ಇತ್ತೀಚೆಗೆ ಪೂಜ್ಯ ಭಾಯಿ ಸಾಹೇಬ ಶ್ರೀ ರಾಘವೇಂದ್ರರಾಯರ ಜೊತೆಗೆ 9-6-2005 ರಿಂದ 13-6-2005ರವರೆಗೆ ಪಯಣಿಸುವ ಸದಾವಕಾಶ ನನಗೆ ಲಭಿಸಿತು. ನಾವು ಕೆಲವು ಸ್ಥಳಗಳಾದ ನಾರಾಯಣಪುರ, ಆಲಮಟ್ಟಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಸವದತ್ತಿ, ನವಿಲುತೀರ್ಥ, ಮತ್ತು ಧಾರವಾಡ ಹಾಗೂ ಹೊಸಪೇಟೆ ಕೇಂದ್ರಗಳನ್ನು ಭೇಟಿ ಕೊಟ್ಟೆವು. 13-6-2005 ರಂದು ಮರು ಪ್ರಯಾಣವಾದ ಮೇಲೆ ರಾಯಚೂರಿನಲ್ಲಿ ಪೂಜ್ಯ ಭಾಯಿ ಸಾಹೇಬರು “ಇತ್ತೀಚಿನ ತೀರ್ಥಯಾತ್ರೆ”ಯೆಂಬ ಶೀರ್ಷಿಕೆಯಡಿ ಒಂದು ಪ್ರಬಂಧ ಬರೆಯಲು ಸೂಚಿಸಿದರು.
‘ತೀರ್ಥಯಾತ್ರೆ’ ಎಂಬ ಪದವು ವೃದ್ಧಾಪ್ಯದ ಅರ್ಥ ಕೊಡುತ್ತದೆ ಎಂದೆನಿಸಿತು. ನಿಘಂಟುವಿನ ಪ್ರಕಾರ ಅದಕ್ಕಿರುವ ಅರ್ಥ ಧಾರ್ಮಿಕ ಕಾರಣಗಳಿಗಾಗಿ ಪವಿತ್ರ ಸ್ಥಳಗಳಿಗೆ ಕೈಗೊಂಡ ಯಾತ್ರೆ. ಹಿಂದುಗಳ ದೃಷ್ಟಿಯಲ್ಲಿ ತೀರ್ಥಯಾತ್ರೆಯ ಮೂಲಕ ವ್ಯಕ್ತಿಯೊಬ್ಬ ಸಂತರನ್ನು ಸಂದರ್ಶಿಸಿ ಅವರಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ನನ್ನ ಅಂತರ್ದೃಷ್ಟಿ ಅದರ ನಿಜಾರ್ಥ ಮತ್ತು ತಾತ್ಪರ್ಯದ ಬಗ್ಗೆ ಮಂಥನ ಮಾಡಲು ಪ್ರೇರೇಪಿಸಿತು. ನಡೆದುದೆಲ್ಲವನ್ನು ಸ್ಮೃತಿ ಪಟಲದ ಮೇಲೆ ತಂದುಕೊಳ್ಳಲಾರಂಭಿಸಿದೆನು. ಸಂಪೂರ್ಣ ಚಿತ್ರಣ ಕ್ರಮವಾಗಿ ಮೂಡಲಾರಂಬಿಸಿತು. ಆರಂಭದಲ್ಲಿ ಒಂದು ಪ್ರವಾಸದಂತಿದ್ದರೂ, ನಿಜಾರ್ಥದಲ್ಲಿ ಒಂದು ತೀರ್ಥಯಾತ್ರೆಯೇ ಆಗಿತ್ತು. ಈ ಕೆಳಗಿನ ಕೆಲವು ಘಟನೆಗಳು ಬೆಳಕು ಬೀರುವಂತಹವು ಮತ್ತು ಸತ್ಯವನ್ನು ಹೊರ ಹೊಮ್ಮಿಸು(ಬಯಲು ಮಾಡು) ವಂತಹವು ಆಗಿವೆ.
9-6-2005 :-
ನಾನು ಪೂಜ್ಯ ಭಾಯಿ ಸಾಹೇಬರನ್ನು ನಾರಾಯಣಪುರದಲ್ಲಿ ಕೂಡಿಕೊಂಡೆನು. ನಾನು ತಲುಪಿದೊಡನೆ ಅಸಹನೀಯವಾಗಿದ್ದ ವಾತಾವರಣ ತಿಳಿಯಾಯಿತು ಎಂದರು. ನಾವು ಪ್ರಯಾಣದ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೆವು. ನಾನು ಪ್ರಾಣಾಹುತಿ ಮತ್ತು ಅದರ ಕಾರ್ಯತಂತ್ರವೆಂಬ ಕುತೂಹಲಕರವಾದ ವಿಷಯವನ್ನೆತ್ತಿದೆನು. ಅವರು ಸಂಕ್ಷಿಪ್ತವಾಗಿ ಕೆಳಗಿನಂತೆ ವಿವರಿಸಿದರು.
