(೨೪ ನೇ ಫೆ. ೧೯೭೩ ರಂದು, ಪೂಜ್ಯ ಲಾಲಾಜಿಯವರ ಜನ್ಮಶತಾಬ್ದಿಯ ಸಮಾರಂಭದಲ್ಲಿ, ಮದರಾಸಿನಲ್ಲಿ ನೀಡಿದ ಸಂದೇಶ)

ನಮ್ಮ ಪೂಜ್ಯ ಗುರುಗಳಾದ ಸಮರ್ಥ ಸದ್ಗುರು ಶ್ರೀ ರಾಮಚಂದ್ರಜಿ ಮಹಾರಾಜ, ಫತೇಪ್‌ಗಡ (ಉ. ಪ.) ರವರ ಜನ್ಮಶತಾಬ್ದಿ ಮಹೋತ್ಸವವನ್ನು ಆಚರಿಸಲು, ಈ ಮಂಗಳಕರ ಸಂದರ್ಭದಲ್ಲಿ ಇಲ್ಲಿ ನಾವೆಲ್ಲ ನೆರೆದಿದ್ದೇವೆ. ನಾವು ಈ ಸುಸಂದರ್ಭವನ್ನು ಪೂಜ್ಯ ಗುರುಗಳೊಳಗೇ ಲೀನರಾಗಿಬಿಡಲು ಬಳಸಿಕೊಳ್ಳಬೇಕು. ಅದು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಆಹಾರ ಮತ್ತು ಶಕ್ತಿವರ್ಧಕವಾಗಿ ಕೆಲಸಮಾಡುತ್ತದೆ. ಅವರ ಸಂಸ್ಮರಣೆಯು ಹೇಗಿರಬೇಕೆಂದರೆ, ಸಂಸ್ಮರಣೆಯ ಚಿಂತನವು ಸಮಸ್ತ ವಸ್ತುಗಳಿಂದಲೂ ಒಸರಿ ಹೊಮ್ಮುತ್ತಿರುವಂತೆ ನಮಗೆ ಭಾಸವಾಗುವಂತಿರಬೇಕು. ಮರ್ತ್ಯರು ಹೊಂದಬಹುದಾದ ನಿಜವಾದ ಸ್ಮರಣೆಯೆಂದರೆ ಅದೇ. ಅದು ನಮ್ಮ ಒಳಿತಿಗಾಗಿ ಇರುವ ಒಂದು ಲೀಲೆ.

ಈಗ ನಮ್ಮ ಜೀವನ ವಲಯದಲ್ಲಿ ಹೊಸದೊಂದು ಅಧ್ಯಾಯವು ಆರಂಭವಾಗಿದೆ. ಆ ಪರಾತ್ಪರನು ನಮ್ಮನ್ನು ಸ್ಮರಿಸುತ್ತಿರುವುದು ನಮಗೆ ಭಾಸವಾಗುವಷ್ಟರ ಮಟ್ಟಿಗೆ ನಮ್ಮ ಗಾಢ ಭಕ್ತಿಯ ಪ್ರಭಾವವು ಪ್ರತಿಧ್ವನಿಸತೊಡಗುವುದು. ಅದು ದೈವೀ ನಿಯಮ, ನೀವು ನಿಮ್ಮ ಪಾತ್ರವನ್ನು ಸಂಪೂರ್ಣವಾಗಿ, ಸಮರ್ಪಕವಾಗಿ ನಿರ್ವಹಿಸಿದಾಗ, ಆ ಪರಮ ಪ್ರಭುವು ತನ್ನ ಪಾತ್ರವನ್ನೂ ನಿರ್ವಹಿಸುವುದರಲ್ಲಿ ಹಿಂದೆ ಬೀಳಲಾರ. ಅದು ಉನ್ನತ ತರದ ಆಧ್ಯಾತ್ಮಿಕತೆಯ ಆರಂಭ ಮಾತ್ರ. ತತ್ಪರಿಣಾಮವಾಗಿ ನಮ್ಮ ಇಂದ್ರಿಯಗಳು ಪರಮತತ್ವದ ಅಸ್ತಿತ್ವದಲ್ಲಿ ಪಾಲು ಪಡೆಯಲು ಸಮಾಹಿತಗೊಳ್ಳುತ್ತವೆ. ಇದು ನನ್ನ ಅನುಭವ.

