆಯದಂತಾಗಬಾರದು. ಪ್ರತಿಯೊಂದು ಕೆಲಸಕ್ಕೂ ಒಂದು ವಿಶಿಷ್ಟ ಸ್ಥಳ ಅಗತ್ಯವೆಂಬ ಮಾತಿಗೆ ಮಹಾತ್ಮರು ಬಹಳ ಮಹತ್ವ ಕೊಟ್ಟಿದ್ದಾರೆ. ಏಕೆಂದರೆ, ಅಲ್ಲಿ ಹೋದ ಕೂಡಲೇ ಆಯಾ ಕೆಲಸಕ್ಕಾಗಿಯೆ ಮೀಸಲಾಗಿದ್ದ ವಿಚಾರಗಳು ನಮ್ಮಲ್ಲಿ ಸುಳಿಯಬೇಕು. ಈ ಮಾತನ್ನು ಪಾಶ್ಚಾತ್ಯ ನಾಗರಿಕತೆಯಾದರೂ ಸಿದ್ಧ ಮಾಡಿಕೊಟ್ಟಿದೆ. ಮನುಷ್ಯನಲ್ಲಿ ಬಲವಿದೆ. ಆ ಬಲವು, ಮೂಲ ವಸ್ತುವಿನೊಡನೆ ಸಂಬಂಧಪಟ್ಟ ನಿಲುಗಡೆಯಿಂದಾಗಿ ಲಭಿಸಿದೆ. ನಾವು ಯಾವುದಾದರೊಂದು ಕೆಲಸ ಮಾಡಬೇಕೆಂದು ಸಂಕಲ್ಪ ಮಾಡಿದಾಗ ಅವೆರಡರ ನಡುವಿನ ಸೂತ್ರ ಅಥವಾ ಸೆಳತವು – ಒಂದು ಗಾಢ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ. ಅರ್ಥಾತ್ ನಾವು ನಮ್ಮ ಸಂಕಲ್ಪದಂತೆ ಮೂಲದಿಂದ ಶಕ್ತಿಯನ್ನು ಎಳೆಯತೊಡಗುವೆವು. ಶಕ್ತಿಯನ್ನೆಳೆದು ಅದರ ಸಂಬಂಧವನ್ನು ಒಂದು ವಿಶಿಷ್ಟ ಸಮಯದೊಡನೆ ಕಲ್ಪಿಸಿ ಸಾತತ್ಯವನ್ನುಂಟುಮಾಡಿದಾಗ ಅದೇ ಸಮಯದಲ್ಲಿ ನಮ್ಮ ಕೆಲಸಗಳ  ನೆನಪು ಬರುವುದು. ಆದುದರಿಂದ ಸಂಧ್ಯೆಗಾಗಿ ನಾವು ಒಂದು ಸಮಯವನ್ನು ಗೊತ್ತು ಪಡಿಸಿದಾಗ ನಮ್ಮ ವಿಚಾರವು ಆ ಕಡೆಗೆ ಹರಿಯತೊಡಗುವುದು. ಮತ್ತು ನಾವು ಒಂದಿಲ್ಲೊಂದು ರೀತಿಯಿಂದ ಅದರ ಸ್ಮರಣೆಯಲ್ಲಿ ತೊಡಗಿ ಬಿಡುವೆವು. ಈ ಕೆಲಸಕ್ಕಾಗಿ ನಿಯಮಿತವಾದ ಒಂದು ಸ್ಥಳದಲ್ಲಿ ಅಥವಾ ಕೋಣೆಯಲ್ಲಿ ಕುಳಿತು ನಾವು ಸಂದ್ಯೋಪಾಸನೆ ಮಾಡುವೆವು. ನಮ್ಮ ವಿಚಾರದ ವಿದ್ಯುತ್ತನ್ನು ಬಹಳಷ್ಟು ಅದರಲ್ಲಿ ವ್ಯಯಿಸುವೆವು. ಇದರಿಂದ ಈ ಸ್ಥಳದಲ್ಲಿ ಪವಿತ್ರತೆಯ ಭಾವನೆಯುಂಟಾಗತೊಡಗುವುದು: ಆ ಸ್ಥಳವು ಅದೇ ಪರಿಣಾಮಗಳನ್ನು ಹೊಂದುವುದಾದ ಕಾರಣ ನಮಗೆ ಆ ಕಾರ್ಯದಲ್ಲಿ ಸಹಾಯ ದೊರೆಯುವುದು. ಪವಿತ್ರತೆಯ ಈ ಪರಿಣಾಮವು ಕೇವಲ ಆ ಸ್ಥಳಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅದು ಕ್ರಮೇಣ ಹರಡತೊಡಗುವುದು. ಅದನ್ನು ಶಕ್ಯವಿದ್ದಷ್ಟು ಹರಡಿಸುವುದು ನಮ್ಮ ಸಾಮರ್ಥ್ಯವನ್ನವಲಂಬಿಸಿದೆ. ಎಷ್ಟೋ ವರ್ಷಗಳು ಗತಿಸಿದರೂ ಅನೇಕ ಸ್ಥಳಗಳಲ್ಲಿ ಆ ಪರಿಣಾಮವು ಇದುವರೆಗೆ ಪೂರ್ಣವಾಗಿ ಅಳಿಸಿ ಹೋಗಿಲ್ಲವೆಂಬುದಕ್ಕೆ ಪೂಜಾಮಂದಿರಗಳು ಸಾಕ್ಷಿಯಾಗಿವೆ. ಅಲ್ಲಿಗೆ ಹೋಗುವವರೂ ದರ್ಶನ ಪಡೆಯುವರೂ ಸಹ ಪ್ರಭಾವಿತರಾಗುತ್ತಾರೆ. ಇಷ್ಟೇ ಅಲ್ಲ, ಅಲ್ಲಿ ಚಲಿಸುವ ಗಾಳಿಯೂ ಅದರ ಸೌರಭವನ್ನು ಹೊಂದಿ ತಾನು ಮುಟ್ಟುವ ಎಲ್ಲ ಸ್ತರಗಳಿಗೂ ಅದನ್ನು ತಲುಪಿಸುವುದು. ಪ್ರತಿಯೊಂದು ಸ್ತರದಲ್ಲಿ ಅಂಕುಚನ ಪ್ರಸರಣಗಳಾಗುತ್ತಿರುತ್ತವೆ. ಈ ಉಪಾಯದಿಂದ ಒಳಗೆ ಪ್ರವೇಶಿಸಿದ ಆ ವಸ್ತುವು ಬೆಳೆಯುವುದಲ್ಲದೆ ತನ್ನ ಪ್ರಭಾವವನ್ನು ಹಬ್ಬಿಸುತ್ತ ಹೋಗುವುದು.

