ಪ್ರೀತಿಯ ಬಾಬೂಜಿ ಹಾಗೂ ಸೋದರ ಸೋದರಿಯರೆ,

ದಿನ ಉದಯಿಸಿದೆ. ನಾವು ಸೂರ್ಯನ ಬೆಳಕನ್ನು ಕಾಣುತ್ತಿದ್ದೇವೆ. ದೈವೀ ಕೃಪೆಯ ಮಹಾಪೂರದ ಹೆದ್ದೆರೆಯು ನಮ್ಮನ್ನು ಆವರಿಸಿದೆ. ನಮ್ಮೆಲ್ಲ ಪಾಪಗಳೂ ತೊಳೆದು ಹೋದವು. ನಿಜಕ್ಕೂ ಇದೊಂದು ಮಹಾ ಸಂದರ್ಭ. ನಮ್ಮ ನಿಜ ಧಾಮದ ಪ್ರತಿಬಿಂಬವನ್ನು ಕಾಣುವ ಉತ್ಕೃಷ್ಟ ಸದವಕಾಶ !!

ನಮ್ಮ ಮಹಾ ಗುರುಗಳ ಅವಿರತ ಪ್ರಯತ್ನಗಳು ನಮ್ಮನ್ನು ಈ ನೆಲೆಗೆ ತಂದಿವೆ. ನಾವು ಒಂದು ಮಹಾ ಯಜ್ಞಕ್ಕೆ ಸಾಕ್ಷಿಯಾಗಿದ್ದೇವೆ. ಒಂದಾನೊಂದು ಕಾಲದಲ್ಲಿ ಒಬ್ಬ ಮಹಾಗುರುವು ತನ್ನ ಶಿಷ್ಯರಿಗೆ ತನ್ನ ರಕ್ತ-ಮಾಂಸಗಳನ್ನು ರೊಟ್ಟಿ ಮತ್ತು ಮದಿರೆಯಂತೆ ನೀಡಿದ್ದನೆಂಬುದನ್ನು ನಾವು ಕೇಳಿ ಬಲ್ಲೆವು. ಆದರೆ ಇಂದು ನಾವು ವಾಸ್ತವವಾಗಿ ‘ಪ್ರಾಣಾಹುತಿಯಾಗಿ’, ಅಂದರೆ ತನ್ನ ಸ್ವಂತದ ಪ್ರಾಣವನ್ನೇ ‘ಆಹುತಿ’ಯಾಗಿ ನೀಡುವಂತಹ ಯಜ್ಞವನ್ನು ವೀಕ್ಷಿಸುತ್ತಿದ್ದೇವೆ.

ಈ ‘ಪ್ರಾಣಾಹುತಿ’ಯ ಪ್ರಯೋಜನವನ್ನು ಪಡೆಯಲೆಂದು ನಾವು ಇಲ್ಲಿಗೆ ಬಂದಿದ್ದೇವೆ. ಇದು ಸ್ವಾರ್ಥನಿಷ್ಠವೆಂದು ಅನಿಸುವುದೇ ? ಇಲ್ಲ ! ನೀವು ನಿಮ್ಮನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದರೆ ಮಾತ್ರ. ಇದರ ಅರ್ಥವಾದರೂ ಏನು ? ಅದೊಂದು ಸ್ಥಿತಿಯಷ್ಟೇ ! ಗುರುಮಹಾರಾಜರೊಂದಿಗೆ ನಾವು ಇರಬೇಕೆಂಬ ಕಾತರದಷ್ಟೇ, ಅಲ್ಲಲ್ಲ, ಅದಕ್ಕಿಂತ ಲಕ್ಷ ಲಕ್ಷ ಪಟ್ಟು ಹೆಚ್ಚು, ನಮ್ಮನ್ನು ತನ್ನೊಂದಿಗಿರುವಂತೆ ಮಾಡಲು ನಮ್ಮ ಸಂಬಂಧವು ಸ್ಥಾಪಿಸಲ್ಪಟ್ಟಿದೆ. ಅವರನ್ನು ಕಾಣುವ ಬಯಕೆಯೊಂದನ್ನುಳಿದು ಬೇರೆಲ್ಲ ಇಚ್ಛೆಗಳೂ ಕಾಣೆಯಾಗಿವೆ, ಹೀಗೇಕೆ ಎಂದರೆ, ಹನಿಯೊಂದು ತಾನು ಸಾಗರದ ಅವಿಭಾಜ್ಯ ಅಂಗವೇ ಆಗಿರುವ ತನ್ನ ನೈಜ ಸ್ವರೂಪದ ಅರಿವನ್ನು ತನಗೆ ಅರಿವಿಲ್ಲದಂತೆಯೇ ಹೊಂದಿತು, ಹಾಗೂ ಅದರಿಂದಾಗಿ ಅದು ತನ್ನನ್ನು ತಾನೇ ಮರೆತುಬಿಟ್ಟಿತು. ಇಂತಹ ಪೂರ್ಣ ವಿಸ್ಕೃತಿಯೇ ಪ್ರಾಣಾಹುತಿಯ ಪರಿಣಾಮಕಾರಿತ್ವಕ್ಕೆ ದಾರಿಮಾಡಿ ಕೊಡುವುದು; ಮತ್ತೆ ಪ್ರಾಣಾಹುತಿಯು ಕಾರ್ಯರತವಾಗುವುದು.

