ಭಾರತವು ಋಷಿ-ಮುನಿಗಳ ಜನ್ಮಸ್ಥಾನವಾಗಿದೆ. ಬ್ರಿಟಿಷರ ಆಡಳಿತ ಬರುವುದಕ್ಕಿಂತ ಮೊದಲು ಈ ದೇಶದಲ್ಲಿ ಚಿಂತನದ ಮತ್ತು ಸಂಸ್ಕೃತಿಯ ಅದ್ಭುತ ಸ್ವಾತಂತ್ರ್ಯ ಪ್ರಚಲಿತವಿತ್ತು. ಆ ಆಳಿಕೆಯ ಮುಕ್ತಾಯದ ಕಾಲದಿಂದ ಹಾಗೂ ಅದರ ಸಮಾಪ್ತಿಯ ನಂತರ, ಈ ಮಹತ್ತಾದ ದೇಶದ ವಿಶಿಷ್ಟ ಗುಣಧರ್ಮ ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಜ್ಞಾನಿಗಳೂ ದೂರದೃಷ್ಟಿಯುಳ್ಳವರೂ ಸೆಣಸಾಡುತ್ತಿದ್ದಾರೆ.
ನಮ್ಮ ದೇಶದ ಮಧ್ಯಕಾಲೀನ ಇತಿಹಾಸದ ಅವಧಿಯಲ್ಲಿ ಕೆಲವು ವಿಲಕ್ಷಣ ಘಟನೆಗಳು ಜರುಗಿದವು. ಅಂತರ್ಗತ ಸ್ವಾತಂತ್ರ್ಯವನ್ನು ಸಂರಕ್ಷಿಸುವುದಕ್ಕಾಗಿ ನಮ್ಮ ಪೂರ್ವಜರು ವರ್ಗೀಕರಣದ ಮತ್ತು ಪ್ರತ್ಯೇಕತೆಯ ವಿಶಿಷ್ಟ ಪದ್ಧತಿಗಳನ್ನು ಅಂಗೀಕರಿಸಿದರು. ಆಡಳಿತ ವರ್ಗದ ಆಕ್ರಮಣಗಳು ಅವುಗಳ ರೀತಿಗಳನ್ನು ಬಹಳಷ್ಟು ಪ್ರಭಾವಿತಗೊಳಿಸಿದವು.
ಈಗ, ನಮ್ಮಲ್ಲಿ ಆರು ಸಾಂಪ್ರದಾಯಿಕ ದರ್ಶನಗಳಿವೆ. ಗೌತಮರ ನ್ಯಾಯ, ಕಣಾದರ ವೈಶೇಷಿಕ, ಕಪಿಲರ ಸಾಂಖ್ಯ, ಪತಂಜಲಿಗಳ ಯೋಗ, ಜೈಮಿನಿ ಋಷಿಯ ಮೀಮಾಂಸೆ ಮತ್ತು ವ್ಯಾಸರ ವೇದಾಂತ – ಇವೇ ಆ ಆರು ದರ್ಶನಗಳು. ಇವುಗಳಲ್ಲಿ ಕೊನೆಯದು ಅನೇಕ ವ್ಯಾಸರ – ಜ್ಞಾನಿಗಳ ಹಾಗೂ ಸಂತರ ಕಲ್ಪನೆ ಮತ್ತು ಅಭಿರುಚಿಗಳನ್ನು ಆಕರ್ಷಿಸಿ ಹಿಡಿದಿತ್ತು. ಅದರಲ್ಲಿ ಅವರು ಬೌದ್ಧಮತ, ಜೈನಮತ ಮತ್ತು ಭೌತಿಕ ವಾದಗಳ ತೀವ್ರ ದಾಳಿಯಿಂದ ನಮ್ಮ ವಿಚಾರ ಸ್ವಾತಂತ್ರ್ಯಮತ್ತು ಸಂಸ್ಕೃತಿಗಳ ರಕ್ಷಣೆಗೆ ಒಂದು ಆಶ್ರಯಸ್ಥಾನ ಮತ್ತು ಭದ್ರಕೋಟೆಯನ್ನು ಕಂಡುಕೊಂಡರು. ಬೌದ್ಧ ಹಾಗೂ ಜೈನ ಮತಗಳನ್ನು ಹಿಂದೂ ಮತದಲ್ಲಿ ಒಳಗೊಳ್ಳಲು ಸಾಧ್ಯವಾಯಿತಾದರೂ, ಅವರಿಗೆ ಹೊಸ ಮತಗಳಾದ ಪವಿತ್ರ ಕುರಾನ್‌ದ ಇಸ್ಲಾಮ್ ಮತ್ತು ಬೈಬಲ್ಲಿನ ಕ್ರೈಸ್ತಮತಗಳನ್ನು ಎದುರಿಸಬೇಕಾಗಿ ಬಂದಾಗ, ‘ವೇದಗಳು’ ಹಾಗೂ ವ್ಯಾಸರ ‘ವೇದಾಂತ ಸೂತ್ರ’ಗಳನ್ನು ರಕ್ಷಿಸಿಕೊಳ್ಳಬೇಕಾದ ಬಲವಂತಕ್ಕೆ ಈಡಾದರು. ವೈದಿಕ ಕರ್ಮಕಾಂಡದ ಆಚರಣೆಗಳು ಹಾಗೂ ತಾಂತ್ರಿಕ ಆಚರಣೆಗಳು ಪವಿತ್ರ ಧರ್ಮಯುದ್ಧ’ ಮಾಡುವವರ ಖಡ್ಗ ಮತ್ತು ಗುಂಡುಗಳ ವಿರುದ್ಧ ಪರಿಣಾಮಕಾರಿ ರಕ್ಷಾ- ಕವಚಗಳಾದವು.
ವೇದಾಂತವನ್ನು ಸಾಮಾನ್ಯ ಜನರಿಗೆ ಅರ್ಥವಿವರಣೆ ಮಾಡುವುದರಲ್ಲಿ ಶಂಕರರು ಮೊದಲಿಗರಾಗಿದ್ದರು; ಹಾಗೂ ರಾಮಾನುಜರು ಮತ್ತು ಆನಂದತೀರ್ಥರು ಹಾಗೂ ಇನ್ನೂ ಅನೇಕ ಪ್ರತಿಭಾವಂತ ಸಂತರು ವೇದಾಂತದ ಚೌಕಟ್ಟಿನಲ್ಲಿ ಚಿಂತನ- ದರ್ಶನಗಳನ್ನು ಕಂಡರು. ಈಗ ನಮಗೆ ವೇದಗಳು, ಭಾಗವತ, ಭಗವದ್ಗೀತೆ ಹಾಗೂ ವೇದಾಂತ ಸೂತ್ರಗಳು ತಮ್ಮ ಪ್ರಮಾಣಗ್ರಂಥಗಳೆಂದು ಸಾರುವ ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ದ್ವೈತಾದ್ವೈತ, ಅಚಿಂತ್ಯ ಮುಂತಾದ ಅನೇಕ ಚಿಂತನ ದರ್ಶನಗಳಿವೆ.
ವೈದಿಕ ಸಂಸ್ಕೃತದ ಜ್ಞಾನ, ಮತ್ತು ಮೇಲೆ ತಿಳಿಸಲಾದ ಪ್ರಮಾಣಗಳ ಜ್ಞಾನವು ಯಾವುದೇ ಹೊಸ ದರ್ಶನವು ಸ್ವೀಕೃತವಾಗಲು ಆವಶ್ಯಕವೋ ಎಂಬಂತೆ ಕಂಡಿತು. ಯಾವುದೇ ಹೊಸ ಪಂಥವು ಪ್ರಸ್ಥಾನತ್ರಯಗಳ ಒಂದು ಹೊಸ ವ್ಯಾಖ್ಯಾನ (ಭಾಷ್ಯ) ವಾಗಿರಬೇಕಾದುದು ಅನಿವಾರ್ಯವಾಗಿತ್ತು, ಅದಿಲ್ಲವಾದರೆ ಅದು ಪಂಡಿತರುಗಳಿಂದ ಮಾನ್ಯತೆ ಪಡೆಯುತ್ತಿರಲಿಲ್ಲ.
