1. “ಧಾರ್ಮಿಕ ಅತ್ಯುತ್ಸಾಹೀ ಶ್ರದ್ಧೆಯ ಅಡಿಯಲ್ಲಿ ಸಂಭವಿಸಲು ಸಾಧ್ಯವಿರುವಂತೆ, ಸಹಜಮಾರ್ಗದಲ್ಲಿ ದೋಷ ಮತ್ತು ಜಹಗೀ ಅಪಾಯಗಳ ಸ೦ಭವನೀಯ ಮೂಲವನ್ನು ನಿರ್ಲಕ್ಷಿಸಬಾರದು” ಎಂದು ಸಂಶೋಧಕನೊಬ್ಬನು ತನ್ನ ಲೇಖನದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತ ಮಾಡಿದ್ದಾನೆ.

“ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ ಹಾಗೂ ಅಧ್ಯಾತ್ಮದ ಕೊನೆಯೇ ಸತ್ಯದ ಆರಂಭವಾಗಿದೆ” ಎನ್ನುವುದು ಸಹಜಮಾರ್ಗದ ಪ್ರತಿಯೊಬ್ಬ ಪ್ರಾಮಾಣಿಕ ಅಭ್ಯಾಸಿಯ ದೃಢ ವಿಶ್ವಾಸ. ಆದುದರಿಂದ ಸಹಜ ಮಾರ್ಗದಲ್ಲಿ ಒಬ್ಬ ಅಭ್ಯಾಸಿಯ ಧಾರ್ಮಿಕ ಉತ್ಸಾಹವು ಅವನ ಅಂತಿಮ ಗುರಿಯನ್ನು ಬಹುಕಾಲದವರೆಗೆ ಮುಚ್ಚಿಡಲಾರದು. ಹೀಗೆ, ಎಲ್ಲ ಸಂಭವನೀಯ ದೋಷಗಳನ್ನು ಹಾಗೂ ಅಪಾಯಗಳನ್ನು ಅತಿಕ್ರಮಿಸಲು ಸಹಜಮಾರ್ಗ ಸಾಧನೆಯಲ್ಲಿ ಒಂದು ಅಂತರ್ನಿಹಿತ ರಾಚನಿಕ ವ್ಯವಸ್ಥೆ ಉಂಟು.

2, ಕೇವಲ ಇಬ್ಬರು ಗುರುಗಳ ಕೊಡುಗೆಗೆ ಯಾವ ಪದ್ಧತಿಯು ತನ್ನ ವಿಚಾರ ಮತ್ತು ಅಭಿಪ್ರಾಯ (ಸಿದ್ಧಾಂತ) ಗಳನ್ನು ಸೀಮಿತಗೊಳಿಸಿದೆಯೋ, ಹಾಗೆ ಮಿತಿ ಹಾಕಿದೆಯೋ ಅಂತಹ ಪದ್ಧತಿಯ ಬಗ್ಗೆ ಒತ್ತಾಯಪಡಿಸುವುದರಲ್ಲಿರುವ ‘ಅಭೇದ್ಯ ದೋಷ’ವನ್ನು ತನಗೆ ಎದುರಿಸಬೇಕಾಗಿ ಬಂದಿದೆಯೆಂದು ವಿದ್ಯಾವಂತನಾದ, ಶುಷ್ಕ ಪಾಂಡಿತ್ಯವುಳ್ಳ ಶೋಧಕನು ಹೇಳಿಕೊಳ್ಳುತ್ತಾನೆ.

“ನಾನು ಶಿಷ್ಯನನ್ನು ಮಾಡಿಕೊಳ್ಳಲು ಬಯಸುವುದಿಲ್ಲ, ಆದರೆ ಪ್ರತಿಯೊಬ್ಬ ಅಭ್ಯಾಸಿಯೂ ‘ಗುರು’ (ಪ್ರಭುತ್ವ ಹೊಂದಿದವನು) ಆಗಬೇಕೆಂದು ನಾನು ಬಯಸುತ್ತೇನೆ” ಎಂದು ಅನೇಕ ಸಲ
ನಮ್ಮ ಗುರುಗಳು ಹೇಳಿದ್ದಾರೆ. ಡಾ. ಕೆ.ಸಿ. ವರದಾಚಾರಿ, ಶ್ರೀ ಈಶ್ವರ ಸಹಾಯ್, ಶ್ರೀ (ಕು.) ಕಸ್ತೂರಿಜಿ ಮತ್ತು ಅನೇಕ ಮುಂದುವರಿದ ಅಭ್ಯಾಸಿಗಳ ಕೃತಿಗಳು ಹಾಗೂ ಬರಹಗಳು, ಯಾವುದೇ ಗಂಭೀರ ಅಭ್ಯಾಸಿಯು ಚಿಂತನಕ್ಕೆ ನೀಡಲಾದ ಹಾಗೂ ಅವನು ಬೆಳೆಸಿಕೊಂಡ ಪೂರ್ಣ ವಿಚಾರ ಸ್ವಾತಂತ್ರ್ಯದ ಬಗ್ಗೆ, ಯಾವುದೇ ಮುಕ್ತ ಮನಸ್ಸಿನ ವಿಮರ್ಶಕನಿಗೆ ಮನದಟ್ಟು ಮಾಡಿಕೊಡಲು ಪರ್ಯಾಪ್ತವೆನಿಸುವ ಪ್ರಮಾಣವಾಗುತ್ತವೆ. ಅತ್ಯಂತ ಸೂಕ್ಷ್ಮತೆಯನ್ನೊಳಗೊಂಡ ಸಂಗತಿಯನ್ನು ಒಂದು ಪಾಂಡಿತ್ಯಪೂರ್ಣ ಚರ್ಚೆಯ ವಿಷಯವನ್ನಾಗಿ ಮಾಡಿಕೊಂಡಾಗ ಮಾತ್ರವೇ ಇಂತಹ ಸಂದೇಹಕ್ಕೆ ಅವಕಾಶ ಉಂಟಾಗುವುದು.

3. ‘ಆದಿಗುರುವಿನ’ ಆಚಾರ್ಯ(ಗುರು)ರ ವ್ಯಕ್ತಿತ್ವವನ್ನು ಗುರುತಿಸುವ ನಿರ್ದಿಷ್ಟ ಕಾಲ ಮುಂತಾದವುಗಳ ಬಗ್ಗೆ ಈ ಸಂಶೋಧಕನು ತೊಂದರೆ ಎದುರಿಸುತ್ತಾನೆ.
ವೈಜ್ಞಾನಿಕ ಪ್ರಗತಿಯು ಅಣುವನ್ನು ಚೂರು ಚೂರು ಮಾಡಿತು. ಆನುವಂಶಿಕ ಘಟಕ (ಜೀನ್ಸ್)ಗಳನ್ನು ಮತ್ತು ವರ್ಣತಂತು (ಕ್ರೋಮೋಜೋಮ್ಸ್)ಗಳನ್ನು ಹುಡುಕಿ ತೆಗೆಯಿತು. ಡಿ.ಎನ್.ಎ. ಮುಂತಾದ ಸೂಕ್ಷ್ಮಾಣು ಸ್ವರೂಪಗಳ ಅಸಾಧಾರಣ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೂಡ ಮಾಡಿತು. ಆದರೂ ಸಂಶೋಧನೆಯು ಅದರ ಅಂತ್ಯದ ಸಮೀಪ ಕೂಡ ಮುಟ್ಟಲಿಲ್ಲ. ದೈವೀ ಸಾಕ್ಷಾತ್ಕಾರದ ಯತ್ನದಲ್ಲಿ ಸಂಪೂರ್ಣ ಮುಳುಗಿದ್ದ ಒಬ್ಬ ಅಧ್ಯಾತ್ಮ ಜೀವಿಯು, ಅದನ್ನೆಲ್ಲ ಯಾರು ಪ್ರಾರ೦ಭಿಸಿದರು ಮುಂತಾದ ಸಮಸ್ಯೆಗಳ ಬಗ್ಗೆ ಚಿಂತಿಸುವುದೆಂದರೆ, ಅನ್ನವಿಲ್ಲದೆ ಹಸಿವಿನಿಂದ ಕಷ್ಟಪಡುವ ಭಿಕ್ಷುಕನು ತನ್ನ ಅತೀವ ಹಸಿವಿನ ಬಾಧೆಯನ್ನು ನೀಗಿಸಲು ನೀಡಲಾದ ಆಹಾರಕ್ಕೆ ಯಾವ ಸಾಮಗ್ರಿಗಳನ್ನು ಬಳಸಲಾಯಿತು, ಹಾಗೂ ಯಾವ ವಿಧಾನಗಳನ್ನು ಅನುಸರಿಸಲಾಯಿತು ಎ೦ಬುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಂತಾಯಿತು. ಈ ವಿಷಯದಲ್ಲಿ ಶ್ರದ್ಧಾವಂತ ಅನುಯಾಯಿಗಳ ಮನೋಧರ್ಮವು ಉದಾಸೀನತೆಯದಾಗಿದೆಯೆಂಬುದು ಆಶ್ಚರ್ಯಕರ ಸಂಗತಿಯಲ್ಲ.

