(೫-೧-೧೯೬೮ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ)

ಸೃಷ್ಟಿಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಏಕೈಕ ವಸ್ತುವೆಂದರೆ, ತನ್ನ ಮೂಲಸ್ಥಿತಿಯಲ್ಲಿದ್ದ ದೈವಿಕತೆಯೊಂದೇ. ಆಗ ಪ್ರತಿಯೊಂದು ವಸ್ತುವೂ ಸಾರರೂಪದಲ್ಲಿ, ಅದರಲ್ಲಿ ವಿಲೀನವಾಗಿದ್ದಿತು. “ಕ್ಷೋಭ” ದೊಂದಿಗೆ ಆವಿರ್ಭಾವದ ಪ್ರಕ್ರಿಯೆಯು ಆರಂಭವಾಯಿತು. ಈ ಕ್ಷೋಭವು, ಅವ್ಯಕ್ತ ಚಲನೆಯ ಕ್ಷೇತ್ರದಲ್ಲಿ ಮಂಥನ ಕ್ರಿಯೆಯೊಂದನ್ನು ಉತ್ತೇಜಿಸಿತು. ಚಟುವಟಿಕೆಯು ಪುನರುಜ್ಜೀವನಗೊಂಡಿತು, ಮತ್ತು ಅದರೊಂದಿಗೆ ಶಕ್ತಿಯು ಜೀವಕಳೆ ಪಡೆದು, ಸೃಷ್ಟಿಯು ವ್ಯಕ್ತವಾಗುವತ್ತ ತನ್ನ ಕ್ರಿಯೆಯನ್ನು ಆರಂಭಿಸಿತು. ಈ ಕ್ರಿಯಾಸರಣಿಯು ದೈವಿಕತೆಯೊಂದಿಗೆ ಪರಿಪೂರ್ಣ ಸಾಮರಸ್ಯದಲ್ಲಿದ್ದರೂ, ತನ್ನ ಬಾಹ್ಯ ಪರಿಧಿಯಲ್ಲಿ ತುಸುಮಟ್ಟಿಗೆ ಬೇರೆಯದಾಗಿಯೇ ಕಾಣಿಸಿಕೊಂಡಿತು. ಏಕೆಂದರೆ, ವ್ಯಕ್ತರೂಪವನ್ನು ತಲುಪಲು ಅದು ಬೇರೊಂದು ಮಾರ್ಗವನ್ನು ಹಿಡಿದಿತ್ತು. ಮನುಷ್ಯ ನಿರ್ಮಾಣದಲ್ಲಿ ಈ ಕ್ರಿಯಾ ಸರಣಿಯು ಹೊಂದಿದ್ದ ನಿಕಟವಾದ ಸಾಹಚರ್ಯದ ಕಾರಣ ಅದನ್ನು “ಮಾನವತ್ವದ ಮಾರ್ಗ’ವೆಂದು ಹೆಸರಿಸಬಹುದು.

ಅಂದರೆ, “ದೇವತ್ವ” ಮತ್ತು “ಮಾನವತ್ವ’ಗಳೆರಡೂ, ಪರಸ್ಪರ ಸಮಾನಾಂತರವಾಗಿ ಪಕ್ಕ ಪಕ್ಕದಲ್ಲಿಯೇ ಕಾರ್ಯಪ್ರವೃತ್ತವಾಗಿವೆ. ಆದರೆ ಮೂಲದ ಪ್ರಥಮ ಉದ್ದೇಶವು ಸೃಷ್ಟಿ ಕಾರ್ಯವಾದುದರಿಂದ “ಮಾನವತ್ವದ” ಮಾರ್ಗವು ಮುಖ್ಯತೆಯನ್ನು ಪಡೆಯಲಾರಂಭಿಸಿತು. ಮಾನವನೂ ಸೇರಿದಂತೆ ಎಲ್ಲ ವಸ್ತುಗಳೂ ಆ ಹಂತದಲ್ಲಿ ಅತ್ಯಂತ ಸೂಕ್ಷ್ಮರೂಪದಲ್ಲಿದ್ದಿತಾದರೂ, ಸ್ಪುಟವಾದ ರೂಪವನ್ನು ತಳೆಯಲಾರಂಭಿಸಿದವು. ಬೇರೆ ಮಾತಿನಲ್ಲಿ ಹೇಳುವುದಾದರೆ, “ಮಾನವತ್ವದ” ಧಾರೆಯು ಇಡೀ ಸೃಷ್ಟಿ-ಸೌಧದ ತಳಹದಿಯೇ ಆಯಿತು. ಆದರೆ ಅದರ ಕ್ರಿಯೆಯು, ಅದಕ್ಕೆ ಸಮಾನಾಂತರವಾಗಿದ್ದ ದೈವತ್ವ ಧಾರೆಯ ಅವ್ಯಕ್ತ ಕ್ರಿಯೆಯ ಅಧೀನದಲ್ಲಿಯೇ ಉಳಿಯಿತು. ಹೀಗೆ ‘ಶಕ್ತಿ’ಯ ಸಮರ್ಪಕ ಕಾರ್ಯವಿಧಾನವು ಆಕಾರ, ರೂಪಗಳನ್ನು ಪ್ರಕಟಗೊಳಿಸುತ್ತ ಮುಂದುವರಿಯಿತು. ದೈವತ್ವದ ಧಾರೆ (ಮಾರ್ಗ)ಯೊಂದಿಗೆ ಸಂಯುಕ್ತವಾಗಿ ಮುನ್ನಡೆಯದೆ ಹೋಗಿದ್ದರೆ, ನಿಜವಾಗಿ ಮಾನವತ್ವಕ್ಕೆ ಅಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅರ್ಥಾತ್, ಮಾನವತ್ವವು ದೈವತ್ವದೊಂದಿಗೆ ಸಮಾನಾಂತರವಾಗಿ ಹರಿದು ತನ್ನನ್ನು ನೇರ್ಪಡಿಸಿಕೊಂಡಿತು.

