ಸುಮಾರು ೨೫೦೦ ವರ್ಷಗಳ ಹಿಂದೆ ಗೌತಮ ಬುದ್ದನೆಂಬ ಒಬ್ಬ ಮಹಾನ್ ವ್ಯಕ್ತಿಯು, ಈ ಭೌತಿಕ ಜೀವನದ ಕಷ್ಟಗಳಿಂದ ಮಾನವರು ಮುಕ್ತರಾಗಿ ನಿರ್ವಾಣಹೊಂದಬಹುದಾದ ಪದ್ಧತಿಗಳ ಅನುಷ್ಠಾನದ ಬಗ್ಗೆ ಬೋಧಿಸಿದನೆಂದು ಇತಿಹಾಸಕಾರರು ನಮಗೆ ಹೇಳುತ್ತಾರೆ. ಈಗಲೂ ಅದೇ ದುಃಖಗಳನ್ನು ಅನುಭವಿಸುತ್ತಿರುವ ಆದರೂ ನಿರ್ಮಾಣಕ್ಕಾಗಿ ಆಶಿಸುತ್ತಿರುವ, ಸಾಧಾರಣವಾಗಿ ಎಲ್ಲ ಬಗೆಯ ಬೌದ್ಧ ಧರ್ಮಿಯರು ಹಾಗೂ ಬಹು ಬಗೆಯ ಬುದ್ಧರು ನೋಡಲು ಸಿಗುತ್ತಾರೆ.

ಸುಮಾರು ೨೦೦೦ ವರ್ಷಗಳ ಹಿಂದೆ ಜೇಸಸ್ ಕ್ರೈಸ್ತನೆಂಬ ಮತ್ತೊಬ್ಬ ಮಹಾನ್ ವ್ಯಕ್ತಿಯು, ಮುಕ್ತಿಯನ್ನು ಪಡೆಯುವ ಹಾಗೂ ದೇವರ ಸಾಮ್ರಾಜ್ಯದಲ್ಲಿ ಪ್ರವೇಶ ಪಡೆಯುವ ಜೀವನ ವಿಧಾನದ ಬಗ್ಗೆ ಬೋಧಿಸಿದನು. ಒಂದೇ ಬಗೆಯ ದೈಹಿಕ ಬಂಧನಗಳಿಂದ ದುಃಖಕ್ಕೀಡಾದ ಹಾಗೂ ಅಸುರೀ ಪ್ರಭಾವದೆದುರು ಸೆಣಸುತ್ತಿರುವ ಅನೇಕ ಪ್ರಕಾರದ ಕ್ರಿಶ್ಚಿಯನ್ ಧರ್ಮಿಗಳು ಹಾಗೂ ಬಹುಬಗೆಯ ಕ್ರಿಶ್ಚಿಯನ್ನರು ನಮಗೆ ಈಗಲೂ ನೋಡಲು ಸಿಗುತ್ತಾರೆ.

ಇಸ್ಲಾಮ ಹಾಗೂ ಅನ್ಯ ಬಗೆಯ ಧರ್ಮಗಳು ಹಾಗೂ ಅದರ ಅನುಯಾಯಿಗಳ ಅವಸ್ಥೆ ಅದೇ ಬಗೆಯದಾಗಿದೆ. ತತ್ವಜ್ಞಾನದ ಹಾಗೂ ಜಾತ್ಯಾತೀತತೆಯ ಆದರ್ಶಹೊಂದಿದ ಮಾರ್ಕ್ಸಿಸಂ ಹಾಗೂ ಡಾರ್ವಿನಿಸಂ ಕೂಡ, ಅದೇ ತರದ ಅಂಧಾನುಕರಣೆಯ ಅನುಯಾಯಿಗಳ ದಾರುಣವಾದ ಅಂತಹದೇ ಅದೃಷ್ಟದೆಡೆಗೆ ತಳ್ಳಲ್ಪಟ್ಟಿವೆ. ಮಾರ್ಕ್ಸಿಷ್ಟರು ತಮ್ಮ ಆದರ್ಶವನ್ನು ಒಂದು ಧರ್ಮವೆಂದು ಕರೆಯದಿದ್ದರೂ, ಮೇಲ್ಮಟ್ಟದ ಜನರ ಅಥವಾ ಅಧಿಕಾರಿಗಳ ಸ್ವಾರ್ಥ ಮತ್ತು ಅಧಿಕಾರ ಲಾಲಸೆಗಳನ್ನು ಆಧರಿಸಿದ ಮತಾಂಧತೆ ಹಾಗೂ ಅಸಹನೀಯ