ಕಬೀರ ಅಥವಾ ನಾನಕರಂತಹ ಸಂತರು ಮುಂದೆ ಬಂದು ಒಂದು ಹೊಸ ವಿಚಾರಪಂಥವನ್ನು ಸಾರಿದರೆ,ಪುರೋಹಿತ-ಪಂಡಿತರು ಅದನ್ನು ಅಸಾಂಪ್ರದಾಯಿಕ’ ಎಂದು ಹೆಸರಿಸುವಷ್ಟು ಚತುರರಾಗಿದ್ದರು. ಯಾರು ಪಂಡಿತರುಗಳ ಪರಮಾಧಿಪತ್ಯವನ್ನು ಸ್ವೀಕರಿಸುತ್ತಿದ್ದರೋ ಅವರು ಭಕ್ತರಾಗಿ ಉಳಿಯುತ್ತಿದ್ದರು; ಮತ್ತು ಯಾರು ಇದಕ್ಕೆ ಹೊರತಾಗಿ ಉಳಿಯುತ್ತಿದ್ದರೋ ಅವರು ಪ್ರತ್ಯೇಕ ಗುಂಪು ಮಾಡಿಕೊಂಡು ಹೊಸ ಪಂಥವನ್ನು ಪ್ರಾರಂಭಿಸುತ್ತಿದ್ದರು. ಈ ಮೇಲಿನ ಮಾತಿಗೆ ನಿದರ್ಶನವಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಭಾಗವತವನ್ನು ಆಧರಿಸಿದ ಭಕ್ತಿಪಂಥದ ಸಂಸ್ಥಾಪಕರೆಂದು ಅವರನ್ನು ಹೆಸರಿಸಲಾಗಿದೆ.
ನಮ್ಮ ದೇಶದಲ್ಲಿ ಹತ್ತೊಂಬತ್ತನೆಯ ಶತಮಾನವು ಗಮನಾರ್ಹರಾದ ಚಿಂತಕರು, ಸಂತರು, ಋಷಿಗಳು ಹಾಗೂ ಮುನಿಗಳಿಂದ ತುಂಬಿತ್ತು. ಬ್ರಿಟಿಷ್ ಆಳ್ವಿಕೆಯ ಕರಾಳ ಅಂಧಕಾರದ ಕಾಲದ ಜಾಜ್ವಲ್ಯಮಾನ ರತ್ನಗಳಂತೆ, ದಯಾನಂದರು, ಕೇಶವಚಂದ್ರ ಸೇನರು, ರಾಮಕೃಷ್ಣ ಪರಮಹಂಸರು ಮತ್ತು ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳು ಭಾಷಾ ಪ್ರದೇಶಗಳಿಂದ ಅನೇಕರು ಮೂಡಿ ಬಂದರು. ಅವರೆಲ್ಲರೂ ವೇದಗಳು ಹಾಗೂ ವೇದಾಂತದ ರಕ್ಷಾಕವಚದ ಅಡಿಯಲ್ಲಿ ಆಶ್ರಯ ಪಡೆಯಬೇಕಾಯಿತು.
ನಮ್ಮ ಕಾಲದಲ್ಲಿ, ಭಗವಂತನಿಂದ ದಯಪಾಲಿಸಲ್ಪಟ್ಟ ಕೆಲವು ಮಹಾ ವರದಾನಗಳಾಗಿ ಬಂದ ವ್ಯಕ್ತಿಗಳನ್ನು ನಾವು ಸಂಧಿಸುವುದು ನಮಗೆ ಒದಗಿ ಬಂದಿತು. ತಮ್ಮ ಉಜ್ವಲ ಯೋಗಸಮನ್ವಯದ ತತ್ತ್ವಜ್ಞಾನದೊಂದಿಗೆ ಶ್ರೀ ಅರವಿಂದರು, ತಮ್ಮ ಸುಂದರ ಭಕ್ತಿಗೀತೆಗಳೊಂದಿಗೆ ಗುರುದೇವ ರವೀಂದ್ರನಾಥ ಟಾಗೋರರು, ತಮ್ಮ ಸತ್ಯ ಹಾಗೂ ಅಹಿಂಸೆಯ ಮುತ್ಸದ್ದಿತನದೊಂದಿಗೆ ಮಹಾತ್ಮಾ ಗಾಂಧಿಯವರು, ತಮ್ಮ ಆತ್ಮಾನ್ವೇಷಣೆಯ ಅಪೂರ್ವ ಮೌನದೊಂದಿಗೆ ಮಹರ್ಷಿ ರಮಣರು ಬಹುಮಟ್ಟಿಗೆ ನವೀನವೆಂದೆನಿಸುವ ಚಿಂತನ ಪಂಥಗಳನ್ನು ಸ್ಥಾಪಿಸಿದರು. ಆಶೋತ್ತರಗಳು, ಭಯಗಳು,ಯುದ್ಧಗಳು, ಯುದ್ಧೋತ್ತರ ಪರಿಣಾಮಗಳು, ಪರಕೀಯರ ದಬ್ಬಾಳಿಕೆ ಹಾಗೂ ಸ್ವಾತಂತ್ರ್ಯ ಸಂಗ್ರಾಮಗಳಿಂದ ಅವರು ಜೀವಿಸಿದ್ದ ದಿನಗಳು ತುಂಬಿ ಹೋಗಿದ್ದವು. ಮಹಾಯೋಗಿಯ (ಅರವಿಂದ) ಪೂರ್ಣಯೋಗ, ಗುರುದೇವರ (ರವೀಂದ್ರ) ಗೀತ ಗಾನಗಳು, ಮಹಾತ್ಮರ (ಗಾಂಧಿ) ಸಂದೇಶ ಮತ್ತು ಮಹರ್ಷಿ ರಮಣರ ‘ಮಹಾಯೋಗ’ಗಳ ವಿಷಯ ಏನಾಯಿತು ಎಂಬುದನ್ನು ನಾನು ಇಲ್ಲಿ ಚರ್ಚಿಸಬಯಸುವುದಿಲ್ಲ. ಇವೆಲ್ಲ ನಮ್ಮ ಪೂರ್ವ ಪರಂಪರೆಯಿಂದ ಬಂದ ದೊಡ್ಡ ಬಳುವಳಿಗಳು, ಪೂರ್ವಾರ್ಜಿತ ಸಂಪತ್ತುಗಳು.ನಾವು ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಗೊಳಿಸಬೇಕು. ಅದು ನಮ್ಮ ಕರ್ತವ್ಯ.
