(೨ ನೇ ಫೆ. ೧೯೭೨ ರಂದು, ಚನ್ನಪಟ್ಟಣದ ಯೋಗಾಶ್ರಮದ ಉದ್ಘಾಟನೆಯ  ಸಮಾರಂಭದಲ್ಲಿ ನೀಡಿದ ಸಂದೇಶ)

ನಮ್ಮೆಲ್ಲರ ಮಧ್ಯದಲ್ಲಿಂದು ಮಾತನಾಡಲು ನನಗೆ ತುಂಬಾ ಸಂತೋಷವೆನಿಸುತ್ತದೆ. ಶ್ರೀ ಚಿಕ್ಕಪುಟ್ಟೇಗೌಡರಿಗೆ ಧನ್ಯವಾದಗಳು. ಶ್ರೀ ರಾಮಚಂದ್ರ ಮಿಷನ್ನಿನ ಧ್ವಜದಡಿಯಲ್ಲಿ ಕಾರ್ಯ ಮಾಡಲು ಈ ಮನೆಯನ್ನವರು ಒದಗಿಸಿಕೊಟ್ಟಿದ್ದಾರೆ. ಅದೀಗ ಉದ್ಘಾಟಿತವಾಯಿತೆಂದು ನಾನು ಘೋಷಿಸುತ್ತೇನೆ. ಸಂಗತಿಗಳು ಬರುತ್ತವೆ – ಹೋಗುತ್ತವೆ, ಆದರೆ ನೆನಪುಗಳು ಬೆಳೆಯುತ್ತ ಹೋಗುತ್ತವೆ, ಅವು ಮುಂದಿನ ಪೀಳಿಗೆಗೆ ಹಿಂದೆ ಆಗಿರುವ ಸತ್ಕಾರ್ಯವನ್ನು ಸದಾ ನೆನಪಿಗೆ ತಂದುಕೊಟ್ಟು, ಆಧ್ಯಾತ್ಮಿಕ ಕಾರ್ಯವು ಸುಗಮವಾಗಿ ಮುನ್ನಡೆಯಲು ಅವರೂ ಅಂತಹ ಉತ್ತಮ ಕಾರ್ಯ ಮಾಡಲು ಅವರನ್ನು ಹುರಿದುಂಬಿಸುತ್ತವೆ.

ಸುಖಜೀವನನ್ನು ನಡೆಸುವ ಬಗೆ ಹೇಗೆ ? – ಎಂಬುದು ಜಗತ್ತಿನ ಮುಂದೆ ಇರುವ ಪ್ರಸ್ತುತ ಪ್ರಶ್ನೆ. ಆದರೆ ಸೂರ್ಯನ ಬೆನ್ನು ಮಾಡಿ ಮುನ್ನಡೆದರೆ, ಸಮಸ್ಯೆಯೇಳುತ್ತದೆ. ಬೌದ್ಧಿಕತೆಯು ತನ್ನದೇ ಆದ ಸಂಕುಚಿತ ವಲಯದಲ್ಲಿ ಕೆಲಸ ಮಾಡುತ್ತದೆ. ನಾವು ಯಾವಾಗಲೂ ಯಾವುದೇ ವಿಷಯವನ್ನು ವಿಶಾಲವಾದ ದೃಷ್ಟಿಯಿಂದ ಗ್ರಹಿಸಬೇಕು. ಮತ್ತು ಅದು ತನ್ನ ಎಲ್ಲೆಯನ್ನು ಮೀರಿ ಮುನ್ನಡೆಯಲು ಶಕ್ತವಾಗುವಂತೆ ಅದನ್ನು ವಿಸ್ತಾರಗೊಳಿಸುತ್ತ ಹೋಗಬೇಕು. ಎಲ್ಲೆಯನ್ನು ದಾಟಿದ ಮೇಲೆ, ಸತ್ಯದ ಆಲಿಂಗನಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳುವಿರಿ. ವಿಚಾರಕ್ಕೆಡೆಗೊಡದ ಸಿದ್ದಾಂತಗಳು ನಿಮಗೆ ಒಳಿತನ್ನು ಮಾಡಲಾರವು. ಅವು ನಿಮ್ಮನ್ನು ತಮ್ಮ ಸಂಕುಚಿತ ವಲಯಕ್ಕೆ ಕಟ್ಟಿಹಾಕಿಬಿಡುವುವು. ಅವು ಗಮನಿಸಲು ಅರ್ಹವಲ್ಲ. ನೀವು ‘ಸತ್ಯ’ ಸ್ಥಿತಿಯನ್ನು ಅಪ್ಪಿಕೊಳ್ಳಲುಪಕ್ರಮಿಸಿದರೆ ಅದೂ ನಿಮ್ಮ ಮಾರ್ದನಿಗೊಡುವುದು. ನೀವು ಸರಿಯಾದ ಮಾರ್ಗದಲ್ಲಿದ್ದೀರೆಂಬುದಕ್ಕೆ ಅದೊಂದು ಸೂಚನೆ. ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿರಿ, ಆಗ ನೀವು ನಿಜವಸ್ತುವಿನ ಸವಿಯನ್ನು ಪರೀಕ್ಷಿಸಬಹುದು. ಸಾಮಾನ್ಯವಾಗಿ, ‘ವಸ್ತು’ವನ್ನು ದೃಢವಾಗಿ ಹಿಡಿದುಕೊಳ್ಳುವುದನ್ನು ಬಿಟ್ಟು, ಕೇವಲ ಅದರ ಬಗ್ಗೆ ಮಾತನಾಡುವುದಷ್ಟೆ ನಮಗೆ ರೂಢಿಯಾಗಿಬಿಟ್ಟಿದೆ. ನೀವು ಸಂಪೂರ್ಣ ‘ಅವನವರೇ’ ಆದಾಗ ಮಾತ್ರ ಅದನ್ನು ಹಿಡಿದುಕೊಳ್ಳುವುದು ಸಾಧ್ಯ. ಶಾಸ್ತ್ರಗಳು ಸತ್ಯಸ್ಥಿತಿಯ ಸುಳಿವನ್ನು ಕೊಡುವುವು – ಆದರೆ ಅದರತ್ತ ಮುನ್ನಡೆಯಬೇಕಾದವರು ಸ್ವತಃ ನೀವೇ. ಸೃಷ್ಟಿಯನ್ನು ಕುರಿತು ಮಾತನಾಡುವುದು ಬಹು ಸುಲಭ. ಆದರೆ ಅದರಲ್ಲಿ ನಾವು ನಿರ್ವಹಿಸಬೇಕಾದ ಪಾತ್ರವೇನು ಎಂಬುದರ ಬಗ್ಗೆ ಮೌನವೇ ಉಳಿಯುತ್ತದೆ.

