“ಪರತತ್ತ್ವದ ಈ ಭೂಮಿಕೆಗಳು ಅಥವಾ ಮಜಲುಗಳು ಅದರ ಪ್ರತಿಯೊಂದು ಅಂಶ (ಕಿರಣ) ಕ್ಕೂ, ಅರ್ಥಾತ್ ಪ್ರತಿಯೊಂದು ವೈಷ್ಟಾತ್ಮಕ್ಕೂ ಸೃಜನಾತ್ಮಕ ಅವತಾರಣದ ಪ್ರಕ್ರಿಯೆಯ ಮೂಲಕ ರೂಪುಗೊಂಡವು, ಮತ್ತು ಅದು (ಆತ್ಮವು) ಅನೇಕ ಗ್ರಂಥಿಗಳನ್ನು ಅಥವಾ ಘಟ್ಟಗಳನ್ನು ನಿರ್ಮಿಸಿಕೊಂಡಿತು; ಅವುಗಳಲ್ಲಿ ಪ್ರತಿಯೊಂದೂ ವಿಶಿಷ್ಟ ವಿಧಾನ (ನಿಯಮ) ಮತ್ತು ರೂಪಗಳನ್ನು ನಿರ್ಮಿಸಿಕೊಂಡಿತು, ಹಾಗೂ ಅವು ಬಂಧನ ಮತ್ತು ದುಃಖಕ್ಕೆ ಕಾರಣವಾದವು. ಈ ರೀತಿಯಾಗಿ ಯಾವ ಆತ್ಮವು ತನ್ನ ಅವತರಣವನ್ನು ಉಂಟುಮಾಡಿಕೊಂಡಿತೋ ಅದು ತನ್ನ ಮರುಪ್ರಯಾಣಕ್ಕೆ ಪ್ರಯತ್ನಿಸುವುದು ಅನಿವಾರ್ಯವಾಗಿದೆ” (ಅನಂತದೆಡೆಗೆ’ ಗ್ರಂಥಕ್ಕೆ ಡಾ. ಕೆ. ಸಿ. ವರದಾಚಾರಿಯವರು ಬರೆದ ಮುನ್ನುಡಿಯಿಂದ),

ಮಾನವ ಜೀವಿಗಳಾದ ನಮಗೆ ಬರುವ ಮೊದಲ ವಿಚಾರವು, ನಾವು ಪ್ರಸ್ತುತ ಸುತ್ತುತ್ತಿರುವ ಗ್ರಂಥಿಯ ಕುರಿತಾಗಿದೆ. ನಾವು ಈ ವಿಚಾರಕ್ಕೆ ಮಾತ್ರ ಅಂಟಿಕೊಂಡು, ಬೇರೆಡೆಗೆ ವಿಚಲಿತರಾಗದೆ ಉಳಿದರೆ ಈ ಹೃದಯ ಗ್ರಂಥಿಯಲ್ಲಿ ಸುತ್ತುತ್ತಿರುವೆವೆಂಬುದನ್ನು ಮನಗಾಣಬಹುದು. ಇದರ ಕೆಳಗಡೆ ಕೂಡ ಗ್ರಂಥಿಗಳಿರುವವೇನೋ ಸರಿಯೆ; ಆದರೆ ಅವು ಸ್ಥೂಲತರದವುಗಳಾಗಿದ್ದು ಅವು ಪ್ರಾಣಿಗಳ ಮತ್ತು ಇತರ ಜೀವಿಗಳ ನೆಲೆಗಳಾಗಿವೆ. ಅತ್ಯಂತ ಕೆಳಗಿನದಾದ ಗ್ರಂಥಿಯು ಅಪ್ರಜ್ಞ ಭೌತದ್ರವ್ಯವಾಗಿದ್ದು, ಅದು ಅವಿಶ್ರಾಂತ ಚಲನೆಯಲ್ಲಿರುವ ಆತ್ಯಂತಿಕ ಕಣಗಳನ್ನೊಳಗೊಂಡಿದೆ. ಹೃದಯ ಗ್ರಂಥಿಗಿಂತ ಮೇಲುಗಡೆಗೆ ಇರುವ ಗ್ರಂಥಿಗಳು ಈ ಮೇಲೆ ಉಲ್ಲೇಖಿತವಾದ (ಅನಂತದೆಡೆಗೆ) ಗ್ರಂಥದಲ್ಲಿ ವಿವರಿಸಲ್ಪಟ್ಟಿವೆ.

ಹಾಗಾದರೆ, ನಾವು ಹೃದಯಗ್ರಂಥಿಯ ಮೇಲೆ ಧ್ಯಾನ ಮಾಡೋಣ. ನಾವು ಇದನ್ನು ಮಾಡಲು ಪ್ರಯತ್ನಿಸಿದಾಗ, ನಾವು ನಮ್ಮನ್ನು ಒಂದು ಬಿಂದುವಿನಲ್ಲಿ ಏಕತ್ರಿತಗೊಳಿಸಿಕೊಂಡಂತೆ ಅನಿಸುತ್ತದೆ. ನಾವು ನಮ್ಮ ಪ್ರಜ್ಞೆಯನ್ನು ಕೆಳಗಿನ ಸ್ತರಗಳಿಂದ ಹಿಂದಕ್ಕೆ ತೆಗೆದುಕೊಂಡಂತೆ, ಮತ್ತು ನಮಗೆ ಉನ್ನತ ಪ್ರಜ್ಞೆಯ ಅರಿವು ಇನ್ನೂ ಬಂದಿಲ್ಲವೆಂಬಂತೆ ಅನಿಸುವುದು. ಅಭ್ಯಾಸವು ಮುಂದುವರಿದಂತೆ ಈ ಗ್ರಂಥಿಯ ಸತ್ಯತೆಯ ಅರಿವು ನಮಗೆ ಬರುವುದು. ಈ ಗ್ರಂಥಿಯು ಬಹಳ ಕ್ಲಿಷ್ಟವಾದುದೆಂದು ನಮಗೆ ಕಂಡುಬರುವುದು. ಮೊದಲಿಗೆ, ಅನೇಕ ಪರಕೀಯ ಪದಾರ್ಥಗಳು ಸಿಕ್ಕಿಕೊಂಡಿರುವುದನ್ನು ಕಂಡುಕೊಳ್ಳಬಹುದು. ಇದು ನಮ್ಮ ಅರಿವಿಗೆ ಬಂದಾಗ ಅದರ ನಿಜ ಸ್ವರೂಪವನ್ನು ಅರಿಯಲು ನಾವೇ ಅದನ್ನು ಸಹಜವಾಗಿಯೇ ತೆಗೆದು ಹಾಕುವೆವು. ಕೆಲವು ಸಲ ಪ್ರಾರಂಭದಲ್ಲಿ, ನಮ್ಮ ಸ್ವಂತದ ಸಂಕಲ್ಪ ಶಕ್ತಿಯಿಂದ ನಾವು ತೆಗೆದುಹಾಕಲು ಸಾಧ್ಯವಾಗದಂತಹ ಅಶುದ್ಧತೆಗಳು ಇರುವುದು ಕಂಡುಬರುವುದು. ಹಾಗೆ ಮಾಡಲು ಬಹಳಷ್ಟು ಅಭ್ಯಾಸ ಬೇಕಾಗುತ್ತದೆ; ಅಥವಾ ನಾವು ಗುರುಗಳ ಸಹಾಯ ತೆಗೆದುಕೊಂಡರೆ, ಅದನ್ನು ಸುಲಭವಾಗಿ ಮಾಡಬಹುದು. ಆ ಗುರುವು ಯೌಗಿಕ ಪ್ರಾಣಾಹುತಿಯ ಶಕ್ತಿಯನ್ನು ಹೊಂದಿದವನಿರಬೇಕು.