ಈಗ ಆಸನದ ಬಗೆಗೆ ಕೇಳಿರಿ. ಇದು ಯೋಗದ ಅಂಗಗಳಲ್ಲಿ ಒಂದು. ಮಹಾತ್ಮರು ಇದಕ್ಕೆ ಬಹಳ ಮಹತ್ವ ಕೊಟ್ಟಿದ್ದಾರೆ, ಇದು ಯೋಗದ ಆರಂಭದ ಮೆಟ್ಟಿಲು. ಇದರಡಿಯಲ್ಲಿಯ ರಹಸ್ಯವನ್ನು ಇದುವರೆಗೂ ಪ್ರಕಟಿಸಲಾಗಿಲ್ಲ. ಸಮಯ ಬಂದಾಗ ಪ್ರತಿಯೊಂದು ಮಾತೂ ಬರುವುದು; ಪ್ರತಿಯೊಂದು ವಸ್ತುವೂ ಬೆಳಕನ್ನು ಕಾಣುವುದು. ಸೃಷ್ಟಿಯ ಆರಂಭದಲ್ಲಿ ಪ್ರತಿಯೊಂದು ಪದಾರ್ಥವೂ ಹೆಚ್ಚು ಕಡಮೆ ಸಂಪೂರ್ಣ ನಿಶ್ಚಲ ಸ್ಥಿತಿಯಲ್ಲಿದ್ದು ತನ್ನ ಮೂಲದಲ್ಲಿ ಸಮಾವೇಶ ಹೊಂದಿದ್ದಿತು. ಪದಾರ್ಥಗಳು ತಮ್ಮದೆಂಬ ಸ್ಥಿತಿಯನ್ನು ಕಳೆದುಕೊಂಡಿದ್ದರೂ ಅವುಗಳಲ್ಲಿ ತಮ್ಮ ಪರಿಣಾಮಗಳು ಇನ್ನೂ ಉಳಿದಿದ್ದುವು. ಏಕೆಂದರೆ, ಮೂಲತ್ವದ ಪ್ರತಿಚ್ಛಾಯೆ ಅವುಗಳ ಮೇಲೆ ಸಾಕಷ್ಟು ಸಮಯದ ವರೆಗೆ – ಎಂದರೆ ಪ್ರಳಯಕಾಲದ ವರೆಗೆ ಇದ್ದಿತು. ಇದು ಅವುಗಳಿಗೆ ತಮ್ಮ ಅಸ್ತಿತ್ವದ ಎಲ್ಲ ಕಾಲದಲ್ಲಿಯೂ ಸಂಸ್ಕಾರಗಳ ಪರಿಣಾಮವನ್ನು ಕಾಯ್ದಿಟ್ಟುಕೊಳ್ಳುವುದರಲ್ಲಿ ಸಹಾಯ ಮಾಡಿತು. ಈ ಪರಿಣಾಮವನ್ನು ಅವು ಎಲ್ಲಿಯ ವರೆಗೆ ಆತ್ಮಸಾತ್ ಮಾಡಿಕೊಂಡುವೆಂಬುದು ಮನುಷ್ಯನ ತರ್ಕಕ್ಕೆ ಮೀರಿದ ಮಾತು, ಪ್ರಾಯಃ ಸೃಷ್ಟಿಯ ಆರಂಭದಿಂದ ಹೀಗಾಗುತ್ತ ಬಂದಿರಬಹುದು. ಈ ಅವಧಿಯಲ್ಲಿ – ತಮ್ಮ ಸ್ಥೂಲತೆಯನ್ನು ಕಳೆದುಕೊಂಡಿದ್ದುವೆಂಬುದು ಮಾತ್ರ ನಿಜ. ಆದರೆ ಪರಿಣಾಮವಿದ್ದೇ ಇದ್ದಿತು. ಆ ಪರಿಣಾಮದೊಂದಿಗೆ ಅವು ಅದರಲ್ಲಿ ಸಮಾವಿಷ್ಟವಾದುವು. ಅವು ಹೀರಿಕೊಂಡ ಆ ಪರಿಣಾಮವಾವುದು ? ಅದು ಮೂಲ- ಮಹಾಶಕ್ತಿಯ ಆಘಾತದಿಂದುಂಟಾದ ಚಲನವೆ ಆಗಿದ್ದಿತು. ಈ ಚಲನವು ಪರಿಣಾಮದಿಂದ ತುಂಬಿ ತುಳುಕುತ್ತಿದ್ದಿತಾದ ಕಾರಣ ಅದರಲ್ಲಿ ಸಾವಕಾಶವಾಗಿ ಗತಿಯನ್ನುಂಟು ಮಾಡಿತು. ಕೇವಲ ಅನುಭವದಿಂದ ಮಾತ್ರ ಗೋಚರವಾಗುವ ಈ ಗತಿಯು ಸ್ವಾಭಾವಿಕವಾಗಿಯೇ ಆ ಮೂಲಶಕ್ತಿಯಲ್ಲಿ ಒಂದಿಲ್ಲೊಂದು ರೂಪದಿಂದ ಉಳಿದುಕೊಂಡಿತು. ಈ ರೀತಿ ಅನಂತಕಾಲದವರೆಗೆ  ಒಳಗೊಳಗೇ ಕುದಿಯತೊಡಗಿತು. ಇದನ್ನು ಕೇಂದ್ರದಲ್ಲಿಯ ಗುಪ್ತ ಚಲನವೆಂದು ಕರೆಯಲಾಗಿದೆ. ಇದು ಸತತವಾಗಿ ನಡೆದು ಮತ್ತೆ ದೃಷ್ಟಿಯ ಕಾಲ ಬಂದಿತು. ಹೀಗಾಗಲು ಕಾರಣವೇನು ? ಅದರ ಅವಶ್ಯಕತೆ ಏಕೆ ಉಂಟಾಯಿತು ? ಕೇವಲ ಶಕ್ತಿಯಾಗಿದ್ದ ಆ ಗುಪ್ತ ಚಲನೆಗಳು ಹೊರ ಹೊಮ್ಮಲು ಕೊರಕಲನ್ನು ನಿರ್ಮಿಸಿದುವು. ಅದರಿಂದ ಆ ಶಕ್ತಿಯು ಹೊಸ ಆವೇಶದಿಂದ ಪ್ರವಹಿಸ ತೊಡಗಿತು.