(೧೨-೯-೧೯೭೬ ರಂದು, ಬೆಂಗಳೂರು ಯೋಗಾಶ್ರಮದ ಉದ್ಘಾಟನಾ ಸಂದರ್ಭ)
ನಮ್ಮ ಬೆಂಗಳೂರು ಕೇಂದ್ರದಲ್ಲಿ ಒಂದು ಹೊಸ ಆಶ್ರಮದ ಕಟ್ಟಡವು ಉದ್ಘಾಟಿಸಲ್ಪಡುತ್ತಿರುವ ಈ ಸುಸಂದರ್ಭವು ಒದಗಿ ಬಂದಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ನನ್ನ ಕ್ಷೀಣ ಆರೋಗ್ಯದಿಂದಾಗಿ ಹಾಗೂ ಇಲ್ಲಿಯ ಇತರ ಕಾರ್ಯಭಾರದ ನಿಮಿತ್ತ, ನಾನು ನಿಮ್ಮೆಲ್ಲರೊಡನೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗದುದಕ್ಕಾಗಿ, ನನಗೆ ಬೇಸರವೂ ಆಗುತ್ತದೆ.
ಜನರು ನಮ್ಮ ಬಗೆಗೆ ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರಲಿ, ಬಿಡಲಿ, ಅದನ್ನು ಮನಸ್ಸಿಗೆ ತಾರದೆ, ನಾವು ಮಾನವ ಕುಲದ ಉನ್ನತಿಗೋಸ್ಕರ ನಮ್ಮ ಕರ್ತವ್ಯವನ್ನು ಮಾಡುತ್ತಲೇ ಇರಬೇಕು. ಅದಕ್ಕಾಗಿ ಕೆಲಮಟ್ಟಿಗೆ ಕಷ್ಟಗಳೂ, ಅಲ್ಪಸ್ವಲ್ಪ ತ್ಯಾಗ ಮಾಡಬೇಕಾದ ಆವಶ್ಯಕತೆಯೂ ಬಂದರೂ ಸರಿಯೆ- ಅದು ನಾವು ಸಾಧಿಸಬೇಕಾದ ಅತ್ಯುನ್ನತ ನೀತಿ ಎಂದು ನನ್ನ ನಂಬುಗೆ. ಇದು “ಸಾಧುತ್ವ”ದ ಒಂದು ಅಂಶ. ನಾವು ಕಾರ್ಯಗೈಯುವಾಗ ಕೆಲವೊಂದು ಅಡೆ-ತಡೆಗಳು ಬರುವುದು ಸಹಜವೇ. ಕ್ರಮೇಣ ಅವು ಕ್ಷೀಣವಾಗುವುವು. ಪರಮಾತ್ಮನಿಗೋಸ್ಕರ ಹಂಬಲಿಸುವ ಸಜ್ಜನರು ಎಲ್ಲ ಕಡೆಗೂ ಇದ್ದಾರೆ. ನಾವು ಸೇವೆಗೈದರೆ, ಯಶಸ್ಸು ಖಂಡಿತವಾಗಿಯೂ ಮೂಡಿಬರುತ್ತದೆ. ಒಂದು ಕ್ಷಣಮಾತ್ರಕ್ಕಾದರೂ ಸರಿಯೆ, – ದೈವಿಕತೆಯ ಹೊಳಹನ್ನು ಪಡೆದವರೇ ಧನ್ಯರು, ಸಹಜಮಾರ್ಗ ಪದ್ದತಿಯಲ್ಲಿ, ಕೆಲವು ವೇಳೆ ಅತ್ಯುನ್ನತ ಅನುಭವಗಳು ಕೆಳಹಂತದ ದಶೆಗಳಲ್ಲಿಯೇ ಲಭಿಸುತ್ತವೆ. ಪ್ರಕೃತಿಯು ಜೀವಿಗೆ ಭಕ್ತಿಯ ಶಾಖದಿಂದ ಕಾವು ಕೊಡುತ್ತಿದೆಯೆಂದು ಇದರ ಅರ್ಥ. ಶೈತ್ಯ ಮತ್ತು ಶಾಖಗಳೆರಡೂ, – ಕೊಂಚ ವ್ಯತ್ಯಾಸ ಬಿಟ್ಟರೆ- ಹೆಚ್ಚು-ಕಡಿಮೆ ಒಂದೇ. ಕೆಳಗಿನ ಭಾಗವು ಶಾಖ. ಏಕೆಂದರೆ ಭಾರರಹಿತ ಭಾರ’ವು ಅದರ ಮೇಲ್ಗಡೆ ಇದೆ. ಎರಡೂ ಸ್ವಾಭಾವಿಕ ಸ್ಥಿತಿಗೆ ಬಂದರೆ, ಅದೇ ನಿಜವಾದ ಸಾಕ್ಷಾತ್ಕಾರ. ಆದ್ದರಿಂದ, ನೀವು ‘ಭಾರ’ವನ್ನು ತೆಗೆದೊಗೆಯಿರಿ, ಆಗ ಸಾಂದ್ರತೆ ಇಲ್ಲದಂತಾಗುವುದು. ಭೂ-ಪದಾರ್ಥ ಸ್ಪರ್ಶದಲ್ಲಿರುವಾಗ ಗಾಳಿಯು ಸಾಂದ್ರತೆಯುಳ್ಳದಾಗಿರುತ್ತದೆ. ಆ ಸಂಯೋಗವು ತಪ್ಪಿದಾಗ ಎಲ್ಲ ವಿಷಯಗಳಲ್ಲಿಯೂ ಸಮಾನತೆಯನ್ನೇ ಕಾಣುವಿರಿ. ಪ್ರಕೃತಿಯು ಒಂದು ಹೊತ್ತಿಗೆ ಒಂದೇ ಮುಷ್ಟಿಯನ್ನು ತೆರೆಯುತ್ತದೆಯೇ ಹೊರತು, ಎರಡನ್ನೂ ಅಲ್ಲ. ಶೈತ್ಯದ ಪಕ್ಕದಲ್ಲಿಯೇ ಶಾಖದ ಅಲೆಯೂ ಇರುತ್ತದೆ. ಅನಾದಿಕಾಲದಿಂದಲೂ ಇದು ಹೀಗೆಯೇ ನಡೆಯುತ್ತಲಿದೆ. ಇವುಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರಲ್ಲಿದೆ, ಮಾನವಜೀವಿಯ ಜಾಣೆ, ನಾವು ಈ “ಅಸ್ತಿತ್ವ’ದ ಚಕ್ರದ ಒಂದು ಭಾಗ ; ಇನ್ನೂ ಸರಳ ಶಬ್ದಗಳಲ್ಲಿ ಹೇಳುವುದಾದರೆ, ನಾವು ಪ್ರಕೃತಿಯ ಒಂದು ಭಾಗ. ನಾವು ಪ್ರಕೃತಿಗೆ ಅನುಗುಣವಾಗಿರಬೇಕೇ ಹೊರತು, ಅದನ್ನು ಎದುರಿಸಿ ಹಣಿಯಲು ಯತ್ನಿಸಬಾರದು. ಎಲ್ಲ ವಿಷಯಗಳನ್ನೂ, ಪ್ರಕೃತಿಯೊಂದಿಗೆ ಸಹಕರಿಸುವಂತೆ ಬದಲಾಯಿಸಿಕೊಂಡರೆ, ಸಮತೋಲನ ಸ್ಥಿತಿಯು ಬೆಳೆಯುತ್ತದೆ. ಮತ್ತು ನಮಗೆ ಬೇಕಾದದ್ದೂ ಅದೇ. ಈ ಸಮತೋಲನವು “ಅಭ್ಯಾಸ” ದಿಂದಲೇ ಅರಳುತ್ತದೆ.
