ಪ್ರಿಯ ಸೋದರ, ಸೋದರಿಯರೆ,

ಮಹಾಪುರುಷರು ಆಕಸ್ಮಿಕವಾಗಿ ಜನ್ಮತಾಳುವದಿಲ್ಲ. ಹಾಗೂ ಅವರ ಜೀವನ ಧ್ಯೇಯ ಸುಲಭವಾಗಿ ಪೂರ್ಣಗೊಳ್ಳುವದಿಲ್ಲ. ನಮ್ಮ ಶ್ರೇಷ್ಠ ಗುರುಗಳು ಕಾಲದ ಆವಶ್ಯಕತೆಗಳಿಗೆ ಅನುಗುಣವಾಗಿ ಈ ಜೀವನಾದರ್ಶವನ್ನು ಸಫಲಗೊಳಿಸಲು ನಮಗೆ ಒಪ್ಪಿಸಿದ್ದಾರೆ. ನಾವು ಆತನ ಈ ಕಾರ್ಯವನ್ನು ನಿರ್ವಹಿಸುವ ಅದೃಷ್ಟಶಾಲಿಗಳಾಗಿದ್ದು, ಜತೆ ಜತೆಗೆ ಒಂದು ದೊಡ್ಡ ಜವಾಬ್ದಾರಿಯೂ ನಮ್ಮ ಪಾಲಿಗೆ ಬಂದಿದೆ. ಚಿಂತನೆಯ ಹಾಗೂ ಕಾರ್ಯನಿರ್ವಹಣೆಯ ಸ್ವಾತಂತ್ರ್ಯವನ್ನು ನಮಗೆ ನೀಡಿ, ಗುರುಗಳು ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದ್ದಾರೆ.

ನಮ್ಮ ವರ್ತಮಾನ ಸ್ವರೂಪವು ತೊಡಕುಗಳ, ಜಡತ್ವದ, ವಿಕಾರತೆಗಳ ಹಾಗೂ ಮೂಲಸ್ಥಿತಿಯ ವಿಕೃತತೆಯ ಸಮ್ಮಿಶ್ರಣದ ಪರಿಣಾಮವಾಗಿದೆ. ಮೂಲ ತತ್ವ ಯಾವಾಗ ಕಣ್ಮರೆಯಾಗುವದೋ, ಆಗ ಕ್ಷುದ್ರವಸ್ತುಗಳು ದೈತ್ಯ ಹಾಗೂ ಕರಾಳ ರೂಪತಾಳುವವು. ಅದಕ್ಕಾಗಿ ಮೂಲ ತತ್ವವು ತನ್ನ ಎಲ್ಲ ಪವಿತ್ರತೆಯನ್ನು ಕಾಪಾಡಿಕೊಂಡಿರುವದರ ಬಗ್ಗೆ ಪ್ರತಿ ಹೆಜ್ಜೆಗೂ ನಾವು ಬಹಳಷ್ಟು ಕಾಳಜಿವಹಿಸಬೇಕಾಗಿದೆ. ಮತ್ತು ಆತಂಕ, ಅಡೆ ತಡೆಗಳೂ ಸಹ ಈ ಮೂಲ ತತ್ತ್ವದ ಪ್ರಕಾಶದ ಪರಿಣಾಮವಾಗಿ, ನಮ್ಮ ಊರ್ಧ್ವಮುಖ ಪ್ರಗತಿಗೆ ಮೆಟ್ಟಿಲುಗಳಾಗಿ, ಮಾರ್ಗದರ್ಶಕ ನಕ್ಷತ್ರಗಳಾಗಿ ಪರಿವರ್ತನೆ ಹೊಂದಬೇಕಾಗಿದೆ.

