ನಾವೀಗ ಹದಿಮೂರನೆಯ ಗ್ರಂಥಿಗೆ ಬಂದೆವು. ಇಲ್ಲಿ ಜೀವನವೇ ಜೀವನ. ನಾನು ಕೇವಲ ದೊಡ್ಡ ದೊಡ್ಡ ಗ್ರಂಥಿಗಳನ್ನು ಕುರಿತು ಹೇಳಿದ್ದೇನೆ. ಸಣ್ಣ ಸಣ್ಣ ಗ್ರಂಥಿಗಳು ಅಗಣಿತವಾಗಿದ್ದು, ಅವುಗಳ ನಡುವಿನ ಅಂತರವನ್ನು ವರ್ಣಿಸಲು ಸಾಧ್ಯವಿಲ್ಲ. ಇಲ್ಲಿಯವರೆಗಿನ ಅನುಭವವನ್ನಂತೂ ಶಬ್ದ ಗಳ ತಿರುವು ಮುರುವು ಹೇಳಿಕೊಟ್ಟಿತು. ಮುಂದೆ, ಈ ಅವಸ್ಥೆಯನ್ನು ವರ್ಣಿಸಲು ಶಬ್ದ ಗಳು ಸಿಗುವುದಿಲ್ಲ. ಆದರೂ ನಮ್ಮ ಯಾತ್ರೆ ಸಾಗುತ್ತಲೇ ಇರುತ್ತದೆ. ಇಂಥ ಅಸಂಖ್ಯ ಗ್ರಂಥಿಗಳು ಸಿಗುವುವು; ಮತ್ತು ಲಯ, ಹಾಗೂ ಸಾರೂಪ್ಯತೆಯ ಅವಸ್ಥೆಗಳು ಜೊತೆ ಜೊತೆಗೇ ನಡೆಯುವುವು. ಈ ಗ್ರಂಥಿಗಳಲ್ಲಿ ಮುಂದುವರಿದಮೇಲೆ ಮಾಯೆಯ ಸ್ಪರ್ಶವೂ ಇಲ್ಲದಂತಾಗುವುದು. ನಾವು ಇನ್ನೂ ದೂರ ನಡೆದು ಒಂದು ಗ್ರಂಥಿಯನ್ನು ಮುಟ್ಟುವೆವು. ಅಲ್ಲಿ ಲಯ ಮತ್ತು ಸಾರೂಪ್ಯತೆಯನ್ನು ಹೊಂದಿದಮೇಲೆ ಬಹುಶಃ ಅಹಂಭಾವ ಸಮಾಪ್ತವಾಗು ವುದು. ಅಲ್ಲಿಂದ ಮುಂದೆ ಸ್ವರೂಪವೇ ಬದಲಾಗುವುದು. ಸಾವಿರಾರು ವರ್ಷ ಗಳಲ್ಲಿ ಎಲ್ಲೋ ಒಮ್ಮೆ ಈ ಅವಸ್ಥೆ ಬರುವುದು. ಯಾರಾದರೂ ಸದ್ಗುರು ದೊರೆತರೆ ಮಾತ್ರ ಮುಂದುವರಿಯಲು ಸಾಧ್ಯ. ಯಾರಿಗೆ ಸದ್ಗುರು ದೊರೆತಿರುವನೋ ಅವರು ಪ್ರತಿಯೊಂದು ಗ್ರಂಥಿಯ ಯಾತ್ರೆಯನ್ನೂ ಮಾಡಿ, ಕೊನೆಗೆ ಜ್ಞಾನವು ಎಲ್ಲಿ ಪರಿಸಮಾಪ್ತಿ ಹೊಂದುವುದೋ ಆ ಸಮುದ್ರದ ದಡವನ್ನು ತಲುಪಿದ್ದಾರೆ. ಜನರು ಇದನ್ನೋದಿ ತಮ್ಮನ್ನು ತಾವು ತೂಗಿ ಕೊಳ್ಳಲಿ. ಆಗ, ಜ್ಞಾನವೆಂದರೇನು, ಅದರ ಕೆಲಸ ಎಲ್ಲಿ ಮುಗಿಯುವುದು ಎಂಬುದು ತಿಳಿದು ಬರುವುದು. ಎಲ್ಲಿ ಜ್ಞಾನದ ಅನುಭವವು ಕೊನೆಗೊಳ್ಳುವುದೊ ಅಲ್ಲಿಗೆ ಅದರ ಕಾರ್ಯ ಮುಗಿಯಿತು. ಆಗ ಏನೂ ತಿಳಿಯದ ಒಂದು ಹಸುಗೂಸಿನ ಅವಸ್ಥೆ ಬರುವುದು. ಈ ಅಪಾರ ಸಾಗರದ ಸಮೀಪ ಹೋದಾಗಲೇ ಈ ದಶೆಯು ಪ್ರಾಪ್ತವಾಗುವುದು. ಈ ಸ್ಥಿತಿಯು ಅಜ್ಞಾನದ
ಪರಿಧಿಯಲ್ಲಿ ಬರುವುದು. ಇದೇ ವಾಸ್ತವಿಕ ಜ್ಞಾನ, ಹಾಗೂ ನಿಜಾವಸ್ಥೆ.