ಇತ್ತೀಚಿನ ದಿನಗಳಲ್ಲಿ ಅನೇಕ ಆಧುನಿಕ ಮಹಾತ್ಮರು, “ಯಾವುದೇ ಮಾನವ ಜೀವಿಯನ್ನು ಗುರು ಎಂದು ಸ್ವೀಕರಿಸಬಾರದು, ಏಕೆಂದರೆ ದೇವರೊಬ್ಬನೇ ನಿಜವಾದ ಗುರು, ಹಾಗೂ ಯಾವ ಮಾನವ ಜೀವಿಯೂ ದೇವರಾಗಲಾರ” ಎಂದು ಬೋಧಿಸುತ್ತಿದ್ದಾರೆ. ಈ ಗ್ರಹೀತ ಆಧಾರವಾಕ್ಯವನ್ನು ತಮ್ಮ ವಾಕ್ಚಾತುರ್ಯ ಹಾಗೂ ಇತರ ಮೋಹಕ ವಿಧಾನಗಳಿಂದ ಪ್ರಸ್ಥಾಪಿಸಿದ ಮೇಲೆ, ಜಾದೂ ಅಥವಾ ಪವಾಡಗಳು, ಕಥನ ಅಥವಾ ಧಾರ್ಮಿಕ ಗ್ರಂಥಗಳ ಪ್ರಭುತ್ವ ಪೂರ್ಣ ವ್ಯಾಖ್ಯಾನ ಅಥವಾ ಇತರ ಜನಾಕರ್ಷಕ ವಿಧಾನಗಳಿಂದ ಒಬ್ಬ ‘ಮಹಾತ್ಮ’ನು ತನ್ನ ಅತಿಮಾನವ ಶಕ್ತಿಯ ಪ್ರದರ್ಶನ ಮಾಡಲು ತೊಡಗುತ್ತಾನೆ. ಜನರು ತನ್ನನ್ನು ಒಬ್ಬ ಮಾನವ ಜೀವಿಯೆಂದು ಕಾಣದೆ, ಬದಲಿಗೆ, ದೇವರೆಂದು ಕಾಣಲೆಂದು ಬಯಸುತ್ತಾನೆ. ಮತ್ತು ಈ ರೀತಿಯಾಗಿ ತಾನು ಒಬ್ಬ ‘ಗುರು’ವಾಗುವ ಹಕ್ಕನ್ನು ಸ್ಥಾಪಿಸುತ್ತಾನೆ.

ಕೆಲವು ಮುಗ್ಧ ಜನರು, ವಿಶೇಷವಾಗಿ, ಯಾರಿಗೂ ಹೇಳಲಾಗದಂಥ ಕೆಲವು ಇಚ್ಛೆಗಳ ಪ್ರಾಪ್ತಿಯಾಗದೆ ಸಂಕಟ ಪಡುತ್ತಿರುವಂತಹವರು ಇಂತಹ ಮಹಾತ್ಮರಿಗೆ ಅಡ್ಡ ಬೀಳುತ್ತಾರೆ. ಒಬ್ಬ ಮಹಾತ್ಮನ ಸಂಪರ್ಕದಲ್ಲಿ ಬಂದ ನಂತರ ಇವರಲ್ಲಿ ಕೆಲವರು, ತಮ್ಮ ಕ್ಷುಲ್ಲಕ ಇಚ್ಛೆಗಳು ಕ್ಷಿಪ್ರದಲ್ಲಿಯೇ ಭಾಗಶಃ ಸಫಲಗೊಳ್ಳಲು ತೊಡಗಿದಾಗ, ಅಂತಹ ಮಹಾತ್ಮರ ಪ್ರಚಾರಕರಾಗುತ್ತಾರೆ ಅಥವಾ ಜನಸಂಪರ್ಕಾಧಿಕಾರಿಗಳಾಗುತ್ತಾರೆ ಹಾಗೂ ಆ ಬಾಬಾನೇ ದೇವರು ಎಂದು, ಅವನ ಮಹಾ ಸಿದ್ದಿಗಳನ್ನು ಜನಜನಿತಗೊಳಿಸತೊಡಗುತ್ತಾರೆ. ಇಂತಹ ಬಾಬಾ ಅಥವಾ ಮಹಾತ್ಮ ಯಾವುದೇ ದೇವತೆಯ ಅಥವಾ ತನ್ನದೇ ಪೂಜೆ ಮಾಡುವುದಕ್ಕಾಗಿ ಅಥವಾ ಯಾವುದೋ ಪವಿತ್ರ ಅಕ್ಷರದ ಯಾಂತ್ರಿಕ ಪುನರುಚ್ಚರಣ (ಜಪ) ಅಥವಾ ಯೌಗಿಕ ಅಭ್ಯಾಸದ ಹೆಸರಿನಲ್ಲಿ ಯಾವುದೋ ಪ್ರಕಾರದ ತೀವ್ರ ಕಲ್ಪನೆ ಮಾಡಲು ನಿರ್ದೇಶಿಸುತ್ತಾರೆ.