(೩೦-೪-೧೯೭೭ ರಂದು ಪೂಜ್ಯ ಬಾಬೂಜಿ ಮಹಾರಾಜರ ೭೮ ನೇ ವರ್ಧಂತ್ಯುತ್ಸವದಲ್ಲಿ, ಮದುರೆಯಲ್ಲಿ ನೀಡಿದ ಸಂದೇಶ)
ಪ್ರಿಯ ಸೋದರ ಸೋದರಿಯರೆ,
ಸಾಮಾನ್ಯವಾಗಿ ನೇರವಾಗಿ ನನ್ನನ್ನೇ ಕುರಿತಾದ ಸಮಾರಂಭಗಳಲ್ಲಿ ಉಪಸ್ಥಿತನಿರುವ ರೂಢಿ ನನಗಿಲ್ಲ. ಆದರೆ ಮದುರೆ ಕೇಂದ್ರ ಮತ್ತು ಸುತ್ತಮುತ್ತಲ ಸಹಬಾಂಧವರ ಪ್ರೇಮ ಮತ್ತು ಒತ್ತಾಯಗಳು ನಾನು ಈ ಸಂದರ್ಭದಲ್ಲಿ ಭಾಗವಹಿಸುವಂತೆ ಮಾಡಿದವೆಂದೇ ಹೇಳಬೇಕು. ನಾನು ಸ್ವತಃ ನಿಮ್ಮಲ್ಲಿ ಬರುವಂತೆ ಒಪ್ಪಿಸುವುದರಲ್ಲಿ, ಮಿಷನ್ನಿನ ಕಾರ್ಯದರ್ಶಿಗಳಾದ ಶ್ರೀ ಪಾರ್ಥಸಾರಥಿಯವರ ಪಾತ್ರವೇನೂ ಅಲ್ಪವಲ್ಲ.
ಇಲ್ಲಿ ಸೇರಿರುವ ಬಹುತೇಕ ಸೋದರ ಸೋದರಿಯರ ಮನಸ್ಸಿನಲ್ಲಿ, ಆ ಪರಮಾತ್ಮನನ್ನು, ಅಂದರೆ, ಅಂತಿಮ ಪರತತ್ವವನ್ನು ಪಡೆಯಬೇಕೆಂಬ ಬಯಕೆ ಹುದುಗಿದೆ. ಸಾಕ್ಷಾತ್ಕಾರವನ್ನು ಹೊಂದಬೇಕೆಂಬ ಸಂಕಲ್ಪವಿದ್ದು, ಅದಕ್ಕೋಸ್ಕರ ಪ್ರಾಮಾಣಿಕ ತೀವ್ರಾಭಿಲಾಷೆ ಇದ್ದವನಿಗೆ, ಸಾಕ್ಷಾತ್ಕಾರವನ್ನು ಪಡೆಯಲು ಬೇಕಾದ ಸಾಧನಗಳು ಖಂಡಿತವಾಗಿ ಲಭ್ಯವಾಗುತ್ತವೆ. ಮನಸ್ಸಿದ್ದಲ್ಲಿ ಮಾರ್ಗವಿದೆ’ಯೆಂದು ಒಂದು ಗಾದೆ. ‘ಕಲ್ಪನೆಯು ತನ್ನ ಎಲ್ಲೆಯನ್ನು ಮೀರಿದಾಗ “ವಿಚಾರ’ವಾಗುತ್ತದೆ. ವಿಚಾರವು ಬಲವತ್ತರವಾದಾಗ ಸಾಕ್ಷಾತ್ಕಾರವನ್ನು ಪಡೆಯಲು ಬೇಕಾದ ಚಟುವಟಿಕೆಯೂ ಬೆಳೆಯುತ್ತದೆ. ಆಳಕ್ಕೆ ಮುಳುಗುವವನೇ ಮುತ್ತುಗಳನ್ನು ತಂದಾನು. ಸಾಕ್ಷಾತ್ಕಾರದ ಜ್ವಲಂತ ಅಭಿಲಾಷೆಯು ಗುರಿಯನ್ನು ಹತ್ತಿರ ಹತ್ತಿರ ತರುತ್ತದೆ. ತನಗೆ ಒಳಿತಾಗಬೇಕೆಂದು ಬಯಸುವವನು, ತನ್ನಲ್ಲಿ ಯುಕ್ತ ಶ್ರದ್ದೆ, ಯೋಗ್ಯ ಪರಿಜ್ಞಾನ ಮತ್ತು ಸದಾಚಾರ ಸಂಪನ್ನತೆಯನ್ನು ಬೆಳೆಸಿಕೊಳ್ಳಲು ಸ್ವಯಂ ಉತ್ಸುಕನಾಗಿರಬೇಕು.
ಸದ್ದರ್ಮ, ಸದ್ವರ್ತನೆಗಳು ಯೋಗದ ಸಾರ್ವಕಾಲಿಕ ತಳಹದಿಯಾಗಿವೆ. ಅದಕ್ಕೆಂದೇ, ನನ್ನ ಪೂಜ್ಯ ಗುರುಗಳಾದ ಸಮರ್ಥ ಗುರು ಶ್ರೀ ರಾಮಚಂದ್ರಜ ಮಹಾರಾಜಿ (ಫತೇಹಗಡ ಉ. ಪ್ರ.) ಅವರು ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಅವರು ಯಾವಾಗಲೂ ನೀತಿಬದ್ದ ಚಾರಿತ್ರ್ಯ ವಿಕಸನಕ್ಕೆ ಪ್ರಾಮುಖ್ಯ ನೀಡುತ್ತಿದ್ದರು. ಜೀವನ ಕ್ರಮವು ಉನ್ನತ ನೈತಿಕ ನಿಯಮಗಳಿಂದ ತುಂಬಿರಬೇಕು. ಅದಿಲ್ಲದಿದ್ದರೆ, ಮನುಷ್ಯನು ಎಲ್ಲಕ್ಕಿಂತ ಮಿಗಿಲಾದ, ಮತ್ತು ಹೊಂದಲು ಯೋಗ್ಯವಾದ ಸೂಕ್ಷ್ಮತರದ ಆಧ್ಯಾತ್ಮವನ್ನು ಪಡೆಯಲು ಶಕ್ತನಾಗುವುದಿಲ್ಲ. ನಾವೆಲ್ಲರೂ ವಿಮುಕ್ತಿಯನ್ನು ಬಯಸುತ್ತೇವೆ, ಆದರೆ ಅದರ ಅರ್ಥವೇ ನಮಗೆ ಗೊತ್ತಿಲ್ಲ. ದುಃಖಾನುಭವವು ಬೇರು, ಅದರ ಪರಿಣಾಮಗಳೇ ಪುಷ್ಪಗಳು, – ಅವುಗಳನ್ನು ಹೊಂದಲು ಪ್ರತಿಯೋರ್ವ ಸಹಬಾಂಧವನೂ ಕಠಿಣ ಪರಿಶ್ರಮಗೈಯಬೇಕು.
ನಮ್ಮ ಸತ್ಸಂಗಿ ಬಂಧುಗಳಲ್ಲಿ ಅನೇಕರು ತಮ್ಮ ಕಷ್ಟಗಳನ್ನು ಕುರಿತು ನನಗೆ ಬರೆಯುತ್ತಾರೆ, ಹಾಗೂ, ನಾನು ಅವುಗಳನ್ನು ನಿವಾರಿಸಬೇಕೆಂದು ಬಯಸುತ್ತಾರೆ. ಅವರಿಗೆ, ಅಂತೆಯೇ ಇತರರಿಗೂ ಕೂಡ, ನಾನು ಹೇಳಬಯಸುವುದೇನೆಂದರೆ ಅವು (ಕಷ್ಟಗಳು), ಅವುಗಳು ‘ಸ್ತಬ್ದ’ ವಾದ ಸ್ಥಿತಿಯನ್ನು ನಮಗೆ ನೆನಪಿಸುತ್ತವೆ. ಅನನುಕೂಲ ಪರಿಸ್ಥಿತಿಯಲ್ಲಿ ನಾವು ಸೌಖ್ಯವನ್ನು ಪಡೆಯುತ್ತೇವೆ. ಯಾವುದನ್ನಾದರೂ ನಾವು ನೆನಪಿಸಿಕೊಳ್ಳುವುದು, ಅದರ ವಿರುದ್ಧವಾದದ್ದು ಇದ್ದಾಗ. ಈ ರೀತಿಯಲ್ಲಿ ನಾವು ಸ್ವಲ್ಪ ತಾಳ್ಮೆ, ಹಾಗೆಯೇ ಕೊಂಚ ಶಾಂತಿಯನ್ನೂ ಬೆಳೆಸಿಕೊಳ್ಳುತ್ತೇವೆ. ನಿಜ ಹೇಳಬೇಕೆಂದರೆ, ಕಷ್ಟ ಕಾರ್ಪಣ್ಯಗಳು ನಮ್ಮ ಒಳಿತಿಗೋಸ್ಕರ ಇರುವ ಪ್ರಕೃತಿಯ ಶಸ್ತ್ರಚಿಕಿತ್ಸೆಗಳು. ನಾನು ‘ಪರಮಾತ್ಮ’ನಿಗೆ ‘ಶೂನ್ಯತಾ ಸ್ಥಿತಿ’ ಎಂಬ ಶಬ್ದವನ್ನು ಬಳಸಿರುವುದು ಕೆಲ ಜನರಿಗೆ ತುಸು ಗೊಂದಲವಾಗಿದೆ. ನಾನು ಕೇವಲ ‘ಶೂನ್ಯ’ ಎಂಬ ಪದವನ್ನು ಬಳಸಿಲ್ಲ, ಅದರಲ್ಲಿ ‘ಸ್ಥಿತಿ’ ಎಂಬುದೂ ಇದೆ ಎಂಬುದನ್ನು ಅವರು ಮರೆಯುತ್ತಾರೆ. ನಾವು ಸೂಕ್ಷ್ಮತಮ ವಸ್ತುವನ್ನು ಕುರಿತು ಚಿಂತನೆ ಮಾಡಿದಾಗ, ಕಲ್ಪನೆಯು (ವಸ್ತು [thing] ಎಂಬುದಕ್ಕಿಂತ) ಹಿಂದಕ್ಕೆ ಹೊರಳಿ, ನಿಜಕ್ಕೂ ಏನಿದೆಯೋ ಅದರ ಅನ್ವೇಷಣೆಯಲ್ಲಿ ಹೊರಡುತ್ತದೆ. ನೀವು ಹೌದು (ಇದೆ) ಎಂದಾಗ ‘ಇಲ್ಲ’ (ಅಲ್ಲ) ಎಂಬುದರ ಕಲ್ಪನೆಯೂ ಸಹ ಅಲ್ಲಿದೆ. ನಾನು ಇಲ್ಲ’ ಎಂದರೆ, ‘ಅನಸ್ತಿತ್ವ’ (ನಾಸ್ತಿತ್ವ) ಕಲ್ಪನೆ ಅಲ್ಲಿದೆ. ನಾನು ಹೌದು (ಇದೆ) ಎಂದರೆ ಅಸ್ತಿತ್ವದ ಕಲ್ಪನೆ ಅಲ್ಲಿದೆ. ಆದರೆ ಭಗವಂತನು ಇವೆರಡಕ್ಕೂ ಆಚೆಗಿದ್ದಾನೆ. ಅವನು ಅಸ್ತಿ’ಯೂ ಅಲ್ಲ, ‘ನಾsಸ್ತಿ’ಯೂ ಅಲ್ಲ. ಹಾಗಾಗಿ ಆ ಪರಾತ್ಪರನಿಗೆ ಪ್ರಯೋಗಿಸಬಹುದಾದ ಸರಿಯಾದ ಮತ್ತು ಸೂಕ್ತವಾದ ಏಕೈಕ ಶಬ್ದವೆಂದರೆ ‘ಶೂನ್ಯತಾ ಸ್ಥಿತಿ’ ಎಂಬುದೇ ಹೊರತು, `ಅಸ್ತಿ ಸ್ಥಿತಿ’ಯಲ್ಲ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ನಮ್ಮ ಗುರಿಯು ‘ಅಂತಿಮ ತತ್ವ’ವಾದ ಪರಾತ್ಪರನೇ ಆಗಿರಬೇಕು. ಅವನು ಎಂಥದೇ ಸ್ಥಿತಿಯಲ್ಲಿರಲಿ, ಅದರ ಗೊಡವೆ ನಮಗೆ ಬೇಕಿಲ್ಲ. ಅದಲ್ಲದೆ, ನಾವು ಇದೆ’, ಅಥವಾ ‘ಇಲ್ಲ” ಎಂಬುದರಿಂದ ಬಂಧಿತರಾಗಿದ್ದೇವೆ ; ಆದರೆ, ಎಲ್ಲಿ ಆ ಪದಗಳನ್ನು ಸರಿಯಾಗಿ ಅನ್ವಯಿಸಬೇಕೆಂಬುದು ನಮಗೆ ಗೊತ್ತಿಲ್ಲ. ಇದು ಅನುಭವದಿಂದ ಬರುವುದು, ಮತ್ತು ಅನುಭವವು ಪ್ರಯೋಗದಿಂದ ಬರುವುದು.
