ಮೊಟ್ಟ ಮೊದಲಿಗೆ, ನಾವು ಯಾವುದೇ ಧಾರ್ಮಿಕ ಕರ್ಮಾಚರಣೆಯ ಅಥವಾ ಧರ್ಮದ ವಿರೋಧಿಗಳಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿರಲಿ. ನಮ್ಮ ತತ್ತ್ವವೇನೆಂದರೆ – “ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ”, ಅಸ್ತಿತ್ವದ ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಶುದ್ಧ ಆಧ್ಯಾತ್ಮಿಕ ಮಾರ್ಗವು ನಮ್ಮದು.

ಮನುಷ್ಯನಿಗೆ ಧ್ಯೇಯವನ್ನಾಗಿ ಸ್ವೀಕರಿಸಲು ಅಪರಿಮಿತ ಶ್ರೇಷ್ಠವಾದುದೊಂದಿದೆ ಎಂದು ತೋರಿಸುವುದು ಧರ್ಮದ ಗುರಿಯಾಗಿದೆ. ಹಾಗೂ ಒಮ್ಮೆ ಇದನ್ನು ಅದರ ನಿಜಾರ್ಥದಲ್ಲಿ ಮನಗಂಡರೆ, ಮತ್ತು ‘ದೇವರು’ ಎಂದು ಧರ್ಮವು ಸೂಚಿಸುವುದು ಏನಿದೆಯೋ ಆ ಆತ್ಯಂತಿಕ ಧ್ಯೇಯವನ್ನು ಸಾಧಿಸಲು ಬಯಸಿದರೆ ಅಥವಾ ಸಂಕಲ್ಪ ಮಾಡಿದನಾದರೆ, ಧರ್ಮದ ಕಾರ್ಯವು ಮುಗಿದಂತಾಯಿತು. ಇನ್ನೂ ಮುಂದಿನ ಪ್ರಗತಿಗೆ ಮಾನವನು ಅಧ್ಯಾತ್ಮದ ಮಾರ್ಗವೊಂದನ್ನೇ ಕೈಗೊಳ್ಳಬೇಕಾಗುವುದು.

ಧರ್ಮವೇ (ಮತಧರ್ಮ) ಅಧ್ಯಾತ್ಮದ ವಿಧಾನಗಳನ್ನು ನೀಡಲು ಪ್ರಾರಂಭಿಸಿದಾಗ, ತನ್ನ ಸ್ವರೂಪ ಮತ್ತು ಪ್ರತ್ಯೇಕ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಕರ್ಮಾಚರಣೆಗಳು, ಸಮಾರಂಭಗಳು, ಪುರಾಣ ಕಥೆಗಳು ಮುಂತಾದವುಗಳನ್ನು ಅವಶ್ಯವಾಗಿ ಮಂಡಿಸಬೇಕಾಗುವುದು. ಇವು, ತಮ್ಮ ತಮ್ಮ ರೀತಿಯಲ್ಲಿಯೇ ಅದೆಷ್ಟು ಕ್ಲಿಷ್ಟವಾದ ಮತ್ತು ವಿಕೃತವಾದ ರೂಪ ತಾಳುವುವೆಂದರೆ, ಧರ್ಮವು ಸಂಪೂರ್ಣವಾಗಿ ಕರ್ಮಕಾಂಡವಾಗಿ ಪರಿವರ್ತಿತವಾಗಿಬಿಡುವುದು.