ಪ್ರಾಣಾಹುತಿಯು ಎರಡು ‘ಚೇತನ’ಗಳ ನಡುವೆ ನಡೆಯುವ ಪ್ರಕ್ರಿಯೆ, ಮೊದಲನೇಯದು ಮೂಲ(ಗುರು) ಹಾಗು ಎರಡನೇಯದು ಸ್ವೀಕರಿಸುವವನು (ಜಿಜ್ಞಾಸು). ಇದನ್ನು ದಯಪಾಲಿಸಬೇಕಾದ ಸಂದರ್ಭದಲ್ಲಿ, ಪ್ರಶೀಕ್ಷಕನು ತಾನಾಗಿಯೇ ಅಂತಿಮ ಸತ್ಯದೊಡನೆ ನಿರ್ದಿಷ್ಟ ಸಲಹೆಯೊಂದಿಗೆ ಪ್ರಾರ್ಥನೆಯ ಮೂಲಕ ಜೋಡಿಸುತ್ತಾನೆ. ಆಗ ಮಾತ್ರ ಅಂತಿಮ ಚೇತನವು ಜಿಜ್ಞಾಸುವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತದೆ. ಈಗ ಪ್ರಾಣಾಹುತಿಯು ಆರಂಭಗೊಳ್ಳುತ್ತದೆ. ಹಾಗೂ ಅದಕ್ಕೆ ಊರ್ಧ್ವಮುಖ ಮತ್ತು ಮುಮ್ಮುಖ ಪ್ರವೃತ್ತಿ ಇರುತ್ತದೆ. ಯಾವದೇ ಅಡೆ-ತಡೆಗಳಿಲ್ಲದೆ ಮಾರ್ಗ ಸುಗಮವಾಗಿದ್ದರೆ ಜಿಜ್ಞಾಸುವಿನಲ್ಲಿಯ ಚೇತನವು ಪ್ರಾಣಾಹುತಿಯನ್ನು ಸ್ವೀಕರಿಸುತ್ತದೆ. ಅನುಭವದಿಂದ ಹೇಳುವದಾದರೆ ವಾಸ್ತವಿಕತೆ ಹೀಗಿರುವದಿಲ್ಲ. ಸಾಮಾನ್ಯವಾಗಿ ಜಿಜ್ಞಾಸುವಿನ ಚೇತನದ ಸುತ್ತ ಅಡೆ-ತಡೆ ಅಥವಾ ಜಾಲವಿದ್ದೇ ಇರುತ್ತದೆ. ಈ ಅಡೆ- ತಡೆ/ಜಾಲದ ಕಾರಣದಿಂದಲೇ, ಚೇತನವು ಅಧೋಮುಖ ಹಾಗು ಹಿನ್ನಡೆ ಅನುಭವಿಸಬೇಕಾಗುತ್ತದೆ. ಪ್ರಾಣಾಹುತಿಯು ಅಡೆ-ತಡೆಯನ್ನು ತೆಗೆದು ಹಾಕಿ, ಅದರ ಗತಿಯಲ್ಲಿಯ ದಿಶೆಯನ್ನು ಬದಲಾಯಿಸಿ ಅಧೋಮುಖ ಮತ್ತು ಹಿಮ್ಮುಖವಾದದ್ದನ್ನು ಊರ್ಧ್ವಮುಖ ಮತ್ತು ಮುನ್ನಡೆಯನ್ನಾಗಿ ಪರಿವರ್ತಿಸುತ್ತದೆ. ಪ್ರಾಣಾಹುತಿಯ ಕಾರ್ಯವು ಯಾವಾಗಲೂ ಗುಣಧರ್ಮದಲ್ಲಿ ಕೇಂದ್ರಾಪಗಾಮಿ (Centrifugal) ಅರ್ಥಾತ್ ಕೆಂದ್ರದಿಂದ ಹೊರಹೊಮ್ಮುವಂತಹದಿದ್ದು ಅದರ ಅವಿರ್ಭಾವವು (manifestation) ಕೆಂದ್ರಾಭಿಗಾಮಿ (Centripetal) ಅಂದರೆ ಕೇಂದ್ರದೆಡೆಗೆ ಧಾವಿಸುವಂತಹದ್ದಾಗಿರುತ್ತದೆ. ಜಿಜ್ಞಾಸಿಯು ಸೂಕ್ಷ್ಮ- ಗ್ರಾಹಿಯಾಗಿದ್ದರೆ ಈ ಪರಿವರ್ತನೆಯನ್ನು ಶಾಂತಿ, ನಿಶ್ಚಲತೆ ಹಾಗು ಲಘುತ್ವಗಳಿಂದಾಗಿ ಗ್ರಹಿಸುತ್ತಾನೆ. ಈ ವಿಷಯವನ್ನು ಪ್ರಸ್ತಾಪಿಸಿದಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಅನೇಕ ಸಮಾರಂಭಗಳಲ್ಲಿ ಅವರು ಮಾಡಿದ ಭಾಷಣಗಳ ಕಡೆಗೆ ನನ್ನ ಮನಸ್ಸು ತಿರುಗಿತು ನಾವು ಮಾಡಬೇಕಿರುವದು ಏನು ಮತ್ತು ಈ ಸಾಧನೆ ಯಾತಕ್ಕಾಗಿ? ನಮ್ಮ ಆಯ್ಕೆ ಇಂತಹದಕ್ಕೆ ಇತ್ತೆ? ಸರಳ ಮತ್ತು ನೇರ ಶಬ್ದಗಳಲ್ಲಿ ಹೇಳಬೇಕೆಂದರೆ ಸ್ವೀಕೃತಿ ಮತ್ತು ಆಯ್ಕೆಗಳು ಅಭ್ಯಾಸಿಯ ಪಾಲಿನ ಮೂಲಭೂತ ಹಾಗು ಅತಿಮುಖ್ಯ ಮಾನದಂಡವಾಗಿದ್ದು ಅವುಗಳಿಲ್ಲದೆ ಯಶಸ್ಸು ಮರೀಚಿಕೆಯಾಗುತ್ತದೆ.
10-6-2005 :-
ನಾವು ಕೂಡಲಸಂಗಮದ ಸುತ್ತಲಿನ ಕೆಲವು ಸ್ಥಳಗಳನ್ನು ಸಂದರ್ಶಿಸಲು ಹೊರಟೆವು. ಪೂಜ್ಯ ಭಾಯಿ ಸಾಹೇಬರು ಪ್ರವಾಸದಲ್ಲಿ ಗಾಡಿಯಿಂದ ಹೊರಗೆ ಬರಲೇ ಇಲ್ಲ. ಅವರು ಹಾಸ್ಯವಾಗಿ “ಐಹೊಳೆಯ ಮೂರ್ತಿಗಳನ್ನು ಖಜುರಾಹೊಗೆ ಹೋಲಿಸಬಹುದೆ?” ಎಂದರು. ಆಲಮಟ್ಟಿಯಲ್ಲಿ ಸಂಜೆಯ ಸಮಯವಾಗಿತ್ತು. ಸ್ವಯಂಪ್ರೇರಿತವಾಗಿ ಅವರು ಕಥೆಯೊಂದನ್ನು ಹೇಳಿದರು.
ಒಮ್ಮೆ ವಯೋವೃದ್ಧನಾದ ಒಬ್ಬ ಗುರುವು ಕಾಶೀ ವಿಶ್ವನಾಥನ ದರ್ಶನದ ಬಯಕೆಯನ್ನು ತನ್ನ ಶಿಷ್ಯರ ಮುಂದೆ ವ್ಯಕ್ತಪಡಿಸಿದನು. ಅವನ ಶಿಷ್ಯರು ಗುರುವನ್ನು ಕಾಶಿ ಯಾತ್ರೆಗೆ ಕರೆದೊಯ್ದರು. ಗುರುವು ದಾರಿಯುದ್ದಕ್ಕೂ ‘ಕಾಶಿ ಬಂದಿತೆ’ ಎಂದು ಆಗಾಗ್ಗೆ ಕೇಳುತ್ತಿದ್ದನು. ಕಾಶೀಯನ್ನು ಪ್ರವೇಶಿಸುವದಕ್ಕಿಂತ ಮುಂಚೆಯೇ ಗುರುವು ಕೊನೆಯುಸಿರನ್ನೆಳೆದನು. ನಿರಾಶರಾದ ಶಿಷ್ಯರು ಗುರುವಿನ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮುಗಿಸಿ ಮರಳಿದರು.
ಆ ಗುರುವು ಕಾಶಿಯ ಒಂದು ಚಾಂಡಾಲ ಮನೆತನದಲ್ಲಿ ಪುನರ್ಜನ್ಮ ಪಡೆದನು. ವರುಷಗಳುರುಳಿದಂತೆ ಹುಡುಗನು ಬೆಳೆಯತೊಡಗಿದನು. ಆದರೆ ಅವನು ಮನೆಯ ಅಥವಾ ಹೊರಗಿನ ವಿಷಯಗಳಲ್ಲಿ ಒಲವು ತೋರಿಸಲಿಲ್ಲ. ತಂದೆ-ತಾಯಿ ಮತ್ತು ಜನರು ಅವನ ಬಗ್ಗೆ ಭರವಸೆ ಬಿಟ್ಟುಕೊಟ್ಟರು. ಅವನನ್ನು ಪೆದ್ದ/ಮೂಢನೆಂದೇ ಕರೆದರು.
ಚಾಂಡಾಲನಾಗಿ ಕೆಲಸ ಮಾಡುತ್ತಿದ್ದ ಅವನ ತಂದೆ ಕೆಲದಿನಗಳ ಮಟ್ಟಿಗೆ ರಜೆ ಪಡೆಯಲು ಬಯಸಿದ. ಕಾಶೀ ರಾಜನ ಸನ್ನಿಧಿಗೆ ತೆರಳಿ ತನ್ನ ಬೇಡಿಕೆಯನ್ನು ಮುಂದಿಟ್ಟನು. ತನ್ನ ಮಗನ ಬಗ್ಗೆ ವಿವರಿಸಿ, ಬದಲಿ ವ್ಯವಸ್ಥೆಗಾಗಿ ತನ್ನ ಮಗನ ಸೇವೆಯ ಅರಿಕೆ ಮಾಡಿಕೊಂಡನು. ರಾಜನು ಅವನ ವಿನಂತಿಗೆ ಮನ್ನಣೆಯನ್ನು ನೀಡಿದನು. ಮಗನು ತಂದೆಯಿಂದ ತನ್ನ ಕರ್ತವ್ಯದ ಬಗ್ಗೆ ತಿಳಿದುಕೊಂಡು ಕೆಲಸವನ್ನು ಪ್ರಾರಂಭಿಸಿದ. ಇದು ತುಂಬಾ ಸರಳವಾಗಿತ್ತು. ಇಡೀ ರಾತ್ರಿ ಊರನ್ನೆಲ್ಲ ಸುತ್ತು ಹಾಕುವದು ಮತ್ತು ಜನರನ್ನು ಎಚ್ಚರಿಸುವದು ಅವನ ಕರ್ತವ್ಯವಾಗಿತ್ತು.
ಆ ಪೆದ್ದ ಹುಡುಗನ ಬಗ್ಗೆ ರಾಜನಿಗೆ ತನ್ನದೇ ಆದ ಸಂಶಯವಿದ್ದಿತು. ಒಂದು ರಾತ್ರಿ ರಾಜನು ಇಡೀ ನಾಲ್ಕು ಪ್ರಹರಗಳ ಕಾಲ ಆ ಹುಡುಗನನ್ನು ಹಿಂಬಾಲಿಸಿದ. ಆ ಹುಡುಗನ ಎಚ್ಚರಿಕೆಯ ಮಾತುಗಳನ್ನು ಕೇಳಿ ಆಶ್ಚರ್ಯಚಕಿತನೂ, ಸ್ಥಂಭೀಭೂತನೂ ಆದ. ಅವನ ಎಚ್ಚರಿಕೆಯ ಸಂದೇಶವು ಅರ್ಥಗರ್ಭಿತವೂ ವಿಚಾರ ಪ್ರಚೋದಕವೂ ಆಗಿತ್ತು. ಆ ಸಂದೇಶವು ಈ ಕೆಳಗಿನಂತಿತ್ತು.