ಶುದ್ದೀಕರಣವಾದ ಮೇಲೆ, ನಾವು ಈ ಗ್ರಂಥಿಯನ್ನು ನಿಕಟದಿಂದ ಪರಿಶೀಲಿಸಬಹುದು. ಈಗ ನಾವು ಸೂಕ್ಷ್ಮ ಭೌತಿಕತೆಯ, ಸೂಕ್ಷ್ಮ ಜೈವಿಕ ಹಾಗೂ ಸೂಕ್ಷ್ಮ ಮಾನಸ ಶಕ್ತಿಗಳ ಪಾತ್ರಗಳನ್ನು ಸೂಕ್ಷ್ಮ ಗ್ರಹಣ ಮಾಡಿ ವಿವೇಚಿಸಿ ನೋಡುತ್ತೇವೆ. ಅವು ಕೆಲವೊಮ್ಮೆ ರಾಗ-ದ್ವೇಷಗಳ, ಕ್ರಿಯೆ ಹಾಗೂ ಗ್ರಹಿಸುವ ಶಕ್ತಿಯ ವಿವಿಧ ಪ್ರವೃತ್ತಿಗಳ ಹಾಗೂ ಬೇರೆ ಬೇರೆ ವಿಚಾರಗಳ ಸುಪ್ತ ಸಾಮರ್ಥ್ಯಗಳ ರೂಪದಲ್ಲಿರುವುವು. ಇಲ್ಲಿಯ ಪ್ರತಿಯೊಂದು ವಸ್ತುವೂ ಚಲನೆಯ ಸ್ಥಿತಿಯಲ್ಲಿರುತ್ತದೆ. ನಮ್ಮ ಧ್ಯಾನಾಭ್ಯಾಸವು ಇನ್ನೂ ಮುಂದುವರಿದರೆ ಚಲನೆಯ ಸ್ಥಿತಿಯು ನಿಧಾನ ಗತಿಯದಾಗುವ ಮತ್ತು ಅಲ್ಲಿಯ ವಸ್ತುಗಳೆಲ್ಲ ಸ್ಥಗಿತಗೊಳ್ಳುತ್ತಿರುವುವೆಂಬ ಭಾವನೆ ನಮಗುಂಟಾಗುವುದು. ಮಿಶ್ರಿತವಾದ ವಸ್ತುಗಳನ್ನು ನಮ್ಮ ಸಂಕಲ್ಪ ಶಕ್ತಿಯಿಂದ ಅಥವಾ, ಗುರುವಿನ ಶಕ್ತಿಯ ಸಹಾಯದಿಂದ ಹೆಚ್ಚು ಸುಲಭವಾಗಿ ತೆಗೆದು ಹಾಕಬಹುದು, ಹಾಗೂ ಶುದ್ಧ ಹೃದಯಗ್ರಂಥಿಯ ಅಧ್ಯಯನ ಮಾಡಬಹುದು.

ಇಲ್ಲಿ ಒಂದು ಎಚ್ಚರಿಕೆಯ ಮಾತು ಅಗತ್ಯ. ಈ ಗ್ರಂಥಿಗಳನ್ನು ಒಂದೇ ಸಮಯದಲ್ಲಿ ಅವುಗಳ ನೈಜ ಸ್ವರೂಪದಲ್ಲಿ ಅರಿತುಕೊಳ್ಳಬೇಕು, ಲಯಗೊಳಿಸಬೇಕು, ಹಾಗೂ ಉನ್ನತ ರೂಪದಲ್ಲಿ ಪಡೆಯಬೇಕು (ಸಾರೂಪ್ಯತಾ), ಮತ್ತು ಏಕೀಕರಿಸಬೇಕು (ಸಾಯುಜ್ಯತಾ) ಹಾಗೂ ಅವುಗಳನ್ನು ದಾಟಿ (ಮೀರಿ) ಹೋಗಬೇಕು. ಅವುಗಳನ್ನು ಛೇದಿಸಕೂಡದು, ಬದಲಿಗೆ ಶಿಥಿಲಗೊಳಿಸಬೇಕು ಮತ್ತು ಮೀರಿ ಹೋಗಬೇಕು. (ಡಾ. ಕೆ.ಸಿ. ವರದಾಚಾರಿ) ಕೆಲವು ಸಂತರು ಈ ಹೃದಯಗ್ರಂಥಿಯನ್ನು ಮೀರಿ ಹೋಗುವ ತಮ್ಮ ಸೆಣಸಾಟದಲ್ಲಿ, ತಮಗೆ ದತ್ತವಾಗಿ ಬಂದ ಯಾವುದೋ ಸಂಕಲ್ಪಶಕ್ತಿಯಿಂದ ಅದನ್ನು ಛೇದಿಸಿದರು, ಹಾಗೂ ಅಂತೆಯೇ ಮಾಡಲು ಉಪದೇಶಿಸಿದರು. ಮತ್ತು ಅವರ ಅನುಯಾಯಿಗಳು ಅದರ ತಂತ್ರವನ್ನು ಅರಿಯದೆ, ಕೆಲವು ಬಲಪೂರ್ವಕವಾದ ಯಾಂತ್ರಿಕ ಹಾಗೂ ಶ್ರಮದಾಯಕ ಅಭ್ಯಾಸ (ಅನುಷ್ಠಾನ)ಗಳನ್ನು ಅಂಗೀಕರಿಸಿಕೊಂಡು ದುಷ್ಪರಿಣಾಮಕ್ಕೀಡಾದರು.

