ಪ್ರಿಯ ಬಾಬೂಜಿ, ಸೋದರ ಸೋದರಿಯರೆ,

ಈ ಶುಭ ಸಂದರ್ಭದಲ್ಲಿ ನಾನು ಹೇಳಲಿಕ್ಕಿದ್ದುದನ್ನು ತಾಳ್ಮೆಯಿಂದ, ಸೌಜನ್ಯದಿಂದ ಆಲಿಸಬೇಕೆಂದು ವಿನಂತಿ. ಈ ಮುಂದಿನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ.

ದೇವರು ವಿಶ್ವವನ್ನು ಸೃಷ್ಟಿ ಮಾಡಿದನು ಎಂಬುದು ಧರ್ಮಗಳ ದೃಷ್ಟಿಯಾಗಿದೆ. ಆದರೆ, ಈ ಸೃಷ್ಟಿಯನ್ನು ಮಾಡಲು ಅವನಿಗೆ ಎಷ್ಟು ಸಮಯ ಬೇಕಾಯಿತು ? ವೈಜ್ಞಾನಿಕ ಸಿದ್ಧಾಂತಗಳ ಪ್ರಕಾರ, ನೀಹಾರಿಕೆಗಳ ಪದಾರ್ಥದಿಂದ ಆಕಾಶ ಕಾಯಗಳನ್ನೊಳಗೊಂಡ ಕ್ರಮಬದ್ಧ ವ್ಯವಸ್ಥೆಯು ವಿಕಾಸಗೊಳ್ಳಲು ಮಿಲಿಯಾಂತರ ವರ್ಷಗಳು ಬೇಕಾದವು. ಶಕ್ತಿಯಿಂದ ನೀಹಾರಿಕೆಗಳ ಪದಾರ್ಥಗಳು ವಿಕಾಸಗೊಂಡ ಪ್ರಕ್ರಿಯೆಯನ್ನು ಇನ್ನೂ ಸಂಶೋಧಿಸಬೇಕಿದೆ. ಅದಕ್ಕೂ ಮುಂದಕ್ಕೆ, ‘ಶಕ್ತಿ’ಯ ಮೂಲ ಹಾಗೂ ಅದರ ಮೂಲವನ್ನು ಇನ್ನೂ ಊಹಿಸಬೇಕಾದದ್ದಿದೆ.

ಸೃಷ್ಟಿಯು ನಿರ್ಮಿತವಾಗುವಂತೆ ಮಾಡಲು ಪರಮಾತ್ಮ ಮೊದಲು ದೇವನಾಗಬೇಕಾಗುವುದು ಅಂದರೆ, ಸೃಷ್ಟಿಕರ್ತ ದೇವನಾಗಬೇಕಾಗುವುದು. ಅವನಲ್ಲಿ ಸೃಷ್ಟಿ ನಿರ್ಮಾಣದ ಸಂಕಲ್ಪ (ಪ್ರೇರಣೆ) ಅಥವಾ ಕ್ಷೋಭ ಉಂಟಾದ ಕ್ಷಣವೇ ದೇವರು (ಪರಮಾತ್ಮ), ‘ಸೃಷ್ಟಿಕರ್ತ’ನಾಗುತ್ತಾನೆ. ಆ ಕ್ಷೋಭ, ಅಂತರ್ಹೇತು ಅಥವಾ ಪ್ರೇರಣೆಯು ಭಗವಂತನ ಕಾರ್ಯವನ್ನು ನೆರವೇರಿಸಿದ ‘ಮೂಲ ಶಕ್ತಿ’ಯಾಗಿದೆ. ಈ ಅರ್ಥದಲ್ಲಿ ಭಗವಂತನು (ದೇವರು) ಸೃಷ್ಟಿಕರ್ತನಾದ ಕ್ಷಣವೇ ಸೃಷ್ಟಿಯ ಪ್ರಾರಂಭವಾಯಿತು. ಸೃಷ್ಟಿ ನಿರ್ಮಾಣದ ಬಗ್ಗೆ ಭಗವಂತನು ಯೋಚಿಸಿದ್ದಾದರೂ ಏಕೆ ? ಸರಿ ! ಅವನು ಮಾತ್ರ ಬಲ್ಲ. ಬಹುಶಃ ಅದು ಅವನ ಲೀಲೆಯಾಗಿರಬೇಕು !