4, ಅಸ್ತಿತ್ವದ 23 ‘ಕಾರಣ’ ವಲಯದ ವೃತ್ತಗಳು, ಮತ್ತು ಯೌಗಿಕ ಸತ್ತೆಯ (ಇರುವಿಕೆಯ) ಮೂರು ವಲಯಗಳು (ಹೃದಯ ಮಂಡಲ, ಮನೋಮಂಡಲ ಮತ್ತು ಕೇಂದ್ರ ಮಂಡಲ), ಹಾಗೂ ಆಧ್ಯಾತ್ಮಿಕ ಜ್ಞಾನ-ಪ್ರಕಾಶನದ 13 ಗ್ರಂಥಿಗಳು, ಇವುಗಳ ಸಾದೃಶ್ಯ ಅಥವಾ ಸಂಬಂಧ ಮತ್ತು ಪ್ರಾಯೋಗಿಕ ಹೊಂದಿಕೆ ಅಥವಾ ಆನುರೂಪ್ಯತೆ, ಪ್ರಾಯೋಗಿಕ ಪ್ರಮಾಣೀಕರಣ ಸಾಧ್ಯತೆ, ಹಾಗೂ ವಸ್ತುನಿಷ್ಠ ವಿಶ್ಲೇಷಣೆಗಳನ್ನು ಕಂಡುಹಿಡಿಯುವ ಬಗ್ಗೆ ವಿಮರ್ಶಕನ ಮುನ್ನೊಲವು (ಪೂರ್ವಕಲ್ಪಿತ ಅಭಿಪ್ರಾಯಗಳು) ಅವನಿಗೆ ಒಂದು ಕಗ್ಗಂಟಿನ ಸಮಸ್ಯೆಯನ್ನು ಉಂಟುಮಾಡಿದೆ.

ಯೋಗ ತತ್ತ್ವದ ಅನೇಕ ಸೈದ್ಧಾಂತಿಕ ಅಭ್ಯಾಸಿಗಳು ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ ಅನುಭವಗಳನ್ನು ಕಲಬೆರಕೆ ಮಾಡಿ, ಅದನ್ನು ಗಹನಗೊಳಿಸಿ ಅದನ್ನು ಒಂದು ಕಗ್ಗಂಟು ಮಾಡಿದ್ದಾರೆ, ಅಥವಾ ಆಂತರಿಕ ಅಧ್ಯಾತ್ಮಿಕ ಸ್ಥಿತಿಗಳಿಗೆ ಸರಿಬೀಳುವ (ಸಂವಾದಿಯಾದ) ಬಾಹ್ಯ ಚಿಹ್ನೆಗಳನ್ನು ಸೂಚಿಸುವ ಮೂಲಕ ಅದನ್ನು ಅಪಹಾಸ್ಯ ಮಾಡಿದ್ದಾರೆ. ರಕ್ತದ ಒತ್ತಡ, ಹೃದಯದ ಬಡಿತ, ದೇಹದ ಉಷ್ಣತೆ ಇವುಗಳನ್ನು ಅಳೆಯುವುದು ಆಧ್ಯಾತ್ಮಿಕ ಅಥವಾ ಯೌಗಿಕ ಸ್ಥಿತಿಗಳನ್ನು ನಿರ್ಧರಿಸಲು ಒಂದು ವ್ಯರ್ಥ ಪ್ರಯತ್ನವಾಗಿದೆ.
ನಕ್ಷೆಗಳು ಹಾಗೂ ರೇಖಾ ಚಿತ್ರಗಳ ಮೂಲಕ ವಿಪುಲ ದತ್ತಾಂಶ (ಅಂಕಿ-ಸಂಖ್ಯೆ) ಗಳನ್ನು ಪ್ರಸ್ತುತ ಪಡಿಸುವುದು ಒಂದು ಸಾಮಾನ್ಯ ತಾಂತ್ರಿಕ ಪದ್ಧತಿಯಾಗಿದೆ. ಹಾಗೆ ಮಾಡದಿದ್ದರೆ, ಅದಕ್ಕೆ ಬಹಳ ಸಮಯ ಬೇಕಾಗುವುದು ಮತ್ತು ಅವುಗಳನ್ನು ಅರಗಿಸಿಕೊಳ್ಳಲು ಕಷ್ಟವಾಗುವುದು. ಇದರ ಅರ್ಥ, ನಕ್ಷೆಗಳು, ರೇಖಾ ಚಿತ್ರಗಳು ವಾಸ್ತವ ಅಥವಾ ನೈಜ ಎಂದಲ್ಲ. ಅದೇ ರೀತಿ, ತಮ್ಮ ಪದ್ಧತಿಯ ಗಂಭೀರ ಅನುಯಾಯಿಗಳ ತಿಳಿವಳಿಕೆಗೋಸ್ಕರ, ತಮ್ಮ ಅಗಣಿತ ಮತ್ತು ವಿಶಾಲ ಆಧ್ಯಾತ್ಮಿಕ ಅನುಭವಗಳನ್ನು ನಕ್ಷೆ ಮತ್ತು ರೇಖಾಚಿತ್ರ ರೂಪಕ್ಕೆ ಇಳಿಸಿದ್ದಾರೆ.

