ಹಲವಾರು ಬಗೆಯ ಧ್ಯಾನಗಳನ್ನು ವಿಧಿಸುವ ಹಲವಾರು ಶಿಕ್ಷಕರು ಇದ್ದಾರೆ. ಐದು ನಿಮಿಷಗಳ ಅತೀಂದ್ರಿಯ ಧ್ಯಾನದಿಂದ, ನಾಲ್ಕು ಅಥವಾ ಹೆಚ್ಚು ಗಂಟೆಗಳ ಕೆಲವು ಆಯ್ದ ಶಬ್ದಗಳ ಮಾನಸಿಕ ಪಠಣವನ್ನು ಈ ವಿಧಾನಗಳು ಒಳಗೊಂಡಿವೆ. ಮುಗ್ಧ ಜನರು ಒಂದು ಕಡೆ ಈ ಅಭ್ಯಾಸಗಳನ್ನು ಕಣ್ಣು ಮುಚ್ಚಿ ಅನುಸರಿಸುವದಾದರೆ, ಚತುರ ಶಿಕ್ಷಕನು ತನ್ನ ನಿಯಂತ್ರಣದಲ್ಲಿ ಉಳಿಯುವ ಹಾಗೆ ಬೇಕಾದ ಸೂಚನೆಗಳನ್ನು ಅವರ ಮೆದುಳಿನಲ್ಲಿ ಎಲ್ಲ ಕಾಲಕ್ಕೂ ತುಂಬಲು ಪ್ರಯತ್ನಿಸುತ್ತಿರುತ್ತಾನೆ. ಈ ಸೂಚನೆಗಳೂ ಸಹ ಪ್ರಶಂಸೆಯಿಂದ ಬೆದರಿಕೆಯವರೆಗೆ ಪಸರಿಸಿವೆ. ಸಾಧಕನು ಅರಸುವ ಆದರ್ಶಕ್ಕೆ ವಿರುದ್ಧವಾದ ಸಂಪೂರ್ಣ ದಾಸ್ಯತ್ವವೇ ಇದರ ಅಂತಿಮ ಪರಿಣಾಮವಾಗಿದೆ.

ಕೆಲವು ತತ್ತ್ವಜ್ಞಾನಿಗಳು ಹೇಳುವ ಹಾಗೆ, ಸಂಪೂರ್ಣ ಸ್ವಾತಂತ್ರ್ಯವು ಕಷ್ಟಕ್ಕೊಳಗಾದ ಮನುಷ್ಯರ, ಕೇವಲ ಕಾಲ್ಪನಿಕ ಭ್ರಾಂತಿ ಎನ್ನುವದರಲ್ಲಿ ಸಂದೇಹವಿಲ್ಲ. ಒಟ್ಟಾರೆ, ಮನುಷ್ಯನು ದಾಸನಾಗಿದ್ದಾನೆ. ಅವನು ಅನ್ಯರ ದಾಸನಾಗಿರಬಹುದು ಅಥವಾ ಇಚ್ಛೆಗಳ ಹಾಗೂ ಕಲ್ಪನೆಗಳ ದಾಸನಾಗಿರಬಹುದು. ಆದಾಗ್ಯೂ ಮನುಷ್ಯನಿಗೆ ತನ್ನ ನೈಜ ದಾಸ್ಯತ್ವದ ಅರಿವು, ಸಂಪೂರ್ಣ ಮುಕ್ತವಾದ ಗುರುವನ್ನು ಪಡೆದಾಗಲೇ ಸಾಧ್ಯವಾಗುವದು. ಈ ಸಿದ್ದಿ ಅವನನ್ನು ಬೇರೆ ಎಲ್ಲ ವಿಧದ ದಾಸ್ಯತ್ವದಿಂದ ಮುಕ್ತಗೊಳಿಸುವದು. ನಿಜಕ್ಕೂ ತದನಂತರವೇ ಮನುಷ್ಯನು ಎಲ್ಲ ತರಹದ ಬಂಧನಗಳಿಂದ ಮುಕ್ತಗೊಳ್ಳುವನು. ಹಾಗೂ ಇದರ ನಂತರ ಉಳಿಯುವದೆಲ್ಲವೂ ಕೇವಲ ಸಹಜಸ್ಥಿತಿಯಾಗಿರುವದು.