ಪ್ರಿಯ ಬಂಧುಗಳೆ, ಮುಂದೆ, ಇದರಾಚೆಗೆ ಇರುವುದನ್ನು ನೋಡಲು ನೀವು ಸಮರ್ಥರಾಗಿರುವಿರಾ ? ನೀವು ಇರುವುದು ಅಮೃತತ್ವದ ಸಾಗರದ ಅಂಚಿನಲ್ಲಿ, ನೀವು ಅದರೊಳಗೆ ಮುಳುಗಿಬಿಡಲು ಸಿದ್ಧರಿದ್ದೀರಾ ? ಒಮ್ಮೆ ಅದರಲ್ಲಿ ಮುಳುಗಿದರೆ ನೀವು ಸಾಗರದ ದೃಶ್ಯವನ್ನೇ ಕಾಣದಂತಾದೀರಿ ಎಂದು ಬಹುಶಃ ನೀವು ಅಂಜಿರಬೇಕು. ಎಂದಿಗೂ ಅದರ ಗೊಡವೆ ಬೇಡ, – ಮುನ್ನುಗ್ಗಿರಿ, ಅವರು ನಿಮ್ಮನ್ನು ನಿಮಂತ್ರಿಸಿದ್ದಾರೆ. ಅವರು ಇನ್ನೂ ನಿಮ್ಮನ್ನು ಕರೆಯುತ್ತಿದ್ದಾರೆ. ನಿಮ್ಮೆಲ್ಲ ಗಂಟು-ಮೂಟೆಯೊಂದಿಗೆ ಮತ್ತೆ ಹಿಂದಕ್ಕೆ ಹೋಗಬೇಡಿ. ನಿಮ್ಮ ಗಂಟು-ಮೂಟೆಗಳ ನೆನಪು ಇನ್ನೂ ಇದ್ದರೆ, ನಿಮ್ಮ ಬಳಿ ಇರುವ ವಸ್ತುಗಳು ಅವರಿಗಿಂತ ಹೆಚ್ಚು ಮೌಲ್ಯವತ್ತಾಗಿವೆಯೆಂದು ಪ್ರಾಯಃ ನೀವು ಭಾವಿಸುತ್ತಿದ್ದೀರಿ ಎಂದು ಅರ್ಥ. ಇದೆಂಥ ವ್ಯರ್ಥ ಅಭಿಮಾನ ! ರಿಕತೆ ಇಲ್ಲ ಎಂದರೆ ಪ್ರಾಣಾಹುತಿಯನ್ನು ಸ್ವೀಕರಿಸುವುದು ಸಾಧ್ಯವಾಗದು !!

