ಪೀಠಿಕೆ :
ಕಳೆದ ವರ್ಷ 2006 ರಲ್ಲಿ ನಾನು ಕೆ.ಜಿ.ಎಫ.ಗೆ ಹೋದಾಗ ಅಲ್ಲಿ ಒಂದು ಘಟನೆ ಜರುಗಿತು. ನನ್ನ ಸಹೋದರಿಯು ಪ್ರಸ್ತಾಪಿಸಿದ್ದೇನೆಂದರೆ “ನಾನು ಸುಮಾರು 32-33 ವರ್ಷಗಳಿಂದ ಸಾಧನೆ ಮಾಡಿದಾಗ್ಯೂ ಸಹಜ ಮಾರ್ಗದ ಬಗ್ಗೆ ಏನೂ ತಿಳಿದಿಲ್ಲ ಮತ್ತು ಅನುಭವಿಸಿಯೂ ಇಲ್ಲ. ಸಾಧನೆಯು ಯಾಂತ್ರಿಕವಾಗಿ ನಡೆದಿದೆ. ಇದರಿಂದ ಏನೂ ಲಾಭವಿಲ್ಲವೆಂದು ರಾಯಚೂರಿನ ಸಾಹೇಬರು ಪದೆ ಪದೆ ಹೇಳಿದ್ದಾರೆ. ನಮ್ಮ ಸಾಧನೆಯು ನೈಜವಾಗಬೇಕಾದರೆ ನಾನು ಏನು ಮಾಡಬೇಕು? ನನಗೆ ಸರಿಯಾದ ಮಾರ್ಗದರ್ಶನ ಮಾಡಿ ನನ್ನ ಗುರಿ ತಲುಪಲು ದಾರಿ ಮಾಡಿಕೊಡಿ” ಎಂದು ಕೇಳಿಕೊಂಡಳು. ಸ್ವಲ್ಪ ಸಮಯದ ನಂತರ ನನ್ನಲ್ಲಿ ಅನುಕಂಪ ಮತ್ತು ಕಳಕಳಿಯಿಂದ ಏನೋ ಮಾರ್ಪಾಟಾಯಿತು. ಈ ಘಟನೆಯೇ ನನಗೆ ಬರೆಯಲು ಪ್ರೇರೇಪಿಸಿತು. ಆಗ ಬಂಧು ರಾಮಾನುಜರಾವ್‌ಗೆ ‘ಜೀವನದ ಗುರಿಯ’ ಬಗ್ಗೆ ಒಂದು ಉಕ್ತ ಲೇಖನವನ್ನು ಬರೆಸಿದೆ. ಮೊದಲು ನಮ್ಮ ಜೀವನದ ಗುರಿಯ ಬಗ್ಗೆ ತಿಳಿದು ನಿರ್ಧರಿಸು ಎಂದು ಹೇಳಿದೆ. ಅದೇ ನೀನೆ ಮಾನವ ಜೀವನದ ಗುರಿ’ ಎಂಬ ಲೇಖನವಾಗಿ ಹೊರಹೊಮ್ಮಿತು. ಅದನ್ನು 2006ರ ರಾಯಚೂರಿನಲ್ಲಿ ನಡೆದ ಸಮಾರಂಭದಲ್ಲಿ ಓದಿದೆ. ಅನೇಕ ಅಭ್ಯಾಸಿ ಬಂಧುಗಳು ಇದನ್ನು ಮೆಚ್ಚಿ ಇನ್ನೂ ಹೆಚ್ಚು ಲೇಖನಗಳನ್ನು ಬರೆಯಲು ಕೇಳಿಕೊಂಡರು.
ಇದಕ್ಕೂ ಸುಮಾರು 4 ವರ್ಷಗಳ ಹಿಂದೆ ಪೂಜ್ಯ ಭಾಯಿ ಸಾಹೇಬರು, ಈ ಮೊದಲು Souvenir ಮತ್ತು ಪತ್ರಿಕೆಗಳಿಗೆ ಕಳುಹಿಸಿದ. ನನ್ನ ನಿಬಂಧಗಳ ಪ್ರಸ್ತಾಪ ಮಾಡಿ ಇಂಗ್ಲಿಷಿನಲ್ಲಿ ಹೀಗೆಯೆ ಪ್ರಾಯೋಗಿಕ ವಿಷಯಗಳ ಮೇಲೆ ಬರೆಯಲು ಹೇಳಿದರಲ್ಲದೆ ಕೆಲವು ಶೀರ್ಷಿಕೆಗಳನ್ನೂ ಸಹ ಕೊಟ್ಟರು. ಶ್ರೀ ಬಾಬೂಜಿಯವರ ಕೃಪೆಯಿಂದ ಸಾಮಾನ್ಯ ವಿಷಯಗಳ ಮೇಲೆ ನಿಬಂಧಗಳನ್ನು ಬರೆಯಲು ಪ್ರಾರಂಭ ಮಾಡಿದೆ ಬರೆಯುತ್ತಾ ಹೋದಂತೆ ಇಂಗ್ಲಿಷ್ ಮತ್ತು ಕನ್ನಡ ಪ್ರಬಂಧಗಳು ಸಾಕಷ್ಟಾದವು. ಅವುಗಳನ್ನು ಕೆಲ ಅಭ್ಯಾಸಿ ಬಾಂಧವರಿಗೆ ತೋರಿಸಿದೆ. ಅವರು ಈ ಎಲ್ಲ ನಿಬಂಧಗಳ ಸಂಕಲನ, ಒಂದು ಪುಸ್ತಕದ ರೂಪದಲ್ಲಿ ತರಲು ಒತ್ತಾಯಿಸಿದ ಕಾರಣ ನಾನು ಅದಕ್ಕೆ ಒಪ್ಪಿಕೊಂಡೆ.
ನನ್ನ ಮಾತು :-
ಗುರಿಯಿಲ್ಲದ ಜೀವನ ಚುಕ್ಕಾಣಿಯಿಲ್ಲದ ನೌಕೆಯಂತೆ. ಅಂತೆಯೇ ಪೂಜ್ಯ ಬಾಬೂಜಿ ಮಹರಾಜರು ಜೀವನದ ಗುರಿಗೆ ಅಷ್ಟೊಂದು ಮಹತ್ವ ಕೊಟ್ಟಿದ್ದಾರೆ. ಗುರಿಯ ಸ್ವಷ್ಟ ಕಲ್ಪನೆಯಿಲ್ಲದಿದ್ದರೆ ಸಾಧನೆಗೆ ಅರ್ಥವೇ ಇಲ್ಲವಾಗುತ್ತದೆ. ಸಾಧನೆಯಲ್ಲಿ ಗುರುವಿನ ಮಾರ್ಗದರ್ಶನದ ಪಾತ್ರ ಎಷ್ಟು ಮಹತ್ವದ್ದೂ, ಮಾರ್ಗದರ್ಶನ ಸ್ವೀಕರಿಸುವ ಜಿಜ್ಞಾಸುವಿನ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ. “ನಾನು ಗುರುಗಳನ್ನು ತಯಾರಿಸುತ್ತೇನೆ, ಶಿಷ್ಯರನ್ನಲ್ಲ” ಎಂಬ ಗುರುಮಹರಾಜರ ಹೇಳಿಕೆ ‘ಜೀವನದ ಗುರಿಯೆಂದರೇನು’ ಎಂಬ ಪ್ರಶ್ನೆಯಷ್ಟೇ ಗಹನವಾಗಿದೆ. ಇವೆರಡನ್ನು ನಾವು ವಿಶ್ಲೇಷಣೆಗೆ ಗುರಿ ಮಾಡಬೇಕಾಗುತ್ತದೆ. ಮೇಲ್ನೋಟಕ್ಕೆ ಇವುಗಳ ಬಗ್ಗೆ ಚಿಂತನೆ ಮಾಡುವದಾದರೂ ಏನಿದೆ ಎಂದೆನಿಸಬಹುದು. ಸಾಧನೆ ಮಾಡುವ ಪದ್ಧತಿಯನ್ನು ಗುರುಮಹರಾಜರು