ಆ ಅಭ್ಯಾಸಗಳನ್ನು ಪ್ರಾಮಾಣಿಕವಾಗಿ ಮಾಡುವವನಿಗೆ ನಿಜಕ್ಕೂ ಏನಾಗುವುದು ? ಆ ದೇವಗುರು ಅದರ ಬಗ್ಗೆ ಚಿಂತಿಸುವುದೇ ಇಲ್ಲವೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ, ಮತ್ತೆ, ಆ ಬಡ ಭಕ್ತ-ಶಿಷ್ಯನು ಕೇವಲ ಅಜ್ಞಾನಿಯಾಗಿರುತ್ತಾನೆ ಮತ್ತು ಮಂದ ಬುದ್ಧಿಯವನಾದರೆ ಅಥವಾ ಅರೆ ಬುದ್ಧಿಯವನಾದರೆ ಸಂತೋಷಪಡುತ್ತಾನೆ, ಏಕೆಂದರೆ ಮನಸ್ಸಿನ ಮಂದತ್ವವು ಶಾಂತಿ ಎಂದು ಹಾಗೂ ಅರೆ ಬುದ್ಧಿಯನ್ನು ಆಧ್ಯಾತ್ಮಿಕ ಭಾವ ತಂದ್ರಿ ಎಂದು ತಪ್ಪಾಗಿ ಭಾವಿಸುತ್ತಾನೆ.

ಏನೇ ಇರಲಿ, ಭಗವಂತನನ್ನು ಅರಸುವ ನಿಜವಾದ ಜಿಜ್ಞಾಸುವು ಕೆಲಕಾಲಾನಂತರ ಇಂತಹ ಗುರುಗಳ ಕಪಟತನವನ್ನು ಮನಗಾಣುತ್ತಾನೆ ಹಾಗೂ ನಿಜವಾದ ಗುರುವಿನ ಅನ್ವೇಷಣೆಯಲ್ಲಿ ಮುಂದುವರಿಯುತ್ತಾನೆ. ಒಬ್ಬಗುರುವಿನ ನಿಜವಾದ ಕಾರ್ಯವೆಂದರೆ, ಮನುಷ್ಯನಲ್ಲಿ ಅದಾಗಲೇ ಅಸ್ತಿತ್ವದಲ್ಲಿರುವ ಅತ್ಯುಚ್ಚ ಸ್ಥಿತಿಯೊಂದಿಗೆ ಅವನನ್ನು ಅಥವಾ ಅವನ ವಿಚಾರ ಗತಿಯನ್ನು ಜೋಡಿಸುವುದಾಗಿದೆ.ಸಾಮಾನ್ಯವಾಗಿ ಯಾವುದೇ ಗುರಿಯಿಲ್ಲದ,ದಾರಿತಪ್ಪಿದ ಶಿಷ್ಯನ ಮನಃಪ್ರವೃತ್ತಿಗಳು ಸಮರ್ಥ ಗುರುವಿನ ಸಹಾಯದಿಂದ, ದೈವೀ ಸ್ಥಿತಿಯೆಂದು, ದೇವತ್ವವೆಂದು, ಒಂದು ಪರಿಪೂರ್ಣ ಸಂತುಲಿತ ಸ್ಥಿತಿಯೆಂದು, ಸೂಕ್ಷ್ಮಾತಿಸೂಕ್ಷ್ಮಸ್ಥಿತಿಯೆಂದು, ಅಥವಾ ಮಾನವ ಜೀವನದ ಅಂತಿಮ ಗುರಿಯೆಂದು ಕರೆಯಬಹುದಾದ, ಮಾನವ ವಿಕಾಸದ ಅತ್ಯುಚ್ಚ ಸ್ಥಿತಿಯೆಡೆಗೆ ಅಭಿಮುಖಗೊಳ್ಳುವುವು.

