(ಪೂಜ್ಯ ಶ್ರೀ ಬಾಬೂಜಿ ಮಹರಾಜರ ಉರ್ದು ಲೇಖನದ ಅನುವಾದ)
ಆಧ್ಯಾತ್ಮದ ಸಮರ್ಥ ಸದ್ಗುರುವಿನ ಮಹತ್ವ ಮತ್ತು ಸಂಬಂಧದ ವೈಶಿಷ್ಟ್ಯವೆಂದರೆ ಬ್ರಹ್ಮವಿದ್ಯೆಯ ಮೇಲೆ ಪ್ರಭುತ್ವ ಮತ್ತು ಅದರ ಪರಂಪರೆ ಮುಂದುವರೆಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು. ಇವು ಸಮರ್ಥ ಸದ್ಗುರುನ್ನು ಅನುಸರಿಸುವಿಕೆಯ ಮತ್ತು ಶಿಷ್ಯತ್ವದ ಮಾನದಂಡಗಳಾಗಿರುತ್ತವೆ. ಗುರುವನ್ನು ವೈಯುಕ್ತಿಕ ಸೇವೆ ಇತ್ಯಾದಿಗಳ ಮೂಲಕ ಸಂತುಷ್ಟಗೊಳಿಸುವದು ಬಾಧಕವೇನಲ್ಲ, ಆದರೆ ಅದರ ಮೂಲಕ ಮತ್ತು ಜೊತೆಗೆಯೇ ಒಂದು ವೇಳೆ ಮೂಲವಸ್ತುವಿನ ಮೇಲೆ ಪ್ರಭುತ್ವ ಪಡೆಯುವದನ್ನು ಸಾಧಿಸದಿದ್ದರೆ, ಗುರುವಿನ ಸಂತೋಷವು ಶಿಷ್ಯ ಮತ್ತು ಶಿಕ್ಷಕರಿಬ್ಬರಿಗೂ ಹಾನಿಕಾರಕವಾಗುವ ಸಂಭವವಿರುತ್ತದೆ. ಉದಾಹರಣೆಗೆ ಗಣಿತ ಶಾಸ್ತ್ರದ ಅಧ್ಯಾಪಕನು ವಿಧ್ಯಾರ್ಥಿಯ ಪಾದಸೇವೆ ಮತ್ತು ಮನೆಕೆಲಸಗಳಂತಹ ವೈಯಕ್ತಿಕ ಸೇವೆಯಿಂದ ಸಂತುಷ್ಟಗೊಂಡು ಹೆಚ್ಚಿನ ಅಂಕಗಳನ್ನು ವಿಧ್ಯಾರ್ಥಿಗೆ ದಯಪಾಲಿಸಿ ನಿವೃತ್ತಿಯ ನಂತರ ತನ್ನ ಸ್ಥಾನಕ್ಕೆ ಅವನನ್ನು ನಿಯಮಿಸಿದರೆ ತನಗೂ ತನ್ನ ಶಿಷ್ಯನಿಗೂ ಕೇಡು ಮಾಡುವದಲ್ಲದೆ ಗಣಿತ ಶಾಸ್ತ್ರ ಹಾಗು ಅದನ್ನು ಕಲಿಸುವ ಪರಂಪರೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಅಪರಾಧದ ಲೋಪಕ್ಕೆ ಕ್ಷಮೆಯೇ ಇರುವದಿಲ್ಲ.