ಚಟುವಟಿಕೆಗಳು ಅಧಿಕಾಧಿಕವಾಗುತ್ತ ಹೋದವು. ಮತ್ತು ಮನುಷ್ಯನು, ಇತರ ಎಲ್ಲದರೊಂದಿಗೆ, ಹೆಚ್ಚು ಹೆಚ್ಚು ಸ್ಥೂಲರೂಪವನ್ನು ಪಡೆಯಲಾರಂಭಿಸಿದನು. ಮನುಷ್ಯನ ಸಂರಚನೆಯಲ್ಲಿರುವ ಪ್ರತಿಯೊಂದೂ  ಮಾನವತ್ವದ ನಿಯಮಕ್ಕೆ ಒಳಪಟ್ಟಿದೆ. ಈ ಎಲ್ಲ, ಪ್ರತಿಯೊಂದರ ಮೂಲದಲ್ಲಿಯೂ ದೈವತ್ವವು ಇದ್ದೇ ಇದೆ. ಈ ಕಾರಣದಿಂದಲೇ, ‘ದೇವರು ಮನುಷ್ಯನೊಳಗೇ ಇದ್ದಾನೆ’ ಎಂದು ಹೇಳುವುದು. ಮತ್ತು ಹೆಚ್ಚು ಕಡಿಮೆ ಎಲ್ಲ ಧರ್ಮ ಬೋಧಕರೂ ಇದೇ ಅಭಿಪ್ರಾಯವನ್ನು ತಳೆದಿದ್ದಾರೆ. ಹೀಗೆ, ನಾವು ದೈವತ್ವದೊಂದಿಗೇ ಹೆಜ್ಜೆಯಿಡುತ್ತ, ಆ ದೈವತ್ವವನ್ನು ನಮ್ಮ ಮಾನವತ್ವದ ಧಾರೆಯೊಂದಿಗೆ ಜೋಡಿಸಿಕೊಂಡಾಗ ಮಾತ್ರವೇ ನಮ್ಮ ಅಂತಿಮ ಗುರಿಯ ಉದ್ದೇಶವು ಸಾಧಿತವಾದೀತು.