ಅದಕ್ಕಾಗಿ, ಗುರಿಯ ಬಗ್ಗೆ ಸ್ಪಷ್ಟವಾದ ಧೋರಣೆ ಇರುವದು, ಈ ಗುರಿಯನ್ನು ಮುಟ್ಟಿದ ಗುರುವನ್ನು ಆರಿಸಿಕೊಳ್ಳುವದು, ಹಾಗೂ ಗುರಿಯನ್ನು ಮುಟ್ಟಲು ಇಂಥ ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನಾಭ್ಯಾಸವನ್ನು ಮಾಡುವದು ಆವಶ್ಯಕವಾಗಿದೆ. ಇಲ್ಲದೇ ಹೋದಲ್ಲಿ, ನಿರ್ದಿಷ್ಟವಾದ ಗುರಿ ಇಲ್ಲದೆ ಹಾಗೂ ಅದಕ್ಕೆ ಯೋಗ್ಯ ಮಾರ್ಗದರ್ಶಕನಿಲ್ಲದೆ, ಗೊತ್ತಗುರಿ ಇಲ್ಲದ ಯಾವದೇ ತರಹದ ಧ್ಯಾನಮಾಡುವದು ಒಬ್ಬ ಮನುಷ್ಯನನ್ನು ನಿಶ್ಚಿತವಾಗಿಯೂ ಒಂದು ಹುಚ್ಚರ ಆಸ್ಪತ್ರೆಗೆ ಆಗಲಿ ಅಥವಾ ಭಯಾನಕ ಹಾಗೂ ಕಾಲ್ಪನಿಕ ಜಗತ್ತಿನೆಡೆಗೆ ಆಗಲಿ ಕೊಂಡೊಯ್ಯುವದು.

ಯಾಂತ್ರಿಕವಾಗಿ ಆರಿಸಿದ ಕೆಲವು ಶಬ್ದಗಳನ್ನು ಪಠಿಸುವದನ್ನು ಧ್ಯಾನ ವೆನ್ನಲಾಗುವದಿಲ್ಲ ಅನ್ನುವದು ನಿಜ. ಕೆಲವು ಆಯ್ದ ಚಿತ್ರಪಟಗಳ ಮೇಲೆ ಅಥವಾ ಮೂರ್ತಿಗಳ ಮೇಲೆ, ಏಕಾಗ್ರತೆಯ ಅಭ್ಯಾಸವೂ ಧ್ಯಾನವೆನಿಸುವದಿಲ್ಲ. ಧ್ಯಾನವೆಂಬುದು ಒಂದು ಪವಿತ್ರ ವಿಚಾರದ ಮೇಲೆ ದೀರ್ಘಕಾಲ ಆಸಕ್ತಿ ಹಾಗೂ ಪ್ರೇಮದಿಂದ ಚಿಂತನ ಮಾಡುವದು. ಇಂಥ ಧ್ಯಾನಾಭ್ಯಾಸ ಮಾತ್ರ ಆ ಪವಿತ್ರ ವಿಚಾರವನ್ನು ಮನಸ್ಸಿನ ಸುಪ್ತ ಚೈತನ್ಯದ ಅಥವಾ ಪ್ರಜ್ಞಾಹೀನ ಸ್ಥಿತಿಯ ಆಳಕ್ಕೆ ಕರೆದೊಯ್ಯುವದು. ಆದ್ದರಿಂದ ನಮ್ಮ ಹೃದಯಾಂತರಾಳಕ್ಕೆ ನಮ್ಮನ್ನು ಕರೆದೊಯ್ಯುವ ವಿಚಾರದ ಮೇಲೆ ಧ್ಯಾನಮಾಡುವ ಅತ್ಯುನ್ನತ ಆದರ್ಶವನ್ನು ಹೊಂದುವದು ಅತ್ಯಾವಶ್ಯಕವಾಗಿದೆ.