ಬರಬರುತ್ತ ಸೃಷ್ಟಿಯು ಪುನಃ ನಿರ್ಮಾಣವಾಯಿತು; ಮಾನವನು  ರೂಪುಗೊಂಡನು. ಅವನಿಗೆ ತನ್ನ ಮೂಲವನ್ನು ಸೇರಬೇಕೆಂಬ ಆಕಾಂಕ್ಷೆಯು ಬಲವಾಗತೊಡಗಿತು. ಏಕೆಂದರೆ ತನಲ್ಲಿದ್ದ ಮೂಲದ ಸತ್ಯಾಂಶವು ಪ್ರಬಲವಾಗಿದ್ದಿತಾದ ಕಾರಣ ಆತನನ್ನು ತನ್ನ ಕಡೆಗೆ ಆಕರ್ಷಿಸತೊಡಗಿತು. ಯಾವ ವಸ್ತುವು ಚಲನಗೊಂಡು ಸೃಷ್ಟಿಗೆ ಕಾರಣವಾಯಿತೋ ಅದು ಮನುಷ್ಯನಲ್ಲಿಯೂ ಕಾಣಿಸಿಕೊಂಡಿತು. ಅದರ  ಆಧಾರವೇ ಗತಿಶೀಲವಾಗಿದ್ದಿತಾದುದರಿಂದ ಅದು ಸ್ಥಿರಸ್ಥಿತಿಗೆ ಹೋಗಬೇಕೆಂಬ ವಿಚಾರ ಬಂದಕೂಡಲೇ ತನ್ನಲ್ಲಿದ್ದ ಚಲನವನ್ನು ಆದಷ್ಟು ಮಟ್ಟಿಗೆ ಗುಪ್ತ ಸ್ಥಿತಿಗೆ ತರುವುದು ಅವಶ್ಯಕವಾಯಿತು. ಆತನು ಉಪಾಯಗಳನ್ನು ಶೋಧಿಸ ತೊಡಗಿದನು. ಗುಪ್ತ ಚಲನವು ಮೂಲಕ್ಕೆ ಹೊಂದಿಕೊಂಡಿದ್ದರೂ ಮೂಲದೊಂದಿಗೆ ಹೋಲಿಸಿದಾಗ ಒಂದು ರೀತಿಯಿಂದ ಹೇಗೆ ಸ್ಥೂಲವಾಗಿ ಕಾಣುವುದೋ ಅಂಥದೇ ಯಾವುದಾದರೊಂದು ಸ್ಥೂಲವಸ್ತುವನ್ನು ಉದ್ದಿಷ್ಟ ಗುರಿ ಮುಟ್ಟಲು ತೆಗೆದುಕೊಳ್ಳಬೇಕೆಂಬುದನ್ನು ಕಂಡುಕೊಂಡನು. ಆ ವಿಚಾರ ಬಂದ ಕೂಡಲೇ, ಪ್ರಳಯಕಾಲದಲ್ಲಿದ್ದಂತೆ ಒಂದು ತರದ ಆಕುಂಚನ ಅಥವಾ ಸಂಹಾರವನ್ನು ತನ್ನಲ್ಲಿ ತಂದುಕೊಳ್ಳಬೇಕೆಂಬುದು ಆತನಿಗೆ ತಿಳಿಯಿತು. ಆತ್ಮವು ವಿಶ್ವದಾದ್ಯಂತ ವ್ಯಾಪಿಸಿದಂತೆ ಮನುಷ್ಯನಲ್ಲಿಯೂ ವ್ಯಾಪಿಸಿದೆ. ಆಕುಂಚನವು ಆರಂಭವಾದಾಗ ಪ್ರಳಯದ ಸ್ಥಿತಿಯುಂಟಾಗುವುದು. ಈಗ ಮನುಷ್ಯನಲ್ಲಿಯೂ ಇಂಥ ಆಕುಂಚನದ ಸ್ಥಿತಿಯುಂಟಾದರೆ ವೈಯಕ್ತಿಕ ಪ್ರಳಯವು ಆರಂಭವಾಗುವುದು,ಅರ್ಥಾತ್ ಸ್ಥೂಲತೆಯ ಸ್ಥಿತಿಯಿಂದ ಅವನು ಮೂಲಸ್ಥಿತಿಯಲ್ಲಿ ಜಿಗಿಯತೊಡಗುವನು, ಮನುಷ್ಯನಲ್ಲಿ ಈ ಸಂಕೋಚ ಅಥವಾ ಸಂಹಾರದ ಸ್ಥಿತಿ ಹೇಗಿರುವುದು? ಪಸರಿಸಿದ ತನ್ನ ಶರೀರವನ್ನು ಹೇಗಾದರೂ ಮುದುಡಿಕೊಳ್ಳುವುದೇ ಇಂಥ ಸಂಹಾರವಾಗಬಲ್ಲುದು. ಆಕುಂಚನವು ಯಾವಾಗಲೂ ಕೆಳಗಿನಿಂದ ಪ್ರಾರಂಭವಾಗಿ ಕ್ರಮೇಣ ಮೇಲಕ್ಕೆ ಹಬ್ಬುವುದು. ಏಕೆಂದರೆ ಅದಕ್ಕೆ ಮೇಲುಗಡೆ ಹೋಗಬೇಕಾಗಿದೆ. ಮನುಷ್ಯನಾದರೂ ಕೆಳಗಿನಿಂದ ತನ್ನ ಸಂಕೋಚವನ್ನಾರಂಭಿಸಿದರೆ ಆತನ ಸ್ಥಿತಿಯ ಅದೇ ಆಗುವುದು. ಎಂದರೆ, ತನ್ನ ಕಾಲುಗಳನ್ನೂ ಇತರ ಅವಯವಗಳನ್ನೂ ಒಂದು ಅವಸ್ಥೆಯಲ್ಲಿರಿಸಿ ಶರೀರವನ್ನು ನಿಶ್ಚಲಗೊಳಿಸಬೇಕು. ಇದನ್ನು ಆತನು ಹೇಗಾದರೂ ಮಾಡಬಹುದು; ಆದರೆ ಕೊನೆಗೆ ಆಗುವುದು ಆಸನದ ಆಕೃತಿಯೆ. ಹೀಗಾಗುವುದು ಆವಶ್ಯಕ. ಏಕೆಂದರೆ ಅದು ಆತ್ಮವನ್ನು ತಲುಪಲು ದಾರಿ ಮಾಡಿಕೊಡುವುದು. ಆಸನ ಪದ್ಧತಿಯು ಯಾವಾಗಲೂ ಒಂದೇ ಆಗಿರಬೇಕು. ಕಾರಣವಿಷ್ಟೆ: ಮೂಲವನ್ನು ತಲುಪಬೇಕೆಂಬ ಅಪೇಕ್ಷೆಯುಂಟಾದ ಕೂಡಲೇ ಈ ವಿಶಿಷ್ಟ ಉದ್ದೇಶವನ್ನು ಸಾಧಿಸಲು ಆತನು ಪ್ರಾರಂಭದಲ್ಲಿ ಕೈಕೊಂಡ ಉಪಾಯವು ಆತನನ್ನು ಮೂಲದೊಂದಿಗೆ ಜೋಡಿಸಿತು. ಆದುದರಿಂದ ಮೂಲದೊಂದಿಗೆ ಸಂಬಂಧವನ್ನು ಪ್ರಸ್ಥಾಪಿಸುವ ಆಸನವೇ ಆತನಿಗೆ ಹೆಚ್ಚು ಸಹಾಯಕಾರಿಯಾಗಬಲ್ಲುದು. ಅದರಿಂದ ಪ್ರಾರ೦ಭಿಕ ಸ೦ಸ್ಕಾರ ದ ಸಮಸ್ಯೆಯ ಪರಿಹಾರವಾಗುವುದು.

ಒಂದೇ ಆಸನದಲ್ಲಿ ನೇರವಾಗಿ ಕುಳಿತುಕೊಂಡು ಸಂಧ್ಯೆಯನ್ನಾಚರಿಸುವುದು ಬಹಳ ಲಾಭದಾಯಕವೆಂದು ತೀರ ಪ್ರಾಚೀನ ಕಾಲದಿಂದಲೂ ತಿಳಿಯಲಾಗಿದೆ. ಕಾರಣವೇನೆಂದರೆ, ಆ ಅವಸ್ಥೆಯಲ್ಲಿ ದೈವೀಕೃಪೆಯ ಶಕ್ತಿಯುತ ಧಾರೆಗಳು ಅಭ್ಯಾಸಿಯ ಮೇಲೆ ನೇರವಾಗಿ ಹರಿದು ಬರುವುವು. ಒಂದು ವೇಳೆ ಜಿಜ್ಞಾಸುವು ಅಂಕ-ಡೊಂಕು ಸ್ಥಿತಿಯಲ್ಲಿ ಕುಳಿತುದಾದರೆ, ಅಥವಾ ಮೇಲಿಂದ ಮೇಲೆ ಆಸನವನ್ನು ಬದಲಾಯಿಸುತ್ತ ಹೋದರೆ ಧಾರೆಗಳ ನೇರವಾದ ಅವತರಣದಲ್ಲಿ ತಡೆಯುಂಟಾಗಿ ಆತನಿಗೆ ಅಷ್ಟು ಲಾಭವಾಗುವುದಿಲ್ಲ. ಆದುದರಿಂದ ಆಧ್ಯಾತ್ಮಿಕ ಲಾಭ ಆನಂದಗಳನ್ನು ಆದಷ್ಟು ಹೆಚ್ಚು ಪ್ರಮಾಣ ಪಡೆಯಬೇಕೆನ್ನುವವರು ಸರಳವಾಗಿ ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಹೆಚ್ಚಿನ ಲಾಭದಿಂದ ವಂಚಿತರಾಗಬೇಕಾಗುವುದು. ಆಸನದಲ್ಲಿ ಸರಳವಾಗಿ ಕತ್ತೆತ್ತಿ ಕೂಡುವುದರಿಂದ ಅಹಂಕಾರದ ಸುಳುವು ತೋರುವುದೆಂದು ಕೆಲವರು ಭಾವಿಸಬಹುದು, ಆದರೆ ಹಾಗೇನೂ ಅಲ್ಲ. ತತ್ವತಃ ಸೇವಕನು ಒಡೆಯನ ಮುಂದೆ ಒಬ್ಬ ಸೈನಿಕನು ತನ್ನ ಮೇಲಧಿಕಾರಿಯೆದುರು ಪರೇಡಿನಲ್ಲಿ ಕಾಣಿಸಿಕೊಳ್ಳುವಂತೆ ಇರತಕ್ಕದ್ದು. ಅಧಿಕಾರಿಯು ಬರುತ್ತಲೇ ‘ಸಾವಧಾನ’ – ಆಜ್ಞೆ ಬರುವುದು. ಕೂಡಲೇ ಸೈನಿಕನು ತನ್ನ ಎಲ್ಲ ಅವಯವಗಳನ್ನೂ ನೇರ್ಪಡಿಸಿಕೊಂಡು ಶರೀರವನ್ನು ಸಮಸ್ಥಿತಿಯಲ್ಲಿ ಅಚಲವಾಗಿರಿಸಿ ಅಧಿಕಾರಿಯ ಕಡೆ ಏಕಾಗ್ರತೆಯಿಂದ ನೋಡಬೇಕಾಗುವುದು. ಇದರಿಂದ ಆತನ ಶರೀರದ ದಕ್ಷತ, ಉತ್ಸಾಹ ಮತ್ತು ಆರೋಗ್ಯ ಮುಂತಾದುವು ಸೂಚಿತವಾಗುವುವು. ಭಗವಂತನ ಮುಂದೆ ಭಕ್ತನದೂ ಇದೇ ಕರ್ತವ್ಯವಾಗಿದೆ.