ಅಂಧಾನುಕರಣೆಗಳಂತಹ ಧರ್ಮಸಂಕೇತಗಳ ಗುಟ್ಟು ಬಯಲಾಗಿದೆ. ಭಾರತವು ತನ್ನ ಸಹಿಷ್ಣುತೆಯ ಉಚ್ಚ ಮನೋಧರ್ಮಕ್ಕಾಗಿ ಹಾಗೂ ಎಲ್ಲ ಬಗೆಯ ಜಾತ್ಯಾತೀತ ಆದರ್ಶ ಮತ್ತು ಧರ್ಮಗಳ ಉದಾರ ಆತಿಥ್ಯಕ್ಕಾಗಿ ಪ್ರಸಿದ್ಧವಾದ ಮಹಾನ್ ದೇಶವಾಗಿದೆ. ಈ ಉದಾತ್ತ ಸದ್ಗುಣಗಳು, ಅದರ ಐಕ್ಯತೆ ಮತ್ತು ಕೆಲವು ಸಲ ಅದರ ಪರಮಾಧಿಕಾರ ಹಾಗೂ ಸ್ವಾತಂತ್ರ್ಯದ ಬೆಲೆ ತೆತ್ತಬೇಕಾಯಿತು. ಆದಾಗ್ಯೂ, ಈ ಅನಾಹುತಗಳನ್ನು ಮರೆತು, ಅದು ಸದ್ಗುಣಗಳನ್ನು ಮುಂದುವರಿಸುತ್ತಲೂ, ಅಷ್ಟೇಕೆ, ಅಭಿವೃದ್ಧಿಗೊಳಿಸುತ್ತಲೂ ಇದೆ. ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಿಚಾರ ಸ್ವಾತಂತ್ರ್ಯಗಳ ಭರವಸೆಯನ್ನು ನೀಡುವ ವಿವಿಧ ವರ್ಣಗಳ ಹಾಗೂ ವಿವಿಧ ಸ್ವರೂಪದ ಆದರ್ಶಗಳನ್ನೂ ಧರ್ಮಗಳನ್ನೂ ಕಾಣಬಹುದಾಗಿದೆ.