ಪ್ರತಿಯೊಂದು ಧಾರ್ಮಿಕ ಕರ್ಮಾಚರಣೆಗೂ ಒಂದಿಷ್ಟು ಅರ್ಥವಿದೆ. ಒಂದು ಅಂತರ್ಭಾವವಿದೆ, ಒಂದು ಸಾಂಕೇತಿಕತೆ, ಅಥವಾ ಸೂಕ್ಷ್ಮ ಭಾವಾಭಿವ್ಯಕ್ತಿಯ ಸೂಚನೆ, (ಭಾವ ಪ್ರೇರಣೆ) ಇದೆ. ಅದರ ಅಂತಃಸತ್ತ್ವವು ಅಳಿದುಹೋದಾಗ ಅದು ಕ್ರಮಬದ್ಧ ಔಪಚಾರಿಕತೆಗಳನ್ನು ಒಳಗೊಂಡ ಯಾಂತ್ರಿಕ ಕರ್ಮಾಚರಣೆಯಾಗಿ ಅವನತಿ ಹೊಂದುತ್ತದೆ. ಕರ್ಮಾಚರಣೆಗಳು ಪ್ರಾರಂಭವಾಗುವುದು ಪರಮ ತತ್ತ್ವವನ್ನು ಆರಾಧಿಸುವ/ಪೂಜಿಸುವ ಉದ್ದೇಶದಿಂದಲೇ ಆದರೆ, ಅದು ವಿರೂಪಗೊಂಡು ಕೇವಲ ಆಡಂಬರ ಹಾಗೂ ಸ್ವ- ಪ್ರತಿಷ್ಠೆಯ ಹೆಚ್ಚಳದಿಂದ ಅವನತಿ ಹೊಂದುವುದು.

ಆ ಪ್ರತಿಯೊಂದು ಕರ್ಮಾಚರಣೆಯಲ್ಲಿ (ಕರ್ಮಕಾಂಡದ ಕ್ರಿಯೆಗಳಲ್ಲಿ) ಸೂಚನೆಯ ಪ್ರಚೋದಕ ಶಕ್ತಿಯನ್ನು ವಿಪುಲವಾಗಿ ಬಳಸಲಾಗುವುದು. ಅದನ್ನು ವೈದಿಕ ಕರ್ಮಕಾಂಡದಲ್ಲಿ ಇನ್ನೂ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಒಂದು ಧಾರ್ಮಿಕ ಕರ್ಮಾಚರಣೆಯ ಒಬ್ಬ ಯೋಗ್ಯ ಹಾಗೂ ಸಮರ್ಥ ವ್ಯಕ್ತಿಯು ನೆರವೇರಿಸಿದ್ದಾದರೆ, ಆ ಆಚರಣೆಯಲ್ಲಿ ಧ್ವನಿತವಾದ ಸೂಚನೆಯು ಅದನ್ನು ಆಚರಿಸುವವನ ಸುಪ್ತ ಮನಸ್ಸಿನಲ್ಲಿ ನೇರವಾಗಿ ಹೀರಲ್ಪಡುವುದು ಮತ್ತು ಉದ್ದಿಷ್ಟ ಫಲವು ಪರಿಣಾಮಕಾರಿಯಾಗಿ ಸಿದ್ಧಿಸುವುದು. ಕರ್ಮಾಚರಣೆಯನ್ನು ನಡೆಸಿಕೊಡುವವನಿಗೆ ಪ್ರಕೃತಿಯ ಚೈತನ್ಯಯುಕ್ತ ಶಕ್ತಿಗಳ ಮೇಲೆ ಪ್ರಭುತ್ವವಿದ್ದರೆ ದೀರ್ಘ ಕಾಲ ಪರಿಣಾಮಗಳನ್ನು ಕೂಡ ಪಡೆಯಬಹುದು. ಆದರೆ ಅಂತಹ ವ್ಯಕ್ತಿಗಳು ಬಹಳ ವಿರಳ; ಮತ್ತು ಅಂತಹ ವ್ಯಕ್ತಿಗೆ ಯಾವುದೇ ಕರ್ಮಾಚರಣೆಯ ಆವಶ್ಯಕತೆಯಿಲ್ಲ. ಕೆಳಮಟ್ಟದ (ತುಚ್ಛ) ಉದ್ದೇಶಗಳಿಗೋಸ್ಕರ ಮಾಡುವ ಕರ್ಮಾಚರಣೆಯು ಬಹಳ ಪರಿಣಾಮಕಾರಿಯಾಗಬಲ್ಲುದು. ಆದರೆ ಇದರಲ್ಲಿ ದುರುಪಯೋಗಕ್ಕೆ ಈಡಾದ ವ್ಯಕ್ತಿಯು ಹೆಚ್ಚು ದುರ್ಬಲ ಮನಸ್ಸಿನವನಿರಬೇಕು. ವಾಸ್ತವಿಕವಾಗಿ, ಕೆಲವು ತಥಾಕಥಿತ ಆಧ್ಯಾತ್ಮಿಕ ಸಂಸ್ಥೆಗಳು ಗೂಢ ಅತೀಂದ್ರಿಯ (Occultism) ವಿದ್ಯೆ, ಆಧ್ಯಾತ್ಮಿಕತೆ ಮುಂತಾದವುಗಳ ಹೆಸರಿನಲ್ಲಿ ತಮ್ಮ ಸದಸ್ಯರನ್ನು ಹಾಗೂ ಬೆಂಬಲಿಗರನ್ನು ತಮ್ಮ ಭದ್ರ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಹಾಗೂ ಮಾನಸಿಕ ಬಂಧನದಲ್ಲಿಡಲು ಕೂಡ ಅನೇಕ ಕರ್ಮಾಚರಣೆಗಳನ್ನು ಈಗಲೂ ಉಪಯೋಗಿಸುತ್ತಿದ್ದಾರೆ. ಭಯ, ಕುತೂಹಲ, ಮತ್ತು ಸುಖಾಭಿಲಾಷೆ ಮುಂತಾದ ಮೂಲ ಪ್ರವೃತ್ತಿಗಳದುರ್ಲಾಭ ಪಡೆದು, ತಮ್ಮ ಹಿಡಿತವನ್ನು

ಬಿಗಿಗೊಳಿಸುವುದಕ್ಕೋಸ್ಕರ, ಸ್ವಾರ್ಥ ಲಾಭಕ್ಕೋಸ್ಕರ ಪೂರ್ಣವಾಗಿ ಬಳಸಲಾಗುತ್ತದೆ. ಅಭ್ಯಾಸ ಹಾಗೂ ಕರ್ಮಾಚರಣೆಯ ವ್ಯಸನಗ್ರಸ್ತವಾಗಿರುವುದರಿಂದ ಮನಸ್ಸು ಪೂರ್ಣ ಸಂವೇದನಾ ಶೂನ್ಯವಾಗಿರುತ್ತದೆ. ಅಂತಹ ವ್ಯಕ್ತಿಯ ಆಂತರಿಕ ಸ್ಥಿತಿಯು ಅತ್ಯಂತ ಸ್ಥೂಲ ಮತ್ತು ಜಡವಾಗುತ್ತದೆ. ಅಂತಹ ರಹಸ್ಯಮಯ ಮತ್ತು ನಿಗೂಢ ಕರ್ಮಾಚರಣೆ ಮತ್ತು ಅಂತಹ ಸಂಘಟನೆಗಳಿಗೆ ಬಲಿಯಾಗದಂತೆ ಒಬ್ಬನು ತನ್ನನ್ನು ಯಾವಾಗಲೂ ರಕ್ಷಿಸಿಕೊಳ್ಳಬೇಕು.

