ವಿಚಾರವನ್ನು ಒಂದು ವಸ್ತುವಿನ ಮೇಲೆ ನೆಲೆಗೊಳ್ಳುವಂತೆ ಮಾಡುವುದೇ ಧ್ಯಾನ. ಮತ್ತೆ ಮತ್ತೆ ಮಾಡುವ ಧ್ಯಾನದ ಅಭ್ಯಾಸ, ಹಾಗೂ ‘ಧ್ಯೇಯ’ದ (ಧ್ಯಾನ ಮಾಡಲ್ಪಡುವ ವಸ್ತು) ಮೇಲಿನ ಹೆಚ್ಚಿನ ಆಸಕ್ತಿ, ಇವು ಧ್ಯಾನವು ಸ್ವಾಭಾವಿಕ ಸ್ವರೂಪ ತಳೆಯುವಂತೆ ಮಾಡುತ್ತವೆ. ಕಾಲಕ್ರಮದಲ್ಲಿ ಧ್ಯಾನಕ್ಕಾಗಿ ಮಾಡುವ ಪ್ರಯತ್ನವು ಇಲ್ಲವೆನ್ನುವಷ್ಟು ಕನಿಷ್ಠ ಮಟ್ಟಕ್ಕಿಳಿಯುತ್ತದೆ ಹಾಗೂ ಆಗ ಅದೊಂದು ಇಚ್ಚಾಪೂರ್ವಕ ಮಾಡಬೇಕಾದ ಕ್ರಿಯೆಯಾಗಿ ಉಳಿಯುವುದಿಲ್ಲ. ಅಂತಹ ಸ್ಥಿತಿಯಲ್ಲಿ ಅದರ ಪರಿಣಾಮ ಮಾತ್ರ ಅರ್ಥಾತ್ ಶುದ್ಧ ಜ್ಞಾನ (ಅರಿವು) ಮಾತ್ರ ಉಳಿಯುವುದು. ಇದೂ (ಅದರ ಅರಿವೂ) ಹೊರಟು ಹೋದಾಗ, ಅಂದರೆ ಧ್ಯಾನವು ಸತ್ಯದ ಕಡೆಗೆ ಅರ್ಥಾತ್ ಧ್ಯೇಯವಸ್ತುವಿನ (ಧ್ಯಾನ ಮಾಡಲ್ಪಡುವ ವಸ್ತುವಿನ) ಸಾರದ ಕಡೆಗೆ ಮುಂದುವರಿದಾಗ ಅದರ ಸ್ವಾಭಾವಿಕ ಅಥವಾ ನೈಜ ಸ್ಥಿತಿಯಾಗಿ ಫಲಿಸುವುದು.

ಧ್ಯಾನವನ್ನು ಹೇಗೆ ಮಾಡತಕ್ಕದ್ದೂ ಹಾಗೆ ಮಾಡಿದಾಗ ಹಾಗೂ ಧ್ಯಾನಕ್ಕಾಗಿ ಆಯ್ಕೆ ಮಾಡಿಕೊಂಡ ವಸ್ತುವು (ಧ್ಯೇಯ ವಸ್ತು) ನಾವು ಗುರಿಯಾಗಿರಿಸಿಕೊಂಡ ವಸ್ತುವಿನೊಂದಿಗೆ ಅನುರೂಪವಾಗಿದ್ದಾಗ ಮಾತ್ರವೇ, ಈ ಮೇಲೆ ಹೇಳಿದುದು ಸತ್ಯ.