ಅತ್ಯುಚ್ಚ ಫಲಿತಾಂಶ ಪ್ರಾಪ್ತಿಗಾಗಿ ಪವಿತ್ರ ವಿಚಾರದ ಮೇಲೆ ಧ್ಯಾನಮಾಡುವ ಅತ್ಯುತ್ತಮ ಅವಧಿ ಒಂದು ತಾಸಿನದಾಗಿದೆ. ಮನಸ್ಸಿನ ಚಂಚಲ ಸ್ಥಿತಿಯಿಂದಾಗಿ, ದೈವೀ ವಿಚಾರದ ನಿರಂತರ ಹರಿಯುವಿಕೆ ಸ್ಥಿರ ಸ್ಥಿತಿಗೆ ಬರಲು ಒಬ್ಬ ಸಾಮಾನ್ಯ ಮನುಷ್ಯನಿಗೆ ಸಾಧಾರಣವಾಗಿ ಹತ್ತು ಹದಿನೈದು ನಿಮಿಷಗಳು ಬೇಕಾಗುತ್ತವೆ. ಅದಕ್ಕಾಗಿ ಕೇವಲ ಹತ್ತು ಹದಿನೈದು ನಿಮಿಷಗಳ ಧ್ಯಾನ ನಿರುಪಯೋಗಿಯಾಗಿದೆ. ನಿಜ ಹೇಳಬೇಕಾದರೆ, ಒಬ್ಬ ಸಮರ್ಥ ಹಾಗೂ ಸುಯೋಗ್ಯ ಮಾರ್ಗದರ್ಶಕನಿದ್ದುದಾದರೆ ಹಾಗೂ ಆತನು ದೈವೀ ಕಂಪನಗಳನ್ನು ಪಸರಿಸಬಲ್ಲನಾದರೆ ಅದೊಂದು ಬೇರೆ ವಿಷಯವೇ ಆಗಿದೆ. ಅಂಥ ಸಮಯದಲ್ಲಿ ಅಭ್ಯಾಸಿಯ ಬಹಳಷ್ಟು ಪ್ರಯತ್ನ ಅಥವಾ ದುಡಿತ ಕಡಿಮೆಯಾಗುವದು. ಹಾಗೂ ಸುದೈವದಿಂದ ನಾವು ಒಬ್ಬ ಪರಿಪೂರ್ಣ ಮಾರ್ಗದರ್ಶಕ ಅಥವಾ ಸದ್ಗುರುವನ್ನು ಪಡೆದುದಾದಲ್ಲಿ, ಅವನ ಜೊತೆ ತೀವ್ರ ಪ್ರೇಮ ಹಾಗೂ ಶ್ರದ್ದೆಯಿಂದ ಅಂಟಿಕೊಂಡುದಾದರೆ, ನಮ್ಮ ಧ್ಯೇಯವು ಕೂಡಲೇ ಸಿದ್ಧಿಸುವದು. ಸದ್ಗುರು ಅಂತಿಮ ಸ್ಥಿತಿಯೊಂದಿಗೆ ಐಕ್ಯನಾಗಿದ್ದುದರಿಂದ, ಸದ್ಗುರುವಿನೊಂದಿಗಿನ ನಮ್ಮ ಜೋಡಣೆ ಸ್ವಾಭಾವಿಕವಾಗಿ ಆ ಸ್ಥಿತಿಯೊಂದಿಗೆ ಒಂದಾಗುವದು.

ಪ್ರಭಾವಶಾಲಿ ಧ್ಯಾನ ದ್ವಿವಿಧ ಫಲ ನೀಡಬಲ್ಲುದಾಗಿದೆ. ಒಂದು, ಹೃದಯದ ಶುದ್ದಿಯಾಗುವಿಕೆ ಮತ್ತು ಇನ್ನೊಂದು, ದೈವೀ ಪ್ರಕಾಶದಿಂದ ತುಂಬಿಕೊಳ್ಳುವುದಾಗಿದೆ. ಈ ಎರಡೂ ಪರಿಣಾಮಗಳು ಪರಸ್ಪರ ಪೂರಕವಾಗಿ ಕಾರ್ಯಮಾಡಬಲ್ಲವು. ಒಂದನ್ನು ಬಿಟ್ಟು ಮತ್ತೊಂದು ಇರುವದು ಅಸಾಧ್ಯವಾಗಿದೆ. ಅದರಿಂದಾಗಿ ಧ್ಯಾನದ ಯಾವುದೇ ಅಭ್ಯಾಸವು ಮಾನಸಿಕ ಚಟುವಟಿಕೆಗಳನ್ನು ಹೃದಯದ ತಕ್ಷಣದ ಶುದ್ಧಿಗಾಗಿ ಹಾಗೂ ದೈವೀಕರಣಕ್ಕಾಗಿ ಸಹಾಯಕವಾಗುವಂತೆ ಹೊಂದಾಣಿಕೆ ಮಾಡುವದಾಗಿದೆ. ಅಭ್ಯಾಸಿಯ ಕೆಲ ಮಟ್ಟಿಗಿನ ಸಂಕಲ್ಪ ಶಕ್ತಿ ಅಥವಾ ಸಮರ್ಥ ಗುರುವಿನ ಸ್ವಲ್ಪ ಪ್ರಾಣಾಹುತಿ ಶುದ್ದೀಕರಣದ ಹಾಗೂ ದೈವೀಕರಣದ ಕಾರ್ಯವನ್ನು ಉತ್ಕರ್ಷಗೊಳಿಸುವದು.

