ಜನರಲ್ಲಿ ಪ್ರೇಮ ಹಾಗು ಪವಿತ್ರ ಭಾವನೆಗಳನ್ನು ಮೂಡಿಸುವ ಹಾಗೆ ನಿಮ್ಮ ಜೀವನ ಮತ್ತು ವ್ಯವಹಾರವನ್ನು ರೂಪಿಸಿಕೊಳ್ಳಿರಿ.
ನಮ್ಮ ವಿಚಾರಗಳಿಂದ ನಮಗೆ ಬಲ ದೊರೆಯುತ್ತದೆ. ದೇವ ನಿರ್ಮಿತ ಹಾಗು ಮನಷ್ಯ ನಿರ್ಮಿತ ವಸ್ತುಗಳಲ್ಲಿ ಪೂರ್ಣ ಸಾಮರಸ್ಯ ಉಂಟಾದಾಗಲೇ ಇದು ಸಾಧ್ಯವಾಗುವುದು. ವ್ಯವಹಾರವೆಂಬ ಶಬ್ದಕ್ಕೆ ಬಹಳ ವ್ಯಾಪಕವಾದ ಅರ್ಥವಿದೆ. ಕೇಂದ್ರದ ಅನಂತರ ಬರುವ ಮಂಡಲವನ್ನೆಲ್ಲ ಅದು ವ್ಯಾಪಿಸಿದೆ. ಈಶ್ವರನ ವ್ಯವಹಾರದಲ್ಲಿ ಒಂದು ಅರ್ಥದಿಂದ ಸಮಾನತೆಯಿರುವುದು. ಉದಾಹರಣೆಗಾಗಿ, ಆತನು ಎಲ್ಲರಿಗೂ ಸಮಾನವಾಗಿ ಬೆಳಕನ್ನು ಕೊಡುವನು. ಎಲ್ಲರೂ ಉಸಿರಾಡಿಸಲು ಗಾಳಿಯನ್ನು ನಿರ್ಮಿಸಿರುವನು. ಇದೇ ರೀತಿ ನಮ್ಮ ಜೀವನವನ್ನು ಸ್ಥಿರಗೊಳಿಸಿ ಪೋಷಿಸಲು ಅನೇಕ ವಸ್ತುಗಳನ್ನು ಸೃಷ್ಟಿಸಿರುವನು. ಇದನ್ನೇ ವ್ಯವಹಾರ ಸಮಾನತೆಯೆಂದು ಹೇಳುವುದು.
ಇನ್ನೂ ಹಲವು ವಸ್ತುಗಳಿವೆ. ಅವು ಬೇರೆ ರೂಪದಲ್ಲಿ ಪ್ರಕಟವಾಗಿ ಬೇರೆ ವ್ಯವಹಾರವನ್ನು ಹೊಂದುವುವು. ಮಣ್ಣಿನ ಒಂದು ಮುದ್ದೆಯನ್ನೂ ಅದರಿಂದ ಮಾಡಿದ ಒಂದು ಆಟಿಕೆಯ ವಸ್ತುವನ್ನೂ ನಾವು ಎಷ್ಟೋ ವ್ಯತ್ಯಾಸದ ದೃಷ್ಟಿಯಿಂದ ನೋಡುತ್ತೇವೆ. ಮಣ್ಣಿನ ಮುದ್ದೆಗಿಂತಲೂ ಅದರಿಂದ ಮಾಡಿದ ಆಟಿಕೆಯನ್ನು ಹೆಚ್ಚು ಮೆಚ್ಚುವವು. ಅದರಂತೆಯೆ ಮನುಷ್ಯನು ತನ್ನನ್ನು ಸರಿಯಾಗಿ ರೂಪಿಸಿಕೊಂಡು ಭಗವಂತನ ಮುಂದೆ ಹೋದರೆ ಭಗವಂತನು ಬೇರೆ ಬೇರೆ ದೃಷ್ಟಿಯಿಂದ ಆತನನ್ನು ನೋಡುವನು. ಆದುದರಿಂದ ನಾವು ಭಗವಂತನ ದೃಷ್ಟಿಯನ್ನು ಆಕರ್ಷಿಸುವಂತೆ ನಮ್ಮನ್ನು ರೂಪಿಸಿಕೊಳ್ಳಬೇಕು. ಈ ದೈವೀ ವ್ಯವಹಾರದ ಅನುಕರಣೆಮಾಡಿ ನಮ್ಮ ನಿತ್ಯ ಜೀವನದಲ್ಲಿ ಆಚರಿಸಬೇಕು.
ದೈವೀ ವ್ಯವಹಾರಗಳೂ ವಿವಿಧ ರೀತಿಯಲ್ಲಿ ಪ್ರಕಟವಾಗುತ್ತವೆ. ಪದಾರ್ಥಗಳಲ್ಲಿ ಕಾಣುವ ಬೇರೆ ಬೇರೆ ಬಣ್ಣಗಳು ಇದಕ್ಕೆ ಒಂದು ಉದಾಹರಣೆ. ತೋಟದಲ್ಲಿ ಒಂದೇ ಕಡೆಗೆ ಅರಳುವ ಹೂಗಳಲ್ಲಿ ಒಂದು ಕೆಂಪಾಗಿದ್ದರೆ ಇನ್ನೊಂದು ಹಳದಿಯಾಗಿರುವುದು. ನಿಸರ್ಗದ ನಾನಾ ವರ್ಣಗಳ ವಸ್ತುಗಳಲ್ಲಿ ಪ್ರತಿಯೊಂದು ವಸ್ತುವೂ ಅದರದರ ಯೋಗ್ಯತೆಗೆ ತಕ್ಕಂತೆ ಪಾಲುಗೊಳ್ಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದೊಂದು ವಸ್ತುವಿನ ವಿಷಯದಲ್ಲಿ ಅದರ ವ್ಯವಹಾರವು ಬೇರೆ ಬೇರೆಯಾಗಿರುತ್ತದೆ. ಇದನ್ನನುಲಕ್ಷಿಸಿ ನಾವಾದರೂ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರ ಹಕ್ಕು ಬಾಧ್ಯತೆಗಳನ್ನೂ ಅವಶ್ಯಕತೆಗಳನ್ನೂ ಗಮನಕ್ಕೆ ತಂದುಕೊಂಡು ಅವರೊಂದಿಗೆ ವ್ಯವಹರಿಸುತ್ತ ದೈವೀ ವ್ಯವಹಾರಕ್ಕೆ ಸಮೀಪವಾಗುತ್ತ ಹೋಗಬೇಕು. ಇದರಿಂದ ನಮ್ಮ ಜೀವನದಲ್ಲಿ ಒಂದು ಪ್ರಭಾವವುಂಟಾಗಿ ಅದು ಸಹಜವಾಗಿಯೇ ಜನರನ್ನು ಆಕರ್ಷಿಸುವುದು. ಅವರ ಹೃದಯಗಳಲ್ಲಿ ಪ್ರೇಮಭಾವನೆ ಮೂಡಿ ನಮ್ಮೊಡನೆ ಯೋಗ್ಯರೀತಿಯಿಂದ ವ್ಯವಹರಿಸ ತೊಡಗುವರು.