ಸತ್ಯ:ಅದರ ಸ್ಥಾಯೀ ಮತ್ತು ಕ್ರಿಯಾತ್ಮಕ ಮುಖಗಳು

ಪರಮಸತ್ಯ

ಪರಮ ಸತ್ಯ ಅಥವಾ ಪರಮಾತ್ಮನ ಅಸ್ತಿತ್ವದ ಪ್ರಶ್ನೆಯನ್ನು ಕುರಿತು ಬಹಳಷ್ಟು ವಿವಾದಗಳಿವೆ. ನಿಜವಾದ ಸಮಸ್ಯೆಯಿರುವುದು,ನನ್ನ ಅಭಿಪ್ರಾಯದಲ್ಲಿ ‘ಚಿರಂತನ ಕೇವಲತತ್ವ’ದ  ಅಥವಾ  ಪರಬ್ರಹ್ಮದ ಅಸ್ತಿತ್ವವನ್ನು ಸಿದ್ಧ ಮಾಡುವುದಾಗಲಿ ಅಥವಾ ಅಲ್ಲಗಳೆಯುವದಾಗಲಿ  ಅಲ್ಲ. ಸಮಸ್ಯೆಯಿರುವುದು  ಅದನ್ನು ಪರ್ಯಾಪ್ತವೂ   ತೃಪ್ತಿಕರವೂ  ಆದ   ರೀತಿಯಲ್ಲಿ ‘ವ್ಯಾಖ್ಯೆ’ಯಲ್ಲಿ  ಸ್ಪಷ್ಟಪಡಿಸುವುದು  ಹೇಗೆಂಬುದು. ಬೇರೆ ಬೇರೆ ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ವೈಯಕ್ತಿಕ, ದುಃಖ,  ಕಷ್ಟಗಳಿಂದ,   ಆಶೋತ್ತರಗಳಿಂದ  ಹುಟ್ಟಿ, ಬಲವನ್ನು ಪಡೆದ ಉತ್ಸಾಹಿ ಅಂಧಶ್ರದ್ಧೆಯ ಅಂಶವು ಅದಕ್ಕೆ  ಮತ್ತಷ್ಟು   ಗೊಂದಲಗಳನ್ನು   ಸೇರಿಸಿದೆ, ಪರಿಣಾಮವೇನೆಂದರೆ,  ತರ್ಕಶೀಲ,   ವಿಚಾರವಂತ ಮನುಷ್ಯನು ‘ದೇವರು’ಎಂಬ ಶಬ್ದದ  ಪ್ರಸ್ತಾಪ ಮಾತ್ರದಿಂದಲೇ  ಅಸಹ್ಯ ಪಡುವುದು ಸರಿಯಾಗಿಯೇ ಇದೆ ಎಂಬಂತಾಗಿದೆ.

ಅತ್ಯಂತಿಕ ಸತ್ಯ ಅಥವಾ ಪರಮಸತ್ಯದ ಬಗ್ಗೆ ವಿವಿಧ ಕಲ್ಪನೆಗಳಿವೆ. ತಮ್ಮ ತಮ್ಮ ತಿಳುವಳಿಕೆ  ಮತ್ತು ಯೋಗ್ಯತಾನುಸಾರ ಜನರು ಅವನನ್ನು  ಪರಿಭಾವಿಸುತ್ತಾರೆ.   ದೇವರನ್ನು  ಕುರಿತ,  ಸರ್ವಸಾಮಾನ್ಯವಾಗಿ ಅಂಗೀಕೃತವಾದ ಭಾವನೆಯೆಂದರೆ ಅವನು  ‘ಚಿರಂತನಶಕ್ತಿ’ ಎಂಬುದು.  ಆದರೆ, ತಾತ್ತ್ವಿಕದೃಷ್ಟಿಯು, ಎಲ್ಲ ನಾನಾತ್ವ  ಮತ್ತು  ಭೇದವನ್ನು ಮೀರಿದ ‘ನಿರ್ಗುಣ ಬ್ರಹ್ಮ’ದ ಕಲ್ಪನೆಯನ್ನು ಒಳಗೊಳ್ಳುತ್ತದೆ. ಅದು ಗುಣ, ಕ್ರಿಯೆ,  ಮತ್ತು  ಚಿತ್ ಶಕ್ತಿಗೆ  ಅತೀತವಾದುದು. ಈ ನಿರ್ಗುಣ ಬ್ರಹ್ಮವೇ ಅಸ್ತಿತ್ವದ ಆತ್ಯಂತಿಕ ಕಾರಣವೂ, ಆಧಾರವೂ  ಮತ್ತು  ಸಂಪೂರ್ಣ  ವ್ಯಕ್ತ  ಸೃಷ್ಟಿಯ ಕ್ರಿಯಾತೀತ ಕೇದ್ರವೂ ಆಗಿರುವುದೆಂದು ಪರಿಗಣಿಸಲಾಗಿದೆ. ಅದನ್ನೇ ‘ಪರಬ್ರಹ್ಮ’ ವೆಂದೂ ಕರೆಯಲಾಗಿದೆ.  ಅನಂತರ ಬರುವುದು ‘ಪರಮಸತ್ತೆ’ಯೇ  ದೇವರು ಎಂಬ ಕಲ್ಪನೆ,  ಸಕಲ  ವೈವಿಧ್ಯ   ವಿಭಿನ್ನತೆಗಳನ್ನು ಒಳಗೊಂಡ  ವಿಶ್ವವನ್ನು ವೀಕ್ಷಿಸುವ  ನಾವು, ಅದರ ಕರ್ತೃ ಮತ್ತು ನಿಯಾಮಕನೊಬ್ಬನಿರುವನೆಂಬ ನಂಬಿಕೆ ತಳೆಯುವಂತಾಗುತ್ತದೆ.  ಅವನನ್ನು ನಾವು  ಈಶ್ವರ ಅಥವಾ ‘ಸಗುಣಬ್ರಹ್ಮ’ ಎಂದು ಕರೆಯುತ್ತೇವೆ. ಅವನು ಸಕಲ ಉತ್ತಮ ಗುಣಗಳನ್ನುಳ್ಳ ಸರ್ವ ಶಕ್ತ, ಸರ್ವಜ್ಞ ‘ಚಿರಂತನ ಸತ್ತೆ’ ಎಂದು   ಭಾವಿಸುತ್ತೇವೆ;ಅವನೇ ಜಗತ್ತಿನ  ಮೂಲಕಾರಣನೂ, ಸ್ಥಿತಿಕರ್ತನೂ,  ಲಯಕರ್ತನೂ ಆಗಿದ್ದಾನೆ.

ನಿಮ್ನ ಮಟ್ಟದ  ದೃಷ್ಟಿಕೋನದಿಂದ  ನೋಡಿದಾಗ   ಮಾತ್ರ (ಮತ ಧರ್ಮಗಳಲ್ಲಿ ಕಲ್ಪಿತನಾದ) ‘ದೇವರು’ ಪೂಜನೀಯ ವಸ್ತುವಾಗುತ್ತಾನೆ. ಅದೇ ಬಹುತೇಕ ಎಲ್ಲ ಮತ-ಧರ್ಮಗಳ ಅಂತಿಮ ನೆಲೆ,ಗಂತವ್ಯ. ಈ’ಸಗುಣ ಬ್ರಹ್ಮ’ವೇ’ ಅಪರ ಬ್ರಹ್ಮ’ವೆಂದೂ  ಕರೆಯಲ್ಪಡುತ್ತದೆ. ಮೇಲೆ   ಹೇಳಿದ  ಎರಡೂ  ಕಲ್ಪನೆಗಳ ಬಗ್ಗೆ ಮತ ಧರ್ಮಗಳಲ್ಲಿ ಬಹಳೇ   ಹೇಳಲ್ಪಟ್ಟಿದೆ.’  ಸಗುಣ ಬ್ರಹ್ಮ’ಕ್ಕಿಂತ’ ನಿರ್ಗುಣ ಬ್ರಹ್ಮ’ ಕಲ್ಪನೆ   ಹೆಚ್ಚಿನದು ಎಂಬುದು  ಕೆಲವರ  ಅಭಿಪ್ರಾಯ. ಇನ್ನಿತರರ  ದೃಷ್ಟಿ ಅದಕ್ಕೆ  ವಿರುದ್ಧವಾದುದಾಗಿದೆ.  ನಿಜಕ್ಕೂ  ಇಬ್ಬರೂ ತಪ್ಪುತ್ತಿದ್ದಾರೆ.   ಅವರು  ನಿರ್ಗುಣ   ಬ್ರಹ್ಮವನ್ನೂ ಹೊಂದುವುದಿಲ್ಲ, ಸಗುಣ ಈಶ್ವರನನ್ನೂ ಪಡೆಯುವದಿಲ್ಲ. ಎರಡು  ಮಾರ್ಗಗಳುಂಟು ಎಂಬುದೇನೋ ನಿಜವೇ, ಆದರೆ ಗುರಿ ಮಾತ್ರ ಒಂದೇ; ಅದೆಂದರೆ ಪರವಸ್ತುವಿನ ಅರ್ಥಾತ್  ಚಿರಂತನವಾದ  ‘ಕೇವಲ’  ವಸ್ತುವಿನ  ಸಾಕ್ಷಾತ್ಕಾರ. ಎರಡೂ ಕಲ್ಲನೆಗಳೂ,ಅವುಗಳನ್ನು ಸಾಮಾನ್ಯವಾಗಿ ತಿಳಿಯಲಾದ ರೀತಿಯಲ್ಲಿ ದಾರಿತಪ್ಪಿಸುವಂಥವಾಗಿವೆ.  ವಾಸ್ತವಿಕವಾಗಿ  ದೇವರು ಸಗುಣನೂ  ಅಲ್ಲ, ನಿರ್ಗುಣನೂ  ಅಲ್ಲ; ಅವೆರಡಕ್ಕೂ ಅತೀತನಾಗಿದ್ದಾನೆ.’ ಅವನು ಎಂತಿರುವನೋಅಂತೆಯೇ  ಇದ್ದಾನೆ.’ನಿರ್ಗುಣ’ಎಂದು ಅವನನ್ನು ಕಲ್ಪಿಸುವವರು ನಾವು; ಮತ್ತು  ಅವನನ್ನು ‘ಸಗುಣ’ನನ್ನಾಗಿ ಮಾಡುವವರೂ  ನಾವೇ. ಈ ವಿವಾದಗಳಿಂದ  ಪಾರಾಗಲು ನಾವು ಮಾಡಬೇಕಾದುದೇನೆಂದರೆ, ಅದು  ಸಗುಣವೇ ಇರಲಿ, ನಿರ್ಗುಣವೇಇರಲಿ, ‘ಆದಿ ತತ್ವ’ ದಮೇಲೆ ನಮ್ಮ ದೃಷ್ಟಿಯನ್ನು ಸ್ಥಿರಗೊಳಿಸಬೇಕು. ಅದು ಏನೇ ಇರಲಿ, ಅದನ್ನು  ನಾವು  ಪ್ರೀತಿಸಬೇಕು. ಮತಧರ್ಮದ  ಮೇರೆಗಳೊಳಗೆ  ನಾವು  ಸೀಮಿತ ಗೊಂಡು ಇರುವವರೆಗೂ ಮತ ಧರ್ಮದ  ದೇವರೇ  ನಮ್ಮ ದೃಷ್ಟಿಯಲ್ಲಿರುತ್ತಾನೆ.   ನಾವು ಯಾವುದಾದರೊಂದು    ದೃಷ್ಟಿಕೋನದಲ್ಲಿ   ಸಿಕ್ಕಿಬಿದ್ದಿರುತ್ತೇವೆ. ಮತಧರ್ಮದ  ಮೇರೆಗಳನ್ನು  ಮೀರಿ  ಹೋದಾಗ ಮಾತ್ರ ಅತ್ಯುನ್ನತ ಆಧ್ಯಾತ್ಮಿಕ  ಸಿದ್ದಿಯುಸಾಧ್ಯವಾಗುವುದು. ನಿಜಕ್ಕೂ,  ಮತಧರ್ಮವು ಕೊನೆಗೊಳ್ಳುವಲ್ಲಿ ಆಧ್ಯಾತ್ಮಿಕತೆ  ಆರಂಭವಾಗುತ್ತದೆ.  ಮತ ಧರ್ಮವು ಸ್ವಾತಂತ್ರ್ಯದತ್ತ  ಸಾಗುವ  ಮಾನವನ  ಯಾತ್ರೆಗೆ ಅವನನ್ನು ಸಿದ್ದಗೊಳಿಸುವ ಒಂದು ಪ್ರಾರಂಭಿಕ ಹಂತ ಮಾತ್ರ. ಮತಧರ್ಮದ ಕೊನೆಯೇ  ಆಧ್ಯಾತ್ಮಿಕತೆಯ ಆರಂಭ, ಆಧ್ಯಾತ್ಮದ  ಕೊನೆಯೇ  ಸತ್ಯದ ಆರಂಭ. ಸತ್ಯದ ಕೊನೆಯೇ ನಿಜವಾದ ಆನಂದ.ಅದೂ ಹೊರಟು ಹೋದಾಗ ನಾವು ಗುರಿಯನ್ನು ತಲುಪಿರುತ್ತೇವೆ.ಇದು ಅತ್ಯುನ್ನತ ಲಕ್ಷ, ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು  ಅಸಾಧ್ಯ.

