ನಮ್ಮ ಗುರುಗಳ 80ನೆಯ ಜನ್ಮದಿನವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ. ಗುರುಗಳ 80ನೆಯ ಹುಟ್ಟು ಹಬ್ಬವನ್ನು 1970 ಎಪ್ರಿಲ್ 30 ರಂದು ನಾವು ಅಹಮ್ಮದಾಬಾದಿನಲ್ಲಿ ಆಚರಿಸಿದಾಗ, ಈ ವರ್ಷವಿಡೀ ದೇಶದ ತುಂಬೆಲ್ಲ ಬೇರೆ ಬೇರೆ ಸ್ಥಳಗಳಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸುವ ವಿಚಾರ ಉದ್ಭವಿಸಿತು. ಒಬ್ಬ ಜೀವಂತ, ಪರಿಪೂರ್ಣ ಗುರುವು, ಮಾರ್ಗದರ್ಶನ ಮಾಡಲು ತಮ್ಮ ಮಧ್ಯದಲ್ಲಿ ಇದ್ದುದಕ್ಕಾಗಿ ಸಹಜ ಮಾರ್ಗದ ಅಭ್ಯಾಸಿಗಳು ಅದೃಷ್ಟವಂತರೂ, ಸಂತುಷ್ಟರೂ ಆಗಿದ್ದಾರೆ. ಮಾನವ ಕುಲಕ್ಕೆ ನೀಡಲು ಅವರ ಮಹಾ ಸಂದೇಶವೊಂದಿದೆ. ಅವರ ಜೀವನವೇ ಒಂದು ಮಹಾ ಸಂದೇಶವಾಗಿದೆ. ಇಂತಹ ಜೀವಂತ ಗುರು ಇದುವರೆಗೆ ಜಗತ್ತಿನಲ್ಲಿದ್ದಿರಲಿಲ್ಲ, ಹಾಗೂ ಇಂತಹ ವ್ಯಕ್ತಿತ್ವ ಭವಿಷ್ಯದಲ್ಲಿ ಎಂದಾದರೂ ಜನ್ಮ ತಾಳುವುದೋ ಎಂಬುದು ಸಂದೇಹಾಸ್ಪದವಾಗಿದೆ. ಆದ್ದರಿಂದ ತರಬೇತಿಯಲ್ಲಿರುವ ಅವರ ಮಾರ್ಗದರ್ಶನದಲ್ಲಿರುವ, ಮತ್ತು ತರಬೇತಿಯಲ್ಲಿರುವ ನಾವು ನಮ್ಮನ್ನು ಬಹಳ ಅದೃಷ್ಟಶಾಲಿಗಳೆಂದು ಭಾವಿಸುತ್ತೇವೆ. ಹಾಗೂ ಅವರ ಜನ್ಮ ದಿನವನ್ನು ವರ್ಷದುದ್ದಕ್ಕೂ ಆಚರಿಸಲು ನಮಗೆ ಬಹಳ ಸಂತೋಷವಾಗುತ್ತಿದೆ.