ಆಧ್ಯಾತ್ಮಿಕತೆ ಹಾಗು ಗಣಿತ ಶಾಸ್ತ್ರಗಳ ನಡುವೆ ವ್ಯತ್ಯಾಸವಿದೆಯೆಂದು ಹೇಳಬಹುದು. ಬ್ರಹ್ಮವಿದ್ಯೆಯಲ್ಲಿ ಶಿಷ್ಯನ ಪ್ರಗತಿ ಸಂಪೂರ್ಣವಾಗಿ ಗುರು ಅರ್ಥಾತ್ ಭಗವಂತನ ಇಚ್ಛೆ ಮತ್ತು ಕೃಪೆಯ ಮೇಲೆ ಅವಲಂಬಿತವಾಗಿರುತ್ತದೆ. ಇದು ಸತ್ಯವಿದ್ದರೂ ಸಹ, ಸಾಮಾನ್ಯ ಶೈಕ್ಷಣಿಕ ವಿಷಯಗಳ ಹಾಗು ಆ ಶಿಕ್ಷಕರಿಂದ ಪಡೆಯುವ ಶಿಷ್ಯತ್ವದ ತರಬೇತಿ, ಬ್ರಹ್ಮವಿದ್ಯೆಗಾಗಿ ಪಡೆಯುವ ಕೃಪೆಯ ಅರ್ಹತೆ ಮತ್ತು ಕರಾರುಗಳು ಹೆಚ್ಚು ಕಷ್ಟಕರವಾಗಿರುತ್ತದೆಂದು ತಿಳಿಯಬೇಕಾಗುತ್ತದೆ. ಸಮರ್ಥ ಸದ್ಗುರು ಮತ್ತು ಭಗವ೦ತ ನಿಶ್ಚಿತ ವಾಗಿ ಯಾವುದೇ ನಿರ್ಬಂಧಕ್ಕೊಳಗಾಗಿರುವದಿಲ್ಲ ಆದರೆ ಯಾರೊಬ್ಬರ ಅಪೇಕ್ಷೆಗಳನ್ನು ಪೂರ್ಣಗೊಳಿಸಲು ತಮ್ಮ ಕೃಪೆಯನ್ನು ಮಾಡುವ ಋಣ(ಮುಲಾಜು) ಅವರಿಗಿರುವದಿಲ್ಲ. ಆಸೆ ಮತ್ತು ಭೋಗಗಳ ಗುಲಾಮರ ಇಚ್ಛೆಗಳನ್ನು ಈಡೇರಿಸುವ ನಿರ್ಬಂಧನೆ ಅವರಿಗಿರುವದಿಲ್ಲ.
ಶತಮಾನಗಳಿಗೊಮ್ಮೆ ಸಿಗುವ ಆರಿಹೋದ ದೀಪದ ಪತಂಗದಂತಿರುವ, ತನ್ನ ಇಚ್ಛೆಗಳ ಜ್ವಾಲೆಯನ್ನು ಆರಿಸಿ, ಎಲ್ಲ ಸಂಬಂಧಗಳನ್ನು ಕಡಿದುಕೊಂಡು, ಕರಾರು ಹಾಗು ಫಲಾಪೇಕ್ಷೆಗಳಿಲ್ಲದೆ ಕೇವಲ ಒಬ್ಬನೇ ಒಬ್ಬನ ಗುಲಾಮಗಿರಿಯನ್ನು ಒಪ್ಪಿಕೊಂಡಿರುವವನ ಮೂಲಕವೇ ಕೃಪೆಯಾಗುತ್ತದೆ. ಹಗಲು-ಇರುಳು ಮೂರ್ತಿ ಪೂಜೆಯನ್ನು ಗೊಂಬೆಯಾಟದಲ್ಲಿಯಂತೆ ಸಂತೋಷದಲ್ಲಿ ಮತ್ತರಾಗಿ ಹಾಗು ತಮ್ಮ ಅಪೇಕ್ಷೆಗಳು ನೆರವೇರದಿದ್ದಾಗ ಭಗವಂತನು ತಮ್ಮ ಗುಲಾಮನೆಂಬಂತೆ ಇವರು ಮೂರ್ತಿಗಳನ್ನು ಅವಮಾನಕರವಾಗಿ ಎಸೆಯಲೂ ಹಿಂಜರಿಯುವದಿಲ್ಲ. ಅಂತಹವರಿಗೆ ಸದ್ಗುರುವಿನ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಾಗಲಿ ಅಥವಾ ಆತನ ಶಿಷ್ಯತ್ವ ಹೊಂದುವ ಧೈರ್ಯವಾದರೂ ಹೇಗೆ ಸಾಧ್ಯ? ತಮ್ಮ ಮನಸ್ಸಿನ ವಿರುದ್ಧ ಹೋಗುವ ಹೆತ್ತವರೂ ಇದಕ್ಕೆ ಹೊರತಲ್ಲ. ಪೂಜೆ ಮತ್ತು ಶ್ರದ್ಧೆಗಳಿಂದ ತಮ್ಮ ಕೆಲಸ ಹಾಗು ಸ್ವಾರ್ಥಪೂರಿತ ಉದ್ದೇಶಗಳನ್ನು ಸಾಧಿಸುವ ಇವರ ವಿಧಾನವು ಗಣಿತ ಶಿಕ್ಷಕನ ಪಾದಸೇವೆ ಮತ್ತು ಮನೆಕೆಲಸ ಮಾಡುವ ವಿದ್ಯಾರ್ಥಿಯ ಉದಾಹರಣೆಗಿಂತಲೂ ಹೀನಾಯವಾದುದು.