ಅತಿಮಾನವಶಕ್ತಿಗಳನ್ನು ಪಡೆದವನೆಂದು ಹೇಳಿಕೊಳ್ಳುವ ಒಬ್ಬ ಮಹಾತ್ಮ ಅಥವಾ ಬಾಬಾ ಒಂದು ವೇಳೆ ತನ್ನ ಶಿಷ್ಯನಿಗಾಗಿ ಇಷ್ಟನ್ನಾದರೂ ಮಾಡಲಾರದವನಾದರೆ, ಅಥವಾ ಮಾಡದಿದ್ದರೆ, ಒಬ್ಬ ಪ್ರಾಮಾಣಿಕ ಭಗವದನ್ವೇಷಕನಿಗೆ ಅವನು ಅತ್ಯಂತ ನಿರುಪಯುಕ್ತನೂ, ಅಯೋಗ್ಯನೂ ಆಗಿರುತ್ತಾನೆ. ಚಿಂತನಶಕ್ತಿಯನ್ನು ತಾತ್ಕಾಲಿಕವಾಗಿ ಸ್ತಂಭಿತಗೊಳಿಸುವುದು,ಭಯ ಹಾಗೂ ಆಶ್ಚರ್ಯದ ಭಾವನೆಯನ್ನುಂಟು ಮಾಡುವುದು, ಅಥವಾ ಆಮಿಷಗಳನ್ನೊಡ್ಡಿಜನರನ್ನು ಆಕರ್ಷಿಸುವುದು, ಅಥವಾ ಭೌತ-ಇಂದ್ರಿಯಗಳನ್ನು ಆಕರ್ಷಿಸುವುದು ಅಥವಾ ಮೋಹಿತಗೊಳಿಸುವುದು ಮುಂತಾದವುಗಳು, ಒಬ್ಬ ನಿಜವಾದ ಜಿಜ್ಞಾಸುವಿನಲ್ಲಿ ಶಾಶ್ವತವಾದ ಮತ್ತು ಅತ್ಯಂತ ಸೂಕ್ಷ್ಮವಾದ ಪರಿಣಾಮವನ್ನುಂಟುಮಾಡುವ ದೈವೀ ಪ್ರೇರಣೆಯನ್ನು ಧಾರೆಯೆರೆಯಲಾರವು.

ಭಾರತದಲ್ಲಿ, ಅತೀವ ಕಟ್ಟುನಿಟ್ಟಿನ ದ್ವೈತವಾದದಿಂದ ಹಿಡಿದು ಕೇವಲ ಅದ್ವೈತವಾದದ ವರೆಗೆ, ಸ್ಥೂಲ ಭೌತವಾದದಿಂದ ಅತಿಭೌತಿಕ ಆದರ್ಶವಾದದವರೆಗೆ, ವಾಸ್ತವವಾದದಿಂದ ಪ್ರಪಂಚ-ಮಿಥ್ಯಾವಾದದ ವರೆಗೆ ಅಸಂಖ್ಯಾತ ಧಾರ್ಮಿಕ, ಧಾರ್ಮಿಕದಂತೆ ತೋರುವ, ತತ್ತ್ವಶಾಸ್ತ್ರೀಯ ಪಂಥಗಳು ಸಾಮಾನ್ಯ ಜನರ, ಅಷ್ಟೇ ಅಲ್ಲದೆ ಬುದ್ಧಿಜೀವಿಗಳ ಮನಸ್ಸನ್ನು ಗೊಂದಲಗೊಳಿಸಿವೆ. ಆದುದರಿಂದ, ಒಬ್ಬ ಪ್ರಾಮಾಣಿಕ ಜಿಜ್ಞಾಸುವಿಗೆ ಯೋಗ್ಯ ಮಾರ್ಗದರ್ಶಕನನ್ನು ಹುಡುಕಿಕೊಳ್ಳುವುದು ತುಂಬ ಕಠಿಣವಾಗಿದೆ. ಕೆಲವರು ತಮ್ಮನ್ನು ತಾವು ದೇವರೆಂದು ಘೋಷಿಸಿದರೆ, ಬೇರೆ ಕೆಲವರು ಒಂದು ಗ್ರಹೀತ ಆಧಾರಕಲ್ಪನೆಯನ್ನು ಆಧರಿಸಿ, ಪ್ರತಿಯೊಂದು ವಸ್ತು, ಅಷ್ಟೇ ಅಲ್ಲ, ಪ್ರತಿಯೊಂದು ಆತ್ಮ ಹಾಗೂ ದೇವರು, ಎಲ್ಲವೂ ಶಾಶ್ವತವಾಗಿವೆ ಮತ್ತು ಶಾಶ್ವತವಾಗಿ ವಿಭಿನ್ನವಾಗಿವೆ ಎಂದು ಹೇಳಿ, ಒಬ್ಬ ಜಿಜ್ಞಾಸುವು ಮುಂದಕ್ಕೂ ವಿಕಾಸ ಹೊಂದಬೇಕು ಎಂಬ ಪ್ರಯತ್ನವನ್ನೇ ಧೈರ್ಯಗೆಡಿಸುತ್ತಾರೆ.

