ಒಂದು ಪರ್ವತ ಶ್ರೇಣಿಯನ್ನು, ಸಾಗರ ತೀರವನ್ನು, ಅಥವಾ ರಾತ್ರಿಯ ಆಕಾಶವನ್ನು ವೀಕ್ಷಿಸಿದಾಗ ಅದರ ಅಪಾರತೆಯ ಕಲ್ಪನೆಯಿಂದ ಚಕಿತರಾಗುತ್ತೀರಿ. ಒಬ್ಬ ಯೋಗ್ಯತಾವಂತ ಸಂತನನ್ನು ತೀವ್ರವಾಗಿ ಪ್ರೀತಿಸುತ್ತ ನಿಮ್ಮನ್ನು ನೀವು ಮರೆಯಿರಿ, ಆಗ ಅನಂತದ ಅನುಭೂತಿ ಪಡೆಯುವಿರಿ, ಅಪಾರತೆ ಅಥವಾ ಅಗಾಧತೆಯು ಭಯಾಶ್ಚರ್ಯಗಳನ್ನು ಉಂಟುಮಾಡಿದರೆ, ಅನ೦ತತೆಯು (ಅಹಮಿಕೆಯನ್ನು) ನಿರ್ಮೂಲಗೊಳಿಸುವುದಾಗಿದೆ. ಜನರು ಭಯದ ಕಾರಣದಿಂದ ಪೂಜೆ ಮಾಡುವರು. ತಮ್ಮ ‘ಅಹಂ’ಕಾರವು ಅಳಿದು ಹೋಗುವುದೆಂದು ಭಯಪಡುತ್ತಾರೆ. ಆದುದರಿಂದ, ಅವರು ಹೆಚ್ಚು ಪಕ್ಷ ಪೂಜೆ ಮಾಡುವುದು ತಮ್ಮ ‘ಅಹಂ’-ಕಾರವನ್ನು ಕಾಪಾಡಿಕೊಳ್ಳುವುದಕ್ಕೆ ಅಥವಾ ಅದನ್ನು ಇನ್ನೂ ಬಲಪಡಿಸಿಕೊಳ್ಳಲಿಕ್ಕೆ. ಅವರು ಅಸಂಖ್ಯಾತ ವಸ್ತುಗಳನ್ನು ಪೂಜಿಸುವರು ಮತ್ತು ಸೀಮಿತತೆಯ ಗಡಿಯ ಒಳಗೇ ಉಳಿಯುವರು, ಒಂದು ವೇಳೆ ಅವರು ಭಗವಂತನ ವಿಚಾರ ಇಟ್ಟುಕೊಳ್ಳುವರಾದರೂ, ಭಗವಂತನ ಅಪರಿಮಿತತೆಯ ಭಾವ ಅವರ ಕಲ್ಪನೆಯಲ್ಲಿ ಬರುವುದಾದಾಗ್ಯೂ, ಅವರು ತಮ್ಮದೇ ಕಲ್ಪನೆಯ ಎಲ್ಲೆಗಳೊಳಗೆ ಅವನನ್ನು ಸೀಮಿತಗೊಳಿಸುವರು.

ನಿಜವಾದ ಭಗವದನ್ವೇಷಕನು ಅನಂತತೆಯತ್ತ ನೋಡುವನು. ಅವನು ಸೀಮಿತತೆಯಿಂದಲೇ ಪ್ರಾರಂಭಿಸುತ್ತಾನೆಂಬುದೇನೋ ಸರಿಯೆ, ಆದರೂ, ಅವನ ಅನ್ವೇಷಣೆ ಪ್ರಾಮಾಣಿಕವಾದುದಿದ್ದರೆ, ಅವನು ಸಣ್ಣ ವೃತ್ತಗಳಿಂದ ದೊಡ್ಡ ವೃತ್ತಗಳೆಡೆಗೆ ಜಿಗಿಯುತ್ತ ಸಾಗುತ್ತಾನೆ. ಅವನ ದೃಷ್ಟಿಯ ಎಲ್ಲೆಗಳು ಹೆಚ್ಚು ಹೆಚ್ಚು ವಿಸ್ತಾರಗೊಳ್ಳುವುವು. ಎಷ್ಟೆಂದರೆ, ಅವನು ಯಾವಾಗ ಮಹಾ ಧೈರ್ಯ ಮತ್ತು ನಿರ್ಧಾರದೊಂದಿಗೆ, ತನ್ನನ್ನು ಸೀಮಿತಗೊಳಿಸುವ ಉಪಾಧಿಗಳನ್ನು ಚೂರು ಚೂರಾಗಿಸಿ ಧ್ವಂಸ ಮಾಡುವನೋ ಆಗ ಅವನ ದೃಷ್ಟಿಯ ಪರಿಧಿಯು ಕಣ್ಮರೆಯಾಗಿ ಹೋಗುವುದು ಮತ್ತು ಅವನು ಅನಂತತೆಯ ಸಾಗರದಲ್ಲಿ ಈಜುತ್ತಿರುವ ಅನುಭೂತಿ ಹೊಂದುವನು.