ಈ ರೀತಿ, ದೇವರನ್ನು ಒಂದು ವಿಶಿಷ್ಟ ಮತ ಧರ್ಮದ ಚೌಕಟ್ಟಿನಲ್ಲಿ ಕಾಣಲಾರೆವು. ಅವನು  ಕೆಲವು ಆಕಾರ (ರೂಪ)ಗಳಿಗಾಗಲಿ, ಆಚಾರದ ವಿಧಿ-ವಿಧಾನಗಳಿಗಾಗಲಿ ಸೀಮಿತನಲ್ಲ;  ಅಥವಾ    ಧರ್ಮಗ್ರಂಥಗಳಲ್ಲಿಯೂ  ಅವನನ್ನು  ಹುಡುಕಿ  ಕಾಣಲಾರೆವು.ಅವನನ್ನು ನಾವು ಹುಡುಕಬೇಕಾದುದು  ನಮ್ಮ  ಹೃದಯದ ಅಂತರಾಳದಲ್ಲಿ ನಿಜವಾಗಿಯೂ  ದೇವರು  ಅತೀವ ಸರಳನೂ, ನಿರಾಡಂಬರನೂ ಆಗಿದ್ದಾನೆ.ಅವನು ಸ್ಥೂಲ ರೂಪಗಳಲ್ಲಿಲ್ಲ.ಅವನಲ್ಲಿ  ಯಾವ ವಿಧದ ಸ್ಥೂಲತೆಯೂ ಇಲ್ಲ . ದೇವರು ಸರಳ ಮತ್ತು  ಅತ್ಯಂತ  ಸೂಕ್ಷನಾಗಿದ್ದಾನೆ. ನಿಜವಾಗಿಯೂ, ಪರತತ್ವಕ್ಕೆ ಅದರ ಸರಳತೆ ಮತ್ತು ಶುದ್ದತೆಗಳೇ ಒಂದು ತೆರೆಯಾಗಿದೆ.

‘ಪರಮಾತ್ಮ’ ಅಥವಾ ‘ಪರತತ್ವ’ದ (ಆತ್ಯಂತಿಕಸತ್ಯದ)  ಕಲ್ಪನೆಯನ್ನು   ಅರಿಯಲು.   ನಾವು ‘ ದೇವರು (ಪರಮಾತ್ಮ) ಇಲ್ಲ’ ಎಂಬ ನಾಸ್ತಿಕನ ನಿಲುವಿನಿಂದ ಪ್ರಾರಂಬಿಸೋಣ. ಅಂದರೆ, ಗಣಿತಶಾಸ್ತೃದ ಪರಿಭಾಷೆಯಲ್ಲಿ ಅದಕ್ಕೆ ‘ಧನಾತ್ಮಕ’ ಅಥವಾ ‘ಋಣಾತ್ಮಕ’ ಮೌಲ್ಯವನ್ನು ಕೊಡಲಾಗುವದಿಲ್ಲ. ಹಾಗೆ ಯಾವುದೇಧನಾತ್ಮಕ ಅಥವಾ ಋಣಾತ್ಮಕ  ಮೌಲ್ಯವಿಲ್ಲದಿರುವದಕ್ಕೆ ಗಣಿತ ಶಾಸ್ತ್ರವು  ಸೂಚಿಸುವ  ಗುರುತು’ಶೂನ್ಯ’ ಅಥವಾ ಸೊನ್ನೆ.’

ಈಗ ಅಸ್ತಿತ್ವದಲ್ಲಿ  ಇರುವುದು ಏನು?’ ಎಂಬ  ಪ್ರಶ್ನೆ ನಾಸ್ತಿಕನಿಗೆ ಎದುರಾಯಿತೆನ್ನೋಣ. ಒಬ್ಬ ನಿಷ್ಠಾವಂತ  ನಾಸ್ತಿಕನು ಯಾವುದೊಂದು  ವಸ್ತುವಿನ ಅಸ್ತಿತ್ವವನ್ನಾದರೂ ಶಂಕಿಸಿ ಅಲ್ಲಗಳೆಯಬಹುದು. ಆದರೆ  ಹಾಗೆ ಶಂಕಿಸಿ  ಅಲ್ಲಗಳೆಯುವವ ತನ್ನನ್ನೇ ಇಲ್ಲವೆನ್ನಲಾರನು. ಮತ್ತೆ  ಗಣಿತದ  ಪರಿಭಾಷೆಯಲ್ಲಿ. ಹೇಳುವದಾದರೆ ಅದನ್ನು ಅನುಕೂಲಕ್ಕಾಗಿ ‘ಒಂದು’ ಎಂದೆನ್ನಬಹುದು.

‘ಸೊನ್ನೆ’ಯ ಚಮತ್ಕಾರದ ಕಾರ್ಯವನ್ನು ನೋಡಿ.  ಇರವೇ ಇಲ್ಲದ ಸೊನ್ನೆಯನ್ನು ಇರವು  ಹೊಂದಿದ  ‘ಒಂದು’ ಎಂಬುದರ ಬಲಕ್ಕೆ ಸೇರಿಸುತ್ತ ಹೋದಾಗ ಅದು  ದೊಡ್ಡದಾಗುತ್ತ ಹೋಗುತ್ತದೆ. ಈ ವಿಸ್ತಾರಕ್ಕೆ, ಗ್ರಹಿಸಬಹುದಾದ’ ಮೇರೆ’ಯೇ  ಇಲ್ಲವೆನ್ನಬಹುದು. ಈ ವಿಸ್ತ್ರತ ಅನಂತವನ್ನೇ ಉಪನಿಷತ್ತುಗಳು ದೊಡ್ಡಕ್ಕಿಂತ ದೊಡ್ಡದು (ಮಹತೋ ಮಹೀಯಾನ್) ಎಂದು ಗುರುತಿಸಿರುವದು ಯೋಗ್ಯವೇ ಇದೆ. ಈಗ ‘ಒಂದ’ರ ಎಡಭಾಗಕ್ಕೆ  ಅರ್ಥಾತ್  ಅಭಾವಾತ್ಮಕ ಸ್ವರೂಪದ ಕಡೆಗೆ ಋಣಾತ್ಮಕ‌ ಪ್ರಕ್ರಿಯೆಯೊಂದಿಗೆ, ಅಂದರೆ, ದಶಮಾಂಶ ಬಿಂದುವಿನೊಂದಿಗೆ ಸೊನ್ನೆಯನ್ನು ಸೇರಿಸುತ್ತ ಹೋಗಿರಿ. ಹೆಚ್ಚು  ಹೆಚ್ಚು  ಸೊನ್ನೆಗಳನ್ನು  ಸೇರಿಸುತ್ತ ಹೋದಂತೆಲ್ಲ ಅದು’ಒಂದ’ರ ಮೌಲ್ಯವನ್ನು ಸೊನ್ನೆಗೆ ಮತ್ತೂ ಹತ್ತಿರ ತರುತ್ತದೆ ಮತ್ತೆ ಇಲ್ಲಿ ಕೂಡ ‘ಸ್ವಾತ್ಮ’ ದ (‘ಒಂದ’ರ) ಈ  ಸಂಕೋಚನಕ್ಕೆ ಮಿತಿಯೇ ಇಲ್ಲ ವೆನ್ನಬಹುದು. ಇದನ್ನೆ ಉಪನಿಷತ್ತುಗಳು ಚಿಕ್ಕದಕ್ಕಿಂತ ಚಿಕ್ಕದು (ಅಣೋರಣೀಯಾನ್) ಎಂದು  ಯೋಗ್ಯವಾಗಿಯೇ ವರ್ಣಿಸಿವೆ.

ದೇವರ ಬಗ್ಗೆ ಇರುವ ವಿವಾದವು ಕೃತಕವಾದುದೆಂದು ನನ್ನ   ನಂಬುಗೆ.  ವಿವಿಧ  ಸಾಂಸ್ಕೃತಿಕ  ಕುಲಗಳ ಇತಿಹಾಸದ  ಪ್ರವಾಹಗತಿಯಲ್ಲಿ  ‘ದೇವರ’ ಮೇಲೆ ಆರೋಪಿಸಲಾದ   ಅನೇಕ  ತಪ್ಪು ಕಲ್ಪನೆಗಳಿಂದಾಗಿ ಅದು (ವಿವಾದವು) ಉಂಟಾದುದು.  ಆ ಕಾರಣ ಈ ಸಮಸ್ಯೆಯನ್ನು ಎದುರಿಸುವಾಗ ಉದ್ವೇಗದ ನಿಲುವನ್ನು ಬಿಡಬೇಕಾದುದು ಅವಶ್ಯ ಯಾಕಂದರೆ ಅದುಮಾನವನ   ದೃಷ್ಟಿಗೆ  ಮಂಕು  ಕವಿಯುವಂತೆ ಮಾಡಿ, ಗುರಿಯತ್ತ  ಸಾಗುವ ಅವನ ಪ್ರಗತಿಗೆ ಬಾಧಕವಾಗುತ್ತದೆ.

ತಿಳಿವಳಿಕೆಯ ಸಲುವಾಗಿ ಅದನ್ನು’ಶೂನ್ಯ’ ಅಥವಾ’ ಕೇಂದ್ರ’ ಅಥವಾ  ‘ಆಧಾರ ಎಂದು  ಕರೆಯಬಹುದು. ಪ್ರಕೃತಿಯಾಗಲಿ, ಪ್ರಪಂಚವಾಗಲಿ, ಆಧಾರವಿಲ್ಲದೆ ನಿಲ್ಲಲಾರದು.’ ಅಸ್ತಿತ್ವಕ್ಕೆ(ಇರವು)ಒಂದು ಆಶ್ರಯವಿರಲೇ ಬೇಕು. ಆ  ಆಶ್ರಯವೇ  ದೇವರು. ಬ್ರಹ್ಮ ಅಥವಾ ‘ಪರತತ್ವ’ ಅದೇ  ‘ಭೂಮಾ’; ವಸ್ತುರಹಿತ  ವಸ್ತು, ಶಕ್ತಿರಹಿತ  ಶಕ್ತಿ.

ಇನ್ನು ಮುಂದೆ  ಜನರಿಗೆ  ತಿಳಿದಿರದೆನ್ನಬಹುದಾದ ಒಂದು  ಗೂಢ ವಿಷಯದ  ಮಹತ್ವವನ್ನು  ತೆರೆದಿಡಬಹುದು  ಸಾಧಾರಣವಾಗಿ ಜನರು’ಸತ್’ ಎಂಬುದು ಪರವಸ್ತು ವೆಂದು ಭಾವಿಸಿ ದೇವರ ಕುರಿತ ಜ್ಞಾನವನ್ನು ಅಳೆಯುವ  ಅಳತೆಗೋಲಾಗಿ ವರ್ಣಿಸುತ್ತಾರೆ. ವಾಸ್ತವ ದಲ್ಲಿ ಅದು ‘ತಮದ’, ಕೇವಲ ತಮದ ಮಂಡಲವೇ ಆಗಿದೆ ನಿಜವಾದ ಯೋಗಿಗೆ ಸಂಪಾದಿಸಲು ಯೋಗ್ಯ ವಾದ ಏಕೈಕ ವಸ್ತುವೆಂದರೆ ಅದೇ. ಆ ಮಟ್ಟದ ವರೆಗೆ ಪ್ರವೇಶ ಪಡೆಯುವುದು ಅತ್ಯಂತ ಕಠಿಣವೆಂಬುದರಲ್ಲಿ ಸಂದೇಹವಿಲ್ಲ. ‘ಸತ್’ನ್ನು ಪಡೆಯುವುದು ಸುಲಭದ ಕೆಲಸ. ಆದರೆ ‘ತಮ’ ಎಂದು ಕರೆಯಲಾದ ಸ್ಥಿತಿಯು  ಸುಲಭಸಾಧ್ಯವಲ್ಲ. ಅದನ್ನು ಮೀರಿದುದಾವುದೂ ಇಲ್ಲ. ಜನರು  ಅದನ್ನು ಕುರಿತು ಬಹಳಷ್ಟು ಮಾತನಾಡುತ್ತಾರೇನೋ ಸರಿ, ಆದರೆ ಅದರ ವರೆಗೆ ಪ್ರವೇಶ ಪಡೆಯಲು ಪ್ರಯತ್ನ ಪಡುವವರು ಇಲ್ಲವೆಂದರೂ  ಸರಿಯೆ.ಅಲ್ಲಿ ಶುದ್ಧತೆ,   ಸರಳತೆ,   ಶಾಂತಿಗಳು.  ಕೂಡ  ಇಲ್ಲ. (ಲುಪ್ತವಾಗಿಹೋಗುತ್ತವೆ). ನಿಜವಾಗಿ ಅದು ಇವೆಲ್ಲವುಗಳಿಗೂ ಆಚೆಗೆ ಇದೆ. ಜನ್ಮಜನ್ಮಗಳ, ಬಹುವರ್ಷಗಳ  ನಿರಂತರ ಪರಿಶ್ರಮದಿಂದ ಸಂಪಾದಿಸಬಹುದಾದ ವಸ್ತು ಇದೇ. ಪ್ರಪಂಚದ  ಅತಿದೊಡ್ಡ  ಸಂತರೂಕೂಡ ಈ ವಿಷಯದಲ್ಲಿ ಆ  ಮಟ್ಟಕ್ಕೆ  ಏರಲಾಗಿರಲ್ಲಿಲ್ಲವೆಂದು. ನಾನು ಧೈರ್ಯದಿಂದ ಹೇಳಬಲ್ಲೆ. ಸಾಧಕನು ಪಡೆಯಲು ತಪಿಸುವ  ಆತ್ಮನಿರಸನದ  ಸ್ಥಿತಿ ಅದರಲ್ಲಿದೆ. ಅದೇ ನಿಜವಾದ ಜೀವನ. ಆ ಬಿಂದುವನ್ನು ತಲುಪುವುದಕ್ಕೂ ಮುಂಚಿತವಾಗಿಯೇ  ಎಲ್ಲ ಕ್ರಿಯೆಗಳೂ ಕೊನೆಗೊಳ್ಳುತ್ತವೆ ಅದು ಕೇಂದ್ರೀಯ ಬಿಂದು, ‘ಸತ್ತೆ’ಯ ನೈಜ ಸ್ಥಿತಿ ಅದೇ. ಬಹು ಪರಿಶ್ರಮಪಟ್ಟಿದ್ದಾಗಲೂ ಅದು ಅನೇಕ ಸಂದರ್ಭಗಳಲ್ಲಿ(ಜನರಿಗೆ)ಕೈಗೆಟುಕದೆ ಹೋಗಿದೆ.

