ದೈವತ್ವ, ಚಿಂತನೆ, ಶಕ್ತಿ, ಕಾರಣ (cause) ಮತ್ತು ತತ್ತ್ವ ಅಥವಾ ಬೇರೆ ಹೆಸರನ್ನು ತೆಗೆದುಕೊಳ್ಳಬಹುದು. ಅದು ಪ್ರತಿಯೊಂದು ಜೀವಿಯಲ್ಲಿಯೂ ಉಂಟು. ಅದು ಮಾನವ ಜೀವಿಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಆದರೆ ಮಾನವ ಜೀವಿಯು ತನ್ನದೇ ವ್ಯಕ್ತಿತ್ವದಲ್ಲಿ ಅದನ್ನು ಅಡಗಿಸಿ ಇಟ್ಟುಕೊಳ್ಳುತ್ತಾನೆ. ಕೇವಲ ಒಬ್ಬ ವಿಭೂತಿ ಪುರುಷನು (ವಿಶೇಷ ವ್ಯಕ್ತಿಯು) ಅದನ್ನು ಮಾನವ ಜೀವಿಗಳ ಆಧ್ಯಾತ್ಮಿಕ ಕಲ್ಯಾಣಕ್ಕೋಸ್ಕರ ಪ್ರಕಟಗೊಳಿಸುವನು… (ಮಾನವ ಜೀವಿಗಳ) ಆಧ್ಯಾತ್ಮಿಕ ಕಲ್ಯಾಣವು ತನ್ನದೇ ಆತ್ಯಂತಿಕ ಸ್ವರೂಪ, ಕಾರಣ ಅಥವಾ ಪರಮ ತತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವುದನ್ನು ಒಳಗೊಂಡಿದೆ. ಅದರ ಫಲ ಸ್ವರೂಪವಾಗಿ ಅವನ ವ್ಯಷ್ಟಿತ್ವವು (ಪ್ರತ್ಯೇಕವಾದ ಅಸ್ತಿತ್ವವು) ವೈಶ್ವಿಕ ತತ್ತ್ವ (Universal Principle) ದಲ್ಲಿ ಸಂಪೂರ್ಣ ಐಕ್ಯವಾಗುತ್ತದೆ ಮತ್ತು ಅನಂತರ ಅವನು ‘ವಿಭೂತಿ ಪುರುಷ’ನಾಗಿ ಪ್ರಾದುರ್ಭವಿಸುತ್ತಾನೆ.
ಅಂತಹ ಸಂಪೂರ್ಣ ಐಕ್ಯವನ್ನು (ಲಯ) ಸಾಧಿಸುವುದು ಹೇಗೆ ? ವಿಭೂತಿಪುರುಷನೊಂದಿಗೆ ನಮ್ಮ ಚಿಂತನವನ್ನು ಪ್ರಜ್ಞಾಪೂರ್ವಕ ಜೋಡಿಸುವುದರಿಂದ ಐಕ್ಯವನ್ನು ಸ್ವಾಭಾವಿಕ ರೀತಿಯಲ್ಲಿ ಸಾಧಿಸಬಹುದು. ಬಹುತೇಕ ಎಲ್ಲ ಧಾರ್ಮಿಕ ಹಾಗೂ ಯೌಗಿಕ ಅಭ್ಯಾಸಗಳು ತತ್ತ್ವತಃ ಇಂಥ ಜೋಡಣೆಯನ್ನು ಉಂಟು ಮಾಡುವುದಕ್ಕೋಸ್ಕರವೇ ಇವೆ. ಹೀಗೆ ನಾವು ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನದಿಂದ ನಮ್ಮ ಚಿಂತನವು ಅವನೊಂದಿಗೆ ಜೋಡಿಸಲ್ಪಟ್ಟಿತೆಂದರೆ, ವಿಭೂತಿಪುರುಷನು ಅದನ್ನು ನಮ್ಮ ಸುಪ್ತ ಪ್ರಜ್ಞೆಯ ಹಾಗೂ ನಮ್ಮ ಅಸ್ತಿತ್ವದ ಪ್ರಜ್ಞಾರಹಿತ ಸ್ತರಗಳಿಗೆ ತಳ್ಳುವ ಮೂಲಕ ಶಾಶ್ವತಗೊಳಿಸಲು ಮತ್ತು ನಮ್ಮಲ್ಲಿ ಪರಿವರ್ತನೆಯನ್ನು ಉಂಟುಮಾಡುವ ಹೊಣೆಯನ್ನು ತಾನು ತೆಗೆದುಕೊಳ್ಳುತ್ತಾನೆ ಹಾಗೂ ನಮ್ಮನ್ನು ಪರಿವರ್ತಿತಗೊಳಿಸುತ್ತಾನೆ. ನಮ್ಮ ಜೀವನದ ಗುರಿಯ ಪ್ರಾಪ್ತಿಗೆ ನಮ್ಮಿಂದ ಬೇಕಾದುದೇನೆಂದರೆ, ನಾವು ಅವನೊಂದಿಗೆ ಸಹಕರಿಸುವುದು ಮಾತ್ರ .
