ಹೃದಯಮಂಡಲವನ್ನು ದಾಟಿದ ನಂತರ ನಾವು ಭಗವಂತನ ಆದಿ ಮನವನ್ನು ಅಥವಾ ಪರಾಮನಸ್ಸನ್ನು ಪ್ರವೇಶಿಸುವೆವು. ಇಲ್ಲಿ ಅನುಭವಕ್ಕೆ ಬರುವ ಸ್ಥಿತಿಯನ್ನು ಯಾವ ಶಬ್ದಗಳಿಂದಲೂ ವರ್ಣಿಸಲಾಗದು. ಈ ವಿಸ್ತ್ರತವಾದ ಕ್ಷೇತ್ರದ ಕಲ್ಪನೆಯನ್ನು ತಂದುಕೊಡುವ ಹಲವು ಲಕ್ಷಣಗಳು ಮಾತ್ರ ಉಂಟು. ಹೃದಯಮಂಡಲದಲ್ಲಿ ನಾವು ಪಡೆದುಕೊಂಡುದು ಕಲ್ಪನೆಗೆ ನಿಲುಕಲಾರದು. ಈಗ ನಾವು ಉಚ್ಚತರ ಸ್ಥಿತಿಯನ್ನು ಹೊಂದುವೆವು. ಹೃದಯ ಮಂಡಲದ ಸಾರ ಸರ್ವಸ್ವವೂ ಇಲ್ಲಿದೆ. ವಿಶ್ವದ ಸದ್ಯದ ಸ್ವರೂಪವು ಆ ಮಹಾ ಮನಸ್ಸಿನ ಕಾರ್ಯಗಳ ಮೂಲಕವೇ ಆಗಿದೆ. ಆ ಕಾರ್ಯಗಳೆಲ್ಲ ಯಾವ ಸಂಮ್ಮಿಶ್ರಣವೂ ಇಲ್ಲದ, ಬೆಳಕು ಇಲ್ಲದ ಶುದ್ಧ ಶಕ್ತಿಗಳು . ಹೃದಯ ಮಂಡಲವು ಮೂಲ ರೂಪದಲ್ಲಿ ಬಂದಾಗ ಅದು ಶಾಂತಿಯಿಂದ ತುಂಬಿ ತುಳುಕುತ್ತಿರುವುದೆಂದು ನಾವು ಆಗಲೇ ಹೇಳಿದ್ದೇವೆ. ಅದು ಎಂಥ ಶಾಂತಿ ಯೆಂಬುದು ಮಾತ್ರ ಕಲ್ಪನಾತೀತವಾಗಿದೆ. ಆದರೆ ಹೇಗಾದರೂ ಅದನ್ನು ವ್ಯಕ್ತಗೊಳಿಸಬೇಕೆಂಬ ದೃಷ್ಟಿಯಿಂದ ಹೇಳುವುದಾದರೆ, ಹೃದಯಮಂಡಲದಲ್ಲಿಯ ಶಾಂತಿಗಿಂತ ಅದು ನಯವುಳ್ಳುದ್ದಾಗಿರುತ್ತದೆಂದು ಸ್ಥೂಲವಾಗಿ ಹೇಳ ಬಹುದು. ಈಗ ಅಲ್ಲಿ ಉಳಿದಿರುವುದು ಶಾಂತಿಯ ಕಲ್ಪನೆ ಮಾತ್ರ ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಶಾಂತಿಯನ್ನಷ್ಟೇ ಪಡೆಯುವುದು ನಮ್ಮ ಗುರಿಯಲ್ಲವಾದ್ದರಿಂದ ಶಾಂತಿಯ ಮರೆವಿನ ಸ್ಥಿತಿಯು ಅಲ್ಲಿ ಗಾಢವಾಗಿರುವುದು. ಈ ಮಜಲನ್ನು ಪ್ರವೇಶಿಸಿದಾಗ ನಮ್ಮ ಅನುಭವ ಶಕ್ತಿಯು ಬಹುಮಟ್ಟಿಗೆ ಹೆಚ್ಚುವುದು. ಈಗ, ಅನುಭವ ಪಡೆಯುವುದೊಂದೇ ಉಳಿಯು ವುದು. ಇಲ್ಲಿಂದಲೇ ಪದಾರ್ಥಗಳು ರೂಪುಗೊಂಡು ಬೆಳಕಿಗೆ ಬರುವವು. ಇಲ್ಲಿ ಚಲನವಿದೆ. ಸೃಷ್ಟಿ ರಚನೆಯ ಉದ್ದೇಶದಿಂದ ಅವ್ಯಕ್ತ ಚಲನಗಳು ವೃದ್ಧಿ ಹೊಂದಿ ಕೆಳಗಡೆ ಒತ್ತಡವನ್ನು ಹೆಚ್ಚಿಸುವವು. ತತ್ಪಪರಿಣಾಮವಾಗಿ ನಾವು ಸೃಷ್ಟಿಯಲ್ಲಿ ಅಸಂಖ್ಯ ವೈವಿಧ್ಯಗಳನ್ನು ಕಾಣುವೆವು. ಈ ಮಂಡಲವು ಆಕಾಶದ ಒತ್ತಡವನ್ನು ಮೀರಿದೆ ಯಾದ್ದರಿಂದ ಅಲ್ಲಿ ಗಾಳಿಯು ಬೀಸುವುದಿಲ್ಲ. ಇದು ಭಗವಂತನ ಅತ್ಯಂತ ಪ್ರಬಲವಾದ ಕ್ಷೇತ್ರ. ನಿಮ್ಮ ತಿಳುವಳಿಕೆಗಾಗಿ ನೀವದನ್ನು ದೈವೀ ಯಂತ್ರವನ್ನು ನಡೆಸುವ ಶಕ್ತಿಕೇಂದ್ರವೆಂದು ಕರೆಯಬಹುದು. ಕಂಪನಗಳನ್ನು ಉದ್ರೇಕಿಸುವ ಅದ್ಬುತ ಶಕ್ತಿಯುಳ್ಳ ಅಚಲ ವಸ್ತುಗಳು ಅಲ್ಲಿರುವವು. ಈ ಕಲ್ಪನೆಯನ್ನು ಸ್ಪಷ್ಟಪಡಿಸುವುದು ಬಹಳ ಕಠಿಣ. ಅದನ್ನು ಅನುಭವಿಸಿಯೇ ತಿಳಿಯಬೇಕು. ಅವ್ಯಕ್ತವಾಗಿದ್ದರೂ, ಚಲನವಿರುವಾಗ ಅಲ್ಲಿ ಶಾಂತಿಯು ಹೇಗಿರುವುದೆಂದು ಜನರು ಸಂದೇಹ ಪಡಬಹುದು. ಸೃಷ್ಟಿಯ ಕಲ್ಪನೆಯನ್ನು ಅಗೋಚರವೆಂದು ಹೇಳಿದಂತೆ ಶಾಂತಿಯಾದರೂ ಅತಿ ಸೂಕ್ಷ್ಮವೂ ಅಗೋಚರವೂ ಆಗಿದೆಯೆಂದು ಹೇಳಬಹುದು. ಎಷ್ಟಾದರೂ ಅದು ಏನಾದರೊಂದು ವಿಷಯವೇ ಆಯಿತು.’ ಅಸತ್’ ಅಥವಾ ‘ಶೂನ್ಯ’ ವೆಂದು ಹೇಳಲಾದ ಬಿಂದುವಿಗೆ. ನಾವಿನ್ನೂ ಬಂದಿಲ್ಲ. ಹಾಗಾದರೆ ಆ ಸ್ಥಿತಿಯನ್ನು ನಾವು ಯಾವಾಗ ಮುಟ್ಟುವೆವು? ನಾವು ನಮ್ಮನ್ನು ಶೂನ್ಯರನ್ನಾಗಿ ಮಾಡಿಕೊಂಡಾಗ ಮಾತ್ರ ಆಸ್ಥಿತಿಯನ್ನು ಹೊಂದುವೆವು. ಆ ಶೂನ್ಯ ಸ್ಥಿತಿಯನ್ನು ಹೊಂದಲು ನಾವು ಪರಾಮನಸ್ಸಿನಿಂದ ಬಲವನ್ನು ಪಡೆಯುವೆವು. ಈ ಸ್ಥಿತಿಯನ್ನು ಹೊಂದಲು ದೇವತೆಗಳು ಸಹ ಹಂಬಲಿಸುವರು. ಆದರೆ ಯಾರು ಎಲ್ಲ ಸಂಸ್ಕಾರಗಳಿಂದ ಮುಕ್ತರಾಗಿ. ‘ಜೀವನ್ಮ್ರತ’ರಾಗಿರುವರೋ ಅವರಿಗೆ ಮಾತ್ರ ಈ ಸ್ಥಿತಿಯ ಸ್ಪರ್ಶವುಂಟಾಗುವುದು. ಈಗ ದೈವೀ ಪ್ರಭೆಯೂ ಮಾಯವಾಗುವುದು. ಆದರೂ ಕಿಂಚಿತ್ ಪ್ರಮಾಣದಲ್ಲಿ ಉಳಿದಿರುವುದು. ಆದರೆ ಸ್ವಲ್ಪ ದೂರ ಹೋದ ಮೇಲೆ ಅದೂ ಕೈಬಿಡುವುದು. ಇದರರ್ಥವಿಷ್ಟೆ. ಈಗ ನೀವು ಮುಟ್ಟಬೇಕಾದ ಸ್ಥಿತಿಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿರುವಿರಿ. ದೈವೀ ಪ್ರಭೆಯ ಎಲ್ಲೆಯು ಸ್ವಲ್ಪ ದೂರದವರೆಗೆ ಚಾಚಿಕೊಂಡಿದ್ದು ಅಲ್ಲಿಂದ ಮುಂದೆ ಅದರ ಕಲ್ಪನೆ ಮಾತ್ರ ಉಳಿಯುವುದು. ಮುಂದೆ ನಡೆಯಿರಿ; ಅದೂ ಮಾಯವಾಗುವುದು. ಈಗ ಅಭಿವ್ಯಕ್ತಿಯು ಸಾಧ್ಯವಿಲ್ಲ. ಮನೋಮಂಡಲವನ್ನು ದಾಟಿದ್ದಾಯಿತು.