ಈಗ, ನಾವು ಚಿಂತನದ ಸ್ವರೂಪ ಮತ್ತು ಸಾಮರ್ಥ್ಯದ ಬಗ್ಗೆ ಯೋಚಿಸೋಣ. ಈ ವಿಶ್ವಕ್ಕೆ ಕಾರಣವಾದ ಶಕ್ತಿಯು ಮನುಷ್ಯನಲ್ಲಿಯೂ ಇದೆ. ಅದನ್ನು ತನ್ನದೇ ಸತ್ತೆಯ (ಅಸ್ತಿತ್ವ ಇರುವಿಕೆ) ಮೂಲ, ಅಥವಾ ಉಗಮವೆಂಬಂತೆ ಮಾನವನು ಅನುಭವಿಸಬಲ್ಲನು. ನಮ್ಮಗುರುಮಹಾರಾಜರ ಸಂಶೋಧನೆಗಳಿಂದಾಗಿ ಸಹಜಮಾರ್ಗದಲ್ಲಿ ಇದೇ ಶಕ್ತಿಯನ್ನು ಉಪಯೋಗಿಸಲಾಗುತ್ತದೆ.

ಅದನ್ನು ನಾವು ಅನುಭವ ಪಡೆದ ಹೊರತು, ಚಿಂತನಶಕ್ತಿಯ ಸಾಮರ್ಥ್ಯದ ಬಗ್ಗೆ ನಮಗೆ ಮನವರಿಕೆಯಾಗುವುದು ಕಷ್ಟಸಾಧ್ಯ. ವಾಸ್ತವವಾಗಿ ಹೇಳುವುದಾದರೆ, ನಾವು ಅದರ ಅನುಭವವನ್ನು ಯಾವಾಗಲೂ ಪಡೆಯುತ್ತಿರುತ್ತೇವೆ; ಹಾಗಿದ್ದರೂ ನಮಗೆ ಅದು ತೀರ ಗೂಢವಾದುದೆಂದು ತೋರಿಬರುತ್ತದೆ. ಅದು ಹೀಗೇಕೆ ? ಅದರ ಕಾರಣ ಸ್ಪಷ್ಟವಿದೆ. ನಾವು ಅದರ ಬಗ್ಗೆ ವೈಜ್ಞಾನಿಕವಾಗಿ ಪ್ರಯೋಗ ಮಾಡಿ ನೋಡಲು ಪ್ರಾಮಾಣಿಕವಾಗಿ ಬಯಸುವುದಿಲ್ಲ. ಒಂದೋ, ನಾವು ನಮ್ಮದೇ ಆದ ಮುಚ್ಚುಮರೆಯಿಲ್ಲದ ಸತ್ಯದಿಂದ ದೂರ ಓಡಿ ಹೋಗುತ್ತೇವೆ, ಅಥವಾ, ಕೇವಲ ಭ್ರಮೆ ಮಾತ್ರವಲ್ಲದೆ ಬೇರೇನೂ ಅಲ್ಲದ ಅಸಹಜ ಜಗತ್ತನ್ನು ನಮ್ಮೊಳಗೆ ಸೃಷ್ಟಿಸಿಕೊಳ್ಳುತ್ತೇವೆ.
