‘ಸತ್ಯೋದಯ’ ‘ಸಹಜಮಾರ್ಗದ ಬೆಳಕಿನಲ್ಲಿ ರಾಜಯೋಗದ ಪ್ರಭಾವ’ ಮತ್ತು ‘ಅನಂತದೆಡೆಗೆ’ (ಎಲ್ಲವೂ ನಮ್ಮ ಗುರುಗಳಿಂದ ರಚಿತವಾದವು) – ಇವುಗಳನ್ನು ಓದಿದ ನಂತರ, ಇವುಗಳಲ್ಲಿ ವರ್ಣಿತವಾದಂತೆ ಕ್ರಮವಾಗಿ ವೃತ್ತಗಳು, ಮಂಡಲಗಳು ಹಾಗೂ ಗ್ರಂಥಿಗಳ ನಡುವಣ ಸಂಬಂಧದ ಬಗ್ಗೆ ಕಲ್ಪನೆ ಮಾಡಲಾರಂಭಿಸುವನು. ಒಬ್ಬ ಆರಂಭಿಕನು ಇನ್ನೂ ಹೆಚ್ಚು ವಿವರಿಸಬೇಕೆಂದು ಲೇಖಕರಿಗೆ ಕೇಳುವುದು ಸ್ವಾಭಾವಿಕ. ಗಂಭೀರ ಅಭ್ಯಾಸಿಯಾದವನು ಅವುಗಳನ್ನು ತಿಳಿಯುವುದಕ್ಕೆ ಬೇಕಾದ ತನ್ನ ಸಾಮರ್ಥ್ಯದ ಬಗ್ಗೆ ಸಂದೇಹಪಡುತ್ತಾನೆ, ಮತ್ತು ಅವನು ಇನ್ನೂ ಗಂಭೀರ ವಿಚಾರಶೀಲನಾಗಿದ್ದರೆ ಇನ್ನೂ ಹೆಚ್ಚಿನ ಬೆಳಕಿಗಾಗಿ ಭಾವಪೂರ್ಣನಾಗಿ ಪ್ರಾರ್ಥಿಸಬಹುದು.ಯಾವಾಗ ಅವನ ಹುಡುಕಾಟ ತಾಳಲಾರದಷ್ಟು ತೀವ್ರವಾಗುವುದೋ, ಮತ್ತು ಏನೇ ಆಗಲಿ ಅವನು ಜ್ಞಾನಪ್ರಕಾಶವನ್ನು ಏನೇ ಬೆಲೆ ತೆತ್ತಾದರೂ ಪಡೆಯಲು ಬಯಸುವನೋ, ಆಗ ಅವನಿಗೆ ಬಾಗಿಲು ತೆರೆಯುತ್ತದೆ ಹಾಗೂ ಅವನು ಸತ್ಯೋದಯದಲ್ಲಿ ತೋರಿಸಿದ ಮಾಯೆಯ ಮೊದಲನೆಯ ವೃತ್ತವನ್ನು ದಾಟುತ್ತಾನೆ.

ಎಲ್ಲ ವರ್ಣನೆಗಳು, ವಿವರಣೆಗಳು ಹಾಗೂ ಸೈದ್ಧಾಂತಿಕ ತಾತ್ವಿಕನಿರೂಪಣೆಗಳು ಪ್ರಥಮ ವೃತ್ತದ ಹೊರಗಡೆಗೇ ಉಳಿಯುವವು. ಹೆಚ್ಚಿಗೆ ಅಭಿವೃದ್ಧಿ ಹೊಂದಿದ ಮನಸ್ಸುಳ್ಳ ಮಾನವನು ಪ್ರಾಣಿ ಜೀವದಿಂದಲೇ ವಿಕಾಸ ಹೊಂದಿದವನೆಂದು ಹೇಳಲಾಗುತ್ತದೆ. ಮಾನವನು ತನ್ನ ಮನಸ್ಸನ್ನು ಎಷ್ಟೇ ಸುಧಾರಣೆಗೊಂಡ ರೀತಿಗಳಲ್ಲಿಯೇ ತನ್ನ ಪಾಶವೀ ಆವಶ್ಯಕತೆಗಳನ್ನು ಪೂರೈಸಲು ಉಪಯೋಗಿಸಿದರೂ ಅವನ ಅಸ್ತಿತ್ವದ ಸ್ತರವು ಆಧ್ಯಾತ್ಮಿಕ ವಲಯದ ಹೊರಗೇ ಉಳಿಯುವುದು. ಅವನು ಸದಾ ಪರಿವರ್ತನಶೀಲವಾದ ಸ್ಥೂಲತೆಯ ಜಗತ್ತಿನಲ್ಲಿಯೇ ಇರುತ್ತಾನೆ. ಯಾವುದು ದೈವೀ ವಿವೇಕವನ್ನು ಒಳಗೊಂಡಿರುವುದೋ ಆ ನೈಜ ಮೌಲ್ಯವನ್ನು ಬಹುತೇಕ ಅವನ ಎಲ್ಲ ಇಂದ್ರಿಯಗಳು ಹಾಗೂ ಸ್ವಾಭಾವಿಕ ಶಕ್ತಿಗಳು ಕಳೆದುಕೊಳ್ಳುತ್ತವೆ ಮತ್ತು ಹೆಚ್ಚು ಹೆಚ್ಚು ಸ್ಥೂಲತರವೂ ಜಡವೂ ಆಗುತ್ತವೆ. ಅವನ ಮನಸ್ಸು ಕೂಡ ಸಂಕೀರ್ಣತೆಗಳನ್ನು ಸೃಷ್ಟಿಸಿಕೊಳ್ಳುತ್ತ ಹೋಗುವುದು ಹಾಗೂ ಪರಸ್ಪರ ವೈರುಧ್ಯವುಳ್ಳ ಚಟುವಟಿಕೆಗಳ ಒಂದು ಮೂಟೆಯಾಗುತ್ತದೆ. ಯಾವುದೇ ವಿಶ್ರಾಂತಿಯನ್ನೇ ಕಾಣುವುದಿಲ್ಲ.

ಒಂದು ವೇಳೆ ದೇವರ ದಯೆಯಿಂದ ಮನುಷ್ಯನಿಗೆ ಒಂದು ಆಘಾತವಾಗಿ ತನ್ನ ಐಹಿಕ ಜೀವನದಿಂದ ಮೇಲಕ್ಕೇರುವ ತೀವ್ರ ಪ್ರೇರಣೆಯನ್ನು ಬೆಳೆಸಿಕೊಂಡರೆ, ತನ್ನ ಮನಸ್ಸನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಉಪಯೋಗಿಸಲು ಪ್ರಾರಂಭಿಸಬಹುದು. ಅಸ್ತಿತ್ವದ ಸದ್ಯದ ಸ್ಥೂಲ ಸ್ಥಿತಿಯಿಂದ ಮೇಲಕ್ಕೇರಲು ಅವನ ತಳಮಳದ ತೀವ್ರತೆ ಮತ್ತೂ ಹೆಚ್ಚಾಗಿ ಬೆಳೆದಾಗ, ಅವನ ಆಂತರಿಕ ಕಣ್ಣು ತೆರೆಯುವುದು ಹಾಗೂ ಸ್ಥೂಲ ಕ್ರಿಯೆಗಳ ಹಿಂದೆ ಕೆಲಸ ಮಾಡುತ್ತಿರುವ ಸೂಕ್ಷ್ಮ ಕಾರಣಗಳನ್ನು ಅವನು ಕಾಣುವನು. ನಿಜಕ್ಕೂ ಅವನ ಅಂತಃಪ್ರೇರಣೆಯು ಹೆಚ್ಚು ಮೇಲಕ್ಕೇರಲು ಹಾಗೂ ಸಂಪೂರ್ಣ ಭಿನ್ನವಾದ ಲೋಕದಲ್ಲಿ ಜೀವಿಸಲು ಪ್ರಾರಂಭಿಸುವುದಕ್ಕೆ ಒತ್ತಾಯಿಸುವುದು. ಅದೊಂದು ಪ್ರಜ್ಞಾಯುಕ್ತ ಬಲಗಳ ಹಾಗೂ ಶಕ್ತಿಗಳ ಜಗತ್ತು; ಅದು ಇಂದ್ರಿಯಾನುಭವಗಳ ಸ್ಥೂಲ ಜಗತ್ತನ್ನು ನಿಯಂತ್ರಿಸುವುದು. ತುಲನಾತ್ಮಕವಾಗಿ ಅದು ಹೆಚ್ಚು ಶಾಶ್ವತವಾದದ್ದು. ಅದು ಮಾಯೆಯ ಮೊದಲಿನ ಹಾಗೂ ಎರಡನೆಯ ವೃತ್ತಗಳ ಮಧ್ಯದಲ್ಲಿರುವುದು.