ಮನುಷ್ಯನು ತನ್ನನ್ನು ಜಗತ್ತಿನಲ್ಲಿರುವ ಬೇರೆ ಎಲ್ಲ ಜೀವಿಗಳಿಗಿಂತಲೂ ಶ್ರೇಷ್ಠನೆಂದು ಪರಿಗಣಿಸುತ್ತಾನೆ. ಏಕೆಂದರೆ ಅವನಿಗೆ ಚೆನ್ನಾಗಿ ವಿಕಾಸಗೊಂಡ ಮನಸ್ಸು ದೈವದತ್ತವಾಗಿ ದೊರಕಿದೆ. ಅವನ ಮನಸ್ಸು ಯೋಗ್ಯ ರೀತಿಯಲ್ಲಿ ನಿಯಂತ್ರಿತಗೊಂಡಿತಾದರೆ, ಅವನು ನಿಜಕ್ಕೂ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠನಾಗಬಲ್ಲನು. ಸಹಜಮಾರ್ಗ ಪದ್ಧತಿಯ ಆಧ್ಯಾತ್ಮಿಕ ತರಬೇತಿಯು ಈ ಉದ್ದೇಶಕ್ಕೆ ಸರಳವಾದ ಹಾಗೂ ಸುಯೋಗ್ಯವಾದ ವಿಧಾನಗಳನ್ನು ಒದಗಿಸುತ್ತದೆ. ತನ್ನ ಮನಸ್ಸನ್ನು ಮಾನವ ಜೀವನದ ಗುರಿಯನ್ನು ತಲುಪಲು ಸುನಿಯಂತ್ರಿತಗೊಳಿಸಿಕೊಳ್ಳಬಯಸುವ ಒಬ್ಬ ಮನುಷ್ಯನು ಅಂತಹ ನಿಜವಾದ ಗುರಿಯ ಬಗ್ಗೆ ಚಿಂತಿಸಬೇಕೆಂದು ಸೂಚಿಸಲಾಗಿದೆ; ಆ ಗುರಿಯು ಮಾನವನು ತಾನು ವಿಕಾಸಗೊಂಡು ಪಡೆಯಲು ಸಾಧ್ಯವಿರುವ ಅತ್ಯುನ್ನತ ಸ್ಥಿತಿಯಾಗಿರಲಿಕ್ಕೇ ಬೇಕು. ಇಂತಹ ಅತ್ಯುನ್ನತ ಸ್ಥಿತಿಯ ಬಗ್ಗೆ ಆಲೋಚನೆ ಮಾಡುವಾಗ, ತನ್ನದೇ ಇಚ್ಛೆಗಳು ಮತ್ತು ಆಶೆಗಳ ರೂಪದಲ್ಲಿ, ತನ್ನ ಮನಸ್ಸನ್ನು ಅಸಂಖ್ಯಾತ ದಿಕ್ಕುಗಳಲ್ಲಿ ವಿಮುಖಗೊಳಿಸುವ ಅಡೆತಡೆಗಳ ಅರಿವನ್ನು ಉಂಟುಮಾಡಿಕೊಡಲಾಗುತ್ತದೆ. ತನ್ನದೇ ಇಚ್ಛೆಗಳಿಗೆ ದಾಸನಾಗಿದ್ದುದರ ಅರಿವು ಅವನಿಗೆ ಉಂಟಾಯಿತೆಂದರೆ, ಆಗ ಈ ದಾಸ್ಯದಿಂದ ಬಿಡುಗಡೆ ಪಡೆಯುವುದರ ಕುರಿತು ಆಲೋಚಿಸಲು ಪ್ರಾರಂಭಿಸುತ್ತಾನೆ. ತದನಂತರ ಯಾವನು ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡಿರುವನೋ ಹಾಗೂ ಆಧ್ಯಾತ್ಮಿಕ ಪ್ರಾಣಾಹುತಿಯಿಂದ ಸಹಾಯ ಮಾಡಬಲ್ಲನೋ ಅಂತಹ ಸಹಚರನೊಬ್ಬನ ಸಹಾಯವನ್ನು ಅರಸಲು ಅವನಿಗೆ ಸಲಹೆ ನೀಡಲಾಗುತ್ತದೆ. ಸಹಜಮಾರ್ಗ ಪದ್ಧತಿಯಲ್ಲಿ, ಆಧ್ಯಾತ್ಮಿಕ ತರಬೇತಿ ಕೊಡುವ ಪ್ರಶಿಕ್ಷಕನು ಸಾಧಕನ ಪ್ರಬಲವಾದ ಆಂತರಿಕ ಬಂಧನಗಳನ್ನು ದುರ್ಬಲಗೊಳಿಸುತ್ತಾನೆ ಮತ್ತು ಅವನ ಹೃದಯದಲ್ಲಿ ದೈವೀ ಪ್ರಕಾಶದ ಬೀಜ ಬಿತ್ತುತ್ತಾನೆ. ತರುವಾಯ, ಸಾಧಕನಿಗೆ ಹೃದಯದಲ್ಲಿ ದೈವೀ ಪ್ರಕಾಶವಿದೆಯೆಂದು ಭಾವಿಸಿ ಹೃದಯದ ಮೇಲೆ ಧ್ಯಾನ ಮಾಡಲು ಸಲಹೆ ನೀಡಲಾಗುವುದು. ಯಾವುದೇ ಊಹಾತ್ಮಕ ಕಲ್ಪನೆ ಮಾಡದೆ, ಹಾಗೂ ಯಾವುದೇ ದೈಹಿಕ ಒತ್ತಡವನ್ನು ಹೇರದೆ, ಧ್ಯಾನವನ್ನು ಅತ್ಯಂತ ಸರಳ ಹಾಗೂ ಸ್ವಾಭಾವಿಕ ರೀತಿಯಲ್ಲಿ ಮಾಡಬೇಕು.