ಈಗ, ನಮ್ಮ ದೇಶದ ದಿಗಂತದಲ್ಲಿ ಒಂದು ಹೊಸ ವಿಚಾರ ಪ್ರಣಾಲಿ, ಒಂದು ಹೊಸ ದರ್ಶನ ಮೈದೋರಿ ಬರುತ್ತಿದೆ. ಅದು ಇಡೀ ಜಗತ್ತಿನ ಮಾರ್ಗದರ್ಶಕ ಬೆಳಕಾಗಲಿದೆ. ಕಳೆದ ಶತಮಾನದ ಕೊನೆಯ ಪಾದದಲ್ಲಿ ನಮ್ಮ ದೇಶದಲ್ಲಿ ಒಂದು ಮಹಾ ಆತ್ಮವು ಆವಿರ್ಭವಿಸಿತು. ಅವರು ಉತ್ತರ ಪ್ರದೇಶದ, ಫತೇಹ್ಯಗಡದ ಸಮರ್ಥ ಗುರು ಶ್ರೀ ರಾಮಚಂದ್ರಜಿಯವರು. ಕಾಲದ ಆವಶ್ಯಕತೆಗೆ ತಕ್ಕಂತೆ, ಹೊಸ ಮಾದರಿಯ ಹಾಗೂ ಸುಧಾರಿಸಿದ ಯೋಗಪದ್ಧತಿಗಳ ಮೂಲಕ ಅವರು ಜನರಿಗೆ ಅಧ್ಯಾತ್ಮದಲ್ಲಿ ತರಬೇತಿ ನೀಡಿದರು. ಸುಮಾರು 36 ವರ್ಷಗಳವರೆಗೆ ಜನಸಾಮಾನ್ಯರಿಗೆ ಈ ರೀತಿ ತರಬೇತಿ ನೀಡಿದ ನಂತರ ಅವರು ಅಗಸ್ಟ್ 14, 1931 ರಂದು ತಮ್ಮ 58ನೆಯ ವಯಸ್ಸಿನಲ್ಲಿ ಪಾರ್ಥಿವ ಶರೀರ ತ್ಯಾಗ ಮಾಡಿದರು, ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯುವ ಒಂದು ಹೊಸ ಸಾಧನಾ ವಿಧಾನದ ಮೂಲ ಪುರುಷರು ಅವರಾಗಿದ್ದಾರೆ. ಅದರಲ್ಲಿ ಪ್ರಭುತ್ವ ಹೊಂದಿದ ಅವರಿಂದ ಪ್ರಾಣಾಹುತಿಯ ಮೂಲಕ ಯೌಗಿಕ ತರಬೇತಿಯ ಹೊಸ ಯುಗವು ಉದಯವಾಯಿತು.
ಇದೊಂದು ನವೀನ ದರ್ಶನವಾಗಿದ್ದು ಧ್ಯೇಯ ಸಾಧನೆಯ ಸುಲಭ ಪದ್ಧತಿಯಾಗಿದೆ. ಬಹಳ ಸುಲಭ, ಸರಳ ಮತ್ತು ನೇರವಾಗಿರುವ ಈ ಪದ್ಧತಿಯು ಇತರ ಪದ್ಧತಿಗಳಿಗಿಂತ ವಿಭಿನ್ನವಾಗಿದೆ. ಇದುವರೆಗೆ ಎಲ್ಲ ಪದ್ಧತಿಗಳಲ್ಲಿ (ಸಾಧಕನಿಗೆ) ಸಂಸ್ಕೃತ ಜ್ಞಾನವಿರಬೇಕಾದುದು, ಒಂದು ವಿಶಿಷ್ಟ ಜಾತಿಯಲ್ಲಿ ಜನ್ಮ ತಾಳಿರಬೇಕೆಂಬುದು, ಮತ್ತು ಅನೇಕ ಇತರ ಅರ್ಹತೆಗಳನ್ನು ಹೊಂದಿರಬೇಕೆಂಬುದು, ಪ್ರಾಣಾಹುತಿಯ ಮೂಲಕ ಬ್ರಹ್ಮವಿದ್ಯೆಯನ್ನು ಪಡೆಯಲು ಮೂಲಭೂತ ಅಗತ್ಯವೆಂದು ಪರಿಭಾವಿಸಲಾಗಿತ್ತು. (ಗುರುವಿನಿಂದ) ದೈವೀ ಪ್ರೇರಣೆಯನ್ನು ಸ್ವೀಕರಿಸಲು ಅರ್ಹನಾಗಬೇಕಾದರೆ, ಒಬ್ಬ ಸಾಧಕನು ಬಹಳ ವರ್ಷಗಳವರೆಗೆ ಬೇರೆ ಜಟಿಲವಾದ ಮತ್ತು ಕ್ಲಿಷ್ಟಕರವಾದ ಅಭ್ಯಾಸ (ಅನುಷ್ಠಾನ)ಗಳನ್ನು ಕೈಗೊಳ್ಳಬೇಕಾಗುತ್ತಿತ್ತು ಮತ್ತು ಸಹಜಮಾರ್ಗವು ಈ ಪರಂಪರಾಗತ ದೃಷ್ಟಿಕೋನಕ್ಕಿಂತ ಮೂಲಭೂತವಾಗಿ ವಿಭಿನ್ನವಾಗಿ ನಿಲ್ಲುತ್ತದೆ. ಪ್ರತಿಯೊಬ್ಬ ಸಾಧಕನೂ ದೈವೀ ಪ್ರೇರಣೆಯನ್ನು ಸ್ವೀಕರಿಸಲು ಯೋಗ್ಯನಾಗಿದ್ದಾನೆ. ಹಾಗೂ, ಅದನ್ನು ಅಭ್ಯಾಸಿಗೆ ಸಂವಹಿಸಲು ಶಕ್ತನಲ್ಲದವನು ಒಬ್ಬ ಗುರು ಎಂದೆನಿಸಿಕೊಳ್ಳಲು (ಹಾಗೆಂದು ಸಾಧಕನಿಂದ ಅಂಗೀಕರಿಸಲ್ಪಡಲು) ಅನರ್ಹನಾಗಿರುತ್ತಾನೆ ಎಂದು ಘೋಷಿಸುತ್ತದೆ. ಇಲ್ಲಿ ಒಬ್ಬ ಸಾಧಕನ ಯೋಗ್ಯತೆ ಮತ್ತು ಅರ್ಹತೆಗಳ ಮೇಲೆ ಒತ್ತು ಕೊಡುವುದಕ್ಕೆ ಬದಲಾಗಿ, ಅವನ ಪ್ರಶಿಕ್ಷಕನ ಅರ್ಹತೆಗೆ ಹೆಚ್ಚು ಒತ್ತು ಕೊಡುತ್ತದೆ.
ಪಂಡಿತರಿಗೆ ಹಾಗೂ ಅನೇಕ ಗುರುಗಳಿಗೆ ಇದು ಒಂದಿಷ್ಟು ಆಘಾತಕರವೂ ಮತ್ತು ಕಳಂಕ ತರಬಹುದಾದದ್ದೂ ಆಗಿದೆ. ಆದರೆ, ಕಾಲದ ಗತಿಯು ಈ ದಿಶೆಯಲ್ಲಿದ್ದು, ಈ ಹೊಸ ದರ್ಶನವು ನಿಜವಾದ ಜಿಜ್ಞಾಸುಗಳ ಲಕ್ಷ್ಯ ಸೆಳೆಯುವುದು ಖಚಿತವಾಗಿದೆ. “ಒಳ್ಳೆಯದು ಗುರುಗಳೇ, ನಿಮ್ಮ ಶಾಸ್ತ್ರಗಳ ಕುರಿತ ಜ್ಞಾನದಿಂದ, ನೀವು ವರ್ಣಿಸುತ್ತಿರುವ ಸ್ಥಿತಿಯನ್ನು ನನಗೆ ಸಂವಹಿಸಬಲ್ಲಿರಾ?” ಎಂಬುದು ಇನ್ನು ಮುಂದೆ ಯಾವುದೇ ಒಬ್ಬ ಜಿಜ್ಞಾಸು ಒಬ್ಬ ಗುರುವಿಗೆ ಕೇಳುವ ಪ್ರಥಮ ಪ್ರಶ್ನೆಯಾಗುವ ಸಾಧ್ಯತೆ ಉಂಟು. ಆ ಪೂಜ್ಯ ಗುರುಗಳ ಉತ್ತರ ಒಂದು ವೇಳೆ ನಕಾರಾತ್ಮಕವಾಗಿದ್ದರೆ ಅಥವಾ ಅವರು ಉತ್ತರ ಕೊಡಲು ನಿರಾಕರಿಸಿದರೆ, ಭವಿಷ್ಯತ್ತಿನಲ್ಲಿ ಶಿಷ್ಯನಾಗಬಹುದಾಗಿದ್ದ ಆ ಗಿರಾಕಿಯನ್ನು ಕಳೆದುಕೊಳ್ಳುವರೆಂದು ನನಗೆ ಖೇದವಾಗುತ್ತದೆ.