ನಿಜವಾಗಿ ಹೇಳುವುದಾದರೆ, ಒಂದು ಉದಾತ್ತ ಆದರ್ಶಕ್ಕೆ ಸಮರ್ಪಣ ಭಾವದಿಂದ ಮಾಡಲಾದ ಪ್ರತಿಯೊಂದು ಕ್ರಿಯೆಯೂ ಒಂದು ಕರ್ಮಾಚರಣೆಯಾಗುವುದು. ಮನುಷ್ಯನು ಪ್ರತಿ ವಿಚಾರವನ್ನು, ಶಬ್ದವನ್ನು ಹಾಗೂ ಕೃತಿಯನ್ನೂ ದೇವರಿಗೆ ಅರ್ಪಿಸಬೇಕು ಎಂದು ಧರ್ಮ ಹೇಳುತ್ತದೆ. ಈ ಸಮರ್ಪಣದ ಭಾವವು ಯಾವುದೇ ವಿಚಾರವನ್ನು, ಶಬ್ದವನ್ನು ಮತ್ತು ಕೃತಿಯನ್ನು ಧರ್ಮ ಕರ್ಮಾಚರಣೆಯಾಗಿ ರೂಪಿಸುತ್ತದೆ. ಒಂದು ಕರ್ಮಾಚರಣೆಯು ಒಂದು ಯಾಂತ್ರಿಕ ರೂಢಿಯಾಗುವುದರ ಬದಲಿಗೆ ದೇವರು ಹಾಗೂ ಮನುಷ್ಯನ ನಡುವಣ ಒಂದು ಜೋಡಿಸುವ ಸಜೀವ ಕೊಂಡಿಯಾಗಿ ಉಳಿಯುತ್ತದೆ. ಆದರೆ ಒಂದು ವಿಚಾರವು, ಭಾವನೆಯು ಮನುಷ್ಯನನ್ನು (ಮತ) ಧರ್ಮದ ನಾಲ್ಕು ಗೋಡೆಗಳಾಚೆಗೆ ತಳ್ಳುವ ಸಂಭವವುಂಟು, ಹೀಗಿರುವಾಗ, ಪ್ರತಿಯೊಂದು ಧರ್ಮವೂ ತನ್ನದೇ ವಿಶೇಷ ಗುಣಲಕ್ಷಣಗಳುಳ್ಳ ಕರ್ಮಾಚರಣೆಗಳನ್ನು ಮಾಡಲು ಸಲಹೆ ಮಾಡುವುದುಂಟು, ಅವುಗಳಲ್ಲಿ ಕೆಲವು ಕಡ್ಡಾಯವಾಗಿ ನೆರವೇರಿಸತಕ್ಕಂತಹವು, ಮತ್ತು ಕೆಲವು ಐಚ್ಛಿಕವಾಗಿ ಆಯಾ ಧರ್ಮದ ಪ್ರತಿಯೊಬ್ಬ ಸದಸ್ಯನೂ ಮಾಡಬೇಕಾದಂತಹವು, ಹಾಗೂ ಇನ್ನು ಕೆಲವು ಸಾಮೂಹಿಕವಾಗಿ, ಗುಂಪುಗಳಲ್ಲಿ ಆಯಾ ಧರ್ಮಾನುಯಾಯಿಗಳು ನೆರವೇರಿಸಬೇಕಾದಂತಹವು.ತಂದ

ಬುಡ ಕರ್ಮಾಚರಣೆಗಳ ಯಾಂತ್ರಿಕತೆ ಮತ್ತು ವೈವಿಧ್ಯಗಳು ಬೇರೆ ಬೇರೆ ಜನರನ್ನು ಬೇರೆ ಬೇರೆ ರೀತಿಗಳಲ್ಲಿ ಪ್ರಭಾವಿತಗೊಳಿಸಿವೆ. ಒಂದು ಕಡೆಗೆ ಬುದ್ಧಿವಂತರೆಂದೆನಿಸಿಕೊಳ್ಳುವ ವರ್ಗದ ಜನರು ಕರ್ಮಾಚರಣೆಯನ್ನು ‘ಧರ್ಮ’ ಎಂದು ತಪ್ಪಾಗಿ ಭಾವಿಸುತ್ತ ಎಲ್ಲ ಕರ್ಮಾಚರಣೆಗಳನ್ನು ಮತ್ತು ತಮ್ಮ ಧರ್ಮವನ್ನೂ ಕೂಡ ತ್ಯಜಿಸಿದರು, ಮತ್ತು ಧರ್ಮದ ಹೆಸರನ್ನು ಕೇಳಿದ ಮಾತ್ರಕ್ಕೆ ಮೂಗು ಮುರಿಯುತ್ತ ‘ತಮ್ಮನ್ನು ಇತರರು ನಾಸ್ತಿಕರೆಂದೋ, ಅತ್ಮೀಯತಾವಾದಿಗಳೆಂದೋ ಪರಿಗಣಿಸಲಿ ಎಂದು ಆಶಿಸುವವರು. ಇನ್ನೊಂದು ಕಡೆಯ ಅತಿರೇಕದ ಅಂಚಿನಲ್ಲಿರುವ ತಮ್ಮನ್ನು ಧಾರ್ಮಿಕರೆಂದು ಹೇಳಿಕೊಳ್ಳುವವರು ಕರ್ಮಾಚರಣೆಗಳೇ ಧರ್ಮವೆಂದು ತಪ್ಪಾಗಿ ತಿಳಿದವರು ಇದ್ದಾರೆ. ಅವರು ಎಲ್ಲ ಕರ್ಮಾಚರಣೆಗಳನ್ನೂ ಸಕಾಲದಲ್ಲಿ ಆಚರಿಸುತ್ತಾರೆ `ಹಾಗೂ ದೇವರು ತಮಗೆ ಸ್ವರ್ಗಕ್ಕೆ ಹೋಗುವ ಪ್ರವೇಶದ ಹಕ್ಕಿನ ಪತ್ರವನ್ನು ಕೊಡಬೇಕೆಂದು ಬಯಸುತ್ತಾರೆ. ಇನ್ನು ಕೆಲವು ವಿವಿಧ ರೀತಿಯ ವರ್ಗದವರು ಇವೆರಡರ ಮಧ್ಯದಲ್ಲಿದ್ದಾರೆ. ಕಟ್ಟುನಿಟ್ಟಾಗಿ ಹೇಳಬೇಕೆಂದರೆ, ಕರ್ಮಾಚರಣೆಗಳು ಜನರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದುದರಿಂದ ಯಾರೂ ಅವುಗಳ ಬಗ್ಗೆ ಅಸಹ್ಯ ಪಡಬೇಕಾಗಿಲ್ಲ. ಇನ್ನೊಂದೆಂದರೆ, ಅವುಗಳಲ್ಲಿ ಬಹಳಷ್ಟು ತುಂಬ ದೀರ್ಘ ವಿವರಸಹಿತವಾಗಿದ್ದು ಪ್ರಯಾಸಕರ, ಯಾಂತ್ರಿಕ, ಹಾಗೂ ಬಹಳ ಖರ್ಚಿನವು ಆಗಿರುವುದರಿಂದ, ಸಮಾಜದ ಬುದ್ಧಿವಂತ ಸದಸ್ಯರು ಅವುಗಳಲ್ಲಿ ಅತ್ಯಾವಶ್ಯಕವಾದವುಗಳನ್ನು ಸರಳಗೊಳಿಸಲು, ಅಧ್ಯಾತ್ಮೀಕರಿಸಲು ಹಾಗೂ ಸತ್ಯಯುತಗೊಳಿಸಲು ಪ್ರಯತ್ನಿಸಬೇಕು.

ಕರ್ಮಾಚರಣೆಯಲ್ಲಿ ಒಂದು ವಿಶಿಷ್ಟ ಸೌಂದರ್ಯ ಮತ್ತು ಆಕರ್ಷಣೆ ಉಂಟು. ಸಂವೇದನಾಶೀಲ ಹೃದಯಕ್ಕೆ ಅದು ನೇರವಾಗಿ ಮುಟ್ಟುತ್ತದೆ ಮತ್ತು ಏನೋ ಒಂದು ಉದಾತ್ತ ಭಾವನೆ ಅಥವಾ ವಿಚಾರವನ್ನು ಪ್ರಚೋದಿಸುತ್ತದೆ. ಆದರೆ ಒಮ್ಮೆ ಅದು ಯಾಂತ್ರಿಕ ಮತ್ತು ಸತ್ತ್ವಹೀನವಾಯಿತೆಂದರೆ ಅದೊಂದು ನಿರುಪಯುಕ್ತ ಹೊರೆಯಾಗುವುದು. ಕರ್ಮಾಚರಣೆಯು ಶಿಸ್ತನ್ನು ಆಗ್ರಹಪಡಿಸುವ ಒಂದು ಬಾಹ್ಯ ಸಾಧನವಾಗಿದೆ. ಮೇಲೆ ಹೇಳಿದಂತೆ, ಅದರ ಬಲದ ಪ್ರಯೋಜನ ಪಡೆದು ಮನಸ್ಸನ್ನು ಶಿಸ್ತುಗೊಳಪಡಿಸಲೂ ಸಾಧ್ಯವಿದೆ. ಆದರೆ, ಮನಸ್ಸು ಕರ್ಮಾಚರಣೆಯ ಸ್ಥೂಲ ಸ್ವರೂಪಕ್ಕೆ