ಆಂತರಿಕ ಶುದ್ದೀಕರಣ ಹಾಗೂ ಪಾವಿತ್ರ್ಯಕ್ಕೋಸ್ಕರ ಬೇರೆ ಕೆಲವು ಅಭ್ಯಾಸಗಳನ್ನು ಕೂಡ ವಿಧಿಸಲಾಗಿದೆ. ಪ್ರಶಿಕ್ಷಕನು ಅಭ್ಯಾಸಿಯ ಆಂತರಿಕ ಜಡತೆ, ಸ್ಥೂಲತೆ, ಜಟಿಲತೆ ಹಾಗೂ ಅಂಧಕಾರವನ್ನು ತೆಗೆದು ಹಾಕಲು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸುತ್ತಾನೆ. ಸಹಜ ಮಾರ್ಗದಲ್ಲಿ ಪ್ರಶಿಕ್ಷಕನಿಗೆ ಗುರುವಿನಿಂದ ಆಧ್ಯಾತ್ಮಿಕ ಪ್ರಾಣಾಹುತಿ ನೀಡುವ ಸಾಮರ್ಥ್ಯವನ್ನು ದಯಪಾಲಿಸಲಾಗಿರುತ್ತದೆ.
ಸಹಜಮಾರ್ಗ ಪದ್ಧತಿಗೆ ಅನುಸಾರವಾಗಿ ಅಭ್ಯಾಸ ಮಾಡುತ್ತಿರುವ ಬಹಳಷ್ಟು ಅಭ್ಯಾಸಿಗಳು, ತಮ್ಮ ಮನಸ್ಸಿನ ಅನಿಯಂತ್ರಿತ ಚಟುವಟಿಕೆಗಳು ಕ್ರಮೇಣ ಒಂದು ಬಗೆಯ ನಿಯಂತ್ರಣದಲ್ಲಿ ಬರುತ್ತಿರುವುದನ್ನು ಹಾಗೂ ತಾವು ತುಲನಾತ್ಮಕವಾಗಿ ಹೆಚ್ಚು ಲಘುತ್ವ ಹೊಂದಿದಂತೆ ಮತ್ತು ಬಿಡುಗಡೆಗೊಂಡಂತಿರುವುದನ್ನು ಕಂಡುಕೊಂಡಿದ್ದಾರೆ. ಅತ್ಯುಚ್ಚ ಸ್ಥಿತಿಯನ್ನು ಪಡೆಯುವ ಅಭೀಷ್ಟೆಯು ಅಭ್ಯಾಸಿಯಲ್ಲಿ ಪ್ರಬಲವಾದಾಗ, ಅಂತಹ ಸ್ಥಿತಿಯನ್ನು ಯಾವನು ಪಡೆದು ಅದರಲ್ಲಿಯೇ ಶಾಶ್ವತವಾಗಿ ನೆಲೆಸಿರುವನೋ ಅವನನ್ನು ಸ್ಮರಿಸಲು ಅಭ್ಯಾಸಿಗೆ ಸೂಚಿಸಲಾಗುವುದು. ಅಭ್ಯಾಸಿಯು ನಿರಂತರ ಸ್ಮರಣೆಯನ್ನು ಕೂಡಲೇ ಕೈಗೊಳ್ಳುತ್ತಾನೆ ಮತ್ತು ತನ್ನ ಸತ್ತೆಯ ಉನ್ನತ ಸ್ತರಗಳೆಡೆಗೆ ಜಿಗಿಯತೊಡಗುತ್ತಾನೆ. ಆತನ ಅಭೀಷ್ಟೆಗಳ ತೀವ್ರತೆಯು ಬೆಳೆಯುತ್ತಿರುವ ಪ್ರಮಾಣಕ್ಕೆ ಅನುಗುಣವಾಗಿ ಅವನ ಪ್ರಗತಿಯೂ ಶೀಘ್ರತರದ್ದಾಗುತ್ತದೆ. ಗುರುಗಳ ಪ್ರಾಣಾಹುತಿಯ ಸಹಾಯದಿಂದ ಅಭ್ಯಾಸಿಯು ತನ್ನ ಆಂತರಿಕ ಬಂಧನಗಳಿಂದ ಬಿಡುಗಡೆಗೊಂಡು, ಗಮನಾರ್ಹವಾದ ಅತ್ಯಲ್ಪ ಸಮಯದಲ್ಲಿ ತನ್ನ ಗುರಿಯ ಸಮೀಪಕ್ಕೆ ಮುಂದುವರಿಯುವನು.
