ಅನೇಕ ಯುಗಗಳಿಂದ ಮಾನವನ ಸುಖಶೋಧನೆ ಬಹುಬಗೆಯಾಗಿ ಹಾಗೂ ಛಲ ಬಿಡದೆ ಸಾಗಿದೆ. ಮತ್ತು ತನ್ನ ಎಡೆಬಿಡದ ಯತ್ನಗಳಲ್ಲಿ ಆತನು ಬಹಳಷ್ಟು ನಿರಾಶೆಯನ್ನು ಎದುರಿಸಿದ್ದಾನೆ. ಯಾಕೆಂದರೆ, ಅವನ ಸುಖದ ಶೋಧನೆ ಸುಖದ ವಿಷಯಗಳೆನಿಸಿದ ಅಥವಾ ಅವನು ತಿಳಿದಂತೆ ಸುಖದ ಮೂಲವೆನಿಸಿದ ವಸ್ತುಗಳಿಂದ ಆವೃತ್ತವಾಗಿದ್ದು, ಈ ಶೋಧವನ್ನು ಭಯಾನಕ ಸ್ವಪ್ನಗಳನ್ನಾಗಿಸಿತು. ತನ್ನ ಜೀವನ ಯಾತ್ರೆಯಲ್ಲಿ ಮಾನವನು ಭಗವಂತನ ಪಾದಾರವಿಂದಕ್ಕೆ ತಲುಪಿದನು, ಮತ್ತು ಭಗವಂತನು ಗುರುವಿನ ರೂಪದಲ್ಲಿ ಸುಖದ ನಿಯಮಿತತನವನ್ನು ತೋರಿದನಲ್ಲದೇ, ಮುಮುಕ್ಷುಗಳನ್ನು, ಸಾಮಾನ್ಯ ಕುಟುಂಬ ಜೀವನ ಸಾಗಿಸುತ್ತಿದ್ದಾಗಲೂ, ಮಾನವ ಜೀವನದ ಉತ್ಕ್ರಾಂತಿಯ ಉಚ್ಚ ಮಟ್ಟಕ್ಕೆ ಕೂಡ ತಲುಪಿಸಿದ್ದಾನೆ. ಪ್ರಾಯೋಗಿಕ ಪದ್ಧತಿಗಳು ಹಾಗೂ ಸರಳ ಜೀವನ ವಿಧಾನದಿಂದ, ಮಾನವ ಜೀವನದ ಗುರಿಯ ಪ್ರಾಪ್ತಿಗಾಗಿ ಸಹಾಯ ನೀಡಲು ಸಿದ್ಧನಿರುವ, ಇಂಥ ದೈವೀ ವ್ಯಕ್ತಿತ್ವದ ಆವಿರ್ಭಾವವನ್ನು, ಸತ್ಯಶೋಧಕರು ತಮ್ಮ ಜೀವಿತ ಕಾಲದಲ್ಲಿ ಬಹಳ ಕ್ವಚಿತ್ತಾಗಿ ಕಾಣುವರು.
“ಸಹಪಥಿಕನ ಕರೆ” ಎಂಬ ಈ ಸಂಗ್ರಹ ಗ್ರಂಥದ ಪುಟಗಳಲ್ಲಿ, ಇಂಥ ಒಂದು ದೃಷ್ಟಾಂತವನ್ನು ಯಥೇಚ್ಛವಾಗಿ ಕಾಣಬಹುದಾಗಿದೆ. ಸೋದರ ರಾಘವೇಂದ್ರ ರಾವ್ ಅವರ ಲೇಖನಗಳು ಹಾಗೂ ಭಾಷಣಗಳನ್ನೊಳಗೊಂಡ ಈ ಗ್ರಂಥ ಅನುಪಮವಾಗಿದ್ದು, ಇಲ್ಲಿ ಒಬ್ಬ ಸತ್ಯಶೋಧಕನು ತತ್ವಜ್ಞಾನ, ಧರ್ಮ, ವಿಜ್ಞಾನ ಹಾಗೂ ಅಧ್ಯಾತ್ಮ ಯೋಗಗಳನ್ನು ಮುಖಾಮುಖಿಯಾಗಿ ಕಾಣುತ್ತ, ನಮ್ಮ ಗುರುಗಳಾದ ಷಹಜಹಾನಪುರದ ಶ್ರೀ ರಾಮಚಂದ್ರಜೀಯವರ ಮಾರ್ಗದರ್ಶನದಲ್ಲಿ ಸಹಜಮಾರ್ಗ ಪದ್ಧತಿಯು ದಯಪಾಲಿಸುವ ಪರಿವರ್ತನೆಗೊಳಪಡುವನು.