ಜನರು ಬೇರೆಯವರತ್ತ ನೋಡಿ, ಅವರು ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸುತ್ತಿಲ್ಲವೆಂದು ದೂರುತ್ತಾರೆ, ಆದರೆ, ತಾವು ಬೇರೆಯವರಿಗೋಸ್ಕರ ಮಾಡತಕ್ಕ ಕರ್ತವ್ಯವೇನೆಂಬುದನ್ನು ಅರಿಯಲು ತಮ್ಮೊಳಗೆ ಇಣುಕಿ ಕೂಡ ನೋಡುವುದಿಲ್ಲ. ಜಗತ್ತಿನಲ್ಲಿ ಇಷ್ಟು ಕಷ್ಟ ಕಾರ್ಪಣ್ಯಗಳು ಏಕಿವೆ ? – ಎಂದು ದೇವರನ್ನು ದೂಷಿಸಲು ಅವರು ಬಹುಮಟ್ಟಿಗೆ ಸಿದ್ಧರಾಗುತ್ತಾರೆ. ಜಗತ್ತಿನ ಒಳಿತಿಗೋಸ್ಕರ ತಾವು ಯಾವ ಪಾತ್ರವನ್ನು ವಹಿಸಿದ್ದಾರೆಂಬುದರ ಬಗ್ಗೆ ಅವರು ಯೋಚಿಸುವುದಿಲ್ಲ. ಪ್ರಕೃತಿಯ ಸಹಜಗತಿಯಲ್ಲಿ ತಾವು ತೊಡಕುಗಳನ್ನುಂಟು ಮಾಡುವರೆಂಬುದನ್ನೂ, ಸ್ವತಃ ತಾವೇ ಜಗತ್ತನ್ನು ಕೆಡಿಸುತ್ತಿರುವವರೆಂಬುದನ್ನೂ ಅವರು ಯೋಚಿಸುವುದಿಲ್ಲ. ವರ ಚಿಂತನಾಕ್ರಮವು ಎಷ್ಟು ಕ್ಷುಬ್ದ ವಾಗಿದೆಯೆಂದರೆ, ಅವರು ಪ್ರಕೃತಿ-ವಿಸ್ತರದಲ್ಲಿ ತಮ್ಮ ಕಲುಷಿತ ವಿಚಾರಗಳನ್ನು ಸೇರಿಸುತ್ತಲೇ ಹೋಗುತ್ತಾರೆ. ಒಂದಾದಮೇಲೊಂದು ತೊಡಕುಗಳುಂಟಾಗಿವೆ- ಅವು ಮಾನವನ ಮೆದುಳಿನ ಸೃಷ್ಟಿಗಳೇ ಸೈ. ಇವೆಲ್ಲಕ್ಕೂ ಅವರೇ ಹೊಣೆ, ಏಕೆಂದರೆ, ಸೃಷ್ಟಿಯು ನಿರ್ಮಾಣಕ್ಕೋಸ್ಕರ ಶಕ್ತಿಯು ಕೇಂದ್ರದಿಂದ ಇಳಿದು ಬಂದ ಮೇಲೆ “ಮನಸ್ಸು” ಪ್ರಕಟಗೊಂಡಿತು. ಮನಸ್ಸಿನ ಜೊತೆಗೇ ದೋಷಯುಕ್ತ ವಿಚಾರಸರಣಿಯೂ ಬೆಳೆಯಿತು. ಆದರೆ, ಅವರು, ಜಗತ್ತಿನ ಎಲ್ಲ ದುಃಖ, ವೇದನೆ, ವ್ಯಥೆಗಳಿಗೆಲ್ಲಾ ಪರಮಾತ್ಮನನ್ನು ಹೊಣೆ ಮಾಡುತ್ತಾರೆ. ಇಂತಿರುವುದರಿಂದ, ಜಗತ್ತು ಮತ್ತೆ ಥಳಥಳಿಸಿ ಹೊಳೆಯುವಂತಾಗಲು, ಜನರು ಮ್ಮ ಸ್ವಂತ ಸೃಷ್ಟಿಯನ್ನು ನಾಶಗೊಳಿಸಬೇಕು. ತಕ್ಕ ಕಾರ್ಯವಿಧಾನವನ್ನು