(ಮೇ೬,೧೯೬೯ರಂದುನೀಡಿದಸಂದೇಶ)
ಇಂದಿನ ಜಗತ್ತು ಒಂದು ರೀತಿಯ ಅಶಾಂತ ಹಾಗೂ ಅವ್ಯವಸ್ಥೆಯ ಸ್ಥಿತಿಯಲ್ಲಿದೆ. ಪ್ರತಿಯೋರ್ವನೂ ಶಾಂತಿಗೋಸ್ಕರ ರೋದಿಸುತ್ತಿರುವಂತೆ ತೋರುತ್ತದೆ. ಆದರೆ ಶಾಂತಿಯನ್ನು ಪ್ರಸ್ತಾಪಿಸುವ ಎಲ್ಲ ಪ್ರಯತ್ನಗಳೂ ವಿಫಲಗೊಂಡಂತೆ ಕಾಣುತ್ತದೆ. ಕಾರಣವೆಂದರೆ ಈ ಪ್ರಯತ್ನಗಳೆಲ್ಲವೂ ಕೇವಲ ಬಾಹ್ಯಸ್ವರೂಪದವಾಗಿದ್ದು, ಹೊರಪದರನ್ನುಮಾತ್ರ ಮುಟ್ಟುವಂಥವುಗಳಾಗಿವೆ. ನಿಜವೆಂದರೆ, ಈ ಸಮಸ್ಯೆಯು ಸಾಮಾನ್ಯವಾಗಿ ಜಗತ್ತಿಗೆ ಸಂಬಂಧಿಸಿದ್ದೆಂಬುದು ದೂರದ ಮಾತು, ವಾಸ್ತವಿಕವಾಗಿ, ಅದು ಪ್ರಪ್ರಥಮವಾಗಿ ವ್ಯಕ್ತಿಗತ ಸಮಸ್ಯೆ, – ಆನಂತರ ಬರುವುದು ಸಮಾಜ. ಹಾಗಾಗಿ, ಅದನ್ನು ಅದೇ ಕ್ರಮದಲ್ಲಿ ಬಗೆಹರಿಸುವುದು ಆವಶ್ಯಕ. ವಿಶ್ವಶಾಂತಿಯು ವ್ಯಕ್ತಿಗತ ಶಾಂತಿಯೊಂದಿಗೆ ನಿಕಟವಾಗಿ ಸಂಬಂಧಿತವಾಗಿದ್ದುದು. ಅದಕ್ಕೇ, ಯಾರೇ ಆಗಲಿ, ತನ್ನ ಮನಸ್ಸಿನ ಆಂತರಿಕ ಸ್ಥಿತಿಯನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕು. ಮನುಷ್ಯನ ಮನಸ್ಸನ್ನು ಶಾಂತಿ ಹಾಗೂ ಸುವ್ಯವಸ್ಥೆಯ ಸ್ಥಿತಿಗೆ ತಂದುದಾದರೆ, ಬಾಹ್ಯ ಜಗತ್ತಿನ ಪ್ರತಿಯೊಂದೂ, ಅದೇ ಬಣ್ಣ ತಾಳಿ ಸುವ್ಯವಸ್ಥೆಗೆ ಬರುವುದು. ಆದರೆ ಜಗತ್ತು ತನ್ನ ನಿಜವಾದ ತಳಹದಿಯನ್ನು ಕಳೆದುಕೊಂಡಿರುವುದು ದುಃಖಕರ. ಮತ್ತೆ, ಅದನ್ನು ಪುನಃ ಸ್ಥಾಪಿಸಲು ವ್ಯಷ್ಟಿ ಮನಸ್ಸಿನಲ್ಲಿ ಶಾಂತಿ ಮತ್ತು ಸಮಾಧಾನಗಳನ್ನು ವರ್ಧಿಸುವಂಥ ಸಾಧನಗಳನ್ನು ಅನುಸರಿಸುವುದು ಆವಶ್ಯಕ. ಈ ಉದ್ದೇಶಕ್ಕೋಸ್ಕರ ನಾವು ಮಾಡಬೇಕಾದುದೆಂದರೆ, ವ್ಯಕ್ತಿಯ ಮನಃಪ್ರವೃತ್ತಿಯಲ್ಲಿ ಸೂಕ್ತವಾದ ಕ್ರಮ ಏರ್ಪಡುವಂತೆ ಮಾಡಬೇಕು; ಅದೇ, ನಿಜಾರ್ಥದಲ್ಲಿ ಮನಸ್ಸಿನ ಯೋಗ್ಯ ರೂಪಣ ಮತ್ತು ನಿಯಂತ್ರಣವಾಗಿ ಪರಿಣಮಿಸುತ್ತದೆ. ವ್ಯಕ್ತಿಗತ ಮನಸ್ಸು ಪ್ರಗತಿ ಹೊಂದಿ ವಿಶ್ವಮಾನಸದ ಮಟ್ಟಕ್ಕೇರಿದಾಗ ಇದು ಸಾಧ್ಯವಾಗುವುದು. ಕೊಂಚ ಯೋಚಿಸಿ ನೋಡಿ, ಆಗ ಸಮಸ್ಯೆಯೆಂಬುದೇ ಉಳಿಯದು. ಸದ್ಯ ಸ್ಥಿತಿಯೆಂದರೆ, ತಮ್ಮೊಳಗೇ ಶಾಂತಿ ಮತ್ತು ಸಮಚಿತ್ತದ ಕೊರತೆಯನ್ನು ಅನುಭವಿಸುತ್ತಿರುವಂಥವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಹಾಸ್ಯಾಸ್ಪದವಲ್ಲವೆ? ಆಧ್ಯಾತ್ಮಿಕ ಜೀವನ ಶೈಲಿಯನ್ನು ಅನುಸರಿಸುವುದೊಂದೇ, ಮನುಕುಲಕ್ಕಿರುವ ಏಕೈಕ ಮಾರ್ಗ. ದುರ್ದೈವದಿಂದ ಅದೇ ಕಾಣೆಯಾಗಿದೆ. ಈಯೆಲ್ಲ ಅವ್ಯವಸ್ಥೆಯುಂಟಾಗಲು ಅದುವೇ ಕಾರಣ.
ಈ ಉದ್ದೇಶ ಸಾಧನೆಗೆ ಅನೇಕಾನೇಕ ಸಾಧನೋಪಾಯಗಳೂ, ಅನುಷ್ಠಾನ ಕ್ರಮಗಳೂ ಹಿಂದೆಯೂ ಸೂಚಿಸಲ್ಪಟ್ಟಿದ್ದವು. ಇಂದೂ ಕೂಡ ಸೂಚಿಸಲ್ಪಡುತ್ತಿವೆ. ಆದರೆ ಬಹುತೇಕ ಎಲ್ಲೆಡೆಯೂ, ಬಹುಮುಖ್ಯವಾದ ಲಕ್ಷಣವು ಲುಪ್ತವಾಗಿದ್ದುದು ಕಂಡು ಬರುತ್ತದೆ. ಸಾಧನ ಪದ್ಧತಿ ಯಾವುದೇ ಆಗಿರಲಿ, ಮಾನಸಿಕ ಪ್ರವೃತ್ತಿಗಳನ್ನು ಸೂಕ್ತವಾಗಿ ರೂಪಿಸ ಬೇಕಾದುದು ಅಲ್ಲಿರಬೇಕಾದ ಪ್ರಪ್ರಥಮ ಅಂಶ, ಹೀಗೆ, ಮನಸ್ಸಿನ ನಿಯಂತ್ರಣವೇ ಎಲ್ಲ ಆಧ್ಯಾತ್ಮಿಕ ಸಾಧನೆಯ ತಳಹದಿಯಾಗಿರಬೇಕು. ತನ್ನ ಆದಿ ಮಸ್ಥಿತಿಯಲ್ಲಿ ಪೂರ್ಣಶುದ್ಧವೂ, ನಿಯಂತ್ರಿತವೂ ಆಗಿದ್ದ ಮನಸ್ಸು, ನಮ್ಮ ತಪ್ಪು ರೀತಿಗಳಿಂದ ಹಾಗೂ ಕಾರ್ಯಗಳಿಂದ ಕೆಟ್ಟು ಹೋಗಿ, ಕಲುಷಿತಗೊಂಡಿದೆ. ಅದು ತನ್ನ ಮೂಲ ಸ್ಥಿತಿಯನ್ನು ಮತ್ತೆ ಪಡೆಯುವಂತೆ ಸರಿಪಡಿಸಬೇಕಾಗಿದೆ.
ಬಹು ಮಟ್ಟಿಗೆ, ಎಲ್ಲ ಸಾಧನಾ ಪದ್ಧತಿಗಳಲ್ಲಿಯೂ ಎರಡು ಪಾರ್ಶ್ವಗಳಿರುತ್ತವೆ. ಒಂದು- ಸ್ವಯಂಸಾಧನೆ(ಅಭ್ಯಾಸ), ಮತ್ತೊಂದು ಗುರುವಿನ ಸಹಾಯ ಮತ್ತು ಆಸರೆ. ಅಗತ್ಯವಾದ ಅಂತಃ ಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದರೆ ಸ್ವಪ್ರಯತ್ನ(ಅಭ್ಯಾಸ)ವೊಂದೇ ಸರ್ವಸ್ವವೂ ಅಲ್ಲ, ಅಥವಾ ಪರ್ಯಾಪ್ತವೂ ಅಲ್ಲ. ಅದು ದೈವೀ ಕೃಪೆಯಿಂದ ಪೂರಣಗೊಳ್ಳಬೇಕು ; ಉದ್ದೇಶ ಸಾಧನೆಗೆ ಅತ್ಯವಶ್ಯವಾಗಿಬೇಕಾದುದು ಅದೇ ಸೈ.
ದೈವೀ ಅನುಗ್ರಹವು ಅಂತರಂಗದೊಳಕ್ಕೆ ಹರಿದು ಬರುವುದು ಕೇವಲ ಗುರುವಿನ ಮಾಧ್ಯಮದ ಮೂಲಕ ಮಾತ್ರ ಸಾಧ್ಯ. ಹೀಗೆ, ಅಭ್ಯಾಸಿಯು ಮನಃಪೂರ್ವಕವಾಗಿ ಬೇಡಿಕೊಳ್ಳಬೇಕಾದ ನಿಜವಾದ ವಸ್ತುವೆಂದರೆ, ಗುರುವಿನ ಮೂಲಕ ಹರಿದು ಬರುವ ಭಗವತೃಪೆ. ಆ ಅನುಗ್ರಹಕ್ಕೆ ವ್ಯಕ್ತಿಯನ್ನುಅರ್ಹನನ್ನಾಗಿ ಮಾಡಲು ಸ್ವಪ್ರಯತ್ನ(ಅಭ್ಯಾಸ)ವು ಒಂದು ಸಾಧನ ಮಾತ್ರ.
ನಾನು ಇಲ್ಲಿ ಪರಂಪರಾಗತ “ಗುರುತ್ವ”ದ ಭಾವನೆಯನ್ನು ಪ್ರತಿಪಾದಿಸಲು ಹೊರಟಿರುವೆನೆಂದು ಇದರ ಅರ್ಥವಲ್ಲ. ದೈವೀ ಅನುಗ್ರಹವನ್ನು ಪ್ರಾಣಾಹುತಿ ಯೌಗಿಕ ಪ್ರಕ್ರಿಯೆಯ ಮೂಲಕ ಸಂವಹಿಸಲು ಸಮರ್ಥನಾದವನೇ ‘ಗುರು’ ವೆನಿಸಲು ಅರ್ಹನು. ಅಂತಹ ಅರ್ಹ ಗುರುವನ್ನು ಆರಿಸಿಕೊಳ್ಳುವುದು ನಿಜವಾಗಿಯೂ ಒಂದು ಸಮಸ್ಯೆಯೇ ಸರಿ. ಯೋಗ್ಯ ಗುರುವನ್ನು ನಿರ್ಣಯಿಸಿಕೊಳ್ಳುವ ಒಂದು ಸರಳ ವಿಧಾನವನ್ನು ನಾನಿಲ್ಲಿ ಸೂಚಿಸಬಯಸುತ್ತೇನೆ. ನೀವು ಅಂಥ ಯಾರಾದರೊಬ್ಬರ ಸಂಪರ್ಕದಲ್ಲಿ ಬಂದಾಗ, ಅವರ ಸಹವಾಸವು ನಿಮ್ಮಲ್ಲಿ ಶಾಂತಿ ಹಾಗೂ ಸಮಾಧಾನದ ಭಾವನೆಗಳನ್ನುಉಂಟುಮಾಡವುದೋ ಅಥವಾ ಇಲ್ಲವೋ, ಹಾಗೂ, ಕನಿಷ್ಟಪಕ್ಷ, ನಿಮ್ಮ ಮನಸ್ಸಿನ ಹೊಯ್ದಾಟದ ಪ್ರವೃತ್ತಿಗಳು ಮನಸ್ಸಿನ ಮೇಲೆ ಯಾವುದೇ ಭಾರ ಅಥವಾ ಒತ್ತಡವಿರದ ರೀತಿಯಲ್ಲಿ, ಶಾಂತಗೊಳ್ಳುವುವೋ ಎಂದು ತಿಳಿಯಲು ಪ್ರಯತ್ನಿಸಿ. ಹಾಗೆ ಆದ ಪಕ್ಷದಲ್ಲಿ, ನಿಮ್ಮ ಜೀವನದ ಸಮಸ್ಯೆಯನ್ನು ಪರಿಹರಿಸಲು ಅಂಥವನು ಯೋಗ್ಯವ್ಯಕ್ತಿಯಾಗಬಲ್ಲನೆಂದು ನೀವುನಿರ್ಧರಿಸಿಕೊಳ್ಳಬಹುದು.
‘ಸಹಜಮಾರ್ಗ’ ಪದ್ದತಿಯಲ್ಲಿ, ಪ್ರಾಣಾಹುತಿಯ ಪ್ರಕ್ರಿಯೆಯ ಮೂಲಕ ದೈವಾನುಗ್ರಹವನ್ನು ಅಭ್ಯಾಸಿಯ ನಿರ್ದೇಶಿಸಲಾಗುತ್ತದೆ. ವಾಸ್ತವಿಕವಾಗಿ, ಅಭ್ಯಾಸಿಯಲ್ಲಿರುವ ತೊಡಕುಗಳನ್ನು ನಿವಾರಿಸಿ, ಅವನ ಆಧ್ಯಾತ್ಮಿಕ ಉನ್ನತಿಗೋಸ್ಕರ, ಪ್ರಾಣಾಹುತಿಯು ಅತ್ಯಲ್ಪ ಕಾಲಾವಧಿಯಲ್ಲಿಯೇ ಏನನ್ನು ಮಾಡಬಲ್ಲುದೋ, ಅದನ್ನು ಸ್ವಯಂಪ್ರಯತ್ನದಿಂದ ಒಂದು ದಶಕದಲ್ಲಿ ಸಹಸಾಧಿಸಲು ಸಾಧ್ಯವಾಗದು. ಪುಸ್ತಕಗಳಲ್ಲಿ ಹೇಳಿದ ಪ್ರಾಚೀನ ಪದ್ದತಿಗಳಿಗನುಸಾರವಾಗಿ,ಸ್ವತಂತ್ರವಾಗಿ ಧ್ಯಾನಾಭ್ಯಾಸವನ್ನು ಮಾಡಿದರೆ, ಅಪಾಯಕರ ಕ್ಲಿಷ್ಟತೆಗಳು ಮೈದೋರುವುವು. ಪ್ರಾಚೀನ ಪದ್ದತಿಯಲ್ಲಿ, ಮನಸ್ಸಿನ ಕೊನೆಯಿಲ್ಲದ ಚಟುವಟಿಕೆಗಳನ್ನು ಅದುಮಿಡಲು, ಅಭ್ಯಾಸಿಯು ಮನಸ್ಸಿನೊಡನೆ ಹೆಣಗಾಡುತ್ತಲೇ ಇರಬೇಕಾಗುತ್ತದೆ. ಇದೇ ಸದಾ ಕಾಲವೂ ಮುಂದುವರಿಯುವುದರಿಂದ, ವಾಸ್ತವದಲ್ಲಿ ‘ಧ್ಯಾನ’ವೆಂಬುದೇ ನಡೆಯುವುದಿಲ್ಲ. ಮತ್ತು ಧ್ಯಾನಕ್ಕೆಂದು ಮೀಸಲಾಗಿಟ್ಟ ವೇಳೆಯೆಲ್ಲ ಯೋಚನೆ ಮತ್ತು ಪ್ರವೃತ್ತಿಗಳನ್ನು ಹತ್ತಿಕ್ಕುವ ಹೆಣಗಾಟದಲ್ಲಿಯೇ ಕಳೆದುಹೋಗುತ್ತದೆ.
