ನಿಮ್ಮ ಪೂಜೆಯನ್ನು ಆತ್ಮೊನ್ನತಿಯ ಪ್ರಾರ್ಥನೆಯೊಂದಿಗೆ ಆರಂಭಿಸಿರಿ. ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮ – ಭಕ್ತಿಗಳಿಂದ ತುಂಬಿರಲಿ,
ನಿಮ್ಮ ಪೂಜೆಯನ್ನು ಆತ್ಮೊನ್ನತಿಯ ಪ್ರಾರ್ಥನೆಯೊಂದಿಗೆ ಆರಂಭಿಸಿರಿ. ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮ – ಭಕ್ತಿಗಳಿಂದ ತುಂಬಿರಲಿ,ಪ್ರಾರ್ಥನೆಯು ಭಕ್ತಿಯ ಕುರುಹು. ಪರಮಾತ್ಮನೊಂದಿಗೆ ನಮ್ಮ ಸಂಬಂಧವು ಸ್ಥಾಪಿತವಾದುದನ್ನು ಅದು ಸೂಚಿಸುತ್ತದೆ. ನಾವು ಯಾರನ್ನಾದರೂ ಒಡೆಯನೆಂದು ಒಪ್ಪಿಕೊಂಡಮೇಲೆ ಆತನ ಸೇವಕರಾದಂತೆಯೇ ಸರಿ. ಸೇವೆಮಾಡುವುದೊಂದೇ ಸೇವಕನ ಕೆಲಸ, ಭರತನ ಉದಾಹರಣೆಯನ್ನು ತೆಗೆದುಕೊಳ್ಳೋಣ. ಆತನು ಹೃದಯದಲ್ಲಿ ತನ್ನ ಒಡೆಯನ ಸಂಮಾನ, ಪೂಜೆಗಳನ್ನುಳಿದು ಬೇರೆ ವಿಚಾರಗಳಿಗೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಭಕ್ತಿಯ ಸಂಬಂಧವನ್ನು ಸ್ಥಿರವಾಗಿ ಉಳಿಸಿಕೊಳ್ಳಬೇಕಾದರೆ ನಮ್ಮ ಕಣ್ಣ ಮುಂದೆ ಯಾವಾಗಲೂ ಈ ಉದಾಹರಣೆಯನ್ನಿರಿಸಿಕೊಳ್ಳಬೇಕು. ಇದನ್ನೆ ಪ್ರೇಮದ ಸಂಬಂಧವೆಂದು ಹೇಳಬಹುದು. ಮೊದಲಿನಿಂದ ಕೊನೆಯವರೆಗೆ ಸಂಬಂಧವನ್ನು ಜೋಡಿಸುವುದು ಇದೇ.
ವಿದ್ಯುತ್ತಂತ್ರಿಯ ತತ್ತ್ವ ಪ್ರತಿಯೊಬ್ಬನಿಗೂ ಗೊತ್ತಿದೆ. ಅದರ ಒಂದು ತುದಿ ವಿದ್ಯುತ್ತನ್ನು ಹೊಂದಿದ್ದಾಗ ಸುದ್ದಿಯು ಎರಡನೆಯ ತುದಿಗೆ ಮುಟ್ಟುವುದು. ಇದೇ ಸ್ಥಿತಿ ಭಕ್ತನದೆಂದು ತಿಳಿಯತಕ್ಕದ್ದು. ಆತನು ತನ್ನ ಭಕ್ತಿಯ ವಿದ್ಯುತ್ತಿನಿಂದ ಒಡೆಯನ ವರೆಗೆ ತನ್ನ ವರದಿಯನ್ನು ತಲುಪಿಸುವನು. ಭಕ್ತಿಯ ಪ್ರಭಾವದಿಂದ ಇಬ್ಬರ ನಡುವೆ ಸ್ಥಾಪಿತವಾದ ಸಂಬಂಧದ ಮೂಲಕ ಒಡೆಯನ ಹತ್ತಿರ ಇದ್ದುದು ಭಕ್ತನ ಹತ್ತಿರ ಹರಿದುಬರುವುದು. ಕ್ರಮೇಣ ಒಡೆಯನಲ್ಲಿದ್ದ ಎಲ್ಲವೂ ಭಕ್ತನವರೆಗೆ ತಲುಪತೊಡಗುವುದು. ಮೊದ ಮೊದಲು ಭಕ್ತನು ಒಡೆಯನಿಗೆ ಕೇವಲ ತನ್ನ ಪರಿಚಯಮಾಡಿಕೊಟ್ಟಿದ್ದನು.
ಭಕ್ತನು ಭಕ್ತಿ ಮಾಡಲಾರಂಭಿಸಿದುದರ ಪರಿಣಾಮವಾಗಿ ಒಡೆಯನು ಆತನ ಸಮೀಪಕ್ಕೆ ಬರತೊಡಗಿದನು. ಇದು ಹಾಗೆಯೇ ಬೆಳೆಯುತ್ತ ಹೋಯಿತು. ಭಕ್ತನಲ್ಲಿ ಸಹವಾಸದ ಭಾವ ಸುಳಿಯಲಾರಂಭಿಸಿತು. ಮೈತ್ರಿ ಬೆಳೆಯಿತು. ಪರಸ್ಪರ ಧ್ಯಾನ ನಡೆಯಿತು. ಸಮಾಚಾರ ಹೋಗತೊಡಗಿತು. ಆದೇಶಗಳು ಬರಲಾರಂಭಿಸಿದುವು. ಮೊದಲ ಸಂಸ್ಕಾರ ಪ್ರಾರಂಭವಾಯಿತು. ಇಲ್ಲಿಯ ವರೆಗಂತೂ ತಂದದ್ದಾಯಿತು. ಮುಂದೆ …..? ಅದೊಂದು ರಹಸ್ಯವಾಗಿದೆ. ನಾಲಗೆ ಏಳುವುದಿಲ್ಲ. ಭಕ್ತಿಯು ನಮ್ಮನ್ನು ದಾಸ್ಯದಲ್ಲಿ ಬಂಧಿಸಿತೆಂದು ಸಾಮಾನ್ಯ ಜನರು ತಿಳಿಯುವರು. ಆದರೆ ಇಲ್ಲಿ ವಿಲೋಮದ ತತ್ತ್ವ ಮತ್ತೆ ಬರುವುದು. ಯಾರು ಈ ತತ್ತ್ವವನ್ನು ಅನುಸರಿಸಿದರೋ ಅವರು ಪೂರ್ಣತೆ ಯನ್ನು ಮುಟ್ಟಿದರು. ಆದರೆ ಜನರ ದೃಷ್ಟಿಗೆ ಈ ತತ್ತ್ವಜ್ಞಾನ ನಿಲುಕಿಲ್ಲವಾದುದರಿಂದ ಈ ರಹಸ್ಯವು ಇದುವರೆಗೆ ಪ್ರಕಟವಾಗಿಲ್ಲ.
ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮದಿಂದ ತುಂಬಿ ತುಳುಕ ಬೇಕೆಂದು ಹೇಳಿದುದರ ಕಾರಣವಿಷ್ಟೆ : ನಾವು ಪ್ರಾರ್ಥನೆಯ ಮೂಲಕ ನಮ್ಮ ಹೃದಯವನ್ನು ನಿರ್ವಿಷಯ ಮಾಡಿಕೊಳ್ಳುವುದರಿಂದ ದೈವೀಕೃಪೆಯ ಧಾರೆಗಳು ಆಕರ್ಷಿತವಾಗಿ ಅದರಲ್ಲಿ ನೇರವಾಗಿ ಹರಿದು ಬರುವುವು. ಒಬ್ಬ ಕವಿ ಹೀಗೆ ಹೇಳಿದ್ದಾನೆ :
ದೈವಕೃಪೆಯುನ್ಮಾದಕೆಳಸುತಿಹ ಸದ್ಭಕ್ತ !
ಮೊದಲು ನಿಜಹೃದಯವನು ಬರಿದು ಮಾಡು ;
ಪೂರ್ತಿ ಬರಿದಾಗಿರುವ ಬಟ್ಟಲೊಳು ಮಧುಪಾತ್ರೆ
ಬಾಗುವುದು, ಇಂತದರ ಗುಟ್ಟು ನೋಡು.
ಬರಬರುತ್ತ ಇದರ ಸತತಾಭ್ಯಾಸದಿಂದ ಸಾಧಕನು ತಾನು ಪ್ರಾರ್ಥನಾಮಯ ನಾದಂತೆ ಅನುಭವಿಸುವನು. ಮೇಲೆ ವಿವರಿಸಿದ ನಿಯಮದಂತೆ ಅಭ್ಯಾಸ ಮಾಡಿದಾಗಲೇ ಸಾಧಕನಲ್ಲಿ ಈ ಅವಸ್ಥೆಯುಂಟಾಗುತ್ತದೆ. ಆಗ ಮಾತ್ರವೇ ದೈವೀಕೃಪೆ ಪೂರ್ಣರೂಪದಿಂದ ಇಳಿದು ಬರುವುದು. ಕೊನೆಯ ಅವಸ್ಥೆ ಯನ್ನು ಮುಟ್ಟಿದಾಗ ಸಾಧಕನು ಯಾವಾಗಲೂ ಪ್ರಾರ್ಥನೆಯ ಸ್ಥಿತಿಯಲ್ಲಿಯೆ ಇರತೊಡಗುವನು. ಪ್ರಾಪಂಚಿಕ ಕಾರ್ಯಗಳನ್ನು ಮಾಡುತ್ತಿರುವಾಗಲೂ
ಆ ಸ್ಥಿತಿಯಿಂದ ಕದಲುವುದಿಲ್ಲ. ಪ್ರಪಂಚದ ಯಾವ ಕೆಲಸವೂ ಇದರಲ್ಲಿ ವಿಘ್ನವನ್ನುಂಟುಮಾಡಲಾರದು. “ಪ್ರಪಂಚವನ್ನು ತ್ಯಜಿಸಬೇಕೆಂದು ನಾನು ಹೇಳುವುದಿಲ್ಲ. ಆದರೆ ಪ್ರತಿಯೊಂದು ಕೆಲಸವನ್ನೂ ದೇವರಲ್ಲಿ ಚಿತ್ತವಿಟ್ಟು ಮಾಡಬೇಕು. ಯಾವನಾದರೊಬ್ಬ ಮನುಷ್ಯನು ತನ್ನಲ್ಲಿ ಈ ಸ್ಥಿತಿಯನ್ನು ತಂದು ಕೊಂಡರೆ ಅವನು ಯಾವಾಗಲೂ ಪ್ರಾರ್ಥನೆಯಲ್ಲಿಯೆ ಇರುವನೆಂದರ್ಥ. ಒಡೆಯನ ಸ್ವಾಮಿತ್ವವನ್ನೂ ತನ್ನ ದಾಸ್ಯವನ್ನೂ ಆತನು ಅರಿತುಕೊಂಡು ಭಕ್ತಿಯ ಸಂಬಂಧವನ್ನು ಗಾಢವಾಗಿ ಸ್ಥಾಪಿಸಿದ್ದಾನೆ. ಈ ಸ್ಥಿತಿಯನ್ನು ಪ್ರತಿಯೊಬ್ಬನೂ ಸಾಕಷ್ಟು ಅಭ್ಯಾಸ ಮಾಡಿದನಂತರವೇ ಪಡೆಯಲು ಸಾಧ್ಯ. ಇದನ್ನು ಪಡೆದವನು ಪ್ರಾರ್ಥನೆಯ ವಲಯದಲ್ಲಿ ಬಂದಂತೆಯೇ. ತನ್ನ ಒಡೆಯನ ಮುಂದೆ ನಮ್ರತೆಯಿಂದ ಏನುಬೇಕಾದರೂ ಹೇಳಿಕೊಳ್ಳುವ ಅಧಿಕಾರ ಅವನಿಗಿದೆ. ಪ್ರಾರ್ಥನೆಯ ಕಾಲದಲ್ಲಿ ಇಂಥ ಭಾವವನ್ನು ಪ್ರತಿ ಯೊಬ್ಬನೂ ಹೊಂದಬೇಕು. ಆಗಮಾತ್ರವೇ ಪ್ರಾರ್ಥನೆ ಸ್ವೀಕೃತವಾಗುವುದು. ಇದೊಂದು ಪ್ರೇಮದ ಸಂಬಂಧ. ಇದು ಮೊದಲು ಭಕ್ತನಲ್ಲಿ ಅಂಕುರಿಸಿ ಭಗವಂತನವರೆಗೂ ಹಬ್ಬುವುದು. ಒಮ್ಮೆ ಪ್ರಸ್ಥಾಪಿತವಾದ ಈ ಸಂಬಂಧವು ಎಂದಿಗೂ ಕಡಿದುಹೋಗುವುದಿಲ್ಲ. ಗಂತವ್ಯವು ಇನ್ನೂ ದೂರವಾಗಿದ್ದರೂ ಚಿಂತನೆಯು ಅದನ್ನು ಸುಗಮಗೊಳಿಸುವುದು, ಪ್ರಿಯತಮನ ಧ್ಯಾನವು ಪ್ರೇಮಿಯನ್ನು ಅವನ ಹತ್ತಿರಕ್ಕೆ ಎಳೆದೊಯುವುದು. ಈ ಸಾಮೀಪ್ಯಕ್ಕೆ ಮೇರೆಯಿಲ್ಲ. ಪ್ರೇಮವು ಹೆಚ್ಚಿದಂತೆ ಅವನ ಕಡೆಗೆ ಮುಂದುವರಿಯುವೆವು. ಈ ಸಂಬಂಧವನ್ನು ನಾವು ಹುಟ್ಟುತ್ತಲೇ ನಮ್ಮ ಜೊತೆಗೆ ತಂದಿದ್ದೇವೆ. ಇದನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ನಾವು ಯಾವಾಗಲೂ ಆತನಿಗೆ ತೀರ ಸಮೀಪವೆನಿಸುವಷ್ಟು ಮಟ್ಟಿಗೆ ಇದನ್ನು ಬೆಳೆಸಬೇಕು. ಪ್ರಾರ್ಥನೆಯ ಸ್ಥಿತಿ ಭಕ್ತನದಾಗಿರುತ್ತದೆ. ಪ್ರೇಮ-ಭಕ್ತಿಗಳಿಂದಲೇ ಅದಕ್ಕೆ ದೃಢತೆ ಬರುವುದು. ಪರಮಾತ್ಮನವರೆಗೆ ನಮ್ಮನ್ನು ಮುಟ್ಟಿಸುವ ಏಣಿ ಇದೇ. ಇದರಲ್ಲಿಯೇ ಆಧ್ಯಾತ್ಮಿಕ ಪ್ರಗತಿಯ ಎಲ್ಲ ಘಟ್ಟಗಳೂ ಅಡಕವಾಗಿವೆ.
