ಹಲವಾರು ಬಗೆಯ ಧ್ಯಾನಗಳನ್ನು ವಿಧಿಸುವ ಹಲವಾರು ಶಿಕ್ಷಕರು (ಗುರುಗಳು) ಇದ್ದಾರೆ. ಈ ವಿಧಾನಗಳು ಕೇವಲ ಐದು ನಿಮಿಷಗಳ ಅತೀಂದ್ರಿಯ ಧ್ಯಾನದಿಂದ ಹಿಡಿದು ಸುಮಾರು ನಾಲ್ಕು ಅಥವಾ ಇನ್ನೂ ಹೆಚ್ಚು ಗಂಟೆಗಳ ಕಾಲ ಕೆಲವೊಂದು ಆಯ್ದ ಶಬ್ದಗಳ ಮಾನಸಿಕ ಪುನರುಚ್ಚರಣೆಯವರೆಗೆ ವಿವಿಧ ಪ್ರಕಾರಗಳದ್ದಿವೆ. ಮುಗ್ಧ ಜನರು ಅಂತಹ ಅಭ್ಯಾಸಗಳನ್ನು ಕಣ್ಣು ಮುಚ್ಚಿ ಅನುಸರಿಸುತ್ತಿರುವರಾದರೆ, ಚತುರ. ಗುರುಗಳು ತಮ್ಮ ನಿಯಂತ್ರಣದಲ್ಲಿಯೇ ಅವರನ್ನು ಇರುವಂತೆ ಮಾಡಲು ಸೂಕ್ತ ಸೂಚನೆಗಳನ್ನು ಅವರ ಮೆದುಳಿನಲ್ಲಿ ಸದಾ ತುಂಬುತ್ತಿರುತ್ತಾರೆ. ಈ ಸೂಚನೆಗಳು ಕೂಡ ಪ್ರಶಂಸೆಯಿಂದ ಹಿಡಿದು ಬೆದರಿಕೆಯವರೆಗೆ ವಿವಿಧ ತರಹದವಾಗಿರುತ್ತವೆ. ಇದರ ಅಂತಿಮ ಪರಿಣಾಮವೆಂದರೆ ಸಂಪೂರ್ಣ ದಾಸ್ಯವೇ ಸರಿ; ಅದು ಒಬ್ಬ ಸಾಧಕನು ಅರಸುವ ಆದರ್ಶಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ.

ಕೆಲವು ತತ್ತ್ವಜ್ಞಾನಿಗಳು ಹೇಳುವ ಹಾಗೆ ಸಂಪೂರ್ಣ ಸ್ವಾತಂತ್ರ್ಯ ಎಂಬುದು ಕಷ್ಟಕ್ಕೊಳಗಾಗಿರುವ ಮನುಷ್ಯನ ವಿಲಕ್ಷಣ ಭ್ರಾಂತಿ ಮಾತ್ರ ಎಂಬುದು ನಿಃಸಂಶಯ. ಒಟ್ಟಾರೆ ಮನುಷ್ಯನು ದಾಸನಾಗಿದ್ದಾನೆ. ಒಂದೋ, ಅವನು ಅನ್ಯರ, ಅಥವಾ ತನ್ನದೇ ಇಚ್ಛೆಗಳ ಮತ್ತು ಭ್ರಮಾತ್ಮಕ ಕಲ್ಪನೆಗಳ ದಾಸನಾಗಿದ್ದಾನೆ. ಹಾಗಿರುವಾಗಲೂ, ಅವನಿಗೆ ಸಂಪೂರ್ಣ ಸ್ವತಂತ್ರನಾದ ಗುರುವನ್ನು ಅರಿತರೆ, ಸಾಕ್ಷಾತ್ತಾಗಿ ಪಡೆದರೆ, ಅವನಿಗೆ ತನ್ನ ನಿಜವಾದ ದಾಸ್ಯದ ಅರಿವುಂಟಾಗುವುದು ಸಾಧ್ಯವಿದೆ. ಈ ಸಾಕ್ಷಾತ್ಕಾರವು ಅವನನ್ನು ಬೇರೆ ಎಲ್ಲ ಪ್ರಕಾರದ ದಾಸ್ಯಗಳಿಂದ ಬಿಡುಗಡೆ ಗೊಳಿಸುತ್ತದೆ. ಆಗಲೇ ಮತ್ತು ಆಗ ಮಾತ್ರವೇ ಮನುಷ್ಯನು ಎಲ್ಲ ಬಂಧನಗಳಿಂದ ನಿಜಕ್ಕೂ ಬಿಡುಗಡೆ ಹೊಂದುತ್ತಾನೆನ್ನಬಹುದು ಮತ್ತು ತದನಂತರ ಉಳಿಯುವುದೇನೆಂದರೆ ತನ್ನ ಕೇವಲ ಸಹಜ ಸ್ಥಿತಿ ಮಾತ್ರವೇ.

ಆದುದರಿಂದ ಗುರಿಯ ಬಗ್ಗೆ ಸ್ಪಷ್ಟ ದೃಷ್ಟಿ ಇರಬೇಕಾದುದು, ಆ ಗುರಿಯನ್ನು ಮುಟ್ಟಿದವನನ್ನು ಗುರುವಾಗಿ ಆಯ್ಕೆ ಮಾಡಿಕೊಳ್ಳುವುದು ಮತ್ತು ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನಾಭ್ಯಾಸವನ್ನು ಕೈಗೊಳ್ಳುವುದು ಆವಶ್ಯಕವಾಗಿದೆ. ಅದಿಲ್ಲವಾದರೆ ನಿರ್ದಿಷ್ಟ ಗುರಿ ಇಲ್ಲದೆ ಯೋಗ್ಯ ಮಾರ್ಗದರ್ಶಕನಿಲ್ಲದೆ, ಗೊತ್ತುಗುರಿಯಿಲ್ಲದೆ ಕೈಗೊಂಡ ಧ್ಯಾನಾಭ್ಯಾಸವು ಒಬ್ಬ ಮನುಷ್ಯನನ್ನು ಒಂದು ಮನೋರೋಗಿಗಳ ಆಸ್ಪತ್ರೆಗೋ ಅಥವಾ ಭಯಾನಕ ಭ್ರಮಾತ್ಮಕ ಲೋಕಕ್ಕೋ ಕೊಂಡೊಯ್ಯುವುದು ನಿಶ್ಚಿತ.

ಆಯ್ದುಕೊಂಡ ಕೆಲವು ಶಬ್ದಗಳನ್ನು ಯಾಂತ್ರಿಕವಾಗಿ ಪುನರುಚ್ಚರಿಸುತ್ತ ಹೋಗುವುದನ್ನು ಧ್ಯಾನ ಎಂದೆನ್ನಲಾಗದು. ಯಾವುದೋ ಆಯ್ಕೆ ಮಾಡಿಕೊಂಡ ಚಿತ್ರಗಳ ಮೇಲೆ ಅಥವಾ ಮೂರ್ತಿಗಳ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವುದೂ ಧ್ಯಾನವಲ್ಲ. ಒಂದು ಪವಿತ್ರ ವಿಚಾರದ ಮೇಲೆ ದೀರ್ಘ ಸಮಯ ಆಸಕ್ತಿ ಮತ್ತು ಪ್ರೇಮದಿಂದ ಚಿಂತನೆ ಮಾಡುವುದನ್ನು ‘ಧ್ಯಾನವು ಒಳಗೊಂಡಿದೆ. ಅಂತಹ ಧ್ಯಾನಾಭ್ಯಾಸ ಮಾತ್ರವೇ ಆ ಪವಿತ್ರ ವಿಚಾರವನ್ನು ಮನಸ್ಸಿನ ಅವಪ್ರಜ್ಞೆಯ ಅಥವಾ ಅಪ್ರಜ್ಞೆಯ ಸ್ತರದ ಆಳಕ್ಕೆ ಒಳತಳ್ಳುತ್ತದೆ. ಆದುದರಿಂದ, ಅಂತಹ ಪವಿತ್ರ ವಿಚಾರವು ನಮ್ಮ ಹೃದಯಾಂತರಾಳಕ್ಕೆ ತಳ್ಳಲ್ಪಡುವಂತಾಗಲು ಅತ್ಯುನ್ನತ ಆದರ್ಶವನ್ನು ನಮ್ಮ ಧ್ಯಾನದ ಧೈಯವಾಗಿ (ಧ್ಯಾನಕ್ಕೆ ವಿಷಯವಾಗಿ ) ತೆಗೆದುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಸಮುಚಿತ ಕಾಲಾವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಒಂದು ಪವಿತ್ರ ವಿಚಾರದ ಮೇಲೆ ಧ್ಯಾನ ಮಾಡಬೇಕಿದ್ದ ಯುಕ್ತ ಧ್ಯಾನಾವಧಿಯು ಸುಮಾರು ಒಂದು ತಾಸಿನದು. ಮನಸ್ಸು ಚಂಚಲ ಸ್ಥಿತಿಗೆ ಅಭ್ಯಸ್ತವಾಗಿರುವ ಕಾರಣ, ಸಾಮಾನ್ಯ ಮನುಷ್ಯನಿಗೆ ದೈವೀ ವಿಚಾರದ ಸ್ಥಿರವಾದ ನಿರಂತರ ಹರಿವು ಉಂಟಾಗಲು ಸಾಧಾರಣವಾಗಿ ಹತ್ತು-ಹದಿನೈದು ನಿಮಿಷಗಳು ಬೇಕಾಗುತ್ತವೆ. ಆದುದರಿಂದ ಕೇವಲ 10-15 ನಿಮಿಷಗಳ ಧ್ಯಾನವು ನಿರುಪಯುಕ್ತವೇ ಸರಿ. ಹಾಗಿದ್ದರೂ, ದೈವೀ ಪ್ರೇರಣೆಯ ಸ್ಪಂದನವನ್ನು ಸಂವಹಿಸಬಲ್ಲ ಸಮರ್ಥ ಮಾರ್ಗದರ್ಶಿಯಿದ್ದರೆ ಆ ಮಾತು ಬೇರೆ. ಅಂತಹ ಸಂದರ್ಭದಲ್ಲಿ ಅಭ್ಯಾಸಿಯ ಬಹಳಷ್ಟು ಪ್ರಯತ್ನ, ಪರಿಶ್ರಮ ಉಳಿತಾಯವಾಗುವುದು ಮತ್ತು ಸುದೈವದಿಂದ, ನಾವು ಒಬ್ಬ ಪರಿಪೂರ್ಣನಾದ ಮಾರ್ಗದರ್ಶಿಯನ್ನು ಅರ್ಥಾತ್ ಸದ್ಗುರುವನ್ನು ನೆಚ್ಚಿಕೊಂಡು, ತೀವ್ರ ಪ್ರೇಮ ಮತ್ತು ಶ್ರದ್ಧೆಯಿಂದ ಅವನೊಂದಿಗೆ ನಮ್ಮನ್ನು ಜೋಡಿಸಿಕೊಂಡರೆ, ನಮ್ಮ ಧೈಯವು ಕೂಡಲೇ ಸಿದ್ಧಿಸಿದಂತೆಯೇ. ಸದ್ಗುರುವು ಆತ್ಯಂತಿಕ (ಪರಮ) ತತ್ತ್ವದೊಂದಿಗೆ ಶಾಶ್ವತ ಸಂಬಂಧ ಹೊಂದಿರುವನಾದ್ದರಿಂದ, ಅವನ ಜೊತೆಗಿನ ನಮ್ಮ ಸಂಬಂಧವು ನಮ್ಮನ್ನು ಅದರೊಂದಿಗೆ ಜೋಡಿಸುತ್ತದೆ.

ಈ ಅಪೇಕ್ಷಿತ ಫಲಪ್ರದವಾದ ಧ್ಯಾನವು ದ್ವಿವಿಧ ಪರಿಣಾಮಗಳನ್ನು ಉಂಟುಮಾಡಲಿಕ್ಕಿದೆ ಒಂದು, ಹೃದಯದ ಶುದ್ದೀಕರಣ ಮತ್ತು ಇನ್ನೊಂದು ಅದನ್ನು ದೈವೀ ಪ್ರಕಾಶದಿಂದ ತುಂಬುವುದು. ಈ ಎರಡು ಪರಿಣಾಮಗಳು ಅನ್ನೋನ್ಯ ಪ್ರಭಾವ ಬೀರುತ್ತವೆ. ಒಂದು ಇಲ್ಲದೆ ಇನ್ನೊಂದನ್ನು ಪಡೆಯಲು ಸಾಧ್ಯವಿಲ್ಲ. ಆದುದರಿಂದ ಧ್ಯಾನದ ಯಾವುದೇ ಅಭ್ಯಾಸವು, ಏಕಕಾಲದಲ್ಲಿಯೇ ಹೃದಯದ ಶುದ್ದೀಕರಣ ಮತ್ತು ದೈವೀಕರಣವಾಗುವಂತೆ ಮಾನಸಿಕ ಚಟುವಟಿಕೆಗಳ ಸಹಕಾರ್ಯ ನಡೆಸುವಂತೆ ಸಮನ್ವಯ- ಗೊಳಿಸುವಂಥದ್ದಿರಲೇ ಬೇಕು. ಅಭ್ಯಾಸಿಯ ಒಂದಿಷ್ಟು ಸಂಕಲ್ಪ ಶಕ್ತಿ ಮತ್ತು ಸಮರ್ಥ ಗುರುವಿನ ಒಂದಿಷ್ಟು ಪ್ರಾಣಾಹುತಿ ಮೇಲೆ ಹೇಳಿದ (ಹೃದಯದ) ಶುದ್ದೀಕರಣ ಹಾಗೂ ದೈವೀಕರಣ ಪ್ರಕ್ರಿಯೆಯನ್ನು ಉತ್ಕರ್ಷಗೊಳಿಸುತ್ತದೆ.