ಅತ್ಯುಚ್ಚವಾದುದನ್ನು ಸಾಧಿಸಿ, ಅದರಲ್ಲಿ ನಿರಂತರವಾಗಿ ನೆಲೆಗೊಂಡಿರುವ ಪರಿಪೂರ್ಣ ಮಾನವ ಆಕಾರವೇ ಧ್ಯಾನಾಭ್ಯಾಸಕ್ಕೆ ಅತಿ ಸುಲಭವಾದ ಹಾಗೂ ಅತ್ಯಂತ ಪ್ರಭಾವಶಾಲಿ ವಸ್ತುವಾಗಿದೆ. ಇಂಥ ಒಬ್ಬ ಸಹಚರನನ್ನು ಎಲ್ಲಿ ಪಡೆಯಬಹುದಾಗಿದೆ ? ಅದರ ಶೋಧಕ್ಕಾಗಿ ಒಬ್ಬನಿಗೆ ದೇವರಲ್ಲಿ ಪ್ರಾಮಾಣಿಕವಾಗಿ ಪ್ರಾರ್ಥಿಸಬೇಕಾಗುವದು. ಈ ವಿಷಯದಲ್ಲಿ ನಮ್ಮ ಪ್ರಿಯ ಗುರುಗಳೇ ನಮಗೆ ಮಾದರಿ ಆಗಿದ್ದಾರೆ. ಇಂಥ ಅತ್ಯುತ್ಕೃಷ್ಟ ಮಾನವ ರೂಪವನ್ನು ಒಂದು ಪ್ರಾಮಾಣಿಕ ಸತ್ಯಶೋಧಕನ ಹೃದಯವು ತಕ್ಷಣವೇ ಕಂಡುಹಿಡಿಯುವದು. ದೇವರೇ ಪ್ರಾಮಾಣಿಕ ಅನ್ವೇಷಕನ ಬಾಗಿಲಿಗೆ ಬರುವನೆಂಬುದು ಅಕ್ಷರಶಃ ಸತ್ಯವಾಗಿದೆ. ಇಂಥ ವ್ಯಕ್ತಿಯ ಸಂಪರ್ಕದಲ್ಲಿ ಬಂದಾಗ, ಒಂದು ಬಗೆಯ ಅವ್ಯಕ್ತ ಪ್ರೇಮ ಹೃದಯಾಂತರಾಳವನ್ನು ಆವರಿಸುವದು. ಭಕ್ತಿ. ಆಸಕ್ತಿ ಹಾಗೂ ಪ್ರೇಮದಿಂದೊಡಗೂಡಿದ ಧ್ಯಾನಾಭ್ಯಾಸಗಳಿಂದ ಇಂಥ ಪ್ರೇಮವನ್ನು ಪ್ರಬಲಗೊಳಿಸಿದರೆ, ತನ್ನ ಗುರಿಯನ್ನು ಆತನು ಅತ್ಯಲ್ಪ ಕಾಲದಲ್ಲಿ ಸಾಧಿಸುವದು ನಿಶ್ಚಿತವಾಗಿದೆ. ***

“ನಮ್ಮ ಕಷ್ಟಗಳನ್ನು ಕುರಿತು ಸದಾಕಾಲ ಮೆಲಕುಹಾಕುವದು ನಮ್ಮ ಚಿಂತೆಗಳನ್ನು ಹೆಚ್ಚು ಮಾಡುವದು. ಅವುಗಳೊಂದಿಗಿನ ನಮ್ಮ ಆಸಕ್ತಿಯು ಬೆಳೆಯುವದು ಹಾಗೂ ನಾವು ಅವುಗಳ ತೊಡಕುಗಳಲ್ಲಿ ಗಟ್ಟಿಯಾಗಿ ಸಿಕ್ಕಿಹಾಕಿಕೊಳ್ಳುವೆವು. ಇದು ನಮ್ಮ ಮುಂದಿನ ಪ್ರಗತಿಯನ್ನು ನಿರ್ಬಂಧಿಸುವದು ಹಾಗೂ ಯಶಸ್ಸಿನ ಅವಕಾಶ ಕಡಿಮೆಯಾಗುವದು. ”

-ಬಾಬೂಜಿ