ಇಂದ್ರಿಯಗಳು ಸಮಾಹಿತಗೊಂಡಾಗ, ಅವು ನಮ್ಮ (ಆಧ್ಯಾತ್ಮಿಕ) ಪುನರುಜೀವನಕ್ಕೆ ಒಂದು ಹೊಸ ಶಕ್ತಿಯಾಗಿ ಮಾರ್ಪಡುತ್ತವೆ. ಈಗ, ಇದು ನಮ್ಮ ನೆರವಿಗೆ ಸಲ್ಲುವ ಹೊಸತೊಂದು ಸಾಧನ. ಇದನ್ನು ಪಡೆದಾಗ, ನಮ್ಮ ಮುಂದಿನ ಸಾಧನೆಗಳಿಗೆ ಒಂದು ತಳಹದಿಯನ್ನು ನಿರ್ಮಿಸಿಕೊಂಡಂತಾಯಿತು. ದೈವಿಕತೆಯ ಪ್ರಭಾವವು ಜಿನುಗಿ ಬರಲಾರಂಭಿಸಿದಮೇಲೆ, ಇದು ತಾನಾಗಿಯೇ ಬದಲಾಗಲಾರಂಭಿಸುತ್ತದೆ. ಆ ಬುನಾದಿಯು ಒಂದು ಬಗೆಯ ಶಕ್ತಿಯಾಗಿ ನಮ್ಮ ಉನ್ನತಿಗೆ ಬೇಕಾದ ಸತ್ವವನ್ನು ಬಲಪಡಿಸತೊಡಗುತ್ತದೆ. ನಮ್ಮೊಳಗೆ ತಳಹದಿಯು ರಚನೆಯಾದ ಮೇಲೆ, ಅದು ತನ್ನ ಅಂತರ್ಗತ ಸತ್ವಗಳನ್ನು ಪೂರಣ ಗೈಯುವುದರಿಂದ, ನಮ್ಮ ಇಡೀ ಅಸ್ತಿತ್ವದ ನರನಾಡಿಗಳ ಮೇಲೂ ಪ್ರಭಾವ ಬೀರುತ್ತದೆ. ಈ ಸತ್ವ-ಸಾಮಗ್ರಿಗಳೇ ನಿಜವಾದ ಜೀವನದ ಘಟಕಗಳು, ನಾವದನ್ನು “ಜೀವನದೊಳಗಣ ಜೀವನ’ವೆಂದು ಧಾರಾಳವಾಗಿ ಹೇಳಬಹುದು. ನಮಗಿರುವ ಮುಖ್ಯ ಅಡಚಣೆಯೆಂದರೆ ನಮ್ಮ ಕ್ರಿಯೆಗಳು ವಿವೇಕರಹಿತವಾಗಿ ನಿರ್ದೇಶಿಸಲ್ಪಟ್ಟಿರುವುದು. ಕ್ರಿಯೆಗಳು ಆಲೋಚನೆಗಳ ಪರಿಣಾಮ. ಮತ್ತು, ನಮ್ಮ ಆಲೋಚನೆಗಳೂ ನಮ್ಮವೇ ಕ್ರಿಯೆಗಳು. ನಿಜ ಹೇಳಬೇಕೆಂದರೆ, ನಾವು ಮನಸ್ಸಿಗೆ ತಪ್ಪು ಸೂಚನೆಗಳನ್ನು ಕೊಡುತ್ತೇವೆ. “ಅಂಥ ತಪ್ಪು ಸೂಚನೆಗಳನ್ನು ನಾವೇ ಕೊಡುವುದಾದರೂ ಹೇಗೆ ?” ಎಂದು ಜನರು ಇದನ್ನು ಆಕ್ಷೇಪಿಸಬಹುದು. ಪರಿಸರವು ಅಂಥ ಅಭಿಪ್ರಾಯ (ಊಹನೆ)ಗಳನ್ನುಂಟುಮಾಡುವ ಸನ್ನಿವೇಶಗಳನ್ನೊದಗಿಸುತ್ತದೆ. ನಾವು ಅಂಥ ಪರಿಸರದಲ್ಲಿಯೇ ಸಾಗುತ್ತಿದ್ದೇವೆ.