ಕಾಮ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ ಜ್ಞಾನ ರತ್ನಾ ಪಹರಾಯ ತಸ್ಮಾತ್ ಜಾಗೃತ ಜಾಗೃತಃ ಮಾತಾ ನಾಸ್ತಿ ಪಿತಾ ನಾಸ್ತಿ ನಾಸ್ತಿ ಬಂಧು ಸಹೋದರಃ ಅರ್ಥಂ ನಾಸ್ತಿ ಗೃಹಂ ನಾಸ್ತಿ ತಸ್ಮಾತ್ ಜಾಗೃತ ಜಾಗೃತಃ ಆಶಾಯ ಬಧ್ಯತೆ ಲೋಕಃ ಕರ್ಮಣ ಬಹು ಚಿಂತಾಯ ಆಯುಃ ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗೃತ ಜಾಗೃತಃ ಜನ್ಮ ದುಃಖಂ ಜರಾ ದುಃಖಂ ಜಾಯಾ ಪುನಃ ಪುನಃ ಸಂಸಾರ ಸಾಗರಂ ದುಃಖಂ ತಸ್ಮಾತ್ ಜಾಗೃತ ಜಾಗೃತಃ
ಭಾವಾರ್ಥ (ಅನುವಾದವಲ್ಲ)
- ದರೋಡೆರನು ಆಸೆ, ಕ್ರೋಧ,ಲೋಭಗಳ ಮಾಯಾ ರೂಪದಲ್ಲಿ ಕೆಲಸ ಮಾಡುತ್ತಿದ್ದಾನೆ. ನಿಮ್ಮ ಜ್ಞಾನರತ್ನವನ್ನು ಅಪಹರಿಸುತ್ತಿದ್ದಾನೆ ಆದ್ದರಿಂದ ಜಾಗೃತರಾಗಿರಿ.
- ತಂದೆಯೂ ಇಲ್ಲ, ತಾಯಿಯೂ ಇಲ್ಲ, ಸಹೋದರನಿಲ್ಲ, ಬಂಧುವೂ ಇಲ್ಲ, ಹಣವೂ ಇಲ್ಲ, ಮನೆಯೂ ಇಲ್ಲ. (ಸಾಕ್ಷಾತ್ಕಾರದ ಮಾರ್ಗವನ್ನು ಅನುಸರಿಸುವಾಗ) ನೀನು ಏಕಾಂಗಿಯಾಗಿರುತ್ತಿ ಆದ್ದರಿಂದ ಜಾಗೃತರಾಗಿರಿ.
- ಇಚ್ಛೆಗಳು ಮನುಷ್ಯನನ್ನು ಚಿಂತೆಗೀಡು ಮಾಡುತ್ತವೆ. ಯಾವ ಪ್ರತಿಫಲವನ್ನು ಕಾಣದೆ ತಮ್ಮ ಜೀವನವನ್ನು ಹಾಳು ಮಾಡುತ್ತಾರೆ. ಆದ್ದರಿಂದ ಜಾಗೃತರಾಗಿರಿ.
- ಜೀವನ ಚಕ್ರದಲ್ಲಿ ಎಷ್ಟೇ ಸಲ ಬಂದರೂ ಹುಟ್ಟು, ಅನಾರೋಗ್ಯ, ಮುಪ್ಪು, ಸಂಕಷ್ಟಗಳನ್ನು ಬಿಟ್ಟು ಏನೂ ಇರುವದಿಲ್ಲ. ಆದರಿಂದ ಜಾಗೃತರಾಗಿರಿ.
ಆಗ ರಾಜನಿಗೆ ಈ ಹುಡುಗ ಪೆದ್ದನಲ್ಲ. ಆದರೆ ವಿಶಿಷ್ಟ ವ್ಯಕ್ತಿಯಾಗಿದ್ದಾನೆಂದು ಮನವರಿಕೆಯಾಗಿ, ಅವನಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ನಿರ್ಧರಿಸಿದನು. ಆದರೆ ಚಾಂಡಾಲನ ಮಗನು ಅದನ್ನು ನಿರಾಕರಿಸಿದನು. ರಾಜನು ತನ್ನ ಸಿಂಹಾಸನವನ್ನೇ ಕೊಡುವೆನೆಂದನು. ಅದನ್ನೂ ಸಹ ನಿರಾಕರಿಸಿದನು. ಕೊನೆಗೆ ನಿನಗೇನು ಬೇಕೆಂದು ರಾಜನು ಕೇಳಿದಾಗ ತನ್ನ ತಂದೆಯು ವೃದ್ಧನಾಗುತ್ತಿರುವದರಿಂದ ಆತನ ಕೆಲಸವನ್ನೇ ಕೊಡಿರೆಂದು ಕೇಳಿದನು. ನಿರ್ವಾಹವಿಲ್ಲದೆ ರಾಜನು ಅವನ ಕೋರಿಕೆಯಂತೆ ಚಾಂಡಾಲ ಸ್ಥಾನಕ್ಕೆ ನೇಮಿಸಿದನು. ಹುಡುಗನು ತನ್ನ ಕೆಲಸವನ್ನು ವಿಶಿಷ್ಟ ರೀತಿಯಲ್ಲಿ ನಿರ್ವಹಿಸತೊಡಗಿದನು. ಶಿಕ್ಷೆಯಲ್ಲಿ ತಲೆದಂಡ ಕೊಡಬೇಕಾದ ವ್ಯಕ್ತಿಗೆ ‘ಹರಿ ಓಂ’ ಅನ್ನಲು ಪ್ರೋತ್ಸಾಹಿಸುತ್ತಿದ್ದನು. ಅವನೊಂದಿಗೆ ತಾನು ಅದನ್ನೇ ಅನ್ನುತ್ತಿದ್ದನು. ಹೀಗೆ ಜಪಿಸುತ್ತಿರಲು ಇಬ್ಬರೂ ತನ್ಮಯರಾಗಿ ಕುಣಿಯುತ್ತಿದ್ದರು. ಆ ಘಳಿಗೆಯಲ್ಲಿ ಹುಡುಗನು ತನ್ನ ಕರ್ತವ್ಯವನ್ನು ನೆರವೇರಿಸುತ್ತಿದ್ದನು. ಈ ಕೆಲಸವೆಲ್ಲ ಸುಲಲಿತವಾಗಿ ಹಾಗು ಪೂರ್ವನಿರ್ಧಾರಿತದಂತೆ ನಡೆಯುತ್ತಿತ್ತು. ತಲೆದಂಡ ಕೊಟ್ಟವರೆಲ್ಲ ನೇರವಾಗಿ ವೈಕುಂಠಕ್ಕೆ ಹೋಗತೊಡಗಿದರು. ತತ್ಪರಿಣಾಮವಾಗಿ ಯಮನಿಗೆ ಕೆಲಸವಿಲ್ಲದಂತಾಯಿತು. ಅವನು ವಿಷ್ಣುವಿನ ಬಳಿಗೆ ತೆರಳಿ ನಿಸರ್ಗದ ಕೆಲಸದಲ್ಲಿ ಅಡ್ಡಿಯಾಗುತ್ತಿರುವ ಬಗ್ಗೆ ನಿವೇದಿಸಿದನು. ವಿಷ್ಣುವು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಬ್ರಹ್ಮನ ಸಹಾಯ ಕೋರಲು ತಿಳಿಸಿದನು. ನಿಯಮದ ವಿರುದ್ಧವಾದ ಸಮಾಚಾರವನ್ನು ಕೇಳಿ ಆಶ್ಚರ್ಯಚಕಿತನಾದನು. ಅವರಿಬ್ಬರೂ ಧೃಡಪಡಿಸಿಕೊಳ್ಳಲು ಭೂಲೋಕಕ್ಕೆ ಬಂದರು. ನಡೆಯುತ್ತಿರುವ ಆ ದೃಶ್ಯದಿಂದ ಅವರೂ ಸಹ ತಲ್ಲೀನರಾದರು. ಸಂಬಂಧಿತ ವ್ಯಕ್ತಿಯ ತಲೆದಂಡದ ನಂತರ ಯಮ-ಬ್ರಹ್ಮರು ಮೊದಲಿನ ಸ್ಥಿತಿಗೆ ಬಂದರು ಮತ್ತು ಹುಡುಗನನ್ನು ವೈಕುಂಠಕ್ಕೆ ಕರೆದೊಯ್ದರು.
ಈ ಕಥೆಯನ್ನು ಹೇಳಿದ ನಂತರ ಪೂಜ್ಯ ಭಾಯಿ ಸಾಹೇಬರು “ಅರ್ಥವಾಯಿತೆ’ ಎಂದು ಪ್ರಶ್ನಿಸಿದರು. ಸಂಪೂರ್ಣ ಕಥೆಯು ಮನದಲ್ಲಿ ಮೂಡಿದ್ದಲ್ಲದೆ ಹೃದಯದಲ್ಲೂ ಮೂಡಿದೆ ಎಂದು ಉತ್ತರಿಸಿದೆನು. ಕಥೆಯಲ್ಲಡಗಿದ ಸಂದೇಶದ ಪ್ರಸ್ತುತೆ ಹಾಗು ತಲೆ ತೆಗೆಯುವ ಅದ್ವಿತೀಯ ವಿಧಾನಗಳ ಪ್ರಮುಖಾಂಶಗಳ ಬಗ್ಗೆ ವಿವರಣೆ ನೀಡಿದೆನು. ಅದರಲ್ಲಿಯ ಸಮ್ಮತಾರ್ಹ ಮತ್ತು ಸಮ್ಮತವಾಗದ ಕೆಲವು ಅಂಶಗಳನ್ನು ತಿಳಿಸಿದೆನು. ನನ್ನ ಈ ಪ್ರತಿಕ್ರಿಯೆಯನ್ನು ಭಾಯಿ ಸಾಹೇಬರು ಮೌನವಾಗಿ ಗಮನವಿಟ್ಟು ಕೇಳುತ್ತಿದ್ದರು. ನನ್ನ ಪ್ರತಿಕ್ರಿಯೆ ಅಪೂರ್ಣವೆಂದು ಭಾಸವಾಗುತ್ತಿತ್ತು. ನಂತರ ನನ್ನ ಅಪೂರ್ಣ ಪ್ರತಿಕ್ರಿಯೆ ಬಗ್ಗೆ ಯೋಚಿಸತೊಡಗಿದೆ. ಕಥೆಯ ನೈತಿಕ ಹಾಗು ಮುಖ್ಯ ಉದ್ದೇಶದ ಕಡೆಗೆ ಗಮನ ನೀಡಬೇಕೆಂದೆನಿಸಿತು. ಇದರಲ್ಲಿ ಎರಡು ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಮೊದಲನೆಯದು ಗುರು ಪುನರ್ಜನ್ಮವನ್ನು ತೆಗೆದುಕೊಳ್ಳುವದು. ಎರಡನೆಯದ್ದು ಮೂಢ ಹುಡಗನೊಬ್ಬ ವಿಶಿಷ್ಟ ಸಾಮರ್ಥ್ಯವನ್ನು ಪ್ರದರ್ಶಿಸುವದು. ಸಮಗ್ರ ಸಮೀಕ್ಷೆಯಿಂದ ಪುನರ್ಜನ್ಮವು ಮರಣಾನಂತರದ ಮುಂದುವರಿಕೆ ಎಂಬುದು ಸ್ಪಷ್ಟವಾಗುವದು. ಸಾಮರ್ಥ್ಯವು ಮಾನವೀಯ ಕಲ್ಪನೆ ಹಾಗು ಅರುವಿಗೆ ಮೀರಿದುದು. ದೈವತ್ವವು ಶಾಶ್ವತವಾದದ್ದು, ತನ್ನನ್ನು ಪ್ರಕಟಗೊಳಿಸಲೂಬಹುದು ಮತ್ತು ರಹಸ್ಯಾತ್ಮಕವಾಗಿರಿಸಲೂ ಬಹುದು.