ಈ ಸ್ವಾತಂತ್ರ್ಯ ಭಾವನೆಯಿಂದಾಗಿಯೇ ಬಡತನ, ವೃದ್ಧಾಪ್ಯ, ರೋಗ ಹಾಗೂ ಮರಣಗಳಿಂದೊಡಗೂಡಿದ ಸಾಮಾನ್ಯ ಕಷ್ಟಗಳಿದ್ದಾಗಲೂ, ಈ ಮಹಾನ್ ದೇಶದಲ್ಲಿ ಜನ್ಮವೆತ್ತುವದು ಒಂದು ವರ ಎಂದು ಪರಿಗಣಿಸಲಾಗುತ್ತಿದೆ. ಒಂದು ವಿಶಿಷ್ಟ ಧರ್ಮದ ಆದರ್ಶಗಳಲ್ಲಿ ನಂಬುಗೆಯುಳ್ಳ ಒಬ್ಬನು, ಅನ್ಯರು ತನ್ನ ದೇವರ ಕಟ್ಟಳೆಯನ್ನು ನಂಬುವದಿಲ್ಲ ಅಥವಾ ಅದರಲ್ಲಿ ಶ್ರದ್ದೆಯಿಲ್ಲದವರು ಅನ್ನುವ ಕಾರಣಕ್ಕಾಗಿ, ಯಾವಾಗ ತನ್ನ ಸಂಗಡಿಗರ ಹತ್ಯೆ ಮಾಡಲಾರಂಭಿಸುವನೋ ಹಾಗೂ ಒಂದು ವಿಶಿಷ್ಟ ಸಾಮಾಜಿಕ ದೃಷ್ಟಿಕೋನದಲ್ಲಿ ಅಥವಾ ಆದರ್ಶದಲ್ಲಿ ನಂಬಿಗೆಯುಳ್ಳವ, ಯಾವಾಗ ತನ್ನ ಆದರ್ಶದ ಉನ್ನತಿಗಾಗಿ ಅನ್ಯ ಆದರ್ಶಗಳಲ್ಲಿ ನಂಬುಗೆ ಇದ್ದವರನ್ನೆಲ್ಲ ಕೊಲ್ಲ ತೊಡಗುವನೋ ಅಥವಾ ಒಂದೇ ಧರ್ಮಶ್ರದ್ಧೆ ಹಾಗೂ ಸಾಮಾಜಿಕ ಆದರ್ಶಗಳ ಎರಡು ಗುಂಪುಗಳು ಪರಸ್ಪರ ಯುದ್ಧ ಪ್ರಾರಂಭಿಸುವರೋ, ಆವಾಗ ಭಾರತೀಯ ಮನಸ್ಸು ದಿಗ್ಭ್ರಮೆಗೊಳ್ಳುವದು ಹಾಗೂ ತಮ್ಮ ಧರ್ಮಶ್ರದ್ಧೆ ಹಾಗೂ ಸಾಮಾಜಿಕ ಆದರ್ಶಗಳ ಬೋಧನೆಗಳಲ್ಲಿ ಎಂದಿಗೂ ನಂಬುಗೆಯಿಲ್ಲದವರಾಗುವರು.
ಭಾರತೀಯ ಮನಸ್ಸು, ಈ ಯುದ್ಧಗಳು ಅಧಿಕಾರದಾಹ ಅಥವಾ ಸ್ವಾರ್ಥಪೂರಿತ ಆಸಕ್ತಿಗಾಗಿರುವ ಪಕ್ಷಗಳ ಉಳಿವಿಗಾಗಿ ಜರುಗುತ್ತವೆ ಅನ್ನುವ ವ್ಯಾವಹಾರಿಕ ತಿಳಿವಳಿಕೆಯ ಅಭಿಪ್ರಾಯವೊಂದಿದೆ. ವಿಕಾಸವೆಂಬ ಏಣಿಯ ಕೆಳಗಿನ ಮೆಟ್ಟಿಲನ್ನು ಹಾಗೂ ತಮ್ಮ ಪಾಶವೀಯತೆಯನ್ನು ಒಪ್ಪಿಕೊಳ್ಳಲು ಈ ಪಕ್ಷಗಳು ಲಜ್ಜೆಪಡುವವು ಹಾಗೂ ತಮ್ಮ ಕಪಟ ಪಾಶವೀಯ ವೃತ್ತಿಗಳನ್ನು ತೋರಿಕೆಯ ಆದರ್ಶಗಳಲ್ಲಿ ಮರೆಮಾಡ ಬಯಸುತ್ತಾರೆ. ಯಾವಾಗ ಈ ಆಹುತಿಗೆ ಒಳಗಾದವರಿಗೆ ಇದೆಲ್ಲ ತಮ್ಮ ಒಳಿತಿಗಾಗಿಯೇ ಇದೆ ಅಂತ ಮನವರಿಕೆಯಾಗುವುದೋ, ಈ ಸಾಮೂಹಿಕ ಕೊಲೆ ಅಥವಾ ಯುದ್ದಗಳು ಇನ್ನೂ ಹೆಚ್ಚು ಕ್ರೌರ್ಯರೂಪ ತಾಳುವವು. ಪ್ರಾಣಿಬಲಿ ಭಾರತದಲ್ಲಿ ಪ್ರಚಲಿತದಲ್ಲಿದ್ದಾಗ, ಪುರೋಹಿತರು, ಬಲಿಪಶು ನೇರವಾಗಿ ಸ್ವರ್ಗದಲ್ಲಿ ಪ್ರವೇಶಿಸುವದು ಅಂತ ಬೋಧಿಸುತ್ತಿದ್ದರು. ಇದು ನಿಜವಾಗಿದ್ದಲ್ಲಿ ನಾಸ್ತಿಕನೊಬ್ಬನು ಪುರೋಹಿತನಿಗೆ ತನ್ನ ತಂದೆಯನ್ನು ಬಲಿಕೊಡಲು ಶಿಫಾರಸು ಮಾಡಿದರೆ ಆಶ್ಚರ್ಯವೇನಿಲ್ಲ.