ಪ್ರಿಯ ಬಂಧುಗಳೇ, ನಮ್ಮ ಸಂಸ್ಥೆ ಅದ್ವಿತೀಯವಾಗಿದೆ. ಪ್ರತಿಯೊಬ್ಬರಿಗೂ ಇಲ್ಲಿ ಸ್ವಾಗತವಿದೆ. ಆದರೆ ಒಂದು ಸಲ ಈ ಸಂಸ್ಥೆಯನ್ನು ನಿಮ್ಮದಾಗಿ ಸ್ವೀಕರಿಸಿದಲ್ಲಿ ಬೇರೆ ಎಲ್ಲವನ್ನೂ ನೀವು ಬಿಟ್ಟು ಬಿಡಬೇಕೆಂದು ಬಯಸುವಿರಿ. ಅದೊಂದು ನಿರ್ಧಾರದ ಕಷ್ಟಕಾಲವಾಗುವದು. ಯಾವುದು ಸರ್ವಶ್ರೇಷ್ಠವೆಂದು ನೀವು ಖಚಿತವಾಗಿ ನಿರ್ಣಯಿಸಬೇಕಾಗುವದು. ಹೊಂದಾಣಿಕೆಗಾಗಿ ಅತಿ ಪ್ರಬಲ ಹಾಗೂ ವಿವಿಧ ಬಗೆಯ ಪ್ರಲೋಭನೆಗಳುಂಟು. ಆದರೆ ಅಸತ್ಯ ಅಥವಾ ಅಯೋಗ್ಯ ವಸ್ತುವಿನೊಂದಿಗೆ ಸಮಾನಾಧಾರದ ಮೇಲೆ ಹೊಂದಾಣಿಕೆಯಾದಾಗ ಅದು ಆಧ್ಯಾತ್ಮದ ಹಾಗೂ ಸತ್ಯದ ಕೊಲೆಯಾಗುವದು. ಕಪಟ ನಮ್ರತೆಯು, ಧರ್ಮಾಂಧತೆ ಹಾಗೂ ಅಂಧಃಶ್ರದ್ಧೆಯಷ್ಟೇ ಅಸತ್ಯಮಯವೂ ಹಾನಿಕಾರಕವೂ ಆಗಿದೆ.

ನಮ್ಮೊಂದಿಗೆ ಜೀವಿಸುತ್ತ, ನಮಗೆ ಮಾರ್ಗದರ್ಶನ ಮಾಡುತ್ತಲಿರುವ, ಗುರುವನ್ನು ಪಡೆದ ನಾವು ಇಮ್ಮಡಿ ಅದೃಷ್ಟಶಾಲಿಗಳಾಗಿದ್ದೇವೆ. ಗುರುಗಳು ನಮ್ಮ ಸಂಸ್ಥೆಗೆ ಭದ್ರಬುನಾದಿ ಒದಗಿಸಿದ್ದಾರೆ. ಈ ಸಂಸ್ಥೆಯನ್ನು ಬೆಳೆಸುವ ಕರ್ತವ್ಯವನ್ನು ಪೂರ್ಣಗೊಳಿಸುವ ಹೊಣೆಯನ್ನು ನಮಗೆ ಬಿಟ್ಟಿದ್ದಾರೆ. ಈ ಸಂಸ್ಥೆ ಅತ್ಯಂತ ಅಮೂಲ್ಯವಾಗಲಿರುವದರಿಂದ ಹಾಗೂ ಶಾಶ್ವತವಾಗಬೇಕೆಂಬ … ಉದ್ದೇಶ ಹೊಂದಿದ್ದರಿಂದ, ಉಚಿತ ವಿಧಿವಿಧಾನಗಳನ್ನು ಉಚಿತ ಕ್ಷೇತ್ರಗಳಲ್ಲಿ ಅನುಸರಿಸುವದು ನಮ್ಮ ಕರ್ತವ್ಯವಾಗುವದು. ಕೆಳಮಟ್ಟದ ಅನುಚಿತ ವಿಧಾನಗಳನ್ನು ಸೇರ್ಪಡಿಸಿದಲ್ಲಿ ನಮ್ಮ ಕೆಲಸಕ್ಕೆ ಕೆಡಕುಂಟಾಗುವದು. ಆದಕಾರಣ ನಿಮ್ಮ ವಿಷಯಗಳನ್ನು ಗುರುವಿನ ಸಮ್ಮುಖದಲ್ಲಿ ಬಿಚ್ಚಿಟ್ಟು, ಅವನ ಪೂರ್ಣ ಪರೀಕ್ಷೆಗೆ ಹಾಗೂ ತಪಾಸಣೆಗೆ ಒಳಪಡಿಸಿರಿ. ಯಾವುದಾದರೂ ವಸ್ತುಗಳು ಅಂಧಃಕಾರದಲ್ಲಿ ನಿಮಗೆ ಪ್ರಕಾಶಿಸುವ ಹಾಗೆ ಕಂಡರೂ ಗುರುವಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಅವನ್ನು ಬೀಸಾಡಿ ಬಿಡಲು ಎಂದಿಗೂ ಅನುಮಾನಿಸಬೇಡಿರಿ. ಹೀಗೆ ದೂರಕ್ಕೆ ಎಸೆಯುವದರಿಂದಲೇ ನೀವು ಭಾರ ರಹಿತ ಲಘುತ್ವ ಹೊಂದುವಿರಿ.