ಪ್ರಾರ್ಥನೆಗಾಗಿ ಯಾವುದೊಂದು ವಿಶಿಷ್ಟ ಸಮಯವೇ ಬೇಕೆಂಬುದೇನಿಲ್ಲ. ಬೇಕೆನಿಸಿದಾಗ ಅದನ್ನು ಮಾಡಬಹುದು: ಒಂದುವೇಳೆ ಇಚ್ಛೆಯಾಗದಿದ್ದರೂ ಮನಸ್ಸನ್ನು ಆ ಕಡೆಗೆ ಒಲಿಸಬೇಕು. ನಿಜವಾದ ಅರ್ಥದಲ್ಲಿ ಸ್ವಾಮಿಯೆನಿಸುವವನನ್ನೇ ಪ್ರಾರ್ಥಿಸಬೇಕು. ಗುಲಾಮರಿಗೆ, ಅರ್ಥಾತ್ ಮನುಷ್ಯನ ಅಧೀನದಲ್ಲಿದ್ದು ಆತನಿಂದಲೇ ಬಲಪಡೆಯುವ ಶಕ್ತಿಗಳಿಗೆ ಪ್ರಾರ್ಥನೆಮಾಡುವುದು ಉಚಿತ ವಲ್ಲ. ಕಾಲಮಹಿಮೆಯಿಂದ ಅವೆಲ್ಲ ಕ್ಷಯಗ್ರಸ್ತವಾಗಿದೆ. ಇನ್ನೊಂದು ಮಾತು : ಶ್ರೇಷ್ಠಸ್ವಾಮಿಯನ್ನು ಕುರಿತು, ತೀರ ಅಪವಾದಾತ್ಮಕ ಪ್ರಸಂಗಗಳನ್ನುಳಿದು, ಪ್ರಾಪಂಚಿಕ ಲಾಭಗಳಿಗಾಗಿ ಪ್ರಾರ್ಥಿಸುವುದು ತುಂಬ ಮೂರ್ಖತನ. ಆತನು ಅಪ್ಪಣೆ ಕೊಡಿಸಿದ ಸಂಗತಿಗಳಿಗಾಗಿ ಮಾತ್ರ ಪ್ರಾರ್ಥನೆ ಸಲ್ಲಿಸುವುದು ಆಕ್ಷೇಪಣೀಯವಲ್ಲ. ಇದು ಮಾನವನ ವಿನಯಕ್ಕೆ ಭೂಷಣ, ಅಲ್ಲದೆ, ನಾವು ಆತನನ್ನು ನಮ್ಮ ಒಡೆಯನೆಂದು ತಿಳಿದು ಆತನಿಗೆ ನಮ್ಮನ್ನು ಪೂರ್ಣವಾಗಿ ಸಮರ್ಪಿಸಿಕೊಂಡಿರುವೆವೆಂಬುದಕ್ಕೆ ಇದು ಸಾಕ್ಷಿಯಾಗಿದೆ.
ಇನ್ನು, ಬೇರೆಯವರ ಹಿತಕ್ಕಾಗಿ ಯಾವ ರೂಪದಲ್ಲಿ ಪ್ರಾರ್ಥನೆಮಾಡ ಬೇಕೆಂಬ ಪ್ರಶ್ನೆ ಬರುವುದು. ಪ್ರಾರ್ಥನೆ ಮಾಡುವಾಗ ತನ್ನ ಮನಃಸ್ಥಿತಿ ಹೇಗಿರುವುದೋ ಅದೇ ಮಟ್ಟಕ್ಕೆ ಅವರನ್ನು ತರಬೇಕೆಂಬುದೇ ಅದಕ್ಕೆ ಉತ್ತರ. “ನಾವು ವಿನೀತ ಸೇವಕರಂತೆ, ಕ್ಷುದ್ರ ಭಿಕ್ಷುಕರಂತೆ ಮಹಾಮಹಿಮನ ಮಂದಿರದಲ್ಲಿ ಬಂದಿದ್ದೇವೆ. ನಮ್ಮದೆಲ್ಲವನ್ನೂ ಆತನ ಮಂದಿಟ್ಟು ಆತನ ಇಚ್ಛೆಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು” ಎಂಬ ಈ ವಿಚಾರವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಬೇಕು. ಎಲ್ಲ ಕಡೆಯಿಂದಲೂ ಉಪಸಂಹರಿಸಿಕೊಂಡು ಆತನ ಕಡೆಗೆ ತಿರುಗಬೇಕು, ಸಂಸಾರವು ಅಸಾರವೆಂದೆನಿಸಬೇಕು. ಪ್ರತಿಯೊಂದರ ಸ್ಮರಣೆಯ ಆ ಒಂದು ಸ್ಮರಣೆಯಲ್ಲಿ ಸಮಾವೇಶವಾಗ- ಬೇಕು. ರೋಮ ರೋಮದಲ್ಲಿ ಆತನ ನೆನಪೇ ಉಳಿದುಕೊಂಡಿರಬೇಕು. ಇದನ್ನು ಪೂರ್ಣಲಯವೆನ್ನುವರು. ಈ ಸ್ಥಿತಿಯನ್ನು ಮನುಷ್ಯನು ಪಡೆದುದಾದರೆ, ನನ್ನ ಅಭಿಪ್ರಾಯದಲ್ಲಿ, ಆತನು ಅಡಿಯಿಂದ ಮುಡಿಯವರೆಗೆ ಪ್ರಾರ್ಥನಾಮಯನೇ. ಆತನ ಪ್ರತಿಯೊಂದು ವಿಚಾರವೂ ಒಡೆಯನದೇ. ಒಡೆಯನ ಅಪ್ಪಣೆಯೇ ಆತನ ಇಚ್ಛೆ.
