(ಜನವರಿ ೧೯೭೬ ರಲ್ಲಿ, ಶಹಜಹಾನ್‌ಪುರದ ಆಶ್ರಮದ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ಸಂದೇಶ)
ಸಂಗತಿಗಳು ಬರುತ್ತವೆ, ಹೋಗುತ್ತವೆ. ಆದರೆ ನಾವು ಇದ್ದ ಹಾಗೆಯೇ ಉಳಿಯುತ್ತೇವೆ. ನಾವು ನಮ್ಮನ್ನು ಸಾದ್ಯಂತವಾಗಿ ಪರಿಶೋಧಿಸಿಕೊಂಡರೆ, ನಮ್ಮಲ್ಲಿ ಬದಲಾವಣೆ-ರಹಿತ ಸ್ಥಿತಿ ಇರುವುದು ಗೊತ್ತಾಗುತ್ತದೆ. ಆದರೆ ನಾವು ವಿಕಾರಶೀಲ (ಬದಲಾವಣೆ ಹೊಂದುತ್ತಿರುವ) ವಿಷಯಗಳೊಂದಿಗೆ ಸಂಬಂಧ ಹೊಂದಿದ್ದು, ಅವುಗಳಲ್ಲಿ ಆಸಕ್ತಿಯನ್ನಾಗಲಿ, ತಿರಸ್ಕಾರವನ್ನಾಗಲಿ ಹೊಂದುತ್ತೇವೆ. ಈಯೆರಡೂ, ನಮ್ಮನ್ನು ಬಂಧನಕ್ಕೆ ತಳ್ಳುವ ಶೃಂಖಲೆಗಳೇ. ನಾವು ಪ್ರಶಾಂತ ಜೀವನವನ್ನು ಬಯಸುವುದಾದರೆ, ಈಯೆಲ್ಲವುಗಳನ್ನು ಮೀರಿ ಮೇಲೇರಬೇಕು. ನಮ್ಮ ಪದ್ಧತಿಯನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡಿದರೆ, ಇಂಥ ಫಲವನ್ನೀಯುತ್ತದೆ.
ತಮ್ಮ ಯೋಚನೆ ಮತ್ತು ಭಾವೋದ್ವೇಗಗಳ ಕೊಚ್ಚೆಯಿಂದ ಮೇಲೇರಲು ಕಠಿಣ ಪರಿಶ್ರಮ ಪಡುತ್ತಿರುವುದಾಗಿ, ನನ್ನ ಅನೇಕ ಸಹಬಂಧುಗಳು ನನಗೆ ಬರೆಯುತ್ತಾರೆ. ಅದು ಅಭ್ಯಾಸಿಯಾದವನ ಕರ್ತವ್ಯವೂ ಸರಿಯೆ. ಅವನನ್ನು ಆ ಸ್ಥಿತಿಗೆ ಜಾಗ್ರತಗೊಳಿಸಲಾಗಿದೆ. ಅದರಿಂದಾಗಿ, ಕಾರ್ಯವು ಆ ರೂಪದಲ್ಲಿ ಆರಂಭಗೊಂಡು ಸಾಗುತ್ತದೆ.
ನೇಯ್ಕೆ ಮಾಡುವವನ ಜಾಣ್ಮಯಿಂದಾಗಿ ಬಟ್ಟೆಯ ತುಂಡು ತಯಾರಾಗುವುದು. ಅವನ ಕೈಗಳು ಕಾರ್ಯನಿರತವಾಗಿದ್ದು, ಅವನು ತನ್ನ ಜಾಣ್ನೆಯನ್ನು ತನ್ನ ಕೈಗಳ ಚಲನೆಯ ಮೂಲಕ ವ್ಯಕ್ತಪಡಿಸುತ್ತಾನೆ. ಜಾಣ್ಮಗೆ ಅದರದೇ ಆದ ಕೇಂದ್ರವೊಂದುಂಟು ; ಆದರೂ ಅದು ಕೈಗಳ ಮೂಲಕವೂ ಸಹ ಕಾರ್ಯಾಭಿವ್ಯಕ್ತಿಯನ್ನು ಪಡೆಯುತ್ತದೆ. ಅದೇ ರೀತಿ, ಉದ್ದಾರದ ಕಲ್ಪನೆ ಇದೆಯೆಂದರೆ, ಅದು ಸುಧಾರಣೆಯ ನಿಶ್ಚಿತ ಲಕ್ಷಣ.