ಪವಿತ್ರತೆಯ ಬಗೆಗೆ ವಿಶೇಷತಃ ಹಿಂದುಗಳಲ್ಲಿ ಬಹಳ ಉನ್ನತ ಆದರ್ಶವನ್ನಿಡಲಾಗಿದೆ. ಆದರೆ ಅಧಃಪತನಹೊಂದಿದ ಇಂದಿನ ರೂಪದಲ್ಲಿ ಅದು ಕೇವಲ ವಿಚಾರದಲ್ಲಷ್ಟೇ ಉಳಿದುಕೊಂಡಿದೆ. ನಿಯಮಗಳೆಲ್ಲ ಮರೆತು ಹೋದುವು; ಕೇವಲ ಸ್ನಾನ ಮಾಡುವುದೊಂದೇ ನೆನಪಿನಲ್ಲುಳಿಯಿತು. ಈ ಪವಿತ್ರತೆಯ ತಳಹದಿ ಹೀಗಿದೆ : ನಾವು ತಲುಪಬೇಕಾದ ಅವಿನಾಶಿ ತತ್ತ್ವವು ನಿಷ್ಕಳಂಕವೂ ಶುದ್ಧವೂ ಆಗಿದ್ದು ಅದರಲ್ಲಿ ಪವಿತ್ರತೆ ತಾನೇತಾನಾಗಿದೆ. ಇಂದು ನಾವು ಪವಿತ್ರತೆಯ ಆದರ್ಶವನ್ನಿರಿಸಿಕೊಂಡೆವು. ಅದೂ ಎಂಥ ಪವಿತ್ರತೆ ? ಮಲ, ವಿಕ್ಷೇಪ ಮತ್ತು ಆವರಣ ರಹಿತವಾದಂಥದು ! ನಮ್ಮ ಅಸ್ತಿತತ್ವದಲ್ಲಾದರೋ ಈ ಮೂರೂ ವಿಕಾರಗಳಿವೆ. ಪವಿತ್ರತೆಯಿದ್ದಲ್ಲಿ ಇವು ಇರಲಾರವು. ನಮ್ಮ ವಿಚಾರ ಇಂಥ ಉನ್ನತ ಮಟ್ಟದ ಪವಿತ್ರತೆಯ ಕಡೆಗೆ ಹರಿಯಿತು, ಆಗ ನಾವು ನಮ್ಮಲ್ಲಿದ್ದ ಬಾಹ್ಯವಸ್ತುಗಳಿಂದ ಆದರ್ಶದ ಅನುಕರಣವನ್ನಾರಂಭಿಸಿದೆವು. ಶರೀರವನ್ನು ಉಜ್ಜಿ ಶುದ್ಧಗೊಳಿಸತೊಡಗಿದೆವು. ಅಶುದ್ಧ ಸ್ಥಾನಗಳನ್ನು ಶುದ್ಧವಾಗಿರಿಸಲು ವಿಶೇಷ ಲಕ್ಷವಹಿಸಿದೆವು. ಆಗ ಏನಾಯಿತು ? ಬಾಹ್ಯ ಕ್ರಿಯೆಗಳಿಂದ ನಾವು ಮಾಡಹತ್ತಿದ ಪವಿತ್ರತೆಯ ಅನುಕರಣವು ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಕ್ರಮೇಣ ಅದರಲ್ಲಿಯೂ ಶುದ್ಧತೆಯ ಸಂಚಾರವಾಯಿತು. ಹೀಗೆ ಬಹು ಕಾಲ ನಡೆಯಿತು. ಜೊತೆಗೆ ನಮ್ಮ ದೃಷ್ಟಿಯಲ್ಲಿ ಆದರ್ಶವೂ ಸತತವಾಗಿ ಉಳಿದು ಈ ಪವಿತ್ರತೆಯನ್ನು ಹೆಚ್ಚಿಸಿತು. ಮೊದಲನೆಯದಾಗಿ, ನಮ್ಮ ಕರ್ಮಗಳು ಮನಶುದ್ಧಿಯನ್ನುಂಟುಮಾಡುವುದರಲ್ಲಿ ತತ್ಪರವಾದುವು. ಎರಡನೆಯದಾಗಿ, ಗುರಿಯು ಬಂಗಾರಕ್ಕೆ ಸುಗಂಧ ಬೆರೆಸಿದಂತೆ ಮಾಡಿತು. ಕೇಳುವುದೇನು ? ಪವಿತ್ರತೆ ಬೆಳೆಯಿತು; ಮನಶ್ಯುದ್ದಿಯಾಯಿತು. ಒಳ್ಳೆಯ ವಿಚಾರಗಳು ಉದಿಸತೊಡಗಿದುವು. ಇವೆಲ್ಲ ನಮ್ಮ ಮುಖ್ಯ ಗುರಿಯ ಸಾಧನೆಯಲ್ಲಿ ಸಹಾಯಕವಾದುವು. ಹೀಗೆ ನಮಗೆ ಇಬ್ಬಗೆಯ ಲಾಭವಾಯಿತು. ಆಂತರಿಕ ಓಡಾಟವಂತೂ ನಡೆದೇ ಇದ್ದಿತು. ಹೊರಗಿನ ಓಡಾಟವೂ ಈ ಕೆಲಸದಲ್ಲಿ ಸಹಾಯಮಾಡಿತು. ಗುರಿಯನ್ನು ಮುಟ್ಟುವುದರಲ್ಲಿ ಇವೆರಡೂ ತುಂಬ ನೆರವು ನೀಡಿದವು. ಇವೆರಡೂ ಸಾಮರಸ್ಯ ಪಡೆದಾಗ ಅದೇ ಒಂದು ಶಕ್ತಿಯಾಗಿ ನಮ್ಮ ಮಾರ್ಗವನ್ನು ಮತ್ತಷ್ಟು ಸುಗಮಗೊಳಿಸಿದುವು. ಆಗ ನಾವು ಎರಡೂ ಪಕ್ಕಗಳಿಂದ ಹಾರತೊಡಗಿದೆವು. ಪ್ರತಿಯೊಂದು ವಸ್ತುವೂ ತಾನಾ ಗಿಯೇ ಸಿದ್ದಿಸತೊಡಗಿತು. ನೋಡಿ, ಈ ಪವಿತ್ರತೆಯು ನಮ್ಮ ಧೈಯ ಸಾಧನೆಯಲ್ಲಿ ಎಷ್ಟೊಂದು ನೆರವಾಯಿತು !

