(೨೦೧೯೬೭ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ)

ಮಾನವನು ತನ್ನ ಆಧ್ಯಾತ್ಮಿಕ ಆವಶ್ಯಕತೆಗಳಿಗೆ ಎಚ್ಚತ್ತುಕೊಳ್ಳಬೇಕಾದ ಕಾಲ ಬಂದಿದೆ. ಸೃಷ್ಟಿಯ ಶಕ್ತಿಯು ಮಾನವನಲ್ಲಿ ಬಹಿರ್ಮುಖ ಪ್ರವೃತ್ತಿಗಳನ್ನು ಹುಟ್ಟಿಸಿದೆ. ಅದರಿಂದಾಗಿಯೇ, ಕಾಲಕ್ರಮದಲ್ಲಿ ಮಾನವನು ತನ್ನದೇ ಆದ ಅನೇಕ ಲೋಕಗಳನ್ನು ಸೃಜಿಸಿಕೊಂಡಿದ್ದಾನೆ. ಇದು ಅವನನ್ನು ಜಟಿಲಗೊಳಿಸುವುದರಲ್ಲಿ ಪರ್ಯವಸಾನಗೊಂಡಿದೆ. ಮನಸ್ಸಿನ ಸದ್ಯದ ದೋಷಯುಕ್ತ ಸ್ಥಿತಿಯು ಅವನ ತನ್ನದೇ ಆದ ಕಾರ್ಯಗಳ ಪರಿಣಾಮವಾಗಿದೆ. ಭಗವಂತನು ಅತ್ಯಂತ ಸರಳನು ಹಾಗೂ ಸರಳ ಸಾಧನಗಳಿಂದಲೇ ಅವನನ್ನು ಪಡೆಯಹುದು ಎಂಬ ಮೂಲಸತ್ಯವು ದೃಷ್ಟಿಯಿಂದ ಮರೆಯಾಗಿರುವುದು ದುರ್ದೈವದ ಸಂಗತಿ. ಪರಮಸತ್ಯದ ಸಾಕ್ಷಾತ್ಕಾರವು ಸಾಮಾನ್ಯ ಮನುಷ್ಯನ ಅಳವಿಗೆ ಮೀರಿದ್ದು ಎಂದು ಬಹುತೇಕ ಎಲ್ಲ ವೇದಿಕೆಗಳಿಂದಲೂ ಉಪದೇಶಿಸಲ್ಪಡುತ್ತಿದೆ. ಸ್ವಯಂ ಘೋಷಿತ ಗುರುಗಳಿಂದ ಪ್ರಚೋದಿತವಾದ ಈ ತಪ್ಪು ಗ್ರಹಿಕೆಯು ಹೆಚ್ಚು ಕಡಿಮೆ ಪ್ರತಿಯೋರ್ವನ ಹೃದಯದಲ್ಲಿಯೂ ಬೇರೂರಿ ನಿಂತಿದೆ. ಮತ್ತು ಅವರು, ಉಚ್ಛತರದ ಆದರ್ಶಗಳ ಆಕಾಂಕ್ಷೆಯನ್ನೇ ಇಂದು ಕಳೆದುಕೊಂಡಿದ್ದಾರೆ.

ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವ ಹಕ್ಕು ಮತ್ತು ಯೋಗ್ಯತೆಯು, ಧಾರ್ಮಿಕ ಪರಂಪರೆಯ ಪೀಠಗಳಲ್ಲಿ ಆಸೀನರಾದವರಿಗಿರುವಷ್ಟೇ, ಅಷ್ಟೇ ಅಲ್ಲ, ಅದಕ್ಕೂ ಹೆಚ್ಚಾಗಿ, ಸಾಮಾನ್ಯ ಮನುಷ್ಯನಿಗೂ ಇದೆ ಎಂಬುದನ್ನು ನಾನು ನಿಮಗೆ ಮನದಟ್ಟು ಮಾಡಿಕೊಡಬಯಸುತ್ತೇನೆ. ಸಮರ್ಪಕವಾದ ಮತ್ತು ಸ್ವಾಭಾವಿಕವಾದ ಮಾರ್ಗವನ್ನು ಪೂರ್ಣ ನಿಷ್ಠೆಯಿಂದ ಅನುಸರಿಸುವುದೊಂದೇ ಅವಶ್ಯ ಬೇಕಾದದ್ದು. ಈ ಸರಳ ಸತ್ಯವನ್ನು ಜನರು ಮನವರಿಕೆ ಮಾಡಿಕೊಂಡು, ಅದನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವಂತೆ, ‘ಸಹಜಮಾರ್ಗ’ವು ಜನರನ್ನು ಪ್ರೇರೇಪಿಸುತ್ತದೆ. ದೇವರು ಅತ್ಯಂತ ಸೂಕ್ಷ್ಮವಾದ ಸತ್ತೆ. ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ಅತ್ಯಂತ ಸೂಕ್ಷ್ಮ ಸಾಧನಗಳನ್ನು ಕೈಗೊಳ್ಳುವುದೊಂದೇ ದಾರಿ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು, ಮನುಷ್ಯನು ಭೌತಿಕ ಶರೀರದ ಆವಶ್ಯಕತೆಗಳನ್ನು ಅಥವಾ ಇಹ ಪ್ರಪಂಚವನ್ನು ದುರ್ಲಕ್ಷಿಸಬೇಕೆಂದು ಇದರರ್ಥವಲ್ಲ. ಒಂದು ವೇಳೆ ನಾವು ಸ್ಥೂಲತೆಯನ್ನು ಹೆಚ್ಚು ಮಾಡುವ ಪದ್ಧತಿಗಳಿಗೆ ಎಡವಿದ್ದಾದರೆ, ಪರತತ್ವದರ್ಶನದಿಂದ ನಿಶ್ಚಿತವಾಗಿಯೂ ನಾವು ದೂರ ಉಳಿದುಬಿಡುತ್ತೇವೆ. ಧೈಯ ವಸ್ತುವು ಸ್ಥೂಲವಾಗಿರದಿದ್ದರೆ, ಧ್ಯಾನವು ಒಂದು ಸೂಕ್ಷ್ಮಸಾಧನವೆಂಬುದು ಒಂದು ಸುಸ್ಥಾಪಿತ ಸತ್ಯ. ಅದಕ್ಕೋಸ್ಕರವೇ ಸಹಜಮಾರ್ಗ ಪದ್ದತಿಯಲ್ಲಿ, ಹೃದಯದಲ್ಲಿ ದೈವೀಪ್ರಕಾಶವಿದೆಯೆಂದು ಭಾವಿಸಿ ಧ್ಯಾನ ಮಾಡಲು ಸೂಚಿಸುತ್ತೇವೆ. ಉಪನಿಷತ್ತುಗಳು ಕೂಡ ಇದನ್ನು ಪುಷ್ಟಿಕರಿಸುತ್ತವೆ. ದೈವೀಪ್ರಭೆಯ ಪ್ರಾಣಾಹುತಿಯ (ಸಂವಹನದ) ನೆರವಿನಿಂದ ಈ ‘ಸಾಧನೆ’ಯು ಉತ್ತರೋತ್ತರ ಸೂಕ್ಷ್ಮತರವಾಗುತ್ತ, ಅತ್ಯಂತ ಸೂಕ್ಷ್ಮತಮ ಸ್ವರೂಪವನ್ನು ತಳೆಯುತ್ತ ಹೋಗುತ್ತದೆ.