ಪ್ರತಿಯೊಂದು ಹೂವೂ ತನ್ನ ಉಚಿತ ಪ್ರಮಾಣದಲ್ಲಿ ಬೆಳೆಯುವಂತಾಗುವಂತೆ ದೇವರು ಜಗತ್ತನ್ನು ಸೃಷ್ಟಿಸಿದ್ದಾನೆ. ಆದರೆ ಕಾಲನ ಹೊಡೆತವು ದೇವರ ಉದ್ದೇಶವನ್ನು ಮರೆಯುವಂತೆ ಮಾಡಿದೆ. ಹಾಗಾಗಿ ಕೆಲವರು ಜೀವನೋದ್ದೇಶವು ಸುಖಾನುಭೋಗವೆಂದು ತಿಳಿದರೆ, ಕೆಲವರಿಗೆ ಅದು ನೀರಸ ಏಕತಾನ. ಇಷ್ಟಾದರೂ “ಜೀವನವೆಂದರೇನು ?” ಎಂಬುದೇ ಪ್ರಶ್ನೆ, ಅದೊಂದು ಅಸ್ತಿತ್ವದ ಸ್ಥಿತಿ. ಅದು ನಾವು ಬದುಕಿರುವಷ್ಟು ಕಾಲವೂ ಆ ಪರಮಾತ್ಮನ (ಶಾಶ್ವತ ಅಸ್ತಿತ್ವದಲ್ಲಿ ಪೂರ್ಣ ಸಂಪರ್ಕದಲ್ಲಿದ್ದುಕೊಂಡು, ಆ ಶಾಶ್ವತ ಅಸ್ತಿತ್ವದ ಸುಗಂಧವನ್ನು ಪ್ರತಿ ಹೆಜ್ಜೆಯಲ್ಲಿಯೂ ಸವಿಯುತ್ತ, ಅದರಲ್ಲಿ ಶಾಶ್ವತವಾಗಿ ನೆಲೆನಿಲ್ಲುವಂತಿರಬೇಕು.
ಕೆಲವು ಸಲ ತಾಯಿಗೆ, ಕೆಲವು ಸಲ ತಂದೆಗೆ ಹೆಚ್ಚು ಅಂಟಿಕೊಂಡಿರುವುದು ಮಕ್ಕಳ ಸ್ವಭಾವ, ಎಲ್ಲದರ ಮೂಲವಾದ ಪ್ರೇಮವು ಅಲ್ಲಿದೆ ; ಅದಕ್ಕಾಗಿಯೇ ಮೋಹವೂ ಇದೆ, ಅದಕ್ಕೆ ಇನ್ನೂ ಹೆಚ್ಚಿನ ಉಪಶಾಖೆಗಳು ಇಲ್ಲದಿರಬಹುದು.
ನಮ್ಮ ಜೀವನವು ನೀರಿನಲ್ಲಿರುವ ನೀರುಗೋಳಿ, ಜಲಪಕ್ಷಿಗಳಂತಿರಬೇಕು. ಅವು ನೀರಿನಿಂದ ಹೊರಬರುತ್ತಿದ್ದಂತೆ, ಅವುಗಳ ರೆಕ್ಕೆಗಳಲ್ಲಿ ನೀರಿನ ಲವಲೇಶವೂ ಇರುವುದಿಲ್ಲ. ಅದೇ ರೀತಿ, ನಾವು ನಮ್ಮ ತಾಯಿ-ತಂದೆಯರನ್ನು ಮತ್ತು ಕುಟುಂಬದ ಇತರರನ್ನು ವ್ಯಾಮೋಹದಿಂದ ಕಲುಷಿತರಾಗದ ರೀತಿಯಲ್ಲಿ ಪ್ರೀತಿಸಬೇಕು. ಮೇಲಿನ ವಿಚಾರವನ್ನು ಆಧ್ಯಾತ್ಮಿಕವಾಗಿ ವ್ಯಕ್ತಮಾಡುವ ರೀತಿ ಇದು.
ಈ ಆಳವಾದ ಮಾತೃವಾತ್ಸಲ್ಯವು, ವ್ಯಕ್ತಿಯು ಒಂದು ಹೆಜ್ಜೆ ಮುಂದಡಿಯಿಟ್ಟಿದ್ದನ್ನು ಮೊಟ್ಟಮೊದಲಿಗೆ ತೋರಿಸುತ್ತದೆ. ಅದು ಪ್ರೇಮವು ಉದ್ದೀಪನಗೊಂಡುದರ ಲಕ್ಷಣ. ಈಗ ವ್ಯಕ್ತಿಯು, ಯಾವ ನೆಲೆಯಿಂದ ಪ್ರೇಮವು ಸರ್ವತ್ರ ಪಸರಿಸುವುದೋ, ಅದೇ ನೆಲೆಯಿಂದ ಪ್ರೇಮವನ್ನು ಕಲಿತುಕೊಳ್ಳಲು ಆರಂಭಿಸಿದ್ದಾನೆ, (ಎಂದರ್ಥ).
