ನಮ್ಮ ದೇಶದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತಾವು ಬಹಳ ಧಾರ್ಮಿಕರೆಂದು ಬಹಿರಂಗವಾಗಿ ತೋರಿಸಿಕೊಳ್ಳುವ ಬಹಳಷ್ಟು ಜನರು ಕಾಣಸಿಗುತ್ತಾರೆ. ಆದರೆ ಒಬ್ಬ ಬುದ್ಧಿವಂತ ವೀಕ್ಷಕನು ಇಂಥವರಲ್ಲಿ ಕೆಲವು ವಿಭಿನ್ನ ವರ್ಗಗಳನ್ನು ಕಾಣಬಹುದು. ಅವರು ತಮ್ಮ (ಮತ) ಧರ್ಮವು ನಿಜವಾಗಿ ಏನಿದೆ ಎಂಬುದನ್ನು ತಿಳಿಯದೆಯೇ, ತಮ್ಮದೊಂದೇ ನಿಜವಾದ ಧರ್ಮವೆಂದು ತಿಳಿಯುತ್ತಾರೆ ಮತ್ತು ಇತರರಿಗಿಂತ ತಾವು ಒಂದಿಂಚು ಹೆಚ್ಚು ಎತ್ತರದವರು ಎಂದು ಭಾವಿಸುತ್ತಾರೆ. ಅವರ ಧರ್ಮಪರತೆಯು (ಮತೀಯತೆಯು) ಅಲ್ಲಿಗೆ ಕೊನೆಗೊಳ್ಳುತ್ತದೆ. ಆಗೀಗ ಅವರು ದೊಡ್ಡ ದೊಡ್ಡ ಸಮಾವೇಶಗಳನ್ನು ಕೂಡಿಕೊಳ್ಳುತ್ತಾರೆ ಮತ್ತು ತಮ್ಮ ದೇವದೇವತೆಗಳನ್ನು ಪೂಜಿಸಿ, ಅವರಿಗೆ ಒಂದು ಉಪಕಾರ ಮಾಡಿದವರಂತೆ ತಮ್ಮನ್ನು ತಾವು ಅಭಿನಂದಿಸಿಕೊಳ್ಳುತ್ತಾರೆ. ತಾವು ತಮ್ಮ ಪುರಾತನ ಧರ್ಮಗಳ, ಸಂಸ್ಕೃತಿಗಳ ಹಾಗೂ ದೇವತೆಗಳ ನಿಜವಾದ ಸಂರಕ್ಷಕರೆಂದು ಸಾರುವುದಕ್ಕೆ ಹಿಂಜರಿಯುವುದಿಲ್ಲ. ತಮ್ಮ ದೇವಾಲಯಗಳಿಂದ ಹೊರಗೆ ಬಂದ ತತ್‌ಕ್ಷಣವೇ ಅವರು ತಮ್ಮ ದೇವತೆಗಳನ್ನು ಹಿಂದೆ ಬಿಟ್ಟು, ತಾವು ತೀವ್ರವಾಗಿ ಬಯಸಲು ಯೋಗ್ಯವಾದ ಏಕಮಾತ್ರ ವಸ್ತುಗಳೆಂಬಂತೆ ಉತ್ತಮ ಐಹಿಕ ವಸ್ತುಗಳ ಹಿಂದೆ ಬೀಳುತ್ತಾರೆ.
ಇನ್ನು ಬೇರೆ ಕೆಲವು ವರ್ಗದವರಿದ್ದಾರೆ. ಅವರು ತಮ್ಮ ಜಾತಿಯ ಬಗ್ಗೆ, ಅದಕ್ಕೂ ಹೆಚ್ಚಾಗಿ ತಮ್ಮದೇ ಉಪಜಾತಿಯ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ತಮ್ಮ ಪಂಥಗಳ ಕುರಿತು ಅವರಿಗಿರುವ ಪ್ರೀತಿಗಿಂತಲೂ ಬೇರೆ ಪಂಥದವರ ಕುರಿತಾಗಿ ಅವರ ದ್ವೇಷವು ಹೆಚ್ಚು ತೀಕ್ಷ್ಮವೂ, ನಿಷ್ಠುರವಾಗಿಯೂ ಇರುತ್ತದೆ. ಅವರ ಅಂತರಂಗದ ಸ್ಥಿತಿ ಹೇಗಿರುತ್ತದೆ ಎಂದರೆ, ತಮ್ಮ ಪಂಥಕ್ಕೆ ಸೇರಿರದ ಯಾವುದೇ ವ್ಯಕ್ತಿಯೂ ಅವರ ಅತ್ಯಂತ ಕಡು ವೈರಿಯಾಗಿರುತ್ತಾನೆ. ಅವರ ದೇವರು ಕೂಡ ಅವರ ವಿಶಿಷ್ಟ ಪಂಥಕ್ಕೆ ಸೇರಿದವನಾಗಿರುತ್ತಾನೆ. ಮತ್ತು ಬೇರೆಯವರಿಗೆ ಯಾವುದೇ ಒಳಿತು ಮಾಡಲು ತಮ್ಮ ದೇವರಿಗೆ ಅವರು ಬಿಡುವುದಿಲ್ಲ.