ನಮ್ಮ ಮಾರ್ಗವು ಇಹಲೋಕವನ್ನು ಅಲ್ಲಗಳೆಯುವ ಸನ್ಯಾಸಿಯದೂ ಅಲ್ಲ ಅಥವಾ ಪರಲೋಕವನ್ನು ಅಲ್ಲಗಳೆಯುವ ಭೌತಿಕವಾದಿಯದೂ ಅಲ್ಲ. ಎರಡೂ ಲೋಕಗಳು- ನಿಜವೆಂದರೆ- ಎಲ್ಲ ಲೋಕಗಳು ನಮ್ಮ ದೃಷ್ಟಿಯಲ್ಲಿ ಇದ್ದಾಗಲೂ, ಸರ್ವಲೋಕಗಳ ಒಡೆಯನನ್ನು ಮಾತ್ರ ನಾವು ಹೊಂದಬಯಸುತ್ತೇವೆ. ಆತನೊಬ್ಬನೇ ನಮ್ಮ ಗುರಿಯಾಗಿದ್ದು, ನಾವು ಸಂಪಾದಿಸಿರುವೆವೆಂದು ತಿಳಿದುಕೊಂಡಿರುವ ಪ್ರಾಪಂಚಿಕ ವಸ್ತುಗಳು ಸಹ ಆತನಿಗಾಗಿ ಮಾತ್ರ ಇರುವವು. ಅದಕ್ಕಾಗಿ ಪ್ರಿಯ ಬಂಧುಗಳೇ, ನಿಮಗೊಬ್ಬ ಒಡೆಯನಿದ್ದಾನೆ. ಎಲ್ಲ ಲೋಕಗಳ ಒಡೆಯನಿದ್ದಾನೆ. ಆತನು ನಿಮ್ಮೊಂದಿಗೆ ಇದ್ದಾನೆ ಹಾಗೂ ನಿಮ್ಮೊಳಗೇ ಇದ್ದಾನೆಯೆಂದು ಜಗತ್ತಿಗೆ ತೋರಿಸಿಕೊಡಿರಿ. ಅನ್ಯರು ನಿಮಗೆ ಹೇಳಿಕೊಟ್ಟ ಯಾವುದು ಬೇಕು ಅಥವಾ ಯಾವುದು ಬೇಡ ಎಂದು, ಕ್ಷುದ್ರ ವಸ್ತುಗಳನ್ನು ಹೊಂದಬೇಕೋ ಬೇಡವೋ ಎಂದು ಅಳುವದನ್ನು ಅಥವಾ ಕಿರಿಚುವದನ್ನು ಬಿಟ್ಟುಬಿಡಿರಿ. ಕ್ಷುದ್ರ ಜಗತ್ತಿನ ಕ್ಷುದ್ರ ವಿಷಯಗಳನ್ನು ಮೀರಿ ಮೇಲಕ್ಕೆ ಏಳಿರಿ. ಗುರು ಒಬ್ಬನೇ ನಿಮ್ಮ ದೃಷ್ಟಿಯಲ್ಲಿರಲಿ. ಆತನಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ಲಯಗೊಳಿಸಿರಿ. ಇಲ್ಲವಾದರೆ, ನೀವೇ ಆತನ ಪ್ರಿಯತಮನಾಗಿ ಪರಿವರ್ತನೆಗೊಳ್ಳುವ ಮಟ್ಟಿಗೆ ಆತನನ್ನು ಪ್ರೇಮಿಸಿರಿ. ಆಗಲೇ ಆತನನ್ನು ಪೂರ್ಣವಾಗಿ ಹೊಂದಬಲ್ಲಿರಿ.