ಪ್ರಾಚೀನ ಋಷಿಗಳು, ನೈಸರ್ಗಿಕ ಪರಿಸರವಿರುವ ಅರಣ್ಯ-ಪರ್ವತ ಪ್ರದೇಶಗಳಿಗೆ ಹೋಗಲು ಜನರಿಗೆ ಸಲಹೆ ಮಾಡುತ್ತಿದ್ದರು. ಸಲಹೆ ಮಾಡಲಾದ ಪ್ರದೇಶವು ಜನಜಂಗುಳಿಯಿಂದ ದೂರವಿರುತ್ತಿದ್ದಿತು. ಯಾರಾದರೂ ಪರ್ವತ ಶಿಖರಗಳಿಗೆ ಹೋದರೆ, ಅಲ್ಲಿ ಒಂದು ರೀತಿಯ ಪ್ರತಿಧ್ವನಿಯನ್ನು ಕಾಣುವನೇ ಹೊರತು, ಅಲ್ಲಿ ವಿಚಾರಗಳು ಸುಳಿಯುವುದಿಲ್ಲ. ಪರಿಶುದ್ಧತೆಯು ಅಸ್ತಿತ್ವದ ಒಳಗಿನಿಂದ ಹೊರಹೊಮ್ಮುತ್ತದೆ. ಮತ್ತು ಅಶುದ್ಧತೆಯುಂಟಾಗುವುದು ತಪ್ಪು ಪ್ರೇರಣೆಗಳ ಪರಿಣಾಮವಾಗಿ ಹಾಗೂ ಆಂತರಿಕ ಪರಿಸರದ ಅನುಚಿತ ವಿನಿಯೋಗದಿಂದಾಗಿ, ಇವೆಲ್ಲ ಒಟ್ಟಾಗಿ, ದೃಷ್ಟಿಯು ಒಂದು ರೀತಿಯ ಸಂಕುಚಿತತೆಗೆ ಒಳಗಾಗುತ್ತದೆ. ಇದೂ, ಒಂದು ರೀತಿಯ ಗೊಂದಲವನ್ನುಂಟು ಮಾಡಲು ಕಾರಣ – ಕೆಲವೊಮ್ಮೆ ತಾನಾಗಿ ಮತ್ತೆ ಕೆಲಸಲ ಪರಿಸರದ ಒತ್ತಡದಿಂದಾಗಿ, ಇವೆಲ್ಲ ಒಟ್ಟುಗೂಡಿದಾಗ ಅವು ಬಗೆಬಗೆಯ ಬಣ್ಣಗಳನ್ನು ಉಂಟುಮಾಡುತ್ತವೆ. ಇದು ಮೇಲ್ಬಾಗದ ಮನಸ್ಸಿಗೆ ನಿರ್ದೇಶನ ನೀಡುವ ಕೆಳಭಾಗದ ಮನಸ್ಸನ್ನು ಕದಡಿಬಿಡುತ್ತದೆ. ಈಗ, ನಿಮ್ಮ ನಿರ್ದೇಶನ ಸರಿಯಾದುದಲ್ಲ. ಅದರಿಂದಾಗಿ ನಿಮ್ಮ ಮನಸ್ಸು ಗಂಟು-ಗಂಟಾಗಿಬಿಡುತ್ತದೆ. ನಾವು ಸತ್ಯಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ನಡೆಯುವುದರಿಂದಾಗಿ, ನಮ್ಮಲ್ಲಿ ಹಿತಕರ ಕಂಪನ (ಸ್ಪಂದನ)ಗಳುಂಟಾಗುವುದಿಲ್ಲ.