ಮತ್ತೆ ಕೆಲವು ತಥಾಕಥಿತ ಬುದ್ಧಿವಂತ ವರ್ಗದವರೆಂಬವರಿದ್ದಾರೆ. ಅವರು ತಮ್ಮ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಿರುತ್ತಾರೆ ಹಾಗೂ ತಮ್ಮ ಎಲ್ಲ ಪೌರಾಣಿಕ ಗ್ರಂಥಗಳು ಬಹಳ ವೈಜ್ಞಾನಿಕವಾಗಿವೆಯೆಂದು ಘೋಷಿಸುತ್ತಾರೆ ಹಾಗೂ ತಮ್ಮ ಶಾಸ್ತ್ರಗ್ರಂಥಗಳ ಸಮರ್ಥನೆಗೆ ಡಾರ್ವಿನ್ ಮತ್ತು ಐನ್ಸ್ಟೈನ್‌ರನ್ನು ಉದಾಹರಿಸಲೂ ಅವರು ಹಿಂಜರಿಯುವುದಿಲ್ಲ. ಮಾನವನು ಮಂಗ ಮತ್ತು ಸೊಳ್ಳೆಗಳಿಂದ ಉದ್ಭವಿಸಿ ಬಂದವನೆಂಬ ವಿಕಾಸವಾದವು ಅವರ ಪ್ರಕಾರ ಅವರ ಶಾಸ್ತ್ರಗ್ರಂಥಗಳಲ್ಲಿದೆ ಮತ್ತು ಅವುಗಳಿಂದ ಸಮರ್ಥಿಸಲ್ಪಟ್ಟಿದೆ; ಅಣುಬಾಂಬು ಮತ್ತು ಜಗತ್ತು ಸಾಪೇಕ್ಷವಾಗಿದೆಯೆಂಬುದನ್ನು ಕೂಡ (ಅದರ ಅರ್ಥ ಏನೇ ಇರಲಿ) ಅವರ ಅರ್ಥನಿರೂಪಣೆಗಳಲ್ಲಿ ಕಾಣಬಹುದಾಗಿದೆ.
ಆಗ ಸಂತರು, ಮಹಾತ್ಮರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳೆಂದು ಹೇಳಿದವರ ಅನೇಕ ಅನುಯಾಯಿಗಳನ್ನು ಕೂಡ ಯಾರಾದರೂ ಕಾಣಬಹುದು. ಅಂತಹ ಜನರು ತಮ್ಮ ಗುರುಗಳು ಸ್ವಾಮಿಗಳಿಂದ ಆಕರ್ಷಿತರಾಗಿರುತ್ತಾರೆ. ಮತ್ತು ತಮ್ಮ ಗುರುಗಳು ಅಸಾಧಾರಣ ಸಿದ್ಧಿಗಳನ್ನು (ಶಕ್ತಿಗಳನ್ನು) ಹೊಂದಿದ್ದಾರೆಂದು ಅವರು ಭಾವಿಸುತ್ತಾರೆ. ಆದರೆ, ಅದೇ ಹೊತ್ತಿನಲ್ಲಿ ಅವರು (ಅನುಯಾಯಿಗಳು) ಅದೆಷ್ಟು ದೃಢವಾಗಿ ಹಾಗೂ ಅಸಂಸ್ಕೃತ ರೀತಿಯಲ್ಲಿ ಕೂಡ ಬದ್ಧರಾಗಿರುತ್ತಾರೆಂದರೆ, ಮುಕ್ತ ಚಿಂತನೆಯ ಅತ್ಯಲ್ಪ ಸೂಚನೆಯಿಂದಲೇ ಅವರು ಭಯಕಂಪಿತರಾಗುತ್ತಾರೆ. ತಮ್ಮ ಗುರುಗಳು ಅಂತಿಮವಾಗಿ ಮುಕ್ತಿ ಮಾರ್ಗವನ್ನು ತೋರಿಸುತ್ತಾರೆಂದು ಅವರು ನಂಬುವರೆಂಬುದು ನಿಃಸಂದೇಹ, ಆದರೆ, ಮುಕ್ತಿಯನ್ನು ಕುರಿತ ಅವರ ಕಲ್ಪನೆಯೆಂದರೆ, ಹೆಚ್ಚು ಪಕ್ಷ ಸ್ವಾತಂತ್ರ್ಯವನ್ನು ಹಾಗೂ ಮುಕ್ತ ವಿಚಾರದ ಸ್ವಾತಂತ್ರ್ಯವನ್ನೂ ಕೂಡ ಕಳೆದುಕೊಳ್ಳುವುದೇ ಆಗಿದೆ. ಅವರ ಗುರುಗಳ ಚಮತ್ಕಾರಿಕ ಸಾಮರ್ಥ್ಯಗಳ (ಸಿದ್ದಿಗಳ) ಏಕೈಕ ಪ್ರಯೋಜನವೆಂದರೆ, ಬಹುತೇಕವಾಗಿ, ಅನುಯಾಯಿಗಳ ಸಂಖ್ಯೆಯನ್ನು ಬೆಳೆಸುವುದು ಮತ್ತು ಈಗಾಗಲೇ ಅನುಯಾಯಿಗಳಾಗಿ ಇದ್ದವರ ಮೇಲೆ ತಮ್ಮ ಹಿಡಿತವನ್ನು ಮತ್ತೂ ಬಿಗಿಗೊಳಿಸುವುದೇ ಆಗಿದೆ.
ಇದಲ್ಲದೆ, ಅತ್ಯಂತ ಒರಟು ಅಥವಾ ಅನಾಗರಿಕ ಶ್ರದ್ಧಾಳುಗಳೂ ಇದ್ದಾರೆ. ಅವರು (ದೇಶದ ಕಾನೂನಿನ, ನೈತಿಕ ಹಾಗೂ ಸಾಮಾಜಿಕ ನಿಯಮಗಳ ಪರಿವೆಯಿಲ್ಲದೆ) ಯಾವುದೇ ಅನುಚಿತ ಕಾರ್ಯಕ್ಕೆ – ಉದ್ಯುಕ್ತನಾಗುವ ಮೊದಲು ತಮ್ಮ ಸುಲಿಗೆಯ ಒಂದು ಭಾಗವನ್ನು ಪವಿತ್ರ ದಾನವಾಗಿ ಕೊಡುವ ವಚನ ನೀಡಿ, ತಮ್ಮ ದೇವ-ದೇವತೆ ಅನುಮತಿ ಪಡೆಯಬೇಕು ಎಂದು ನಂಬುತ್ತಾರೆ. ಹಾಗೆ, ಅವರು ಬಹಳ ‘ಧಾರ್ಮಿಕ’-ರೀತಿಯಲ್ಲಿ ಪಾಪ ಮಾಡುತ್ತಾರೆ.
ಸ್ವಾರ್ಥ, ಮತಾಂಧತೆ, ಹಾಗೂ ಪರಮತದ್ವೇಷ ಇವು ಮತ್ತು ಅರೆಬರೆ ತಿಳಿವಳಿಕೆ ಹಾಗೂ ದೋಷಪೂರ್ಣ ಮಾರ್ಗದರ್ಶಕರು ಕೂಡಿ ನಮ್ಮ ಮಹಾನ್ ದೇಶದ ಜನರ ಧಾರ್ಮಿಕ ದೃಷ್ಟಿಕೋನವನ್ನೇ ಕೆಡಿಸಿದವು. ಈ ಅಸಂಸ್ಕೃತ ಮನಃಸ್ಥಿತಿಯನ್ನು ಅಮೂಲಾಗ್ರವಾಗಿ ಕ್ರಮಪಡಿಸುವುದು ಮತ್ತು ಧರ್ಮದ ಸಾರತತ್ತ್ವಕ್ಕಾಗಿ ಮುನ್ನಡೆಯುವ ಒಂದು ಕ್ರಾಂತಿಕಾರಕ ಅನುಸಂಧಾನ ಇವು ಇಂದಿನ ತುರ್ತು ಅಗತ್ಯಗಳಾಗಿವೆ. ಹೇಗೆ ಮುಂದುವರಿಯಬೇಕು ಎಂಬುದೇ ಸಮಸ್ಯೆಯಾಗಿದೆ. ನಾವು ಇಲ್ಲಿ ಕೆಲವು ವಿಧಾನಗಳನ್ನು ಸೂಚಿಸುತ್ತೇವೆ; ಅದು ಈ ಸಮಸ್ಯೆಯಲ್ಲಿ ಆಸಕ್ತಿ ಇರುವವರ ಮನಸ್ಸಿನ ಒಲವನ್ನು ಸೆಳೆದು ಹಿಡಿಯಬಹುದು.