ಇಂಥ ಪ್ರಾರ್ಥನೆಮಾಡಲು ಜನರನ್ನು ಅಣಿಗೊಳಿಸಬೇಕು. ಯಾರಾದರೂ ಇದನ್ನು ಸಾಧಿಸಿ ಇದರಲ್ಲಿ ನೆಲೆಸಿಬಿಟ್ಟರೆ ಅವರಿಗೆ ಅವನ ಸ್ಮರಣೆಯನ್ನುಳಿದು ಇನ್ನೇನೂ ಮಾಡಬೇಕಾದುದು ಉಳಿಯುವುದಿಲ್ಲ. ಆ ಸ್ಮರಣೆಯಾದರೂ ಏಂಥದು? ಅದರ ನೆನಪು ಸಹ ಬಾರದಂಥದು! ದೊಡ್ಡ ದೊಡ್ಡ ಸಂತರು ಈ ಸ್ಥಿತಿಯನ್ನು ಪಡೆಯಲು ಹಂಬಲಿಸಿ ಹೋದರು; ಆದರೆ ಇದರ ಅಂಚನ್ನು ಸಹ ಮುಟ್ಟಲು ಆಗಲಿಲ್ಲ. ಕೇವಲ ಅಭಿಲಾಷೆಯಾಗಿಯೆ ಉಳಿಯಿತು. ಇದೇನು ಸಾಮಾನ್ಯ ಸಂಗತಿಯೆ? ಅದರ ನಿಜಸ್ಥಿತಿಯನ್ನು ತಿಳಿದು ಮಹದಾಶ್ಚರ್ಯ ಪಡುವಿರಿ. ಅಲ್ಲಿ ಮಿತಿಮೀರಿದ ಸರಳತೆಯಿದೆ. ತರಂಗಗಳಿದ್ದರೂ ಶಾಂತಿಯಿದೆ. ಅದನ್ನು ಶಾಂತಿಯೆನ್ನಲೂ ಬರುವ೦ತಿಲ್ಲ. ಉದ್ವೇಗಾವೇಗಗಳಂತೂ ದೂರ ಉಳಿದುವು. “ಬೆಳಕು’ ಎಂದು ಕರೆದರೂ ಸರಿಯಾಗಲಾರದು. ‘ಕತ್ತಲೆ’ ಯೆಂದರೂ ವಿಸಂಗತವಾಗುವುದು. ಹಾಗಾದರೆ ಏನಿದೆ? ಪ್ರಾಯಶಃ ಅದನ್ನು ಯಾರೂ ಮೆಚ್ಚಲಾರರು. ಇಲ್ಲಿ ಎಲ್ಲವೂ ಕೊನೆಗೊಳ್ಳುವುದು. ಇದು ಎಲ್ಲ ಸತ್ಯದ ಮೂಲತತ್ತ್ವ. ಇದೇ ಯಥಾರ್ಥ ! ಇಲ್ಲಿಯೇ ಎಲ್ಲ ಸ್ಥಿತಿಗಳೂ ಮುಗಿದುಹೋಗುವುವು. ಅಲ್ಲಿಂದ ಮುಂದೇನು ಹೇಳಲಿ….? ಭಗವಂತನು ಎಲ್ಲರಿಗೂ ಈ ಅನುಭವವನ್ನು ಕರುಣಿಸಲಿ.
ಸೃಷ್ಟಿಪೂರ್ವದಲ್ಲಿ ಎಲ್ಲವೂ ನೀರವವಾಗಿದ್ದಿತು. ಅದು ಅವತರಣ ಮಾಡಿದಾಗ ತನ್ನೊಂದಿಗೆ ಮೂಲಸತ್ತ್ವವನ್ನು ತಂದಿತು. ಅವೆರಡರ ಸ್ಥಿತಿಯೂ ಸುಮಾರು ಒಂದೇ ಆಗಿದ್ದಿತು. ಅದರ ಮೇಲೆ ಒಂದೊಂದಾಗಿ ಆವರಣಗಳು ಸುತ್ತತೊಡಗಿದುವು. ಅದಕ್ಕೆ ನಾವೇ ಕಾರಣರು, ಪ್ರವಾಹದ ತೆರೆಗಳು ಒಂದು ದೊಡ್ಡ ಸಮುದ್ರವನ್ನೇ ನಿರ್ಮಿಸಿದವು. ಅನೇಕ ಬಿಂದುಗಳು ಕೂಡಿ ಪ್ರವಾಹವಾಯಿತು. ಎಲ್ಲದರ ಮೂಲ ಮಾತ್ರ ಅದೇ ಬಿಂದು; ಆದರೊಡನೆ ಕೆಳಗಿಳಿದಿದ್ದ ಅದೇ ಸತ್ಯ. ಬೆಟ್ಟದ ತುದಿಯಿಂದ ಬಿದ್ದ ನೀರಿನ ಕೆಲವು ಹನಿಗಳೇ ನದಿಯ ಮೂಲವಾದವು. ಅವುಗಳಲ್ಲಿ ಅನಾವಶ್ಯಕ ಹನಿಗಳು ಸೇರಿದುವು; ಮೂಲಬಿಂದುವನ್ನು ಮರೆಮಾಡಿ ಅದಕ್ಕೊಂದು ಪ್ರತಿಬಿಂಬಿತ ರೂಪಕೊಟ್ಟು ಅದನ್ನು ಸ್ಥೂಲಗೊಳಿಸಿದುವು. ಸಾಮಾನ್ಯವಾಗಿ ಪದಾರ್ಥದ ಸ್ಥೂಲರೂಪವೇ ನಮ್ಮ ಕಣ್ಣಿಗೆ ಬೀಳುವುದು. ಸತತವಾಗಿ ಅದನ್ನೇ ನೋಡುವುದರಿಂದ ಸ್ಥೂಲರೂಪವೂ ಮರೆಯಾಗಿ ಅದರ ಆಕಾರ ಮಾತ್ರ ಉಳಿಯುವುದು. ಪ್ರಯತ್ನ ಮಾಡಿದರೆ ಇದೂ ಮಾಯವಾಗುವುದು.