ಸೀಮಿತತೆಗಳನ್ನು ಕಡಿದೊಗೆಯುವ ಅತ್ಯಂತ ಸುಲಭ ವಿಧಾನವೆಂದರೆ, ಈಗಾಗಲೇ ಯಾವನು ತನ್ನ ಬಂಧನಗಳನ್ನು ಹರಿದೊಗೆದಿರುವನೋ ಅವನೊಡನೆ ತನ್ನ ಸಂಬಂಧವನ್ನು ಜೋಡಿಸಿಕೊಳ್ಳುವುದು. ಅಂತಹ ಒಬ್ಬನು ಯಾವನಿರಬಲ್ಲನು ? ಅಂತಹ ಒಬ್ಬನನ್ನು ಅವನು ಹಾಗಿದ್ದಾನೆಂದು ತಿಳಿದುಕೊಳ್ಳುವುದು “ಹೇಗೆ ? ಇಲ್ಲಿ, ಒಬ್ಬನು ಅಪರಿಮಿತವಾದುದನ್ನೇ (ಅಗಾಧವಾದುದನ್ನೇ) ಅನಂತತೆಯೆಂದು ತಪ್ಪಾಗಿ ಭಾವಿಸಿಕೊಳ್ಳದ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಜಿಜ್ಞಾಸುಗಳ ಅಪಾರ ಸಮೂಹವನ್ನು ಆಕರ್ಷಿಸಲು ತಮ್ಮ ಅಪಾರ ಜ್ಞಾನ, ಅಪಾರ ಅಧಿಕಾರ, ಅಪಾರ ಆಸ್ತಿಪಾಸ್ತಿ ಮತ್ತು ತಮ್ಮ ಅಪಾರ ಮೋಡಿಗಳನ್ನು ಪ್ರದರ್ಶಿಸುವ ಜನರ ಕೊರತೆಯೇನಿಲ್ಲ. ಆದರೆ ಮೇಲೆ ಹೇಳಿದ ಎಲ್ಲ ‘ಅಪಾರ’ತೆಗಳು ಎಲ್ಲವೂ ಪರಿಮಿತವಾದವುಗಳಾಗಿವೆ. ನಿಜವಾದ ಗುರುವು ಯಾವುದೇ ತರಹದ ಈ ಬೃಹತ್ ಪ್ರದರ್ಶನಗಳಿಂದ ಒಬ್ಬ ಜಿಜ್ಞಾಸುವಿನ ಹೃದಯವನ್ನು ಪ್ರಭಾವಿತಗೊಳಿಸಲು ಎಂದೆಂದಿಗೂ ಯತ್ನಿಸುವುದಿಲ್ಲ. ನಿಜಕ್ಕೂ ಯಾವಾಗ ಒಬ್ಬನು ನಿಜವಾದ ಗುರುವನ್ನು ಸಂಧಿಸುವನೋ ಆಗ ಅವನು ತನ್ನದೇ ಸೀಮಿತತೆಯನ್ನು ಮರೆಯುತ್ತಾನೆ ಹಾಗೂ ಅಂತಹ ಗುರುವಿನೊಂದಿಗೆ ತನ್ನನ್ನು ಒಂದಾಗಿ ಭಾವಿಸುವನು. ಅಲ್ಲಿ ಒಂದು ರೀತಿಯ ಅತ್ಯಂತ ಆಪ್ತತೆ ಮತ್ತು ಏಕತೆಯ ಭಾವನೆ ಇರುವುದು. ಒಬ್ಬ ನಿಜವಾದ ಗುರುವಿನ ಸಾನ್ನಿಧ್ಯದಲ್ಲಿ, ಅವನು ತನ್ನ ಸ್ವ-ಗೃಹವನ್ನು ತಲುಪಿದ ಭಾವನೆ ನೆಲೆಸಿರುವುದು, ಅನಂತತೆಯು ಹೇಗೆ ಏಕೈಕವಾಗಿ ಮಾತ್ರ ಇರಲು ಸಾಧ್ಯವೋ, ಅಂತಹ ಗುರುವೂ ಏಕೈಕನಾಗಿರುತ್ತಾನೆ. ಅಂತಹ ಗುರುವಿನೊಡನೆ ಸಂಬಂಧ ಅಥವಾ ಸಂಪರ್ಕ ಏರ್ಪಟ್ಟಾಗ, ಒಬ್ಬನ ವೈಯಕ್ತಿಕ ಬಂಧನಗಳು ಅಥವಾ ಸಂಕೋಚಗಳು ಕರಗಿ ಹೋಗುವವು.

