(ಮೇ ೧೯೭೦ ರಲ್ಲಿ ಶಹಜಹಾನಪುರದಲ್ಲಿ ದಾಖಲಿಸಿದ್ದು)
ಅತೀವ ಸಂತೋಷದ ಭಾವನೆಗಳೊಂದಿಗೆ ಈ ಸುಸಂಧಿಯನ್ನು ಬಳಸಿಕೊಂಡು ನಾನು ನಿಮಗೊಂದು ಸಂದೇಶವನ್ನು ಕಳಿಸುತ್ತಿದ್ದೇನೆ. ಅದು ಚಿಕ್ಕದಿರಬಹುದು. ಆದರೆ ಪ್ರೀತಿ-ವಾತ್ಸಲ್ಯಗಳೊಡನೆ, ನನ್ನ ಹೃದಯದಾಳದಿಂದ ಅದು ಉಕ್ಕಿಬಂದಿದೆ.
ಆತ್ಮವು, ಕಣ್ಮರೆಯಾಗಿಹೋದ ತನ್ನ ನಿಜಲಕ್ಷಣವನ್ನು ಅನುಭವಿಸಲು ತವಕಿಸುತ್ತಿದೆ. ಮತ್ತು ಅಲ್ಪಜೀವಿಯಾದ ನಾನು ಮುಕ್ತಿಯ ಮಾರ್ಗದಲ್ಲಿ ಮುನ್ನಡೆಯುವ ಸಹಯಾತ್ರಿಕರನ್ನು ಅರಸುತ್ತಿದ್ದೇನೆ. ಸಹಪಥಿಕರನ್ನು ಪಡೆಯುವ ನನ್ನ ಆಶಯವು, ಅವರು ಗಂತವ್ಯದ ವರೆಗೆ ಸುರಕ್ಷಿತವಾಗಿ ತಲುಪುವಂತೆ ಸಹಾಯ ಮಾಡಿ ಅವರ ಸೇವೆಗೈಯುವುದೇ ಆಗಿದೆ. ಈ ಕಲ್ಪನೆಯು ಮೊದಲ ನೋಟಕ್ಕೆ ನಿಮಗೆ ವಿಚಿತ್ರವೆನಿಸಬಹುದು. ಆದರೆ, ನೀವು ಒಮ್ಮೆ ಕೊಂಚ ನಿಂತು ನೋಡಿ, ಗಂತವ್ಯವನ್ನು ತಲುಪುವ ಸಮಸ್ಯೆಯನ್ನು ಕುರಿತು ವಿಚಾರ ಮಾಡಿದರೆ ನೀವು ಪಯಣಿಸುತ್ತಿರುವುದು ನಿಮ್ಮ ಮೂಲನೆಲೆಯ ಕಡೆಗೆ, – ವಿಧಿಯ ವ್ಯಂಗ್ಯದಿಂದಾಗಿ ಎಲ್ಲಿಂದ ನೀವು ದೂರ ಎಸೆಯಲ್ಪಟ್ಟಿರುವಿರೋ ಆ ”ನಿಜಧಾಮ’ದ ಕಡೆಗೆ – ಎಂಬ ತೀರ್ಮಾನಕ್ಕೆ ಖಂಡಿತವಾಗಿಯೂ ಬರುವಿರಿ.
“ವಿಧಿಯ ವ್ಯಂಗ್ಯ”ವೆಂಬ ಪದಪುಂಜವನ್ನು ನಾವು ಪ್ರಯೋಗಿಸುವಾಗ ಅಸಮತೋಲನದ ಲಕ್ಷಣವು ನಮ್ಮ ಸ್ಮೃತಿಪಟಲದಲ್ಲಿ ಮೂಡುತ್ತದೆ. ಎಲ್ಲಿಯವರೆಗೆ ಸಂತುಲಿತ ಸ್ಥಿತಿಯು ನೆಲೆಸಿತ್ತೋ ಅಲ್ಲಿಯವರೆಗೆ ನಮಗೆ ನಮ್ಮದೇ ಆದ ‘ಸ್ವರೂಪ’ವೆಂಬುದಿರಲಿಲ್ಲ. ನಮ್ಮನ್ನು ನಾವು ಕೇವಲ ತೆರೆದುಕೊಂಡು, ಕಳೆದುಕೊಂಡಿರುವ ನಮ್ಮ ಸಂತುಲಿತ ಸ್ಥಿತಿಯನ್ನು ಮರಳಿ ಪಡೆಯಬೇಕು.
ನಮ್ಮ ಸಮತೋಲನವನ್ನು ಪುನಃ ಸ್ಥಾಪಿಸಿಕೊಂಡೆವೆಂದಾಗ ಅದೆಷ್ಟು ಸರಳವೆಂದೆನಿಸುವುದಿಲ್ಲವೆ! ಅದು ತೀರ ಸರಳ ವಿಷಯವೇ ಸರಿ. ಆದರೆ, ನಮ್ಮ ಅಸಮತೋಲನದ ಸ್ಥಿತಿಯಿಂದಾಗಿ ನಾವು ಉಂಟುಮಾಡಿಕೊಂಡಿರುವ ತೊಡಕುಗಳ ಕಾರಣ ಅದನ್ನು ಅನುಸರಿಸುವುದು ಕಷ್ಟವಾಗುತ್ತದೆ. ನಾವು ಯಾವಾಗಲೂ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಪ್ರಚಲಿತವಿರುವ ಕ್ಲಿಷ್ಟ ವಿಧಾನಗಳ ಮೂಲಕ ನಮ್ಮ ಜೀವನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಯಸುತ್ತೇವೆ- ಅದಕ್ಕಾಗಿಯೇ ನಿರಾಶೆ ಮತ್ತು ಜುಗುಪ್ಸೆಯಲ್ಲಿ ಕೊನೆಗೊಳ್ಳುವುದು. ನಾವು ಕೊಬ್ಬು ತುಂಬಿದ (ಸ್ಥೂಲವಾದ) ಪದಾರ್ಥಗಳಿಂದ ಅರ್ಕವನ್ನು (ಸಾರವನ್ನು) ಹೊರತೆಗೆಯಲು ಬಯಸುತ್ತೇವೆ, ಅಂದರೆ ಭೌತಿಕ ಜ್ಞಾನದಿಂದ ತುಂಬಿ ಉಬ್ಬಿಕೊಂಡಿರುವ ವಸ್ತುಗಳಿಂದ ಸಾರವನ್ನು ತೆಗೆಯಲು ಬಯಸುತ್ತೇವೆ ಹೊರತಾಗಿ, ಎಷ್ಟೇ ಕೆಸರು ತಾಗಿದ್ದರೂ, ಕಣಕಣಗಳನ್ನು ಬೆಳಗಿಸಬಲ್ಲ ರಂಜಕವು (ಫಾಸ್ಪರಸ್) ಹೇರಳವಾಗಿರುವ ಅಸ್ಥಿಗಳಿಂದಲ್ಲ ! ಹೀಗೆ ನಮ್ಮ ಹೋರಾಟದಲ್ಲಿ ಪ್ರಯಾಸವು ಹೆಚ್ಚುತ್ತ ಹೋಗುತ್ತದೆ.
ಸುಲಭವಸ್ತುವನ್ನು ಪಡೆಯಲು ಸುಲಭ ಸಾಧನಗಳನ್ನೇ ಅಂಗೀಕರಿಸಿರಿ. ‘ಸಿದ್ಧಾಂತ’ಗಳು ಅಂಥ ಒಳಿತನ್ನೇನೂ ಮಾಡಲಾರವು. ಮೂಲವನ್ನು ತಲುಪುವ ಮಾರ್ಗವನ್ನು ಕ್ರಮಿಸಿ ಅದನ್ನು ಕಂಡುಕೊಂಡವನ ಮಾರ್ಗದರ್ಶನದಲ್ಲಿ ನಡೆಸಿದ ಪ್ರತ್ಯಕ್ಷ ಅನುಷ್ಠಾನವು ಮಾತ್ರವೇ ನಿಮ್ಮ ಭಾಗ್ಯವನ್ನು ರೂಪಿಸಬಲ್ಲದು.