ಕೊನೆಗೆ ಆ ಮೂಲವಸ್ತುವನ್ನು ಸ್ಥೂಲಗೊಳಿಸಿದ ಎಲ್ಲವೂ ಕಣ್ಮರೆ ಯಾಗುವುವು. ಆ ವಸ್ತುವೊಂದೇ ನಿಜರೂಪದಲ್ಲಿ ಕಾಣುವುದು. ವಸ್ತುವನ್ನು ನಿಜರೂಪದಲ್ಲಿ ಕಾಣುವ ದೃಷ್ಟಿಯು ನಿರಂತರ ಅಭ್ಯಾಸದಿಂದ ಬರುವುದು. ಇಂಥ ನೈಜದೃಷ್ಟಿಯೆ ಪ್ರಾರ್ಥನೆಯ ಸಾರವಾಗಿದೆ. ಇದೇ ಆರಂಭದ ಬಿಂದು ಅನಾವಶ್ಯಕ ಸಂಗತಿಗಳನ್ನು ದೂರಮಾಡುವುದೇ ಮೊದಲನೆಯ ಹೆಜ್ಜೆ. ನಾನು ಅದನ್ನು ಆರಂಭದ ಸ್ಥಿತಿಯೆಂದು ಏಕೆ ಕರೆದಿರುವೆನೆಂದು ಓದುಗರು ಆಶ್ಚರ್ಯಪಡಬಹುದು. ಅದು ನಿಜವಾಗಿಯೂ ಚೇತನತೆಯ ಅವಸ್ಥೆ. ಚೇತನತೆಯು ಪ್ರತಿಯೊಂದು ಘಟ್ಟದಲ್ಲಿ ಕಂಡುಬರುವುದಾದರೂ ಇದು ಉತ್ಕೃಷ್ಟವಾದ ಚೇತನತೆಯೆಂದು ಹೇಳಬಹುದು. ಇದರ ನಂತರದ ಸ್ಥಿತಿಗಳನ್ನು ನಾನು ವರ್ಣಿಸಬಯಸುವುದಿಲ್ಲ. ಏಕೆಂದರೆ ಅವುಗಳನ್ನು ಗ್ರಹಿಸುವುದು ತುಂಬ ಕಠಿಣ. ಕೊನೆಯ ಅಂತಸ್ತಿನವರೆಗಂತೂ ದೃಷ್ಟಿಯು ನಿಲುಕಲಾರದು. ಅಲ್ಲಿ ಪೂರ್ಣ ಏಕತೆಯಿದೆ. ಪ್ರಾರ್ಥನೆಯನ್ನು ಅದಕ್ಕಿಂತ ಮುಂಚಿನ ಸ್ಥಿತಿಯಲ್ಲಿ ಮಾಡಲಾಗುವುದು. ಈ ಮೂರು ಮಜಲುಗಳನ್ನೂ ತಿಳಿವಳಿಕೆಗಾಗಿ ಪ್ರಾರಂಭ ಹಾಗು ಕೊನೆ ಎಂದು ಇಟ್ಟುಕೊಳ್ಳಬಹುದು. ಇದರಲ್ಲಿ ಮಧ್ಯದ ಸ್ಥಿತಿಯೂ ಬಂದಂತಾಯಿತು. ಹಾಗೆ ನೋಡಿದರೆ, ಎರಡೂವರೆ ಮಜಲುಗಳೆಂಬುದೇ ನಿಜ. ಏಕೆಂದರೆ ಅಲ್ಲಿಂದ ಮುಂದೆ ನಮಗೆ ಅರಿವು ಇರುವುದಿಲ್ಲ. ನಾನು ಯಾವುದನ್ನು ಆರಂಭವೆಂದು ಕರೆದಿರುವೆನೋ ಅದೇ ನಿಜವಾದ ನೆಲೆಯಾಗಿದೆ. ಅದು ಪ್ರಾರ್ಥನೆಯ ಆರಂಭದ ಸ್ಥಿತಿ ಹೇಗಾಗಬಲ್ಲುದೆಂದು ಜನರು ಗೊಂದಲದಲ್ಲಿ ಬೀಳಬಹುದು. ಈಗ, ಹೆಚ್ಚಿನ ಜ್ಞಾನಸಂಪಾದನೆಗಾಗಿ ಒಬ್ಬ ಹುಡುಗನು ಅಕ್ಷರಗಳನ್ನು ಕಲಿಯುತ್ತಿರುವನೆಂದು ತಿಳಿಯಿರಿ. ಕೆಲಕಾಲದನಂತರ ತಾನು ಸಂಪಾದಿಸಿದ ಜ್ಞಾನದಿಂದ ಅವನು ಗಹನವಾದ ಸಮಸ್ಯೆಗಳನ್ನು ಬಿಡಿಸಬಹುದು. ಆತನ ಕಣ್ಣೆದುರಿಗೆ ಇದ್ದಿತಾದರೂ ಕೆಲಕಾಲ ಅಕ್ಷರಾಭ್ಯಾಸದಲ್ಲಿಯೆ ಸಿಕ್ಕಿಬಿದ್ದ. ಕೊನೆಯ ಸ್ಥಿತಿಯೊಂದಿಗೆ ಈ ಸ್ಥಿತಿಯನ್ನು ಹೋಲಿಸಿದಾಗ ಇದೆಲ್ಲವೂ ಕ್ಷುಲ್ಲಕವೆನಿಸುವುದು. ಆದುದರಿಂದಲೇ ಅದನ್ನು ಪ್ರಾಥಮಿಕಸ್ಥಿತಿಯೆಂದು ಕರೆದಿದೆ. ಪ್ರಾರ್ಥನೆಯನ್ನು ಆರಂಭಿಸುವ ಪ್ರತಿಯೊಬ್ಬನಲ್ಲಿಯೂ ಈ ಮೊದಲಿನ ಸ್ಥಿತಿಯಿದೆ. ಆದರೆ ಧೈಯವು ದೃಷ್ಟಿಪಥದಲ್ಲಿದ್ದರೆ ಈ ಆರಂಭಾವಸ್ಥೆಯಲ್ಲಿಯೂ ಅದು ಪ್ರಭಾವವನ್ನು ಬೀರಿ ಕ್ರಮೇಣ ಅದೊಂದೇ ಬಿಂದುವು ಆತನ ಕಣ್ಣೆದುರಿನಲ್ಲಿ ಉಳಿದು ಅದರಲ್ಲಿ ನೆಲೆಸುವಂತಾಗುವುದು. ಈ ಆರಂಭಾವಸ್ಥೆಯನ್ನು ಪಡೆದ ನಂತರ ಅದನ್ನು ವಿಸ್ತರಿಸುತ್ತ ಹೋಗಬೇಕು. ವಿಸ್ತರಿಸುವುದೆಂದರೆ ಬಲೂನಿನಂತೆ ಉಬ್ಬಿಸುವುದಿಲ್ಲ. ಅದರಲ್ಲಿ ನಿಜವಾದ ಸತ್ವವನ್ನು ತುಂಬಿ ಬೆಳೆಸಬೇಕು. ಅದರಲ್ಲಿ ಪ್ರಗತಿಯಾಗತೊಡಗಿ, ಸ್ಥೂಲ ವಸ್ತುವು ಇಲ್ಲವೆಂಬ ಮಟ್ಟಿಗೆ ಸೂಕ್ಷ್ಮವಾಗುತ್ತ ನಡೆದು ಲಯವಾದಾಗ ನಾವು ಪದಾರ್ಥಗಳ ಸೂಕ್ಷ್ಮ ಅಸ್ತಿತ್ವದ ಜ್ಞಾನವಲಯದಲ್ಲಿ ಪ್ರವೇಶಿಸಿರುವೆವೆಂದು ತಿಳಿಯಬೇಕು.