ಹಾಗಾದರೆ, ಅದನ್ನು ನಾವು ಕಂಡುಹಿಡಿಯುವುದು ಹೇಗೆ? ಉತ್ತರ ಬಹಳ ಸರಳವಾಗಿದೆ – ಅದೆಂದರೆ, ಧ್ಯಾನ ಮಾಡುವುದು. ಹಾಗೆ ನಾವು ಮಾಡುವುದರಿಂದ ಅದನ್ನು ಗ್ರಹಿಸಿ ನೋಡುವ ಕಣ್ಣು (ಅಂತಶ್ಚಕ್ಷು) ನಮ್ಮೊಳಗೆ ತನ್ನಿಂದ ತಾನೇ ತೆರೆಯುತ್ತದೆ. ನಾವು ಯಾವುದನ್ನು ‘ನಾವು’ ಎಂದು ತಪ್ಪಾಗಿ ಭಾವಿಸಿಕೊಂಡಿದ್ದೆವೋ, ಆ ಸ್ಥೂಲತರ ಜಟಿಲ ಅಸ್ತಿತ್ವದ (ಸತ್ತೆಯ) ಅರಿವು ನಮಗೆ ಕೂಡಲೇ ಉಂಟಾಗುತ್ತದೆ. ಈ ಜಟಿಲತೆಯು ನಾವು ನಮ್ಮದೇ ಚಿಂತನೆಯಿಂದ ಹೆಣೆದುಕೊಂಡ ಬಲೆಯಲ್ಲದೆ ಬೇರೇನೂ ಅಲ್ಲ. ಈ ಬಲೆಯು ನಮ್ಮನ್ನು ಭದ್ರವಾಗಿ ಬಿಗಿದು ಹಿಡಿದಿದೆ. ಅದು ಘನೀಭೂತವಾಗಿದ್ದು, ತನ್ನನ್ನೇ ಕಾಯ್ದಿಟ್ಟುಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಸ್ಥೂಲತೆಯತ್ತ ಸೆಳೆಯುವ ಬಲವಾದ ಪ್ರವೃತ್ತಿಯಾಗಿ ಬೆಳೆದಿದೆ. ಈ ಸ್ಥೂಲತೆಯು ಚೈತನ್ಯರಹಿತ, ಮತ್ತು ನಿರ್ಜೀವ ಆಗಿ ಕಂಡುಬರುತ್ತದೆಯಾದರೆ, ಆ ಬಲೆಯು ಬೇರೆ ಬೇರೆ ಗ್ರಂಥಿಗಳ ರೂಪದಲ್ಲಿ ಸಾಂದ್ರಗೊಂಡ ಆಮೂಲಾಗ್ರ ಶಕ್ತಿ ಮತ್ತು ಬಲವೇ ಆಗಿರುವಂತೆ ತೋರುವುದು.

ಈ ರೀತಿಯಾಗಿ, ‘ಚಿತ್’ದಿಂದ ಪ್ರಾಣಶಕ್ತಿಯ ವಿಕಾಸದ ಮತ್ತು ಆ ಶಕ್ತಿಯು ಘನೀಭೂತವಾಗುವುದರ ಸ್ಪಷ್ಟ ಚಿತ್ರವು ನಮ್ಮ ದೃಷ್ಟಿಗೆ ಗೋಚರಸುವುದು. ಈ ಪ್ರಕ್ರಿಯೆಯನ್ನು ತಿರುವು-ಮುರುವು ಮಾಡಿದರೆ ನಮ್ಮ ಶರೀರದ ಪ್ರತಿಯೊಂದು ಕಣವನ್ನೂ ಶಕ್ತಿಯನ್ನಾಗಿ ಪರಿವರ್ತಿಸಬಹುದಾದಷ್ಟು ನಾವು ಶುದ್ಧ ಮತ್ತು ಮುಕ್ತ ವಿಚಾರದ ಒಂದು ಅಂತಿಮ ಸ್ಥಿತಿಗೆ ತಲುಪಬಹುದೆಂಬುದು ಈಗ ಸ್ಪಷ್ಟವಾಗುವುದು. ಇನ್ನೂ ಮುಂದುವರಿದು, ಅಂತಹ ಪ್ರತಿಯೊಂದು ಕಣವನ್ನೂ ಅದರ ಅಂತಿಮ ಸ್ವರೂಪಕ್ಕೆ ಪರಿವರ್ತಿತಗೊಳಿಸಬಹುದು, – ಮತ್ತು ಪ್ರತಿಯೊಂದು ಕಣವನ್ನೂ ತನ್ನ ದೈವೀ ಪ್ರಕಾಶವನ್ನು ಹೊಮ್ಮಿಸುವ ದೈವೀ ಕೇಂದ್ರವನ್ನಾಗಿ ಮಾಡಬಹುದು. ಈ ಸ್ಥಿತಿಯನ್ನು ಪಡೆದಾಗ ಮಾನವನು ತನ್ನ ಇಡೀ ಅಸ್ತಿತ್ವವನ್ನು ಸಮಗ್ರವಾಗಿ ರೂಪಾಂತರಿಸಿಕೊಂಡ ಅತಿಮಾನವನಾಗುವನು.