ನಮಗೆ ಈ ಮೌಲ್ಯದ ವಿಚಾರ ಏಕೆ ಬರುತ್ತದೆ ? ಈ ವಿಷಯಗಳನ್ನು ನಾವು ಯುಗ ಯುಗಗಳಿಂದ ನಮ್ಮೊಳಗೆ ಕುಟ್ಟಿ ಕುಟ್ಟಿ ತುಂಬುತ್ತ ಬಂದಿದ್ದೇವೆ. ಒಂದು ಶುದ್ಧ ಮತ್ತು ಸರಳವಾದ ಹನಿಯು ಅಸಂಖ್ಯಾತ ಹನಿಗಳನ್ನು ಕಲೆಹಾಕುತ್ತ ಹೋಯಿತು ಹಾಗೂ ಒಂದು ಪ್ರಚಂಡ ನದಿಯಾಗಿ ಪರಿವರ್ತಿತವಾಯಿತು. ಮೂಲ ಹನಿಯು ಕಣ್ಮರೆಯಾಗಿ ಹೋಗಿದೆ. ಈಗ ನಾವು ನಾವೇ ನಿರ್ಮಿಸಿಕೊಂಡ ವಸ್ತುಗಳನ್ನು ಮೆಚ್ಚಿಕೊಳ್ಳುತ್ತಿದ್ದೇವೆ. ನಾವು ಕುಣಿಯುತ್ತಿದ್ದೇವೆ, ನಗುತ್ತಿದ್ದೇವೆ, ಆದರೆ ಅನೇಕ ಸಲ ಕಹಿಯಾದವುಗಳನ್ನೇ ಸವಿಯುತ್ತಿದ್ದೇವೆ. ನಾವು ಕೆಲವೊಂದು ಆಲೋಚನೆಗಳ ರೂಢಿಗಳನ್ನು ರೂಪಿಸಿಕೊಂಡಿದ್ದೇವೆ ಮತ್ತು ನಮ್ಮದೇ ಆಟಿಕೆಗಳಲ್ಲಿ ಆನಂದ ಪಡಲು ಯತ್ನಿಸುತ್ತೇವೆ, ಹಾಗೂ ಬೇರೆಯವರ ಆಟಿಕೆಗಳನ್ನು ದ್ವೇಷಿಸುತ್ತೇವೆ. ಹೆಣಗಾಟ ಮತ್ತು ಹೋರಾಟ ನಡೆಯುತ್ತಲೇ ಇವೆ. ಶುದ್ಧ ಹಾಗೂ ಸರಳವಾದ ಸತ್ಯವನ್ನು ಕಂಡಾಗ ಕೂಡ, ನಾವು ಅದನ್ನು, ಅದಕ್ಕೆ ಹೊರತಾದ ಅನ್ಯ ವಿಷಯಗಳಿಂದ, ನಮ್ಮ ವಿಚಾರ ಹಾಗೂ ರೂಢಿಗಳಿಂದ ಮುಚ್ಚಿಹಾಕಲು ಪ್ರಯತ್ನಿಸುತ್ತ ಅದನ್ನು ವಿರೂಪಗೊಳಿಸುತ್ತೇವೆ. ಇದರ ಪರಿಣಾಮವಾಗಿ,ನಾವೇ ನಿರ್ಮಿಸಿಕೊಂಡ ವಿರೂಪಗೊಂಡ ಸ್ಥೂಲ ಹಾಗೂ ವಿಕೃತ ಬಿಂಬಗಳಿಗೆ ಗಾಢ ಅನುರಕ್ತಿಯಿಂದ ಅಂಟಿಕೊಳ್ಳುತ್ತೇವೆ, ಹಾಗೂ ಆ ವಿರೂಪಗಳನ್ನು, ಸ್ಥೂಲತೆಯನ್ನು ಮತ್ತು ಆಸುರೀ ವಿಕಾರಗಳನ್ನು ನಮ್ಮೊಳಗೆ ಹೀರಿಕೊಳ್ಳುತ್ತ “ಹೋಗುತ್ತೇವೆ.

ನಮ್ಮ ಸದ್ಯದ ಸ್ಥಿತಿಗೆ ಮೂಲಕಾರಣವಾದ ಸಾರಭೂತ ತತ್ತ್ವವನ್ನು ನಮ್ಮ ಗುರುಗಳು ಕೈವಶ ಮಾಡಿಕೊಂಡಿದ್ದಾರೆ. ನಮ್ಮದೇ ವಿಚಾರದ ಕ್ರಿಯೆಗಳ ರೂಪದಲ್ಲಿ ಅದು ನಮ್ಮ ಅರಿವಿನಲ್ಲಿ ಉಂಟು. ತತ್ತ್ವಶಃ ಅಥವಾ ಸಾರ-ರೂಪದಲ್ಲಿ ಈ ವಿಚಾರ ಶಕ್ತಿಯು, ಯಾವುದು ನಮ್ಮ ಈ ಪರಿಸ್ಥಿತಿಗೆ ಮೂಲ ಕಾರಣವಾಗಿರುವುದೋ ಅದೇ ಮೂಲ ಶಕ್ತಿಯೇ ಆಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಇದು ಒಂದು ತಿರುವು-ಮುರುವು ಸ್ಥಿತಿಯಲ್ಲಿದೆ. ಇದನ್ನು ಸ್ವಾಭಾವಿಕ ರೀತಿಯಿಂದ ಪುನರ್ನಿರ್ದೇಶಿಸುವ ಮೂಲಕ ನಮ್ಮ ಗುರುಗಳು ಅದರ ತಿರುವು- ಮುರುವನ್ನು ತೆಗೆದು ಹಾಕಿ ಅದನ್ನು ಸರಿಯಾದ ದಿಶೆಯಲ್ಲಿ ಸ್ಥಾಪಿತಗೊಳಿಸುತ್ತಾರೆ. ಅವರ ಪ್ರಾಣಾಹುತಿಯ ಪೂರ್ಣ ಪ್ರಯೋಜನ ಪಡೆಯಲು ಅವರೊಡನೆ ಸಹಕರಿಸುವುದೊಂದೇ ನಮಗೆ ಉಳಿದಿರುವ ಕೆಲಸವಾಗಿದೆ.

ನಮ್ಮ ಹೃದಯದಲ್ಲಿರುವ ಅವರ ಸಾನ್ನಿಧ್ಯದ ಅರಿವನ್ನು ಸದಾಕಾಲವೂ ಅವರು ನಮಗೆ ದಯಪಾಲಿಸಲಿ !

[ಸಹಜಮಾರ್ಗ ಪತ್ರಿಕೆ ನಂ. 3, 1969]