ಪ್ರಸ್ತುತ ಸಮಸ್ಯೆಯನ್ನು ಅದರ ಪೂರ್ಣ ವಿವರಗಳೊಂದಿಗೆ ಈ ಚಿಕ್ಕ ಲೇಖನದಲ್ಲಿ ಹೇಳಿಲ್ಲವೆಂಬುದೇನೋ ಸರಿಯೆ; ಹಾಗಿದ್ದರೂ ಒಬ್ಬನು ಅಂಥದೊಂದು ಸಮಸ್ಯೆಯ ಅಸ್ತಿತ್ವವನ್ನು ಗ್ರಹಿಸಬಲ್ಲ, ಹಾಗೂ ಅದರ ಇನ್ನೂ ಸೂಕ್ಷ್ಮತರ ಕಾರಣಗಳ ಹಾಗೂ ಅವುಗಳ ಪರಿಹಾರಗಳ ಬಗ್ಗೆ ಶೋಧಿಸಲು ಮುಂದುವರಿಯಬಲ್ಲ. ನಾವು ಅದರ ವಿಶಾಲ ನೋಟವನ್ನು ತೆಗೆದುಕೊಂಡರೆ, ಈ ಸಮಸ್ಯೆ ನಮ್ಮ ದೇಶದ ದಕ್ಷಿಣ ಭಾಗಗಳಿಗಷ್ಟೇ ಸೀಮಿತವಾಗಿರದೆ, ಇಡೀ ಜಗತ್ತಿಗೂ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬಹುದು. ಇದು ಸಮಸ್ತ ಮಾನವ ಕುಲದ ಸಮಸ್ಯೆಯಾಗಿರುವುದಕ್ಕಿಂತ, ಒಬ್ಬ ವ್ಯಕ್ತಿ ಸಂಬಂಧಿತ ಸಮಸ್ಯೆಯಾಗಿರುವುದು ಕಡಿಮೆಯೇನಲ್ಲ. ಆದರೆ, ಅದಕ್ಕೆ ಪರಿಹಾರದ ವಿಧಾನಗಳು ಅಗತ್ಯವಾಗಿ ವ್ಯಕ್ತಿಯಿಂದಲೇ ಪ್ರಾರಂಭವಾಗಬೇಕು. ಬೇರೆಯವರನ್ನು ಒಳ್ಳೆಯವರಾಗಿರಬೇಕೆಂದು ಕೇಳುವುದು (ಬಯಸುವುದು) ಎಂದರೆ ತನ್ನನ್ನು ತಾನು ಕೆಟ್ಟವನಾಗಿಯೇ ಉಳಿಯಗೊಡುವುದು ಎಂಬಷ್ಟೇ ಒಳ್ಳೆಯದು ಅಥವಾ ಕೆಟ್ಟದಾಗಿದೆ.