ಹೃದಯವು ಸಾಕಷ್ಟು ಶುದ್ಧಗೊಳಿಸಲ್ಪಟ್ಟಾಗ, ನಾವು ಅದರ ಅಧ್ಯಯನವನ್ನು ಜಾಗರೂಕ ದೃಷ್ಟಿಯಿಂದ ಮುಂದುವರಿಸಿದರೆ, ಹೃದಯ ಗ್ರಂಥಿಯು ಬಿಚ್ಚಿಕೊಳ್ಳುವುದನ್ನು ಕಾಣಬಹುದು. ನಾವೇ ಕರಗಿ ಹೋಗುತ್ತಿರುವುದನ್ನು ಅನುಭವಿಸುವೆವು. ನಮ್ಮ ಏಕಾಗ್ರತೆಯ ಅನುಭವ ಕೂಡ ಇಲ್ಲದಾಗುವುದು. ನಾವು ಜಾಗರೂಕ ಮತ್ತು ಸಂವೇದಿಯಾಗಿ ಉಳಿದರೂ, ನಾವು ಆ ಗ್ರಂಥಿಯ ಸುತ್ತಲಿನ ಹೃದಯ ಕ್ಷೇತ್ರದ ಅರಿವು ಹೊಂದಬಲ್ಲೆವು. ಇದಕ್ಕೂ ಹಿಂದೆ ನಮಗೆಂದಿಗೂ ಬಂದಿರದಂತಹ ಅತಿಪ್ರಜ್ಞೆಯ (Super consciousness) ಅವಸ್ಥೆಯಲ್ಲಿ ನಾವು ಜಿಗಿಯುವೆವು. ನಮ್ಮ ತಳಮಳವು ಹೆಚ್ಚಾಗುವುದು. ನಮಗೆ ಒಂದು ರೀತಿಯ ಪರಿಮಿತಿಯ ಅನುಭವವಾಗುವುದು. ನಾವು ಅದನ್ನು ಮೀರಿ ಹೋಗಬಯಸುವೆವು. ಎರಡನೆಯ ಗ್ರಂಥಿಯು ನಮ್ಮ ದೃಷ್ಟಿಯಲ್ಲಿ ಬರುವುದು. ಇದು ಉನ್ನತತರ ಹಾಗೂ ಸೂಕ್ಷ್ಮತರದ್ದಾಗಿದೆ. ಎರಡನೆಯ ವ್ಯಾಕುಲತೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗುವೆವು. ನಾವು ಸರಿಯಾದ ಮಾರ್ಗದಲ್ಲಿ, ಸ್ವಪ್ರಯತ್ನದಿಂದಲೇ ಮುಂದುವರಿದರೆ ನಲವತ್ತೈದು ವರ್ಷಗಳಷ್ಟು ಕಾಲ ತೆಗೆದುಕೊಳ್ಳುವ ಪೂರ್ಣ ಪಕ್ವತೆಯ ನಂತರ ಮೊದಲನೆಯ ಗ್ರಂಥಿಯನ್ನು ನಾವು ದಾಟಿದಂತಾಯಿತು ಮತ್ತು ನಾವು ಎರಡನೆಯ ಗ್ರಂಥಿಯೆಡೆಗೆ ನಮ್ಮ ಯಾತ್ರೆ ಕೈಗೊಳ್ಳುವೆವು.

ಅತ್ಯುನ್ನತ ಸಾಮರ್ಥ್ಯವುಳ್ಳ ಗುರುವೊಬ್ಬನು, ಜಿಜ್ಞಾಸುವಿನ ಪ್ರಯತ್ನ ಅಲ್ಪವೇ ಇದ್ದರೂ, ಹೋಲಿಕೆಯಲ್ಲಿ ಅಲ್ಪವೇ ಎನಿಸುವಷ್ಟು ಸಮಯದಲ್ಲಿ ಉನ್ನತ ಮಟ್ಟಗಳಿಗೆ ಕರೆದೊಯ್ಯಬಲ್ಲನು. ಅಂತಹ ಸಾಮರ್ಥ್ಯವುಳ್ಳ ಗುರುವು ಸುದೈವದಿಂದ ನಮಗೆ ದೊರಕಿದುದಾದರೆ, ಇಡೀ (ಆಧ್ಯಾತ್ಮಿಕ) ಯಾತ್ರೆಯನ್ನು ಒಂದು ಕ್ಷಣದಲ್ಲಿ ನಾವು ಪೂರ್ಣಗೊಳಿಸುವಂತೆ ಮಾಡಬಲ್ಲನು.