ಪ್ರತಿಯೊಂದು ಕ್ರಿಯೆಯೂ ಒಂದು ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿ. ಹಾಗಿದ್ದಾಗ್ಯೂ, ಯಾವ ನಿರ್ದಿಷ್ಟ ಕ್ರಿಯೆಯು ಯಾವ ನಿರ್ದಿಷ್ಟ ಪರಿಣಾಮವನ್ನು ಕೊಡುತ್ತದೆ ಎಂಬುದು ಒಂದು ರಹಸ್ಯವೇ ಆಗಿದೆ. ಫಲವನ್ನು ನಿಯಂತ್ರಿಸುವ ‘ಅದೃಷ್ಟ’ (ಕಾಣದ್ದು) ಎಂಬ ಅಂಶವು ಯಾವಾಗಲೂ ಇದ್ದೇ ಇದೆ. ಆದಾಗ್ಯೂ, ಅಂತರ್ಬೋಧೆಯ ಒಳ ಅರಿವನ್ನು ಬೆಳೆಸಿಕೊಳ್ಳುವ ಮೂಲಕ ಕ್ರಿಯೆಗಳ ಹಾಗೂ ಅವುಗಳ ಪರಿಣಾಮಗಳ ಮೇಲೆ ನಿಕಟ ನಿಯಂತ್ರಣ ಹೊಂದಲು ಸಾಧ್ಯವಿದೆ. ಸ್ವತಃ ಕ್ರಿಯೆಗಳೇ ಕೆಲವು ಸೂಕ್ಷ್ಮ ಕಾರಣಗಳ ಪರಿಣಾಮಗಳಾಗಿವೆ ಎಂಬುದನ್ನು ಕೂಡ ಕಾಣಬಹುದು. ಅದೃಷ್ಟ ಎಂಬ ಕಾರಕಾಂಶದ ಆಟವನ್ನು ಅರಿಯದೆ, ಸರಿಯಾದ ಅಂತರ್ಬೋಧೆಯ ಒಳನೋಟವನ್ನು ಬೆಳೆಸಿಕೊಳ್ಳಲಾರದೆ, ಮತ್ತು ಕಾರ್ಯದ ನಿಜವಾದ ಕಾರಣದ ತಿಳಿವಳಿಕೆಯಿಲ್ಲದೆ ಇದ್ದಾಗ, ಅಪೇಕ್ಷಿತ ಫಲಿತಾಂಶಗಳಿಗೋಸ್ಕರ ಆವಶ್ಯಕತೆಗಿಂತಲೂ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡರೆ, ನಿರಾಶೆ, ದುಃಖ, ಮತ್ತು ರೋಗಗಳು ಪ್ರತಿಫಲವಾಗಿ ದೊರಕುತ್ತವೆ. ಹುಚ್ಚರು, ಉನ್ಮತ್ತರು, ಹಾಗೂ ಅರೆಬುದ್ಧಿಯುಳ್ಳವರು ಈ ವರ್ಗಕ್ಕೆ ಸೇರುತ್ತಾರೆ.

ಧ್ಯಾನವು ಒಂದು ಕ್ರಿಯೆ ಎಂಬುದನ್ನು ಈಗಾಗಲೇ ಗಮನಕ್ಕೆ ತರಲಾಗಿದೆ. ಸ್ವಾಭಾವಿಕವಾಗಿಯೇ ಅದಕ್ಕೆ ಕೆಲವು ಪರಿಣಾಮಗಳುಂಟು. ಇಲ್ಲಿ ಕೂಡ ವಿವಿಧ ಕಾರ್ಯಕಾರಿ ಘಟಕಗಳು ಕೆಲಸ ಮಾಡುತ್ತವೆ. ದೇವರನ್ನು ನೋಡಲು, ಹಾಗೂ ಅವನ ಜೊತೆಗೆ ಮಾತನಾಡಲು ಬಯಸಿದ್ದರೆ, ಹಾಗೂ ತದನುಸಾರವಾಗಿ ಕೆಲವು ಕಳಪೆ ಪುಸ್ತಕಗಳನ್ನು ಓದಿ, ಅಥವಾ ಕೆಲವು ಅನನುಭವಿಗಳ ಉಪದೇಶದ ಮೇರೆಗೆ ದೇವರ ಚಿತ್ರಗಳನ್ನು ಧ್ಯಾನ ವಸ್ತುವಾಗಿ ತೆಗೆದುಕೊಂಡು ಸಂಕಲ್ಪ ಶಕ್ತಿಯನ್ನು ಉಪಯೋಗಿಸಿ ಧ್ಯಾನ ಮಾಡಿದರೆ ಅದು ಕೆಲವು ಪರಿಣಾಮಗಳನ್ನು ಉಂಟುಮಾಡುವುದು. ಮಂತ್ರಗಳ ಅನುಷ್ಠಾನದ ಮೂಲಕ, ಅಥವಾ ಹಾಗೆಂದು ಕರೆಯಲಾದ ‘ಅಜಪಾ’ ಜಪದಿಂದ ದೈವೀ ಸ್ಪಂದನಗಳನ್ನು