ಜನರು  ಈ’ತಮ’ದ ಸ್ಥಿತಿಯನ್ನು  ತಮ್ಮ ಅತ್ಯಂತ ಘಾತಕ   ಶತ್ರುವೆಂದು   ಭಾವಿಸುತ್ತಾರೆ.  ಯಾರಲ್ಲಿ ಸಂಪೂರ್ಣ ಅಜ್ಞಾನದ ಸ್ಥಿತಿಯು ಸಂಪೂರ್ಣ ತಾನೇ  ತಾನಾಗಿ ನೆಲೆಗೊಂಡಿದೆಯೋ  ಅಂಥ ವ್ಯಕ್ತಿಯನ್ನು ಪರಿಶೀಲಿಸಿನೋಡಿದರೆ, ಪ್ರಗತಿಯ ಅತ್ಯುನ್ನತ ಶಿಖರಸ್ಥಿತಿ ಯನ್ನು ಅವನಲ್ಲಿ ಕಾಣಬಹುದು. ಅವನು ಶಿಶುಸದೃಶ್ಯ ನಾಗಿರುತ್ತಾನೆ;ಅವನಿಗೆ ತನ್ನದೇ ಸ್ಥಿತಿಯ ಅರಿವುಕೂಡ  ಇರುವುದಿಲ್ಲ. ಆದರೆ ಅದಕ್ಕೆ ‘ಸತ್ತಿ’ ನ ಅಲ್ಪ ಸ್ಪರ್ಶವಾದರೆ ಸಾಕು,  ಆಗ ಆತನಿಗೆ ತನ್ನ’ತಮ’ದ ಸ್ಥಿತಿಯ ಅರಿವುಂಟಾಗಲು  ಆರಂಭವಾಗುತ್ತದೆ.  ಯಾಕಂದರೆ,ಇವೆರಡರ ಸಂಧಿ ಬಿಂದುವು,ಯಾವ ಸ್ಥಿತಿಯು ಸೃಷ್ಟಿಗೆ ಆಧಾರವಾಗಿತ್ತೋ  ಅದಕ್ಕೆ ಸದೃಶವಾದ ಒಂದು ಸ್ಥಿತಿ ಯನ್ನುಂಟುಮಾಡುವತ್ತ ಕರೆದೊಯ್ಯುತ್ತದೆ.

ಸಾಮಾನ್ಯವಾಗಿ  ಹೊಳೆಯುವ  ಮತ್ತು.  ಕೋರೈಸಿ ತೋರುವ  ವಸ್ತುವಿನೆಡೆಗೆ ನಮ್ಮ ಕಣ್ಣು ಸೆಳಯಲ್ಪಡುತ್ತದೆ. ಅದನ್ನೇ  ನಾವು ಸಾಮಾನ್ಯವಾಗಿ ‘ಸತ್’ಎಂದು ಭ್ರಮಿಸುತ್ತೇವೆ. ಈ  ಹೊಳೆಯುವ  ವಸ್ತು ಮಾಯೆಯಲ್ಲದೇ   ಬೇರೇನೂ  ಅಲ್ಲ.  ಅದನ್ನು ಬಹಳಷ್ಟು ಎತ್ತಿ  ಹೊಗಳುವವರು  ಆಧ್ಯಾತ್ಮದ  ವಲಯದಿಂದ ಕೂಡ  ಬಹುದೂರವಿದ್ದಾರೆ, ಇನ್ನು’ಸತ್ಯ’ದ ಮಾತು ಹೇಳುವದೇ  ಬೇಡ. ಆದರೆ ಜನರು ಎಂಥ ಜಡತ್ವದ ಸ್ಥಿತಿಯನ್ನು  ಬೆಳೆಸಿಕೊಂಡಿದ್ದಾರೆಂದರೆ,  ಅವರು ಈ ವಿಷಯದಲ್ಲಿ  ಏನನ್ನೂ ಗ್ರಹಿಸುವ ಅಥವಾ ಕೇಳಿಸಿ ಕೊಳ್ಳುವ ಒಲವೇ ಇಲ್ಲದವರಾಗಿದ್ದಾರೆ. ಬೆಳಕು, ಕತ್ತಲೆ ಇವೆರಡಕ್ಕೂ ಆಚೆಗೆ ಇರುವ ನೈಜ ಸತ್ಯತೆಯ ದರ್ಶನ ಅವರಿಗೆ ಮರೆಯಾಗಿ  ಬಿಟ್ಟಿದೆ. ಇದನ್ನೇ  ಮಿಷನ್ನಿನ ಬೋಧಚಿಹ್ನೆಯಲ್ಲಿ   ತೋರಿಸಿರುವುದು.  ನಿಜವಾದ ಅರ್ಥದಲ್ಲಿ ಮನುಷ್ಯನ ಪರಿಪೂರ್ಣತೆ  ಸ್ಥಿತಿಯೆಂದರೆಅದೇ. ಆ ಸ್ಥಿತಿಯಿಂದ ಹಿಂದೆ  ಸರಿಯುವದಾಗಲಿ, ಪತನವಾಗುವದಾಗಲಿ ಸಾಧ್ಯವಿಲ್ಲ. ಇದು ತಾತ್ವಿಕದರ್ಶನದ ಅತಿಸೂಕ್ಷ್ಮ ಸಂಗತಿ. ಈ ಬೆಳಕು ಅಲ್ಲದ, ಕತ್ತಲೆಯೂ  ಅಲ್ಲದ   ಸ್ಥಿತಿಯನ್ನು ಸಂತರು ‘ಸತ್ಪದ’  ಎಂದು ಕರೆದಿದ್ದಾರೆ. ಆದರೆ ಅದು ಸರಿ ಅಲ್ಲ,  ಯಾಕೆಂದರೆ ಈ ಸ್ಥಿತಿ ಅದಕ್ಕಿಂತ ಬಹಳ ಆಚೆಗಿದೆ. ಇದು  ನಿಜವಾಗಿಯೂ ಬಹಳ  ಆಚೆಗಿರುವ  ಸತ್ಯದ  ಪ್ರತಿಫಲನ ಮಾತ್ರ. ಈ  ಪುಟಗಳನ್ನು  ಓದುವ ಜನರಿಗೆ ಇದು ಆಶ್ಚರ್ಯವೆನಿಸಬಹುದು.ಆದರೆ ನಾನಿದನ್ನು ಬರೆದಿರುವುದು, ಆಧ್ಯಾತ್ಮ  ವಿದ್ಯೆಯಲ್ಲಿ  ಪ್ರಗತಿಹೊಂದಿದ, ಈ ವಿಜ್ಞಾನದ. ಸಂಪೂರ್ಣ ಜ್ಞಾನವಿರುವವರಿಗೋಸ್ಕರ. ಇದನ್ನು ಪ್ರಾಯೋಗಿಕ ಮಾರ್ಗದಲ್ಲಿ ಮಾತ್ರವೇ ಅನುಭವಿಸಿ  ಕಾಣಬಹುದೇ ಹೊರತು,  ಮತಧರ್ಮಗಳ ಪರಿಧಿಗಳೊಳಗೆ  ಇದನ್ನು ಕಾಣಲಾಗದು .ಇದೊಂದು ಸಂಪೂರ್ಣ ಬೇರೆಯದೇ ಆದ ಮಾರ್ಗ. ತಮ್ಮ ಅಂತರ್ದೃಷ್ಟಿಯಿಂದ. ಪ್ರಕೃತಿಯನ್ನು  ನೋಡುವ ಸಾಮರ್ಥ್ಯ ಬೆಳೆಸಿಕೊಂಡು  ಸಾಕಷ್ಟು ಅರ್ಹತೆ ಪಡೆಯದೆ ಬೇರೆ ಯಾರಿಗೂ ಇದು  ಲಭ್ಯವಿಲ್ಲ ಇದೇ  ಸ್ವತಃ ಒಂದು ವಿಜ್ಞಾನವಾಗಿದೆ.

ಸಾರೂಪ್ಯತೆ (Identity)

ಸಾರೂಪ್ಯತೆಯನ್ನು ಕುರಿತು ಹೇಳುವದಾದರೆ ಅದು ಕ್ರಮೇಣ  ಒಂದು ಚಿತ್-ತರಂಗವಾಗಿ ರೂಪತಾಳುವ ಒಂದು ಸೂಕ್ಷ್ಮ ಭಾವರೂಪದ ಎನೋ ಒಂದು ವಸ್ತುವೆಂದು ಊಹಿಸಿಕೊಳ್ಳಬಹುದೆಂದು ನಾನು ಹೇಳಿಯೇನು. ಅದರ ನಿಜವಾದ ಅರ್ಥವನ್ನು ತಿಳಿಯಪಡಿಸುವುದು ಬಹಳ ಕಷ್ಟ. ಮೂಲದ ಪ್ರಜ್ಞೆಯನ್ನು ನಮ್ಮ ಅರಿವಿಗೆ ತರುವಂಥ ವಸ್ತುವೆಂದೋ, ಅಥವಾ ಮೂಲ ಪ್ರಜ್ಞೆಯ ಕಿಂಚಿತ್ ಸ್ಥೂಲ ಸ್ವರೂಪವೆಂದೋ ಅಥವಾ ಬೇರೆ  ಶಬ್ದಗಳಲ್ಲಿ ಹೇಳುವದಾದರೆ, ಏನೋ ಒಂದು ಸ್ಥೂಲತರ ಆವರಣದಲ್ಲಿ ಪರಿವೃತಗೊಂಡ‌ ಸತ್ಯವೇ ಎಂದೋ ಭಾವಿಸಬಹುದು.ಸ್ದೂಲತರವಾದ ಸ್ವರೂಪವು ಅದರಾಚೆಗೆ ಇರುವ ಮತ್ತು ಅದರ ಅಸ್ತಿತ್ವಕ್ಕೆ ಕಾರಣವಾದ ಏನೋ ಒಂದು ವಸ್ತುವಿರಬೇಕೆಂಬ ಭಾವನೆಯನ್ನು ನಮ್ಮ  ಹೃದಯದಲ್ಲಿ ಮೂಡುವಂತೆ ಮಾಡುವುದು. ಅದೇ ಸರದಿಯಲ್ಲಿ ಅದಕ್ಕೂ ಒಂದು ಕಾರಣವಿರಬೇಕೆಂಬ ತೀರ್ಮಾನಕ್ಕೆ  ಯಾರಾದರೂ ಬರಬಹುದಾಗಿದೆ.ಈ ಅನುಕ್ರಮಗತಿಯು ನಮ್ಮ ಅರಿವಿನಾಚೆ ಮರೆಯಾಗಿ ಹೋಗುವ ಮಟ್ಟದವರೆಗೂ ಈ ಕಾರಣ ಮತ್ತು ಕಾರ್ಯಗಳ ಕ್ರಮಗತಿ ಮುಂದುವರಿಯುತ್ತದೆ.ಇದಕ್ಕೂ ಒಂದು ಕಾರಣ ವಿರಲೇಬೆಕೆಂದು ಯಾರಾದರೂ ತರ್ಕದ ಮೂಲಕ ಹೇಳಬಹುದು.ಆದರೆ, ಆಗ ಅದು ಮಾನವನ  ಗ್ರಹಿಕೆಗೆ ಮೀರಿದುದು;ಅತಿ ಸೂಕ್ಷ್ಮಸ್ತರದಲ್ಲಿ ಅದನ್ನು ಸಾರೂಪ್ಯತೆ ಎಂದು ಅಂಕಿತಗೊಳಿಸಲಾಗಿದೆ ಎಂದರೆ ಸಾಕು.ದೇಹಧಾರಿಯಾದ ಪ್ರತಿ ಯೊಂದು ಜೀವಿಗೂ ಒಂದು ಸಾರೂಪ್ಯತೆ ಇರಲೇಬೇಕು ಉನ್ನತ ಸ್ತರಗಳಿಗೆ ಹೋದಂತೆಲ್ಲ ಅದು ಹೆಚ್ಚು ಹೆಚ್ಚು ನವುರಾಗಿಯೂ,ಸೂಕ್ಷ್ಮವೂ ಆಗಿರುತ್ತದೆ. ಸಾರೂಪ್ಯತೆ ಎಷ್ಟು ಸೂಕ್ಷ್ಮವಾಗುತ್ತದೆಯೋ ಅದೇ ಪ್ರಮಾಣದಲ್ಲಿ ಮನುಷ್ಯನು ಜೀವನದಲ್ಲಿ ಹೆಚ್ಚು ಶಕ್ತಿಯುತನಾಗುತ್ತಾನೆ.