* ಈಗ ನಾವು ಈ ಗ್ರಂಥಿಯನ್ನು ನಾವು ‘ವೈಜ್ಞಾನಿಕವಾಗಿ ಪರಿಶೀಲಿಸೋಣ. ಅಂದರೆ, ಹೆಚ್ಚು ಮಟ್ಟಿಗೆ, ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ತರಬೇತಿ ಪಡೆದ ಆಧುನಿಕ ಮನಸ್ಸು ಮೆಚ್ಚಿ ಗ್ರಹಿಸುವ ರೀತಿಯಲ್ಲಿ ಎಂದರ್ಥ. ಅದಕ್ಕಿಂತ ಹಿಂದಿನ ಗ್ರಂಥಿಯು ಪೂರ್ಣವಾಗಿ ರೂಪಗೊಂಡ ನಂತರ ಈ ಗ್ರಂಥಿಯು ರೂಪುಗೊಳ್ಳುತ್ತದೆ. ಅದಕ್ಕೂ ಮೊದಲು ಇನ್ನೂ ಅನೇಕ ಗ್ರಂಥಿಗಳು ರೂಪುಗೊಂಡಿವೆ. ಆತ್ಮದ ಪ್ರಥಮ ಆವರಣವನ್ನು ನಾವು ತಲುಪುವವರೆಗೆ ಈ ಕ್ರಮಾನುಗತಿಯು ಮುಂದುವರಿಯುವುದು. ಮೂಲ ಕಾರಣದವರೆಗೆ ತಲುಪಿ ತನಗೆ ತೃಪ್ತಿಯಾಗುವ ತನಕ ಆಧುನಿಕ ಬುದ್ಧಿಯು ಈ ಶೋಧನ ಕಾರ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಪ್ರಸ್ತುತ ಹೃದಯದ ಗ್ರಂಥಿಯನ್ನು ಕುರಿತು ವಿಚಾರ ಮಾಡುತ್ತಿರುವಾಗ ಅದನ್ನು (ಮೂಲ ಕಾರಣವನ್ನು) ಕುರಿತು ಯೋಚಿಸುವುದಕ್ಕೆ ಇದು ಪಕ್ವಕಾಲವೆನಿಸುವುದಿಲ್ಲ.

ಈ ಗ್ರಂಥಿಯನ್ನು ಉಂಟುಮಾಡಿದವರು ಯಾರು ? ಯಾಕಾಗಿ ಇದು ರೂಪುಗೊಂಡಿತು ? ಇದನ್ನು ದಾಟಿ ಹೋಗಲು ಸಾಧ್ಯವೆ ? ಈ ಗ್ರಂಥಿಯು ಕರಗಿ ಹೋದಾಗ ಆಗುವ ಪರಿಣಾಮಗಳೇನು ? ಇವು ಕೆಲವು ಸಮಂಜಸ ಹಾಗೂ ಪ್ರಸ್ತುತ ಪ್ರಶ್ನೆಗಳು, ಅವು ಪರಿಹಾರವನ್ನು ಅಪೇಕ್ಷಿಸುತ್ತವೆ, ಅಲ್ಲದೆ ಪರಿಹಾರ ಯೋಗ್ಯವಾಗಿವೆ. ಯಾರಿಗೆ ಮರು ಪ್ರಯಾಣದ ಅನುಭವವಿದೆಯೋ ಅಂತಹ ಒಬ್ಬನು ಈ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲ. ಇದಕ್ಕೂ ಹಿಂದಿನ ಗ್ರಂಥಿಯಲ್ಲಿದ್ದಾಗ ವ್ಯಕ್ತಿಯು ಒಬ್ಬಂಟಿಯಾಗಿದ್ದನು. ಆದರೆ, ಆನಂದವನ್ನು ಬಾಹ್ಯದಲ್ಲಿ ಅರಸುವ ಬಹುತ್ವದ ಕಲ್ಪನೆ ಇತ್ತು. ವಿಭಿನ್ನ ಸುಪ್ತ ಶಕ್ತಿಗಳು ತಮ್ಮ ತೃಪ್ತಿಗಾಗಿ ವಿಭಿನ್ನ ರೀತಿಗಳಲ್ಲಿ ಕೆಲಸ ಮಾಡಿದವು. ಈ ಪ್ರಸ್ತುತ ಗ್ರಂಥಿಗಾಗಿ ಭೂಮಿಕೆ ಸಿದ್ಧವಾಯಿತು. ಇಂದ್ರಿಯಗಳೊಂದಿಗೆ ಇಂದ್ರಿಯಾರ್ಥಗಳ (ಅಂದರೆ ಆಯಾ ಇಂದ್ರಿಯಕ್ಕೆ ಸಂಬಂಧಿಸಿದ ವಿಷಯಗಳ) ಸಂಪರ್ಕ ಉಂಟಾಯಿತು. ಪ್ರತಿಯೊಂದು ಇಂದ್ರಿಯವೂ ತನಗೆ ಹೊಂದುವ ವಿಷಯ ವಸ್ತುವಿನೊಂದಿಗೆ ಸ್ನೇಹ ಸಂಬಂಧ ಸ್ಥಾಪಿಸಿಕೊಂಡಿತು. ಸುಖಾನುಭವ ಹೆಚ್ಚಿತು. ಆದರೆ ಸಂಪರ್ಕಗಳು ಶಾಶ್ವತವಾಗಿರಲು ಸಾಧ್ಯವಿರಲಿಲ್ಲ. ಅಸಂತೋಷವು ಅದನ್ನು ಅನುಸರಿಸಿ ಬಂದಿತು. ಘರ್ಷಣೆ ಪ್ರಾರಂಭವಾಯಿತು. ವ್ಯಥೆ, ಕ್ರೋಧ, ಕಾಮ, ವಾಂಛಗಳು ಮುಂತಾದವುಗಳ ರೂಪದಲ್ಲಿ ಉಷ್ಣತೆ ಮೈದೋರಲಾರಂಭಿಸಿತು. ವಿವೇಕವು ಕಣ್ಮರೆಯಾಯಿತು. ಹೃದಯ ಗ್ರಂಥಿ ಸೃಷ್ಟಿಯಾಯಿತು. ಜೀವಾತ್ಮದ ಎಲ್ಲ ಶಕ್ತಿಗಳೂ ಇಲ್ಲಿ ಘನೀಭೂತಗೊಂಡವು.

ಚಲನೆಯನ್ನು ಹಿಮ್ಮುಖಗೊಳಿಸಿದಾಗ ಮತ್ತು ಸುಖಾನ್ವೇಷಣೆಯ ಪ್ರವೃತ್ತಿ ದುರ್ಬಲಗೊಂಡಾಗ, ಹಾಗೂ ಅಂತರ್ಮುಖಿಯಾಗಿಸಿದಾಗ ಇದನ್ನು ದಾಟಿ ಹೋಗಬಹುದು. ಹೆಚ್ಚು ಮೌಲ್ಯವುಳ್ಳ ವಸ್ತುಗಳಿಗೋಸ್ಕರ ಕಡಿಮೆ ಮೌಲ್ಯದ ವಸ್ತುಗಳನ್ನು ತ್ಯಾಗ ಮಾಡಬೇಕಾಗುವುದು. ತತ್‌ಕ್ಷಣದ ಒಳಿತಿಗಾಗಿ ತತ್‌ಕ್ಷಣದ ಸುಖವನ್ನು ತ್ಯಾಗ ಮಾಡಬೇಕು. ಆಗ ಈ ಗ್ರಂಥಿಯು ಸಡಿಲಗೊಳ್ಳುವುದು ಪ್ರಾರಂಭವಾಗುವುದು ಮತ್ತು ಅಂತಿಮವಾಗಿ ಕರಗಿಹೋಗುವುದು. ಒಂದು ವೇಳೆ ಒಬ್ಬನು ಅಂತಹ ಸಂಕಲ್ಪ ಶಕ್ತಿಯನ್ನು ಬೆಳೆಸಿಕೊಂಡಿದ್ದರೆ ಅಥವಾ ಅಂತಹ ಸಂಕಲ್ಪ ಶಕ್ತಿಯನ್ನುಳ್ಳ ಯೋಗ್ಯ ಗುರುವಿನ ಸಹಾಯ ದೊರೆತರೆ ಇದನ್ನು ಅಂತಹ ಸಂಕಲ್ಪ ಶಕ್ತಿಯ ಒಂದು ಆಘಾತದಿಂದ ಇದನ್ನು ಸಾಧಿಸಬಹುದು.