ಜನರು ಕ್ರಮೇಣ ನಮ್ಮ ಸಂಸ್ಥೆಯತ್ತ ಆಕರ್ಷಿತರಾಗುತ್ತಿದ್ದಾರೆ. ಮಾರ್ಗದರ್ಶನ ಹಾಗೂ ಬೆಳಕಿಗಾಗಿ ಸಮಗ್ರ ವಿಶ್ವವೇ ಸಹಜ ಮಾರ್ಗದೆಡೆ ನೋಡಬೇಕಾದ ಒಂದು ಸಮಯ ಬರುವದು. ಅಂತಹ ಸನ್ನಿವೇಶಗಳಲ್ಲಿ ನಿಮ್ಮ ಮುಂದಿರುವ ಮಹಾನ್ ಕರ್ತವ್ಯಕ್ಕಾಗಿ ನಿಮ್ಮನ್ನು ನೀವು ಸಿದ್ಧಗೊಳಿಸಿಕೊಳ್ಳಬೇಕು. ನಮ್ಮ ಸಂಸ್ಥೆಯ ಒಬ್ಬ ಸದಸ್ಯನನ್ನು ಒಮ್ಮೆ ಸಹಜಮಾರ್ಗದ ಹತ್ತು ನಿಯಮಗಳಾವವು ? ಎಂದು ಪ್ರಶ್ನಿಸಲಾಯಿತು. ಆತನು ಹತ್ತು ನಿಯಮಗಳ ಲಿಖಿತಪ್ರತಿಗಾಗಿ ಹುಡುಕತೊಡಗಿದನು. “ನನ್ನನ್ನು ನೋಡಿ ಕಂಡುಕೊಳ್ಳಿರಿ” ಎಂದು ಆತ ಉತ್ತರಿಸಬಾರದೇ ಎಂದು ಬಯಸಿದೆ. ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸದಸ್ಯನೂ ಸಹಜಮಾರ್ಗದ ಸಜೀವ ಮೂರ್ತಿಯಾಗಬೇಕು. ಹಾಗೂ ಮಹಾನ್ ಗುರುವಿನ ಮತ್ತು ಆತನ ಸಂಸ್ಥೆಯ ನೈಜ ಹಾಗೂ ವಿಧೇಯ ಪ್ರತಿನಿಧಿಯಾಗಬೇಕೆಂದು ನಾನು ಇಚ್ಛಿಸುತ್ತೇನೆ.

ಎಚ್ಚರಿಕೆಯ ಕೆಲವು ಶಬ್ದಗಳನ್ನು ಪ್ರಸ್ತಾಪಿಸಲು ಕೂಡ ಈ ಅವಕಾಶವನ್ನು ನಾನು ಉಪಯೋಗಿಸುವೆನು. ಮೌಲ್ಯಗಳ ದುರುಪಯೋಗವೇ ಅವನತಿಗೆ ಪ್ರಮುಖ ಕಾರಣವಾಗಿದ್ದು, ಅದು ಅನೇಕ ಶ್ರೇಷ್ಠ ಸಂಸ್ಥೆಗಳನ್ನು ಅಧಃಪತನಗೊಳಿಸಿತು. ಸದಸ್ಯರ ಸಂಖ್ಯೆ ಹೆಚ್ಚಿಸಬೇಕೆಂಬ ಉತ್ಕಂಠತೆ, ಹೆಚ್ಚು ಹೆಚ್ಚು ಧನ ಸಂಗ್ರಹದ ಉತ್ಸಾಹ ಅಥವಾ ಆಕರ್ಷಕ ಪ್ರದರ್ಶನದ ಬಯಕೆ, ಇವುಗಳು ನಿಜವಸ್ತುವಿನ ಬೆಳಕನ್ನು ಎಂದೆಂದಿಗೂ ಆವರಿಸಬಾರದು. ನಿಜವಾಗಿಯೂ ನಮಗೆ ಹೆಚ್ಚು ಹೆಚ್ಚು ಸಹಚರರು, ಹಣ, ಆಕರ್ಷಣೆ ಮುಂತಾದವುಗಳೆಲ್ಲವೂ ಬೇಕಾಗಿವೆ. ಆದರೆ ಇವೆಲ್ಲವುಗಳು ಆತನೊಬ್ಬನನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕಾಗಿ ಮಾತ್ರ. ಸ್ವಾರ್ಥದ ಲವಲೇಶಕ್ಕೂ, ತನ್ನ ತನದ ಅತ್ಯಾಶೆಗೂ ಅಥವಾ ಇಂದ್ರಿಯಗಳ ಭೋಗದಿಚ್ಛೆಗೂ ನಮ್ಮ ಜೀವನದಲ್ಲಿ ಪ್ರವೇಶವಿರಬಾರದು. ಆಗ ಮಾತ್ರ ನಮ್ಮ ಸಂಸ್ಥೆಯ ಪರಿಶುದ್ಧತೆಯನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಬಹುದು ಹಾಗೂ ಪತನದ ಭಯವಿಲ್ಲವಾಗುವದು.