ಈ ಸೃಷ್ಟಿಗೆ ಮುನ್ನ ಒಂದು ಸಮತೋಲನ ಸ್ಥಿತಿ ಇದ್ದಿತು. ಸಮತೋಲನವು ಕ್ಟೋಭೆಗೊಂಡಾಗ ನಾವು ಅಸ್ತಿತ್ವಕ್ಕೆ ಬಂದೆವು. ನಾನು ಈ ವಿಷಯವನ್ನು ತತ್ವಶಾಸ್ತ್ರೀಯವಾಗಿ ಮತ್ತಷ್ಟು ದೀರ್ಘ ಮಾಡಬಯಸುವುದಿಲ್ಲ. ಸೃಷ್ಟಿಯ ಸಂಕಲ್ಪವು, ಕೇಂದ್ರದ ಸನಿಹದಲ್ಲಿ ಸಂಚಲನೆಗೊಂಡಿತು, ಹಾಗೂ, ಶಕ್ತಿಯು ಪ್ರವಹಿಸಲಾರಂಭಿಸಿತು. ಅದೇನಿದ್ದಿತು ? ಅದೇ ಶುದ್ದವೂ, ಸರಳವೂ ಆದ ಆದಿಮನಸ್ಸು. ಅದೇ ನಮ್ಮೆಲ್ಲರ ರೂಪ ರಚನೆಗಳನ್ನು ನೆಯ್ದಿದೆ. ಅದು ತನ್ನೊಂದಿಗೆ ಪರಿಶುದ್ಧತೆಯನ್ನು ತಂದಿತು ; ಆ ಪರಿಶುದ್ಧತೆ ಇನ್ನೂ ಉಳಿದುಕೊಂಡು ಬಂದಿದೆ. ಆದುದರಿಂದ, ನಾವು ತಪ್ಪು ಸೂಚನೆಗಳನ್ನು ಕೊಡಲಾರಂಭಿಸಿದರೆ, ಮನಸ್ಸು ತಾನು ಪೂರ್ಣತಃ ಶುದ್ದವಿರುವುದರಿಂದ, ತನ್ನ ನಿರಂತರ ಶುದ್ಧತೆಯನ್ನು ಕಾಯ್ದು ಕೊಳ್ಳುವುದಕ್ಕೋಸ್ಕರ, ಅವನ್ನು ಹೊರದೂಡುತ್ತದೆ. ಆಲೋಚನೆಗಳು ಉದ್ಭವಿಸುವುದಕ್ಕೆ ಅದೇ ಕಾರಣ. ವಾಸ್ತವವಾಗಿ, ತನ್ನಲ್ಲಿರುವ ಅಂಶಗಳನ್ನು ಹೊರಗೆಡವುತ್ತದೆ, – ಅವು, ಯಾವುದೋ ಮೇಲ್ಮ್ಯೆಯನ್ನು ಆವರಿಸಿರುವ ಮಂಜಿನಂತೆ ತೋರುವುವು – ಅವನ್ನೇ ನಾವು ಆಲೋಚನೆಗಳನ್ನು ತ್ತೇವೆ. ಆಲೋಚನೆಗಳು ನಾವು ಗಮನ ಕೊಟ್ಟಂತೆಲ್ಲ ಅವುಗಳ ಶಕ್ತಿಯು ವರ್ಧಿಸುತ್ತ ಹೋಗುತ್ತದೆ. ನೀವು ಯಾರಾದರೂ ದೈವೀ ವಿಚಾರಗಳನ್ನು ಹುಟ್ಟಿಸಿಕೊಂಡರೆ, ಮನಸ್ಸು ಅವನ್ನು ಗ್ರಹಿಸುವುದು, ಹೊರತು, ಹೊರದೂಡುವುದಿಲ್ಲ – ಯಾಕೆಂದರೆ, ಸತ್ಯದ ಧಮನಿಯಿಂದ ಬಂದಿರುವ ಮನಸ್ಸಿನ ನಿಜ ಸ್ವಭಾವವೇ ಅದಾಗಿದೆ.

ಮನುಷ್ಯನು ತನ್ನ ಜೀವನದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಯಸುವುದಾದರೆ, ಆತನು ಯೋಗ್ಯ ಸೂಚನೆಗಳನ್ನು ತನ್ನ ಮನಸ್ಸಿಗೆ ಕೊಡಬೇಕು. ಆ ಸ್ಥಿತಿಯು ಅಭ್ಯಾಸದಿಂದ ಮತ್ತು ತನ್ನನ್ನು ತಾನು ಸೂಕ್ತವಾಗಿ ರೂಪಿಸಿಕೊಳ್ಳುವುದರಿಂದ ಬರುವಂಥದು. ದೈವಿಕವಾದ ತನ್ನ ಸ್ವಸ್ಥಿತಿಯಲ್ಲಿ ನೆಲಸಿರುವುದು ಅತ್ಯಂತ ಸುಲಭ. ಅದು ವಿಕಸನ ಹೊಂದಲು ನಿಶ್ಚಿತ ವಿಧಾನ, ಸತ್ಯ ಸ್ಥಿತಿಯ ಸಿದ್ದಿಗೋಸ್ಕರ ಕೊಂಚ ಒಲವುಂಟಾದರೂ ಸರಿ, – ಅದು ಭವಿಷ್ಯವನ್ನು ರೂಪಿಸಲು ಪ್ರಾರಂಭಿಸುತ್ತದೆ.