ಮೊಟ್ಟ ಮೊದಲಿಗೆ ನಾವು ಮತ ಧರ್ಮದ ತಳಹದಿ ಹಾಗೂ ಮನುಷ್ಯರ ಮನಸ್ಸಿನ ಮೇಲೆ ಪ್ರಭಾವವಾಗುವುದರ ಕುರಿತು ಪರೀಕ್ಷಿಸೋಣ. ಯಾರು ಹೃದಯವುಳ್ಳವರಾಗಿರುವರೋ ಹಾಗೂ ಯಾರಿಗೆ ಈ ಆನಂದಮಯ ಅಸ್ತಿತ್ವದ ಆತ್ಯಂತಿಕ ಕಾರಣದ ಪ್ರಕಾಶದ ಅನುಭವವು ಲಭ್ಯವಾಗಿದ್ದಿತೋ ಅಂತಹ ಯಾವುದೋ ಮಹಾವ್ಯಕ್ತಿಯ ನುಡಿಗಳ ಮತ್ತು ಬೋಧನೆಯ ರೂಪದಲ್ಲಿ, ಅವರ ವಿಶುದ್ಧ ಮನಸ್ಸಿನಿಂದ ಧರ್ಮವು ಮೊಟ್ಟಮೊದಲು ಹೊಮ್ಮಿ ಬರುತ್ತದೆ. ಅದರ ಮೂಲವು ಇರುವುದು ಉಚ್ಚತರದ ಪ್ರಜ್ಞೆಯಲ್ಲಿ ಅಥವಾ ಅತಿಪ್ರಜ್ಞೆಯಲ್ಲಿ (Super- Consciousness) ಆದುದರಿಂದ ಅದು ಮನುಷ್ಯನ ಪ್ರಜ್ಞೆಯ ಆಳವಾದ ಸ್ತರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಮೇಲೆ ತನ್ನ ಸಂಸ್ಕಾರಗಳನ್ನು ಉಂಟುಮಾಡುತ್ತದೆ. ತನ್ನ ಆಳವಾದ ಸ್ತರಗಳಲ್ಲಿ ನಡೆಯುವ ಆಕರ್ಷಕ ಪ್ರತಿಬಿಂಬಗಳಿಂದ ಅಶುದ್ಧ ಮನಸ್ಸು ಶೀಘ್ರವಾಗಿ ಸಂಮೋಹನಕ್ಕೊಳಗಾಗುವುದು. ಒಂದು ವೇಳೆ ಸ್ವೀಕರಿಸುವ ಮನಸ್ಸು ಶುದ್ಧವಾಗಿರದಿದ್ದರೆ ಮತ ಧರ್ಮದಿಂದ ಪಡೆದ ಶಕ್ತಿಯು, ಅದರಲ್ಲಿ ಇರುವ ಮಲಿನತೆಗಳನ್ನು ಬಲಪಡಿಸುವುದು ಹಾಗೂ ತತ್ಪರಿಣಾಮವಾಗಿ, ಅಂತಹ ಮಲಿನ ಮನಸ್ಸುಗಳ ಮೂಲಕ ಪೋಷಿತವಾದಾಗ (ಹೊರ ಸೂಸಿದಾಗ) ಧರ್ಮವೇ ಅಧಃಪತನ ಹೊಂದುವುದು. ಅಂತಿಮವಾಗಿ, ಕೇವಲ ಹೊರ ಆವರಣವು (ಚಿಪ್ಪು) ದೃಷ್ಟಿಯಲ್ಲುಳಿದು, ಅಂತಃಸತ್ತ್ವವು ಮರೆಯಾಗಿ ಹೋಗುವುದು. ಆಗ, (ಮತ) ಧರ್ಮವು ಸಂಕೀರ್ಣ ಔಪಚಾರಿಕ ಕರ್ಮಠ ಆಚರಣೆಗಳ ಕವಚದೊಂದಿಗೆ, ಪೂರ್ವಗ್ರಹಗಳ ಮೂಟೆ(ಕಂತೆ)ಯಾಗುವುದು.
ಧರ್ಮವು, ಮಾನಸಿಕ ಸಂತೋಷದ ಹಾಗೂ ಸ್ವಾಭಾವಿಕ ಭ್ರಾತೃತ್ವದ ಉಗಮ ಸ್ಥಾನವಾಗುವುದರ ಬದಲಿಗೆ ಕಲಹ, ಹಾಗೂ ವೈರತ್ವದ ಉಗಮಸ್ಥಾನವಾಗುವುದು. ವೈಶ್ವಿಕ ಪ್ರೇಮ ಮತ್ತು ಪರಸ್ಪರ ಸಹಾನುಭೂತಿಗಳ ಸ್ಥಾನವನ್ನು ದ್ವೇಷ, ಮತ್ಸರಗಳು ಆಕ್ರಮಿಸುವವು. ಆತ್ಮದ ಉದಾತ್ತ ಆಂತರಿಕ ಅಭೀಷ್ಟೆಗಳಿಗೆ ಪೋಷಣೆ ಒದಗಿಸುವ ಬದಲಿಗೆ ಐಂದ್ರಿಯಕ ತೃಪ್ತಿಗಳಿಗೋಸ್ಕರ ಇರುವ ತೃಷ್ಣಗಳನ್ನು ಪೋಷಿಸಲು ಪ್ರಾರಂಭಿಸುವುದು. ಹಾಗೂ, ಇನ್ನೊಂದು ಕಡೆಯಿಂದ, ಅದೇ ಅಧಃಪತಿತವಾದ ಧರ್ಮವು ಶಾರೀರಿಕ ಹಾಗೂ ಮಾನಸಿಕ ದಂಡನೆ ಮತ್ತು ಶೋಷಣೆಗಳ ಮೂಲಕ ಹೆಸರು, ಕೀರ್ತಿ, ಆತ್ಮ ಪ್ರತಿಷ್ಠೆಗಳ ಕುರಿತಾದ ಆಂತರಿಕ, ಸ್ವಾರ್ಥಪರ ಆಶೆಗಳಿಗೆ ಪೋಷಣೆ ಕೊಡುವುದು.