ಜನರು ಆಧ್ಯಾತ್ಮ ಮತ್ತು ಅದರ ಸಮರ್ಥ ಗುರುಗಳನ್ನು ಏನೆಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಕೆಲವರು ಗುರುಗಳ ದರ್ಶನ, ಅವರ ದಿವ್ಯವಾಣಿ, ಪ್ರಸಾದ, ಚರಣಾಮೃತ ಇತ್ಯಾದಿಗಳೇ ಸಾಕೆಂದು ಭಾವಿಸಿದ್ದಾರೆ, ಇನ್ನೂ ಕೆಲವರು ಹೊಗಳಿಕೆಯನ್ನೇ ಪ್ರೀತಿಯೆಂದು ತಿಳಿದಿದ್ದಾರೆ. ಗುರುಗಳ ಮೇಲಿನ ಇವರ ಶ್ರದ್ಧೆ ಸಾಮಾನ್ಯ ಶಾಲಾ ಮಕ್ಕಳಿಗೆ ತಮ್ಮ ಶಿಕ್ಷಕನ ಮೇಲಿರುವಷ್ಟು ಸಹ ಇರುವದಿಲ್ಲ ಏಕೆಂದರೆ ಅವರ ಉದ್ದೇಶ ವಿದ್ಯಾರ್ಜನೆಯದಾಗಿದ್ದು ಅದಕ್ಕಾಗಿ ತಮ್ಮ ಶಿಕ್ಷಕನ ಬೈಗಳು, ಶಿಕ್ಷೆ ಇತ್ಯಾದಿಗಳನ್ನು ಸಹಿಸಲು ಸಿದ್ಧವಾಗಿರುತ್ತಾರೆ.ಆಧ್ಯಾತ್ಮಿಕತೆಯನ್ನು ಬ್ರಹ್ಮಜ್ಞಾನದಂತೆ ಪಡೆಯುವ ಉದ್ದೇಶದಿಂದ ಕೇವಲ ಕೆಲವೇ ಜನರು ಗುರುವಿನಡೆಗೆ ಹೋಗುತ್ತಾರೆ. ಅಂತೆಯೇ ಆಧ್ಯಾತ್ಮಿಕ ತರಬೇತಿಯ ಪರಂಪರೆಯಲ್ಲಿ ಯಾವುದೇ ನಿಷ್ಠುರತೆಯ ಪ್ರಶ್ನೆ ಉದ್ಭವಿಸುವದಿಲ್ಲ. ತಮ್ಮ ಉದ್ದೇಶ ನೆರವೇರಿಸಿಕೊಳ್ಳಲು ಬಂದಿರುವವರ ಮಾರ್ಗದಲ್ಲಿ ಶಾಪ, ಮುಂತಾದವುಗಳ ಅಡ್ಡಿ-ಆತಂಕಗಳಾಗುವ ಭಯ ಖಂಡಿತವಾಗಿಯೂ ಇರುತ್ತದೆ. ತಮ್ಮ ಸದ್ಗುರುಗಳ ಋಣ ತೀರಿಸುವದಕ್ಕೆಂದು ಸರಿಯಾದ ತರಬೇತಿ ನೀಡಬೇಕೆಂದಿರುವ ಸಮರ್ಥ ಗುರುಗಳು ತಮ್ಮಲ್ಲಿಗೆ ಬಂದಿರುವ ಅಲ್ಪ-ಸ್ವಲ್ಪ ಜಿಜ್ಞಾಸುಗಳನ್ನು ಯಾವುದೇ ಸಮಯದಲ್ಲಿ ಕಳೆದುಕೊಳ್ಳುವ ಭೀತಿಯಲ್ಲಿಯೇ ಇರಬೇಕಾಗುತ್ತದೆ. ಆಧ್ಯಾತ್ಮಿಕಕ್ಕೆ ಅಪಚಾರವೆಸಗುವ ಮಹಾನುಭಾವರು ತಾವು ಸದ್ಗುರುಗಳೆಂಬ ಭ್ರಮೆ ಮಾಡಿಕೊಂಡು ಇತರರಿಂದಲೂ ಆ ರೀತಿಯಲ್ಲಿ ಸಂಭೋಧಿಸಿಕೊಳ್ಳಬೇಕೆನ್ನುವವರು ದರ್ಶನ, ಚರಣಾಮೃತ ಇತ್ಯಾದಿಗಳನ್ನು ದಯಪಾಲಿಸಿ ತಾವೂ ಸಂತೋಷಗೊಂಡು ಭಕ್ತರನ್ನೂ ಸಂತೋಷಗೊಳಿಸಿ ಆಧ್ಯಾತ್ಮಿಕ ತರಬೇತಿಯ ಹೆಸರಿನಲ್ಲಿ ಜನರ ಮೌಡ್ಯತೆಯನ್ನು ತಮಗಾಗಿ ಹಾಗು ತಮ್ಮ ವಂಶಾವಳಿಗೂ ಸಾಕಾಗುವಷ್ಟು ಸಂಪತ್ತನ್ನು ಸಂಗ್ರಹಿಸುತ್ತಾರೆ. ಅವರು ತಮ್ಮ ಹಾಗು ತಮ್ಮ ಶಿಷ್ಯರ ಪರಲೋಕದ ಭವಿಷ್ಯವನ್ನು ಹಾಳುಗೆಡವುತ್ತಾರೆ. ಆದರೆ ಪರಲೋಕದ ಭವಿಷ್ಯ ಪರಲೋಕಕ್ಕೇ ಗೊತ್ತು. ದೂರದ ಭವಿಷ್ಯತ್ತಿನಲ್ಲಿ ಸಿಗಬಹುದೆನ್ನುವ ಉದ್ರಿ ಖಾತೆಯ ಆಸೆಗಾಗಿ ವರ್ತಮಾನದಲ್ಲಿ ಲಭ್ಯವಿರುವ ನಗದನ್ನೇಕೆ ಕಳೆದುಕೊಳ್ಳಬೇಕು? ಪರಲೋಕದ ಸಮಾಚಾರ ಭಗವಂತನಿಗೇ ಗೊತ್ತು.
ನಮ್ಮ ಗುರುಗಳು ತಮ್ಮಲ್ಲಿರುವದೆಲ್ಲವನ್ನು ಅರಗಿಸಿಕೊಳ್ಳಬಲ್ಲ ಮತ್ತು ತಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಅನುಯಾಯಿಗಾಗಿ ಎಷ್ಟೊಂದು ಪರಿತಪಿಸುತ್ತಿದ್ದರೆಂಬುದಕ್ಕೆ ನನ್ನ ಅನುಭವವೇ ಸಾಕ್ಷಿ, ಜೀವಮಾನದಲ್ಲಿ ಅಂತಹ ಸೂಕ್ತ ಅನುಯಾಯಿ ಒಬ್ಬನಾದರೂ ಸಿಕ್ಕರೆ ಅದೊಂದು ಮಹಾನ್ ಭಾಗ್ಯವೇ ಸರಿ ಮತ್ತು ಇಂತಹ ಅರ್ಹ ವ್ಯಕ್ತಿ ಸಿಕ್ಕಾಗ, ಈ ವಿಷಯವನ್ನು ಅತ್ಯಂತ ಗೌಪ್ಯವಾಗಿಟ್ಟು, ಅವನಿಗಾಗಿ ವಿಶಿಷ್ಟ ತರಬೇತಿಯ ವ್ಯವಸ್ಥೆ ಮಾಡಬೇಕಾಗುತ್ತದೆ. ನಿಸ್ಸಂದೇಹವಾಗಿ ಈ ಕಾರ್ಯವೆಲ್ಲ ಸಮರ್ಥ ಸದ್ಗುರುವಿನದಾಗಿರುತ್ತದೆ. ಆದರೆ ಪಾತ್ರೆ ತಯಾರಿಸಲು ಮಣ್ಣು ಅಥವಾ ಘನ ಪದಾರ್ಥ ಬೇಕೇ ಬೇಕಾಗುತ್ತದೆ. ಕೇವಲ ಹವೆ ಮತ್ತು ನೀರು ಕೊಡ ತಯಾರಿಸಲು ಸಾಕಾಗುವದಿಲ್ಲ. ನಿಸ್ಸಂದೇಹವಾಗಿ ಭಗವಂತನಿಗೆ ಎಲ್ಲಾ ತರಹದ ಶಕ್ತಿ ಇರುತ್ತದೆ. ಆದರೆ ಅನೇಕ ಸಲ ಅತ್ಯುನ್ನತ ಮಟ್ಟ ತಲುಪಿದ ಸಮರ್ಥ ಗುರುಗಳು ಬ್ರಹ್ಮವಿದ್ಯೆಯ ಮೇಲೆ ಪ್ರಭುತ್ವ ಸಾಧಿಸಿ ತಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಸೂಕ್ತ ಅನುಯಾಯಿಯನ್ನು ಪಡೆಯಬೇಕಾದರೆ ಅನೇಕ ಶತಮಾನಗಳವರೆಗೆ ಕಾಯಬೇಕಾಗುತ್ತದೆಂಬುದು ಸತ್ಯ ಸಂಗತಿಯಾಗಿದೆ.