ಉಂಟುಮಾಡಿಕೊಳ್ಳಲು ಪ್ರಯತ್ನ ಪ್ರಾರಂಭಿಸಿದರೂ, ಅದೂ ಇದೇ ಮಾದರಿಯದಾಗುತ್ತದೆ. “ಓಂ ಅನಂತ ಸುಬ್ರಹ್ಮಣ್ಯಾಯ ನಮಃ” ಅಥವಾ ಇನ್ನೂ ಸುಲಭದ್ದಾದ ‘ಸೋsಹಮ್’ ಮುಂತಾದ ಮಂತ್ರಗಳ ಯಾಂತ್ರಿಕ ಪುನರುಚ್ಚರಣೆ, ಅವುಗಳನ್ನು ಉಸಿರಿನೊಂದಿಗೆ ಜೋಡಿಸಿ ಮಾಡುವುದು, ಅಥವಾ ಇನ್ನೂ ಲಯಬದ್ಧವಾದ ‘ಲಾ ಇಲಾಹ್ ಇಲ್ ಅಲಾಹ್’ ಅಥವಾ ಎರಡು-ಇಪ್ಪತ್ತು-ಇಪ್ಪತ್ತೈದು ಮುಂತಾದವುಗಳನ್ನು ಹೆಜ್ಜೆಯ ಗತಿಗೆ, ನಡೆಯುವಾಗ ಜೋಡಿಸಿದಾಗ, ಅದೂ ಕೂಡ ಏನೋ ಒಂದು ಪರಿಣಾಮ ನೀಡುವುದು. ಧ್ಯಾನ ಪ್ರಾರಂಭ ಮಾಡುವುದರ ನಿಜವಾದ ಕಾರಣವಾಗಲಿ, ಅಥವಾ ಪ್ರಬಲ ಅಂತಃಪ್ರೇರಣೆ ತಿಳಿದಿರುವಾಗ, ಮತ್ತು ಧ್ಯಾನದ ಕಾರ್ಯಗತಿಯ ಕುರಿತಾದ, ಅಂತರ್ಬೋಧೆಯ ಒಳನೋಟವಿಲ್ಲದಿರುವಾಗ, ಹಾಗೂ ‘ಅದೃಷ್ಟ’ವೆಂಬ ಘಟಕಾಂಶವೂ ಕೆಲಸ ಮಾಡುತ್ತಿರುವುದರಿಂದ, ಈ ಕ್ರಿಯೆಗಳು ಧ್ಯಾನ ಮಾಡುವವನು ನಿರೀಕ್ಷಿಸಿರದ ಅಥವಾ ಬಯಸಿರದ ಪರಿಣಾಮಗಳನ್ನು ನೀಡಲು ಪ್ರಾರಂಭಿಸುವುವು; ಹಾಗಿದ್ದೂ, ಈ ಕ್ರಿಯೆಯನ್ನು ಮುಂದುವರಿಸಿದರೆ, ಭ್ರಮೆ, ನರವ್ಯಾಧಿ, ಅಥವಾ ಬುದ್ಧಿವಿಕಲ್ಪ ಮುಂತಾದ ಪರಿಣಾಮಗಳಾಗುವವು.

ಅನೇಕ ಪ್ರಸಂಗಗಳಲ್ಲಿ ಅಪಾಯಕಾರಿ ಪರಿಣಾಮಗಳು ಕಂಡುಬಂದಿದ್ದರಿಂದ ಯೋಗಮಾರ್ಗವನ್ನು ತೀವ್ರ-ಕಲ್ಪನೆಯ ಪದ್ಧತಿಗಳು ಎಂದು ಮುಂತಾಗಿ ಕರೆದು, ಕೆಲವು ಗುರುಗಳು ಟೀಕಿಸಿದ್ದಾರೆ ಮತ್ತು ಅದಕ್ಕಾಗಿ ಅವರು ಧ್ಯಾನದ ಉದ್ದೇಶಕ್ಕಾಗಿ ಭಾವಾವೇಶಯುಕ್ತ ಭಕ್ತಿ ಮಾರ್ಗವನ್ನು ವಿಧಿಸಿದ್ದಾರೆ. ಆದರೆ, ಇದೂ ಕೂಡ ಅವಿವೇಕದಿಂದ ಅನುಸರಿಸಿದರೆ ಅಪಾಯಮುಕ್ತವಾಗಿಲ್ಲ. ಕೆಲವು ಜನರಿಗೆ ಗುರಿಯೇ ದೃಷ್ಟಿಯಿಂದ ಮರೆಯಾಗಿ ಹೋಗಿದೆ. ಕೆಲವರು, ‘ಉದ್ಧಾರಕ’ ಗೀಳು ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವರು ಈ ಮೊದಲು ತಿಳಿಸಲಾದ ಕಾಲ್ಪನಿಕ ದರ್ಶನ(vision)ಗಳನ್ನು ಕಾಣುವ, ಮತ್ತು (ದೇವ) ವಾಣಿಯನ್ನಾಲಿಸುವ ಭ್ರಮಾತ್ಮಕ ಸ್ಥಿತಿಗಳಿಗೆ ಮತ್ತೆ ಬಲಿ ಬಿದ್ದಿದ್ದಾರೆ.