ಮಾನವನ ವಿಚಾರಧಾರೆಯ ದಿಶೆಯನ್ನು ಪುನರ್- ನಿರ್ದೇಶಿಸುವುದು ಬಹಳ ಉಪಯುಕ್ತ ವಿಧಾನವಾಗಬಲ್ಲುದು. ವೈಶ್ವಿಕ ಮಟ್ಟದಲ್ಲಿ ಇದನ್ನು ಮಾಡುವುದು ಒಂದು ಮಹಾಕಾರ್ಯವಾಗಿ ತೋರೀತು. ಅದೇನೇ ಇದ್ದರೂ ಈ ಜಗತ್ತಿನ ಎಲ್ಲ ಸ್ತ್ರೀ-ಪುರುಷರು ತಮ್ಮ ಸೋದರ-ಸೋದರಿಯರಿದ್ದಾರೆ ಹಾಗೂ ಅವರೆಲ್ಲರೂ ತಮ್ಮ ತಮ್ಮ ಆತ್ಯಂತಿಕ ಮೂಲದೆಡೆಗೆ ಆಕರ್ಷಿಸಲ್ಪಡುತ್ತಿದ್ದಾರೆ ಎಂಬುದಾಗಿ ಚಿಂತನ ಮಾಡಲು (ಎಲ್ಲ) ವ್ಯಕ್ತಿಗಳು ಈ ದಿಶೆಯಲ್ಲಿ ಪ್ರಯತ್ನ ಮಾಡಬಹುದು. ಆದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯವನ್ನು ಶುದ್ಧಗೊಳಿಸಿಕೊಳ್ಳುವುದು ಹಾಗೂ, ಬೇರೆಯವರಿಗೆ ಪ್ರಾಣಾಹುತಿ ನೀಡಬಹುದಾದ ಅಂತಸ್ತಿಗೆ ತನ್ನನ್ನು ತಾನು ತಂದುಕೊಳ್ಳುವುದು ಅತ್ಯಂತ ಶ್ರೇಷ್ಠ ವಿಧಾನವಾಗಬಹುದು. ಪ್ರಾರ್ಥನೆ, ಯೋಗ್ಯನಾದ ಸಮರ್ಥ ಗುರುವಿನ ಸಹಾಯ ಮತ್ತು ಗುರಿಯನ್ನು ತಲುಪಲಿಕ್ಕೆ ನಿರಂತರ ಜಾಗರೂಕತೆ ಇವು ಖಂಡಿತ ಬಹಳ ಪರಿಣಾಮಕಾರಿಯಾಗಿರುತ್ತವೆ.