ಈ ಜಗತ್ತಿನ ಆಕರ್ಷಣೆಯ ಮಹಾಬಂಧನಕಾರಿ ಶಕ್ತಿಯ ಕಾರಣದಿಂದ, ಎರಡನೇ ವೃತ್ತವನ್ನು ದಾಟುವುದು ಬಹುತೇಕ ಅಸಾಧ್ಯವೇ ಆಗಿವೆ. ನಿಜವಾಗಿಯೂ, ಈ ಇಂದ್ರಿಯವೇದ್ಯ ಜಗತ್ತಿನ ಮಹಾ ಆಕರ್ಷಣೆಯಿಂದಾಗಿಯೇ, ಅತ್ಯಂತ ಕೆಲವೇ ಜನರು ಅಧ್ಯಾತ್ಮ ವಲಯದಲ್ಲಿ ಪ್ರವೇಶಿಸುತ್ತಾರೆ. ಮಾಯೆಯ ಮೊದಲನೆಯ ವೃತ್ತವನ್ನು ದಾಟಿದವರಲ್ಲಿ ಕೂಡ ಕ್ವಚಿತ್ತಾಗಿಯೇ ಧೈರ್ಯಶಾಲಿ ಹಾಗೂ ಸಾಹಸಿಯಾದ ವ್ಯಕ್ತಿಯೊಬ್ಬನು ಆಳವಾಗಿ ಛೇದಿಸಿ ಮುನ್ನುಗ್ಗಿ ಎರಡನೆಯ ವೃತ್ತವನ್ನು ದಾಟಲು ಅಭೀಪೈಪಟ್ಟಾನು. ಇಂದ್ರಿಯಗಳ ಮೂಲಕ ಗ್ರಹಿಸಲಾದ ಹಾಗೂ ಊಹೆಯಿಂದ (ಅನುಮಾನ ಪ್ರಮಾಣದಿಂದ) ಅರಿಯಲಾದ ಈ ಜಗತ್ತನ್ನು ವರ್ಣಿಸುವ ಲಕ್ಷಾಂತರ ಗ್ರಂಥಗಳು ಬರೆಯಲ್ಪಟ್ಟಿರುವಂತೆಯೇ, ಈ ಜಗತ್ತಿಗಿಂತ ಲಕ್ಷ ಲಕ್ಷ ಪಟ್ಟು ಹೆಚ್ಚು ಮನೋಹರವಾದ, ಪ್ರಜ್ಞಾಯುಕ್ತ (ಚೈತನ್ಯಯುಕ್ತ) ಶಕ್ತಿಗಳುಳ್ಳ ಆಂತರಿಕ ಜಗತ್ತನ್ನು ವರ್ಣಿಸಲು ಇನ್ನೂ ಲಕ್ಷ ಲಕ್ಷ ಪಟ್ಟು ಹೆಚ್ಚು ಗ್ರಂಥಗಳನ್ನು ಬರೆಯಬಹುದು. ಮತ್ತು ಹಾಗಾದಾಗ್ಯೂ ಅದು (ಆ ವರ್ಣನೆಯು) ಒಂದು ಅತಿ ಚಿಕ್ಕ ಭಾಗ ಮಾತ್ರವಾದೀತು.