ಅತ್ಯುನ್ನತವಾದುದನ್ನು ಸಾಧಿಸಿ ಅದರಲ್ಲಿ ಸದಾ ನೆಲೆಗೊಂಡಿರುವ ಪರಿಪೂರ್ಣ ಮಾನವನ ಆಕಾರವು ಧ್ಯಾನಾಭ್ಯಾಸ ಮಾಡಲು ಅತ್ಯಂತ ಸುಲಭವೂ, ಪ್ರಭಾವಕಾರಿಯೂ ಆದ ಧೈಯವಸ್ತುವಾಗಿದೆ. ಅಂತಹ ಒಬ್ಬ ಸಹಜೀವಿಯನ್ನು ನಾವು ಹೇಗೆ ಕಂಡುಕೊಳ್ಳಬಹುದು ? ಅಂಥವನನ್ನು ನಾವು ಅರಸಬೇಕು ಮತ್ತು ಅದಕ್ಕೋಸ್ಕರ ಪರಮಾತ್ಮನಲ್ಲಿ ಪ್ರಾಮಾಣಿಕವಾಗಿ ಪ್ರಾರ್ಥಿಸಬೇಕು. ಈ ವಿಷಯದಲ್ಲಿ ನಮ್ಮ ಪ್ರಿಯ ಗುರುಗಳ ಮಾದರಿಯನ್ನು ನಾವು ತೆಗೆದುಕೊಳ್ಳುತ್ತೇನೆ. ಒಬ್ಬ ಪ್ರಾಮಾಣಿಕ ಜಿಜ್ಞಾಸುವಿನ ಹೃದಯವು ಅಂತಹ ಅತಿಮಾನವರೂಪವನ್ನು ತತ್‌ಕ್ಷಣವೇ ಗುರುತಿಸುವುದು. “ಭಗವಂತನೇ ತನ್ನನ್ನು ಅರಸುವವನ ಬಾಗಿಲಿಗೆ ಬರುತ್ತಾನೆ” ಎಂಬುದು ಅಕ್ಷರಶಃ ಸತ್ಯ. ಅಂತಹ ಒಬ್ಬ ವ್ಯಕ್ತಿಯ ಸಂಪರ್ಕದಲ್ಲಿ ಬಂದಾಗ ಒಂದು ತೆರನಾದ ಅವ್ಯಕ್ತ ಪ್ರೇಮವು ಹೃದಯಾಂತರಾಳವನ್ನು ಆವರಿಸುವುದು, ಮತ್ತು ಭಕ್ತಿ, ಆಸಕ್ತಿ ಮತ್ತು ಪ್ರೇಮದಿಂದೊಡಗೂಡಿದ ಧ್ಯಾನಾಭ್ಯಾಸದ ಮೂಲಕ, ಆ ಪ್ರೇಮವನ್ನು ಪ್ರಬಲಗೊಳಿಸಿಕೊಂಡರೆ ಅವನು ತನ್ನ ಗುರಿಯನ್ನು ಅತ್ಯಂತ ಅಲ್ಪ ಕಾಲಾವಧಿಯಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳುವುದು ನಿಶ್ಚಿತ.

ಸಹಜಮಾರ್ಗದ ಕಾರ್ಯವಿಧಾನವು ತೀರ ಸರಳವೂ ಮತ್ತು ಸ್ವಾಭಾವಿಕವೂ ಆಗಿದ್ದರೂ ಪೂರ್ಣ ಸತ್ಯಕ್ಕೆ ನಿಕಟವಾಗಿ ಅಂಟಿಕೊಂಡಿರುವುದರಿಂದ ಹಾಗೂ ಅತ್ಯಂತ ಸೂಕ್ಷ್ಮ ರೀತಿಗಳಲ್ಲಿ ಮುಂದುವರಿಯುವುದಾದ್ದರಿಂದ ಸಾಮಾನ್ಯ ಗ್ರಹಿಕೆಗೆ ಮೀರಿದುದಾಗಿದೆ.