ಪೂಜ್ಯ ಗುರುವಿನ ನಿಕಟ ಸಂಪರ್ಕದಿಂದ ಹಾಗೂ ಆತನ ಪದ್ದತಿಯ ಸಾರವನ್ನು ಅರಗಿಸಿಕೊಂಡು, ಗುರುವಿನ ತರಬೇತಿ ಹಾಗೂ ಬೋಧನೆಗಳ ಒಂದು ಮಾದರಿಯಾಗಿರುವ ಈ ಗ್ರಂಥಕರ್ತನ ಮೂಲಕ ಮುಮುಕ್ಷು, ಗುರುವಿನ ಪ್ರೇಮವನ್ನೂ ಹಾಗೂ ಸಹಜಮಾರ್ಗ ಪದ್ದತಿಯೊಡನೆ ತಾದಾತ್ಮವನ್ನೂ ಅನುಭವಿಸಬಲ್ಲನು.
ಸಹಜಮಾರ್ಗದ ಅನುಯಾಯಿಗಳಾದ ನಾವು ಪೂಜ್ಯ ಗುರುಗಳ ಬೋಧನೆ ಹಾಗೂ ಪದ್ಧತಿಯ ಪ್ರಾಯೋಗಿಕ ಸ್ವರೂಪಗಳನ್ನು ಕುರಿತು ಸ್ಪಷ್ಟಿಕರಣಗಳನ್ನು ಅರಸುತ್ತಿದ್ದೆವು. ಮಾನವ ಜೀವನದ ಗುರಿಯೆಡೆಗಿನ ತಮ್ಮ ಯಾತ್ರೆಯಲ್ಲಿ ಸತ್ಯ ಶೋಧಕರೆಲ್ಲರಿಗೂ ಈ ಸಂಗ್ರಹ ಬಹಳ ಪ್ರಯೋಜನಕಾರಿಯಾಗಬಲ್ಲದು ಎಂಬ ಭರವಸೆ ನಮಗಿದೆ.
ನಮ್ಮ ಪೂಜ್ಯ ಗುರುಗಳ ಜನ್ಮ ಶತಮಾನೋತ್ಸವವನ್ನು ದಿನಾಂಕ ೩೦-೪- ೧೯೯೯ ರಂದು ಧಾರವಾಡದಲ್ಲಿ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ, ಈ ಸಂಗ್ರಹವನ್ನು ಬಿಡುಗಡೆಗೊಳಿಸಲು ನಮಗೆ ಸಂತೋಷವೆನಿಸುತ್ತದೆ. ಈ ಸಂಗ್ರಹದ ಅಮೂಲ್ಯ ಬರಹಗಳು ನಮ್ಮನ್ನು ಸಂಸ್ಥೆಯ ಹಾಗೂ ಸಂಸ್ಥಾಪಕನ ಸಾನಿಧ್ಯದಲ್ಲಿ ತಂದಿವೆ.
ಈ ಶುಭ ಸಮಾರಂಭದಲ್ಲಿ ಈ ಸಂಗ್ರಹವನ್ನು ಹೊರತರಲು ನಮಗೆ ಒಪ್ಪಿಗೆ ನೀಡಿದ್ದಕ್ಕಾಗಿ, ನಮ್ಮ ಮನಃಪೂರ್ವಕವಾದ ಅಭಿನಂದನೆಗಳನ್ನು ಸೋದರ ರಾಘವೇಂದ್ರ ರಾವ್ ಅವರಿಗೆ ಸಲ್ಲಿಸುವೆವು.
ಸೋದರ ರಾಘವೇಂದ್ರ ರಾವ್ ಅವರ ಸಾಹಿತ್ಯವನ್ನು ಅನೇಕ ಸಹಜಮಾರ್ಗ ಪತ್ರಿಕೆಗಳಿಂದ ಸಂಗ್ರಹಿಸಿದ್ದಕ್ಕಾಗಿ, ಶ್ರೀಮತಿ ನಲಿನಿ ಶ್ಯಾಮರಾವ, ಗುಲಬರ್ಗಾ, ಇವರಿಗೆ ನಾವು ಕೃತಜ್ಞರಾಗಿದ್ದೇವೆ. ಶತಮಾನೋತ್ಸವ ಸಮಿತಿಯು, ಈ ಸಂಗ್ರಹವನ್ನು ಸಂಪಾದನೆಯ ಒಪ್ಪುವರಿಗಳಿಂದ ಸಾಧ್ಯವಾದಷ್ಟು ದೋಷರಹಿತಗೊಳಿಸಿದ, ಬೆಂಗಳೂರು ಕೇಂದ್ರದ ಸೋದರ ಡಿ. ಬಾಲಾಜಿ ಅವರಿಗೆ ಅಭಿನಂದನೆಗಳನ್ನು ಅರ್ಪಿಸುವದು.
ಎಪ್ರಿಲ್ ೩೦, ೧೯೯೯ ಶುಕ್ರವಾರ
ಬಿ. ಎನ್. ಕೆ. ಘಂಟೆ
ಕಾರ್ಯದರ್ಶಿ
ಪೂಜ್ಯ ಗುರುಗಳ ಶತಮಾನೋತ್ಸವ ಸಮಾರಂಭ ಸಮಿತಿ
ಧಾರವಾಡ