ನಮ್ಮ ಗುರುಗಳು ದೈವತ್ವದ ಜ್ವಲಂತ ಉದಾಹರಣೆಯಾಗಿದ್ದರು. ಮಾನವ ರೂಪದಲ್ಲಿದ್ದರೂ ಅವರ ಅತೀ ಸರಳತೆಯ ಆವರಣ ಅವರನ್ನು ಅಬ್ಬರದ ಪ್ರಚಾರದಿಂದ ರಕ್ಷಣೆಯೊದಗಿಸಿತ್ತು. ಸಹಜ ಮಾರ್ಗ ಪದ್ಧತಿಯ ಯೋಗ ಸಾಧನೆಯನ್ನು ಪಡೆದ ನಾವು ಅದೃಷ್ಟಶಾಲಿಗಳಾಗಿದ್ದೇವೆ. ಇಂದು ಮತ್ತು ಈಗಲೂ ಸಹ ಪರಿಸ್ಥಿತಿಯು ಭಿನ್ನವಾಗಿಲ್ಲ. ದೈವತ್ವವು ಅದೇ ‘ಕಣ್ಣು ಮುಚ್ಚಾಲೆ’ಯ ಆಟ ಮುಂದುವರೆಸಿದೆ. ನಾನು ಇದನ್ನು ಜಾಗರೂಕತೆಯಿಂದ ವಿವರಿಸಲು ಪ್ರಯತ್ನಿಸಿದ್ದೇನೆ. ಸ್ವೀಕೃತಿ ಮತ್ತು ಸಮ್ಮತಿ ಹೊಂದಿದ ಪ್ರತಿಯೊಬ್ಬರು ಇದರ ಮಹತ್ವವನ್ನು ಸುಸ್ಪಷ್ಟವಾಗಿ ಅನಿಸಿಕೆ ಹಾಗೂ ಅರಿವು ಹೊಂದಬಲ್ಲರು.
11-6-2005 : –
ಧಾರವಾಡದಲ್ಲಿ ಸಂಜೆಯ ಸಮಯದಲ್ಲಿ ಸ್ಥಳೀಯ ಅಭ್ಯಾಸಿಗಳೊಂದಿಗೆ ಪೂಜ್ಯ ಭಾಯಿ ಸಾಹೇಬರು ಕುಳಿತುಕೊಂಡಿದ್ದರು. ಅವರು ಭಗವದ್ಗೀತೆಯ ಒಂದು ಶ್ಲೋಕದ ಕೆಲವು ಪಂಕ್ತಿಗಳನ್ನು ಹೇಳತೊಡಗಿದರು.
ಪರಿತ್ರಾಣಾಯ ಸಾಧುನಾಂ, ವಿನಾಶಾಯ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೇ
ಈ ಶ್ಲೋಕವನ್ನು ಹೇಳಿದ ನಂತರ, ಅದರ ಅರ್ಥವನ್ನು ವಿವರಿಸಲು ನನಗೆ ತಿಳಿಸಿದರು. ನನಗೆ ತಿಳಿದಂತೆ ಹೇಳಿದೆನು. ಪ್ರತಿಯೊಬ್ಬರಿಗೂ ಇದರ ಅರ್ಥವು ಗೊತ್ತಿದೆಯೆಂದು ಅವರು ಹೇಳಿದರು. ಪ್ರಶೋತ್ತರಗಳ ರೂಪದಲ್ಲಿ ಚರ್ಚೆಯು ಮುಂದುವರೆಯಿತು. ಧರ್ಮ, ಅಧರ್ಮ ಅವುಗಳ ವಿವಿಧ ಅಂಶಗಳು, ಆ ಅಂಶಗಳಿಗೆ ಸಂಬಂಧಿಸಿದಂತೆ ಮನುಷ್ಯನ ವರ್ತನೆ ಇತ್ಯಾದಿಗಳು ಚರ್ಚೆಯ ವಿಷಯವಾಗಿದ್ದವು. ಚರ್ಚೆಯ ಸಾರಾಂಶ ಹೀಗಿತ್ತು. ಯಾವುದೇ ವಿಚಾರ/ಕ್ರಿಯೆ ನಿಸರ್ಗದ ವಿರುದ್ಧವಾದರೆ ಅದು ಅಧರ್ಮವೆನಿಸುವದು. ಉದಾ: ಸ್ವಾರ್ಥ, ಪೂರ್ವಾಗ್ರಹತೆ, ಸ್ವಪ್ರತಿಷ್ಟೆ, ಲೋಭ, ಭೋಗಾಸಕ್ತಿ ಮತ್ತುಸುಖಲೋಲುಪತೆ, ಸುಖಲೋಲುಪತೆಯ ಬಗ್ಗೆ ಚರ್ಚೆಯು ಕೇಂದ್ರಿಕೃತವಾಯಿತು. ಸುಖದಿಂದಿರಬೇಕೆನಿಸುವದು ಸಹಜವಾದದ್ದು. ಇಂದಿನ ಸಮಾಜದಲ್ಲಿ ಸುಖವೆಂದರೆ ಇಂದ್ರಿಯ ಸುಖವೆಂದೇ ಅರ್ಥ ಮಾಡಲಾಗುತ್ತದೆ. ಇದರ ತೃಪ್ತಿಗಾಗಿ ಮನುಷ್ಯನು ಏನನ್ನಾದರೂ ಮಾಡುತ್ತಾನೆ ಮತ್ತು ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ. ಇಂತಹ ಪ್ರವೃತ್ತಿಯವನಿಗೆ ಅಧರ್ಮಿಯೆಂದು ಕರೆಯಬಹುದು. ಇದು ನಿಸರ್ಗಕ್ಕೆ ವಿರುದ್ಧವಾದದ್ದು. ಗಂತವ್ಯ(ಗುರಿ) ಮತ್ತು ಜವಾಬ್ದಾರಿಯ ಅರಿವಿದ್ದಾಗ (ಅಭ್ಯಾಸಿ) ಪರಿಸ್ಥಿತಿಯು ಭೂತಾಕಾರವಾಗುವದು. ಇದು ತನ್ನ ಸೀಮೆ ಮೀರಿದಾಗ ಶಿಕ್ಷಾರ್ಹ ಅಪರಾಧವಾಗುತ್ತದೆ. ಅವನನ್ನು ತಿದ್ದುವ ಎಲ್ಲ ಉಪಾಯಗಳು ವಿಫಲವಾದಾಗ ಅವನ ಕೊನೆ ಅನಿವಾರ್ಯವಾಗುತ್ತದೆ. ಆ ಕ್ಷಣದಲ್ಲಿ ಚರ್ಚೆಯನ್ನು ಧಿಡೀರನೆ ನಿಲ್ಲಿಸಲಾಯಿತು.