ಮಹಾಪ್ರಳಯದ ಸಮಯದವರೆಗೂ ಸಾರೂಪ್ಯತೆ ಉಳಿದಿರುತ್ತದೆ. ಆಗ ಅದು ತನ್ನ ವ್ಯಷ್ಟಿ-ಅನನ್ಯತೆಯನ್ನು ಕಳೆದುಕೊಳ್ಳುತ್ತದೆ  ಅರ್ಥಾತ್  ವ್ಯಷ್ಟಿ-ಅನನ್ಯತೆಯು (ಸಾರೂಪ್ಯತೆಯು) ಸಮಷ್ಟಿಯ ಒಂದು(ಏಕೈಕ)ಅನನ್ಯತೆಯಲ್ಲಿ  ಲಯ  ಹೊಂದುತ್ತದೆ. ಇದು  ಅನಂತರ ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಈ ರೀತಿಯಲ್ಲಿ ಕೊನೆಗೊಳ್ಳುವುದು ವ್ಯಕ್ತಿತ್ವವೇ (Indiviality) ಹೊರತು ಸಾರೂಪ್ಯತೆ(Identity ) ಅಲ್ಲ. ಹೀಗಿರುವುದಕ್ಕೆ  ಕಾರಣವೆಂದರೆ  ಮೂಲದಲ್ಲಿ  ಅರ್ಥಾತ್ ಕೇಂದ್ರದಲ್ಲಿರುವ   ಸುಪ್ತಕ್ರಿಯೆ.  ಅಲ್ಲಿ  ಇರುವಿಕೆ (ಸತ್) ಮತ್ತು ಇಲ್ಲದಿರುವಿಕೆ(ಅಸತ್)ಗಳ ವ್ಯತ್ಯಾಸ ನಾಮಮಾತ್ರ.

ವಿಶ್ವೋತ್ಪತ್ತಿ

ಪ್ರಪಂಚವು ಅನಾದಿ ಅಥವಾ ಅನೂಹ್ಯ ಕಾಲದಿಂದಲೂ ಇದೆ. ಕೆಲವರು ಸೃಷ್ಟಿ-ಶಕವನ್ನು ನಿರ್ಧರಿಸಲು ಪ್ರಯತ್ನ ಮಾಡಿರುವರಾದರೂ ಇದುವರೆಗೆ ಅದರ ಸರಿಯಾದ ದಿನಾಂಕವನ್ನು ಕಂಡುಹಿಡಿಯಲಾಗಿಲ್ಲ. ಸೃಷ್ಟಿಗೆ ಮುಂಚೆ ಇದ್ದ  ಏಕೈಕವಾದುದೆಂದರೆ  ದೈವತ್ವ. ಅದು ಯಾವ ಘನತ್ವ ಅಥವಾ ಸ್ಥೂಲತೆಯಿಲ್ಲದೆ, ತನ್ನ ಶುದ್ಧ ಮೂಲ ಸ್ಥಿತಿಯಲ್ಲಿತ್ತು ಮತ್ತು ಎಲ್ಲವಸ್ತುಗಳೂ(ಪ್ರತಿಯೊಂದೂ) ತಮ್ಮ  ಸಾರರೂಪದಲ್ಲಿ ಅದರಲ್ಲಿ  ಲಯಹೊಂದಿದ ಸ್ಥಿತಿಯಲ್ಲಿದ್ದುವು. ಸೃಷ್ಟಿಯು ವ್ಯಕ್ತಗೊಳ್ಳು ಮೊದಲು ಕೇಂದ್ರದ ಸುತ್ತಲೂ ಮತ್ತು ಅದಕ್ಕೆ ನಿಕಟ ಸಾಮಿಪ್ಯದಲ್ಲಿ  ಕೇವಲ  ಅವ್ಯಕ್ತಚಲನೆ ಮಾತ್ರವಿತ್ತು, ಹಾಗೂ ಅದರಲ್ಲಿ ಸೃಷ್ಟಿಸಂಕಲ್ಪಭಾವವು ಇದ್ದಿತು. ಅದನ್ನು ಆದಿ ಮನ, ಅಥವಾ ವಿದ್ಯೆ(ಅವಿದ್ಯೆ) ಎಂದುಕರೆಯಬಹುದು.ಗ್ರಹಿಕೆಗೋಸ್ಕರ ಅದನ್ನು ಚಲನೆ, ಕ್ಷೋಭ, ಸ್ಪಂದನ, ಶಕ್ತಿ ಅಥವಾ ಇನ್ನಾವುದೋ ಎಂದುಕೂಡ ಕರೆಯಬಹುದು. ಅದು ಸೃಷ್ಟಿಗೂ,ಅದಕ್ಕೆ ಅಗತ್ಯವಾದ ಎಲ್ಲವುಗಳಿಗೂ ಆತ್ಯಂತಿಕ ಕಾರಣವಾಗಿತ್ತು. ಸೃಷ್ಟ್ಯುದ್ಭದ ಕಾಲ ಸನ್ನಿಹಿತವಾದಾಗ ಗುಪ್ತ ಅಥವಾ ಸುಪ್ತವಾಗಿದ್ದ ಚಲನೆಯಲ್ಲಿ ಅಂತರ್ಗತವಾಗಿದ್ದ  ಕಲ್ಪನೆಯು ಪಕ್ವಗೊಂಡು ಚಲನೆಯಲ್ಲಿ ಮಂಥನವನ್ನುಂಟು ಮಾಡಿತು ಮತ್ತು ಶಕ್ತಿ ಅಥವಾ ಊರ್ಜೆಯನ್ನು ಸೃಷ್ಟಿಸಿತು. ಆ ಶಕ್ತಿ ರಭಸದಿಂದ  ಹೊರ ಹೊಮ್ಮಿತು. ಸೂಕ್ಷ್ಮಾತಿಸೂಕ್ಷ್ಮಕಣಗಳು ಶಾಖ  ಹೊಂದಿದವು. ಹೀಗೆ ಮೊದಲ ದಿನದಿಂದಲೇ ಆವರಣಗಗಳುಂಟಾಗಲು ಪ್ರಾರಂಭವಾಯಿತು. ಸತತವಾಗಿ ಕಾವು ಪಡೆದುದರ ಪರಿಣಾಮವಾಗಿ ಕಣಗಳು  ಚಲನೆಯನ್ನು ಪಡೆದವು. ಅದರ  ತೀರ್ವತೆ ಹೆಚ್ಚುತ್ತ ಹೋಯಿತು ಮತ್ತು ಆವರಣದ ಮೇಲೆ ಆವರಣವನ್ನು ಸೇರಿಸುತ್ತ ಹೋಯಿತು. ತೀವ್ರತೆ ಮತ್ತು ಸ್ಪಂದನಗಳು ವರ್ಧಿಸುತ್ತ ಹೋಗುತ್ತಿರುವದರ ಪರಿಣಾಮವಾಗಿ ಸ್ಥೂಲತೆ ಬೆಳೆಯಲಾರಂಭಿಸಿತು. ಪ್ರತಿಯೊಂದು ಕಣದ ಕ್ರಿಯೆಯೂ ಪ್ರಾರಂಭವಾಯಿತು ಹಾಗೂ ದ್ವಿಗುಣಗೊಳ್ಳುತ್ತ ಹೋಗಿ, ರೇಷ್ಮೆಹುಳು ತನ್ನ ಗೂಡಿನಲ್ಲಿಯೇ ಮುಚ್ಚಲ್ಪಡುವಂತೆ, ಸತ್ಯವು(ಪರತತ್ವವು) ಆವೃತಗೊಳ್ಳುವವರೆಗೂ ಅದು ಮುಂದುವರಿಯಿತು.

ಹೀಗೆ ಸೃಷ್ಟಿಯ ಪ್ರಾರಂಭದಲ್ಲಿ ಒಂದು ಕ್ಷೋಭ ಅಥವಾ ಚಲನವಿತ್ತು. ಈ ಚಲನೆ ಸೃಷ್ಟಿಯ ಆಧಾರವಾಯಿತು.ದೇವರ ನಂತರದ ನಿಕಟತಮ ‘ಪವಿತ್ರ ವಸ್ತುವು’ ಅದು. ಅದೇ ಮಾನವ ಮನಸ್ಸಿನ ರೂಪದಲ್ಲಿ ವ್ಯಕ್ತವಾಯಿತು. ಸೃಷ್ಟುದ್ಭವದ ಸಮಯ ಸನ್ನಿಹಿತವಾದಾಗ, ಅದರ  ಸಿದ್ಧತೆಗಳು  ಮೊದಲಾದವು.  ಧಾರೆಗಳು ಪ್ರವಹಿಸಿದವು,  ಸ್ಪಂದನಗಳು ತೀರ್ವಗೊಂಡವು,ಗ್ರಂಥಿಗಳ ರಚನೆ  ಪ್ರಾರಂಭವಾಯಿತು ಚಲನಶಕ್ತಿಯು ಸಂಘಾತ ಗೊಂಡಿತು. ಮಂಥನ  ಪ್ರಕ್ರಿಯೆ  ಆರಂಭವಾಯಿತು. ವಸ್ತುಗಳು ಪ್ರತ್ಯೇಕ ಆಕಾರಗಳನ್ನು ಪಡೆಯುವವರೆಗೂ ಕ್ರಿಯೆ-ಪ್ರತಿಕ್ರಿಯೆಗಳು ಮುಂದುವರಿದುವು.‌‌ ಸೃಷ್ಟ್ಯುದ್ಭದ ಕ್ರಿಯೆಯು ಪೂರ್ಣ ರಭಸ ಪಡೆಯಿತು.ಚೇತನಾಚೇತನ ವಸ್ತುಗಳು ವ್ಯಕ್ತ ಅಸ್ತಿತ್ವದಲ್ಲಿ ಮೈದೋರತೊಡಗಿದವು. ಕಾಲ ಕ್ರಮದಲ್ಲಿ  ಎಲ್ಲ  ವಸ್ತುಗಳೂ ಪ್ರಕಟಗೊಂಡು ವಿಶ್ವವು  ರೂಪು  ತಳೆಯಿತು. ಕೇಂದ್ರದ ಸೂತ್ತಲೂ ನಡೆಯುತ್ತಿರುವ ಪರಿಭ್ರಮಣ ಚಲನೆಯ ಪರಿಣಾಮವಾಗಿ  ಪ್ರಕೃತಿಯು  ವ್ಯಕ್ತರೂಪ ಪಡೆಯಿತು. ಚಲನೆಯಿಂದ  ಶಕ್ತಿಯುಂಟಾಗಿ ಅದು  ಅನಂತರ ಸೃಷ್ಟಿಗೆ ಕಾರಣವಾಗಿ ಸಂದಿತು.ವಿಶ್ವ  ಪ್ರಕಟಿಕರಣಕ್ಕೆ ಕಾರಣವಾಗಲು ಉದ್ಭವಿಸಿ ಬಂದ ಈ  ಆದಿಮ  ಚಲನೆ ಅಥವಾ ಕ್ಷೋಭವು  ಪರವಸ್ತುವಿನ (ಪರಮಾತ್ಮನ) ಸುಪ್ತ ಸಂಕಲ್ಪದಿಂದ   ಕ್ರಿಯಾರೂಪಕ್ಕೆ  ತರಲ್ಪಟ್ಟಿತು.  ಈ  ಕ್ಷೋಭವು  ಸುಪ್ತಶಕ್ತಿಗಳಿಗೆ  ಮತ್ತು ಸೃಷ್ಟಿ ಪ್ರಕ್ರಿಯೆಗೆ ಚಾಲನೆ ನೀಡಿತು. ಕ್ಷೋಭ ಅಥವಾ ಪ್ರಚೋದಕದಂತೆ ಕಾಣಿಸಿಕೊಂಡ. ಅದೇ ಮೂಲ ಶಕ್ತಿಯು ಪ್ರತಿಯೊಂದು ಜೀವಿಯಲ್ಲಿಯೂ (ಸತ್ತೆಯಲ್ಲಿಯೂ) ಪ್ರಮುಖ ಕ್ರಿಯಾ ಶಕ್ತಿಯ ರೂಪದಲ್ಲಿ ಅವತರಣಗೊಂಡಿತು. ಮಾನವನಲ್ಲಿ ಅದು ‘ಮನಸ್ಸು’ ಎಂಬ ಸಂಜ್ಞೆಯನ್ನು ಪಡೆಯಿತು. ಕ್ಷೋಭದಲ್ಲಿ ಇದ್ದಂಥ. ಅದೇ ಸುಪ್ತ ಸಂಕಲ್ಪವು ಇದರ (ಮಾನವನ ಮನಸ್ಸಿನ)   ಮೂಲದಲ್ಲಿಯೂ  ಇದೆ. ಈ  ರೀತಿ ಮಾನವನ ಮನಸ್ಸು ಮೂಲಶಕ್ತಿಯೊಂದಿಗೆ ಅರ್ಥಾತ್ ಪ್ರಥಮ ಕ್ಷೋಭದೊಂದಿಗೆ ನಿಕಟಸಾರೂಪ್ಯ ಹೊಂದಿದೆ. ಹಾಗಿರುವುದರಿಂದಲೇ ಅವೆರಡರ ಕಾರ್ಯಗಳೂ ನಿಕಟ ಸಾದೃಶ್ಯ(ಸಮರೂಪತೆ)ಹೊಂದಿವೆ.

