ಪ್ರಿಯ ಸೋದರ ಸೋದರಿಯರೆ,
ಮಹಾತ್ಮರು ಆಕಸ್ಮಿಕವಾಗಿ ಜನ್ಮ ತಾಳುವುದಿಲ್ಲ, ಹಾಗೂ ಅವರ ಜೀವನೋದ್ದೇಶವು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ. ನಮ್ಮ ಗುರುಮಹಾರಾಜರು ಕಾಲದ ಅವಶ್ಯಕತೆಗೆ ಅನುಸಾರವಾಗಿ ಈ ಧೈಯೋದ್ದೇಶವನ್ನು ಪೂರ್ಣಗೊಳಿಸಲು ನಮಗೆ ನೀಡಿದ್ದಾರೆ, ಮತ್ತು ಆ ಕಾರ್ಯವನ್ನು ಪೂರ್ಣಗೊಳಿಸುವುದು ನಮಗೆ ಬಿಟ್ಟದ್ದಾಗಿದೆ. ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಲ್ಲಿ ನಾವು ಅತ್ಯಂತ ಸುದೈವಿಗಳಾಗಿದ್ದೇವೆ, ಮತ್ತು ಅದರ ಜೊತೆಗೇ ಒಂದು ಮಹತ್ತರವಾದ ಹೊಣೆಗಾರಿಕೆಯೂ ನಮ್ಮ ಮೇಲೆ ಬಿದ್ದಿದೆ. ಗುರುಗಳು ನಮಗೆ ಚಿಂತನೆ ಮಾಡಲು ಮತ್ತು ಕಾರ್ಯ ನಿರ್ವಹಿಸಲು ಇಷ್ಟೆಲ್ಲ ಸ್ವಾತಂತ್ರ್ಯವನ್ನೂ ಕೊಟ್ಟಿರುವುದರಿಂದ ನಮ್ಮ ಹೊಣೆಗಾರಿಕೆ ಇನ್ನೂ ಹೆಚ್ಚಾಗಿದೆ.
ನಮ್ಮ ಅಸ್ತಿತ್ವದ ಸದ್ಯದ ಸ್ವರೂಪವು ತೊಡಕುಗಳು, ಜಡ ಘನತ್ವ ವಿರೂಪಗಳ ಮತ್ತು ಮೂಲ ಸ್ಥಿತಿಯಲ್ಲಿ ಆದ ವೈಪರೀತ್ಯಗಳ ಸಂಮಿಶ್ರಣವಾಗಿದೆ. ಸಾರತತ್ತ್ವವು ಯಾವಾಗ ಮರೆಯಾಗಿ ಹೋಗುವುದೋ ಆಗ ಕ್ಷುದ್ರ ವಸ್ತುಗಳು ದೈತ್ಯಾಕಾರದ ಮತ್ತು ಕರಾಳ ರೂಪಗಳನ್ನು ತಾಳುವುವು. ಆದುದರಿಂದ, ಮೂಲ ಸಾರತತ್ತ್ವವು ತನ್ನೆಲ್ಲ ಪವಿತ್ರತೆಯೊಂದಿಗೆ ಕಾಪಾಡಲ್ಪಟ್ಟಿರುವುದರ ಬಗ್ಗೆ ಪ್ರತಿ ಹೆಜ್ಜೆಗೂ ನಾವು ಬಹಳ ಕಾಳಜಿ ವಹಿಸಬೇಕಾಗಿದೆ, ಮತ್ತು ಅಡ್ಡಿ-ಆತಂಕಗಳೂ ಸಹ ಈ ಸಾರತತ್ತ್ವದ ಪ್ರಕಾಶದ ಪರಿಣಾಮದಿಂದ ನಮ್ಮ ಊರ್ಧ್ವಮುಖಿ ಯಾತ್ರೆಯಲ್ಲಿ ಪ್ರಗತಿಯ ಮೆಟ್ಟಿಲುಗಳಾಗಿ ಹಾಗೂ ದಾರಿತೋರುವ ನಕ್ಷತ್ರಗಳಾಗಿ ಪರಿವರ್ತನೆ ಹೊಂದಬೇಕಾಗಿದೆ.