ನಿಜವಾಗಿಯೂ ಅವಿಚಾರಿಗಳಾದ ಕೆಲವು ಸ್ವಯಂ ಘೋಷಿತ ಗುರುಗಳು, ತೀವ್ರ ಭಾವಾವಿಷ್ಟ ಕಲ್ಪನೆ, ಏಕಾಗ್ರತೆ ಅಥವಾ ವಿಚಾರ ರಹಿತ ಸ್ಥಿತಿಯನ್ನು ಕೂಡ ಅಭ್ಯಾಸ ಮಾಡಲು ಅನೇಕ ವಿಧಾನಗಳನ್ನು ವಿಧಿಸುವರು. ಆದರೆ,ಯಾವುದು ಅತ್ಯಂತ ಸ್ವಾಭಾವಿಕವಾಗಿರುವುದೋ, ಪವಿತ್ರತೆಯನ್ನು ತರುವುದೋ, ಹಾಗೂ ಸರಿಯಾದ ಚಿಂತನವನ್ನು ಉಂಟುಮಾಡುವುದೋ ಅದೇ ಯೋಗ್ಯ ಪದ್ಧತಿಯಾಗಿದೆ. ಸರಳ ಧ್ಯಾನ, ಲಘುವಾದ ಮಾನಸಿಕ ಅಭ್ಯಾಸಗಳು, ಒಬ್ಬ ಯೋಗ್ಯ ವ್ಯಕ್ತಿಯ ಮಾರ್ಗದರ್ಶನದಲ್ಲಿ ತೀವ್ರವಾಗಿ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವುವು. ಸಮರ್ಪಕವಾದ ಅಭ್ಯಾಸ ಪದ್ಧತಿಯಲ್ಲಿ ಚಿಂತನ ಶಕ್ತಿಯ ಮೇಲೆ ಪ್ರಭುತ್ವ ಪಡೆಯಲು ಸಾಧ್ಯವಾಗುವಂತೆ ಮನಸ್ಸನ್ನು ಸರಿಯಾಗಿ ರೂಪಿಸಲು ಮತ್ತು ಇಡೀ ಶರೀರ-ವ್ಯವಸ್ಥೆಯನ್ನು ಶುದ್ಧಗೊಳಿಸಲು ಪ್ರಯತ್ನಿಸಲಾಗುವುದು.

ಶುದ್ಧ ಚಿಂತನದ ಸ್ವಾಭಾವಿಕ ಸ್ಥಿತಿಯು ಅತೀವ ಸರಳ, ಲಘು ಹಾಗೂ ಸೂಕ್ಷ್ಮವಾಗಿರುತ್ತದೆ.ನಮಗೆ ಸಾಮಾನ್ಯವಾಗಿ ಗೊತ್ತಿರುವ ಇನ್ನೊಂದು ಸ್ಥಿತಿಯು ಅದರ ತಿರುವುಮುರುವಾದ ಸ್ಥಿತಿಯಾಗಿದೆ. ಈ ತಿರುವುಮುರುವು (ವಿಲೋಮ) ಕೇವಲ ಸರಳ ವಿಲೋಮವಾಗಿರದೆ, ತೊಡಕಿನದಾಗಿದ್ದು ಪ್ರತಿಯೊಂದು ತಿರುವುಮುರುವಿನಲ್ಲಿಯೂ ಮತ್ತೂ ಮತ್ತೂ ಸ್ಥೂಲತರವಾಗುತ್ತ, ಅನೇಕ ಸಲ ಆಗುತ್ತ ಹೋಗುವ ಪ್ರಕ್ರಿಯೆಗೆ ಒಳಗಾದದ್ದಿದೆ. ನಾವು ಸಹಜ ಸ್ಥಿತಿಯನ್ನು ಪಡೆದರೆ, ಅದರ ಮೇಲೆ ಪ್ರಭುತ್ವವನ್ನು ಹೊಂದಬಹುದು.