ತಮ್ಮನ್ನು ತಾವೇ ದೇವರೆಂದು ಹೇಳಿಕೊಳ್ಳುವ ಗುರುಗಳು ಅಂತಹುದೇ ಹೇಳಿಕೆಯನ್ನು ಹೇಳುವ ಶಿಷ್ಯಂದಿರ ಮೇಲೆ ಹುಬ್ಬು ಗಂಟಿಕ್ಕುವರು ಮತ್ತೆ ತಾವು ಹಾಗೂ ಮಿಕ್ಕೆಲ್ಲವರೂ ದೇವರಿಗಿಂತ ಶಾಶ್ವತವಾಗಿ ಭಿನ್ನ ಎಂದು ಹೇಳಿಕೊಳ್ಳುವ ಗುರುಗಳು, ತಮಗಿಂತ ಉತ್ತಮನಾದ ಬೇರೊಬ್ಬಗುರುವನ್ನು ಅಥವಾ ತಮಗಿಂತ ಪ್ರತ್ಯೇಕನಾದ ದೇವರನ್ನು ತಮ್ಮ ಶಿಷ್ಯಂದಿರು ಪೂಜಿಸಲು ಪ್ರಾರಂಭಿಸಿದರೆ, ಅವರ ಮೇಲೆ ಹರಿಹಾಯುವರು. ಇದರಿಂದ, ಸ್ಪಷ್ಟವಾಗುವುದೇನೆಂದರೆ, ತಮ್ಮ (ಧಾರ್ಮಿಕ) ಪಂಥಕ್ಕೆ ಬದ್ಧರಾಗಿರುವರೆಂಬ ಹೆಸರಿನಲ್ಲಿ (ಈ) ಗುರುಗಳು ನಿಜಕ್ಕೂ ಸ್ವಾರ್ಥಬದ್ಧರಾಗಿದ್ದು, ತಮ್ಮ ಶಿಷ್ಯರಿಗೆ ಅಸ್ತಿತ್ವದ ಸೂಕ್ಷ್ಮತರ ಸ್ಥಿತಿಗಳಿಗೆ ವಿಕಸಿತರಾಗಲು ಸಹಾಯ ಮಾಡದೆ, ಶಿಷ್ಯರಿಂದ ವಿಧೇಯತೆ, ಹಾಗೂ ಮಾನ-ಮರ್ಯಾದೆಗಳನ್ನು ಮಾತ್ರ, ಅದು ತಮ್ಮ ಹಕ್ಕು ಎಂಬಂತೆ, ಅಪೇಕ್ಷಿಸುವರು. ಬಹುತೇಕ ಪ್ರಸಂಗಗಳಲ್ಲಿ ಇಂತಹ ಗುರುಗಳು ತಮ್ಮ ಶಿಷ್ಯಂದಿರ ವಿಷಯದಲ್ಲಿ ತಮ್ಮ ಕರ್ತವ್ಯವೇನೆಂಬುದರ ಬಗ್ಗೆ ಅಜ್ಞರಾಗಿರುತ್ತಾರೆ ಹಾಗೂ ಇನ್ನು ಕೆಲವು ಪ್ರಸಂಗಗಳಲ್ಲಿ ಸ್ವತಃ ಗುರುಗಳೇ ತಮ್ಮ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ತಮ್ಮ ಪ್ರಭಾವಶಾಲಿ ಶಿಷ್ಯರಿಂದ ನಿರ್ದೇಶಿತರಾಗಿ, ಅವರಿಂದಲೇ ನಡೆಸಲ್ಪಡುತ್ತಾರೆ.