ಯೌಗಿಕ ಶಕ್ತಿಯ ಸಂಚರಣ ಅಥವಾ ‘ಪ್ರಾಣಾಹುತಿಯು ಸಹಜಮಾರ್ಗದ ಪದ್ಧತಿಯಲ್ಲಿ ತರಬೇತಿಯ ಮೂಲ ತತ್ತ್ವವಾಗಿದೆ. ಬೇರೆ ಪದ್ಧತಿಗಳಲ್ಲಿ ಮಿತವಾಗಿ, ಕ್ವಚಿತ್ತಾಗಿ ಬಳಸಲಾಗುವುದು, ಇಲ್ಲವೆಂದರೂ ಸರಿಯೆ. ನಮ್ಮ ಬಹುತೇಕ ಎಲ್ಲ ಪ್ರಾಚೀನ ಋಷಿಗಳು ಇದನ್ನು ಬಳಸುತ್ತಿದ್ದರು. ಆಧುನಿಕ ಸಂತರಾದ ಚೈತನ್ಯ ಮಹಾಪ್ರಭು, ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರೂ ಇದನ್ನು ಬಳಸಿದ ಉದಾಹರಣೆಗಳ ಉಲ್ಲೇಖಗಳುಂಟು. ಆದರೂ ಈ ವರೆಗೆ ಇದನ್ನು ಒಂದು ರಹಸ್ಯವಾಗಿ ಇಡಲಾಗಿತ್ತು. ಈಗ ಅದನ್ನು ಬೆಳಕಿಗೆ ತರಬೇಕೆಂಬುದು ಪ್ರಕೃತಿಯ ಅಗತ್ಯತೆಯಾಗಿದೆ. ಮತ್ತು ಸಹಜಮಾರ್ಗ ಸಂಸ್ಥಾಪಕರು ಅದನ್ನು ಮಾಡಿದ್ದಾರೆ.
ಈ ಹೊಸ ದರ್ಶನದ ಮತ್ತೊಂದು ವೈಶಿಷ್ಟ್ಯವೆಂದರೆ, ವಿವೇಕ ಮತ್ತು ವೈರಾಗ್ಯಗಳನ್ನು ಒತ್ತಾಯದಿಂದ ರೂಢಿಸಿಕೊಳ್ಳಬೇಕಾದ ಸಾಧನೆಯೆಂದು ಪರಿಗಣಿಸದೆ, ಯುಕ್ತವಾದ ಧ್ಯಾನದ ಪರಿಣಾಮವಾಗಿ ಬೆಳೆದು ಬರಬೇಕಾದ ಸಹಜ ಆಂತರಿಕ ಸ್ಥಿತಿಗಳೆಂದು ಪರಿಗಣಿಸಲಾಗಿದೆ. ಈ ದರ್ಶನದ ಇನ್ನೊಂದು ವಿಶೇಷತೆಯೆಂದರೆ, ಇದರ ಅಪೂರ್ವ, ಹಾಗೂ ನೇರವಾದ ಶುದ್ದೀಕರಣ ವಿಧಾನಗಳು. ಬೇರೆ ಎಲ್ಲ ಪದ್ಧತಿಗಳಲ್ಲಿ ಶುದ್ದೀಕರಣದ ವಿಚಾರವು ತಿಳಿದಿರಲಿಲ್ಲವೆಂದಲ್ಲ; ಆದರೆ ಅವುಗಳಲ್ಲಿ ಅದಕ್ಕಾಗಿ ಯಾವುದೇ ನೇರವಾದ ಪದ್ಧತಿಗಳನ್ನು ವಿಧಿಸಲಾಗಿರಲಿಲ್ಲ. ಇದಕ್ಕಾಗಿ ಕೆಲವರು ನಿಷ್ಕಾಮಕರ್ಮವನ್ನು ವಿಧಿಸಿದರು. ಕೆಲವರು ಭಕ್ತಿ ಹಾಗೂ ಉಪಾಸನೆಯ ಜಟಿಲ ಸಾಧನೆಗಳನ್ನು ವಿಧಿಸಿದರು; ಇನ್ನು ಕೆಲವರು ಮಂತ್ರಗಳ ಯಾಂತ್ರಿಕ ಜಪವನ್ನು ವಿಧಿಸಿದರು. ಕೇವಲ ಸಹಜಮಾರ್ಗದಲ್ಲಿ ಆಂತರಿಕ ಸ್ಥಿತಿಯನ್ನು ಶುದ್ಧಗೊಳಿಸಲು ಚಿತ್-ಶಕ್ತಿಯನ್ನು ನೇರವಾಗಿ ಉಪಯೋಗಿಸಲಾಗುತ್ತದೆ.
ಪರಮ ತತ್ತ್ವದ ಸಾಕ್ಷಾತ್ಕಾರವನ್ನು, ಅಥವಾ ಪರಮ ತತ್ತ್ವದೊಂದಿಗೆ ಐಕ್ಯ ಹೊಂದುವುದನ್ನು ಅಥವಾ ಕನಿಷ್ಠ ಪಕ್ಷ ಮುಕ್ತಿಯನ್ನು ತನ್ನ ಆದ್ಯ ಗುರಿಯಾಗಿ ಇಟ್ಟುಕೊಳ್ಳದ ಯಾವುದೇ ತತ್ತ್ವಶಾಸ್ತ್ರ ಪ್ರಣಾಲಿಯು ನಿರುಪಯುಕ್ತವೂ ಮತ್ತು ನಿಷ್ಪಲವೂ ಆಗುವುದು. ಭಾರತದಲ್ಲಿ ಅಂತಹ ಪದ್ಧತಿಯನ್ನು ಪರಕೀಯ, ಅಭಾರತೀಯವೆಂದು ಪರಿಗಣಿಸಲಾಗುವುದಲ್ಲದೆ, ಅದು ಯಾವುದೇ ಗಂಭೀರ ಲಕ್ಷವನ್ನು ಆಕರ್ಷಿಸುವುದಿಲ್ಲ. ಮುಕ್ತಿಯ ಆಕಾಂಕ್ಷೆಯು ಜೀವನದಿಂದ ಪಲಾಯನ ಮಾಡುವ ಅಥವಾ ಈ ವಿಕಾಸಶೀಲ ಜಗತ್ತಿನಿಂದ ಪಾರಾಗುವುದೇ ಮುಂತಾದ ಇಚ್ಛೆಯಾಗುವುದೆಂದು ಹೇಳಿ, ಮುಕ್ತಿಯ ವಿಚಾರವನ್ನು ಧಿಕ್ಕರಿಸುವುದು ಆಧುನಿಕ ವಿಲಕ್ಷಣ ಪ್ರಚಲಿತ ಮಾದರಿಯದೆಂದು ಕಂಡುಬರಬಹುದು. ಆದರೆ, ತಾನು (ಸ್ವತಃ) ಮುಕ್ತನಾಗಿರದಿದ್ದರೆ, ಒಬ್ಬನು, ಉತ್ಕೃಷ್ಟಮನುಷ್ಯತ್ವದ ಪ್ರಾಪ್ತಿಗಾಗಿ ಹಾಗೂ ಮಾನವತೆಯ ವಿಕಾಸವೆಂದು ಕರೆಯಲಾದುದಕ್ಕೆ ಹೇಗೆ ಸಹಾಯಮಾಡಬಲ್ಲನು ? ತನ್ನ ಆಂತರಿಕ ಬಂಧನಗಳಿಂದ ವ್ಯಕ್ತಿಯು ಮುಕ್ತನಾಗುವುದು ಪ್ರಥಮ ಆವಶ್ಯಕತೆಯಾಗಿದೆ ಎಂಬುದನ್ನು ಸಹಜಮಾರ್ಗ ದರ್ಶನದಲ್ಲಿ ಗುರುತಿಸಲಾಗಿದೆ. ಆಧ್ಯಾತ್ಮಿಕ ತರಬೇತಿಯನ್ನು ಇತರರಿಗೆ ನೀಡಲು ಬೇಕಾದ ಆವಶ್ಯಕ ಸ್ಥಿತಿಯನ್ನು ಹೊಂದುವವರೆಗೆ ಯಾವ ವ್ಯಕ್ತಿಯೂ ಅದಕ್ಕೆ ಅರ್ಹನೆಂದು ಪರಿಗಣಿಸಲಾಗಿಲ್ಲ.