‘ಧ್ಯಾತೃ’ (ಧ್ಯಾನಿಸುವವ) ಮತ್ತು ‘ಧ್ಯೇಯ’ (ಧ್ಯಾನಿಸಲ್ಪಡುವ ವಸ್ತು)ಗಳ ‘ತಾದಾತ್ಮ’ ಎಂಬ ವಿಚಾರವು ಕೆಲವರನ್ನು ಬೇರೆ ದಾರಿಗೆಳೆಯಿತು. ಉದಾಹರಣೆಗೆ, ಕೆಲವು ಸಂತರು ದೇವರ ಸ್ಥಾನವನ್ನು ಆಕ್ರಮಿಸಿದರು; ಹಾಗೂ ತಾವೇ ದೇವರು ಎಂದು ಘೋಷಿಸಿದರು. ಕೆಲವರು ಕ್ಷಿಪ್ರ ವಿಕಾಸಗತಿಯನ್ನು ಉಂಟುಮಾಡಲು ದೇವರನ್ನು ಧರೆಗಿಳಿಸಿ ತಂದಿರುವೆವೆಂದು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು, ತಾವು ಜಗತ್ತಿನಲ್ಲಿ ಪ್ರಕಾಶವನ್ನು ವಿತರಿಸುತ್ತಿರುವರೆಂದು ಬಹಿರಂಗವಾಗಿ ಸಾರುತ್ತಾರೆ. ಅಲ್ಲದೆ, ಈ ‘ದೇವರುಗಳು’ ಮತ್ತು ‘ಸಂತ’ರು ದೊಡ್ಡ ಭಕ್ತ ಸಮೂಹಗಳನ್ನೂ ಹೊಂದಿದ್ದಾರೆ.

ಅನಂತರ, ಜ್ಞಾನಿ ಗುರುಗಳು ಕೂಡ ಸಂಖ್ಯೆಯಲ್ಲಿ ಕಡಿಮೆಯೇನಿಲ್ಲ. ಸಾಧಾರಣವಾಗಿ, ಕಾವಿ ಬಣ್ಣದ ಬಟ್ಟೆಗಳನ್ನು ಧರಿಸಿದ ಸ್ವಾಮೀಜಿಗಳೆಲ್ಲರೂ ಪರಿಪೂರ್ಣ ಜ್ಞಾನಿಗಳು; ಪೂರ್ಣ ಬ್ರಹ್ಮಜ್ಞಾನಿಗಳಿಗಿಂತ ಕಡಿಮೆಯವರಲ್ಲ. ಅವರೂ ಧ್ಯಾನದ ವಿವಿಧ ಪದ್ಧತಿಗಳನ್ನು ವಿಧಿಸುತ್ತಾರೆ. ಅವರ ಜ್ಞಾನವು ರೇಸ್-ಕೋರ್ಸ್ ಕುದುರೆಗಳಿಂದ ಹಿಡಿದು ಕ್ಷೀರ ಸಮುದ್ರದಲ್ಲಿ ಸರ್ಪದ ಮೇಲೆ ಪವಡಿಸಿರುವ ಪ್ರಭು ನಾರಾಯಣನವರೆಗೆ ವ್ಯಾಪಿಸಿದೆ. ಸಂಬಂಧಿತ ದೇವತೆಗಳ ಅನುಗ್ರಹವನ್ನು ಆಹ್ವಾನ ಮಾಡುವ ಮೂಲಕ ಬೇರೆ ಬೇರೆ ವಿಧದ ರೋಗಗಳನ್ನು ಗುಣಪಡಿಸುವ ಎಲ್ಲ ಜ್ಞಾನ ಅವರಿಗುಂಟು. ಒಂದು ಲಾಟರಿಯಲ್ಲಿ ಅಥವಾ ಚೀಟಿ ಹಾಕುವ ಜೂಜಿನಲ್ಲಿ ಗೆಲ್ಲುವುದಕ್ಕಾಗಿ ಅವರು ಲಕ್ಷ್ಮೀದೇವಿಯ ಅನುಗ್ರಹವನ್ನು ಆವಾಹಿಬಲ್ಲರು !