ಮನುಷ್ಯನ ಭವಿತವ್ಯವನ್ನು ಹೆಣೆಯುವುದರಲ್ಲಿ ಗುರುವಿನ ಪಾತ್ರವು ಬಹುಮುಖ್ಯವಾದ ಅಂಗ, ಅಭ್ಯಾಸಿಯು ಪ್ರಗತಿಯ ಒಂದು ನಿಶ್ಚಿತ ಹಂತದ ಅನಂತರ ತನ್ನ ಸ್ವಪ್ರಯತ್ನ ಮಾತ್ರದಿಂದ ಮುಂದುವರಿಯಲಾರನೆಂಬುದು ಸಂಶಯಾತೀತ ಸತ್ಯ. ಏಕೆಂದರೆ ಅವನು ಆಗ ಸ್ವಶಕ್ತಿಯಿಂದ ದಾಟಲಾಗದಂಥ ಸೂಕ್ಷ್ಮಶಕ್ತಿಯ ಸಂಪರ್ಕದಲ್ಲಿ ಬರುತ್ತಾನೆ. ಅಭ್ಯಾಸಿಯು ಸ್ವಪ್ರಯತ್ನ ಮಾತ್ರದಿಂದ ಮುಂದುವರಿದರೆ, ಕೆಳಹಂತದ ಸ್ಥಿತಿಗಳನ್ನು ದಾಟುವುದೂ ಸಹ ಕಷ್ಟವೇ. ಅವನಿಗೆ ಗೊತ್ತಿರುವುದು ಕೇವಲ ಮಾನವ ಪ್ರಜ್ಞೆ ಮಾತ್ರ. ಅವನು ಒಂದಾದಮೇಲೊಂದರಂತೆ, ದಿವ್ಯಪ್ರಜ್ಞೆಯ ಹಂತಗಳೊಳಕ್ಕೆ ಪ್ರವೇಶಿಸಬೇಕಿದೆ. ಅದು ಮಾತ್ರ ಅಂತಿಮವಾಗಿ ಅವನನ್ನು ಗುರಿಯವರೆಗೆ ಮುಟ್ಟಿಸುತ್ತದೆ.

ನಾವು ದೈವಿಕತೆಯನ್ನು ಅದರ ನಿಜಸ್ಥಿತಿಯಲ್ಲಿ ಭಾವಿಸುವುದೂ ಇಲ್ಲವೆಂಬುದು ಖೇದಕರ ಸಂಗತಿ. ಯಾಕೆಂದರೆ, ನಾವು ಇನ್ನೂ ಆ ಬಗೆಯ ಪರಿಸರವನ್ನು ಸೃಷ್ಟಿಸಿಕೊಂಡಿಲ್ಲ. ನಾವು ಪ್ರಕಾಶದ ಅಭಿಮುಖವಾಗಿ ಮುನ್ನಡೆಯುವ ಬದಲಾಗಿ, ಕತ್ತಲಿನತ್ತ ಹಿನ್ನಡೆಯುತ್ತ, ಅದರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಹೀಗೆ, ನಾವು ಸತ್ಯದಿಂದ ಬಹುದೂರ ಉಳಿಯುತ್ತೇವೆ. ಈ ವಿಷಯಳನ್ನು ನಮ್ಮ ಗಮನಕ್ಕೆ ತಂದರೂ, ನಾವದಕ್ಕೆ ಕಿವಿಗೊಡಲು ಸಿದ್ಧರಿಲ್ಲ.

ಏಕೆಂದರೆ ದೈವಿಕತೆಯ ಲೇಶವೂ ಇಲ್ಲದಂಥ ‘ದೈವೀ ಪುರುಷ’ರೆನಿಸಿಕೊಂಡವರಿಂದ ಸೃಜಿಸಲ್ಪಟ್ಟ ಪ್ರಸ್ತುತ ಪರಿಸರದಿಂದ ಕಲುಷಿತರಾಗಿ ನಾವು ವಿವೇಚನಾಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಮಾನವಕುಲದ ಉತ್ಥಾನವಾಗಬೇಕಿದ್ದರೆ ಪರಿಸ್ಥಿತಿಯು ಬದಲಾವಣೆಗೊಳ್ಳಲೇಬೇಕೆಂಬುದು ನನ್ನ ನಂಬಿಕೆ. ಅಷ್ಟೇ ಅಲ್ಲ, ಮಾನವಕುಲವು ಏಳ್ಗೆ ಹೊಂದಲೇಬೇಕಾಗಿದೆ. ಅದು ಕಾಲಪುರುಷನ ಚಾಟಿಯ ಏಟಿನಿಂದಾಗಲೂ ಆಗಬಹುದು, ಇಲ್ಲವೆ, ಅನುಭವದ ಮೂಲಕವಾದರೂ ಆಗಬಹುದು. ಅದಕ್ಕೆ ಕೊಂಚ ಕಾಲಾವಕಾಶ ಬೇಕಷ್ಟೆ.

***