ನಮ್ಮದರ್ಶನಗಳ ಘನತೆ ಹಾಗೂ ವೈಶಿಷ್ಟ್ಯಗಳೆಂದರೆ, ಅವು ಊಹಾತ್ಮಕ ಕಲ್ಪನೆ ಅಥವಾ ಸಿದ್ದಾಂತಗಳಿಗಿಂತ ಸಾಕ್ಷಾತ್ಕಾರಕ್ಕೆ ಹೆಚ್ಚು ಮಹತ್ತ್ವವನ್ನು ಕೊಡುತ್ತವೆ ಎಂಬ ವಾಸ್ತವತೆಯಾಗಿದೆ. ಹಾಗಿದ್ದರೂ, ಅಂತಿಮ ಸತ್ಯದ ಕುರಿತಾಗಿ ತರ್ಕಸಮ್ಮತವೂ, ವ್ಯಾವಹಾರಿಕವೂ ಆದ ಒಂದು ಸಮಂಜಸ ದೃಷ್ಟಿಕೋನವನ್ನು ಹೊಂದಿವೆ, ಎಂಬ ಅರ್ಥದಲ್ಲಿಯೂ ಅವು ಶ್ರೇಷ್ಠ ತತ್ತ್ವಶಾಸ್ತ್ರಗಳಾಗಿವೆ. ಕಾಲಕ್ರಮೇಣ ಪರಕೀಯ ಸಂಸ್ಕೃತಿ ಹಾಗೂ ವಿಚಾರ ಪ್ರಣಾಲಿಗಳ ಪ್ರಭಾವದಿಂದ ಹಾಗೂ ಕರ್ಮ, ಭಕ್ತಿ, ಜ್ಞಾನಗಳಂತಹ ಸಾಧನೆಯ ಒಂದು ವಿಶಿಷ್ಟ ಸ್ವರೂಪಕ್ಕೆ ಕೊಟ್ಟ ಅಸಂತುಲಿತ ಪ್ರಾಮುಖ್ಯದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಪಂಥಗಳು ಬೆಳೆದು ಬಂದವು.
ಶ್ರೀ ಅರವಿಂದರು ಇವುಗಳನ್ನು ಯೋಗದ ಮೂರು ಪದ್ಧತಿಗಳೆಂದು ಸ್ವೀಕರಿಸಿದರು ಮತ್ತು ಅವುಗಳನ್ನು ಒಂದಾಗಿ ಸಂಯುಕ್ತಗೊಳಿಸಲು ಪ್ರಯತ್ನಿಸಿದರು. ಅಲ್ಲದೆ ಅವರು ಸತ್, ಚಿತ್ ಮತ್ತು ಆನಂದಗಳನ್ನು ಪರಮ ಸತ್ಯದ ಮೂರು ಮುಖಗಳೆಂದು ಪ್ರಸ್ತುತಪಡಿಸಲು ಕೂಡ ಪ್ರಯತ್ನಿಸಿ; ತಮ್ಮ ತತ್ತ್ವದರ್ಶನವನ್ನು ‘ಸಮಗ್ರಯೋಗ’ (ಅಥವಾ ‘ಯೋಗ ಸಮನ್ವಯ’ – Integral Yoga) ಎಂದು ಕರೆದರು. ಅತಿಮಾನಸದ ಸಾಧನದ ಮೂಲಕ ‘ಸಚ್ಚಿದಾನಂದ ಅಥವಾ ‘ವಿರಾಟ್’ ಐಕ್ಯ ಭಾವದ ಸಾಕ್ಷಾತ್ಕಾರಕ್ಕೆ ಅವರ ದರ್ಶನವು ಸೀಮಿತವಾಗಿದೆ. ಅರವಿಂದರ ಪ್ರಕಾರ ಇದು ಜೀವನದ ಅಂತಿಮ ಧ್ಯೇಯ; ಅದು (ಜೀವನ), ಅಪ್ರಜ್ಞ ಭೌತದ್ರವ್ಯ (Matter) ದಿಂದ ‘ಮನಸ್ಸಿನವರೆಗೆ ವಿಕಾಸ ಹೊಂದಿದೆ ಹಾಗೂ ಇನ್ನೂ ಮುಂದಕ್ಕೆ ಅತಿಮಾನಸ’ (Super mind) ವರೆಗೆ ವಿಕಾಸ ಹೊಂದಬೇಕಿದೆ. ಅವರು ಪಾಶ್ಚಾತ್ಯ ವಿಜ್ಞಾನಿಗಳ ‘ವಿಕಾಸ ವಾದವನ್ನು ಅನುಮತಿಸುತ್ತಾರಾದರೂ, * ಭಗವಂತನ ಲೀಲೆ ಅಥವಾ ಪರಮ ಪ್ರಭುವಿನ ‘ಆಟ’ ಎಂಬುದರಲ್ಲಿ ನಂಬಿಕೆಯಿಡುತ್ತಾರೆ.
ಅದೇನೇ ಇರಲಿ, ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರು ‘ಸತ್ಯೋದಯ’ (ಗ್ರಂಥ) ದಲ್ಲಿ “ನಿಜಕ್ಕೂ, ಕರ್ಮ, ಉಪಾಸನೆ ಮತ್ತು ಜ್ಞಾನಗಳ ಸ್ತರಗಳು ಒಂದರಿಂದೊಂದು ಬೇರೆ ಅಲ್ಲ, ಅಲ್ಲದೆ, ಅವು ಗಾಢವಾಗಿ ಪರಸ್ಪರ ಸಂಬಂಧಿತವಾಗಿದ್ದು, ಎಲ್ಲವೂ ಒಂದೇ ಸ್ಥಿತಿಯಲ್ಲಿ ಒಟ್ಟಿಗೆ ಇರುವುವು” ಎಂದು ಬರೆಯುತ್ತಾರೆ. ಅವರ ದೃಷ್ಟಿಯು ‘ಸತ್ಯ’ದ ಸಚ್ಚಿದಾನಂದ ಸ್ವರೂಪಕ್ಕಿಂತ ಮೀರಿ ಆಚೆಗೆ ಹೋಗುತ್ತದೆ. ‘ಸತ್ಯೋದಯ’ದಲ್ಲಿಯ ಈ ಮುಂದಿನ ಉಲ್ಲೇಖದಿಂದ ಅದರ ಒಂದು ಕಲ್ಪನೆ ದೊರಕಬಹುದು- “ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ, ಅಧ್ಯಾತ್ಮದ ಕೊನೆಯೇ ಸತ್ಯದ ಆರಂಭ ಹಾಗೂ ಸತ್ಯದ ಕೊನೆಯೇ ನಿಜವಾದ ಆನಂದ, ಯಾವಾಗ ಅದೂ ಕೂಡ ಹೊರಟು ಹೋಗುವುದೋ ಆಗ ನಾವು ನಮ್ಮ ಗುರಿಯನ್ನು ತಲುಪಿದಂತಾಯಿತು”.