ಇನ್ನೂ ಹೆಚ್ಚು ಸಂಕೀರ್ಣ ವ್ಯವಹಾರಕುಶಲ ಸ್ವಾಮಿಗಳಿದ್ದಾರೆ. ಅವರು ತಮ್ಮ ಶಾಸ್ತ್ರ ಜ್ಞಾನದಿಂದ ದೇವರನ್ನು ವಶಪಡಿಸಿಕೊಂಡವರು. ಸಾರ್ವಜನಿಕ ವೇದಿಕೆಗಳಲ್ಲಿ ಅವರು, ಹೇಗೆ ಆತ್ಮಗಳು, ಅಗ್ನಿಯಿಂದ ಕಿಡಿಗಳು ಹೊಮ್ಮಿದಂತೆ ದೇವರಿಂದ ಹೊರಬಂದವು. ಈ ಅದ್ಭುತವಾದ ವಿಶ್ವವನ್ನು ದೇವರು ಸೃಷ್ಟಿಸಿದನು, ಆತ್ಮವು ಭೌತಿಕ ಪಂಜರದಿಂದ ನಿರ್ಗಮಿಸಿದಾಗ ಏನಾಗುವುದು, ಮೋಕ್ಷ ಎಂದರೇನು ? ಮುಂತಾದವುಗಳ ಬಗ್ಗೆ ಗಂಟೆಗಳ ಕಾಲ ಮಾತನಾಡಬಲ್ಲರು. ಅವರೂ ಕೂಡ ‘ಧ್ಯಾನ’ವನ್ನು ವಿಧಿಸುತ್ತಾರೆ, ಎಂತಹವೆಂದರೆ – ಜಗತ್ತನ್ನು ಕೇವಲ ಒಂದು ಭ್ರಮೆ ಎಂದು ಚಿಂತಿಸುವುದು, ಹೆಂಡತಿ, ಮಕ್ಕಳು, ತಾಯಿ ತಂದೆಯರನ್ನು ಪ್ರೀತಿಸದಿರಲು (ದ್ವೇಷಿಸಲು ಹೇಳಿರದಿದ್ದರೂ), [ಏಕೆಂದರೆ ಅವರು ಅಗಲಿದ ಆತ್ಮವನ್ನು ಅನುಸರಿಸಿ ಹೋಗಲಾರರು], ಕಿವಿಗಳನ್ನು ಮುಚ್ಚಿದಾಗ ‘ಓಂ’ ಎಂಬುದರ ಅದ್ಭುತ ಶಬ್ದವು ಕೇಳುತ್ತಿದೆಯೆಂದು ಕಲ್ಪಿಸುವುದು………… ಇತ್ಯಾದಿ. ಅವರಿಗೆ ‘ಅರ್ಹ ಶಿಷ್ಯರು’ ದೊರೆತರೆ, ತಾವು ಗುರು ಮತ್ತು ಶಿಷ್ಯ ಇಬ್ಬರೂ ‘ಬ್ರಹ್ಮ’ವೇ ಆಗಿದ್ದೇವೆ ಎಂದು ಅವರು ಪ್ರಕಟಪಡಿಸುವರು.