ಭಾರತ ದೇಶದಲ್ಲಿ ಅನೇಕಾನೇಕ ವಿಧಾನಗಳು ಪ್ರಚಲಿತವಿವೆ. ಮತ್ತು ಅವು ಸರಿಯಿರಲೂಬಹುದು. ಆದರೆ ‘ಸರಿ’ ಎಂದರೇನು ? ಯಾವುದು ನಿಮ್ಮನ್ನು ನಿರ್ವಿಕಾರ ಸ್ಥಿತಿಯಲ್ಲಿಡಬಹುದೋ ಅಂಥದು. ಸ್ಪಂದನಗಳೆಲ್ಲ ದೈವಮಯವಾಗಬೇಕು. ಅದಾಗುವುದೆಂತು ? ಜಡತ್ವವು ತೊಲಗಿ ಹೋದಾಗ ಮಾತ್ರ ದೃಶ್ಯದ ಹಿಂದಿರುವ ‘ವಸ್ತು’ವು ಗೋಚರವಾಗುತ್ತದೆ. ಯಾವುದಾದರೊಂದು ಪದ್ಧತಿಯು ಇಚ್ಛಿತ ಫಲಿತಾಂಶವನ್ನು ನೀಡುವುದಾದರೆ, ಅದು ಅಪ್ಪಟ, ಯೋಗ್ಯ ಮತ್ತು ಸಹಜವಾದುದು (ಇರಬೇಕು). ಅಷ್ಟೊಂದು ಪದ್ಧತಿಗಳಲ್ಲಿ ಅಂತಹ ಸ್ಥಿತಿಯನ್ನುಂಟುಮಾಡಬಹುದಾದ ಒಂದನ್ನು ನೀವೇ ಹುಡುಕಿಕೊಳ್ಳಬೇಕು. ನೀವು ಅದಕ್ಕೋಸ್ಕರ ನಿಜವಾಗಿ ಪ್ರಯತ್ನಿಸುವವರಾಗಿದ್ದು, ನಿಮಗೊಬ್ಬ ನಿಜವಾದ ಗುರುವು ದೊರೆತರೆ, ಕೆಲಸವು ಅತ್ಯಂತ ಸುಲಭವಾಗುವುದಲ್ಲದೆ, ಬಹಳಷ್ಟು ಸಮಯವೂ ಉಳಿಯುತ್ತದೆ ; ಪರಿಶ್ರಮವೂ ತಪ್ಪುತ್ತದೆ. ಅಂತಹ ಗುರುವನ್ನು ಪಡೆಯುವುದು ಹೇಗೆ ?” ಎಂದು ಜನರು ಕೇಳಬಹುದು. ಅದಕ್ಕುತ್ತರವಾಗಿ, ಮೇಲೆ ಹೇಳಿದುದನ್ನು ತಪ್ಪದೆ ಪಾಲಿಸುವ ಶಿಷ್ಯನನ್ನು ಪಡೆಯುವುದು ಹೇಗೆ ?” ಎಂದು ಕೇಳಿಯೇನು. ವಿಸ್ತಾರವಾದ ಸಮುದ್ರವನ್ನು ಪ್ರವೇಶಿಸಲು ಈಜುಗಾರರೂ ಬೇಕು, ಈಜುವುದೂ ಬೇಕು – ಎಂದು ನಾನು ಹೇಳಲೇಬೇಕು. ಹೀಗೆ, ಈಜುವುದು ಈಜುಗಾರನ ಕೆಲಸ ಮತ್ತು ಈಜು ಕಲಿಸುವುದು ಗುರುವಿನ ಕೆಲಸ, ತಾನು ತಲುಪಿರುವ ಹಂತದವರೆಗೆ ಮಾರ್ಗದರ್ಶನ ಮಾಡಬಹುದಾದ ಗುರುವನ್ನು ನಾವು ಖಂಡಿತ ಪಡೆಯಬಹುದು. ಆದರೆ, ನಾವು ಅವನನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು. ನಿಜವಾಗಿ ಹೇಳುವುದಾದರೆ, ನಮಗೆ ಬೇಕಾಗಿರುವುದು, ತನ್ನ ದೈವಿಕ ಶಕ್ತಿಯಿಂದ ನಮ್ಮನ್ನು ಉತ್ತೇಜಿಸಬಲ್ಲ ಗುರು. ನಾವು ದಾಟಬೇಕಾದ ಅನೇಕ ಘಟ್ಟಗಳು ವಿಶ್ವಮಂಡಲದಲ್ಲಿವೆ. ನಾವು ಕೊಂಚದೂರ ಆ ದಿಶೆಯಲ್ಲಿ ಕ್ರಮಿಸಬಲ್ಲೆವೆಂಬುದೂ ದಿಟಗೆ, ತರುವಾಯ, ಸೂಕ್ಷ್ಮಬಲವನ್ನು ತಲುಪಲು ಅಭ್ಯಾಸಿಯ ಶಕ್ತಿಯು ವಿಫಲವಾಗುವುದು. ಮುಂದಿನ ಹೆಜ್ಜೆಗೆ ದೂಡಲ್ಪಡದ ಹೊರತು, ಅದನ್ನು ದಾಟುವುದು ಅತ್ಯಂತ ಕಷ್ಟ. ಅದು ಗುರುವು ಮಾಡಬೇಕಾದ ಕೆಲಸ.