ವ್ಯಕ್ತಿಯು ಭೇದ-ಭಿನ್ನತೆಗಳನ್ನು ತ್ಯಜಿಸಿದರೆ ಸಾಕು, ಪ್ರೇಮವು ಪ್ರತಿಯೊಬ್ಬರೆಡೆಗೂ ಸರಿಸಮವಾಗಿ ಹರಿಯುತ್ತಿರುವುದನ್ನು ಅನುಭವಿಸುವನು. ಮತ್ತೆ, ಅದು ವಿಶ್ವವ್ಯಾಪಿಯಾಗುವುದು. ಆಗ, ತಂದೆ-ತಾಯಿ, ಗಂಡ-ಹೆಂಡತಿ, ಮತ್ತು ಬೇರೆಲ್ಲರೂ ಯಥಾಯೋಗ್ಯ ಪಾಲನ್ನು ಪಡೆಯುತ್ತಾರೆ. ‘ಪ್ರೇಮ’ವೇನೂ ದೂಷ್ಯವಲ್ಲ. ಆದರೆ ಅದರ ಸರಿಯಾದ ಉಪಯೋಗವು ನಮಗೆ ಗೊತ್ತಿಲ್ಲ. – ಅಷ್ಟೆ. ಅದನ್ನು ನಮ್ಮ ಪದ್ಧತಿಯು ಕಾಲಕ್ರಮೇಣ ಕಲಿಸಿಕೊಡುತ್ತದೆ.
ಪ್ರತಿಯೊಂದು ಜೀವಿಯು ಸಂತುಷ್ಟ ಮತ್ತು ನೆಮ್ಮದಿಯ ಜೀವನವನ್ನು ನಡೆಸಲೆಂಬುದು ಪ್ರಕೃತಿಯ ಗೂಢ ನಿಯಮ. ನಾವು ಅದಕ್ಕೆ ಹೊರತಾಗಿ ನಡೆದರೆ ಅವನ (ಸೃಷ್ಟಿಕರ್ತನ) ಜಗತ್ತನ್ನು ಕೆಡಿಸಿದಂತಾಯಿತು. ನಾವೆಲ್ಲರೂ ಸಂಸಾರವಂದಿಗರು ; ಆದರೆ ನಾವು ನಮ್ಮೆಲ್ಲ ವ್ಯವಹಾರಗಳಲ್ಲಿಯೂ ಮಿತತ್ವದಿಂದಿರಬೇಕು. ನಮಗೆ ಪ್ರತಿಯೊಂದರಲ್ಲಿಯೂ ಹಣದ ಆವಶ್ಯಕತೆಯಿದೆ. ನಮ್ಮ ಪೋಷಣೆ ಮತ್ತು ಯೋಗ್ಯ ಜೀವನಕ್ಕಾಗಿ ಹಣವನ್ನು ಹೊಂದಿರುವುದು, ಈ ಕಾರಣ ನಮ್ಮ ಕರ್ತವ್ಯವೇ ಆಗುತ್ತದೆ. ಆದರೆ ಹಣದ ಗೀಳು ಒಂದು ರೋಗವೇ. ಕವಿ ಜಾನ್ ಡನ್ ಹೇಳುವಂತೆ, ಅದು ಒಂದು ಬಗೆಯ ಕೀಳು ದುರಾಕಾಂಕ್ಷೆ,
ಜೀವನದ ಆವಶ್ಯಕತೆಗಳು ಅಲ್ಪವಿರಬೇಕು. “ಸರಳ ಜೀವನ ಉನ್ನತ ಚಿಂತನ” ಎಂಬ ಆಂಗ್ಲ ಗಾದೆಯಿದೆ. ನಿಜವಾಗಿ ಬೇಕಿರುವುದು ಅನುರಕ್ತಿಯಲ್ಲಿನ ವಿರಕ್ತಿ, ಎಲ್ಲ ಸಂದರ್ಭಗಳಲ್ಲಿಯೂ ಸಂತುಷ್ಟನಾಗಿರುವವನೇ ಅತ್ಯಂತ ಸುಖ ಮನುಷ್ಯ.
ನಾನಿಲ್ಲಿರುವುದೇ ಎಲ್ಲರ ಸೇವೆಗಾಗಿ, ಪ್ರತಿಯೊಬ್ಬರ ಕಷ್ಟಗಳೂ ದೂರವಾಗಿ, ಆಧ್ಯಾತ್ಮಿಕತೆಗೆ ತಕ್ಕುದಾದ ನೆಮ್ಮದಿಯ ಜೀವನವನ್ನು ನಡೆಸುವಂತಾಗಲೆಂದು ಪ್ರಾರ್ಥಿಸುತ್ತೇನೆ. ನಾನು ಕೇವಲ ಭಾರತದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸೇರಿದವನು. ಹಾಗಾಗಿ ಪರತತ್ವದ ಕುರಿತಾದ ಪ್ರೇಮದಲ್ಲಿ ಅಡಗಿರುವ ಸೌಂದರ್ಯವನ್ನು ಎಲ್ಲರೂ ಸವಿಯಬೇಕೆಂದು ಬಯಸುತ್ತೇನೆ.
***