ತತ್ತ್ವಜ್ಞಾನಿಗಳು ಸಮಸ್ಯೆಗಳನ್ನು ವಿಂಗಡಿಸಿ, ವರ್ಗಿಕರಿಸಿ ಹಾಗೂ ವಿಶ್ಲೇಷಿಸಿ ತಮ್ಮ ಸಿದ್ಧಾಂತಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುವರು, ಮತ್ತೂ ಕೆಲವು ಸಲ ಅವುಗಳಿಗೆ ಪರಿಹಾರಗಳನ್ನೂ ಶಿಫಾರಸ್ಸು ಮಾಡುವರು. ಆದಾಗ್ಯೂ, ವ್ಯಕ್ತಿಯೊಬ್ಬನ ಸಮಸ್ಯೆ ಸಮಾಜದ ಸಮಸ್ಯೆಯಷ್ಟೇ ಕ್ಲಿಷ್ಟವಾಗಿ ಬಿಡಿಸಲಾರದವುಗಳಾಗಿ ಉಳಿಯುವವು. ಅನುಭಾವಿಗಳು ಕೂಡ ಅದರ ಪರಿಹಾರಕ್ಕಾಗಿ ಪ್ರಯತ್ನಿಸುವರು, ಆದರೆ, ಏನನ್ನಾದರೂ ಮಾಡುವದಕ್ಕಿಂತ ಮೊದಲೇ ಅವರು ತಮ್ಮ ಆನಂದಾತಿರೇಕ ಅಥವಾ ಭಾವಾತ್ಮಕ ಆವೇಶ ಅಥವಾ ಚಿತ್ತಾಕರ್ಷಕ ಭ್ರಮೆಗಳಲ್ಲಿ ಸಿಕ್ಕಿಹಾಕಿಕೊಳ್ಳುವರು.

ಅದಕ್ಕಾಗಿ, ಯಾರಾದರೂ ಈ ದಿಶೆಯಲ್ಲಿ ಹೊಸದಾಗಿ ಯತ್ನ ಮಾಡಬಯಸಿದರೆ, ಮಾನವಕುಲವು ಈಗಾಗಲೇ ಎದುರಿಸಿದ ಅಪಾಯಗಳನ್ನು ತಪ್ಪಿಸಲು ಹಾಗೂ ತನ್ನ ಸತ್ಯದೃಷ್ಟಿಯನ್ನು ಅಥವಾ ಅನಂತದ ಆದರ್ಶವನ್ನು ವಿಸ್ತರಿಸಲು ಹಾಗೂ ಕ್ರಿಯಾಶೀಲನಾಗಿ ಮತ್ತು ಯಾವ ಹಂತದಲ್ಲಿಯೂ ಜಡನಾಗದಂತೆ ಉಳಿಯಲು ಧೃಡನಿರ್ಧಾರ ಮಾಡಬೇಕು. ಮನುಷ್ಯನ ಚಿಂತನ ಶಕ್ತಿಯಲ್ಲಿ ಎಂಥ ನಿಗೂಡ ಸಾಮರ್ಥ್ಯ ಅಡಗಿದೆ ಅನ್ನುವದನ್ನು ತಂತ್ರಜ್ಞಾನದ ಅಪಾರ ಅಭಿವೃದ್ಧಿ ಹಾಗೂ ಶಿಕ್ಷಣದ ವ್ಯಾಪ್ತಿ ಈಗಾಗಲೇ ಪ್ರತಿಯೊಬ್ಬನಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಎಲ್ಲ ವಿಜ್ಞಾನ ವಿಷಯಗಳು, ತತ್ತ್ವಶಾಸ್ತ್ರಗಳು, ಧರ್ಮಗಳು, ನವನಿರ್ಮಾಣಗಳು ಹಾಗೂ ಸಂಶೋಧನೆಗಳು, ಮನುಷ್ಯನ ಚಿಂತನದ ಫಲಿತಾಂಶಗಳಾಗಿವೆ.