ಜಿಜ್ಞಾಸುಗಳ ಆಧ್ಯಾತ್ಮಿಕ ತರಬೇತಿಯ ಉದ್ದೇಶಕ್ಕೋಸ್ಕರ ಇರುವ ವಿಭೂತಿ ಪುರುಷನನ್ನು ನಿದರ್ಶಿಸಲು ನಾವು ನಮ್ಮ ಗುರುಗಳಾದ ಪೂಜ್ಯ ಶ್ರೀ ಬಾಬೂಜಿ ಮಹಾರಾಜರ ಉದಾಹರಣೆಯನ್ನು ತೆಗೆದುಕೊಳ್ಳುತ್ತೇವೆ. ಅವರು ಯೋಗದ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಆಧ್ಯಾತ್ಮಿಕ ತರಬೇತಿಯ ಅನೇಕ ವಿಧಾನಗಳನ್ನು ಕಂಡು ಹಿಡಿದರು. ಸಹಜಮಾರ್ಗವೆಂಬ ಹೆಸರಿನಡಿಯಲ್ಲಿ, ಕೆಲವು, ಅನುಸರಿಸಬೇಕಾದ ಸರಳ ಮಾನಸಿಕ ಅಭ್ಯಾಸಗಳನ್ನು ನಮಗೆ ಕೊಟ್ಟಿದ್ದಾರೆ. ಅವುಗಳನ್ನು ಸುಲಭ ಸ್ವಾಭಾವಿಕ ರೀತಿಯಲ್ಲಿ ಅನುಸರಿಸಬೇಕು. ಅವು ಧ್ಯಾನ, ಶುದ್ದೀಕರಣ’ ಪ್ರಾರ್ಥನೆ ಮತ್ತು ನಿರಂತರ ಸ್ಮರಣೆಗಳನ್ನು ಒಳಗೊಂಡಿವೆ ಮತ್ತು ಅವು ಪ್ರಾಣಾಹುತಿಶಕ್ತಿಯ ಸಹಾಯದಿಂದ ನಡೆಯುತ್ತವೆ. ಅವರು ಅನೇಕ ವ್ಯಕ್ತಿಗಳನ್ನು ತರಬೇತುಗೊಳಿಸಿದ್ದಾರೆ ಮತ್ತು ಕೆಲವರನ್ನು ಅಧ್ಯಾತ್ಮದ ಉನ್ನತ ಸ್ತರಗಳಿಗೆ ತಲುಪಿಸಿದ್ದಾರೆ. ಹೀಗೆ ತರಬೇತಿ ಹೊಂದಿದವರಲ್ಲಿ ಪರಿಪೂರ್ಣ ಆತ್ಮನಿರಸನ ಹಾಗೂ ಅವನಲ್ಲಿ ಸಂಪೂರ್ಣ ಲಯಗೊಳ್ಳುವ ವಿಷಯದಲ್ಲಿ ಯಾರೂ ಗುರುಗಳ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲವೆಂದು ಕಂಡುಬರಬಹುದು. ಹಾಗಿದ್ದಾಗ್ಯೂ, ಜಿಜ್ಞಾಸುಗಳಿಗೆ ಅತ್ಯಂತ ಸಹಕಾರಿಯಾದ ಅಂತಿಮ ತತ್ತ್ವ’ವನ್ನು ಅಥವಾ ‘ಚೈತನ್ಯ’ವನ್ನು ಗುರುಗಳು ಅವರಿಗೆ ಧಾರೆಯೆರೆದರು. ಕೆಲವರಿಗೆ ಪ್ರಾಣಾಹುತಿಯ ತಂತ್ರವನ್ನೂ ಕಲಿಸಿದರು. ಮಾನವ ಕುಲದ ಇನ್ನೂ ಮುಂದಿನ ವಿಕಾಸಕ್ಕಾಗಿ ಒಂದು ನಿಶ್ಚಿತ ಹಾಗೂ ಅತ್ಯಂತ ಸ್ವಾಭಾವಿಕವಾದ ವಿಧಾನವಾದ ‘ಸಹಜಮಾರ್ಗ’ದೊಂದಿಗೆ ಅಧ್ಯಾತ್ಮಿಕ ಅಥವಾ ಯೋಗದ ತರಬೇತಿಯಲ್ಲಿ ಒಂದು ಹೊಸ ಯುಗವು ಪ್ರಾರಂಭವಾಯಿತು.