ಪ್ರಿಯ ಬಂಧುಗಳೆ, ನಮ್ಮ ಸಂಸ್ಥೆ ಅದ್ವಿತೀಯವಾಗಿದೆ. ಪ್ರತಿಯೊಬ್ಬರಿಗೂ ಇಲ್ಲಿ ಸ್ವಾಗತವಿದೆ. ಆದರೆ ಒಮ್ಮೆ ನೀವು ಈ ಸಂಸ್ಥೆಯನ್ನು ನಿಮ್ಮದಾಗಿ ಸ್ವೀಕರಿಸಿದಿರೆಂದರೆ, ಬೇರೆಲ್ಲವನ್ನೂ, ನಿಮ್ಮದಲ್ಲವೆಂದು ತ್ಯಜಿಸಬೇಕೆಂದು ನಿಮಗನಿಸುವುದು. ಅದು ನಿಮಗೆ ಒಂದು ಮಹತ್ತ್ವಪೂರ್ಣ ನಿರ್ಧಾರಕ ಸಂಧಿಕಾಲವಾಗುವುದು. ಸದಾಕಾಲಕ್ಕೂ ಯಾವುದು ಸರ್ವಶ್ರೇಷ್ಠವಾದುದೆಂಬುದನ್ನು ನೀವು ಖಚಿತವಾಗಿ ನಿರ್ಧರಿಸಬೇಕಾಗುವುದು. ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಬಗೆಬಗೆಯ ಪ್ರಲೋಭನೆಗಳುಂಟು, ಮತ್ತು ಅವು ಬಹಳ ಪ್ರಬಲವಾಗಿರುತ್ತವೆ ಕೂಡ. ಆದರೆ ಹುಸಿಯಾದುದರೊಂದಿಗೆ ಅಥವಾ ಅಯೋಗ್ಯ ವಸ್ತುಗಳೊಂದಿಗೆ ಸಮಾನಾಧಾರದ ಮೇಲೆ ಹೊಂದಾಣಿಕೆ ಮಾಡಿಕೊಳ್ಳುವುದೆಂದರೆ ಅದು ಆಧ್ಯಾತ್ಮಿಕತೆಗೆ ಮತ್ತು ಸತ್ಯಕ್ಕೆ ಮಾರಕವಾಗುವುದು. ಕಪಟ ವಿನಮ್ರತೆಯು ಧರ್ಮಾಂಧತೆ ಮತ್ತು ಅಂಧ ಶ್ರದ್ಧೆಯಷ್ಟೇ ವಂಚಕವೂ, ಹಾನಿಕಾರಕವೂ ಆಗಿದೆ.
ನಮ್ಮೊಂದಿಗೇ ಜೀವಿಸುತ್ತಿದ್ದು. ನಮಗೆ ಮಾರ್ಗದರ್ಶನ ಮಾಡುತ್ತಿರುವ ಗುರುವನ್ನು ಪಡೆದ ನಾವು ಇಮ್ಮಡಿ ಅದೃಷ್ಟಶಾಲಿಗಳಾಗಿದ್ದೇವೆ. ಅವರು ನಮ್ಮ ಸಂಸ್ಥೆಗೆ ಭದ್ರ ಬುನಾದಿ ಒದಗಿಸಿದ್ದಾರೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಕಾರ್ಯವನ್ನು ಪೂರ್ಣಗೊಳಿಸುವ ಹೊಣೆಯನ್ನು ನಮಗೆ ಬಿಟ್ಟಿದ್ದಾರೆ. ಇದು ಅತ್ಯಂತ ಅಮೂಲ್ಯವಾಗಲಿರುವುದರಿಂದ ಮತ್ತು ಶಾಶ್ವತವಾಗಿರಬೇಕೆಂದು ಉದ್ದೇಶಿಸಿರುವುದರಿಂದ ಉಚಿತ ವಸ್ತು-ವಿಧಾನಗಳನ್ನು ಉಚಿತ ಕ್ಷೇತ್ರಗಳಲ್ಲಿ ಉಚಿತ ರೀತಿಯಲ್ಲಿ ಬಳಸುವುದು ನಮ್ಮ ಕರ್ತವ್ಯವಾಗುತ್ತದೆ. ಕಳಪೆ ಮಟ್ಟದ ಅನುಚಿತ ವಸ್ತು-ವಿಧಾನಗಳನ್ನು ಸೇರ್ಪಡಿಸುವುದು ನಮ್ಮ ಕೆಲಸವನ್ನು ಕೆಡಿಸುತ್ತದೆ. ಆದುದರಿಂದ, ನಿಮ್ಮ ಹೊರೆಗಳೆಲ್ಲವನ್ನೂ ಗುರುವಿನ ಮುಂದೆ ತೆರೆದಿಟ್ಟು ಅವರ ಪರೀಕ್ಷೆ ಮತ್ತು ತಪಾಸಣೆಗೆ ಒಳಪಡಿಸಿರಿ. ನಿಮಗೆ ಕತ್ತಲಲ್ಲಿ ಎಷ್ಟೇ ಹೊಳಪುಳ್ಳದ್ದಾಗಿ ತೋರಿಬಂದ ವಸ್ತುವಾದರೂ, – ಅವರ ಪ್ರಕಾಶದ ಅಡಿಯಲ್ಲಿ ವಿಫಲವಾದರೆ (ಅವರ ಪರೀಕ್ಷೆಯಲ್ಲಿ ಅವು ಹೊಳೆಯಲು ಅನುತ್ತೀರ್ಣವಾದರೆ) ಅವುಗಳನ್ನು ಬಿಸುಟಿಬಿಡಲು ಎಂದಿಗೂ ಹಿಂಜರಿಯಬೇಡಿರಿ. ಹೀಗೆ ಎಸೆದುಬಿಡುವುದರಿಂದಲೇ ನೀವು ನಿಮ್ಮ ಭಾರವನ್ನಿಳಿಸಿಕೊಂಡು ಹಗುರಾಗುವಿರಿ.
ನಮ್ಮ ಮಾರ್ಗವು ಇಹಲೋಕವನ್ನು ನಿರಾಕರಿಸುವ ಸನ್ಯಾಸಿಯದೂ ಅಲ್ಲ, ಅಥವಾ ಪರಲೋಕವನ್ನು ನಿರಾಕರಿಸುವ ಭೌತವಾದಿಯದೂ ಅಲ್ಲ. ಎರಡೂ ಲೋಕಗಳು, ವಾಸ್ತವವಾಗಿ ಎಲ್ಲ ಲೋಕಗಳು, ನಮ್ಮ ದೃಷ್ಟಿಯಲ್ಲಿವೆ. ಹಾಗಿದ್ದರೂ ನಾವು ಸರ್ವ ಲೋಕಗಳ ಪ್ರಭುವನ್ನು ಮಾತ್ರವೇ ಹೊಂದಲು ಬಯಸುತ್ತೇವೆ. ಆತನೊಬ್ಬನೇ ನಮ್ಮ ಗುರಿಯಾಗಿದ್ದಾನೆ ಮತ್ತು ನಾವು ಹೊಂದಿರುವೆವೆಂದು ಭಾವಿಸಿದ ಪ್ರಾಪಂಚಿಕ ವಸ್ತುಗಳೂ ಆತನಿಗೋಸ್ಕರವೇ ಇರಬೇಕು ಆದುದರಿಂದ, ಪ್ರಿಯ ಬಂಧುಗಳೆ, ನಿಮಗೊಬ್ಬ ಒಡೆಯನಿದ್ದಾನೆ, ಸಕಲ ಲೋಕಗಳ ಒಡೆಯನಿದ್ದಾನೆ, ಆತನು ನಿಮ್ಮೊಂದಿಗೇ, ನಿಮ್ಮೊಳಗೇ ಇದ್ದಾನೆಂಬುದನ್ನು ಜಗತ್ತಿಗೆ ತೋರಿಸಿರಿ. ನೀವು ಹೊಂದಿರಬೇಕು ಅಥವಾ ಬೇಡವೆಂದು ಇತರರು ಹೇಳಿದ, ಅಥವಾ ನೀವೇ ಹಾಗೆ ಭಾವಿಸಿದ ಕುದ್ರ ವಸ್ತುಗಳ ಬಗ್ಗೆ ಅಳುವುದನ್ನು ಅಥವಾ ಅರಚುವುದನ್ನು ಬಿಟ್ಟುಬಿಡಿರಿ. ಈ ಕ್ಷುದ್ರ ಜಗತ್ತುಗಳ ಕುದ್ರ ವಸ್ತು-ವಿಷಯಗಳನ್ನು ಮೀರಿ ಮೇಲಕ್ಕೇರಿರಿ. ಗುರು ಒಬ್ಬನೇ ನಿಮ್ಮ ದೃಷ್ಟಿಯಲ್ಲಿರಲಿ, ಅವನಲ್ಲಿಯೇ ನಿಮ್ಮನ್ನು ನೀವು ಲಯಗೊಳಿಸಿಕೊಳ್ಳಿರಿ ಅಥವಾ ನೀವೇ ಆತನ ಪ್ರಿಯತಮನಾಗಿ ಮಾರ್ಪಡಿಸಿಕೊಳ್ಳುವ ಮಟ್ಟಕ್ಕೆ ಆತನನ್ನು ಪ್ರೀತಿಸಿರಿ. ಆಗ ನೀವು ಆತನನ್ನು ಪೂರ್ಣವಾಗಿ ಹೊಂದಬಲ್ಲಿರಿ.
ಜನರು ಕ್ರಮೇಣ ನಮ್ಮ ಸಂಸ್ಥೆಯತ್ತ ಆಕರ್ಷಿತರಾಗುತ್ತಿದ್ದಾರೆ. ಮಾರ್ಗದರ್ಶನ ಹಾಗೂ ಬೆಳಕಿಗಾಗಿ ಸಮಗ್ರ ವಿಶ್ವವೇ ಸಹಜಮಾರ್ಗದತ್ತ ನೋಡುವ ಸಮಯವೊಂದು ಬರುವುದು. ಅಂತಹ ಸನ್ನಿವೇಶಗಳಲ್ಲಿ ನಿಮ್ಮ ಮುಂದಿರುವ ಮಹಾಕಾರ್ಯಕ್ಕೆ ನೀವು ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕಾಗಿದೆ. “ಸಹಜಮಾರ್ಗದ ಹತ್ತು ನಿಯಮಗಳು ಯಾವವು ?” ಎಂದು ನಮ್ಮ ಸಂಸ್ಥೆಯ ಸದಸ್ಯನೊಬ್ಬನನ್ನು ಪ್ರಶ್ನಿಸಿದಾಗ, ಅವನು ಅದರ ಲಿಖಿತ ಪ್ರತಿಗಾಗಿ ಹುಡುಕಾಡಿದ. ಬದಲಿಗೆ, “ನನ್ನನ್ನು ನೋಡಿ ಕಂಡುಕೊಳ್ಳಿರಿ” – ಎಂದು ಅವನು ಉತ್ತರಿಸಬಾರದಿತ್ತೆ ? -ಎಂದು ನಾನು ಆಶಿಸಿದೆ. ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸದಸ್ಯನೂ ಸಹಜಮಾರ್ಗವು ಮೂರ್ತಿವೆತ್ತಂತಿರಬೇಕು, ಮತ್ತು ನಮ್ಮ ಗುರುಗಳ ಮತ್ತು ಅವರ ಸಂಸ್ಥೆಯ ನೈಜ ಹಾಗೂ ನಿಷ್ಠಾವಂತ ಪ್ರತಿನಿಧಿಯಾಗಬೇಕು ಎಂದು ನಾನು ಬಯಸುತ್ತೇನೆ.