ಅಭ್ಯಸ್ತವಾಗುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳಿಗೆ ಒಳಗಾಗದಂತೆ ಬಹಳ ಕಾಳಜಿ ತೆಗೆದುಕೊಳ್ಳಬೇಕು. ಹಿಂದಿನ ಕಾಲದ ಬಹುತೇಕ ಎಲ್ಲ ಸುಧಾರಕರೂ ತಮ್ಮ ಕಾಲದಲ್ಲಿದ್ದ ಕರ್ಮಠ ಪ್ರವೃತ್ತಿಗಳನ್ನು ಟೀಕಿಸಿದ್ದಾರೆ. ತಮ್ಮ ಎಲ್ಲ ಸಂಗಡಿಗರಿಗೆ ಕರ್ಮಠ ಆಚರಣೆಗಳಿಂದ ಮೇಲೇರಲು ಅವರು ಎಚ್ಚರಿಸಿದ್ದಾರೆ. ಬಾಹ್ಯ ಸಂಪ್ರದಾಯಗಳಿಗೆ ಮಾತ್ರವೇ ಅತಿಯಾಗಿ ಅಂಟಿಕೊಳ್ಳುವುದು ಹಾಗೂ ಅವುಗಳ ಸಾರತತ್ತ್ವವನ್ನು ಪೂರ್ಣವಾಗಿ ಕಳೆದುಕೊಳ್ಳುವುದು ಇವೇ ಅವರು ಎಚ್ಚರಿಕೆ ಕೊಡುವುದರ ಹಿಂದಿರುವ’ ಏಕೈಕ ಕಾರಣವಾಗಿದ್ದಂತೆ ಕಂಡು ಬರುವುದು.

ಏನೇ ಇರಲಿ, ಕೇವಲ ಕರ್ಮಾಚರಣೆಯು ಮನುಷ್ಯನಿಗೆ ಭಗವತ್ ಸಾಕ್ಷಾತ್ಕಾರವನ್ನಾಗಲಿ ಅಥವಾ ಮುಕ್ತಿಯನ್ನಾಗಲಿ ಕೊಡಲಾರದು. ಎಂಬುದು ನಿಶ್ಚಿತ. ಅತಿ ಹೆಚ್ಚೆಂದರೆ, ಅದು ಒಬ್ಬನ ಹೃದಯಕ್ಕೆ ಉದಾತ್ತ ವಿಚಾರದಿಂದ ಸ್ಫೂರ್ತಿ ಕೊಡಬಹುದು. ಮನುಷ್ಯನನ್ನು ಅಸ್ತಿತ್ವದ ಉತ್ತರೋತ್ತರ ಸೂಕ್ಷ್ಮತರ, ಉದಾತ್ತ, ಉಚ್ಚತರ ಮಟ್ಟಗಳಿಗೆ ಕರೆದೊಯ್ಯಬಲ್ಲುದೆಂದರೆ ಅಧ್ಯಾತ್ಮದ ಅನುಸರಣೆಯೊಂದೇ ಸರಿ. ಹಾಗಿದ್ದರೂ ಪರಮ ತತ್ತ್ವಕ್ಕೆ ಕರೆದೊಯ್ಯುವ ನಿಜವಾದ ಮಾರ್ಗವನ್ನು ಅನುಸರಿಸಲು ಮನುಷ್ಯನನ್ನು ಪ್ರಚೋದಿಸಿ, ಸ್ಫೂರ್ತಿ ತುಂಬಲು, ಸರಳ ಹಾಗೂ ಶಕ್ತಿಯುತವಾದ ಕರ್ಮಾಚರಣೆಗಳು ಪ್ರಾಸಂಗಿಕವಾಗಿ ಬೇಕಾಗಬಹುದು.

[ಸಹಜಮಾರ್ಗ ಪತ್ರಿಕೆ ನಂ. 1, 1967]

ಒಬ್ಬ ಮನುಷ್ಯನ ದೃಷ್ಟಿ ಅವನ ಅಂತರಾತ್ಮನೆಡೆಗೆ ತಿರುಗಿದಾಗಲೇ ಅವನು ನೈಜ ಮಾನವನಾಗಬಹುದು.

ಶ್ರೀ ಬಾಬೂಜಿ