12-6-2005 :-
ಹೊಸಪೇಟೆಯಲ್ಲಿ ನಾವು ಮೂರು ಜನ ಅಭ್ಯಾಸಿಗಳು ಪೂಜ್ಯ ಭಾಯಿ ಸಾಹೇಬರ ಜೊತೆಗೆ ಇದ್ದೆವು. ಸೂರ್ಯಾಸ್ತವನ್ನು ವೀಕ್ಷಿಸುವ ಪ್ರಸ್ತಾಪ ಬಂದಿತು. ಅದಕ್ಕಾಗಿ ನಾವೆಲ್ಲರೂ ಒಪ್ಪಿ ಟಿ. ಬಿ. ಡ್ಯಾಂನ ಹತ್ತಿರವಿರುವ ಬೆಟ್ಟದ ತುದಿಯಲ್ಲಿರುವ ವೈಕುಂಠವೆಂಬ ಪ್ರವಾಸಿ ಬಂಗಲೆಗೆ ತೆರಳಿದೆವು. ವಾತಾವರಣವು ತುಂಬಾ ವಿಪರೀತವಾಗಿತ್ತು. ನಿಲ್ಲಲೂ ಸಹ ಯಾವುದಾದರೊಂದು ಆಸರೆ ಬೇಕೆನಿಸುವಷ್ಟು ಗಾಳಿಯ ರಭಸವಿತ್ತು. ಪಶ್ಚಿಮ ದಿಗಂತವು ಕಾರ್ಮೋಡಗಳಿಂದ ಆವರಿಸಲ್ಪಟ್ಟಿತ್ತು. ಏನೂ ಕಾಣುತ್ತಿರಲಿಲ್ಲ. ಹಿಂದಿರುಗುವದೊಂದೇ ದಾರಿಯಾಗಿತ್ತು. ನಾನು ಮರಳಿ ಹೋಗೋಣವೆಂದು ನಿರಾಶನಾಗಿ ಹೇಳಿದೆ. ಆಗ, ಸೂರ್ಯಾಸ್ತವನ್ನು ವೀಕ್ಷಿಸುವ ಕುತೂಹಲವಿದೆಯೆ ಎಂದು ಪೂಜ್ಯ ಭಾಯಿ ಸಾಹೇಬರು ಕೇಳಿದರು. ಹೌದೆಂದು ಉತ್ತರಿಸಿದೆ. ಪಶ್ಚಿಮ ದಿಕ್ಕಿನತ್ತ ನೋಡಲು ಪೂಜ್ಯ ಭಾಯಿ ಸಾಹೇಬರು ತಿಳಿಸಿದರು. ಅದೆಂತಹ ಸೂರ್ಯಾಸ್ತದ ಅದ್ಭುತ ದೃಶ್ಯ ! ಕ್ಷಣ ಹೊತ್ತು ನಮ್ಮ ಕಣ್ಣನ್ನೇ ನಾವು ನಂಬದಾದೆವು. ನಾವು ನೋಡಿದ್ದು ಸತ್ಯವಾಗಿತ್ತು. ಸಹೋದರರಾದ ಅಣ್ಣಿಗೇರಿ ಮತ್ತು ಕಾಶಿನಾಥರೇ ಇದಕ್ಕೆ ಸಾಕ್ಷಿ.
ಆ ಸಮಯದಲ್ಲಿ ನನಗೆ ಮಹಾಭಾರತದಲ್ಲಿಯ ಒಂದು ಘಟನೆ ನೆನಪಿಗೆ ಬಂದಿತು. ಅರ್ಜುನನು ಸೂರ್ಯಾಸ್ತದ ಗಡುವಿಗೆ ಮುಂಚೆ ಜಯದ್ರಥನ ತಲೆಯನ್ನು ತೆಗೆದದ್ದು. ಅಂತಹ ಪ್ರಸಂಗಕ್ಕೆ ಪ್ರಭು ಕೃಷ್ಣನು ಕಾರಣೀಭೂತನಾಗಿದ್ದನು. ಈ ಘಟನೆಯು ಸ್ವಯಂ ವೇದ್ಯವಾಗಿದೆ. ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಶ್ರದ್ಧೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಇದನ್ನು ಅರ್ಥೈಸಬಹುದು/ಗ್ರಹಿಸಬಹುದು.
ನಾವು ಹಿಂದಿರುಗಿದ ನಂತರ, ಶುದ್ದೀಕರಣದ ವಿಧಾನದ ಬಗ್ಗೆ ನಮ್ಮೊಳಗೆ ಚರ್ಚೆಯಾಯಿತು. ಅವರು ವಾತಾವರಣದ ಶುದ್ದೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟರು. ಆ ಹೊತ್ತಿನಲ್ಲಿ ತಕ್ಷಣವೇ ಬಂದ ಒಂದು ವಿಚಾರವನ್ನು ಅವರ ಮುಂದೆ ಇಟ್ಟೆನು.