ಮೂಲದಿಂದ ಧಾರೆಯ ನಾನಾರೂಪಗಳು ಪ್ರಕಟವಾದುವು. ಇವುಗಳ ಅವತರಣವು ಉದ್ದೇಶರಹಿತವಾಗಿರಲಿಲ್ಲ. ವಾಸ್ತವವಾಗಿ ಇವು ಶಕ್ತಿಗಳಾಗಿದ್ದು ವಿವಿಧ ರೀತಿಯಲ್ಲಿ ಕಾರ್ಯೋನ್ಮುಖವಾಗಿ ಅಭೀಷ್ಟ ಪರಿಣಾಮವನ್ನುಂಟು ಮಾಡಿದುವು. ಹೀಗೆ, ಮೂಲದಿಂದ ಧಾರೆಗಳ ರೂಪದಲ್ಲಿ ಪ್ರಕಟವಾದ ಶಕ್ತಿಗಳು ತಮ್ಮ ತಮ್ಮ ಕಾರ್ಯಗಳನ್ನು ಪ್ರಕಾಶ ಪಡಿಸಿದುವು. ಒಂದು ಮಗುವಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಜನಿಸಿದಾಗ ಅದಕ್ಕೆ ಸರಿದಾಡಲೂ ಬರುತ್ತಿರಲಿಲ್ಲ. ಆದರೆ ಕಾಲ ಕಳೆದಂತೆಲ್ಲ ಅದು ಎದ್ದು ಕೂಡತೊಡಗಿತು: ನಿಲ್ಲಲು ಕಲಿತಿತು; ಓಡಾಡ ತೊಡಗಿತು. ಮಾತನಾಡಲು ಮೊದಲುಮಾಡಿತು ಅರ್ಥಾತ್ ಈ ಎಲ್ಲ ಶಕ್ತಿಗಳು ಅದರಲ್ಲಿ ಇದ್ದುವು. ಕ್ರಮೇಣ ಬೆಳೆಯುತ್ತ ಬಂದುವು. ಕೊನೆಗೆ ಯೌವನವು ಪ್ರಾಪ್ತವಾಗಿ ಮನುಷ್ಯನ ಪೂರ್ಣ ಬೆಳೆವಣಿಗೆ ಬಂದೇ ಬಿಟ್ಟಿತು. ಮಗುವಿನ ರಚನೆಗೆ ಕಾರಣವಾದ ಎಲ್ಲ ಘಟಕಗಳೂ ಬೇರೆಬೇರೆ ರೂಪತಾಳಿ ವಿಕಾಸ ಹೊಂದಿದ್ದರೂ ಇವೆಲ್ಲದರ ಮೂಲ ಮಾತ್ರ ಅದರ ಪಾಲಿಗೆ ಬಂದ ಸಣ್ಣ ಬಿಂದುವೇ. ಅದರೊಂದಿಗೆ ಆವರಣಗಳೆಂದು ಕರೆಯಲಾದ ಅನೇಕ ವಸ್ತುಗಳು ಕಲೆಯುತ್ತ ಹೋದುವು. ತಾಯಿಯ, ಸಂಸ್ಕಾರಗಳು ಹಾಗು ಅವುಗಳ ಪರಿಣಾಮ, ತಂದೆಯ ವಿಚಾರಗಳ ಪ್ರಭಾವ, ಶಿಕ್ಷಣ ಪದ್ದತಿ, ಮತ್ತು ಸಮಾಜದಲ್ಲಿಯ ಕೆಲಸಗಳನ್ನು ಪ್ರಾರಂಭಿಸಿ ಇತರ ವ್ಯಕ್ತಿಗಳ ಪ್ರಭಾವ – ಇವೆಲ್ಲ ತಮ್ಮ ತಮ್ಮ ಕೆಲಸಗಳನ್ನು ಆರಂಭಿಸಿ ಉಪರಿಸಂಸ್ಕಾರಗಳನ್ನು ಮೂಡಿಸಿದುವು. ಮತ್ತೆ ಈ ಸಂಸ್ಕಾರಗಳೂ ತಮ್ಮ ಕ್ರಿಯೆಗಳನ್ನು ಆರಂಭಿಸಿದುವು. ಇದನ್ನು ಎಷ್ಟೆಂದು ಹೇಳುವುದು ! ಹೀಗೆ ಕ್ರಿಯೆಗಳು ನಡೆಯುತ್ತಲೇ ಹೋದುವು. ಕೊನೆಗೆ, ಅವನಿಗೆ ತಾನು ಇಷ್ಟೆಲ್ಲ ಕ್ರಿಯೆಗಳ ಪರಿಣಾಮದಿಂದ ಬಂದಿರುವೆನೆಂಬ ಅರಿವುಕೂಡ ಸ್ವಲ್ಪವೂ ಉಳಿಯ ಲಿಲ್ಲ. ಈ ಪ್ರಭಾವಗಳೆಲ್ಲ ಸ್ಥೂಲತೆಯ ರೂಪ ಹೊಂದಿದುವು. ಈಗ, ಈ ಸ್ಥೂಲತೆಯಿಂದ ದೂರವಾಗಬೇಕೆಂದರೂ ಸಾಧ್ಯವಾಗಲೊಲ್ಲದು. ಬರಬರುತ್ತ ಸ್ಥಿತಿ ಬದಲಾಯಿತು. ಆತನು ಜಗತ್ತನ್ನು ನೋಡತೊಡಗಿದ. ಜನಜೀವನ, ರೀತಿ – ನೀತಿಗಳ ಪರಿಣಾಮವಾಯಿತು. ಪರಿಸರವು ಪ್ರಭಾವ ಬೀರಿತು. ಚಿಂತೆಗೊಳಗಾದನು. ಈ ರೀತಿ ಅವನ ರೂಪ ಇನ್ನೂ ಬದಲಾಯಿತು. ಆತನ ಅಸ್ತಿತ್ವವೆಲ್ಲ ಬಣ್ಣಗೊಂಡು ಸದೃಶ ಕಣಗಳನ್ನು ಸೆಳೆಯತೊಡಗಿತು. ಆತನ ಮೂಲರೂಪವು ಏನಿದ್ದಿತು – ಈಗ ಏನಾಯಿತೆಂಬುದನ್ನು