ಒಂದು ವೇಳೆ, ಒಬ್ಬನು ದೈವೀ ಗುಣ ಅಥವಾ ದೈವೀ ಸ್ಥಿತಿಯ ಒಂದು ಹಂತವನ್ನು ತಲುಪಿದ್ದರೆ, ಅವನನ್ನು ಒಬ್ಬ ಮಹಾತ್ಮ ಎಂದು, ಒಬ್ಬ ಗುರು ಎಂದು, ಒಬ್ಬ ದೈವೀ ಪುರುಷನೆಂದು ಅಥವಾ ದೇವರೇ ಎಂದು ಯೋಗ್ಯವಾಗಿಯೇ ಪರಿಗಣಿಸಬಹುದು. ಅಂತಹವನು ಅತ್ಯಂತ ನಿರಹಂಕಾರಿಯಾಗಿರಬೇಕು, ಮತ್ತು ತಾನು ನಗಣ್ಯನೆಂದು (ವಿನಮ್ರ) (ದೇವರೂ ಕೂಡ ತಾನು ಅದೃಶ್ಯನಾಗಿರುವ ಹಾಗೆ) ಭಾವಿಸಬೇಕು. ಅವನು ಒಬ್ಬ ಜಿಜ್ಞಾಸುವಿನ ಹೃದಯದಲ್ಲಿ ಪ್ರೇಮ ಭಾವನೆ, ತನ್ನನ್ನು ಅನುಕರಿಸುವ ಇಚ್ಛೆ ಹಾಗೂ ಯೋಗ್ಯತೆ, ಶುದ್ಧತೆ ಹಾಗೂ ಸೂಕ್ಷ್ಮತೆಯ ಸ್ಥಿತಿಗಳನ್ನು ಹುಟ್ಟಿಸಬೇಕು. ಒಬ್ಬ ಪ್ರಾಮಾಣಿಕ ಜಿಜ್ಞಾಸುವಿಗೆ ಸದಾ ಆಧ್ಯಾತ್ಮಿಕ ಸೇವೆ ಮಾಡುವ ಇಚ್ಛೆಯುಳ್ಳವನಾಗಿರಬೇಕು ಹಾಗೂ ತನ್ನ ಶಿಷ್ಯಂದಿರ ಕಲ್ಯಾಣವೇ ಅವನ ಮನಸ್ಸಿನಲ್ಲಿ ಅತ್ಯಂತ ಪ್ರಮುಖವಾಗಿ ಇರಬೇಕು. ಅವನ ವೈಯಕ್ತಿಕ ಸ್ವಯಂ(ತಾನು)ಭಾವ ಅಸ್ತಿತ್ವದಲ್ಲಿ ಇಲ್ಲ ಎಂಬಷ್ಟು ವಿರಳವಾಗಿರಬೇಕು ಅಥವಾ ವಿಶ್ವದೊಂದಿಗೆ ಒಂದಾಗಿರಬೇಕು. ತನ್ನ ಯೋಗ್ಯತೆಯನ್ನು ತೋರ್ಪಡಿಸುವ ಯಾವುದೇ ಚಿಹ್ನೆಯನ್ನು ಧರಿಸಿರಬಾರದು. ಆದರೆ ಒಬ್ಬ ನಿಜವಾದ ಜಿಜ್ಞಾಸುವು ಸ್ವತಂತ್ರವಾಗಿ ಹಾಗೂ ನಿರಾತಂಕವಾಗಿ ಹತ್ತಿರದಿಂದ ತನ್ನನ್ನು ಪರೀಕ್ಷಿಸಲು ಮುಕ್ತವಾಗಿ ಅನುವು ಮಾಡಿಕೊಡುತ್ತಾನೆ. ಜಿಜ್ಞಾಸುವಿನ ಹೃದಯವು, ಮಾರ್ಗದರ್ಶನಕ್ಕಾಗಿ ತಾನೊಬ್ಬ ಯೋಗ್ಯ ಗುರುವಿನ ಬಳಿ ಬಂದಿದ್ದೇನೆಂಬುದರ ಖಚಿತ ಸೂಚನೆ ಕೊಡುತ್ತದೆ. ನಿಜವೇನೆಂದರೆ, ಹೃದಯವು ಗುರುವಿನಲ್ಲಿ ತನ್ನದೇ ಪ್ರತಿಬಿಂಬವನ್ನು ಕಾಣುವುದು. ಆಗ ಭಾರತೀಯ ಸೂತ್ರ ವಾಕ್ಯದಂತೆ ಗುರುವೇ ದೇವರು’ ಎಂಬ ಮಾತು ಸತ್ಯವಾಗುವುದು. ಯಾಕೆಂದರೆ, ಪರಮಾತ್ಮನು ಮಾನವನ ಅತ್ಯಂತ ಅಂತರಾಳದಲ್ಲಿ ನೆಲೆಸಿದ್ದಾನೆ.