ಕ್ಷೋಭದ ಕಾರಣದತ್ತ ಗಮನ ಸೆಳೆಯುತ್ತಲೇ ನಾನು ಸೃಷ್ಟ್ಯುದ್ಭವ   ಕ್ರಿಯೆಯು  ಪ್ರಾರಂಭವಾಗುವದಕ್ಕೆ ಮುಂಚೆ ಪರಿಪೂರ್ಣ ಶಾಂತತೆ(ಶಾಂತ ಸ್ಥಿತಿ)ನೆಲೆಸಿತ್ತು ಎಂದು ಎತ್ತಿ ಸೂಚಿಸ ಬಯಸುತ್ತೇನೆ. ಊರ್ಜೆ ಅಥವಾ ಶಕ್ತಿಕೂಡ  ತನ್ನ ಮೂಲದಲ್ಲಿ ಸ್ತಂಭಿತ ಸ್ಥಿತಿಯಲ್ಲಿತ್ತು. ಆದರೆ  ಬದಲಾವಣೆಯ  ಕಾಲ  ಸನ್ನಿಹಿತವಾಯಿತು. ಚಲನೆಯು ಜಾಗ್ರತಗೊಂಡು ವಸ್ತುಗಳನ್ನು ಕ್ರಿಯೋದ್ಯುಕ್ತಗೊಳಿಸಿತು. ಇದರ ಫಲವಾಗಿ ಪ್ರಕ್ರತಿಯ ಸಂಕಲ್ಪಾನುಸಾರ  ರೂಪ-ಆಕಾರಗಳು ಮೈದಳೆದವು ಈ ಎಲ್ಲದರ ಬುಡದಲ್ಲಿ ಕ್ರಿಯಾತ್ಮಕ ಶಕ್ತಿಯೆಂದು ಕರೆಯಬಹುದಾದ ಎನೋ ಒಂದು  ಇತ್ತು ಅದಕ್ಕೂ ಒಂದು ಆಧಾರವಿರಲೇಬೇಕು; ಅದಿಲ್ಲದೆ ಅದಕ್ಕೆ ಕ್ರಿಯೆಯೆಂಬುದಿರಲು ಸಾಧ್ಯವಿಲ್ಲ.ಆ ಆಧಾರವೇ(ಪರತತ್ವ)ಅಥವಾ ಪರಾತ್ಪರ ವಸ್ತು ಹೀಗೆ  ಸೃಷ್ಟಿಯು ಚಲನೆಯ ಪರಿಣಾಮವೆಂದೂ ಮತ್ತು  ಚಲನೆಯು ಆ ಆಧಾರದ ಪರಿಣಾಮವೆಂದೂ ನಿಷ್ಕರ್ಷೆಗೆ ತಲುಪುತ್ತೇವೆ. ಆ ಆಧಾರ ಈಗಲೂ ‘ಇದೆ’ ಮುಂದೆಯೂ ‘ಇರುವುದು.’

ದೇಶ(Space)ಮತ್ತು ಕಾಲ(Time)

ಸೃಷ್ಟಿಪೂರ್ವದಲ್ಲಿ ‘ವ್ಯೋಮ’ (Space) (ಆಕಾಶ)ವೊಂದೇ ತಾನೇ ತಾನಾಗಿತ್ತು. ದೇವರ(ಈಶ್ವರನ)ಅಭಿವ್ಯಕ್ತಿಯು  ಅನಂತರದ ಬೆಳವಣಿಗೆ ಮತ್ತು ಅದರ (ಈಶ್ವರನ)ಪ್ರಕಟೀಕರಣಕ್ಕೆ ಸ್ವಲ್ಪ ಅವಧಿ ಹಿಡಿಯಿತು. ಆಕಾಶ  ಅನಂತವೆಂದೂ ಸನಾತನವೆಂದೂ  ನಮಗೆ ತೋರುತ್ತದೆ. ಹಾಗಿರುವದರಿಂದ  ದೇವರೂ   ಕೂಡ ಸನಾತನನೆಂದು ನಾವು ನಿಷ್ಕರ್ಷೆಗೆ ಬರುತ್ತೇವೆ. ದೇವರು ಅಸ್ಥಿತ್ವಕ್ಕೆ ಬಂದ  ಮೇಲೆ ಕಾಲ ಅನುಸರಿಸಿ ಬಂದಿತು. ಹೀಗೆ ಆಕಾಶವು ದೇವರ  ಸೃಷ್ಟಿಗೆ  ಜನನಿಯಾಗಿ ಸಂದಿತು ಮತ್ತು ‘ಕಾಲ’ ಅದರ  ಅಭಾವಾತ್ಮಕ (Negative) ಸ್ಥಿತಿಯಾಗಿತ್ತು. ಎಲ್ಲವೂ  ಅನಂತತೆಯಲ್ಲಿ  ಅಂತ್ಯಗೊಳ್ಳಬೇಕು. ಎಲ್ಲ  ವಸ್ತುಗಳಲ್ಲಿಯೂ ಚಲನೆ  ಕೂಡ,  ಅದೆಷ್ಟೇ  ಸೂಕ್ಷ್ಮವೂ, ಅದ್ರಶ್ಯವೂ ಆಗಿದ್ದರೂ ಸರಿಯೆ, ಇದ್ದೇ ಇತ್ತು. ಹಾಗಿದ್ದರೆ, ಆಕಾಶವನ್ನು ಯಾರು ಸೃಷ್ಟಿಸಿದವರು ಎಂದು ಯಾರಾದರೂ ಪ್ರಶ್ನಿಸಬಹುದು. ದೇವರ ಮತ್ತು ವಿಶ್ವದ ಸೃಷ್ಟಿಯ ಅವಶ್ಯಕತೆಯೇ ಆಕಾಶದ ಅಸ್ತಿತ್ವಕ್ಕೆ ಕಾರಣ ಎಂದು ಹೇಳುವದೊಂದೇ ಸಂಭಾವ್ಯ ಉತ್ತರವಾಗಬಹುದು. ಅದು ಈಗಲೂ ಇದೆ, ಎಂದೆಂದಿಗೂ ಇರುವುದು; ಆದ ಕಾರಣ  ಅದು  ಸನಾತನ.  ಹಾಗಾದರೆ  ದೇವರನ್ನು ಪೂಜಿಸುವ ಬದಲಾಗಿ  ಆಕಾಶವನ್ನೇ  ಏಕೆ  ಪೂಜಿಸಬಾರದು? ಋಗ್ವೇದದಲ್ಲಿ ಇದರ  ಬಗ್ಗೆ  ನಿರ್ದಿಷ್ವವಾಗಿ ಒಂದು ಸುಳುಹು ಇದೆ. ಆದರೆ ಸರಿಯಾದ  ಅರ್ಥ ವಿವರಣೆಯಿಲ್ಲದೆ ಈ ರಹಸ್ಯ ಪರಿಹಾರ ಕಾಣದೆ ಅಸ್ಪಷ್ಟವಾಗಿ ಉಳಿದಿದೆ. ಯಾರಾದರೂ ತನ್ನಲ್ಲಿ ಆಕಾಶದ ಸ್ಥಿತಿಯನ್ನು  ಉಂಟುಮಾಡಿಕೊಂಡರೆ ಆಗ ಅವನು ಅತ್ಯುನ್ನತ   ಸ್ಥಿತಿಯನ್ನು   ಮುಟ್ಟಿದಂತೆಯೇ  ಸರಿ. ಆ ಸ್ಥಿತಿಯು ಪ್ರತಿಯೊಬ್ಬನೂ ಯೋಗ್ಯವಾಗಿ ಅಭೀಪ್ಸೆಪಡಲೇಬೇಕಾದ ಆತ್ಮನಿರಸನದ ಅಂತಿಮ  ಸ್ಥಿತಿಗೆ  ಸದೃಶವಾಗಿರುತ್ತದೆ. ಈ ಪರಿಹಾರ ನಿಜಕ್ಕೂ ಅದ್ಭುತವಾದುದೆಂಬುದು ನಿಃಸಂಶಯ; ಮತ್ತು ಸಂಗಡವೇ, ಸಂಪೂರ್ಣ ವಿಶುದ್ದವೂ(ದೋಷರಹಿತವೂ) ಆಗಿದೆ. ಆಕಾಶ ಅಥವಾ ಬಯಲೇ ‘ಕೈವಲ್ಯ'(Absolute) ಅದು ಪರಮಾಣು (ಕಣ) ಸಂಘಾತದಿಂದ  ಉಂಟಾದುದಲ್ಲ; ಅದರಲ್ಲಿ ಯಾವ  ಕ್ರಿಯೆಯೂ  ಇಲ್ಲ.  ಅದು ಪರಿಪೂರ್ಣ ಶುದ್ಧವೂ, ಅಮಿಶ್ರಿತವೂ ಆಗಿದೆ, ಇದನ್ನು  ಪ್ರತಿಯೊಬ್ಬರಿಗೂ  ಮನವರಿಕೆ   ಮಾಡಿಕೊಡುವುದು  ನಿಜಕ್ಕೂ ಬಹಳ ಕಷ್ಟವೆಂಬುದೇನೋ ಸರಿ.

ಆಕಾಶವೆಂಬುದು ಬಯಲು, ಅವಕಾಶವೆಂಬುದು ಕಾಲ. ಇವೆರಡೂ ಪರಸ್ಪರ ಬಹಳೇ ಭಿನ್ನವಾಗಿವೆ. ಆಕಾಶದಿಂದ ಸೃಷ್ಟಿಗೊಂಡ ‘ಕಾಲ’ವನ್ನು ಆಕಾಶದ  ಸ್ಥೂಲರೂಪವೆಂದೆನ್ನಬಹುದು. ವಾಸ್ತವ  ಸಂಗತಿಯೆಂದರೆ, ವಿಶ್ವವು ಕಾಲ ಅಥವಾ ಅವಕಾಶದ ಅಭಿವ್ಯಕ್ತಿ, ಮತ್ತು ದೇವರು ಆಕಾಶದ ಅಭಿವ್ಯಕ್ತಿ.  ಒಳಗಿನ  ವ್ರತ್ತವು  ಹೊರಗಿನ ವಿಶ್ವಸೃಷ್ಟಿಗೆ ಕಾರಣವಾಯಿತು. ಮಧ್ಯಾಂತರದ ಭಾಗವೇ ‘ಸಮಯಾವಧಿ.’  ಮಹಾಪ್ರಳಯದ  ಸಮಯದಲ್ಲಿ ಸಂಭವಿಸುವಂತೆ    ಹೊರ    ಆವರಣವೂ ಮತ್ತು ಮಧ್ಯಾಂತರದ ಭಾಗಗಳೂ ಲೀನಗೊಂಡರೆ ಆಕಾಶವೊಂದೇ  ಉಳಿಯುವದು.  ಇದರ  ಅರ್ಥವೆಂದರೆ ಸಾರೂಪ್ಯತೆಯು (Identity) ಆಕಾಶವಾಗಿ  ಪರಿವರ್ತಿತವಾಗುತ್ತದೆ; ಅಂದರೆ  ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ಆಕಾಶವೇ  ಸಾರೂಪ್ಯತೆಯಾಗುತ್ತದೆ.

‘ಕೇವಲ ವಸ್ತು'(ಪರತತ್ವ) (Absolute) ಒಂದೇ ಇದ್ದು, ಸೃಷ್ಟಿ(ವಿಶ್ವ)ಯೇ ಇರದಿದ್ದಾಗ ಕಾಲದ ಪ್ರಶ್ನೆಯೇ  ಉದ್ಭವಿಸುವುದಿಲ್ಲ. ‘ಆಧಾರ’ದಲ್ಲಿ  ಸೃಷ್ಟಿ  ಸಂಕಲ್ಪ ಜಾಗ್ರತವಾದಾಗ  ಅದು ಎಲ್ಲದರಿಂದಲೂ ಸಂಪೂರ್ಣ ಮುಕ್ತವಾಗಿ ಇತ್ತು. ಅದು ಮುಂದುವರಿಯಿತು ಮತ್ತು ಚಲನೆಯ  ಪರಿಣಾಮವಾಗಿ  ಶಕ್ತಿ (ಊರ್ಜೆ)ಯಾಗಿ ರೂಪಾಂತರವಾಯಿತು. ಅದರ ಒಲವು ಕ್ರಿಯೆಯ ಕಡೆಗೆ ತಿರುಗಿತ್ತು. ಆದರೆ ಕ್ರಿಯೆಗೋಸ್ಕರ ಅದಕ್ಕೆ ಒಂದು ಕ್ಷೇತ್ರ ಅಥವಾ ಆಧಾರಬೇಕು. ಮೂಲ ಸಂಕಲ್ಪ(ಯೋಚನೆ) ಮತ್ತು  ತದನಂತರದ ಅಸ್ತಿತ್ವವೂ, ಅಂದರೆ  ಬೇರೆ ಶಬ್ದಗಳಲ್ಲಿ  ಹೇಳುವದಾದರೆ, ಕಾರಣ ಮತ್ತು  ಕಾರ್ಯಗಳ ನಡುವೆ ಒಂದು ಮಧ್ಯಾಂತರದ ಒಂದು ಸಂಕ್ಷಿಪ್ತ ವಿರಾಮ ಅಲ್ಲಿ  ಇದ್ದೇ ಇತ್ತು. ಇದನ್ನು ‘ಅವಕಾಶ’ ಅಥವಾ ‘ಕಾಲ’ ಎಂದು  ಅರ್ಥೈಸುವದು ಯುಕ್ತವಾಗಬಲ್ಲದು. ಇದು ಅದಕ್ಕೆ ಕಾರ್ಯಕ್ಕೆ ಬೇಕಾದ  ಕ್ಷೇತ್ರವಾಗಿ ಸಂದಿತು. ಹೀಗೆ ‘ಕಾಲ’ವು  ಶಕ್ತಿಯಲ್ಲಿ  ಲೀನಗೊಂಡು, ಸೃಷ್ಟ್ಯುನ್ಮುಖವಾದ  ಕ್ರಿಯೆಗಳ   ಸಲುವಾಗಿ   ಶಕ್ತಿಯಾಗಿ ಪರಿವರ್ತಿತವಾಯಿತು.