ಆದ್ದರಿಂದ, ವ್ಯಕ್ತಿಯೊಬ್ಬನ ಸಂಕಲ್ಪ ಹಾಗೂ ಯತ್ನವನ್ನು ಮಾತ್ರ ಅವಲಂಬಿಸಿದ ವಿಚಾರ ಶಕ್ತಿಯನ್ನು ಉಪಯೋಗಿಸುವದರಲ್ಲಿಯೇ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರ ಅಡಗಿದೆ. ಬುದ್ಧಿಯನ್ನು ಮೋಹಿತಗೊಳಿಸುವ ಎಷ್ಟೇ ತಂತ್ರಗಳು, ಧಾರ್ಮಿಕ ಪೀಡೆಗಳು ಅಥವಾ ತನಿಖೆಗಳು ಅಥವಾ ಮನವೊಲಿಸುವಿಕೆ ಮತ್ತು ಆಮಿಷಗಳು ಸಹ, ತನ್ನ ಸಂಕಲ್ಪ ಶಕ್ತಿಯಿಂದ ಕಾರ್ಯನಿರ್ವಹಿಸುವ ಒಬ್ಬ ವ್ಯಕ್ತಿಯನ್ನು ನಿರ್ಮಿತಗೊಳಿಸಲು ಸಹಾಯಕವಾಗಲಾರವು. ಒಬ್ಬ ವ್ಯಕ್ತಿಗೆ ಸ್ವ-ಇಚ್ಛೆಯಿಂದ ತನ್ನ ಬಂಧನಗಳನ್ನು ಹರಿದೊಗೆಯಲು ಹಾಗೂ ಸ್ವತಂತ್ರನಾಗಲು ಸಂಕಲ್ಪ ಮಾಡಬೇಕಾಗುವದು. ತದನಂತರವೇ, ಒಬ್ಬನು ಉಚ್ಚಮಟ್ಟದ ಮಾನವೀಯ ಅಷ್ಟೇಕೆ ದೈವೀಕೃತಿಯ ಪ್ರಗತಿ ಹಾಗೂ ವಿಕಾಸಕ್ಕಾಗಿ ಆಶಿಸಬಹುದು.

ನಿಜಕ್ಕೂ, ಒಂದು ಉನ್ನತ ಶಕ್ತಿಯ ಸಹಾಯ ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ತೋರಿಕೆಗೆ ತನ್ನ ಹೊರಗಿನದು ಅಂತ ಕಾಣುವ ಉಚ್ಚಶಕ್ತಿಯನ್ನು ಅಂತಿಮವಾಗಿ ತನ್ನೊಳಗೇ ಕಾಣಬೇಕಾಗಿದ್ದು, ಅದಕ್ಕಾಗಿ ಮತ್ತೆ ಅದೇ ಉಚ್ಚಶಕ್ತಿ ಸಹಾಯ ಮಾಡುವದು. ಇದೊಂದು ಯೋಗರಹಸ್ಯ ಮಾತ್ರ ಆಗಿರದೇ, ಒಂದು ಪ್ರಾಯೋಗಿಕ ಹಾಗೂ ಅನುಭವದ ನೈಜ ಘಟನೆ ಆಗಿದೆ. ರಾಜಯೋಗದ ಅಭ್ಯಾಸದಲ್ಲಿ ಸಹಜಮಾರ್ಗ ಪದ್ಧತಿಗೆ ಅನುಗುಣವಾಗಿ ಈ ಸಹಾಯವನ್ನು ಪ್ರಾಣಾಹುತಿಯ ಮೂಲಕ ಕೊಡಲಾಗುವದು. ಯಾರಾದರೂ ಇದನ್ನು ಅನುಭವಿಸಲು ಇಚ್ಛಿಸುವದಾದರೆ, ಶ್ರೀ ರಾಮಚಂದ್ರ, ಮಿಶಿನ್ನಿನ ಪ್ರಶಿಕ್ಷಕನನ್ನು ಸಂಪರ್ಕಿಸಿ ಈ ಪ್ರಯೋಗಕ್ಕಾಗಿ ಪ್ರಯತ್ನಿಸಬಹುದು.