ಸರಿ, ಈ ಮೇಲಿನದರ ಒಟ್ಟು ಸಾರಾಂಶವೇನೆಂದರೆ, ಅತ್ಯುಚ್ಚವಾದುದನ್ನು ಪ್ರಾಪ್ತಿ ಮಾಡಿಕೊಳ್ಳುವತ್ತ ನಮ್ಮ ಗುರಿಯನ್ನು ನಿರ್ಧರಿಸಿದ ನಂತರವೇ ಧ್ಯಾನವನ್ನು ಕೈಗೊಳ್ಳಬೇಕು. ನಂತರ ಈ ಕಲೆಯಲ್ಲಿ ಪರಿಣತನಾದ ಹಾಗೂ ಗುರಿಯನ್ನು ತಲುಪಿದ ಒಬ್ಬ ಯೋಗ್ಯ ಮಾರ್ಗದರ್ಶಕನನ್ನು ಆರಿಸಿಕೊಳ್ಳಬೇಕು. ಆಮೇಲೆ, ಆತನ ಬೋಧನೆಗನುಸಾರವಾಗಿ ಅಭ್ಯಾಸವನ್ನು ಆರಂಭಿಸಬಹುದು. ಧ್ಯೇಯ ವಸ್ತುವಿನ ಒಂದು ಸೂಕ್ಷ್ಮ ಗುಣದೊಂದಿಗೆ ನಮ್ಮ ಚಿಂತನೆಯನ್ನು ಜೋಡಿಸುವ ಮೂಲಕ ಅದರ ಸತ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದು ಧ್ಯಾನ ಮಾಡುವುದರ ಅಂತರ್ಭಾವವಾಗಿದೆ. ಆದ್ದರಿಂದ, ವಾಸ್ತವವಾಗಿ ಯಾವುದು ಧ್ಯಾನದ ಪರಿಣಾಮವಾಗಬೇಕಿದೆಯೋ ಅದರ ಮೇಲೆ ಎಂದೂ ಧ್ಯಾನ ಮಾಡದೆಂದು ಹೇಳಿದಂತೆಯೇ ಆಯಿತು. ಈ ಪ್ರಾಥಮಿಕ ತತ್ತ್ವವನ್ನು ನಿರ್ಲಕ್ಷಿಸುವುದೇ ಎಲ್ಲ ಗೊಂದಲ ಮತ್ತು ಜಟಿಲತೆಗಳಿಗೆ ಕಾರಣವಾಗಿದೆ. ಸುದೈವದಿಂದ, ಅತ್ಯುಚ್ಚ ಸ್ಥಿತಿಯನ್ನು ಹೊಂದಿದ ಒಬ್ಬ ಗುರುವು ದೊರೆತರೆ, ಅಂತಹ ಗುರುವನ್ನು ಸಾಕ್ಷಾತ್ಕರಿಸಿಕೊಳ್ಳಲು ಅವನ ಆಕಾರದ ಮೇಲೆ ಧ್ಯಾನ ಮಾಡಬೇಕು.

ಎಲ್ಲದಕ್ಕಿಂತ ಹೆಚ್ಚಿನದೆಂದರೆ, ಒಬ್ಬನು ಅತ್ಯುನ್ನತ ಸ್ಥಿತಿಯನ್ನು ಹೊಂದಿದ ಗುರುವಿನ ಮೇಲೆ ಧ್ಯಾನ ಮಾಡಿದರೆ, ಅವನು ಗುರಿಯವರೆಗೆ ತಲುಪುವುದು ನಿಶ್ಚಿತವೇ ಇದೆ. ಅಲ್ಲದೆ, ಅದು ಅತ್ಯಂತ ಸುಲಭ ಪ್ರಕ್ರಿಯೆಯಾಗಿದೆ. ಈ ವಿಧಾನದ ನಿಷ್ಕೃಷ್ಟತೆಯನ್ನು ಅದನ್ನು ಪರೀಕ್ಷೆ ಮಾಡುವುದರಿಂದಲೇ ತಿಳಿದು ಬರುವುದು; ಆದರೆ, ಧ್ಯಾನ ಮಾಡಲು ವಿಧಿಸಲಾದ ಸಾಮಾನ್ಯ ಪದ್ಧತಿಯೆಂದರೆ, ಅದೇ ಗುರಿಯನ್ನು ತಲುಪಲು ದೈವೀ ಪ್ರಕಾಶದ ಮೇಲೆ ಧ್ಯಾನ ಮಾಡುವುದಾಗಿದೆ; ಏಕೆಂದರೆ, ಅದು ಪ್ರತಿಯೊಂದು ಮನಸ್ಸಿಗೂ ಸೂಕ್ತವಾಗಬಹುದಾಗಿದೆ. ಇದರ ಹಿಂದಿರುವ ‘ಸತ್ಯ’ವು ವಿವರಿಸಲಾರದುದಾಗಿದೆ.