ಒಬ್ಬನೇ ಆದ ಸರ್ವಶ್ರೇಷ್ಠ ದೇವರಿಂದ, ಅರ್ಥಾತ್ ಪರತತ್ವದಿಂದ, ಈ ಎರಡೂ ಹರಿದು ಬಂದಿರುವುದರಿಂದ, ಮಾನವತ್ವವು, ದೇವತ್ವದಂತೆಯೇ ಅತ್ಯಂಪರಿಶುದ್ಧ ಸ್ಥಿತಿಯಲ್ಲಿದ್ದಿತು. ಅದರೊಳಗಿನ ಕ್ರಿಯಾಶಕ್ತಿಯು ನಾಮ ಮಾತ್ರಕ್ಕಿದ್ದಿತು, ಅಥವಾ ಸುಪ್ತಾವಸ್ಥೆಯಲ್ಲಿದ್ದಿತೆಂದು ಹೇಳಬಹುದು. ಕ್ರಿಯೆ ಪ್ರಕ್ರಿಯೆಗಳಿಂದಾದ ಆಘಾತ (ಸೆಳೆತ)ಗಳು ಒಂದು ಬಗೆಯ ಎಚ್ಚರವನ್ನು  ಉತ್ತೇಜಿಸಲಾರಂಭಿಸಿದವು. ಹಾಗೂ, ವೈವಿಧ್ಯಗಳೂ, ವೈರುಧ್ಯಗಳೂ ಕಾಣಿಸಿಕೊಳ್ಳಲಾರಂಭಿಸಿದವು. ಶೀತೋಷ್ಣಗಳು ಮೂರ್ತ ರಚನೆಗಳನ್ನು ತ್ತೇಜಿಸುತ್ತ ವಿವಿಧ ರೀತಿಯಲ್ಲಿ ಮುಂದುವರಿದವು. ಇವೆಲ್ಲವೂ ಮನುಷ್ಯನ ರಚನೆಯಲ್ಲಿ ಪ್ರವಿಷ್ಟವಾದವು. ಹೀಗೆ, ಮನುಷ್ಯನು ಸೃಷ್ಟಿಯಲ್ಲಿರುವ ಎಲ್ಲ ವಸ್ತುಗಳ ಒಂದು ಸಂಮಿಶ್ರಣವಾದನು.

ನಾವೀಗ ಮಾಡಬೇಕಾದುದಿಷ್ಟೆ : ಅವೆಲ್ಲವನ್ನೂ ಮತ್ತೆ ಅವುಗಳ ಮೂಲಸ್ಥಿತಿಗೆ ಹಿಂತಿರುಗಿಸುವುದು.ಅರ್ಥಾತ್, ದೈವಿಕತೆಯೊಂದಿಗಿನ ಅವುಗಳ ಸಂಬಂಧವನ್ನು ಸುಸ್ಥಿರವಾಗಿರುವಂತೆ, ಅವನ್ನು ಸಂತುಲಿತವಾದ ಶಾಂತ ಸ್ಥಿತಿಗೆ ಪುನಃ ಸ್ಥಾಪಿಸುವುದು. ಅದನ್ನು ಸಾಧಿಸುವ ಏಕೈಕ ರೀತಿಯೆಂದರೆ, ಅವುಗಳಲ್ಲಿ ಯುಕ್ತ ರೀತಿಯ ಮಿತತ್ವವನ್ನುಂಟು ಮಾಡುವುದು. ಮತ್ತು, ಸಾಕ್ಷಾತ್ಕಾರದ ಸ್ವಾಭಾವಿಕ ಪಥವಾದ “ಸಹಜ ಮಾರ್ಗ’ದಲ್ಲಿ ನಾವು ಅದನ್ನೇ ಮಾಡುತ್ತೇವೆ.

ಇದೊಂದು ಪ್ರಕೃತಿಯ ರಹಸ್ಯ, ಮಾನವನ ಸಂಪೂರ್ಣ ದೈವೀಕರಣದ ನಿಜವಾದ ಅರ್ಥವನ್ನು ಜನತೆಯ ಪೂರ್ಣಗ್ರಹಿಕೆಗೆ ತರಲೋಸುಗ ನಾನು ಇಲ್ಲಿ ಇದನ್ನು ವಿವರಿಸಿದ್ದೇನೆ.

ಸಹಜಮಾರ್ಗ ಪದ್ಧತಿಯ ಮೂಲಭೂತ ತತ್ವವನ್ನು ವಿವರಿಸಲು ಈ ಸದವಕಾಶವನ್ನು ಕೊಟ್ಟಿರುವುದಕ್ಕೆ, ನನಗೆ ಸಂತೋಷವಾಗಿದೆ ಮತ್ತು ದೈವೀಕರಣದ ಸ್ಥಿತಿಯನ್ನು ಹೊಂದಲು, ಪರಮಾತ್ಮನ ಸಾಕ್ಷಾತ್ಕಾರಕ್ಕೆ ಪ್ರಾಮಾಣಿಕವಾಗಿ ಹಾರೈಸುವ ಪ್ರತಿಯೋರ್ವನಿಗೂ ಸಹಾಮಾಡಲು ನಾನು ಮನಃಪೂರ್ವಕವಾಗಿ ಸರ್ವಥಾ ಸಿದ್ಧನಿದ್ದೇನೆಂದು ನಾನಿಲ್ಲಿ ಹೇಳಬಯಸುತ್ತೇನೆ.

***