ಈ ದೊಡ್ಡ ಅಡಚಣೆಯನ್ನು ದಾಟಲು, ಸಹಜಮಾರ್ಗ ಪದ್ದತಿಯಲ್ಲಿ, ಯಾರು ಇಂದ್ರಿಯ, ಮನಸ್ಸು ಮತ್ತು, ಪ್ರವೃತ್ತಿಗಳನ್ನು ಸಂಪೂರ್ಣವಾಗಿ ಶಿಸ್ತುಮತ್ತುನಿಯಂತ್ರಣಕ್ಕೆ ಒಳಪಡಿಸಿ ಕೊಂಡಿರುವನೋ ಅಂಥ ಗುರುವಿನಶಕ್ತಿಯೊಂದಿಗೆ ಅಭ್ಯಾಸಿಯು ಸುಮ್ಮನೆ ತನ್ನನ್ನು ತಾನು ಜೋಡಿಸಿಕೊಳ್ಳಬೇಕು. ಆಗ, ಗುರುವಿನ ಶಕ್ತಿಯು ಹರಿಯಲಾರಂಭಿಸಿ, ಅಭ್ಯಾಸಿಯ ಮನಃ ಪ್ರವೃತ್ತಿಗಳನ್ನು ನಿಯಂತ್ರಿಸತೊಡಗುತ್ತದೆ. ಹೀಗೆ, ನಿಶ್ಚಿತ ಯಶಸ್ಸಿಗೆ, ಗುರುವಿನ ಸಹಾಯವು ಅತ್ಯಂತ ಮಹತ್ವದ್ದಾಗಿದೆ.
ಸಾಮಾನ್ಯವಾಗಿ, ಜನರು ಆರಂಭದಲ್ಲಿಯೇ ಮನಸ್ಸಿನ ಚಟುವಟಿಕೆಗಳನ್ನು ನಿಲ್ಲಿಸುವ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಯಾವ ಮಹಾಶಕ್ತಿಯು ಇಂದ್ರಿಯಗಳ ಪರಿಧಿಯ ಆಚೆಗಿದೆಯೋ, ಅರ್ಥಾತ್, ಯಾವನು ಅವುಗಳ ಮಿತಿಯನ್ನು ದಾಟಿ ಹೋಗಿದ್ದಾನೋ, ಅಂಥವನೊಂದಿಗೆ ನಮ್ಮನ್ನು ನಾವು ಜೋಡಿಸಿಕೊಂಡರೆ, ಇದನ್ನು ಅತ್ಯಂತ ಸಮುಚಿತ ರೀತಿಯಲ್ಲಿ ಸಾಧಿಸಬಹುದು. ಪ್ರೇಮ-ಭಕ್ತಿಗಳೊಂದಿಗೆ ಅಂಥವನೊಂದಿಗೆ ನಮ್ಮನ್ನು ಜೋಡಿಸಿಕೊಂಡು, ಧ್ಯಾನವನ್ನು ಸರಿಯಾದ ರೀತಿಯಲ್ಲಿ ಮಾಡುತ್ತ ಹೋದರೆ, ಅದೇ ರೀತಿ ನಾವು ಪರಿವರ್ತನೆ ಹೊಂದಲು ಆರಂಭಿಸುತ್ತೇವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮನ್ನು ಪರಿಮಿತಿ ಹಾಗೂ ಮಾನಸಿಕ ಉದ್ವೇಗಗಳಿಗೆ ಕಟ್ಟಿ ಹಾಕಿರುವ ಬಂಧನಗಳನ್ನು ಒಂದೊಂದಾಗಿ ಕಡಿದು ಹಾಕಬೇಕು.
ದೈವೀ ಅನುಗ್ರಹವು ಅವತರಣಗೊಂಡು, ಜಗತ್ತಿಗೆ ಹಾಗೂ ಮಾನವಕುಲಕ್ಕೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ತರಲಿ.
***