ಒಂದು  ವಿಚಾರವು  ಬಹಳ  ಆಳವಾದಾಗ ಒಂದು ವಿರಾಮದಂಥ ಪರಿಣಾಮವನ್ನು  ತರುತ್ತದೆಯೆಂಬುದು ಒಂದು ಸಾಮಾನ್ಯ ನಿಯಮ.ಅದರಲ್ಲಿ ಅಮೋಘವಾದ ಶಕ್ತಿ ಇರುತ್ತದೆ. ಕೇಂದ್ರದ ವಿಷಯದಲ್ಲಿ ಆಳದ  ಪ್ರಶ್ನೆಯೇ  ಏಳುವದಿಲ್ಲ, ಯಾಕೆಂದರೆ, ಅಲ್ಲಿ ಸಂಪೂರ್ಣ ಏಕರೂಪತೆ(ಸಮತೆ) ಇದೆ.  ಕೇಂದ್ರ   ಅಥವಾ  ಪರಬ್ರಹ್ಮವು ‘ಕೇವಲ’ (ಸ್ವತಂತ್ರ) ವಾಗಿರುವದಾದರೂ,  ಅದಕ್ಕೆ  ಮನಸ್ಸು ಎಂಬುದು  ಇಲ್ಲವಾದ್ದರಿಂದ  ಶಕ್ತಿಯ ಗತಿ ತೀವ್ರತೆ, ಮನಸ್ಸಿನ ಪ್ರತ್ಯಕ್ಷ ಕ್ರಿಯೆ ಕೂಡ ಅದರಲ್ಲಿ ಲುಪ್ತವಾಗಿದೆ.

ಹೀಗೆ  ಸಂಕಲ್ಪ ಮತ್ತು  ಕ್ರಿಯೆಗಳ ನಡುವೆ ಏನಿತ್ತೋ ಅದನ್ನು ಕಾಲ ಎಂದು ಕರೆಯಲಾಗಿದೆ. ಅದೇ ಶಕ್ತಿಯಲ್ಲಿ ನಾವೂ ನಮ್ಮ  ಪಾಲು ಪಡೆದೆವು, ಆದರೆ  ನಮ್ಮ ಸೀಮಿತ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾತ್ರ. ಈಗ ಈ  ಶಕ್ತಿಯನ್ನು  ನಾವು ಉಪಯೋಗಿಸಬೇಕಾದರೆ ನಾವು ಸರ್ವಾತ್ಮಕವೂ  ಕೇವಲವೂ ಆದ  ಕೇಂದ್ರದ ಮಹಾಶಕ್ತಿಯಲ್ಲಿ   ಅದನ್ನು   ಲಯಗೊಳಿಸಬೇಕು. ಪ್ರಪಂಚದಲ್ಲಿ ಅದಕ್ಕೆ   ಸಮನಾದುದು  ಏನೂ  ಇಲ್ಲ; ಆಧುನಿಕ ವಿಜ್ಞಾನದ ಮೆಗಾಟನ್ ಬಾಂಬು ಕೂಡ ಅಲ್ಲ. ಆಧುನಿಕ ವಿಜ್ಞಾನವು ಅದರ ಪೂರ್ಣ ಮಹತ್ವ(ಅಂತರ್ಮೌಲ್ಯ)ವನ್ನು ಮನಗಂಡಿರಲಿಕ್ಕಿಲ್ಲ. ಒಂದು  ವೇಳೆ  ಅದನ್ನು ಮನಗಂಡಿದ್ದರೂ ಅದನ್ನು ವಿನಾಶಾತ್ಮಕ ಉದ್ದೇಶಗಳಿಗಷ್ಟೇ ಉಪಯೋಗಿಸುತ್ತಿತ್ತು.

ಆ ಶಕ್ತಿ ಯನ್ನು ಬಲವಾದ ಸಂಕಲ್ಪ(ಇಚ್ಛಾ)ಶಕ್ತಿಯನ್ನು ಪ್ರಯೋಗಿಸಿ  ಭೂಮಿಗೆ  ಇಳಿಸಿ ತರಬಹುದು ಮತ್ತು ಕೆಲಸಗಳಿಗೆ ಉಪಯೋಗಿಸಬಹುದು. ಅತ್ಯುನ್ನತಸ್ತರದಲ್ಲಿ ನೆಲೆಸಿದ  ಯೋಗಿಯು  ಅರಿತೋ,  ಅರಿಯದೆಯೋ ಅದರೊಂದಿಗೆ ಜೊತೆಗೊಂಡಿರುತ್ತಾನೆ. ನನ್ನ ದೃಷ್ಟಿಯಲ್ಲಿ ನಿಜವಾಗಿ ಎಲ್ಲ  ಶಕ್ತಿಗಳ ಮೂಲವಾದ ಈ ಮೂಲಶಕ್ತಿಯ ಪೂರ್ಣ ಜ್ಞಾನವಿಲ್ಲದಿದ್ದರೆ ಭೌತವಿಜ್ಞಾನವನ್ನು ‘ಪೂರ್ಣ’ವೆಂದು ಗಣಿಸಲಾಗದು.

ಜೀವ ಮತ್ತು ಬ್ರಹ್ಮ

ಜೀವವು(ಪ್ರಥಕ್ಆದ ವ್ಯಷ್ಟ್ಯಾತ್ಮ),ವ್ಯಕ್ತಿವೈಶಿಷ್ಟ್ಯವನ್ನು ತನ್ನ ಸತ್ತೆಯ(ಅಸ್ತಿತ್ವದ being)ಅರಿವುಂಟಾಗುತ್ತದೆ. ಅದೇ  ಅದರ  ಅಸ್ತಿತ್ವದ ಆಧಾರಪೀಠವಾಗುತ್ತದೆ. ಮೂಲದಲ್ಲಿ  ಜೀವವೂ ಬ್ರಹ್ಮವೂ ತೀರ ಸಮಾನ ಲಕ್ಷಣವುಳ್ಳವಾಗಿದ್ದುವು. ಜೀವದ  ಪ್ರಥಕ್ ವ್ಯಕ್ತಿತ್ವವೇ ಜೀವ  ಮತ್ತು ಬ್ರಹ್ಮರಲ್ಲಿ ವ್ಯತ್ಯಾಸವುಂಟಾಗುವಂತೆ ಮಾಡಿತು. ಈಗ ಜೀವವು ಅಹಂಕಾರ ಅಥವಾ ಪ್ರಥಕ್ ವ್ಯಕ್ತಿತ್ವದೊಳಗೆ  ಬದ್ಧವಾದ ರೂಪದಲ್ಲಿ  ಅಸ್ತಿತ್ವದಲ್ಲಿ ಬಂದಿತು.  ಅದು ಯಾವ ಮಂಡಲದಲ್ಲಿತ್ತೋ  ಆ ಮಂಡಲವು  ಆದನ್ನು   ಆವರಿಸಿ ನೆಲೆಸುತ್ತ, ಅದಕ್ಕೆ ಹೊಸ ಬಣ್ಣವುಂಟಾಗುವಂತೆ ಮಾಡಿತು. ಒಂದು ರೀತಿಯಲ್ಲಿ  ವೈವಿಧ್ಯವು ತಳವೂರಲು ಪ್ರಾರಂಭವಾಯಿತು ಮತ್ತು  ಹಂತ  ಹಂತವಾಗಿ  ಅಹಂಕಾರವು  ತನ್ನ  ಪರಿಣಾಮವನ್ನು  ಅದರ  ಮೇಲೆ  ಬೀರಲಾರಂಬಿಸಿತು. ವಿವಿಧ ವರ್ಣಗಳು ಒಂದಾದ ಮೇಲೊಂದು ಹೆಚ್ಚು ಸಾಂದ್ರವೂ, ದಪ್ಪವೂ ಆಗಿ ಬೆಳೆಯಲಾರಂಬಿಸಿದವು. ಅನಿಸಿಕೆಗಳು,  ಭಾವಾವೇಗಗಳು, ಮತ್ತು  ವಾಂಛೆಗಳು(ಇಚ್ಛೆಗಳು) ಅದರ  ಸ್ಥೂಲತೆಯ ಹೆಚ್ಚಳಕ್ಕೆ ತಮ್ಮ ಪಾಲನ್ನೂ ನೀಡಿದವು. ಈ ರೀತಿಯಲ್ಲಿ ಜೀವವು  ಒಂದು ಸ್ವರ್ಣಪಕ್ಷಿಯಂತೆ,  ಶರೀರವೆಂಬ ಕಬ್ಬಿಣದ  ಪಂಜರದಲ್ಲಿ  ಸಂಪೂರ್ಣ  ಬಂದಿಯಾಗಿ ಸಿಕ್ಕಿಬಿದ್ದಿತು. (ಅಹಂಕಾರದ ವಲಯದಲ್ಲಿ) ಆಲೊಚನೆಗಳ, ಭಾವಾವೇಗಗಳ, ಸಂವೇದನೆಗಳ.  ಮತ್ತು ಇಚ್ಛೆಗಳ ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮವಾಗಿ ಇದೆಲ್ಲ ಸಂಭವಿಸಿತು  ಮತ್ತು  ಇದರಿಂದ  ಅದರ ಮಂದತ್ವ (opacity ) ಹೆಚ್ಚುತ್ತ ಹೋಯಿತು. ಒಂದು ಶಬ್ದದಲ್ಲಿ ಹೇಳುವದಾದರೆ, ಇದು ಜೀವದ ಪೂರ್ಣ ಇತಿಹಾಸ. ಈಗ ಸುದೈವದಿಂದ ತನ್ನ ಮೂಲವನ್ನು ನೆನಪು ಮಾಡಿಕೊಡುವ ಒಬ್ಬ ಮಹಾತ್ಮನ ಗತಿಶೀಲ ಸಂಪರ್ಕ ಬಂದರೆ  ಅದು  ತನ್ನ  ಆವರಣಗಳನ್ನು ಒಂದೊಂದಾಗಿ ಕಿತ್ತೆಸೆಯಲು ಪ್ರಾರಂಭಿಸುತ್ತದೆ. ಆದರೆ, ಜೀವವು  ಮೂಲದ ಚಲನೆಯನ್ನೂ ಹೊಂದಿರುವದರಿಂದ, ಸೃಷ್ಟಿಗೆ ಕರ್ತೃವಾದ ಬ್ರಹ್ಮದ ಹೊಳಹು(ಬ್ರಹ್ಮದ ಅಸ್ತಿತ್ವದ ಗ್ರಹಿಕೆ) ಅದಕ್ಕಿದೆ. ಹೀಗೆ’ ಜೀವ’ ಶಬ್ದವು ‘ಚಲನೆ’ ಮತ್ತು ವಿಚಾರ (ಚಿಂತನೆ), ಇವೆರಡರ ಭಾವವನ್ನೂ ತನ್ನಲ್ಲಿ ಹೊಂದಿದೆ. ಜೀವದ ಸತ್ತೆಯಲ್ಲಿ ಇವೆರಡೂ  ಸಮಾನಾಂತರವಾಗಿವೆ. ಹೀಗೆ ಜೀವ ಮತ್ತು ಬ್ರಹ್ಮ ಇವರೀರ್ವರ ಕಾರ್ಯವೂ ಹೆಚ್ಚುಕಡಿಮೆ ಒಂದೇ(ರೀತಿಯದು)ಆಗಿದೆ . ಇರುವ ಒಂದೇ ಒಂದು ವ್ಯತ್ಯಾಸವೆಂದರೆ, ಬ್ರಹ್ಮವು ಇಡೀ ವಿಶ್ವವನ್ನು ಆವರಿಸುತ್ತದೆ,  ಜೀವವು  ಅಹಂಕಾರದ ಇಕ್ಕಟ್ಟಾದ  ಮಂಡಲಕ್ಕೆ  ಪರಿಮಿತವಾಗಿದೆ. ಈ ದೃಷ್ಟಿಯಲ್ಲಿ ಜೀವಕ್ಕಿರುವಂತೆ ಬ್ರಹ್ಮಕ್ಕೂ ತನ್ನದೇ ಬಂಧನವಿದೆ ಎಂದೆನ್ನಬಹುದು; ವ್ಯತ್ಯಾಸವಿಷ್ಟೆ, ಜೀವಕ್ಕಿರುವ ಬಂಧನವು  ಬ್ರಹ್ಮಕ್ಕಿರುವುದಕ್ಕಿಂತ  ಬಹುಶಃ ಹೆಚ್ಚು ಸ್ಥೂಲವೂ, ದಪ್ಪವೂ ಆಗಿರಬಹುದು. ಎರಡಕ್ಕೂ ಪರಿಮಿತಿಗಳುಂಟು. ಇದು ‘ಬ್ರಹ್ಮ’ವನ್ನು ಕುರಿತ, ಹೆಚ್ಚುಕಡಿಮೆ ಸರಿಯಾದ, ಕಲ್ಪನೆ.