ನಮ್ಮ ಗುರುಗಳ ವಿಶಿಷ್ಟತೆ ಹಾಗೂ ಅನನ್ಯತೆಯೆಂದರೆ, ತಾನು ಗುರು ಎಂದು ತಮ್ಮ ಸಂಗಾತಿಗಳ ಮೇಲೆ ವರ್ಚಸ್ಸು ಹೇರುವ ಬದಲು ಅವರ ಹೃದಯದಲ್ಲಿ ಪ್ರವೇಶಿಸಲು ಸದಾ ಸಿದ್ಧರಾಗಿರುತ್ತಿದ್ದರು ಹಾಗೂ ಅವರಲ್ಲಿ ಪರಿವರ್ತನೆ ಉಂಟುಮಾಡಲು ತಾವೇ ಅಭ್ಯಾಸಿಗಳಲ್ಲಿ ತಮ್ಮನ್ನು ಲಯಗೊಳಿಸಿಕೊಳ್ಳುತ್ತಿದ್ದರು. ಒಬ್ಬ ಗುರುವು ತನ್ನ ಸಂಗಾತಿಗಳ ಸೇವೆ ಮಾಡಬೇಕೇ ಹೊರತು ಅವರಿಂದ ಸೇವೆಯನ್ನು ಹಕ್ಕಿನಿಂದ ಕೇಳಬಾರದು ಎಂಬ ಕ್ರಾಂತಿಕಾರಕ ವಿಚಾರವನ್ನು ಅವರು ಉಪದೇಶಿಸಿದರು. ತಮ್ಮ ಬೋಧನೆಗಳಿಗೆ ಅನುಸಾರವಾಗಿಯೇ ಅವರು ಬದುಕಿದರು. ಅವರು ಅತ್ಯಂತ ಸರಳರೂ ನಿಗರ್ವಿಯೂ ಆಗಿದ್ದರು ಮತ್ತು ತಮ್ಮ ಶ್ರೇಷ್ಠತೆಯ ಭಾವವನ್ನು ಎಂದೂ ತಳೆಯುತ್ತಿರಲಿಲ್ಲ. ‘ಯಾವನು ತನ್ನನ್ನು ನಗಣ್ಯನೆಂದು ಭಾವಿಸುವನೋ ಅವನು ಮಹಾತ್ಮ ಎಂದು ಅವರು ‘ಮಹಾತ್ಮಾ’ ಶಬ್ದಕ್ಕೆ ವ್ಯಾಖ್ಯೆ ನೀಡಿದರು.
ವಿಭೂತಿಪುರುಷನ ಬಗ್ಗೆ ಮತ್ತು ಆತನ ನೆಲೆಯನ್ನು ಗುರುತಿಸುವ ವಿಧಾನದ ಬಗ್ಗೆ ತಮ್ಮ ಲೇಖನಗಳಲ್ಲಿ ನಮ್ಮ ಗುರುಮಹಾರಾಜರು ಕೆಲವು ಸುಳುಹುಗಳನ್ನು ಕೊಟ್ಟಿದ್ದಾರೆ. ಈ ಸಂಬಂಧದಲ್ಲಿ ಒಂದು ಸೂಕ್ಷ್ಮ ಇನ್ನೂ ಸೂಕ್ಷ್ಮ ರೀತಿಯಲ್ಲಿ ಪ್ರಕಟಗೊಳಿಸಲು ಅವರು ಅಭಿವ್ಯಕ್ತಿಯ ಒಂದು ಹೊಸ ವಿಶೇಷವಾದ ವಿಧಾನವನ್ನು ಅನುಸರಿಸಿದರು. ಧ್ಯಾನದ ಅಭ್ಯಾಸವನ್ನು ಮಾಡುವ ಹಾಗೂ ಸೂಕ್ಷ್ಮ ಕಂಪನಗಳನ್ನು ಗ್ರಹಿಸುವುದರಲ್ಲಿ ಪ್ರಾವೀಣ್ಯವನ್ನು ಬೆಳೆಸಿಕೊಂಡಿರುವ ವ್ಯಕ್ತಿಯು ವಿಭೂತಿಪುರುಷನ ಬಗ್ಗೆ ಹಾಗೂ ಜಿಜ್ಞಾಸುಗಳಿಗೆ ಮಾರ್ಗದರ್ಶನ ನೀಡುವುದನ್ನೂ ಒಳಗೊಂಡು, ವೈಶ್ವಿಕವೂ ಆದ ಅವನ ಕಾರ್ಯದ ಬಗ್ಗೆ ಒಂದು ಸುಳಿವನ್ನು ಪಡೆಯಬಲ್ಲನು.
ವಿಭೂತಿಪುರುಷನನ್ನು ಕುರಿತ ನಿಃಸಂದಿಗ್ಧ ಜ್ಞಾನ ಹೊಂದಬೇಕಿದ್ದರೆ, ಒಬ್ಬನು ಅವನನ್ನು (ಅವನ ವ್ಯಕ್ತಿತ್ವವನ್ನು ಪ್ರಕಟಗೊಳಿಸಿದ ವಸ್ತುದ್ರವ್ಯ (matter) ಅಥವಾ ವಾಹಕ ಮಾಧ್ಯಮವನ್ನು ವೀಕ್ಷಿಸುವುದರಿಂದ ಮುಂದುವರಿಯಬಹುದು. ಈ ವಾಹಕ ಅಥವಾ ವಸ್ತುದ್ರವ್ಯದ ಮಾಧ್ಯಮವು ನಿಸರ್ಗದ ನಿಯಮಗಳು ಅಥವಾ ಬದಲಾವಣೆಗಳಿಗೆ ಒಳಪಟ್ಟಿರುವುದು ಸಹಜವಾಗಿದೆ. ಆದಾಗ್ಯೂ ಅವನು ಪೂರೈಸಿ ಹೋದ ಕಾರ್ಯಗಳಿಂದ ಅವನ ಪಾತ್ರವನ್ನು ಕಂಡುಕೊಳ್ಳಬಹುದು. ಆ ಕಾರ್ಯಗಳು ಅವನ ಭೌತಿಕ ಶರೀರಕ್ಕಿಂತಲೂ ಹೆಚ್ಚು ಕಾಲ ಉಳಿಯುವಂತಹವಾದರೂ, ಅವೂ ಕೂಡ ನಿಸರ್ಗದ ನಿಯಮಗಳಿಗೆ ಮತ್ತು ಬದಲಾವಣೆಗಳಿಗೆ ಒಳಪಟ್ಟಿವೆ. ಹಾಗಿದ್ದರೂ ಅವನ ಕಾರ್ಯಗಳ ಹಾಗೂ ನಿರ್ಮಿಸಿ ಹೋದ ಸಜೀವ ಸತ್ತೆಗಳ (ವ್ಯಕ್ತಿಗಳ) ಸಂಬಂಧ (ಸಂಪರ್ಕ) ಹೊಂದುವ ಮೂಲಕ ಒಬ್ಬ ಅಭ್ಯಾಸಿಯು ತನ್ನ ಚಿಂತನವನ್ನು ಆತನೊಂದಿಗೆ ಜೋಡಿಸಿಕೊಳ್ಳಬಹುದು. ಅವನ ಆ ವಿಭೂತಿ ಪುರುಷನ ಕಾರ್ಯಗಳಿಗಿಂತಲೂ ಅವನ ಬೋಧನೆಗಳು ಹಾಗೂ ನಡವಳಿಕೆಯ ಮಾದರಿಗಳು ಇನ್ನೂ ಬಹುಕಾಲ ಉಳಿಯುವಂತಹವು. ಆದುದರಿಂದ ಆ ಮಹಾವ್ಯಕ್ತಿಯ ಬೋಧನೆಗಳನ್ನು ಹಾಗೂ ನಡವಳಿಕೆಯ ಮಾದರಿಯನ್ನು (ಆಚಾರ ಕ್ರಮ) ಜ್ಞಾಪಕದಲ್ಲಿಟ್ಟುಕೊಳ್ಳುವುದು ಅಭ್ಯಾಸಿಗಳಿಗೆ ಬಹಳ ಸುಲಭವೂ ಪ್ರಯೋಜನಕಾರಿಯೂ ಆಗುವುದು. ನಮ್ಮ ಗುರುಗಳು ಅವರ ಬೋಧನೆ ಹಾಗೂ ನಡವಳಿಕೆಯ ಆದರ್ಶಗಳಿಗೆ ಅನುರೂಪವಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವ ಅಭ್ಯಾಸಿಯ ಹೃದಯದಲ್ಲಿ ಪ್ರವೇಶಿಸಲು ಸದಾ ಸಿದ್ಧರಿರುವರು.
ಕಪಟ ಗುರುಗಳು, ಕಪಟ ಮಹಾವ್ಯಕ್ತಿಗಳು ಹಾಗೂ ಮೋಸಗಾರರು ಬೀಸುವ ಮೋಹಕ ಬಲೆಗಳಿಂದ ತನ್ನನ್ನು ತಪ್ಪಿಸಿಕೊಳ್ಳಲು ಅಭ್ಯಾಸಿಯು ಪ್ರಯತ್ನಿಸಬೇಕು. ನಿಜವಾದ ವಿಭೂತಿಪುರುಷನು ಅತ್ಯಂತ ಪರಿಶುಭ್ರ ಕನ್ನಡಿಯೆಂದು ಪರಿಗಣಿಸಬಹುದು; ತನ್ನನ್ನು ವೀಕ್ಷಿಸುತ್ತಿರುವವರನ್ನು ಅವನು ಪ್ರತಿಫಲಿಸುತ್ತಾನೆ, ಅಷ್ಟೇ ಅಲ್ಲ, ಉದಾತ್ತೀಕರಿಸುತ್ತಾನೆ ಕೂಡ. ಇಂತಹ ಗುರುವಿನ ಕಾರ್ಯಗಳು ಹಾಗೂ ಜೀವಂತ ಪರಿಣಾಮಗಳು ಆಧ್ಯಾತ್ಮಿಕ ಜಿಜ್ಞಾಸುಗಳ ಪೂಜೆಯ ಧ್ಯೇಯವಸ್ತುವಾಗಿರುವ ಗುರುವಿನ ವ್ಯಕ್ತಿತ್ವವನ್ನು ಹೇಗೆ ಪ್ರತಿಫಲಿಸುವುವೋ, ಅಂತೆಯೇ ವಿಭೂತಿಪುರುಷನು ಭಗವಂತನ ನಿಜವಾದ ಜಿಜ್ಞಾಸುವಿನ ನಿಜವಾದ ಗುರಿಯಾದ ಅಂತಿಮ ಸತ್ಯದ ನೈಜ ಪ್ರತಿಬಿಂಬವಾಗಿದ್ದಾನೆ. ಎಲ್ಲಿಯೇ ಆಗಲಿ, ಯಾವಾಗಲೇ ಆಗಲಿ ವಿಭೂತಿಪುರುಷನ ಸ್ಪರ್ಶದ ಅನುಭೂತಿಯಾದರೆ, ಒಬ್ಬ ನಿಜವಾದ ಜಿಜ್ಞಾಸುವಿನ ಹೃದಯವು ಅದರ ಸೂಚನೆ ನೀಡುವುದು.