ಹೇಳಿಕೊಟ್ಟಿದ್ದಾರೆ, ಅದನ್ನು ಅನುಸರಿಸಬೇಕು. ಗುರಿಯನ್ನು ತಲುಪಿಸುವ ಜವಾಬ್ದಾರಿ ಅವನಿಗೆ ಸೇರಿದ್ದು, ಅವನ ಕೃಪೆಯಿಲ್ಲದೆ ಶರಣಾಗತಿಯೂ ಸಾಧ್ಯವಿಲ್ಲ. ಸಾಧಕನ ಪಾತ್ರ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ನಿಲ್ಲುವದಷ್ಟೇ ಎಂಬ ಸೂಚನೆಗಳು ಕೆಲವರಿಂದ ಕೇಳಿ ಬರುತ್ತದೆ. ಇದು ಸಾಧನೆಯನ್ನು ಅತಿಯಾಗಿ ಸರಳೀಕರಿಸುವ ಅಪಾಯಕಾರಿ ಹೇಳಿಕೆ. ಸುದೈವದಿಂದ ಅಭ್ಯಾಸಿ ಸಹೋದರ ಸಹೋದರಿಯರು ಅನೇಕ ವರ್ಷಗಳ ಸಾಧನೆಯಿಂದ ವಿವೇಕ ಬೆಳೆಸಿಕೊಂಡಿದ್ದಾರೆ. ಅನುಕೂಲತೆಗಾಗಿ ಬಳೆಸುವ ಇಂತಹ ಮಾತುಗಳು ದಾರಿ ತಪ್ಪಿಸುವದಿಲ್ಲವೆಂದು ಭಾವಿಸಲಾಗಿದೆ. ಶ್ರೀ ಬಾಬೂಜಿ ಮಹರಾಜರು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ. ಸಾಧನೆಯ ಯಾವ ಹಂತದಲ್ಲಿ ಅವುಗಳನ್ನು ಉಪಯೋಗಿಸಬೇಕೆಂಬ ತಾರತಮ್ಯ ಮತ್ತು ಜಾಗರೂಕತೆ ಅತ್ಯವಶ್ಯವಾಗಿದೆ.
“ನೀನೆ ಮಾನವ ಜೀವನದ ಗುರಿ’ ಅನೇಕ ಪ್ರಬಂಧಗಳ ಸಂಕಲನವಾಗಿದ್ದು, ಅದರಲ್ಲಿರುವ ಎಲ್ಲ ಶೀರ್ಷಿಕೆಗಳನ್ನು ಬಂಧುಗಳು ಬಲ್ಲವರಾಗಿದ್ದಾರೆ. ಗುರುಮಹರಾಜರ ಪ್ರತಿಯೊಂದು ಶಬ್ದದ ಬಗ್ಗೆ ಆಳವಾದ ಚಿಂತನೆ ಮಾಡಿದಾಗ ಅದು ಹೃದಯದ ಮೇಲೆ ತನ್ನ ಪ್ರಭಾವ ಬೀರಿ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಸಹಜ ಮಾರ್ಗ ಪದ್ಧತಿಯ ಮೂಲ ತಳಹದಿಯೆಂದರೆ ಚಿಂತನೆ. ಚಿಂತನೆ ಯಾರು ಮಾಡುವದಿಲ್ಲವೋ ಸಹಜ ಮಾರ್ಗವು ಅವರಿಗಾಗಿ ಯಾವುದೇ ಸಹಾಯ ಮಾಡಲಾರದೆಂದು ಪೂಜ್ಯ ಭಾಯಿ ಸಾಹೇಬರು ಹೇಳಿದ್ದಾರೆ. ಈ ಎಲ್ಲ ಲೇಖನಗಳ ಉದ್ದೇಶ ಅಭ್ಯಾಸಿ ಬಂಧುಗಳಿಗೆ ಸಾಧನೆಯ ಜೊತೆಗೆ ಚಿಂತನೆಗೀಡು ಮಾಡುವದಾಗಿದೆ. ಹಾಗಾದಾಗ ಮಾತ್ರ ಬರೆಸಿದವನ ಉದ್ದೇಶ ಸಫಲವಾಗುತ್ತದೆ.