ಅದೇನೆ ಇರಲಿ, ಆಧ್ಯಾತ್ಮ ಮತ್ತು ಬ್ರಹ್ಮವಿದ್ಯೆ ಭದ್ರವಾದ ತಳಹದಿಯ ಮೇಲೆ ನಿಂತಿರುತ್ತದೆ ಮತ್ತು ಅದು ಹಾಗೆಯೇ ಮುಂದುವರೆಯುತ್ತದೆ. ದೇವರು ಹಚ್ಚಿದ ದೀಪ ಆರುವದಾದರೂ ಏಕೆ? ಸದ್ಗುರುಗಳ ಕಾರ್ಯಕ್ಕಾಗಿಯೇ ನಮ್ಮೆಲ್ಲರನ್ನು ಗುಲಾಮರನ್ನಾಗಿ ನಿಯಮಿಸಲಾಗಿದೆ. ಈ ಗುಲಾಮಗಿರಿಯ ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸಹ ಸಮರ್ಥ ಸದ್ಗುರುಗಳದ್ದೇ ಆಗಿರುತ್ತದೆ. ನಿಜ, ನಿಕೃಷ್ಟನಾದ ಗುಲಾಮನೊಬ್ಬನಿಗೆ ತನ್ನ ಸಮಾನ ಸ್ಥಾನವನ್ನು ದಯಪಾಲಿಸಿ ಸಮರ್ಥ ಗುರುವನ್ನಾಗಿ ನಿಯಮಿಸುವದು ಸದ್ಗುರುವಿನ ಮಹಾನ್‌ತೆಯಾಗಿರುತ್ತದೆ. ಆದರೆ ಮಹರಾಜನಿಂದ ಕಿರೀಟ ಮತ್ತು ಸಿಂಹಾಸನಗಳನ್ನು ದಯಪಾಲಿಸಲ್ಪಟ್ಟ ಇಂತಹ ವ್ಯಕ್ತಿಯು ತಾನು ಒಬ್ಬ ಸೇವಕ ಅಥವಾ ದಾಸನಿಗಿಂತಲೂ ಎಂದೂ ಹೆಚ್ಚಿನವನಲ್ಲವೆಂದು ಅರ್ಥಮಾಡಿಕೊಳ್ಳುವ ದರಲ್ಲಿಯೇ ಅವನ ಸಭ್ಯತೆ ಅಡಗಿರುತ್ತದೆ. ನಿಜಾರ್ಥದಲ್ಲಿ ಅದರ ಮಾನದಂಡವೆಂದರೆ ಬ್ರಹ್ಮ ವಿದ್ಯೆಯ ಮೇಲಿನ ಅಧಿಕಾರ ಹಾಗು ನಿಯಂತ್ರಣಗಳಲ್ಲದೆ ಅದರ ಪರಂಪರೆಯನ್ನು ಮುಂದುವರೆಸುವ ಸಾಮರ್ಥ್ಯ ಬೆಳೆಸಿಕೊಳ್ಳುವದಾಗಿದ್ದು ಸಮರ್ಥ ಸದ್ಗುರುವಿನ ಮಹತ್ವ ಹಾಗು ಸಂಬಂಧದ ವೈಶಿಷ್ಟ್ಯತೆಯಾಗಿರುತ್ತದೆ. ಗುರುವಿಗೆ ಸಂಪೂರ್ಣವಾಗಿ ಶರಣಾಗತಿಯಿಲ್ಲದೆ ಇದು ಅಸಾಧ್ಯವಾದುದು, ಶರಣಾಗತಿಯಾದರೂ ಗುರುವಿನ ಮೇಲೆಯೇ ಅವಲಂಬಿತವಾಗಿರುತ್ತದೆಯೇ ವಿನಃ ಗುಲಾಮನ ಮೇಲಲ್ಲ. ಇದುವೇ ಈ ಸರ್ವಶ್ರೇಷ್ಠ ವಿದ್ಯೆ ಮತ್ತು ಉಳಿದವುಗಳಲ್ಲಿಯ ವಿಶೇಷ ವ್ಯತ್ಯಾಸವಾಗಿರುತ್ತದೆ.