ಬಂಧನಗಳನ್ನು ಮೀರಿ ಹೋಗುವುದು ಸಂತನ ಕೆಲಸ, ಹಾಗೂ ಬಂಧನದಲ್ಲಿಯೇ ಉಳಿದಿರುವುದು ಸಾಮಾನ್ಯ ವ್ಯಕ್ತಿಯ ಕೆಲಸ. ವಿಧಿಸಲಾದ ಪದ್ಧತಿಗಳು ನಮ್ಮನ್ನು ಬಂಧನದ ಪರಿಧಿಯಲ್ಲಿ ಇಡುವುವೋ ಅಥವಾ ಬಂಧನಗಳಾಚೆಗೆ ನಮ್ಮನ್ನು ಕರೆದೊಯ್ಯಬಲ್ಲವೋ ಎಂಬುದನ್ನು ಹೇಗೆ ಪರೀಕ್ಷಿಸಬೇಕು ? ಧ್ಯಾನದ ಪರಿಣಾಮವು ನಮ್ಮನ್ನು ಬಂಧನಗಳಿಂದಾಚೆಗೆ ಒಯ್ಯಬಲ್ಲುದಾದರೆ; ಹಾಗೂ ಯೋಗ್ಯ ಮಾರ್ಗದರ್ಶನ ದೊರೆತುದಾದರೆ ಅವು ಒಳ್ಳೆಯದನ್ನು ಮಾಡುವವು.

ಯಾರೂ ಮಾರ್ಗದರ್ಶಕನ ಸಹಾಯವಿಲ್ಲದೆ ಉನ್ನತ ವಲಯಗಳಿಗೆ ಮುಂದುವರಿಯಲಾರರು; ಏಕೆಂದರೆ, ಒಬ್ಬನು ಯಾವ ಸ್ವರೂಪದಲ್ಲಿರುವನೋ ಅದೇ ರೂಪದಲ್ಲಿರಲು ಶಕ್ತಿಯು ನೇರವಾಗಿ ಕೆಲಸ ಮಾಡುತ್ತದೆ. ಪ್ರತಿಯೊಂದು ಒಳ್ಳೆಯ ವಿಷಯದ ಪ್ರತಿಯೊಂದು ಅಂಶದ ಬಗ್ಗೆ ಅದರ ಖಚಿತತೆಯನ್ನು ಪರೀಕ್ಷಿಸದೆ ಆಕ್ಷೇಪಗಳನ್ನೆತ್ತಿದರೆ, ಹೊಂದಾಣಿಕೆ ಮಾಡುವುದು ಹೇಗೆ ? ಒಬ್ಬನು ಭಗವಂತನೆಡೆಗೆ ನೇರವಾದ ಮಾರ್ಗವನ್ನು ಅನುಸರಿಸಿದಾಗ ಇದು ಸಂಭವಿಸುವುದು. ಅವರ ಮಾನಸಿಕತೆಯು ಎಷ್ಟು ವಿಕೃತವಾಗಿದೆಯೆಂದರೆ, ಅವರು ನೈಜ ಭಾವವನ್ನು ಗ್ರಹಿಸಲು ಬಯಸದೆ, ಗುರಿಗೆ ಸಂಬಂಧವಿಲ್ಲದ ಯಾವುದೋ ವಸ್ತುವಿನೆಡೆಗೆ ಕರೆದೊಯ್ಯುವ ದಾರಿಗಳನ್ನು ಗ್ರಹಿಸುವುದನ್ನೇ ಬಯಸುವರು; ಏಕೆಂದರೆ ಅವರು ಇಂತಹ ವಿಷಯಗಳನ್ನು ಸಾಮಾನ್ಯವಾಗಿ ಎಲ್ಲ ವೇದಿಕೆಗಳಿಂದಲೂ ಕೇಳುವರು.
ಜಗತ್ತಿನಲ್ಲಿ ಯಾವೊಬ್ಬನೂ ಚಿಂತೆಗಳಿಂದ ಮುಕ್ತನಾಗಿಲ್ಲ. ಕೇಶಗಳಿರುವುದು ವಾಸ್ತವದಲ್ಲಿ ಮನುಷ್ಯನ ಅಸ್ತಿತ್ವದ ಒಂದು ಇತ್ಯಾತ್ಮಕ ಪ್ರಮಾಣವೇ ಆಗಿದೆ.

– ಶ್ರೀ ಬಾಬೂಜಿ