ಜಡ ವಸ್ತುವಿನಿಂದ ಜೀವ ವಿಕಾಸವಾಯಿತೆಂಬ ಪಾಶ್ಚಾತ್ಯ ವಿಜ್ಞಾನಿಗಳ ವಿಚಾರ ಸರಣಿಯ ಬಗ್ಗೆ ಸಹಜಮಾರ್ಗದ ದೃಷ್ಟಿಕೋನವೇನೆಂದರೆ, ಸೃಷ್ಟಿಕಾರ್ಯ ಒಮ್ಮೆ ಆರಂಭವಾದಾಗ, ಸ್ಥೂಲತೆಯು ಹೆಚ್ಚುತ್ತ ಹೋಯಿತು ಮತ್ತು ಜೀವವು ಭೌತ ದ್ರವ್ಯಗಳ ಸಂಯುಕ್ತಗಳಿಂದ ಉಂಟಾದುದೆಂದು ಹೇಳುವುದು ಸರಿಯಲ್ಲ.
‘ಅತಿಮಾನಸ’ (Supermind) ವನ್ನು ವಿವಿಧ ಪ್ರಮಾಣದಲ್ಲಿ ಹೊಂದಿರುವ ಉಚ್ಚ ಮಟ್ಟದಲ್ಲಿ ವಿಕಾಸಗೊಂಡ ಜನಸಮುದಾಯದ ‘ದಿವ್ಯ ಜೀವನ’ದ (Divine Life) ಅಪೂರ್ವವಾದ ಸುಂದರ ಚಿತ್ರವು, ಪಾಶ್ಚಾತ್ಯ ಕನಸುಗಾರರ ಆಳವಾದ ಪ್ರಭಾವಗಳ ಮಾದರಿಯಾಗಿದೆ. ಇಲ್ಲಿ, ಅಧ್ಯಾತ್ಮದ ಕಲ್ಪನಾಲೋಕದ ಬಗೆಗಿರುವ ಉದಾತ್ತ ಹಾಗೂ ಉನ್ನತೀಕರಣಗೊಂಡ ಅಭಿಲಾಷೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅಸ್ತಿತ್ವದಲ್ಲಿ ಇರುವುದು (ಅಥವಾ ಜೀವಿಸಿರುವುದು) ಅಥವಾ ಏನಾದರೂ (ತಾನು) ಆಗುವುದು, ಅಥವಾ, (ತನ್ನ) ಅಸ್ತಿತ್ವ (ಸತ್ತೆ) ದಲ್ಲಿ ಏನನ್ನಾದರೂ ಸೇರ್ಪಡೆ ಮಾಡುವುದು. ಪೂರ್ಣವಾಗಿ ನಿಸರ್ಗದ (ಪ್ರಕೃತಿಯ) ಶಕ್ತಿಯ ಯತ್ನದ ಕಾರ್ಯವಾಗಿದೆ………… ತಿಳಿಯುವುದು, ಅನುಭೂತಿ ಪಡೆಯುವುದು, ಮತ್ತು ಮಾಡುವುದು (ಕಾರ್ಯ ಗೈಯುವುದು) ಅಧೀನದಲ್ಲಿರುವ ಶಕ್ತಿಗಳಾಗಿವೆ……….. ಜ್ಞಾನ, ವಿಚಾರ ಮತ್ತು ಕ್ರಿಯೆಗಳು ಜೀವನದ ಸಾರವಾಗಲಿ ಅಥವಾ ಉದ್ದೇಶವಾಗಲಿ ಇರಲಾರವು – ಎಂಬುದನ್ನು ಮಹಾಯೋಗಿಯು ಮನಗಂಡಿದ್ದರಾದರೂ, ಅವರು ಹೀಗೆಂದು ಉದ್ಧರಿಸಲಾಗಲಿಲ್ಲ : “ಇರುವುದು/ಜೀವಿಸಿರುವುದು ಹಾಗೂ ಪೂರ್ಣವಾಗಿ ಜೀವಿಸಿರುವುದು ನಮ್ಮಲ್ಲಿಯ ಪ್ರಕೃತಿಯ ಗುರಿಯಾಗಿದೆ……….., ಆದರೆ ಪೂರ್ಣವಾಗಿ ಇರುವುದು/ಜೀವಿಸುವುದು ಎಂದರೆ ಒಬ್ಬನು ಸಮಗ್ರವಾಗಿ ತನ್ನ ಅಸ್ತಿತ್ವದ ಸಮಗ್ರವಾಗಿ (ಸತ್ತೆಯ) ಪ್ರಜ್ಞೆ ಹೊಂದಿರುವುದಾಗಿದೆ………. ಇರುವುದು/ಜೀವಿಸುವುದು ಎಂದರೆ ತನ್ನ ಆತ್ಮದ ಎಲ್ಲ ಶಕ್ತಿಗಳನ್ನು, ಮತ್ತು ಅವೆಲ್ಲವುಗಳ ಉಪಯೋಗಗಳನ್ನು ತನ್ನ ಅಧೀನದಲ್ಲಿ ಹೊಂದಿರುವ ಸ್ಥಿತಿಗೆ ಬರುವುದಾಗಿದೆ………… ಶಕ್ತಿಹೀನ ಚೈತನ್ಯವು ಚೈತನ್ಯವೇ ಅಲ್ಲ………… ಸಮಗ್ರವಾಗಿ (ಪೂರ್ಣವಾಗಿ) ಜೀವಿಸುವುದೆಂದರೆ ಜೀವನದ ಪೂರ್ಣ ಆನಂದವನ್ನು ಪಡೆಯುವುದು (ಹೊಂದಿರುವುದು).” “ಸತ್-ಚಿತ್-ಆನಂದ’ವೇ ಸಾಕ್ಷಾತ್ಕಾರದ ಕೊನೆಯ ಸ್ಥಿತಿ ಎಂಬ ತತ್ತ್ವಜ್ಞಾನದ ಕೊನೆಯ ನುಡಿ ಇದಾಗಿದೆ.