ನಮ್ಮಲ್ಲಿ ಬಹಳಷ್ಟು ಜನರು ಜೀವನದ ಸಂಜೆಯಲ್ಲಿದ್ದೇವೆ. ಕಾಲನ ಕರಿ ಛಾಯೆ ಯಾವ ಹೊತ್ತಿನಲ್ಲಾದರೂ ನಮ್ಮ ಮೇಲೆ ಬೀಳಬಹುದು. ಅನಂತ ಯಾತ್ರೆಗೆ ಕೂಗಳತೆಯಿಂದ ಕರೆಯುತ್ತಿದ್ದ ಸಹಪಥಿಕನು ನಮ್ಮ ಬಾಹ್ಯ ಚಕ್ಷುವಿಗೆ ಕಾಣದಷ್ಟು ದೂರ, ಬಹು ದೂರ ಪಯಣಿಸಿದ್ದಾನೆ. ಈಗ ನಾವು ಅಂತಃಚಕ್ಷುವಿನ ಸಹಾಯದಿಂದ ದಾಪುಗಾಲು ಹಾಕಬೇಕಾಗಿದೆ. ನೀನೆ ಮಾನವ ಜೀವನದ ಗುರಿ’ ಗುಲಾಮನೊಬ್ಬನ ಆಲಾಪನೆಯಾಗಿದೆ. ಇಲ್ಲಿಯವರೆಗೆ ಆದ ಸಮಯದ ನಷ್ಟ ಸಾಕು. ಸರಿಯಾದ ರೀತಿಯಲ್ಲಿ ಜೀವನದ ಗುರಿಯೆಂದರೇನು ಅರ್ಥ ಮಾಡಿಕೊಂಡು ಅದರಲ್ಲಿ ಮುಳುಗಿ ಹೋದರೆ, ಈಗ ಉಳಿದುಕೊಂಡಿರುವ ಸಮಯದಲ್ಲಿಯೇ ಗುರಿಯನ್ನು ತಲುಪಲು ಸಾಧ್ಯವಿದೆ.
ಗುರುವಿಲ್ಲದೆ ವ್ಯರ್ಥವಾಗಿ ಹೋಗುತ್ತಿದ್ದ ಜೀವನವು ಸುದೈವದಿಂದ ಪೂಜ್ಯ ಬಾಬೂಜಿ ಮಹರಾಜರನ್ನು ಪಡೆದುಕೊಂಡು ಧನ್ಯವಾಗಿದೆ. ಆತನ ಕೃಪೆಯ ಅರಿವನ್ನು ಮಾಡಿಕೊಂಡು ಜೀವನವನ್ನು ಸಫಲ ಮಾಡಿಕೊಳ್ಳೋಣ.
ಈ ಪ್ರಬಂಧಗಳ ಅಧ್ಯಯನದ ನಂತರ ನಾವು ಮಾಡುತ್ತಿರುವ ಸಾಧನೆ ಯಾಂತ್ರಿಕತೆಯಿಂದ ನೈಜವಾಗಿ ಪರಿಣಮಿಸಿದರೆ ಲೇಖಕನು ಕೃತಾರ್ಥನಾಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಪೂಜ್ಯ ಬಾಬೂಜಿ ಮಹರಾಜರ ಮೂಲ ಕೃತಿಗಳೇ ಆಧಾರ.
ಈ ನಿಬಂಧಗಳನ್ನು ಸರಿಯಾಗಿ ತಯಾರಿಸುವಲ್ಲಿ ಸಹಾಯ ಮಾಡಿದ ಬಂಧುಗಳಾದ ಶ್ರೀ ಎಮ್.ಎಸ್. ಕೊಡಗಲಿ, ಶ್ರೀ ಎಮ್. ರಾಮಾನುಜರಾವ್ (ಕೆ.ಜಿ.ಎಫ್), ಡಾ.ವಿಜಯಕುಮಾರ ವೈಕುಂಠ, ನನ್ನ ಪತ್ನಿ ನಳಿನಿ ಮತ್ತು ಶ್ರೀ ಪುರಂಧರ ಭಟ್ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳನ್ನರ್ಪಿಸುತ್ತಾ ಪೂಜ್ಯ ಬಾಬೂಜಿ ಮಹರಾಜರು ಇವರಿಗೆ ಮತ್ತು ಎಲ್ಲರಿಗೂ ಮಾನವ ಜೀವನದ ಗುರಿಯನ್ನು ತಲುಪಲು ತಮ್ಮ ಕೃಪೆಯನ್ನು ಧಾರಾಳವಾಗಿ ದಯಪಾಲಿಸಲೆಂದು ನನ್ನ ಪ್ರಾರ್ಥನೆ.
ಬಸಂತ ಪಂಚಮಿ ಡಾ.ಎಸ್.ಬಿ. ಶ್ಯಾಮರಾವ್
11-02-2008 ಗುಲಬರ್ಗಾ