ನಮ್ಮ ನಿಯಮಗಳಲ್ಲಿ ಸಂಧ್ಯೆ ಹಾಗೂ ಉಪಾಸನೆ ಮೊಟ್ಟ ಮೊದಲು ಬಂದಿವೆ. ಕಾರಣವೇನೆಂದರೆ, ಅವನ್ನಾಚರಿಸುವುದರಿಂದ ನಾವು ಯಾವ ಶಕ್ತಿಯನ್ನು ಒಂದಿಲ್ಲೊಂದು ದಿನ ಸಹಜವಾಗಿ ಪಡೆಯಬೇಕಾಗಿದೆಯೋ ಅದನ್ನು ಆರಂಭದಿಂದಲೇ ಪಡೆಯತೊಡಗುವೆವು. ಈ ಬಗ್ಗೆ ಇನ್ನೊಂದು ಮಾತು : ಮೂಲದಿಂದ ಧಾರೆಗಳು ಪ್ರವಹಿಸತೊಡಗಿದಾಗ ಅವುಗಳ ಮಥನ- ಪ್ರತಿಮಥನವು ಸ್ಥೂಲತೆಯ ಅವಸ್ಥೆಯನ್ನು ಹುಟ್ಟಿಸಿತು. ಅದರಿಂದ ಅಣು, ಪರಮಾಣು ಹಾಗು ವಿವಿಧ ಆಕಾರಗಳ ಕಣಗಳು ಸಿದ್ಧವಾಗಿ ತಮ್ಮ ತಮ್ಮ ರೂಪದಲ್ಲಿ ಪ್ರಕಟವಾದುವು. ಯಾವುದನ್ನು ನಮ್ಮ ಜೀವನವು ಅವಲಂಬಿಸಿದೆಯೋ ಆ ಉಷ್ಣತೆಯೂ ಅವುಗಳಲ್ಲಿ ಪ್ರವಹಿಸುತ್ತಿದ್ದಿತು. ಅದರಿಂದ ನಾನಾ ರೂಪಗಳು ವ್ಯಕ್ತವಾದವು. ವಿವಿಧ ಕ್ರಿಯೆಗಳು ನಡೆಯತೊಡಗಿದುವು. ಉಷ್ಣತೆ ಉಳಿಯಿತು; ಇದುವರೆಗೂ ಉಳಿದುಕೊಂಡೇ ಇದೆ. ಆದರೆ ಅದರ ಪ್ರವಾಹ ಮಾತ್ರ ಕೆಳಮುಖವಾಗಿದೆ. ಈ ʼಕೆಳಗೆ’ ‘ಮೇಲೆ’ಗಳ ವಿಚಾರವೇನೆಂದು ಪ್ರಶ್ನಿಸಬಹುದು. ನಾವು ಉಚ್ಚಮಟ್ಟದ ವಸ್ತುವನ್ನು ಕುರಿತು ಚಿಂತಿಸುವಾಗ ಕೆಳಮಟ್ಟದ ಪದಾರ್ಥವೂ ನಮ್ಮ ವಿಚಾರದಲ್ಲಿ ನೆಲೆಸುವುದು. ಅಲ್ಲದೆ ನಾವು ಉಚ್ಚ ಅಥವಾ ಶ್ರೇಷ್ಠ ವಸ್ತುವಿನಿಂದ ಬಂದಿರುವೆವೆಂದ ಮೇಲೆ ಅದರ ನಂತರದ ವಸ್ತುವು ಸ್ವಾಭಾವಿಕವಾಗಿಯೇ ಕೀಳು ಅಥವಾ ಕಡಮೆ ದರ್ಜೆಯದೆನಿಸುವುದು. ಆದುದರಿಂದಲೇ ನಾವು ಅದನ್ನು ಅತ್ಯುಚ್ಚ ಅಥವಾ ಶ್ರೇಷ್ಟವೆಂದು ಭಾವಿಸುತ್ತೇವೆ. ಆಗ ‘ಮೇಲೆ’ ‘ಕೆಳಗೆ ಇವುಗಳ ಕಲ್ಪನೆ  ನಮ್ಮ ಮಸ್ಸಿನಲ್ಲಿ ಕೂಡಲೇ ಪ್ರವೇಶಿಸುವುದು. ಕೆಳಗಿನ ಎಳೆತವು ಕಡಮೆಯಾದಾಗ, ಪರಮಾಣುಗಳ ಮೇಲೆ ಸತತವಾಗಿ ಉಷ್ಣತೆಯನ್ನು ಬೀರುತ್ತಿರುವ ವಸ್ತುವೇ ಅವನ್ನು ಮೇಲುಗಡೆ ತಿರುಗಿಸಲು ಸಹಾಯ ಮಾಡುವದು. ಅರ್ಥಾತ್ ಎಲ್ಲಿಂದ ಈ ವಸ್ತುಗಳು ಪ್ರಕಟವಾಗುವುವೋ ಮತ್ತು ಯಾವ ಚಲನದಿಂದ ಇವುಗಳಲ್ಲಿ ಕಾವು ಹುಟ್ಟಿಕೊಂಡಿತೋ ಅದು ಇವುಗಳನ್ನು ಹಗುರುಮಾಡುವುದು. ಹಗುರಾದ ಪದಾರ್ಥವು ಯಾವಾಗಲೂ ಮೇಲಕ್ಕೇಳುವುದು ಅದರ ಗುಣಧರ್ಮವಾಗಿದೆ. ಅದರರ್ಥವಿಷ್ಟೆ : ಅದು ತನ್ನ ಮೂಲದ ಕಡೆಗೆ ಹೋಗಬಯಸುವುದು. ಈ ಪ್ರಕಾರ, ಧಾರೆಗಳ ಪರಿಣಾಮದಿಂದ ಗತಿಶೀಲತೆಯನ್ನು ಪಡೆದ ಎಲ್ಲ ಪದಾರ್ಥಗಳೂ ತಮ್ಮ ಮೂಲವನ್ನು ಸೇರಬಯಸುವುದು ಸ್ವಾಭಾವಿಕ. ಮನುಷ್ಯನಲ್ಲಿ ಈ ಪ್ರವೃತ್ತಿಯು ಹೆಚ್ಚು ಪ್ರಮಾಣದಲ್ಲಿದೆ. ಕೆಳಗಿನ ಹಗ್ಗ ಹರಿದಾಗ ಅರ್ಥಾತ್ ಅಧೋಮುಖ ಪ್ರವೃತ್ತಿಯು ನಿಂತಾಗ ತನ್ನ ಮೂಲವನ್ನು ಸೇರಬೇಕೆಂಬ ಅಭಿಲಾಷೆಯುಂಟಾಗುವುದು ಸಹಜವೆ. ಆದುದರಿಂದಲೇ ಸಂಧ್ಯೆ ಮತ್ತು ಉಪಾಸನೆಯ ಕಡೆಗೆ ಆತನ ಮನಸ್ಸು ಹರಿಯತೊಡಗುವುದು.