ಹೃದಯ ಮಂಡಲದ ತತ್ತ್ವ ವಿಚಾರದಲ್ಲಿ, ಈ ಮಂಡಲವು ಸಮಸ್ತ ‘ಸತ್-ಚಿತ್-ಆನಂದ’ವನ್ನು ಒಳಗೊಂಡಿದೆ. ಪುನರ್ಜನ್ಮದ ಪ್ರಕ್ರಿಯೆಯ ಮೂಲಕ ಮಾನವಶರೀರದಲ್ಲಿ ಇನ್ನೂ ಮುಂದಿನ ವಿಕಾಸದ ಪ್ರಶ್ನೆಯು ಅಳಿದು ಹೋಗುವುದು. ಸಹಜಮಾರ್ಗದ ಮೂಲಭೂತ ತತ್ತ್ವದ ಪರಿಕಲ್ಪನೆಯಲ್ಲಿ, ಚೈತನ್ಯದ ಮೂಲಸ್ಥಿತಿಯು ಸಂಪೂರ್ಣ ಮೌನ, ಶುದ್ಧತೆ ಹಾಗೂ ಸರಳತೆಗಳನ್ನೊಳಗೊಂಡಿದೆ; ಹಾಗೂ ಶರೀರದಲ್ಲಿರುವಾಗಲೇ ಆ ಸ್ಥಿತಿಯನ್ನು ಪಡೆಯುವುದು ಸಹಜಮಾರ್ಗ ಸಾಧನೆಯ ಗುರಿಯಾಗಿದೆ: ಈ ಶರೀರವನ್ನು ಪೂರ್ಣತೆಗೆ ಪುನಃ ರಚಿಸುವುದಾಗಲಿ ಅಥವಾ ಜ್ಞಾನ ಹಾಗೂ ಅರಿವಿನ ಹೊಸ ಸಾಧನ (ಉಪಕರಣ) ವನ್ನು ವಿಕಾಸಗೊಳಿಸಿಕೊಳ್ಳುವುದಾಗಲೀ ಅವಶ್ಯವಿಲ್ಲ. ಹೃದಯವನ್ನು ಶುದ್ಧಗೊಳಿಸುವ ಹಾಗೂ ಪ್ರಕಾಶಿತಗೊಳಿಸುವುದರೊಂದಿಗೆ, ಅಂತಹ ಆಕಾಂಕ್ಷೆಗಳು ತಮ್ಮಷ್ಟಕ್ಕೆ ತಾವೇ ಅಳಿದು ಹೋಗುತ್ತವೆ. ದೈವೀ ಕೃಪೆಯ ಅವತರಣಕ್ಕೆ ಒಮ್ಮೆ ಮಾರ್ಗವು ತೆರೆಯಲ್ಪಟ್ಟಿತೆಂದರೆ, ಜೀವಸತ್ತೆಯ (Being) ನೈಜ ಹಾಗೂ ಸ್ವಾಭಾವಿಕ ಸ್ಥಿತಿಯು ತನ್ನಿಂದ ತಾನೇ ತಲೆದೋರುತ್ತದೆ.
ಸಹಜಮಾರ್ಗದ ಪ್ರತಿಪಾದಕರ ಪ್ರಕಾರ “ತತ್ತ್ವಜ್ಞಾನವು ತರ್ಕದ ಮೇಲೆ ಅವಲಂಬಿಸಿಲ್ಲ, ಬದಲಿಗೆ, ಅಂತರ್ದೃಷ್ಟಿಯನ್ನು ಅವಲಂಬಿಸಿದ ವಿಷಯವಾಗಿದೆ. ಬಹುತೇಕ ಜನರು ಅಭಿಪ್ರಾಯ ಪಡುವಂತೆ ಅದು ಸಂಶಯದಿಂದ ಪ್ರಾರಂಭವಾಗಿಲ್ಲ, ಬದಲಿಗೆ, ಅದು ‘ಆಶ್ಚರ್ಯ’ದಿಂದ ಆರಂಭವಾಗುತ್ತದೆ. ಅದರಲ್ಲಿ ವರ್ಣಿಸಲಾದ ಎಲ್ಲ ಅನುಭವಗಳನ್ನು ಪಡೆಯುವ ಪ್ರಾಯೋಗಿಕ ಜೀವನವು, ಒಂದು ವಸ್ತುವಿನ ಸತ್ಯತೆಯನ್ನು ತಲುಪಲು ಅತ್ಯವಶ್ಯವಾಗಿದೆ.” ಆದುದರಿಂದ ನಾವು ಯಾವುದೊಂದು ವಿಶಿಷ್ಟ ಸೃಷ್ಟಿಸಿದ್ದಾಂತವನ್ನಾಗಲಿ, ದೈವಿಕ-ವಿಕಾಸವಾದವನ್ನಾಗಲಿ ಒಪ್ಪಿ ಅಂಗೀಕರಿಸಬೇಕಾಗಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದರೆ, ಊಹೆಗಳಿಗೆ ನಮ್ಮನ್ನು ಎಲ್ಲಿಗೂ ಮುಟ್ಟಿಸಲಾರದ ಅತಿಭೌತಿಕ ಸಂಬಂಧಿಸಿದ ಕ್ಷುಲ್ಲಕ ವಾದ-ವಿವಾದಗಳೊಳಗೆ ಸೆಳೆಯಲ್ಪಡುವ ಸಂಭವವಿದೆ.
ಕೇಂದ್ರ ಮಂಡಲದ ಯಥಾರ್ಥ ಅನುಭವದ ಆಧಾರದ ಮೇಲೆ ಸಹಜಮಾರ್ಗ ದರ್ಶನವು ಸೃಷ್ಟಿ ಪ್ರಕ್ರಿಯೆಯನ್ನು ವಿವರಿಸುತ್ತದೆ. ಆ ಅನುಭವವನ್ನು ಪಡೆಯಲು ಪ್ರತಿಯೊಬ್ಬನನ್ನೂ ಅದು ಆಮಂತ್ರಿಸುತ್ತದೆ. ಮಹಾತ್ಮಾ ಶ್ರೀ ರಾಮಚಂದ್ರಜಿಯವರು ತಮ್ಮ “ರಾಜಯೋಗದ ಪ್ರಭಾವ” ಎಂಬ ಗ್ರಂಥದಲ್ಲಿ ಹೀಗೆ ಬರೆಯುತ್ತಾರೆ : “ಹೇಗಾದರೂ ಮಾಡಿ ನಾವು ಈ ಬೃಹದ್ ಮಂಡಲವನ್ನು (ಹೃದಯ ಮಂಡಲ) ದಾಟಿದರೆ, ನಾವು ಸಕಲ ಸೃಷ್ಟಿಗೆ ಕಾರಣವಾದ ಪ್ರಥಮ ಮನಸ್ಸು ಅಥವಾ ಭಗವಂತನ ಅತಿಮಾನಸವನ್ನು (Super mind) ಬಿಟ್ಟು ಬೇರೇನನ್ನೂ ದಾಟುವುದು ಉಳಿಯುವುದಿಲ್ಲ. ಅದರ ಹಿಂದೆ “ಕೇಂದ್ರ”ವಿದೆ – ಅದೇ ಜೀವನದ ನಿಜವಾದ ಗುರಿಯಾಗಿದೆ.