ಸ್ವಲ್ಪ ಯೋಚಿಸಿ, ಆ ಚಿಕ್ಕ ಬಿಂದು ಈಗ ಕಣ್ಣಿಗೆ ಸಹ ಕಾಣದಂತಾಗಿದೆ. ಇಷ್ಟೇ ಅಲ್ಲ, ಆತನು ತನ್ನ ಸ್ವಂತದ ವಿಚಾರಗಳಿಂದ ಈಯೆಲ್ಲ ಘಟಕಗಳಿಗೆ ಬಲ ಕೊಡುತ್ತ ನಡೆದನು. ಇದರ ಪರಿಣಾಮವಾಗಿ ಕಾರ್ಯಗಳು ತ್ವರಿತಗತಿಯಿಂದ ನಡೆದುವು. ನಿಸರ್ಗದ ಬಲವೂ ದೊರೆಯಹತ್ತಿತು. ಹಿಂದೆ ಹೇಳಿದ ಹಾಗೆ, ಬೆಟ್ಟದ ತುದಿಯಿಂದ ಬಿದ್ದ ನೀರಿನ ಕೆಲವು ಬಿಂದುಗಳಿಗೆ ಬೇರೆ ಕಡೆಯ ನೀರೂ ಕರಗಿದ ಹಿಮವೂ ಕೂಡಿಕೊಂಡು ಅದಕ್ಕೆ ಚಿಕ್ಕ ಪ್ರವಾಹದ ರೂಪಕೊಟ್ಟು ನದಿಯನ್ನಾಗಿ ಮಾಡಿ ಕೊನೆಗೆ ‘ಸಮುದ್ರ’ ವೆನಿಸಿದಂತೆ ಮಗು ಬೆಳೆದು ಮನುಷ್ಯನಾದದ್ದು. ನದಿಯಲ್ಲಿ ಕಂಡುಬರುವ ತರಂಗಗಳ ಮೂಲರೂಪವು ದಾರಿಯಲ್ಲಿ ಅದಕ್ಕೆ ಬೆರೆತ ಕರ್ಮಫಲಗಳ ಪ್ರವಾಹಗಳ ಕಾರ್ಯವೇ ಹೊರತು ಮತ್ತೇನೂ ಅಲ್ಲ. ಇವೇ ತರಂಗಗಳನ್ನೇ ಜನರು ಆನಂದ ಲಹರಿಗಳೆಂದು ಭಾವಿಸುವರು. ಈ ಸ್ಥಿತಿಯು ಮನುಷ್ಯನಿಗೆ ಯೌವನದಲ್ಲಿ ಬಹಳ ಗಾಢ- ವಾಗಿರುವುದು. ಆಗ ಆತನು ಬಾಹ್ಯಪ್ರಭಾವಗಳಿಂದ ತುಂಬ ದೂಷಿತನಾಗಿರುತ್ತಾನೆ. ಅನೇಕ ಕ್ರಿಯೆಗಳ ಪರಿಣಾಮರೂಪವಾದ ಆತನ ಅವಸ್ಥೆಯು ಸಮುದ್ರದ ಅವಸ್ಥೆ ಯ೦ತೆಯೆ ಎಂದು ಹೇಳಬಹುದು.
ಒಂದು ಮುಖ್ಯ ಪ್ರಶ್ನೆ ಉಳಿಯಿತು : ಒಂದು ಪದಾರ್ಥವನ್ನು ಸತತ ವಾಗಿ ನೋಡುತ್ತಿರಲು ಅದು ನಮ್ಮ ದೃಷ್ಟಿಯಿಂದ ಸರಿದುಹೋಗುವುದು, ಸ್ವಲ್ಪ ಹೊತ್ತು ಅದರ ಆಕಾರ ಮಾತ್ರ ಉಳಿದು ಕೊನೆಗೆ ಅದೂ ಮಾಯವಾಗು ವುದು. ಹೀಗೇಕೆ? ಕಾರಣವಿಷ್ಟೆ : ಘನಪದಾರ್ಥದಲ್ಲಿ ಘನವಾದುದನ್ನೇ ನೋಡುವ ಸಾಮರ್ಥ್ಯವಿದೆ. ಅದರಾಚೆಗಿರುವುದನ್ನು ನೋಡಬೇಕಾದರೆ ಅದಕ್ಕಿಂತ ಸೂಕ್ಷ್ಮಶಕ್ತಿಯೆ ಬೇಕು. ಮುಂದು ಮುಂದಕ್ಕೆ ಹೋದಂತೆ ಕೊನೆಗೆ ನೋಡುವ ಶಕ್ತಿಯೇ ಇಲ್ಲದಂತಾಗುವವರೆಗೂ ಇದೆ ತತ್ತ್ವ ಅನ್ವಯಿಸುವುದು. ಇಷ್ಟಾದರೂ ಅದರಾಚೆಗೆ ನೋಡತಕ್ಕ ವಸ್ತು ಉಳಿದೇ ಉಳಿಯುವುದು. ಅದು ಚೇತನತೆಯ ರೂಪದಲ್ಲಿ ಕಾಣಿಸಿಕೊಳ್ಳುವುದು. ಮುಂದೆ ಇದೂ ಇಲ್ಲದಂತಾಗಿ ಅಸ್ತಿತ್ವದ ಅರಿವು ಕೂಡ ಅಪ್ಪಣೆ ತೆಗೆದು ಕೊಳ್ಳುವುದು. ಆಗ ಏನಾಗುವುದು? ಅದೇ – ನಾಸ್ತಿತ್ವ, ಲಯಾವಸ್ಥೆ. ಅದೇ ಮೂಲಸ್ಥಿತಿ, ನಿಜವಾಗಿಯೂ ಇದನ್ನು ಅನುಭವಿಸುವವರೆಗೆ ಇದು ತಿಳಿಯುವುದು ಕಷ್ಟ. ಅಷ್ಟೇ ಅಲ್ಲ, ಆ ಅವಸ್ಥೆಯಲ್ಲಿ ಸಂಪೂರ್ಣ ಮುಳುಗಿ ಹೋಗುವವರೆಗೆ ಇದು ತಿಳಿಯುವುದಿಲ್ಲ. ಆದರೆ ಈ ನಾಸ್ತಿತ್ವವೂ ಕೊನೆಯದಲ್ಲ. ಅದಕ್ಕಿಂತ ಮುಂದೆ ಹೋಗಬೇಕು.
ಇನ್ನೂ ಒಂದು ಪ್ರಶ್ನೆ. ಧಾರೆಗಳು ಮೂಲದಿಂದ ಅವತರಣಮಾಡುತ್ತ ಬಂದಂತೆಲ್ಲ ಸ್ಥೂಲವಾಗುತ್ತ ಏಕೆ ನಡೆದುವು? ಇದು ತುಂಬ ಜಟಿಲವಾದ ಪ್ರಮೇಯ. ಒಬ್ಬ ಮನುಷ್ಯನು ಬೆಟ್ಟದ ತುದಿಯಿಂದ ಕೆಳಕ್ಕೆ ಹಾರಿದಾಗ ನಡುವೆಯೆ ಅರೆಜೀವವೇಕಾಗುವುದು? ಪೃಥ್ವಿಯ ಆಕರ್ಷಣದಿಂದ ಎಂದು ಸಾಮಾನ್ಯ ತಿಳಿವಳಿಕೆ. ಆದರೆ ನಾನು ಹೇಳುವುದು ಹೀಗೆ : ಮೇಲಿನಿಂದ ಕೆಳಗಡೆ ಬೀಳಬೇಕೆನ್ನುವ ವಿಚಾರ ಬರುತ್ತಲೇ ಅದರ ಕಾವು ಕೆಳಗಡೆ ಇಳಿಯ ತೊಡಗಿ ಜಿಗಿತದ ಧಕ್ಕೆಯಿಂದ ಶರೀರದ ಹೊರಗೆ ಹೊರಡಲಾರಂಭಿಸುವುದು. ಇದೇ ಅವಸ್ಥೆ ಕೆಳಗಿಳಿದ ಧಾರೆಗಳದು. ಸ್ಥೂಲತೆಯೆಂದರೆ ಘನತ್ವ, ಅದರಲ್ಲಿ ಜೀವನವಿರುವುದಿಲ್ಲ. ದೈವೀ ಪ್ರ ವಾ ಹ ದಲ್ಲಿ ಜೀವನವಿರುವುದಿಲ್ಲವೆಂಬ ಮಾತನ್ನು ಜನರು ಒಪ್ಪಲಾರರು. ಖನಿಜಗಳು, ಸಸ್ಯಗಳು ಹಾಗು ಪ್ರಾಣಿವರ್ಗ ಇವೆಲ್ಲ ದೈವೀಸೃಷ್ಟಿಯೆ ಆಗಿದ್ದರೂ ಎಲ್ಲವುಗಳಲ್ಲಿ ಜೀವವಿರುವುದಿಲ್ಲ. ಒಂದು ವೇಳೆ ಇದೆಯೆಂದು ಒಪ್ಪಿಕೊಂಡರೂ ಅದು ಸುಪ್ತಾವಸ್ಥೆಯಲ್ಲಿದೆ. ಇದೇ ಮಾತು ಧಾರೆಗಳಿಗೂ ಅನ್ವಯಿಸುವುದು. ಆದರೆ ಮನುಷ್ಯನು ಅವುಗಳೊಂದಿಗೆ ತನ್ನ ಕರ್ಮಗಳನ್ನು ಜೋಡಿಸುವು ದರಿ೦ದ ಅವುಗಳಲ್ಲಿ ಸಾರೂಪ್ಯ ಹೊಂದುತ್ತಾನೆ.
ಪ್ರಾರ್ಥನೆಯಲ್ಲಿ ಅಗತ್ಯವಾದ ತತ್ತ್ವವೆಂದು ಸಿದ್ಧವಾದಮೇಲೆ ಅದನ್ನು ಯಾವ ಶಬ್ದಗಳಲ್ಲಿ ಮಾಡಬೇಕೆಂಬುದನ್ನು ತಿಳಿಯುವುದು ಅವಶ್ಯಕ. ಈ ಕೆಳಗಿನ ಚಿಕ್ಕ ಪ್ರಾರ್ಥನೆ ಅಭ್ಯಾಸಿಗೆ ಅತ್ಯಾವಶ್ಯಕವೆಂದು ನನ್ನ ಭಾವನೆ. ಇನ್ನೂ ಬೇರೆ ಅನೇಕ ರೀತಿಯಿಂದ ಪ್ರಾರ್ಥನೆ ಮಾಡಬಹುದು. ಆದರೆ ಈ ಸಂಕ್ಷೇಪ ಪ್ರಾರ್ಥನೆಯೆ ನನಗೆ ಇಷ್ಟ :
“ಓ ನಾಥ! ನೀನೇ ಮಾನವಜೀವನದ ಗುರಿ.
ನಮ್ಮ ಇಚ್ಛೆಗಳು ಆನ್ನೋನ್ನತಿಯಲ್ಲಿ ಬಾಧಕಗಳಾಗಿವೆ.
ನೀನೇ ನಮ್ಮೆಲ್ಲರ ಏಕಮಾತ್ರ ಸ್ವಾಮಿ ಹಾಗು ಇಷ್ಟದೈವ,
ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿಯು ಅಸಂಭವ.”
ಸೃಷ್ಟಿಗೆ ಮೊದಲು ಎಲ್ಲೆಲ್ಲೂ ಅತ್ಯಂತ ಪ್ರಶಾಂತಸ್ಥಿತಿಯಿದ್ದಿತು. `ಸೃಷ್ಟಿಯು ಈಗಿರುವ ರೂಪದಲ್ಲಿ ಪ್ರಕಟವಾದಾಗ ಅದರ ಕೇಂದ್ರ ಬಿಂದುವು ಎಲ್ಲರ ಹೃದಯದಲ್ಲಿಯೂ ಪೂರ್ಣವಾಗಿ ನೆಲೆಗೊಂಡಿದ್ದಿತು. ಅನಂತದ ಒಂದು ಭಾಗವಾಗಿದ್ದ ಈ ಬಿಂದುವು ನಮ್ಮ ದೃಷ್ಟಿಯನ್ನು ಮೂಲದ ಕಡೆಗೆ ಹೊರಳಿಸಿತು. ಪ್ರಾರ್ಥನೆಯಲ್ಲಿ ನಾವು ಆ ಮೂಲವನ್ನು ತಲುಪಲು ಯತ್ನಿಸುವೆವು. ನಾವು ನಮ್ಮೊಳಗೆ ಅಂಥ ಸ್ಥಿತಿಯನ್ನು ಪಡೆದಾಗಲೇ ಅದು ಸಾಧ್ಯವಾಗುವುದು. ಅದಕ್ಕೆ ಅಭ್ಯಾಸಬೇಕು. ಸರಳವೂ ಶಾಂತವೂ ಆದ ಆ ದೈವೀ ಇಚ್ಛೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದರಿಂದ ಆ ಅವಸ್ಥೆಯನ್ನು ಹೊಂದಬಹುದು. ತೋರಿಕೆಗೆ ಇದು ಬಹಳ ಕಠಿಣವೆಂದು ಕಂಡರೂ ವಾಸ್ತವವಾಗಿ ಹಾಗಿಲ್ಲ. ಆದರೆ ಯಾರಿಗೆ? ಅದರೊಳಗೆ ನುಗ್ಗಲು ಹಂಬಲಿಸುವವರಿಗೆ ಮಾತ್ರ. ಮನುಷ್ಯನು ತನ್ನಲ್ಲಿ ಈ ಹಂಬಲವನ್ನು ಹುಟ್ಟಿಸಿಕೊಂಡಾಗ ಆತನು ಪ್ರಾರ್ಥನೆಯ ಸ್ಥಿತಿಯಲ್ಲಿ ಇರುವನು. ಯಾರಾದರೂ, ಒಂದು ಕ್ಷಣಕಾಲವೇ ಏಕಾಗಲೊಲ್ಲದು, ಈ ಸ್ಥಿತಿಗೆ ಬಂದು ಮುಟ್ಟಿದರೆ ಆತನ ಪ್ರಾರ್ಥನೆಯು ಸ್ವೀಕೃತವಾಗುವುದು. ಇದನ್ನು ಸಾಧಿಸಲು ದೈನಂದಿನ ಅಭ್ಯಾಸದ ಅಗತ್ಯವಿದೆ.