ಯಾವನಾದರೊಬ್ಬನು ಮಾಯೆಯ ಎರಡನೆಯ ವೃತ್ತವನ್ನು ದಾಟಿದರೆ, ಅವನು ಮಾಯೆಯ ಮೋಹಕ ಜಗತ್ತಿನ ‘ಕಾರಣ’ಗಳಿಂದ ತುಂಬಿದ ಪ್ರದೇಶವನ್ನು ಪ್ರವೇಶಿಸುತ್ತಾನೆ. ಆ ಕ್ಷೇತ್ರದಲ್ಲಿ ಸಾಕಷ್ಟು ಚಲಿಸಿದ ನಂತರ ಒಬ್ಬನು ಎಲ್ಲ ಲೌಕಿಕ ಆಕರ್ಷಣೆ ಮತ್ತು ಎಳೆತಗಳಿಂದ ಮುಕ್ತವಾದ ಸ್ಥಿತಿಯನ್ನು ಕಾಣುವನು. ಈ ಜಗತ್ತಿನಲ್ಲಿ ಜನ್ಮವೆತ್ತಲು ಕಾರಣವಾಗುವ ಎಲ್ಲ ಬಂಧನಗಳಿಂದ ಮುಕ್ತವಾಗಿರುವ ಆ ಒಬ್ಬನು ದೇವರ ದಯೆಯಿಂದ ಮುಂದುವರಿಯಬಹುದು. ಮಹಾ ಆತ್ಮಗಳು ಹಂಬಲಿಸಿದ ಹಾಗೂ ಅದಕ್ಕಾಗಿ ಅಂಗಲಾಚಿ ಬೇಡಿಕೊಂಡ ಮುಕ್ತಿಯ (ಅಥವಾ ಮೋಕ್ಷ ಎಂದು ಕರೆಯಿರಿ) ಸ್ಥಿತಿಯು ಇದಾಗಿದೆ. ಈ ಸ್ತರದಲ್ಲಿ ಇರುವಂತಹ ಮಾನವನನ್ನು ನಿಜಕ್ಕೂ ಮನುಷ್ಯ’ ಎಂದು ಕರೆಯಬಹುದು, ಹೊರತು ಎಂದೆಂದಿಗೂ ಪಶು ಎಂದಲ್ಲ. ಅವನಲ್ಲಿದ್ದ ಪಶುತ್ವವು ಸಂಪೂರ್ಣ ಪಳಗಿಸಲ್ಪಟ್ಟಿರುವುದು, ಹಾಗೂ ಆ ವ್ಯಕ್ತಿಯ ಸಂಪೂರ್ಣ ನಿಯಂತ್ರಣದಲ್ಲಿರುವುದು. ಆದಾಗ್ಯೂ ಆತ್ಮವು ಶುದ್ಧ ಪ್ರಕಾಶವುಳ್ಳ ಯಾವುದೋ ಸ್ವರ್ಲೋಕವನ್ನು ನಿರೀಕ್ಷಿಸುತ್ತಿರುವುದು. ಭಗವತ್ ಸಾಮ್ರಾಜ್ಯವು ದೃಷ್ಟಿಯಲ್ಲಿರುವುದು; ಆದರೂ ಹೆಣಗಾಟವು ಇನ್ನೂ ಮುಂದುವರಿಯಬೇಕು.

ಮೂರನೆಯ ವೃತ್ತವನ್ನು ದಾಟುವುದು ಒಬ್ಬನನ್ನು ಮಾಯಾ ಕ್ಷೇತ್ರದ ಅತ್ಯಂತ ವಿರಲೀಕೃತವಾದ (ಸಾಂದ್ರತೆಯು ಅತ್ಯಂತ ಕಡಿಮೆ ಇರುವ), ಮತ್ತು ಸೃಷ್ಟಿಕಾರಕ ಶಕ್ತಿಯುಳ್ಳ ‘ಮಾಯಾ’ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ. ಈ ಕ್ಷೇತ್ರವನ್ನು ಪ್ರಧಾನವಾಗಿ ದೈವೀ ಪ್ರಭೆಯು ವ್ಯಾಪಿಸಿರುತ್ತದೆ. ಶಾಂತಿಯ ಸಾಗರದಲ್ಲಿ ತೀವ್ರ ಕ್ರಿಯೆ(ಯೂ) ಇರುವುದು. ಆ ಕ್ರಿಯೆಯು ವ್ಯರ್ಥವಲ್ಲ, ಬದಲಿಗೆ ಸೃಜನಾತ್ಮಕವೂ, ಉದ್ದೇಶಪೂರ್ಣವೂ ಆಗಿದೆ. ಅದು ಜಗತ್ತಿನಲ್ಲಿಯ ಆಗು ಹೋಗುಗಳಿಗೆ ಕಾರಣಗಳನ್ನುಂಟು ಮಾಡುವ ಆದ್ಯ ಶಕ್ತಿ. ಈ ಕ್ಷೇತ್ರದಲ್ಲಿ ‘ಕಾಲ’ವು ಐಹಿಕ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಿದ್ದರೂ, ಇದು ಇನ್ನೂ ಮಾಯೆಯ ಒಳಗಿರುವ ಕ್ಷೇತ್ರವೇ ಆಗಿದೆ. ಪ್ರಾಮಾಣಿಕ

ಯೋಗಿಯಾದವನು ಇದನ್ನು ದಾಟಿ ಹೋಗಲು ಹಾತೊರೆಯುವನು. ಅವನ ಉತ್ಕಟೇಚ್ಛೆಯು ಇನ್ನೂ ಹೆಚ್ಚಾಗಿ ಬೆಳೆಯುವುದು.