ಈ ಉಷ್ಣತೆಯಲ್ಲಿ ಹಾಗು ಸೂರ್ಯನ ಪರಿಣಾಮದಿಂದ ಉಂಟಾದ ಉಷ್ಣತೆಯಲ್ಲಿ ಬಹಳ ಅಂತರವಿದೆ. ಈ ಉಷ್ಣತೆಯು ಮೂಲದಿಂದಲೇ ಹುಟ್ಟುವುದು. ಆದಕಾರಣ ಅದರಲ್ಲಿ ಭೌತಿಕತೆ ಇರುವುದಿಲ್ಲ. ಸೂರ್ಯನ ಉಷ್ಣತೆಯಾದರೋ ಪದಾರ್ಥದಿಂದ ಹುಟ್ಟುವುದಾದ ಕಾರಣ ಅದರಲ್ಲಿ ಭೌತಿಕತೆಯಿರುವುದಲ್ಲದೆ ಇದಕ್ಕಿಂತ ಸ್ಥೂಲವಾಗಿರುವುದು. ನನ್ನ ಅಭಿಪ್ರಾಯದಲ್ಲಿ ಮೊದಲಿನದನ್ನು ಶಕ್ತಿಯೆಂದು ಕರೆದರೆ ಹೆಚ್ಚು ಸಮಂಜಸವಾದೀತು. ಶಕ್ತಿಯಲ್ಲಿ ಉಷ್ಣತೆ ಗುಪ್ತವಾಗಿರುವುದು. ಸೂರ್ಯನಲ್ಲಿ ಅದು ಪ್ರಕಟ ರೂಪದಲ್ಲಿದೆ. ಎರಡೂ ಉಷ್ಣತೆಯೆನಿಸಿದರೂ ಅವುಗಳಲ್ಲಿ ಭೂಮಿ-ಆಕಾಶಗಳ ಅಂತರವಿದೆ. ಸೂರ್ಯನ ಪರಿಣಾಮದ ಉಷ್ಣತೆಯಲ್ಲಿ ಕೇವಲ ಸೆಕೆಯಿದೆ; ಮೂಲ ಉಷ್ಣತೆಯಾದರೋ ಜೀವನವನ್ನು ಪೋಷಿಸುವಂಥದು, ವರ್ಧಿಸು- ವಂಥದು. ಈ ಸೂಕ್ಷ್ಮ ಸಂಗತಿಗಳನ್ನು ತಿಳಿಸಲು ಸರಿಯಾದ ಸಾಧನ ವಿಲ್ಲದಿರುವುದು ಶೋಚನೀಯವೇ ಸರಿ. ಸಾಧ್ಯವಾದ ಮಟ್ಟಿಗೆ ವಿಚಾರಗಳನ್ನು ಶಬ್ದಗಳಲ್ಲಿ ಅಭಿವ್ಯಕ್ತಗೊಳಿಸಲಾಗಿದೆ. ಆದರೆ ಇವೆರಡೂ ಉಷ್ಣತೆಗಳ ಭೇದವನ್ನು ಪ್ರತ್ಯಕ್ಷ ಅನುಭವದಿಂದಲೇ ಅರಿಯಲು ಸಾಧ್ಯ.

ಸಹಜಮಾರ್ಗ ಪದ್ಧತಿಯಲ್ಲಿ ಮಾರ್ಗದರ್ಶಿಯು ತನ್ನ ಶಕ್ತಿಯಿಂದ ಅಭ್ಯಾಸಿಯ ಕೆಳಮುಖದ ಪ್ರವೃತ್ತಿಗಳನ್ನು ದುರ್ಬಲಗೊಳಿಸುವನು. ಇದರಿಂದ ಅವು ತಾವಾಗಿಯೆ ಭಗವದಭಿಮುಖವಾಗುವುವು. ಮನಸ್ಸಿನ ಈ ಸ್ಥಿತಿಯು ಚೈತನ್ಯದ ಉನ್ನತ ಸ್ತರಕ್ಕೆ ಸಂಬಂಧಪಟ್ಟಿದೆ; ಮೊದಲಿನದು ನಿಮ್ನ ಸ್ತರಕ್ಕೆ. ಇದೇ ತತ್ತ್ವವೇ ಆಧ್ಯಾತ್ಮಿಕ ತರಬೇತಿಯ ತಳಹದಿಯಾಗಿದೆ. ತತ್ತ್ವಜ್ಞಾನಿಗಳು ಇದನ್ನು ಕುರಿತು ವಿಚಾರಮಾಡಲಿ. ತೀರ ಸಂಕ್ಷೇಪವಾಗಿ ಇದನ್ನು ವಿವರಿಸಿದ್ದೇನೆ. ಈ ಸಂದರ್ಭದಲ್ಲಿ ಒಬ್ಬ ಶ್ರೇಷ್ಠ ಸಂತರ ಈ ಮಾತುಗಳನ್ನು ಹೇಳುವುದು ತೀರ ಉಚಿತವೆನಿಸುವದು : “ಭಗವಂತನು ಭಕ್ತನ ಪ್ರತಿಯೊಂದು ಪ್ರಶ್ನೆಗೂ ಉತ್ತರದ ಬಾಗಿಲನ್ನು ಮುಚ್ಚಿರುವನು.” ಈ ಬಾಗಿಲು ಏನೆಂಬುದನ್ನು ವಿಚಾರಮಾಡಿದಾಗ, ಈ ತೆರೆ ಜ್ಞಾನಕ್ಕೆ ಸಂಬಂಧಪಟ್ಟುದೆಂದು ತಿಳಿದುಬರುವುದು. ಒಬ್ಬ ಕವಿಯಾದರೂ “(ಚೀನದ ತತ್ತ್ವಜ್ಞಾನಿ) ಸಹಬಾನನಂತೆ ವಾಸ್ಪಟುತ್ವವನ್ನು ಯಾರಾದರೂ ಪಡೆಯಬಹುದು; ಆದರೆ ಸುಭಾನನ (ಭಗವಂತನ) ಪೂರ್ಣಜ್ಞಾನವನ್ನು ಯಾರೂ ಪಡೆಯಲಾರರು” ಎಂದು ಹೇಳಿದ್ದಾನೆ.