ಪ್ರಕೃತಿಯಲ್ಲಿ ಸಮಾನಾಂತರತೆ

ಸೃಷ್ಟಿಯ ಉತ್ಪತ್ತಿಯಾಗುವುದರ ಪೂರ್ವದಲ್ಲಿ ಅಸ್ತಿತ್ವ ದಲ್ಲಿದ್ದ ಏಕೈಕ ವಸ್ತುವೆಂದರೆ ದೈವತ್ವ. ಪ್ರತಿಯೊಂದು ವಸ್ತುವೂ  ಅದರಲ್ಲಿ ಸಾರರೂಪದಲ್ಲಿ ಲೀನವಾಗಿತ್ತು. ಸೃಷ್ಟಿ  ಪ್ರಕಟೀಕರಣದ ಪ್ರಕ್ರಿಯೆ ಕ್ಷೋಭದೊಂದಿಗೆ ಪ್ರಾರಂಭವಾಯಿತು.  ಕ್ಷೋಭವು ಸುಪ್ತ  ಸ್ಪಂದನದ ಮಂಡಲದಲ್ಲಿ ಮಂಥನದ ಚಲನೆಯನ್ನು ಪ್ರಚೋದಿಸಿತು. ಕ್ರಿಯೆ ಪುನರಾರಂಭಗೊಂಡಿತು. ಮತ್ತು ಅದರೊಂದಿಗೆ ಶಕ್ತಿಯು ಜಾಗ್ರತಗೊಂಡು(ಸೃಷ್ಟಿಯ) ಪ್ರಕಟೀಕರಣದತ್ತ ತನ್ನ ಕಾರ್ಯವನ್ನುಪ್ರಾರಂಭಿಸಿತು. ಈ ಕ್ರಿಯಾಪಥವು

ದೈವತ್ವ ದೊಂದಿಗೆ ಸಂಪೂರ್ಣ ಸಾಂಗತ್ಯವುಳ್ಳದ್ದಾದರೂ ತನ್ನ ಹೊರ ಮುಖಗಳಲ್ಲಿ(ಅಂಶಗಳಲ್ಲಿ) ಅಲ್ಪಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿತು. ಯಾಕೆಂದರೆ ಪ್ರಕಟೀಕರಣವನ್ನು ಗುರಿಯನ್ನಾಗಿಟ್ಟುಕೊಂಡು ಅದು ಮತ್ತೊಂದು ದಾರಿಯನ್ನು ಹಿಡಿದಿತ್ತು. ಆ ಕಾರಣ ಅದು ಮಾನವನ ರೂಪುಗೊಳ್ಳುವಿಕೆಯೊಂದಿಗೆ ಸಂಬಂಧಿಸಿದುದಾಗಿರುವದರಿಂದ  ಅದನ್ನು ‘ಮಾನವಪಥ’ ಎಂದು ಸಂಕೇತಿಸಬಹುದು.

ಈಗ ದೈವತ್ವ ಮತ್ತು ಮಾನವತೆ ಪರಸ್ಪರಸಮಾನಂತರವಾಗಿ ಪಕ್ಕ-ಪಕ್ಕದಲ್ಲಿಯೇ ನಡೆಯುತ್ತಿದ್ದು,  ಅವೆರಡೂ ಕ್ರಿಯೋದ್ಯುಕ್ತವಾಗಿ  ಇವೆ. ಆದರೆ ಮೂಲದಲ್ಲಿ ಸೃಷ್ಟಿ ರಚನೆಯೇ  ಪ್ರಥಮೋದ್ದೇಶವಾಗಿತ್ತಾದ್ದರಿಂದ ‘ಮಾನವಪಥ’ವು ಪ್ರಾಮುಖ್ಯ ಪಡೆಯಲಾರಂಭಿಸಿತು ಮತ್ತು ಮಾನವನನ್ನೊಳಗೊಂಡು ಸಕಲವಸ್ತುವೂ  ಆ ಹಂತದಲ್ಲಿ ಅತಿಸೂಕ್ಷ್ಮವಾಗಿದ್ದರೂ ಮೂರ್ತರೂಪವನ್ನು ಪಡೆಯತೊಡಗಿದವು. ಬೇರೆ ಮಾತುಗಳಲ್ಲಿ  ಹೇಳುವದಾದರೆ, ಅದರ ಕ್ರಿಯೆಯು ಅದಕ್ಕೆ ಸಮಾನಾಂತರದಲ್ಲಿರುವ ದೈವತ್ವದ ಪಥದ ಗುಪ್ತಕ್ರಿಯೆಗಳಿಗೆ ಅಧೀನವಾಗಿ ಉಳಿಯಿತು. ಹೀಗೆ  ಶಕ್ತಿಯ  ಸಮರ್ಪಕ  ಕಾರ್ಯವು ಆಕಾರ  ಮತ್ತು  ರೂಪಗಳನ್ನು  ಉಂಟುಮಾಡುತ್ತ ಮುಂದುವರಿಯಿತು.  ಒಂದು ವೇಳೆ ದೈವತ್ವದೊಂದಿಗೆ ಮೇಳಯಿಸಿ  ಸಾಗಿರದಿದ್ದರೆ, ಮಾನವತೆಯು ನಿಜಕ್ಕೂ ಅಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಂಕ್ಷೇಪವಾಗಿ ಹೇಳುವದಾದರೆ, ಮಾನವತೆಯು ಅದಕ್ಕೆ ಸಮಾನಾಂತರದಲ್ಲಿರುವ ದೈವತ್ವದೊಂದಿಗೆ  ತಾನು ಸಾಂಗತ್ಯಹೊಂದಿರುವಂತೆ ತನ್ನನ್ನು ನೇರ್ಪಡಿಸಿಕೊಂಡಿತು.

ಕ್ರಿಯೆಗಳು ಹೆಚ್ಚುತ್ತ ನಡೆದವು ಮತ್ತು ಮಾನವನೂ, ಇತರ ವಸ್ತುಗಳೂ  ಹೆಚ್ಚು ಹೆಚ್ಚು ಸ್ಥೂಲತರ ರೂಪವನ್ನು   ಹೊಂದಲು  ಪ್ರಾರಂಭಿಸಿದವು.  ಮಾನವನ ಸಂರಚನೆಯಲ್ಲಿ ಇರುವುದೆಲ್ಲವೂ ಮಾನವತೆಯ ವರ್ಗದಲ್ಲಿಯೇ ಬರುತ್ತವೆ. ಸಂಗಡವೇ ದೈವತ್ವವು  ಸಮಸ್ತ ಪ್ರತಿಯೊಂದು ವಸ್ತುವಿನ ಮೂಲದಲ್ಲಿ ಇದೆ. ದೇವರು ಮಾನವನಲ್ಲಿದ್ದಾನೆಂದು  ಹೇಳುವುದು ಈ ಕಾರಣಕ್ಕಾಗಿಯೇ. ಮತ್ತು ಸಾಮಾನ್ಯವಾಗಿ ಎಲ್ಲ ಮತಧರ್ಮಾನುಯಾಯಿಗಳೂ ಇದೇ ದೃಷ್ಟಿಯನ್ನು ಹೊಂದಿದ್ದಾರೆ. ಹೀಗೆ ದೈವತ್ವದೊಂದಿಗೆ  ಹೆಜ್ಜೆ   ಹಾಕುತ್ತ ಅದನ್ನು  ನಮ್ಮ ಮಾನವ ಪಥದೊಂದಿಗೆ ಜೋಡಿಸಿದಾಗ ಮಾತ್ರ ನಮ್ಮ ಅಂತಿಮ ಉದ್ದೇಶವು ನೆರವೇರುವುದು. ಸರ್ವೋತ್ತಮನಾದ ಒಬ್ಬನೇ ಪರಮಾತ್ಮನಿಂದ ಅರ್ಥಾತ್ ಪರವಸ್ತು (ಕೇವಲ ತತ್ವ)ವಿನಿಂದ ಎರಡೂ  ಅವತರಣಗೊಂಡಿರುವುವಾದ್ದರಿಂದ ಮಾನವತೆಯೂ   ದೈವತ್ವದಂತೆ ಅತ್ಯಂತ  ಪರಿಶುದ್ಧ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಅದರಲ್ಲಿ  ಕ್ರಿಯೆಯ  ಶಕ್ತಿಯು ನಾಮಮಾತ್ರವಿತ್ತು. ಅಥವಾ ಹಾಗೆನ್ನುವುದಾದರೆ, ಸುಪ್ತಸ್ಥಿತಿಯಲ್ಲಿತ್ತು. ಕ್ರಿಯೆ ಮತ್ತು  ಪ್ರತಿಕ್ರಿಯೆಗಳಿಂದ  ಉಂಟಾದ ಅಘಾತಗಳು ಒಂದು ರೀತಿಯ ಎಚ್ಚರವನ್ನು ಬಡಿದೆಬ್ಬಿಸಿದವು ಮತ್ತು ಭೇದಗಳೂ    ವಿರೋದಗಳೂ ಗೋಚರಿಸಿದವು. ಶೀತೋಷ್ಣಗಳು ರೂಪನಿರ್ಮಿತಿಗಳನ್ನು ಬೆಂಬಲಿಸುತ್ತ ವಿವಿಧ ದಾರಿಗಳನ್ನು ಮಾಡಿಕೊಂಡವು. ಈ ಎಲ್ಲವುಗಳೂ ಮಾನವನ ಸಂರಚನೆಯಲ್ಲಿ ಸೇರಿಕೊಂಡು, ಮಾನವನು ಅಸ್ತಿತ್ವದಲ್ಲಿರುವ  ಎಲ್ಲ ವಸ್ತುಗಳ  ಮುದ್ದೆಯಾದನು. ಅವುಗಳನ್ನು ಅವುಗಳ ಮೂಲ ಸ್ಥಿತಿಗೆ ತರುವದೇ ನಾವೀಗ ಮಾಡಬೇಕಾದ ಕಾರ್ಯ. ಅಥವಾ ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಅವು  ದೈವತ್ವದೊಡನೆ ಸಂಬಂಧವನ್ನು ಕಾಯ್ದಿಟ್ಟುಕೊಳ್ಳಲು ಅನುವಾಗುವಂತೆ ಸಂತುಲಿತ ಹಾಗೂ ಶಾಂತ  ಸ್ಥಿತಿಯನ್ನು ಪುನಃ ಸ್ಥಾಪಿಸುವುದು. ಅದನ್ನು ಸಾಧಿಸುವ ಏಕೈಕ ಮಾರ್ಗವೆಂದರೆ, ಯುಕ್ತ  ಮಿತತ್ವವನ್ನು ಅವುಗಳಲ್ಲಿ ತರುವದೇ ಆಗಿದೆ. ನಾವು  ಸಹಜಮಾರ್ಗದಲ್ಲಿ  ಮಾಡುವುದು ಅದನ್ನೇ.

ಮಾನವನ ದೈವೀಕರಣದ ನಿಜವಾದ ಅರ್ಥವನ್ನು ಜನರ ಗ್ರಹಿಕೆಗೆ  ತರಲೋಸುಗ  ನಾನು ಇಲ್ಲಿ ತೆರೆದಿಟ್ಟಿರುವ  ಪ್ರಕ್ರತಿಯ  ರಹಸ್ಯವಿದು.