ತಮ್ಮಲ್ಲಿ ಇಲ್ಲದುದು ಇದೆಯೆಂದು ಬಗೆದು, ವಾದಕ್ಕೆಳಸುವ ಅನೇಕಾನೇಕರನ್ನು ನಾನು ಕಂಡಿದ್ದೇನೆ. ತಮ್ಮ ಅಂತಃಕರಣವನ್ನೇ ತಮ್ಮ ಗುರು ಅಥವಾ ಮಾರ್ಗದರ್ಶಿಯನ್ನಾಗಿ ಮಾಡಿಕೊಂಡಿರುವುದಾಗಿ ಕೆಲವರು ಹೇಳುತ್ತಾರೆ. ಆದರೆ ನನಗೆ ಖಾತ್ರಿಯಾಗಿ ಗೊತ್ತು- ಅವರು ಗುರುವನ್ನಾಗಿ ಮಾಡಿಕೊಂಡದ್ದು ಅವರ ಅಂತಃಕರಣವನ್ನಲ್ಲ, ತಮ್ಮದೇ ‘ಅಹಂ’ಕಾರವನ್ನು, ಶಾಸ್ತ್ರಗಳಲ್ಲಿ ವಿವರಿಸಿದಂತೆ, ಅಂತಃಕರಣವು ನಾಲ್ಕು ಅಂಗಗಳಿಂದ ಕೂಡಿದೆ- ಅವೆಂದರೆ, ಮನಸ್ಸು, ಚಿತ್ತ, ಬುದ್ದಿ ಮತ್ತು ಅಹಂಕಾರ, ಇವೆಲ್ಲವೂ ಪೂರ್ಣವಾಗಿ ಶುದ್ದಗೊಂಡಾಗ ಮಾತ್ರ, ಅಂತಃಕರಣವು ಕೇವಲ ಸರಿಯಾದ ಸಂಕೇತಗಳನ್ನು ನೀಡಬಲ್ಲುದು.

ಇವೆಲ್ಲ ಪರಿಶುದ್ದಿಗೊಂಡ ನಂತರವೇ ಉನ್ನತ ಶಕ್ತಿಗಳು (ಸಿದ್ದಿ ಗಳು) ಲಭಿಸುವುವು. ಜೊತೆ-ಜೊತೆಗೆ ಪರಿಶುದ್ಧತೆಯು ಎಲ್ಲೆಡೆಗೂ ಆಗ ಆರಂಭವಾಗುವುದು. ‘ತಪ್ಪು ರೀತಿಯ ಪೂಜೆಯು ದೋಷಯುಕ್ತ ಪರಿಣಾಮಗಳನ್ನು ಕೊಡುತ್ತದೆ.’ ಎಂದು ನಾನು ಈ ಸಂದರ್ಭದಲ್ಲಿ ಹೇಳಿದರೆ ಜನರು ಮನ್ನಿಸುವರೆಂದು ಭಾವಿಸುತ್ತೇನೆ.

ನಾವೆಲ್ಲರೂ ಸಾಕ್ಷಾತ್ಕಾರವನ್ನು ಬಯಸುತ್ತೇವೆ. ಆದರೆ ಅದಕ್ಕೋಸ್ಕರ ಉತ್ಕಟ ಹಂಬಲ ನಮ್ಮಲ್ಲಿಲ್ಲ. ನಾವೆಲ್ಲರೂ ನಮ್ಮ ಮೂಲಸ್ಥಿತಿಗೆ ಮರಳುವಂತಾಗಲೆಂದು, ಮತ್ತು, ಪ್ರಾಪಂಚಿಕ ಹಾಗೂ ದೈವೀ ಜೀವನದಲ್ಲಿರುವ ಅಂತರವನ್ನು ಮನಗಾಣಲಾಗುವಂತಾಗಲೆಂದೂ ಪ್ರಾರ್ಥಿಸುತ್ತೇನೆ.