ಇಲ್ಲಿ ‘ಸತ್ಯ’ವನ್ನೇ ಅಲ್ಲಗಳೆದು ಕೇವಲ ಆದರ್ಶವಾದದ ಸಿದ್ಧಾಂತವನ್ನು ಪ್ರತಿಪಾದಿಸುವ ಉದ್ದೇಶ ಇಟ್ಟುಕೊಳ್ಳಲಾಗಿಲ್ಲ. ಆದರ್ಶವಾದವು, ಪ್ರಾಸಂಗಿಕವಾಗಿ, ಮಾನವರ ಮನಸ್ಸುಗಳನ್ನು ಮಾರ್ಪಡಿಸುವಂತಹ, ಚಿಂತನದ ಕಾರ್ಯವಿಧಾನವನ್ನು ಮಾತ್ರ ತೋರಿಸುತ್ತದೆ. ಸತ್ಯವನ್ನು ತಲುಪಲು ವೈಜ್ಞಾನಿಕ ಕಾರ್ಯವಿಧಾನ, ಪ್ರಾಯೋಗಿಕ ಮನೋಧರ್ಮ ಮತ್ತು ಪೂರ್ವಗ್ರಹರಹಿತವಾದ (ವಸ್ತುನಿಷ್ಠ) ದೃಷ್ಟಿಕೋನಗಳು ಸಂಪೂರ್ಣ ಆವಶ್ಯಕವಾಗಿವೆ.
ಆದಾಗ್ಯೂ ಒಂದು ಪ್ರಕಾರದ ಪೂರ್ವಕಲ್ಪನೆಯೂ ಇರಬೇಕಾಗುತ್ತದೆ; ಅದು ಎಷ್ಟು ಕಡಿಮೆಯೋ ಅಷ್ಟು ಒಳ್ಳೆಯದು. ಭೌತಾತೀತವಾದ, ಪರಿಪೂರ್ಣವಾದ ‘ಒಂದರ’ ಅಸ್ತಿತ್ವ – ಅದನ್ನು ಮೂಲ ಕಾರಣ ಅಥವಾ ದೇವರು, ಅಥವಾ ನಿಮಗೆ ಇಷ್ಟವಾಗುವ ಯಾವುದೇ ಹೆಸರಿನಿಂದ ಕರೆದರೂ ಸರಿಯ; ಅದು ಅತ್ಯಂತ ಸರಳವೂ, ಸುರಕ್ಷಿತವೂ ಆದುದು, ಎಂಬ ಪೂರ್ವಾಧಾರ ಕಲ್ಪನೆ ಅಥವಾ ನಂಬುಗೆ. ಈ ಕ್ಷೇತ್ರದಲ್ಲಿ ಚಿಂತನ ಶಕ್ತಿಯು ಎಲ್ಲ ಬಗೆಯ ಸಂಶೋಧನೆಗಳಿಗೆ ಪ್ರಮುಖ ಸಾಧನ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದುದೇ ಏಕಮಾತ್ರ ಆವಶ್ಯಕತೆ. ಅದರ ಮೇಲೆ ಯಾರಿಗೆ ಪ್ರಭುತ್ವವಿದೆಯೋ ಅಂತಹ ಒಬ್ಬರ ಸಹಾಯವು ಬಹಳ ಫಲದಾಯಕವಾಗಿದೆ; ಅಷ್ಟೇ ಅಲ್ಲದೆ ಉನ್ನತ ಸ್ತರಗಳಲ್ಲಿ ಅನಿವಾರ್ಯವೂ ಆಗಿದೆ.
