ಈಗ ನಾವು ಹತ್ತನೆಯ ಗ್ರಂಥಿಗೆ ಬಂದೆವು. ಒಂಬತ್ತನೆಯ ಗ್ರಂಥಿಯ ದಶೆಯು ಬದಲಾಗಿ ಅದರ ದಾರಿ ಬೇರೆ ಕಡೆಗೆ ತಿರುಗಿತು. ಸೇವೆಯು ಎಷ್ಟು ಮಟ್ಟಿಗೆ ಮೈಗೂಡಿತೆಂದರೆ ಒಡೆಯನ ಮನೆಯನ್ನು ನಮ್ಮ ಮನೆಯೆಂದು ತಿಳಿಯತೊಡಗಿದೆವು. ಅರ್ಥಾತ್, ನಮ್ಮಲ್ಲಿ ಸ್ವಾಮಿತ್ವದ ಗಂಧವು ಸ್ವಲ್ಪಮಟ್ಟಿಗೆ ಬರತೊಡಗಿತೆಂದು ಹೇಳಲಡ್ಡಿಯಿಲ್ಲ. ಆದರೆ ಇದು ಕೃತ್ರಿಮವೇನಲ್ಲ. ಈ ದಶೆಯು ಹತ್ತನೆಯ ಗ್ರಂಥಿಯದು. ಅಲ್ಲಿಗೆ ಮುಟ್ಟಿದ ನಂತರ ಇದು ತಾನಾಗಿ ಬರಲೇ ಬೇಕು. ಸ್ವಾಮಿಯ ಸಾಮೀಪ್ಯ ಹೆಚ್ಚುವುದರಿಂದ ಆತನ ಪ್ರಭಾವವು ನಮ್ಮಲ್ಲಿ ಅನುಭವಕ್ಕೆ ಬರತೊಡಗುವುದು. ಯಾವ ರೀತಿ ನದಿಯ ಹತ್ತಿರ ಹೋದ ಬಳಿಕ ಅದರ ಪ್ರವಾಹವನ್ನು ಕಂಡು ನಮ್ಮೊಳಗೆ ತಾನಾಗಿಯೇ ತರಂಗಗಳೇಳುವುವೋ, ಅದೇ ದಶೆಯು ನಮ್ಮದಾಗುವುದು. ಅಭ್ಯಾಸಿಯು ತನ್ನ ಸಮ್ಮಾನವನ್ನು ತಾನೇ ಮಾಡಿಕೊಳ್ಳುವನು, ಅಥವಾ ಹೀಗೆ ಹೇಳಬಹುದು; ಚಂದನದ ಸುಗಂಧಕ್ಕಾಗಿ ನಾವು ಮರದ ಬಳಿ ಹೋಗಬೇಕಾಗುವುದು, ಆದರೆ ಅದೇ ಚಂದನವನ್ನು ತೇದು ಹಣೆಗೆ ಹಚ್ಚಿಕೊಂಡಾಗ ಸುಗಂಧವು ನಮ್ಮ ಸಮೀಪವೇ ಇರುವುದರಿಂದ ನಾವು ಇದ್ದಲ್ಲಿಯೇ ಅದರ ಆನಂದವನ್ನು ಸವಿಯತೊಡಗುವೆವು. ಈಗ ನಾವು ಆತನ ಮನೆಯನ್ನು ತಲುಪಿದೆವು; ಅಲ್ಲಿಯ ತಂಪು ಸೋಂಕ ಹತ್ತಿತು. ಯಾವನೋ ಸೇವಕನೊಬ್ಬ ತನ್ನ ಪ್ರತೀಕ್ಷೆಯಲ್ಲಿರುವನೆಂದು ಸ್ವಾಮಿಗೂ ಈಗ ಅನುಭವ ಬರತೊಡಗಿತು. ಸಾಮೀಪ್ಯವು ಇನ್ನೂ ದೂರವಿದ್ದರೂ ಸಮರೂಪತೆಯು ಹೆಚ್ಚತೊಡಗಿತು. ಈಶ್ವರನ ಕಾರ್ಯ ಇಲ್ಲಿಗೆ ಮುಗಿಯಿತು. ಇಲ್ಲಿಂದ ಮುಂದೆ ಆತನದೂ ಪ್ರವೇಶವಿಲ್ಲ. ಮುಂದುವರಿದಂತೆ ಭೂಮಾದ ಸಂಬಂಧವು ಆರಂಭವಾಗುವುದು; ಹಾಗೂ ಬಂಧನದಿಂದ ಬಿಡುಗಡೆ ದೊರೆಯುವುದು. ಈ ಸ್ಥಾನದಲ್ಲಿ ತೀರ ವಿರಳ ಜನರೇ ಬರುವರು. ಇಲ್ಲಿ ಗಾಳಿಯ ಸುಳಿವಿಲ್ಲ. ಆದರೆ ಬಹಳ ಪರಿಶ್ರಮ ಹಾಗೂ ಅಭ್ಯಾಸದ ನಂತರ ದೊರೆಯುವ ಗಾಳಿಯಿದೆ. ಇಲ್ಲವೇ ಗಾಳಿ ಬದಲಾಗುವುದೆಂದೂ ಹೇಳಬಹುದು. ಗಾಳಿಯ ಮೂಲತತ್ವ ಮಾತ್ರ ಉಳಿಯುವುದು, ನಾವು ಅದರೊಂದಿಗೆ ಮುಂದುವರಿಯ ಬೇಕಾಗಿದೆ. ಆ ತತ್ತ್ವವೆಂಥದು? ‘ಶೂನ್ಯ’ ‘ವೆನ್ನುವುದು ಉಚಿತವಾಗಲಿಕ್ಕಿಲ್ಲ. “ಭೂಮಾದ ನೆರಳೆಂದರೂ ಯೋಗ್ಯ ವರ್ಣನೆಯಾಗಲಾರದು. ಕಾರಣವೆಂದರೆ ಅದೂ ಭಾರವೇ ಆಗುವುದು. “ಭೂಮಾ ಇದೆ; ಅದರ ಇರುವಿಕೆಯ ಅನುಭವವೂ ಇದೆ. ಯಾವುದೋ ಒಂದು ಅವಿನಾಶಿ, ಹಾಗೂ ಅಖಂಡ ಅಸ್ತಿತ್ವ ವಿದ್ದು ನಾವು ಅದರ ಕಡೆಗೆ ಹೋಗಬೇಕಾಗಿದೆ” ಎಂದಿಷ್ಟೇ ಅನುಭವವಿರುವು ದೆಂದು ಹೇಳುವುದೇ ಉಚಿತವೆಂದು ತೋರುತ್ತದೆ. ಆಗ ನಾವು ಮುಂದಿನ ಗ್ರಂಥಿಗೆ ಆರೋಹಣ ಮಾಡಿರುವೆವೆಂದು ತಿಳಿಯತಕ್ಕದ್ದು.