ನಿಮಗೆ ಅತ್ಯಂತ ಪ್ರಿಯವೂ, ನಿಕಟವೂ ಆದ ಗಮ್ಯಸ್ಥಾನದವರೆಗೆ ನಿಮ್ಮನ್ನು ಕರೆದೊಯ್ಯಬಲ್ಲಂಥ ವ್ಯಕ್ತಿಗಳು ಭರತಖಂಡದಲ್ಲಿದ್ದಾರೆ. ಆದರೆ ಆಯ್ಕೆ ನಿಮ್ಮದೇ. ಅಂಥವನನ್ನು ಕಂಡುಕೊಳ್ಳುವ ನಿಮ್ಮ ಹುಡುಕಾಟದಲ್ಲಿ, ನಾನು ಇಷ್ಟು ಹೇಳಬಹುದು ಯಾರಲ್ಲಿ ಸ್ವಾರ್ಥದ ಉದ್ದೇಶವಿಲ್ಲದ ಸೇವಾಭಾವವನ್ನು ನೀವು ಕಾಣುವಿರೋ, ಸತ್ಯವಸ್ತುವು ಅಲ್ಲಿಯೇ ಉಂಟು. ನೀವು ಗಮನಿಸಬೇಕಾದ ಇನ್ನೊಂದು ವಿಶೇಷ ವಿಷಯವೆಂದರೆ, ಯಾರು ತನ್ನ ಆಂತರಿಕ ದೈವೀಶಕ್ತಿಯಿಂದ ನಿಮ್ಮೊಳಗೆ ಕುದಿತವನ್ನುಂಟುಮಾಡಿ, ನಿಮ್ಮ ಕಾರ್ಯವನ್ನು ಸುಗಮಗೊಳಿಸ ಬಲ್ಲನೋ ಆತನು ಮಾತ್ರ ನಿಮ್ಮ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಲು ಅರ್ಹನಾದ ವ್ಯಕ್ತಿ ಎಂಬುದನ್ನು ನೀವು ಕಂಡುಕೊಂಡು ಖಚಿತಪಡಿಸಿಕೊಳ್ಳಬೇಕು. ಅಂಥ ವ್ಯಕ್ತಿಯು ದೊರೆತನೆಂಬುದು ಜೀವನದ ಸಮಸ್ಯೆಯ ಪರಿಹಾರವು ಸಿದ್ದ ಎಂಬುದರ ನಿಶ್ಚಿತ ಸಂಕೇತ. ಅನ್ವೇಶಕರೆಲ್ಲ ಅಂಥ ಮಾರ್ಗದರ್ಶಿಯನ್ನು ಪಡೆಯಲೆಂದು ನಿಮ್ಮೆಲ್ಲರ ಪರವಾಗಿ ನಾನು ಪ್ರಾರ್ಥಿಸುತ್ತೇನೆ. ತಥಾಸ್ತು.
ಅಂಥ ವ್ಯಕ್ತಿಯನ್ನು ನಿಮ್ಮ ಮಾರ್ಗದರ್ಶಿಯಾಗಿ ನೀವು ಪಡೆದ ಮೇಲೆ, ನಿಮ್ಮ ಆಧ್ಯಾತ್ಮಿಕ ಉನ್ನತಿಗೋಸ್ಕರ ನಾನು ಪ್ರಾರ್ಥಿಸುವುದಕ್ಕೆ ಉಳಿಯುವುದೇನಿಲ್ಲವೆಂದು ನನ್ನೆಣಿಕೆ, ಕರ್ತವ್ಯಬದ್ಧನಾಗಿ ನಾನು, ಜಗತ್ತಿನಲ್ಲಿಂದು ಪ್ರಸ್ತುತ ಬೆಳಗುತ್ತಿರುವ ಜ್ಯೋತಿಯನ್ನು ನೀವೆಲ್ಲರೂ ಕಾಣುವಂತಾಗಲಿ ಎಂದು ಹಾರೈಸುತ್ತೇನೆ.
***