‘ಸಹಜಮಾರ್ಗ’ವು ಉದಿಸಿ ಬಂದ ಅಲ್ಪಾವಧಿಯಲ್ಲಿಯೇ ತನ್ನ ಅನೇಕ ಸಂಶೋಧನೆಗಳನ್ನು ಜಗತ್ತಿಗೆ ಪ್ರಸ್ತುತ ಪಡಿಸಿದೆ. ಅವು ಅಭ್ಯಾಸಿಗಳಿಗೂ ತತ್ತ್ವಜ್ಞಾನಿಗಳಿಗೂ ಅಪಾರ ಮೌಲ್ಯವುಳ್ಳದ್ದಾಗಿವೆ. ಅಧ್ಯಾತ್ಮದಲ್ಲಿ ಮೊದಲ ಪ್ರಮುಖ ಸಂಶೋಧನೆಯನ್ನು ಸಾಧಿಸಿದವರು ಫತೇಪ್‌ಗಡದ (ಉ. ಪ್ರ) ಮಹಾತ್ಮಾ ಶ್ರೀ ರಾಮಚಂದ್ರಜಿಯವರು. ಕೇಂದ್ರದ ಸುತ್ತಲಿನ ಕೇಂದ್ರಮಂಡಲದ ಏಳು ಜ್ಯೋತಿರ್ಮಯ ವೃತ್ತಗಳನ್ನು ಮಾನವ ಜೀವಿಗಳು ತಮ್ಮ ಜೀವಿತ ಕಾಲದಲ್ಲಿಯೇ, ಇನ್ನೂ ಶರೀರದಲ್ಲಿರುವಾಗಲೇ ದಾಟಿ, ಕೇಂದ್ರದ ಸಮೀಪದಲ್ಲಿ ಮುಕ್ತಾತ್ಮರಂತೆ ಈಜಾಡುವ ಸಾಧ್ಯತೆಗೆ ಅದು ಸಂಬಂಧಿಸಿದುದಾಗಿದೆ. ಅವರು ಅನೇಕ ಸಂಶೋಧನೆಗಳನ್ನು ಮಾಡಿದರು ಹಾಗೂ ಅನೇಕ ಸಂಗತಿಗಳನ್ನು ಕಂಡು ಹಿಡಿದರು. ಅವುಗಳನ್ನು ಅವರ ಪ್ರತಿನಿಧಿ ಹಾಗೂ ಉತ್ತರಾಧಿಕಾರಿಯಾದೆ, ಉತ್ತರ ಪ್ರದೇಶದ ಷಾಹಜಹಾನಪುರದ ಮಹಾತ್ಮಾಶ್ರೀ ರಾಮಚಂದ್ರಜಿಯವರು ಈಗ ಬೆಳೆಕಿಗೆ ತರುತ್ತಿದ್ದಾರೆ.
ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರ ಹೃದಯ ಮಂಡಲ, ಮನೋಮಂಡಲ ಹಾಗೂ ಕೇಂದ್ರ ಮಂಡಲಗಳ ಕುರಿತ ಮಾಡಿದ ಸಂಶೋಧನೆಗಳು ಅಸಂಖ್ಯಾತವಾಗಿವೆ; ಹಾಗೂ ಅವು ಬಹಳ ಮಹತ್ತ್ವವುಳ್ಳವೂ, ಉಪಯುಕ್ತವೂ ಆಗಿವೆ. ವಿವಿಧ ಬಿಂದುಗಳು, ಗ್ರಂಥಿಗಳು ಹಾಗೂ ವೃತ್ತಗಳ ಕುರಿತಾದ ಅವರ ಸಂಶೋಧನೆಗಳು ಅವರ ಸಂಗಾತಿಗಳಿಗೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪರಿಶೋಧನೆ ಮಾಡಲು ಮಾರ್ಗದರ್ಶನ ಮಾಡುತ್ತಿವೆ. ಕುಂಡಲಿನಿಯನ್ನು ಕುರಿತ ಅವರ ಶೋಧಗಳು ಬಹಳ ವಾಸ್ತವಿಕವೂ, ಪ್ರಯೋಗಸಿದ್ಧವೂ ಆಗಿವೆ. ಪ್ರಕೃತಿಯ ವಿವಿಧ ಶಕ್ತಿಗಳ ಮೇಲೆ ಅವರು ಪೂರ್ಣ ಪ್ರಭುತ್ವ ಹೊಂದಿದ್ದಾರೆ ಮತ್ತು ಅವರು ಅವುಗಳನ್ನು ಕಾಲದ ಆವಶ್ಯಕತೆಗಳಿಗೆ ಅನುಸಾರವಾಗಿ ಉಪಯೋಗಿಸುತ್ತಿದ್ದಾರೆ. ಅಭ್ಯಾಸಿಗಳ ಅನುಭವಗಳ ಆಧಾರವುಳ್ಳವಿಶಾಲ ಸಾಹಿತ್ಯವು ಬೆಳೆಯುತ್ತಿದೆ. ನಿಸರ್ಗದ ಕಾರ್ಯದಲ್ಲಿ ತಮ್ಮ ನೈಜ ಪಾತ್ರವನ್ನು ವಹಿಸಿಕೊಂಡು, ಕಾರ್ಯವೆಸಗಲು ವ್ಯಕ್ತಿಗಳು ತರಬೇತಿ ಪಡೆಯುತ್ತಿದ್ದಾರೆ. ನಿಸರ್ಗದ ಸಂಕಲ್ಪಕ್ಕೆ ಅನುಸಾರವಾಗಿ, ಇಂದು ಆವಶ್ಯಕವಾದ ಪರಿವರ್ತನೆಯನ್ನು ಉಂಟುಮಾಡಲು ಅವರ ಸಂಗಾತಿಗಳು ಕೂಡ ನಿಸರ್ಗದ ಶಕ್ತಿಗಳನ್ನು ಉಪಯೋಗಿಸುತ್ತಿದ್ದಾರೆ.
ಬರಲಿಕ್ಕಿರುವುದು ಒಂದು ಪೂರ್ವಕಲ್ಪಿತ ‘ಆದರ್ಶ ರಾಜ್ಯ’ವಲ್ಲ; ಬದಲಿಗೆ, ಅದು ಮಾನವನ ಸ್ವಾಭಾವಿಕ (ಸ್ವಭಾವಸಿದ್ಧ) ಘನತೆಯು ಪ್ರಕಟವಾಗಲಿಕ್ಕಿರುವುದಾಗಿದೆ. ಹೊಸತಕ್ಕೆ ದಾರಿ ಮಾಡಿಕೊಡಲು ಹಳೆಯದು ಬದಲಾಗುವುದು. ಅಂಧಶ್ರದ್ಧೆ, ಮತಾಂಧತೆ, ಸಂಕುಚಿತ ಮನೋಭಾವಗಳು ಅಳಿದುಹೋಗುವವು. ತಮ್ಮನ್ನು ತಿದ್ದಿಕೊಳ್ಳುವವರು ಉಳಿಯುವರು. ಹಾಗೆ ಮಾಡದವರು ನಾಶ ಹೊಂದುವರು. ಭೌತವಾದದ ಆಯುಸ್ಸು ಇನ್ನು ಅಲ್ಪಮಾತ್ರ ಉಳಿದಿದೆ. ಅಧ್ಯಾತ್ಮದ ಮೂಲಕ ಮಾತ್ರವೇ ತನ್ನ ಸತ್ತೆಯ (ಅಸ್ತಿತ್ವದ) ಉನ್ನತ ಪ್ರದೇಶಗಳಿಗೆ (ಸ್ತರಗಳಿಗೆ) ಮೇಲೇರಲು ಆಶಿಸಬಹುದು, ‘ಸಹಜಮಾರ್ಗ’ವೆಂಬ (ಈ) ಹೊಸ ದರ್ಶನವು ಅತ್ಯಂತ ಹೆಚ್ಚಿನ ಭರವಸೆ ಕೊಡುವ ದರ್ಶನಪಂಥವಾಗಿದೆ ಹಾಗೂ ಅಧ್ಯಾತ್ಮದ ಮಾರ್ಗವಾಗಿದೆ.
[1963]
ಪ್ರತಿಯೊಬ್ಬನೂ ತನ್ನ ಅಂತ್ಯವನ್ನು ಎದುರಿಲಸಲು ಸಿದ್ಧನಾಗಲೇ ಬೇಕು. ಅದರ ಅರ್ಥವೇನೆಂದರೆ, ಅವನು ಅಧ್ಯಾತ್ಮದ ಅತ್ಯುಚ್ಚ ಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪಡೆಯಬೇಕು. ಅದರಿಂದಾಗಿಯೇ ತನ್ನ ಅಂತ್ಯ ಬಂದಾಗ ಅವನು ವಿಷಾದಪಡಬೇಕಾಗಿರುವುದಿಲ್ಲ.