ಈ ಗ್ರಂಥಿಯು ಶಿಥಿಲಗೊಳ್ಳಲು ಪ್ರಾರಂಭವಾದಾಗ, ಅನೇಕ ಅನುಭವಗಳು ಅದನ್ನು ಅನುಸರಿಸಿ ಬರುವುವು. ವ್ಯಕ್ತಿಯೊಬ್ಬನ ದೈಹಿಕ, ಜೈವಿಕ, ಮಾನಸಿಕ ಹಾಗೂ ಶರೀರ ಸಂರಚನೆ ಮತ್ತು ಸೂಕ್ಷ ಸಂವೇದನಾಶಕ್ತಿ ಹಾಗೂ ಜಾಗರೂಕತೆಗಳಿಗೆ ಅನುಗುಣವಾಗಿ ಈ ಅನುಭವಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುವುವು. ಈ ನೈಜ ಭಾವವು ಒಂದೇ ಇರುತ್ತದೆ. ಆದರೆ ವಿಭಿನ್ನ ಐಂದ್ರಿಯಕ ಹಾಗೂ ಜ್ಞಾನಗ್ರಹಣಶಕ್ತಿಯ ಮಾಧ್ಯಮದ ಮೂಲಕ ಹಾದು ಬರುವ ಅದರ ಪರಿವರ್ತಿತ ರೂಪವು ವಿಭಿನ್ನವಾಗಿರುವುದು. ಇಲ್ಲಿ ಕೆಲವು ಮಾದರಿಯ ಅನುಭವಗಳನ್ನು ಮಾತ್ರ ಉಲ್ಲೇಖಿಸಲಾಗಿದೆ.
ಜಗತ್ತಿನಲ್ಲಿಯ ಎಲ್ಲ ಚರಾಚರ ವಸ್ತುಗಳೂ ಏನೋ ಒಂದು ದೈವೀ ಪ್ರಭಾವವನ್ನು ಹೊರಹೊಮ್ಮಿಸುತ್ತವೆ ಎಂದು ಕೆಲವು ಅಭ್ಯಾಸಿಗಳಿಗೆ ಭಾಸವಾಗುವುದು. ಕೆಲವರು ಈ ಪ್ರಭಾವವನ್ನು ಪ್ರಕಾಶ ರೂಪದಲ್ಲಿ, ಕೆಲವರು ಪರಿಮಳದ ರೂಪದಲ್ಲಿ, ಮತ್ತು ಕೆಲವರು ಕಂಪನಗಳ ರೂಪದಲ್ಲಿ ಅನುಭವ ಹೊಂದುವರು. ಕೆಲವು ಅಭ್ಯಾಸಿಗಳು ಇಡೀ ವಿಶ್ವದಲ್ಲಿ ಒಂದು ರೀತಿಯ ದೈವೀ ಲಯಬದ್ಧತೆಯನ್ನು ಕಾಣುವರು; ಹುಟ್ಟು, ಜೀವನ, ಸಾವುಗಳ ಒಂದು ದೈವೀ ಶ್ರುತಿಗೆ ಅನುಗುಣವಾಗಿ ಎಲ್ಲ ವಸ್ತುಗಳೂ ನರ್ತಿಸುತ್ತಿರುವಂತೆ ತೋರಿ ಬರುವುದು. ಈ ಹಂತದಲ್ಲಿ ಪರಮಾತ್ಮನ ಸರ್ವವ್ಯಾಪಕತೆಯ ಭಾವನೆಯು ತಾನೇ ತಾನಾಗಿ ಮೆರೆಯುವುದು.