ಆ ವಿಚಾರವೆಂದರೆ ಸೂರ್ಯನ ಕಿರಣಗಳು ಸಮಗ್ರ ಸೃಷ್ಟಿಯ ಮೇಲೆ ಬೀಳುತ್ತವೆ. ಈ ಕಿರಣಗಳಲ್ಲೊಂದಾದ ‘ಸವಿತ್ತು’ ಭೂಮಿಯ ಮೇಲಿನ ಜೀವರಾಶಿಗಳ ಪೋಷಣೆಗೆ ಕಾರಣವಾಗಿದೆ. ಅದೇ ಪ್ರಕಾರ ಬೇರೆ ಕಿರಣಗಳನ್ನು ಅಂತಿಮ ಚೇತನದೊಂದಿಗೆ ಜೋಡಿಸಿ ವಾತಾವರಣ, ಭೂಮಿ ಮತ್ತು ಮಾನವೀಯತೆಯ ಶುದ್ದೀಕರಣಕ್ಕಾಗಿ ಉಪಯೋಗಿಸಬಹುದಲ್ಲವೆ? ಅದು ಆಗ ಯಾವ ರೀತಿಯಲ್ಲಿ ಕೆಲಸ ಮಾಡಬಲ್ಲುದು? ಅದು ಉದ್ದೇಶ ಸಫಲಗೊಳಿಸಲಾರದೆ? ನನ್ನ ಮಾತುಗಳನ್ನು ಕೇಳಿದ ನಂತರ ಅವರು ಇದೊಂದು ವೇದಾಂತಿಕ ವಿಚಾರವೆಂದು ಹೇಳಿ ಸಂಪೂರ್ಣವಾಗಿ ತಳ್ಳಿಹಾಕಿದರು. ನಾವು ಆ ಪರಿಮಿತಿಯನ್ನು ಮೀರಿ ಹೋಗಬೇಕಾಗಿದೆ. ಏಕೆಂದರೆ ನಮ್ಮ ಕಾರ್ಯವ್ಯಾಪ್ತಿಯು ಅತಿ ಶ್ರೇಷ್ಠವಾಗಿರುತ್ತದೆ. ಮುಂದುವರೆದು ಪಂಚಭೂತಗಳು ಆತ್ಮವನ್ನೊಳಗೊಂಡ ದೇಹಕ್ಕೆ ಅತ್ಯವಶ್ಯವಾದ ಜೀವನಾಧಾರಗಳಾಗಿವೆ ಎಂದು ನಿವೇದಿಸಿದೆನು. ಗುರುಗಳ ಹೇಳಿಕೆಯ ಪ್ರಕಾರ ‘ಧರ್ಮದ ಕೊನೆಯೇ ಆಧ್ಯಾತ್ಮದ ಆರಂಭ’, ಅರ್ಥಾತ್ ಅದನ್ನು ಹೊಂದಿದ ನಂತರವೆ ಅದರ ಕೊನೆಯನ್ನು ಮುಟ್ಟುತ್ತೇವೆ ಹೊರತು ಅದರ ತದ್ವಿರುದ್ಧವಲ್ಲ. ಜಲ, ವಾಯು, ಭೂಮಿ ಇತ್ಯಾದಿಗಳನ್ನು ಸಹ ಶುದ್ದೀಕರಣಕ್ಕಾಗಿ ಉಪಯೋಗಿಸಬಹುದಲ್ಲವೆ ಎಂದು ನಿವೇದಿಸಿದೆ. ನಿವೇದನೆಯಲ್ಲಿ ಅರ್ಥವಿದೆ ಎಂದು ಅವರು ತಿಳಿಸಿದರು. ಪ್ರೋತ್ಸಾಹ, ಅನುಕಂಪ, ಪ್ರತಿಯೊಂದು ವಿಷಯದಲ್ಲಿಯ ಅವರ ಆಸಕ್ತಿ, ವೈಚಾರಿಕ ಸ್ವಾತಂತ್ರದ ಸಮರ್ಥನೆ ಹಾಗು ಕ್ರಿಯಾಶೀಲತೆಗಳನ್ನೊಳಗೊಂಡ ಅವರ ತರಬೇತಿ ನನ್ನನ್ನು ವಿಚಲಿತಗೊಳಿಸಿತು.
ಪ್ರವಾಸದ ಸಮಯದಲ್ಲಿ ಕಂಡುಕೊಂಡದ್ದನ್ನು ಮತ್ತು ಅನಿಸಿಕೆಗಳನ್ನು ನಾನು ವ್ಯಕ್ತಪಡಿಸಲು ಪ್ರಯತ್ನಿಸಿದ್ದೇನೆ. ಪ್ರವಾಸವು ಮಾರ್ಗದರ್ಶನ ಹಾಗು ಪ್ರತಿಯೊಂದರ ರುಜುವಾತನ್ನೀಯುತ್ತಿದ್ದರಿಂದ ನಾನು ಅದಕ್ಕೆ ತೀರ್ಥಯಾತ್ರೆಯೆಂದು ಕರೆದಿದ್ದೇನೆ. ಮುಂದೆ ಎಂದಾದರೂ ಸೂಕ್ಷ್ಮಗ್ರಾಹಿ ವ್ಯಕ್ತಿಗಳು ಆ ಸ್ಥಳಗಳಿಗೆ ಭೇಟಿ ಕೊಟ್ಟಾಗ ಅವರು ಪ್ರಭಾವಿತರಾಗುತ್ತಾರೆ. ಅದೇ ಪ್ರಕಾರ ನಿಜವಾದ ಜಿಜ್ಞಾಸುಗಳು ಮತ್ತು ಹತಾಶರು ತಮ್ಮ ಜೀವನದ ಗುರಿಯನ್ನು ಸಾಧಿಸುವ ಸರಿಯಾದ ಮಾರ್ಗವನ್ನು ಪಡೆಯಬಲ್ಲರು.