ಶುದ್ಧ ಆಧ್ಯಾತ್ಮಿಕ ವಿಧಾನಗಳು ಕೂಡ ಇದ್ದೇ ಇವೆ ಎಂಬುದಂತೂ ಸರಿಯೆ; ಆದರೆ, ನಾನು ಅದನ್ನು ಕುರಿತು ಇಲ್ಲಿ ಹೇಳಬಯಸುವುದಿಲ್ಲ; ಏಕೆಂದರೆ, ಅಶುದ್ಧ ಹೃದಯದವರು ಹಾಗೂ ಅಯೋಗ್ಯರು ಅವುಗಳನ್ನು ಕೈಗೊಂಡಿದ್ದಾದರೆ, ಅವು ದುರುಪಯೋಗಕ್ಕೊಳಗಾಗುವ ಹಾಗೂ ನಿಂದನೆಗೀಡಾಗುವ ಸಂಭವವುಂಟು. ಈ ಬಗ್ಗೆ ಆಸಕ್ತಿಯುಳ್ಳವರು ಒಬ್ಬ ಯೋಗ್ಯ ಮಾರ್ಗದರ್ಶಕನನ್ನು (ಗುರುವನ್ನು) ಸಂಪರ್ಕಿಸಬಹುದು; ಅವನು ಎಂತಹವನಿರಬೇಕೆಂದರೆ, ಉಚಿತ ವಿಧಾನದಲ್ಲಿ ಬೋಧಿಸಲು ಶಕ್ತನಿರಬೇಕು ಹಾಗೂ ಆಧ್ಯಾತ್ಮಿಕ ಮಾರ್ಗದಲ್ಲಿ ಇತರರಿಗೆ ಸಹಾಯಮಾಡಲು ಯೌಗಿಕ ಪ್ರಾಣಾಹುತಿ ಶಕ್ತಿಯ ಮೇಲೆ ಪ್ರಭುತ್ವ ಹೊಂದಿದವನಿರಬೇಕು. ಒಬ್ಬ ನಿಜವಾದ ಮಾರ್ಗದರ್ಶಿಯು ಹೃದಯವನ್ನು ಶುದ್ಧಗೊಳಿಸುತ್ತಾನೆ ಹಾಗೂ ಪ್ರಕಾಶಿತಗೊಳಿಸುತ್ತಾನೆ. ಮಾರ್ಗದರ್ಶಿಯು ನಿಜಕ್ಕೂ ಸಮರ್ಥನಿದ್ದರೆ, ಮುಂದಕ್ಕೆ ಸಾಗಲು ಪ್ರಾಣಾಹುತಿ ಶಕ್ತಿಯನ್ನು ಕೊಡುತ್ತಾನೆ. ಅಂತಹ ಮಾರ್ಗದರ್ಶಿಯ ಸಾನ್ನಿಧ್ಯದಲ್ಲಿ ಒಬ್ಬನು ಶಾಂತತೆಯನ್ನು, ಮನಃಶಾಂತಿಯನ್ನು ಅನುಭವಿಸುತ್ತಾನಲ್ಲದೆ, ತನ್ನ ಹೃದಯವು ಹಗುರಾದಂತೆ ಅನುಭೂತಿ ಹೊಂದುತ್ತಾನೆ.ಅಂತಹ ಒಬ್ಬಮಾರ್ಗದರ್ಶಿಯು ತೀರ ನಿಗರ್ವಿಯೂ, ಸಂಪೂರ್ಣ ನಿಃಸ್ವಾರ್ಥನೂ ಹಾಗೂ ಎಲ್ಲ ರೀತಿಯ ಆಡಂಬರ ಮತ್ತು ಸ್ವ-ಪ್ರದರ್ಶನಗಳಿಂದ ರಿಕ್ತನಾದವನೂ ಆಗಿರುತ್ತಾನೆ. ಅವನ ವಿಧಾನಗಳು ಅಂತೆಯೇ ಸರಳವೂ, ಸುಲಭವೂ ಮತ್ತು ಕೇವಲ ಉದ್ದೇಶಕ್ಕೆ ಮಾತ್ರವೇ ಸಲ್ಲುವಂಥದ್ದೂ ಆಗಿರುತ್ತವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ವಿಧಾನಗಳು ಹೇಗಿರಬೇಕೆಂದರೆ, ಅವು ಹೃದಯವನ್ನು ಶುದ್ಧಗೊಳಿಸಬೇಕು ಮತ್ತು ಅದನ್ನು ಹಗುರಗೊಳಿಸಬೇಕು, ಮನಸ್ಸನ್ನು ಪ್ರಕಾಶಿತಗೊಳಿಸಬೇಕು, ಜ್ಞಾನೋದಯವನ್ನುಂಟುಮಾಡಬೇಕು, ಆತ್ಮವನ್ನು ಉನ್ನತೀಕರಿಸಿ, ಮುಕ್ತಗೊಳಿಸುವಂಥದ್ದಿರಬೇಕು. ಆಗ ಮಾತ್ರವೇ ನೈಜ ಧರ್ಮವು ಹೊರಹೊಮ್ಮಬಹುದು ಮತ್ತು ಮಾನವ ಕುಲವನ್ನು ಕಾಪಾಡಬಹುದು.