ಅವರೇ ಅರಸಿಕೊಳ್ಳಬೇಕು. ಸೂಕ್ಷ್ಮಾತಿಸೂಕ್ಷ್ಮವಾದುದನ್ನು ಪಡೆಯಲೋಸುಗ, ಅದೂ, ಸೂಕ್ಷ್ಮತರ ವಿಧಾನವೇ ಆಗಿರಲೂಬಹುದು- ಅದು “ಯೋಗ’ವೊಂದಲ್ಲದೆ ಬೇರೆಯಲ್ಲ. ಸಹಜಮಾರ್ಗವೆಂದು ನಾವು ಕರೆಯುವ ನಮ್ಮ ಪದ್ದತಿಯು ಅದನ್ನೇ ಪ್ರತಿನಿಧಿಸುತ್ತದೆ. ಈ ಕ್ಷೇತ್ರದಲ್ಲಿಯೂ ಅನೇಕ ಸಂಶೋಧನೆಗಳಾಗಿವೆ- ಆಗುತ್ತಿವೆ. ಮತ್ತು, ನನ್ನ ಗುರುಗಳಾದ, ಫತೇಗಡದ ಸಮರ್ಥ ಗುರು ಮಹಾತ್ಮಾ ಶ್ರೀ ರಾಮಚಂದ್ರಜಿಯವರು, ನೀವು ಹೇಗಾದರೂ ಮಾಡಿ, ಪರಮಾತ್ಮನೊಡನೆ ತಿಶೀಘ್ರ ಸಂಪರ್ಕ ಬೆಳೆಸಲು ಸಾಧ್ಯವಾಗುವಂತೆ, ‘ಯೋಗ’ವನ್ನು ಪುನಾರಚಿಸಿದ್ದಾರೆ. ಈ ಪದ್ಧತಿಯ ಮುಖ್ಯ ವೈಶಿಷ್ಟ್ಯವೆಂದರೆ, ನಮಗೆ ಇಲ್ಲಿ ಗುರುವಿನ ಸಹಾಯವು ಯಥೇಷ್ಟ ಲಭ್ಯವಾಗುತ್ತದೆ. ಇಲ್ಲಿ ಸರಳ ಧ್ಯಾನವನ್ನು ವಿಧಿಸಲಾಗಿದ್ದು, ಅದು ಆಧ್ಯಾತ್ಮಿಕ ಸಾಧನೆಯುದ್ದಕ್ಕೂ ನಮಗೆ ನೆರವು ನೀಡುತ್ತದೆ. ಸ್ವತಃ ಪರೀಕ್ಷಿಸುವವರೆಗೂ ನೀವು ಏನನ್ನೂ ನಂಬಬೇಡಿ. ತಮ್ಮದೇ ಅನುಭವವನ್ನು ಹೊಂದಿ ಅದನ್ನು ನಂಬ ಬಯಸುವವರಿಗೆ, “ಸಹಜಮಾರ್ಗ’ವು ತೆರೆದ ಅಧ್ಯಾಯವಾಗಿದೆ.

ಸತ್ಯಾನ್ವೇಷಕರಿಗೆ ನನ್ನ ಇನ್ನೊಂದು ಹಿತವಚನ- ಮನಸ್ಸು ಮನಸ್ಸನ್ನು ಅರಿಯಬಲ್ಲುದು. ಅಂತೆಯೇ ದೇವತ್ವವನ್ನು ದೇವತ್ವವೇ ಅರಿಯಬಲ್ಲದು, ಅರ್ಥಾತ್, ದೈವಿಕತೆಯನ್ನು ಹೊಂದಲು ನಾವು ದೈವೀಶಕ್ತಿಯನ್ನೇ ಬಳಸಬೇಕು. ಸೂರ್ಯನು ಅಲ್ಲಿಯೇ ಇದ್ದಾನೆ, ಅವನ ಪೂರ್ಣ ಪ್ರಕಾಶವನ್ನು ಹೊಂದಲು, ನೀವೇ ಸ್ವತಃ ಮುಸುಕಿದ ಮೋಡಗಳನ್ನು ನಿವಾರಿಸಿಕೊಳ್ಳಬೇಕು. ಇದಕ್ಕೆ ಅಸ್ತಿತ್ವದ ಅಂತರಾಳವನ್ನು ನೇರವಾಗಿ ಮುಟ್ಟುವ ಮಾರ್ಗದ ಆವಶ್ಯಕತೆಯಿದೆ.

***