ಅವತಾರಗಳು

ಖಚಿತವಾಗಿ  ಹೇಳುವುದಾದರೆ ಒಂದು ಪುಟ್ಟ ಸೃಷ್ಟಿಯನ್ನು  ಅದಕ್ಕೆ ಆಧಾರವಾಗಬಹುದಾದ ದೃವ್ಯವನ್ನೊದಗಿಸಿ, ಕಟ್ಟಿ  ನಿಲ್ಲಿಸಿದವರು ನಾವೇ. ಕ್ಷೋಭವನ್ನುಂಟುಮಾಡಿದ ದೈವಿ ಸಂಕಲ್ಪದ  ಮೂಲಾಘಾತವನ್ನು ಬಿಟ್ಟರೆ,  ಇದರಲ್ಲಿ ದೇವರ ಕಾರ್ಯ  ನಾಮಮಾತ್ರವೆನ್ನಬಹುದು. ಭೂಮಿಯೊಳಗಿರುವ  ಕಬ್ಬಿಣದ ಅದಿರು ಎಲ್ಲ ಯಂತ್ರಗಳಿಗೂ ಮೂಲವಾಗಿರುವ ಹಾಗೆಯೇ, ಅಸ್ಥಿತ್ವದಲ್ಲಿರುವ ಎಲ್ಲ ವಸ್ತುಗಳ ಮೂಲವು ಸಾರರೂಪದಲ್ಲಿರುವ  ಭೂತ-ದ್ರವ್ಯ(Matter)ವಾಗಿತ್ತು ಸಂಕಲ್ಪದ ಆಘಾತವು ತೀವ್ರವೇಗವುಳ್ಳದ್ದಾಗಿತ್ತು; ಅದು ಇನ್ನೂ  ಹಾಗೆಯೇ  ಇದೆ, ಹಾಗೂ ಕೊನೆಯವರೆಗೂ ಮುಂದುವರಿಯುತ್ತದೆ.  ಈ ದೃಷ್ಟಿಯಲ್ಲಿ, ಸೃಷ್ಟಿಯ ಪ್ರಾರಂಭ  ಮತ್ತು ಅಂತ್ಯಗಳು  ಒಂದೇ ವೇಗಗತಿಯ ಎರಡು ಕೊನೆಗಳಾಗಿವೆ. ನಿಜವಾದ ಶಕ್ತಿಯನ್ನೊಳಗೊಂಡ ಮಧ್ಯದ ಸ್ಥಳವೇ ಇಡೀ ವಿಶ್ವದ ಸಮಗ್ರ ರಚನೆಯನ್ನು ಅಸ್ತಿತ್ವಕ್ಕೆ ತರಲು ಮುಖ್ಯ ಕಾರಣವಾಯಿತು. ಅದರಲ್ಲಿ ಅಗಾಧ  ಬಲವಿದೆ  ಮತ್ತು ವಿದ್ಯುತ್  ಪ್ರವಾಹದಂತೆ ಆಘಾತಗಳನ್ನು  ಮಾಡುತ್ತದೆ. ಮಧ್ಯಭಾಗವು  ಕೇಂದ್ರ ವಾಗಿ  ಕೆಲಸ   ಮಾಡುತ್ತದೆ.  ಸ್ವಲ್ಪ  ಕೆಳಭಾಗದಲ್ಲಿ ಮುಖ್ಯ ಕ್ರಿಯಾಚಾಲಕ ಶಕ್ತಿಯಿದೆ; ಅದು ‘ಕಾರಣ’ದಂತೆ  ಕೆಲಸಮಾಡುತ್ತದೆ. ಕೇಂದ್ರ ಬಿಂದುವಿನಿಂದ ಕೆಲವೇ  ಮಿಲಿಮೀಟರು ದೂರದಲ್ಲಿರುವಂತೆ ತೋರುವ  ಇನ್ನೊಂದು ಬಿಂದು ಇದೆ; ಅಲ್ಲಿ ಚೈತನ್ಯದಾಯಕ  ಶಕ್ತಿಯಂತಿರುವ ವಸ್ತುವೊಂದು ಯುಕ್ತ  ಮಿತತ್ವದಿಂದ ಇದೆ.  ನಾನು ಕೆಲವೇ  ಮಿಲಿಮೀಟರು   ದೂರವೆಂದು  ಕರೆದುದು ಯಾಕೆಂದರೆ, ನಾವು ಬಹುದೂರದಿಂದ ಅದನ್ನು ವೀಕ್ಷಿಸುತ್ತೇವೆ. ಆದರೆ, ದೇಹದ ಪರಿಮಿತಿಗಳನ್ನು ಮೀರಿ  ಹೋಗಿ ಹತ್ತಿರದಿಂದ  ನೋಡಿದರೆ ಆಗ ಆ  ದೂರವು ಅಪರಿಮಿತಿವಾಗಿ  ಕಾಣುತ್ತದೆ. ಕೇಂದ್ರೀಯ  ಬಿಂದುವಿನಿಂದ ನಾವು ಮೇಲೆ ಮೇಲೆ ಹೋದಂತೆಲ್ಲ ಶಕ್ತಿಯು  ಹೆಚ್ಚು ಹೆಚ್ಚು ಮಂಕಾಗುತ್ತದೆ. ಮತ್ತು ಅದು ಸತ್ಯಕ್ಕೆ ನಮ್ಮ ನಿಕಟ  ಸಾಮೀಪ್ಯದ ಸೂಚಕ. ಆ ಮಂಕಾದ ಶಕ್ತಿಯು ಮಾನವನ ಪಾಲಿಗೆ ಸಿಗುವ ಭಾಗ. ಕೇಂದ್ರದಲ್ಲಿರುವ ಬಲವತ್ತರವಾದ  ಶಕ್ತಿಯು  ಅವತಾರಗಳ ಪಾಲಿಗೆ ಸಿಗುತ್ತದೆ. ಅವತಾರಗಳು ಆ ಬಿಂದುವಿನಲ್ಲಿಯ  ಸ್ಥಿತಿ (ಅವಸ್ಥೆ)ಗಳಿಂದ  ಪರ್ಯಾಪ್ತವಾಗಿ   ಶಕ್ತಿ ಭರಿತರಾಗಿರುತ್ತಾರೆ. ಕೇಂದ್ರ ಬಿಂದುವಿನ ವಲಯದಿಂದ ಶ್ರೀಕೃಷ್ಣನ ಅವತಾರವಾಯಿತು. ಶ್ರೀರಾಮನಾದರೋ, ಮತ್ತೊಂದು ಕೊನೆಯಿಂದ   ಅವತರಿಸಿದನು. ಈ   ಕಾರಣದಿಂದ  ಅವನು  ಹೆಚ್ಚು  ಮಾನವ  ಸಾಮ್ಯತೆ ಹೊಂದಿದ್ದನು. ಮಾನವನಾಗಿ ಪ್ರತಿಯೋರ್ವನೂ ಹೊಂದಲು ಪ್ರಯತ್ನಿಸತಕ್ಕುದಾದ   ಜೀವನಾದರ್ಶವನ್ನು. ಅವನು ಪ್ರತಿನಿಧಿಸುತ್ತಾನೆ‌.

ಅವತಾರಗಳಿಗೆ ಸಾರೂಪ್ಯತೆ(Identity)ಇರುವುದಿಲ್ಲವೆಂಬುದು ಕೆಲವರ  ಅಭಿಪ್ರಾಯ. ನಾನು ಅದಕ್ಕೆ ಸಹಮತನಲ್ಲ. ಯಾಕೆಂದರೆ, ಅವರಿಗೆ  ಸಾರೂಪ್ಯತೆ ಇಲ್ಲದಿರುತ್ತಿದ್ದರೆ, ಅವರಿಗೆ ನಿಯತಗೊಳಿಸಲ್ಪಟ್ಟಿದ್ದ ಉದ್ದೇಶವನ್ನು ನೆರವೇರಿಸಲು ದೇಹಧಾರಿಗಳಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಕೆಲಸದ ಅಗತ್ಯತೆಗೆ ಅವರಿಗೆ, ಬೆಳೆಯುವ ಮತ್ತು ವಿಕಾಸ ಹೊಂದುವ  ಭೌತಿಕ ಶರೀರದ ಅವಶ್ಯಕತೆಯಿದೆ, ಇತರರಿಗಿರುವಂತೆ, ಅವರಿಗೂ  ಸಾರೂಪ್ಯತೆ  ಇರಲೇ ಬೇಕಾದುದು ಅವಶ್ಯ.

ಅವತಾರಗಳು ತಮಗೆ  ವಹಿಸಲಾದ  ನಿರ್ದಿಷ್ಟ ಕಾರ್ಯವನ್ನು  ಸಾಧಿಸಲು ಬೇಕಾದ  ಶಕ್ತಿ-ಸಾಮರ್ಥ್ಯಗಳೊಡನೆ, ಒಂದು ನಿರ್ದಿಷ್ಟ ಉದ್ದೇಶದ ಸಲುವಾಗಿ ಇಳಿದು ಬರುತ್ತದೆ. ಅದೇ ಅವರನ್ನು ಪ್ರಪಂಚಕ್ಕೆ ಕರೆತಂದ ಸಂಸ್ಕಾರಗಳಂತೆ  ಸಲ್ಲಬಹುದೆಂದೂ, ಬೇರೆ ಮಾತುಗಳಲ್ಲಿ ಹೇಳಬಹುದು. ಅವರ ಕಾರ್ಯಮುಗಿದ ಮೇಲೆ ಆಶಕ್ತಿ ಅವರನ್ನು ಹಿಂದಕ್ಕೆ ಸೆಳೆದುಕೊಳ್ಳುತ್ತದೆ.

ಒಬ್ಬ  ಸಾಧಾರಣ ಮನುಷ್ಯನಿಗೆ  ಮತ್ತು  ಒಂದು ಅವತಾರಕ್ಕೆ  ಇರುವ  ವ್ಯತ್ಯಾಸವೆಂದರೆ, ಮನುಷ್ಯನು ಅಸಂಖ್ಯಾತ  ಆವರಣಗಳಿಂದ ಆವರಿಸಲ್ಪಟ್ಟಿರುತ್ತಾನೆ. ಮತ್ತು ಅವತಾರಗಳಿಗೆ ಅವುಗಳ ಬಹುಭಾಗ ಇರುವುದಿಲ್ಲ ಎಂಬುದೇ ಆಗಿದೆ. ದೈವತ್ವವು ಅವರಿಗೆ  ಜ್ಞಾನ ಗಮ್ಯವಾಗಿರುತ್ತದೆ, ಆದರೆ ಮಾನವರು ಅದರಿಂದ ವಂಚಿತರಾಗಿರುತ್ತಾರೆ. ಈಗ ಮಾನವ ಮತ್ತು  ಅವತಾರಗಳ ಮೂಲವು ಒಂದೇ  ಇರುವುದಾದರೂ ಅವತಾರಿಯು ದೈವತ್ವದ ನಿಕಟ ಸಂಪರ್ಕದಲ್ಲಿರುತ್ತಾನೆ. ಅವನಿಗೆ ಬೇಕಾಗಿಬರುವುದೆಲ್ಲವೂ ಅವನಿಗೆ ಶಾಶ್ವತ ಭಂಡಾರದಿಂದ ಒದಗಿ ಬರುತ್ತದೆ  ಸಾಮಾನ್ಯವಾಗಿ ‘ದೇವವಾಣಿ’ ಎಂದು ಕರೆಯಲ್ಪಡುವ, ದೈವೀ ಆದೇಶಗಳನ್ನು  ಅವನು ತನ್ನ ಕಾರ್ಯದಲ್ಲಿ ಮಾರ್ಗದರ್ಶನ ಮಾಡಲು ಪಡೆಯುತ್ತಿರುತ್ತಾನೆ. ಈಗ  ಅವತಾರಗಳಿಗೆ  ಕ್ರಿಯಾತ್ಮಕತೆಯಿರುವುದೆಂದ  ಮೇಲೆ, ಅವರಿಗೂ  ಮನಸ್ಸು ಇರಬೇಕಾದುದು ಅಗತ್ಯ. ಆದರೆ ಅವರ ಮನಸ್ಸು ಹೆಚ್ಚು ಪರಿಶುದ್ಧವೂ ಸಮತ್ವವುಳ್ಳದ್ದೂ ಆಗಿರುತ್ತದೆ. ಆದುದರಿಂದ ಅವತಾರಿಗಳಿಗೆ ಮನಸ್ಸು ಇರುವುದಿಲ್ಲವೆಂದು  ಊಹಿಸುವುದು ತಪ್ಪು.

ವರ್ತಮಾನದಲ್ಲಿ ಕೆಲಸಮಾಡುತ್ತಿರುವ ವಿಭೂತಿ ಪುರುಷನನ್ನು ಕುರಿತು, ನಾನು ದರ್ಶಿಸಿದಂತೆ  ಹೇಳುವದಾದರೆ, ಆತನು ಕೇಂದ್ರ ಬಿಂದುವಿನಿಂದ ಅವತರಿಸಿದವನೆಂದು ಹೇಳಬಲ್ಲೆ. ನಮ್ಮ ಬಾಹ್ಯದೃಷ್ಟಿಗೆ ಮಂದಕಾಂತಿಯುಳ್ಳನಂತೆ ಅಥವಾ ತಗ್ಗಿದವನಂತ ತೋರಿಬಂದರೂ ಅತಿಶಯ ಅಂತಃ ಸಾಮರ್ಥ್ಯವುಳ್ಳವನಾಗಿದ್ದಾನೆ. ಭೂಮಿಯ ಮೇಲೆ ಇದುವರೆಗೆ ಬಂದ ಅವತಾರಿಗಳಲ್ಲಿ ಯಾರಿಗೂ ಮೂಲದ ಶಕ್ತಿಯು ಅನುಗ್ರಹಿಸಲ್ಪಟ್ಟಿರಲಿಲ್ಲ. ಸರ್ವಜ್ಞನಾದ ಭಗವಂತನ ಕೃಪೆಯಿಂದ ನಾನು ಪ್ರಕೃತಿಯನ್ನು  ವೀಕ್ಷಿಸಿ  ಗ್ರಹಿಸಿದುದರ  ಆಧಾರದ ಮೇಲೆ ಇದನ್ನು ಬಹಿರಂಗಪಡಿಸುತ್ತಿದ್ದೇನೆ‌.