5. ಒಂದೇ ತರಹದ ಬಿಂದು, ಅಥವಾ ಗ್ರಂಥಿ ಅಥವಾ ವಲಯ (ಮಂಡಲ)ದಲ್ಲಿ ಇರುವ ಬೇರೆ ಬೇರೆ ಅಭ್ಯಾಸಿಗಳ (ಆಧ್ಯಾತ್ಮಿಕ) ದಿನಚರಿಗಳ ತುಲನೆಯ ಮೂಲಕ. ಅಭ್ಯಾಸಿಗಳ ಆಧ್ಯಾತ್ಮಿಕ
ಪ್ರಗತಿಯ ಘಟ್ಟಗಳ ಅಂತರಿಕ ಸ್ಥಿತಿಯ ವಾಸ್ತವಿಕ ಅಳತೆಗೋಲನ್ನು (ನಿಕಷ) ನಿರ್ಧರಿಸಬೇಕಾಗಿದೆ ಎಂದು ಲೇಖನ ಹೇಳುವುದು.
ಇದು ಒಂದು ತರ್ಕಾತೀತವಾದ ಪದ್ಧತಿಯನ್ನು ಅತಿವೈಚಾರಿಕತೆಯ ರೀತಿಯಲ್ಲಿ ವಿವರಿಸಿದಂತಾಗುವುದು. ನಮ್ಮ ಗುರುಗಳ ಪ್ರಶ್ನಾತೀತ ಅನುಭವಗಳನ್ನಾಧರಿಸಿದ ಅವರ ಬರಹಗಳಿಂದ ಹೊರತಂದ ಮಾದರಿಗಳು (ಕ್ಲುಪ್ತ ಪ್ರಮಾಣಗಳು) ಈಗಾಗಲೇ ಲಭ್ಯವಿವೆ. ಯೋಗ್ಯ ಪ್ರಮಾಣಗಳನ್ನು ನಿರ್ಧರಿಸಲು ಅಭ್ಯಾಸಿಗಳ ಅನುಭವಗಳ ಸರಾಸರಿ ಕಂಡುಹಿಡಿಯುವುದು ಎಂದರೆ, ಒಂದು ನದಿಯಲ್ಲಿ ಮುಳುಗದೆ ಅದನ್ನು ದಾಟಿ ಹೋಗಲು ಆ ನದಿಯ ಸರಾಸರಿ ಆಳವನ್ನು ಗಣಿಸಿದಂತೆಯೇ ಸರಿ.

ಸಾಕ್ಷಾತ್ಕಾರ ಹೊಂದಲು ನಮಗೆ ಗ್ರಂಥಗಳು ನೆರವಿಗೆ ಬಾರವು. ಹಾಗೂ ಸಾಕ್ಷಾತ್ಕಾರವು ಸಿದ್ಧಿಸಿದಾಗ ಅವು ನಿಷ್ಪ್ರಯೋಜಕ.

ಶ್ರೀ ಬಾಬೂಜಿ