ಇಂದ್ರಿಯಗಳು ಒಬ್ಬನೆಡೆಗೆ ಎಷ್ಟೇ ಆಕರ್ಷಿಸಲ್ಪಟ್ಟರೂ, ಶುದ್ಧ ಸ್ಥಿತಿಯಲ್ಲಿರುವ ಹೃದಯವು ನಿರ್ದಿಷ್ಟವಾಗಿ ಸೂಚನೆ ಕೊಡದಿದ್ದರೆ, ಅವನನ್ನು ವಿಭೂತಿಪುರುಷನೆಂದು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಸ್ವೀಕರಿಸುವುದು ಅವಿವೇಕದ್ದು ಮತ್ತು ಅಪಾಯದ್ದೂ ಆಗುವುದು. ಕ್ವಚಿತ್ತಾಗಿ ಒಬ್ಬನು ಕಪಟ ಗುರುಗಳ, ಕಪಟ ಬೋಧಕರ ಅಥವಾ ಡಂಭಾಚಾರಿಗಳಾದ ಮೋಸಗಾರರ ಸಂಪರ್ಕದಲ್ಲಿ ಅಥವಾ ತಾತ್ಕಾಲಿಕ ಸಂಪರ್ಕದಲ್ಲಿ ಬರುವ ಅನಿವಾರ್ಯ ಪ್ರಸಂಗ ಬರಬಹುದು. ಆದರೆ, ಅದೆಷ್ಟು ಬೇಗ ಇಂತಹ ಕಪಟಿಗಳ ಸಂಪರ್ಕ ಕಡಿದುಕೊಳ್ಳುವನೋ ಅಷ್ಟು ಅವನ ಆಧ್ಯಾತ್ಮಿಕ ಕಲ್ಯಾಣದ ದೃಷ್ಟಿಯಿಂದ ಒಳ್ಳೆಯದಾಗುವುದು. ಒಬ್ಬ ಮಹಾ ಗುರುವನ್ನು ಮರೆತು ಅವನ ಸ್ಥಾನದಲ್ಲಿ ಬೇರೊಬ್ಬನನ್ನು ಪೂಜಾರ್ಹ ಧ್ಯೇಯ ಅಥವಾ ಸಹವಾಸಾರ್ಹನೆಂದು ಹುಡುಕುವುದರ ಬದಲಿಗೆ, ಆ ಮಹಾ ಗುರುವು ನಮಗೆ ಬಿಟ್ಟು ಹೋದ ಕಾರ್ಯಗಳ ಹಾಗೂ ಬೋಧನೆಗಳ ಸಂಬಂಧ ಹೊಂದಿರುವುದು ಹೆಚ್ಚು ಒಳಿತು ಹಾಗೂ ಹೆಚ್ಚು ಸುರಕ್ಷಿತ.
ಪೂಜ್ಯ ಬಾಬೂಜಿಯವರ ವ್ಯಕ್ತಿತ್ವದಲ್ಲಿ ಭೌತಿಕ, ಪ್ರಾಣಿಕ (vital), ಮಾನಸ (mental) ಆಧ್ಯಾತ್ಮಿಕ ಮತ್ತು ದೈವಿಕ ತತ್ತ್ವಗಳುಂಟು. ಸಂಪೂರ್ಣ ದೈವೀಕರಣಗೊಂಡ, ತನ್ನ ಮೂಲ ಸ್ಥಿತಿಯಲ್ಲಿ ಪರಿವರ್ತಿತಗೊಂಡ ಅವರ ವ್ಯಕ್ತಿತ್ವದ ಪ್ರತಿಯೊಂದು ಕಣವೂ ಪರಮ ತತ್ತ್ವವನ್ನು ಸೂಚಿಸುವುದಾಗಿದೆ. ತನ್ನ ವಿಚಾರವನ್ನು ವಿಭೂತಿ ಪುರುಷನೊಂದಿಗೆ ಜೋಡಿಸಿಕೊಳ್ಳಲು ಪ್ರತಿಯೊಬ್ಬ ಜಿಜ್ಞಾಸುವಿಗೆ ಅದು ಸಹಾಯ ಮಾಡುವುದು. ಪವಿತ್ರತೆ, ಪ್ರೇಮ ಮತ್ತು ಸೇವೆಗಳ ಭದ್ರ ಬುನಾದಿಯ ಮೇಲೆ ನಿರ್ಮಿತವಾದ ಆಧ್ಯಾತ್ಮ ಹಾಗೂ ಸಹಜಮಾರ್ಗದ ಅಚಲ ಮಹಾಸೌಧದಲ್ಲಿ ಪೂಜ್ಯ ಬಾಬೂಜಿಯವರ ವ್ಯಕ್ತಿತ್ವವು ಸದಾಕಾಲ ಗೋಚರಿಸುತ್ತಿರುತ್ತದೆ. ವಾಸ್ತವಿಕವಾಗಿ ಈ ಮಹಾ ಸೌಧವು ಸಾವಿರಾರು ವರ್ಷಗಳ ಕಾಲವಿರುವಷ್ಟು ಆಧ್ಯಾತ್ಮಿಕ ಶಕ್ತಿಯಿಂದ ತುಂಬಲ್ಪಟ್ಟಿದೆ ಹಾಗೂ ಎಲ್ಲ ಸಂಗಾತಿಗಳಿಗೆ ಮತ್ತು ಜಿಜ್ಞಾಸುಗಳಿಗೆ ದೈವೀ ಕೃಪೆಯ ಭಂಡಾರವಾಗಿದೆ.
ಸಂಕ್ಷೇಪವಾಗಿ ಹೇಳುವುದಾದರೆ, ನಮ್ಮ ಚಿತ್ತವನ್ನು ದೈವತ್ವದೊಂದಿಗೆ, ವಿಭೂತಿ ಪುರುಷನೊಂದಿಗೆ ಗುರುವಿನೊಂದಿಗೆ, ಅರ್ಥಾತ್, ಪೂಜ್ಯ ಬಾಬೂಜಿಯವರೊಂದಿಗೆ ಜೋಡಿಸುವುದಕ್ಕಾಗಿ ಅವರ ಮಕ್ಕಳಲ್ಲಿ, ಶಿಷ್ಯರಲ್ಲಿ, ಕಟ್ಟಡಗಳಲ್ಲಿ, ಬರಹಗಳಲ್ಲಿ, ಕೃತಿಗಳಲ್ಲಿ ಹಾಗೂ ಅವರ ನಿಕಟ ಸಂಪರ್ಕದಲ್ಲಿ ಬಂದಂತಹ ಸದಸ್ಯರ ಆಧ್ಯಾತ್ಮಿಕ ಅನುಭವಗಳಲ್ಲಿ ನಾವು ಆ ಚಿಂತನದ ಸಾಂಗತ್ಯವನ್ನು ಪಡೆಯಲು ಪ್ರಯತ್ನಿಸಬೇಕು. ಅದಿಲ್ಲದೆ ಹೋದರೆ, ನಾವು ಆ ವಿಭೂತಿ ಪುರುಷನಿಂದ ವಂಚಿತರಾಗಿ ಉಳಿಯುವ ಸಂಭವವಿದೆ.
[ಸಹಜಮಾರ್ಗ ಪತ್ರಿಕೆ ನಂ. 6, 1986]
ಯಾರು ನನ್ನಿಂದ ದೂರವಿದ್ದರೂ ಸದಾ ನನ್ನನ್ನೇ ನೆನೆಯುತ್ತಿರುತ್ತಾರೋ ಅವರಿಗೆ ಸತ್ಸಂಗದ
ಅನುಕೂಲತೆಯಿಂದ ದೂರವಿದ್ದರೂ ತುಂಬ ಲಾಭವಾಗುತ್ತದೆ. ಆದರೆ ಯಾರು ನನ್ನ ಹತ್ತಿರವಿದ್ದೂ ಆಂತರ್ಯದಲ್ಲಿ ನನ್ನಿಂದ ದೂರವಿರುವರೋ ಅವರು ಯಾವ ಲಾಭವನ್ನೂ ಪಡೆಯಲಾರರು.
-ಶ್ರೀ ಬಾಬೂಜಿ (ಸತ್ಯೋದಯ 39)