ಈ ಸುಸಮಯವನ್ನು, ಕೆಲವು ಎಚ್ಚರಿಕೆಯ ಮಾತುಗಳನ್ನು ಪ್ರಸ್ತಾವಿಸಲು ತೆಗೆದುಕೊಳ್ಳುತ್ತೇನೆ. ಮೌಲ್ಯಗಳ ದುರುಪಯೋಗವೇ ಅನೇಕ ಸಂಸ್ಥೆಗಳು ಭ್ರಷ್ಟವಾಗಿ ಅವನತಿ ಹೊಂದಲು ಕಾರಣವಾಯಿತು. ಸದಸ್ಯರ ಸಂಖ್ಯೆ ಹೆಚ್ಚಿಸಬೇಕೆಂಬ ಅತ್ಯುತ್ಸಾಹ ಹೆಚ್ಚು ಹೆಚ್ಚು ಧನ ಸಂಗ್ರಹದ ತವಕ ಅಥವಾ ಮರುಳುಗೊಳಿಸುವ ಪ್ರದರ್ಶನದ ಬಯಕೆ ಇವು ನೈಜ ವಸ್ತುವಿನ ಬೆಳಕನ್ನು ಎಂದಿಗೂ ಆವರಿಸಬಾರದು. ನಮಗೆ ಹೆಚ್ಚು ಹೆಚ್ಚು ಸಂಗಾತಿಗಳು, ಹಣ, ಆಕರ್ಷಣೆ ಮುಂತಾದವುಗಳೆಲ್ಲ ಅಗತ್ಯವೆಂಬುದೇನೋ ಸರಿಯೆ, ಆದರೆ ಇವೆಲ್ಲವೂ ಆತನನ್ನು ಸಾಕ್ಷಾತ್ಕರಿಸಿಕೊಳ್ಳಲೋಸುಗ ಮಾತ್ರವೇ ಇರತಕ್ಕದ್ದು. ಸ್ವಾರ್ಥ, ಸ್ವಪ್ರತಿಷ್ಠೆ ಅಥವಾ ಇಂದ್ರಿಯ ಸಂತೃಪ್ತಿಯ ಮನೋಭಾವದ ಲವಲೇಶವೂ ನಮ್ಮೊಳಗೆ ನುಸುಳಕೂಡದು. ಆಗ ಮಾತ್ರವೇ ನಮ್ಮ ಸಂಸ್ಥೆಯ ಪರಿಶುದ್ಧತೆಯು ಪರಿಣಾಮಕಾರಿಯಾಗಿ ಸಂರಕ್ಷಿಸಲ್ಪಡಲು ಸಾಧ್ಯ ಮತ್ತು ಅವನತಿಯ ಅಥವಾ ಭ್ರಷ್ಟಗೊಳ್ಳುವ ಭಯ ಇರಲಿಕ್ಕಿಲ್ಲ. .
ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸದಸ್ಯನೂ ಪರಿಪೂರ್ಣನಾದಾಗಲೇ ನಮ್ಮ ಸಂಸ್ಥೆಯು ಪರಿಪೂರ್ಣವಾಗುವುದು, ಮತ್ತು ತನ್ನ ಹೃದಯದಲ್ಲಿ ಸದಾ ನೆಲೆಸಿರುವ ಪರಿಪೂರ್ಣ ವ್ಯಕ್ತಿಯನ್ನು ನಿರಂತರವಾಗಿ ದೃಷ್ಟಿಯಲ್ಲಿಟ್ಟುಕೊಂಡಾಗ ಪ್ರತಿಯೊಬ್ಬ ಅಭ್ಯಾಸಿ ಬಂಧುವು ಪರಿಪೂರ್ಣನಾಗಬಲ್ಲ. ಗುರುವಿಗೆ ಸಂಪೂರ್ಣ ಅಧೀನನಾಗಿರುವುದರಿಂದ ಅವನು (ಅಭ್ಯಾಸಿ) ನಮ್ಮ ಗುರುಗಳ ಪ್ರಾಣಾಹುತಿಯನ್ನು ಪೂರ್ಣವಾಗಿ ಸ್ವೀಕರಿಸಲು ಶಕ್ತನಾಗುತ್ತಾನೆ. ನಿಜವಾದ ಗುರು ಆಗಿರುವವನನ್ನು ಪೂಜಿಸುವುದು ಹೃದಯದಲ್ಲಿರುವ ಬೇರೆಲ್ಲ ಸಂಸ್ಕಾರಗಳನ್ನು ಅಳಿಸಿಹಾಕಲು ಸಹಾಯಕವಾಗುವುದು; ಜಗತ್ತಿನ ಎಲ್ಲ ಜನರನ್ನು ತನ್ನವರೆಂದು ಪರಿಭಾವಿಸುವುದು ಎಲ್ಲರಿಗೂ ಸಮಾನವಾಗಿರುವ ಮೂಲ, ಅರ್ಥಾತ್, ಆತ್ಯಂತಿಕ ಮೂಲವನ್ನು ನೀವು ಅರಿಯುವಂತೆ ಮಾಡುವುದು; ಪ್ರತಿಯೊಬ್ಬನಿಗೂ ಅವನಿಗೆ ನ್ಯಾಯವಾಗಿ ನೀವು ಕೊಡಬೇಕಾದುದನ್ನು ಸಲ್ಲಿಸಿದರೆ, ಅದು ಬಂಧನಕಾರಿಯಾದ ಭಾರದಿಂದ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ. ನಿಮ್ಮ ಮಹಾ ಸಂಸ್ಥೆಯ ಕಲ್ಯಾಣದ ಚಿಂತನೆಯು ನಿಮ್ಮನ್ನು ಅದರ ಸಂಸ್ಥಾಪಕನ ಶಾಶ್ವತ ಸಂಪರ್ಕದಲ್ಲಿರಿಸುವುದು. ಈ ರೀತಿಯಿಂದ ಮಾತ್ರವೇ ನಾವು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರಿಪೂರ್ಣತೆ ಹೊಂದಬಲ್ಲೆವು. ತಿಲಮಾತ್ರದಷ್ಟು ಸಮಾಜ ವಿರೋಧಿ ಪ್ರವೃತ್ತಿಯು ಕಂಡು ಬಂದರೂ ಕೂಡ ಅದನ್ನು ನಮ್ಮ ಇಡೀ ಅಸ್ತಿತ್ವದೊಳಗಿಂದ ಸಮೂಲವಾಗಿ ಕಿತ್ತೆಸೆಯಬೇಕು. .
ಅವರ ಕಾರ್ಯವನ್ನು ಪೂರ್ಣವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಲು, ಅವರ ನಿರೀಕ್ಷೆಯ ಮಟ್ಟಕ್ಕೆ ತಕ್ಕಂತೆ ಬಾಳಲು ಅವರು ತಮ್ಮನ್ನೇ ನಮ್ಮೊಳಗೆ ತುಂಬಿ ನಮಗೆ ಸಂಪೂರ್ಣ ಶಕ್ತಿ ಮತ್ತು ಧೈರ್ಯಗಳನ್ನು ನೀಡಲಿ ಎಂದು ನಾನು ಗುರುಗಳಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.. .
ಗುರುಗಳು ಸದಾಕಾಲ ನಮ್ಮ ಮಧ್ಯದಲ್ಲಿ ನೆಲೆಸಿರಲಿ, ತಥಾಸ್ತು! [ಮಿಷನ್ನಿನ ವಾರ್ಷಿಕ ಸಮಾರಂಭವನ್ನು ಷಾಹಜಹಾನಪುರದಲ್ಲಿ, ಜನವರಿ 1976 ರಲ್ಲಿ ನೆರವೇರಿಸಿದಾಗ ಮಾಡಿದ ಭಾಷಣ] .