ಮಾನವನಲ್ಲಿರುವ ಈ ಕೇಂದ್ರಶಕ್ತಿಯನ್ನು ಉಪಯೋಗಿಸುವ ಕುರಿತಾದ ಸಂಶೋಧನೆಯ ಶ್ರೇಯಸ್ಸು ‘ಸಹಜ ಮಾರ್ಗ’ದ ಸಂಸ್ಥಾಪಕರಿಗೆ ಸಲ್ಲುತ್ತದೆ. ನಮ್ಮ ಪುರಾತನ ಋಷಿಗಳಿಗೆ ಒಂದಿಲ್ಲೊಂದು ರೂಪದಲ್ಲಿ ಈ ಶಕ್ತಿಯ ಬಗ್ಗೆ ತಿಳಿದಿತ್ತಾದರೂ ಅವರು ಮನುಷ್ಯನ ಪ್ರಗತಿಯ ನಿಲುಕಿಗೆ ಒಂದು ಮಿತಿಯನ್ನು ಹಾಕಿದ್ದರು. ಅತ್ಯಂತ ಹೆಚ್ಚು ಪರಿಣಾಮಕಾರಿಯೂ ಮತ್ತು ತೀರ ಹಾನಿರಹಿತವೂ ಆದ ಒಂದು ಪದ್ಧತಿಯನ್ನು ಕಂಡುಹಿಡಿದ ನಮ್ಮ ಗುರುಮಹಾರಾಜರಿಗೆ ಧನ್ಯವಾದಗಳು.

ಜಡತೆ ಹಾಗೂ ಸ್ಥೂಲತೆಯ ಹಂತಗಳನ್ನು ದಾಟಿದ ಮೇಲೆ, ಹಾಗೂ ಸೂಕ್ಷ್ಮತರ ಭೌತಿಕತೆ ಮತ್ತು ಅಹಂಕಾರಗಳ ಹಂತಗಳನ್ನು ದಾಟಿ ಹೋಗುವುದು ಮತ್ತೂ ಹೆಚ್ಚು ಹೆಚ್ಚು ಕಠಿಣವಾಗುತ್ತ ಹೋಗುವುದೆಂಬ ಅರಿವು ಅಧ್ಯಾತ್ಮ ವಿದ್ಯೆಯಲ್ಲಿ ಸಾಕಷ್ಟು ಮುಂದುವರಿದವರಿಗೆ ಉಂಟು. ಅಹಂಕಾರವು ಬಹಳ ವಿರಳ ಸ್ಥಿತಿಯಲ್ಲಿಯೇ ಇರಲೊಲ್ಲದೇಕೆ, ಅದು ಇನ್ನೂ ಒಂದಿಲ್ಲೊಂದು ರೂಪದಲ್ಲಿ ಉಳಿದಿರುತ್ತದೆ. ಕೆಲವು ಋಷಿಗಳು (ಇದೇ ಕಾರಣದಿಂದಲೇ) ‘ಅಹಂ’ಕಾರವು ದೇವರೆಂದು ಹೇಳಿದ್ದಾರೆ. ಇನ್ನು ಕೆಲವರು, ತಮ್ಮ ಅನುಭವದಿಂದ ಹೇಳುವಂತೆ ಶರೀರವು ಇರುವವರೆಗೆ ಮುಕ್ತಿಯು ಅಸಾಧ್ಯವೆಂದು ಪ್ರತಿಪಾದಿಸಿದ್ದಾರೆ.
ಮಾನವನ ಉನ್ನತತರ ಪ್ರಗತಿಗೆ ಒಂದು ಪೂರ್ಣ ವಿರಾಮ ಕೊಡಲಾಗಿದೆಯೋ ಎಂದು ತೋರುತ್ತದೆ. ಆದರೆ ಕೇಂದ್ರ ಮಂಡಲವನ್ನು ಅನಾವರಣಗೊಳಿಸಿದವರು ಇದಕ್ಕೂ ಮುಂದಿನ ಬಾಗಿಲನ್ನು ತೆರೆದಿದ್ದಾರೆ. ಈಗ ಮಾನವನ ಉನ್ನತ ಮುನ್ನಡೆಗೆ ಯಾವ ಪರಿಮಿತಿಯೂ ಉಳಿದಿಲ್ಲ. ಅನಂತತೆಯ ವಿಶಾಲ ಸಾಗರದಲ್ಲಿ ಅವನು ಈಜುತ್ತ ಈಜುತ್ತಲೇ ಇರಬಹುದು. ಅವನು ಕೇಂದ್ರಕ್ಕೆ ತಲುಪುವಷ್ಟೇ ಹತ್ತಿರ ಹತ್ತಿರ ಹೋಗಬಹುದು. ಏಕೆಂದರೆ, ಪ್ರಾಣಾಹುತಿಯ ಶಕ್ತಿಯಿಂದ ಇದನ್ನು ಒಂದು ಅದ್ಭುತವಾದ ರೀತಿಯಲ್ಲಿ ಸಾಧಿಸಬಹುದು. ಮಾರ್ಗವನ್ನು ಸುಗಮ ಹಾಗೂ ಕ್ರಮಾಗತಗೊಳಿಸುವ ಮೂಲಕ, ಸಂಪೂರ್ಣ ಕುಸಿತವಾಗುವುದನ್ನು ತಡೆಯಬಹುದು, ಹಾಗೂ ಹಿಂದಕ್ಕೆ ಜಾರುವುದನ್ನು ಕೂಡ, ಪ್ರಾಣಾಹುತಿಯ ಮುಂದೆ ತಳ್ಳುವ ಶಕ್ತಿಯ ಮೂಲಕ ಪ್ರತಿಬಂಧಿಸಬಹುದು.

ಮುಂಬರುವ ಜಗತ್ತನ್ನು ರೂಪಿಸುವುದರಲ್ಲಿ ಶ್ರೀರಾಮಚಂದ್ರ ಮಿಷನ್ನಿಗೆ ಒಂದು ಮಹತ್ತ್ವದ ಪಾತ್ರವನ್ನು ವಹಿಸಬೇಕಾಗಿದೆ. ಭವಿಷ್ಯದ ಮಹಾಕಾರ್ಯಕ್ಕಾಗಿ ಅದರ ಸದಸ್ಯರು ತರಬೇತಿ ಪಡೆಯುತ್ತಿದ್ದಾರೆ. ವರ್ತಮಾನ ಜಗತ್ತು ಭಯಂಕರ ವಿನಾಶಕ ಅಸ್ತ್ರಗಳ ಸಂಶೋಧನೆಯಿಂದಾಗಿ ಭಯಾವೃತವಾಗಿದೆ. ಒಂದು ಕಡೆ ಒಬ್ಬನು ವಿಧ್ವಂಸಕ ಶಕ್ತಿಯ ತಂತ್ರಜ್ಞಾನ ಹೊಂದಿರುವುದಕ್ಕಾಗಿ ಗರ್ವಪಟ್ಟರೆ, ಇನ್ನೊಂದೆಡೆಗೆ ತನ್ನ ಶತ್ರುಗಳು ಕೂಡ ಅದನ್ನು ಹೊಂದಿರುವುದನ್ನು ತಿಳಿದು ಅತಿಯಾಗಿ ಅಂಜಿಕೊಂಡಿದ್ದಾನೆ. ಆದರೆ, ಈ ಭೌತಿಕ ಶಕ್ತಿಯ ಎದುರಿನಲ್ಲಿ ಒಂದು ಮಗುವಿನ ಆಟಿಕೆಯಿದ್ದಂತೆ ಎಂಬುದನ್ನು ನಾವು