ದೈವೀ ಕೃಪೆಯು ಇಂತಹ ಮುಕ್ತಾತ್ಮನನ್ನು ನಾಲ್ಕನೆಯ ವೃತ್ತವನ್ನು ದಾಟಲು ಶಕ್ತನಾಗುವಂತೆ ಮಾಡುವುದು. ಆಯೋಗಿಯು ‘ಪ್ರಭುತ್ವ’ದ ಸ್ಥಿತಿಯಲ್ಲಿರುತ್ತಾನೆ. ಇದೊಂದು ಬಹಳ ಮುಂದುವರಿದ ಸ್ಥಿತಿಯಾಗಿದೆ. ಅವನು ಭಗವತ್ಸಂಕಲ್ಪಕ್ಕೆ ಅನುಸಾರವಾಗಿ ಕೆಲಸ ಮಾಡಲು ವೈಶ್ವಿಕ ಶಕ್ತಿಗಳನ್ನು ಬಳಸಬಲ್ಲನು. ಸೃಷ್ಟಿ, ಸ್ಥಿತಿ ಹಾಗೂ ಪ್ರಲಯಗಳ ಶಕ್ತಿಗಳು ಅವನ ಅಧೀನದಲ್ಲಿರುವಂತೆ ತೋರುವವು. ನಿಸರ್ಗದ ಶಕ್ತಿಗಳ ಮೇಲೆ ಅಧಿಕಾರ ಹೊಂದುವ ಯೋಗಿಯ ಉದ್ದೇಶವು ಬಹುತೇಕ ಸಫಲಗೊಳ್ಳುವುದು. ಯೋಗಿಯು ಇನ್ನೂ ಉನ್ನತ ಮಟ್ಟದ, ಅಥವಾ ಮಾನವ ಅಸ್ತಿತ್ವದ ಆತ್ಯಂತಿಕ ಸ್ಥಾನಕ್ಕೆ ತನ್ನ ಗುರಿಯನ್ನು ಇಟ್ಟುಕೊಂಡಿದ್ದರೆ ತನ್ನ ಪ್ರಾಪ್ತಿಯಿಂದ ತೃಪ್ತನಾಗಿ ಉಳಿಯಲಾರನು; ಹಾಗೂ ಸಾಕಷ್ಟು ಧೈರ್ಯವನ್ನು, ಸಂಕಲ್ಪಶಕ್ತಿಯನ್ನು ಮತ್ತು ವಿನಮ್ರತೆಯನ್ನು ಬೆಳೆಸಿಕೊಂಡು ಆ ವೈಶ್ವಿಕ ಶಕ್ತಿಗಳನ್ನು (ಸಿದ್ಧಿಗಳನ್ನು) ಕೂಡ ಭಗವಂತನಿಗೆ ಸಮರ್ಪಿಸುವನು ಹಾಗೂ ವಿರಲವಾಗಿರುವ ಮಾಯೆಯಿಂದ ಕೂಡ ಸಂಪೂರ್ಣ ಬಿಡುಗಡೆ ಹೊಂದಿ, ಮಾಯೆಯ ಐದನೆಯ ವೃತ್ತವನ್ನು ದಾಟುವನು.