ಅಂತಹ ಒಬ್ಬ ಅರ್ಹ ಗುರುವಿನ ತರಬೇತಿಯನ್ನು ಪಡೆದ ಜಿಜ್ಞಾಸುವು ತನ್ನ ಹೃದಯದ ಜಟಿಲತೆಗಳು ಕಳೆದು ಹೋದವು ಹಾಗೂ ತನ್ನದೇ ಆಂತರಿಕ ಬಂಧನಗಳಿಂದ ತಾನು ತಕ್ಕಮಟ್ಟಿಗೆ ಮುಕ್ತನಾದೆನೆಂಬುದನ್ನು ಶೀಘ್ರವೇ ಕಂಡುಕೊಳ್ಳುವನು. ಅವನ ಚಿಂತನವು ಪ್ರಕಾಶಿತಗೊಳ್ಳುತ್ತದೆ ಹಾಗೂ ಪ್ರೇಮ ಮತ್ತು ಅನುಗ್ರಹದ ಉಚ್ಚಶಕ್ತಿಯು ತನ್ನನ್ನು ವಶಕ್ಕೆ ತೆಗೆದುಕೊಂಡಿದೆಯೆಂಬ ಅನುಭೂತಿ ಪಡೆಯುತ್ತಾನೆ. ಗುರುವು ತನ್ನ ಸಂಕಲ್ಪಶಕ್ತಿಯನ್ನು ಬಳಸಿ ದೈವೀ ಪ್ರೇರಣೆಯನ್ನು ಅವನಲ್ಲಿ ಸಂಚರಣಗೊಳಿಸಿದಾಗ, ಆಗ ತನಗೆ ನೈಜ ಜೀವನವು ದೊರಕಿತೆಂಬ ಅನುಭವ ಪಡೆಯುತ್ತಾನೆ ಮತ್ತು ಕೆಲಕಾಲಾನಂತರ ಅದೆಷ್ಟು ಪರಿವರ್ತನೆ ಹೊಂದಿರುತ್ತಾನೆಂದರೆ ಅವನನ್ನು ನಿಜಕ್ಕೂ ಹೊಸತಾಗಿ ಮತ್ತೆ ಎರಡನೆಯ ಬಾರಿಗೆ ಹುಟ್ಟಿದವನೆಂದು ಅಂದರೆ ‘ದ್ವಿಜ’ನಾದನೆಂದು ಪರಿಗಣಿಸಬಹುದು. ಈ ರೀತಿಯಾಗಿ ಗುರುವು ಶಿಷ್ಯನಿಗೆ ಮುಕ್ತಿಯ ಮಾರ್ಗವನ್ನು ಸುಗಮಗೊಳಿಸುತ್ತಾನೆ ಮತ್ತು ಅವನ ಹೃದಯದಲ್ಲಿ ಭಗವತ್ ಸಾಕ್ಷಾತ್ಕಾರದ ಅರ್ಥಾತ್ ಆತ್ಮಸಾಕ್ಷಾತ್ಕಾರದ ಅಥವಾ ಪರಮ ತತ್ತ್ವದ ಸಾಕ್ಷಾತ್ಕಾರದ ಬೀಜಾರೋಪಣ ಮಾಡುತ್ತಾನೆ.

– [ಸಹಜಮಾರ್ಗ ಪತ್ರಿಕೆ, ನಂ. 3 ಮತ್ತು 4 -1972]

ಅತ್ಯುಚ್ಚ ಚೈತನ್ಯ ಅಥವಾ ಕೇಂದ್ರದ ಶಕ್ತಿಯಿಂದಲೇ ಈ ಭೌತಿಕ ಸಂರಚನೆಯನ್ನು ಶುದ್ಧಗೊಳಿಸಿದರೆ, ಮಾನವ ರೂಪದಲ್ಲಿರುವಾಗಲೇ ಒಬ್ಬನು ಕೇಂದ್ರದ ನೇರ ಸಂಪರ್ಕದಲ್ಲಿರಬಹುದು.

ಶ್ರೀ ಬಾಬೂಜಿ