ಗುರುವು ಪರಿಮಿತಿಗಳನ್ನು ನಿವಾರಿಸಲು ಸಹಾಯ ಮಾಡುವುದು ಮತ್ತು ಹಾಗೂ ಸೀಮಿತತೆಯಿಂದ ಅನಂತದೆಡೆಗೆ ಒಬ್ಬನನ್ನು ಕರೆದೊಯ್ಯುವುದು ಹೇಗೆ ? ಅನಂತತೆಯಲ್ಲಿ ನೆಲೆಗೊಂಡಿರುವವನ ಸಂಕಲ್ಪ ಶಕ್ತಿಯೂ ಅನಂತವಾಗಿರುವುದು. ಅಂತಹ ಸಂಕಲ್ಪ ಶಕ್ತಿಗೆ ಚ್ಯುತಿಯೆಂಬುದಿಲ್ಲ. ಯಾವುದೇ ಬೇರೊಬ್ಬನು, ಒಂದೇ ಒಂದು ಸಲ ವಿಫಲನಾದರೆ, ಅವನ ಶಕ್ತಿಗಳು ಎಷ್ಟೇ ಅಗಾಧವಾಗಿದ್ದರೂ ಕೂಡ, ಅವನು ಅನಂತತೆಯನ್ನು ಸಾಕ್ಷಾತ್ಕರಿಸಿಕೊಂಡಿಲ್ಲವೆಂದೇ ಅರ್ಥ. ನಿಜವಾಗಿ, ಅನಂತತೆಯೊಂದಿಗೆ ಹೋಲಿಸಿದಾಗ ಯಾವುದೇ ಅಗಾಧತೆಯೂ/ಅಪರಿಮಿತತೆಯೂ ಏನೂ ಅಲ್ಲ. ಪರಿಪೂರ್ಣನಾದ ಗುರುವು ಮುಮುಕ್ಷುವಿನಲ್ಲಿ ಅಥವಾ ಅಭ್ಯಾಸಿಯಲ್ಲಿ ಇಚ್ಛಿತ ಪರಿಣಾಮಗಳನ್ನು ಉಂಟುಮಾಡಲು ತನ್ನ ಸಂಕಲ್ಪ ಶಕ್ತಿಯನ್ನು ಉಪಯೋಗಿಸುತ್ತಾನೆ. ಗುರುವು ಒಬ್ಬ. ಮುಮುಕ್ಷುವಿನ ಹೃದಯದಲ್ಲಿ ಯಾವುದನ್ನು ಧಾರೆಯೆರೆಯುವನೋ ಅದು ಅವನನ್ನು ‘ಅದ’ರ (ಪರತತ್ತ್ವದ) ಸಾಕ್ಷಾತ್ಕಾರಕ್ಕೆ ಕರೆದೊಯ್ಯುವುದು. ಪರಿಮಿತವಾದುದರಿಂದ ಅವನು ಅನಂತತೆಯೆಡೆಗೆ ಕರೆದೊಯ್ಯಲ್ಪಡುತ್ತಾನೆ. ‘ಅಪಾರ’ ಅಥವಾ ‘ಅಗಾಧ’ ಎಂಬ ಭ್ರಮೆಯು ಶಾಶ್ವತವಾಗಿ ಮಾಯವಾಗುವುದು.

ನಮ್ಮ ಸಾಧನೆಯ ಗುರಿಯೆಂದರೆ, ಸಾಧ್ಯವಾದ ಮಟ್ಟಿಗೆ ನಾವು ಪರಮಾತ್ಮನಿಗೆ ಹತ್ತಿರವಾಗುತ್ತ ಹೋಗಬೇಕು. ಅದರ ಲಕ್ಷಣವೆಂದರೆ, ಪರಮಾತ್ಮನ ಗುಣಗಳಾದ ಸೂಕ್ಷ್ಮತೆ, ಸಮತೆ ಮುಂತಾದವು ನಮ್ಮಲ್ಲಿಯೂ ಬರಬೇಕು.

ಶ್ರೀ ಬಾಬೂಜಿ

(ನು.ಮು. 291)