ಒಬ್ಬನು ಪ್ರಾಮಾಣಿಕ ಅಭ್ಯಾಸದನಂತರ ತನ್ನದೇ ಆದ ವಿಚಾರ ಶಕ್ತಿಯನ್ನು ಬಳಸಲು ಪ್ರಾರಂಭಿಸಿದಾಗ, ನೈಜತೆಗೆ ಪ್ರತಿಯಾಗಿ ಆದರ್ಶ, ಸಂಸ್ಥೆಗಳಿಗೆ ಪ್ರತಿಯಾಗಿ ವ್ಯಕ್ತಿ, ಶುದ್ಧ ಅಜ್ಞಾನಕ್ಕೆ ಪ್ರತಿಯಾಗಿ ದೈವೀಸಾಕ್ಷಾತ್ಕಾರ, ಇಂಥದೇ ಅನೇಕ ವಿಷಯಗಳ ಸಮಸ್ಯೆಯನ್ನು ಅತ್ಯಂತ ಸಹಜರೀತಿಯಲ್ಲಿ ಬಗೆಹರಿಸಬಲ್ಲನು. ಇದೊಂದು ಹೊಸ ಮಾರ್ಗವಾಗಿದ್ದು, ಮೇಲೆ ತಿಳಿಸಲಾದ ಮಿಶಿನ್ನಿನ ಸಂಸ್ಥಾಪಕ ಅಧ್ಯಕ್ಷರಿಂದ ಕಂಡು ಹಿಡಿಯಲಾಗಿದ್ದು, ಸ್ವಾರ್ಥದ ಲವಲೇಶವೂ ಇಲ್ಲದಂತಹ ಸಹಾಯವನ್ನು ನಮಗೆ ಒದಗಿಸುವದಕ್ಕೆ, ಅದೃಷ್ಟವಶಾತ್ ಅವರು ನಮ್ಮ ಮಧ್ಯದಲ್ಲಿಯೇ ಇದ್ದಾರೆ.

ಮುಮುಕ್ಷುಗಳೆಲ್ಲರೂ ಬೆಳಕನ್ನು ಕಾಣಲಿ ! ತಥಾಸ್ತು !!

(ಸಹಜ ಮಾರ್ಗ ಪತ್ರಿಕೆ, ನವಂಬರ ೧೯೭೦)

ಬೇರೆಯವರ ವ್ಯಂಗ್ಯ ಮಾತುಗಳು, ಹಾಗೂ ತೆಗಳಿಕೆಗಳನ್ನು ನಾವೇ ತಪ್ಪಿತಸ್ಥರು ಎಂಬ ಭಾವನೆಯಿಂದ ಶಾಂತವಾಗಿ ಸಹಿಸುತ್ತ, ನಾವು ಸಹನೆ ಹಾಗೂ ತಾಳ್ಮೆಯ ಅಭ್ಯಾಸವನ್ನು ಬೆಳೆಯಿಸಿಕೊಳ್ಳಬೇಕು. ಮಹಾನ್ ಧ್ಯೇಯದ ಪ್ರಾಪ್ತಿಗಾಗಿ ಇದೊಂದು ಅತಿ ದೊಡ್ಡ ತ್ಯಾಗವೇನಲ್ಲ.

-ಬಾಬೂಜಿ