ಬಲ್ಲೆವು. ಈ ಆಧ್ಯಾತ್ಮಿಕ ಶಕ್ತಿಯ ಮೇಲೆ ಪ್ರಭುತ್ವ ಹೊಂದುವುದಕ್ಕೆ ಆಮಂತ್ರಣವನ್ನು ನಮ್ಮ ಸಂಸ್ಥೆಯು ಪ್ರತಿಯೊಬ್ಬರಿಗೂ ನೀಡುತ್ತದೆ. ಈ ಶಕ್ತಿಯು, ಅಂದರೆ, ಆಧ್ಯಾತ್ಮಿಕ ಶಕ್ತಿಯು ಭೌತವಾದಿಗಳಿಗೆ ಗೊತ್ತಿರುವ ವಿನಾಶಕ ಶಕ್ತಿಗಿಂತ ಬಹುಪಟ್ಟು ಮಹತ್ತಾದುದಲ್ಲದೆ, ಅದು ಮಹಾ ರಚನಾತ್ಮಕ ಮತ್ತು ಸೃಜನಾತ್ಮಕ ಶಕ್ತಿಯೂ ಆಗಿದೆ. ಸಹಜಮಾರ್ಗದಲ್ಲಿ, ಅಭ್ಯಾಸದ ಪ್ರಾರಂಭದಿಂದಲೇ ಈ ಚಿತ್ ಶಕ್ತಿಯ ಮೇಲೆ ಪ್ರಭುತ್ವ, ನಿಯಂತ್ರಣ ಅಥವಾ ಯೋಗ್ಯ ಕ್ರಮಬದ್ದ ನಿರ್ದೇಶನ ಮಾಡುವ ಶಕ್ತಿಯು ಪ್ರಾಪ್ತವಾಗುವುದು. ಪ್ರಕೃತಿಯ ಅಗತ್ಯತೆಗಳಿಗೆ ಅನುಗುಣವಾಗಿ ಅದನ್ನು ಉಪಯೋಗಿಸುವುದನ್ನು ನಮಗೆ ಬಿಡಲಾಗಿದೆ.

ಈಗ ನಮ್ಮ ಗುರುಮಹಾರಾಜರು ಪ್ರಾರಂಭಿಸಿದ ಕಾರ್ಯವು ಬೆಳಕಿಗೆ ಬರುವಂತೆ ಹಾಗೂ ಈ ಜಗತ್ತು ವಿನಾಶದಿಂದ ರಕ್ಷಿಸಲ್ಪಡುವಂತೆ ಈ ಕ್ಷೇತ್ರದಲ್ಲಿ ಈಗ ಸಂಶೋಧನೆಯನ್ನು ಮುಂದುವರಿಸುವುದು ಹಾಗೂ ಸಾಕಷ್ಟು ಮಾಹಿತಿ ಒದಗಿಸುವುದು ನಮ್ಮ ಕರ್ತವ್ಯವಾಗುವುದು. ಅವರಿಗೆ ನಾವು ಸಲ್ಲಿಸಬಹುದಾದ ಗೌರವವೆಂದರೆ, ಕನಿಷ್ಠ ಪಕ್ಷ ನಾವು ಅವರಂತಾಗುವ ದೃಢ ನಿರ್ಧಾರ ಮಾಡುವುದಾಗಿದೆ. ತಮ್ಮ ಜೀವಂತ ನಿದರ್ಶನವನ್ನು ನಮ್ಮೆದುರಿಗೆ ಇಡುವ ಮೂಲಕ, ಅತ್ಯುಚ್ಚ ಸ್ಥಿತಿಯನ್ನು ಅತ್ಯಲ್ಪ ಸಮಯದಲ್ಲಿ ಪಡೆಯಲು ಎಲ್ಲರಿಗೂ ಸಾಧ್ಯವಿದೆ ಎಂದು ಅವರು ನಮಗೆ ಭರವಸೆ ಕೊಟ್ಟಿದ್ದಾರೆ.

ಅವರ ಪ್ರಕಾಶವು ಸದಾ ಮಾರ್ಗದರ್ಶನ ಮಾಡಿ ನಮ್ಮನ್ನು ಮುನ್ನಡೆಸಲಿ. ತಥಾಸ್ತು !

[ಸಹಜ ಮಾರ್ಗ ಪತ್ರಿಕೆ ನಂ. 1, 1961]