ಈಗ ಈ ತೆರೆಯನ್ನು ಕುರಿತು ಕೇಳಿ. ಭಗವಂತನ ಮೂಲ ರಹಸ್ಯವನ್ನು ತಿಳಿಯಲು ಅಡ್ಡ ಬರುವ ತೆರೆ ಯಾವುದು? ನಾವು ಭಗವಂತನನ್ನು ಕುರಿತು ವಿಚಾರಮಾಡಿದಾಗ ನಮ್ಮ ತಿಳಿವಳಿಕೆಯು ತನ್ನ ಸುತ್ತಲೂ ಒಂದು ವೃತ್ತವನ್ನು ನಿರ್ಮಿಸಿಕೊಳ್ಳುವುದು. ನಮ್ಮ ಪ್ರತಿಯೊಂದು ಪ್ರಶ್ನೆಗೂ ಉತ್ತರ ದೊರೆಯದಿರಲು ಇದೇ ಗ್ರಂಥಿಯೆ ಕಾರಣ. ಈ ಪರಿಮಿತಿಯನ್ನು ನಾವು ದಾಟಿ ಹೋಗಲು ಸಾಧ್ಯವಾದರೆ ಅತ್ಯಂತ ಸೂಕ್ಷ್ಮಸಂಗತಿಗಳು ಸಹ ನಮಗೆ ತಿಳಿಯಬಹುದು. ಈ ವೃತ್ತವು ಇದರ ನಂತರ ಬರುವ ವೃತ್ತದ ಪ್ರತಿಚ್ಛಾಯೆ ಅದರಲ್ಲಿ ನಾವು ಪ್ರವೇಶಮಾಡಿದಾಗ ಕೇಂದ್ರದ ರಹಸ್ಯವು ಗೋಚರವಾಗುವುದು. ನಾವು ನಮ್ಮ ಅಸ್ತಿತ್ವದ ಕಣಗಳನ್ನು ಭಿನ್ನ ಭಿನ್ನ ಮಾಡಿಕೊಂಡಾಗಲೇ ಬಂಧಗಳು ಕತ್ತರಿಸಿಹೋಗಬಲ್ಲುವು. ಆದರೆ ಈ ಸಾಮರ್ಥ್ಯ ಎಲ್ಲರಿಗೂ ಬರುವುದಿಲ್ಲಏಕೆಂದರೆ ಇದಕ್ಕೆ ಅಗತ್ಯವಾದ ನಿಯಮಗಳ ಪಾಲನೆ ಎಲ್ಲರಿಂದಲೂ ಸಾಧ್ಯವಿಲ್ಲ. ತನ್ನ ಇಚ್ಛಾಶಕ್ತಿಯಿಂದ ಈ ಕಣಗಳನ್ನು ಭಿನ್ನ ಮಾಡಬಲ್ಲ ಯಾವನಾದರೂ ಉದಿಸಿಬಂದರೆ ಮಾತ್ರ ಈ ವೃತ್ತವು ದೃಷ್ಟಿಯಿಂದ ಸರಿದುಹೋಗುವುದು, ಏಕೆಂದರೆ ಭಿನ್ನಭಿನ್ನ ಸ್ಥಿತಿಯಲ್ಲಿ ಈತನ ದೃಷ್ಟಿಯು ಅದರೊಂದಿಗೆ ಬೆರೆತುಹೋಗುವುದು. ಆದರೆ ಇದರ ಜ್ಞಾನವಾಗಬೇಕಾದರೆ ಮೊದಲಿದ್ದ ಹಾಗೆಯೇ ಕಣಗಳನ್ನು ಮತ್ತೆ ಹೊಂದಿಸಿ ಶರೀರವನ್ನು ಸುವ್ಯವಸ್ಥಿತಗೊಳಿಸಲು ಬಲ್ಲವನಾಗಿರಬೇಕು. ಜನಸಾಮಾನ್ಯರ ದೃಷ್ಟಿಯಲ್ಲಿ ಇಂಥ ಮನುಷ್ಯನು ಹುಟ್ಟಿರಲಿಕ್ಕಿಲ್ಲ. ನನ್ನ ಅನುಭವದ ಮೇರೆಗೆ ಹೇಳುವುದಾದರೆ ಇಂಥ ಹಲವಾರು ಮಹಾಪುರುಷರು ಆಗಿ ಹೋಗಿದ್ದಾರೆ. ಕಣಗಳನ್ನು ಬೇರ್ಪಡಿಸಿದಾಗಿನ ಸ್ಥಿತಿಯು ಸೃಷ್ಟಿಯ ಆರಂಭದಲ್ಲಿದ್ದ ಗುಪ್ತಚಲನದಂತಿರುವುದು. ಅದರಲ್ಲಿ ಆತನ ಇಚ್ಛಾಶಕ್ತಿ ಆಡಗಿರುವುದು. ಮಹಾಪ್ರಳಯದ ಅನಂತರವೂ ಇದೇ ಸ್ಥಿತಿ ಕಾಣಿಸಿ ಕೊಳ್ಳುವುದು. ಈ ಪ್ರಕಾರ ಸೃಷ್ಟಿಗೆ ಕಾರಣವಾದ ಪ್ರಸುಪ್ತ ಇಚ್ಛಾಶಕ್ತಿಯೆ ಛಿನ್ನ ವಿಚ್ಛಿನವಾದ ಕಣಗಳನ್ನು ಪುನರ್ವ್ಯವಸ್ಥೆಗೊಳಿಸಲು ಕಾರಣವಾಗುವುದು. ಆಗ ಯಾವ ಬಂಧನವೂ ಉಳಿಯುವದಿಲ್ಲ.