ನಮ್ಮ ಸಂಸ್ಥೆಯ ಎಲ್ಲ ಸದಸ್ಯರೂ ಪರಿಪೂರ್ಣರಾದಾಗಲೇ ನಮ್ಮ ಸಂಸ್ಥೆಯು ಪರಿಪೂರ್ಣವಾಗುವದು. ತನ್ನ ಹೃದಯದಲ್ಲಿ ನಿರಂತರವಾಗಿ ಇರುವ ಪರಿಪೂರ್ಣ ವ್ಯಕ್ತಿಯನ್ನು ಸದಾಕಾಲ ದೃಷ್ಟಿಯಲ್ಲಿ ಇಟ್ಟುಕೊಂಡಾಗಲೇ ಪ್ರತಿಯೊಬ್ಬ ಅಭ್ಯಾಸಿ- ಬಂಧು ಪರಿಪೂರ್ಣನಾಗಬಲ್ಲನು. ಗುರುವಿಗೆ ಸಂಪೂರ್ಣ ಅಧೀನನಾದಾಗ, ಒಬ್ಬನು ನಮ್ಮ ಗುರುವಿನ ಪ್ರಾಣಾಹುತಿ ಸ್ವೀಕರಿಸುವ ಶಕ್ತಿ ಹೊಂದುವನು. ಒಬ್ಬನೇ ಒಬ್ಬ ನೈಜ ಗುರುವಿನ ಪೂಜೆ, ಬೇರೆ ಎಲ್ಲ ಸಂಸ್ಕಾರಗಳನ್ನು ಹೃದಯದಿಂದ ಅಳಿಸಿ ಹಾಕಲು ಸಹಾಯಕವಾಗುವದು. ಜಗತ್ತಿನ ಎಲ್ಲ ಜನರನ್ನು ತನ್ನವರಂತೆ ಪರಿಗಣಿಸುವದು, ಸಾಮಾನ್ಯ ಅಥವಾ ಅಂತಿಮ ಮೂಲವನ್ನು ಗ್ರಹಿಸಲು ಸಹಾಯಕವಾಗುವದು. ಪ್ರತಿಯೊಬ್ಬರಿಗೂ ನ್ಯಾಯವಾಗಿ ಸಿಗಬೇಕಾದುದನ್ನು ಸಲ್ಲಿಸಿದಾಗಲೇ. ಜಡವಾದ ಹಾಗೂ ಬಂಧನಕಾರಿಯಾದ ಭಾರದಿಂದ ಮುಕ್ತಗೊಳ್ಳುವನು. ನಿನ್ನ ಮಹಾನ್ ಸಂಸ್ಥೆಯ ಕಲ್ಯಾಣದ ನಿತಾಂತ ಚಿಂತನೆಯು

ಸಂಸ್ಥೆಯ ಸಂಸ್ಥಾಪಕನೊಂದಿಗೆ ಶಾಶ್ವತ ಸಂಪರ್ಕದಲ್ಲಿರಿಸುವದು. ಈ ವಿಧದಿಂದಲೇ ನಾವು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪರಿಪೂರ್ಣತೆಯನ್ನು ಹೊಂದಬಲ್ಲೆವು. ಒಂದು ಕಣದಷ್ಟು ಸಮಾಜ ವಿರೋಧಿ ಪ್ರವೃತ್ತಿಯನ್ನು ಸಹ ಅಸ್ತಿತ್ವದಿಂದ ಬೇರು ಸಹಿತ ಸಂಪೂರ್ಣವಾಗಿ ಕಿತ್ತೊಗೆಯಬೇಕು.

ಆತನ ಕೆಲಸವನ್ನು ಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು, ಅವನ ನಿರೀಕ್ಷೆಯ ಮಟ್ಟಕ್ಕೆ ಬರಲು, ತನ್ನತನದಿಂದಲೇ ನಮ್ಮನ್ನು ತುಂಬಲು ನಮಗೆ ಎಲ್ಲ ತರದ ಶಕ್ತಿ ಹಾಗೂ ಧೈರ್ಯವನ್ನು ನೀಡಲು ನಾನು ಗುರುಗಳಿಗೆ ಪ್ರಾರ್ಥಿಸುವೆ.

ಗುರುಗಳು ಸದಾ ಕಾಲವೂ ನಮ್ಮ ಮಧ್ಯೆ ವಾಸಿಸಲಿ ! ತಥಾಸ್ತು !!

(ಮಿಷನ್ನಿನ ವಾರ್ಷಿಕ ಸಮಾರಂಭವನ್ನು ಶಹಜಾನಪುರದಲ್ಲಿ ಜನೇವರಿ ೧೯೬೬ ರಲ್ಲಿ ನೆರವೇರಿಸಿದಾಗಿನ ಭಾಷಣ)