ಯಾವಾಗ ಕಲ್ಪನೆ (ಭಾವ) ಉಂಟಾಗುವುದೋ, ಆಗ ಅದರ ಪರಿಣಾಮ ರೂಪದಲ್ಲಿ ಕಾರ್ಯವೂ ಬರುವುದು. ಅರ್ಥವಿದ್ದಲ್ಲಿ ಶಬ್ದಗಳೂ ಇರುತ್ತವೆ. ನೀವು ಇವುಗಳನ್ನೆಲ್ಲ ನಿರ್ಮೂಲನಗೈದಾಗ ಸತ್ಯವು ಉದಯಿಸಲು ಆರಂಭಿಸುತ್ತದೆ. ಮತ್ತು ಅದು ಪೂರ್ಣವಾಗಿ ಬೆಳೆದು ಫಲ-ಪುಷ್ಪಗಳನ್ನು ಕೊಡಲಾರಂಭಿಸುವುದು. “ಲಯಾವಸ್ಥೆ’ಯನ್ನು ಹೊಂದುವುದು ಮುಖ್ಯ ; ಅದು ಸರಳ ಜೀವಿಯ ಮೇಲೆ ದಯಪಾಲಿಸಲಾಗುವ ಶ್ರೇಷ್ಠ ಕೊಡುಗೆ. ತನ್ನ ವಿಷಯದ ಬಗೆಗೇ ಲವಲೇಶವೂ ಅರಿವಿಲ್ಲದವನೇ ಸರಳಜೀವಿ. ಸತ್ಯದ ಬಗೆಗಿನ ಉತ್ಕಂಠೆಯು ಜೀವಿಯನ್ನು ಯೋಗ್ಯ ಪಥಕ್ಕೆ ತರುತ್ತದೆ. ಅದು ಜೀವಿಯಲ್ಲಿ ಸುಪ್ತವಾಗಿರುವ ‘ಅವಸ್ಥೆ’ಗೆ ಹೊಸ ಚೈತನ್ಯವನ್ನಿತ್ತು, ಮಾನವನಿಗೆ ಮೀಸಲಾಗಿರುವ ಆ ಅತ್ಯುನ್ನತ ಗುರಿಯನ್ನು ತಲುಪಲು ಅವನನ್ನು ಅಣಿಗೊಳಿಸುತ್ತದೆ. ಅಷ್ಟೇ ಅಲ್ಲ, ಅದು ಪ್ರಗತಿಯ ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನೂ ನಿರ್ಮೂಲನ ಮಾಡಿ, ಇಡೀ ಸ್ಥಿತಿಯನ್ನೇ ಮಾರ್ಪಡಿಸುತ್ತದೆ. ಸಾಕ್ಷಾತ್ಕಾರದ ನಿಜವಾದ ಅರ್ಥವೆಂದರೆ ಸಾವಿನ ಸಾವು” ಅಥವಾ “ಅಂತ್ಯದ ಅಂತ್ಯ”. ಮನುಷ್ಯನು ಈ ಅವಸ್ಥೆಯಲ್ಲಿ ತಲ್ಲೀನನಾದರೆ ಮುಂದಿನ ದಾರಿ ಸುಗಮವಾದಂತೆಯೇ !
ನೀವೆಲ್ಲರೂ, ಅಷ್ಟೇಕೆ, ಇಡೀ ಮಾನವಕುಲವು ಆ ಸತ್ಯ ಸ್ಥಿತಿಯ ರುಚಿರಹಿತ ರುಚಿಯನ್ನು ಅತ್ಯಂತ ಶೀಘ್ರವಾಗಿ ಪಡೆಯುವಂತಾಗಲೆಂಬುದೇ ನನ್ನ ಬಯಕೆ, ಹಾಗೂ ಪ್ರಾರ್ಥನೆ. ಆದರೆ ಅದಕ್ಕೋಸ್ಕರ ನೀವು ತುಂಬಾ ಪರಿಶ್ರಮ ಪಡಬೇಕು. ಆ ಭಗವಂತನು, ನಿಮಗೆ ಅದನ್ನು ಸಾಧಿಸಲು ಬೇಕಾದ ಶಕ್ತಿಯನ್ನು ಕರುಣಿಸಲಿ.