ಯಾವಾಗ ಈ ಗ್ರಂಥಿಯು ತೆರೆದುಕೊಳ್ಳುವುದೋ, ಆತ್ಮದ ಕೆಲವು ಸುಪ್ತ ಸಾಮರ್ಥ್ಯಗಳು ಜಾಗೃತಗೊಳ್ಳುವವು, ಹಾಗೂ ಸಿದ್ಧಿಗಳ ರೂಪದಲ್ಲಿ ತೋರ್ಪಡಿಸಿಕೊಳ್ಳುವುವು. ಅಭ್ಯಾಸಿಯ ಆಂತರಿಕ ಯಾತ್ರೆ ಪ್ರಾರಂಭವಾಗುವುದು. ಹಾಗೂ ಯಾವುದಾದರೊಂದು ಪವಾಡದಲ್ಲಿ ಸಿಕ್ಕಿ ಹಾಕಿಕೊಳ್ಳಲು ತಾನೇ ಅನುವು ಮಾಡಿಕೊಳ್ಳದಿದ್ದರೆ, ಅವನು ಉತ್ತರೋತ್ತರ ಮುಂದಕ್ಕೆ ಸಾಗುತ್ತ ಹೋಗುವನು. ಈ ರೀತಿಯಲ್ಲಿ ಅವನ ಆಧ್ಯಾತ್ಮಿಕ ಜೀವನವು ತತ್‌ಕ್ಷಣವೇ ಪ್ರಾರಂಭವಾಗಿ ತಾನೊಂದು ವಿಸ್ಮಯ ಲೋಕಕ್ಕೆ ಬಂದಿರುವೆನೋ ಎಂಬಂತೆ ಅನುಭವಿಸುವನು. ಕೆಲವೊಮ್ಮೆ ಅವನು ಆಶ್ಚರ್ಯಮುಗ್ಧನಾಗುವನು, ಮತ್ತು ಸ್ತಂಭೀಭೂತನಾಗುವನು, ಮತ್ತು ಕೆಲವೊಮ್ಮೆ ಯಾವುದೋ ಒಂದು ರೀತಿಯ ಆನಂದೋನ್ಮಾದದಲ್ಲಿ ಮೈಮರೆಯುವನು. ಈ ರೀತಿಯಾಗಿ, ಈ ಗ್ರಂಥಿಯು ಬಹಳಷ್ಟು ಸಂಗತಿಗಳನ್ನು ಒಳಗೊಂಡಿದ್ದು, ಪ್ರತಿಯೊಬ್ಬನೂ ತಾನೇ ಸ್ವತಃ ಅವುಗಳನ್ನು ಅನುಭವ ಪಡೆದು ನೋಡಬೇಕಷ್ಟೆ ! ಒಬ್ಬ ಸಮರ್ಥ ಗುರುವಿನ ಸಹಾಯವು ಶೀಘ್ರ ಪ್ರಗತಿಗೆ ಗಣನೀಯ ಆಲಂಬನವಾಗುವುದೆಂಬುದನ್ನು ಬೇರೆ ಹೇಳಬೇಕಾಗಿಯೇ ಇಲ್ಲ.

ಹೃದಯದಲ್ಲಿ ದೈವೀಪ್ರಕಾಶದ ಮೇಲೆ ಧ್ಯಾನ ಮಾಡುವದಕ್ಕಿಂತ ಪ್ರಕಾಶವಿದೆಯೆಂಬ ಕಲ್ಪನೆಯ ಮೇಲೆ ಧ್ಯಾನ ಮಾಡುವದು ಹೆಚ್ಚು ಸುರಕ್ಷಿತ. ಏಕೆಂದರೆ ಮನಸ್ಸು ಬೆಳಕಿನ ರೂಪವನ್ನು ಕಲ್ಪಸತೊಡಗಿ, ಮುಂದೆ ಅದರಿಂದ ಚಿತ್ತವಿಭ್ರಮವಾಗುತ್ತದೆ. ಗುರು ಅತ್ಯಂತ ಉನ್ನತ ಮಟ್ಟದವನಿದ್ದು ನಿಸರ್ಗದೊಂದಿಗೆ ಏಕರಸನಾಗಿದ್ದರೆ ಮಾತ್ರ ಆತನ ಆಕಾರದ ಮೇಲೆ ಧ್ಯಾನ ಮಾಡುವದು ಬಹಳ ಲಾಭದಾಯಕ.

-ಶ್ರೀ ಬಾಬೂಜಿ (ನು. ಮು. 66)