ಮಾನವನ ಯತ್ನದ (ಸಾಧನೆಯ) ಅಂತಿಮ ಗುರಿಯಾಗಿ ಅಸ್ತಿತ್ವದ ಕೇಂದ್ರ ಮಂಡಲವನ್ನು ಸಹಜಮಾರ್ಗವು ಮಾನವ ಕುಲದ ಮುಂದಿರಿಸುತ್ತದೆ. ಮಾನವ ಅಹಂಕಾರದ ಸೂಕ್ಷ್ಮ ಸ್ತರಗಳಿವೆ. ನಮ್ಮ ಗುರುಗಳು ಈ ವಿಭಿನ್ನ ಹಂತಗಳನ್ನು ಹನ್ನೊಂದು ವೃತ್ತಗಳಿಂದ ನಿರೂಪಿಸಿದ್ದಾರೆ.ಅಭ್ಯಾಸಿಯು ಅಹಂಕಾರದ ಹನ್ನೊಂದೂ ವೃತ್ತಗಳನ್ನು ದಾಟಿ ಇನ್ನೂ ಮೇಲಕ್ಕೇರಿ ನಂತರ ದಿವ್ಯ ಜ್ಯೋತಿರ್ಮಯ ವೃತ್ತಗಳತ್ತ ಸಾಗಬೇಕೆಂದು ಬೋಧಿಸಿದ್ದಾರೆ. ಅದನ್ನು ಅವರು ಕೇಂದ್ರಮಂಡಲ ಎಂದು ಸೂಚಿಸಿ, ಏಳು ವೃತ್ತಗಳಿಂದ ನಿರೂಪಿಸಿದ್ದಾರೆ. ಕೇಂದ್ರ ಮಂಡಲವನ್ನು ದಾಟಿದ ಮೇಲೆ, ಅಭ್ಯಾಸಿಯ ಈಜುವಿಕೆಯು ದೈವೀ ಆನಂದದ ಸಾಗರದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ಆನಂದವೂ ಕೂಡ ವಿದಾಯ ಹೇಳುವುದು. ಆದರೆ ಒಂದು ಮಾತು, ಯಾವ ಸದ್ಗುರುವು ಸಮಗ್ರ ದೂರವನ್ನು ಕ್ರಮಿಸಿ, ಕೇಂದ್ರದೊಂದಿಗೆ ತದ್ರೂಪವೇ ಆಗಿ ಹೋಗಿರುವನೋ ಅಂತಹ ಸಮರ್ಥ ಗುರುವಿನ ಪ್ರಾಣಾಹುತಿಯ ಸಹಾಯವಿಲ್ಲದೆ ಅಹಂಕಾರದ ಎಲ್ಲ ಸ್ತರಗಳನ್ನು ಮೀರಿ ಹೋಗುವುದು ನಿಜಕ್ಕೂ ಅಸಾಧ್ಯವೇ ಸರಿ.

ಈ ಲೇಖನದ ಮೊದಲನೆಯ ಪರಿಚ್ಛೇದದಲ್ಲಿ ಪ್ರಸ್ತಾಪಿಸಲಾದ ವೃತ್ತಗಳು ಹಾಗೂ ಗ್ರಂಥಿಗಳ ನಡುವಣ ಸಂಬಂಧದ ಪ್ರಶ್ನೆಯು ‘ಸತ್ಯೋದಯ’ದಲ್ಲಿಯ ಮಾಯೆಯ ಐದು ವೃತ್ತಗಳ ಕುರಿತು ಬರೆಯುವುದಾಗಿತ್ತು. ಒಂದು ವೇಳೆ ಆ ಪ್ರಶ್ನೆಯ ಉತ್ತರಗಳ ಬಗ್ಗೆ ಊಹಿಸಲು ಯತ್ನ ಮಾಡಿದ್ದಾದರೆ, ಎಲ್ಲ ವರ್ಣನೆಗಳು ಹಾಗೂ ಕಲ್ಪನೆಗಳು ಮಾಯೆಯ ಎಲ್ಲಕ್ಕೂ ಹೊರಗಿನ ವೃತ್ತದ ಹೊರಗಡೆಗೇ ಉಳಿಯುವ ಅಂಜಿಕೆ ಇದ್ದುದರಿಂದ, ಅದು ಯಾವುದೇ ಆಧ್ಯಾತ್ಮಿಕ ಉದ್ದೇಶಕ್ಕೆ ಸಲ್ಲುತ್ತಿರಲಿಲ್ಲ. ಆದುದರಿಂದ, ಗುರುವಿನ ಪ್ರಾಣಾಹುತಿಯನ್ನು ಸ್ವೀಕರಿಸಲು, ಕೇಂದ್ರದ ತಿರುಳಿನೊಳಕ್ಕೆ ಪ್ರವೇಶಿಸಲು ಹಾಗೂ ಅವರ ಅಧಿಕಾರಯುಕ್ತ ಹೇಳಿಕೆಗಳನ್ನು ಮತ್ತು ವರ್ಣನೆಗಳಿಗೆ ಸ್ವಯಂ ಸಾಕ್ಷಿಯಾಗಲು ಸಾಮರ್ಥ್ಯವನ್ನು ಅವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತ ಈ ಲೇಖನವನ್ನು ಸಮಾಪನೆಗೊಳಿಸುತ್ತೇನೆ.

[ಸಹಜಮಾರ್ಗ ಪತ್ರಿಕೆ, ನಂ. 6, 1977]