ಅನೇಕ ಅಭ್ಯಾಸಿಗಳ ಅನುಭವಕ್ಕೆ ಈಗಾಗಲೇ ಬಂದಂತೆ, ಯಾರೇ ಆಗಲಿ, ಒಬ್ಬನು ತನ್ನನ್ನು ತಾನು ಸಹಜಮಾರ್ಗ ಪದ್ಧತಿಗೆ ಅನುಸಾರವಾಗಿ ತರಬೇತಿಗೆ ಒಳಪಡಿಸಿಕೊಂಡರೆ, ಅಂತಹ ಪ್ರಾಮಾಣಿಕ ಅಭ್ಯಾಸಿಯು ಈ ಮೇಲೆ ಹೇಳಿದುದೆಲ್ಲವನ್ನೂ ಅನುಭವಪಡಲು ಸಾಧ್ಯವಿದೆ. ಮಾನವ ಜೀವಿಗಳ ಅಸ್ತಿತ್ವದ ನಿಜವಾದ ವಿಕಾಸವು ಇದೇ ರೀತಿಯಲ್ಲಿಯೇ ಸರಳವಾಗಿ ಹಾಗೂ ಸ್ವಾಭಾವಿಕವಾಗಿ ಆಗಲು ಸಾಧ್ಯ. ಅದಿಲ್ಲವಾದರೆ, ಮಾನವ ಕುಲವು ಅನಾವಶ್ಯಕ ಹಿಂಸೆ ಹಾಗೂ ಘೋರ ಆತ್ಮವಿನಾಶದಲ್ಲಿ ತನ್ನ ಶಕ್ತಿಯನ್ನು ಹಾಳು ಮಾಡಿಕೊಳ್ಳುವ ಸಂಭಾವ್ಯತೆಯಿದೆ.
ಈ ರೀತಿಯಾಗಿ ನಮಗೆ ಸಹಜಮಾರ್ಗವು ದೊರೆತಿದೆ. ನಾವು ಈ ಪದ್ಧತಿಯ, ಅದಕ್ಕೂ ಹೆಚ್ಚಾಗಿ ನಮ್ಮ ಮಾರ್ಗದರ್ಶಕರಾಗಿ ಸುದೈವವಶಾತ್ ನಮ್ಮ ಮಧ್ಯದಲ್ಲಿರುವ ಈ ಪದ್ಧತಿಯ ಅನ್ವೇಷಕ- ಪ್ರವರ್ತಕರ ಪ್ರಯೋಜನ ಪಡೆಯಲು ಕರ್ತವ್ಯ ಬದ್ಧರಾಗಿದ್ದೇವೆ.
ನಿಸರ್ಗವು ಅಗತ್ಯ ಪಡಿಸಿದಂತೆ, ನಾವು ವಿಕಾಸ ಹೊಂದಲು ಗುರುಮಹಾರಾಜರು ನಮಗೆ ಸದ್ವಿವೇಕ ಮತ್ತು ಉತ್ಕಟ ಅಭೀಷ್ಟೆಗಳನ್ನು ದಯಪಾಲಿಸಲಿ.
[ನವ ದೆಹಲಿ, ಸೆಪ್ಟೆಂಬರ್ 20, 1979 ರಂದು ಮಾಡಿದ ಭಾಷಣ]