ಆಗಾಗ ನನ್ನ ಸಹಬಂಧುಗಳಿಂದ ಅವರಿಗಾಗುವ ಆತಂಕ (ಉದ್ವೇಗಗಳನ್ನು ಕುರಿತು ದೂರಿ ನನಗೆ ಬರೆಯುತ್ತಾರೆ. ಮತ್ತೆ ನಾನು ಅವುಗಳನ್ನು ನಿವಾರಿಸಲು ಸಹಾಯ ಮಾಡಬೇಕೆಂತಲೂ ಬಯಸುತ್ತಾರೆ. “ಉದ್ವೇಗ’ ಉಂಟಾದಾಗ “ನಿರುದ್ವೇಗ’ವು ದೂರ ಸರಿಯುತ್ತದೆ ಎಂಬುದನ್ನು ಅವರು ಮರೆಯುತ್ತಾರೆ. ಉದ್ವೇಗವು ಹೋದಾಗ ನಿರುದ್ಯೋಗವು ಅಲ್ಲಿಯೇ ಇದೆ. ಅದು ಅಷ್ಟು ಭಾರವೆನಿಸದಿದ್ದರೂ, ಏನೋ ಇರುವುದಂತೂ ಸರಿಯೆ. ಅವೆರಡೂ ಹೊರಟುಹೋದಾಗ, ಆ ಸ್ಥಿತಿಯನ್ನು “ಮೌನಸ್ಥಿತಿ’ ಅಥವಾ ‘ಆಂಶಿಕ ಶೂನ್ಯತಾಸ್ಥಿತಿ” ಎಂದು ಕರೆಯಬಹುದು. ಶೂನ್ಯತೆಯು ಪರಿಪೂರ್ಣವಾಗಿಲ್ಲ – ವೆಂಬುದೇನೋ ನಿಜವೆ, ಆದರೆ ನಾವು ಅದನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟರ ಮಟ್ಟಿಗೆ ಪಡೆಯಬೇಕು. “ಪೂರ್ಣ ಶೂನ್ಯ’ನೆಂದರೆ ಆ ಪರಮಾತ್ಮನೊಬ್ಬನೇ. ನಾವು ದೈವತ್ವದಲ್ಲಿ ಲೀನರಾದಾಗ ಶೂನ್ಯತಾವಸ್ಥೆಯು ಕರಗುತ್ತ ಹೋಗಿ, “ಪೂರ್ಣಶೂನ್ಯತೆ”ಯ ಅರ್ಥಾತ್ ಪರತತ್ವದ ಅತ್ಯಂತ ಸನಿಹಕ್ಕೆ ಸರಿಯುತ್ತದೆ. ಮೌನತ್ವವು ಆಧ್ಯಾತ್ಮದ ಕೆಲವು ಕಣಗಳ ಒಂದಂಶವೇ ಹೊರತು, ಅದೇ “ಸತ್ಯತೆ’ಯಲ್ಲ. ತುಸು ವಿವರಿಸುವುದಾದರೆ, ಮೌನಸ್ಥಿತಿಯು ಪರಮಾತ್ಮನಿಗೆ ತೀರ ಸಮೀಪದಲ್ಲಿದೆ, ಎಂದು ಮಾತ್ರ ಹೇಳಬಲ್ಲೆ. ಅಂದರೆ ಮೌನಸ್ಥಿತಿಯು ನಿಂತಿರುವುದು ಮೌನಸ್ಥಿತಿಯ ಪೀಠದ ಮೇಲೆಯೇ. ಬಾಹ್ಯ ವಾತಾವರಣದಲ್ಲಿ ಅನೇಕಾನೇಕ ಕ್ರಿಮಿಗಳುಂಟು, ಅವು ನಮ್ಮ ಬರಿಕಣ್ಣಿಗೆ ಕಾಣಿಸದಿರಬಹುದು. ಆದರೂ ಅವು ಇರುವುದಂತೂ ದಿಟ. ಹಾಗೆಯೇ ಮೌನಸ್ಥಿತಿಯು ನಮಗೆ ಗೋಚರವಾಗದಂತಹ ಅಮೂರ್ತ ಸ್ಥಿತಿಯಲ್ಲಿ ಇದೆ. ಸಹಜಮಾರ್ಗ ಪದ್ಧತಿಯ ನಿರಂತರ ಸಾಧನೆಯಿಂದ ಅದನ್ನು ಕಾಣಬಹುದು. ಈ ದಿಶೆಯಲ್ಲಿ ನಮ್ಮ ‘ಮಿಷನ್ನಿ ‘ನ ಪ್ರಾರ್ಥನೆಯೂ ಬಹಳ ಮಹತ್ವವುಳ್ಳದ್ದು. ಈ ಪ್ರಾರ್ಥನೆಯ ಮೂಲಕ ನಾವು ಬಾಹ್ಯಗದ್ದಲದಿಂದ, ಬಾಹ್ಯ ಮೌನವನ್ನು ಮುಟ್ಟುತ್ತೇವೆ. ಶುದ್ದೀಕರಣದ (cleaning) ಮೂಲಕ ನಾವು ಬಾಹ್ಯ ಮೌನದಿಂದ ಆಂತರಿಕ ಮೌನದತ್ತ ಸಾಗುತ್ತೇವೆ. ಮತ್ತೆ, ಪ್ರಾರ್ಥನೆಯ ದ್ವಾರಾ, ನಮ್ಮ ಗುರಿಯನ್ನು ಸಮೀಪಿಸುತ್ತೇವೆ, ಯಾಕೆಂದರೆ, ಆಗ ನಾವು ಪರಮಾತ್ಮನ ಸಂಪರ್ಕದಲ್ಲಿ ಬರುತ್ತೇವೆ. ಯಾವ ಪದ್ಧತಿಯು ಕ್ರಮಬದ್ಧವಾಗಿ ಪಾಲಿಸಿಕೊಂಡುಹೋದರೆ ಅಮೃತವನ್ನು ಕೊಡುವುದೋ, ಅದೇ, ಕ್ರಮಬದ್ಧವಾಗಿಲ್ಲದಿದ್ದಲ್ಲಿ ಹಾನಿಕಾರಕವಾದೀತು. ಸಹಜಮಾರ್ಗ ಪದ್ಧತಿಯಲ್ಲಿ ಯೋಗ್ಯ ವಿಧಾನವನ್ನು ಸಂಪೂರ್ಣ ಸ್ಪಷ್ಟತೆಯೊಂದಿಗೆ ನಿರ್ದೇಶಿಸಲಾಗಿದೆ.
ಮುಕ್ತಾಯಕ್ಕೆ ಮುನ್ನ, ಧ್ಯಾನದ ಸಮಯದಲ್ಲಿ ಬರುವ ವಿಚಾರಗಳನ್ನು ಕುರಿತು ಒಂದಿಷ್ಟು ಹೇಳಬಯಸುತ್ತೇನೆ. ಈ ವಿಷಯದಲ್ಲಿ ದೇಶದ ಎಲ್ಲಾ ಕಡೆಯಿಂದಷ್ಟೇ ಅಲ್ಲ, ಹೊರದೇಶಗಳ ಅಭ್ಯಾಸಿ ಬಾಂಧವರನೇಕರಿಂದ ದೂರುಗಳು ಬರುತ್ತಿವೆ. ಧ್ಯಾನ ಸಮಯದಲ್ಲಿ ಬರುವ ವಿಚಾರಗಳು, ರಸ್ತೆಯಲ್ಲಿ ಆಡುವ ಮಕ್ಕಳಿದ್ದಂತೆ. ನಿಮ್ಮ ಲಕ್ಷ್ಯವು ಆ ವಿಚಾರಗಳು ಇರದಿದ್ದರೆ, ಅವು ಸಂಪೂರ್ಣ ನಿಷ್ಪಭಾವಿಯಾಗುವವು, ಮತ್ತು ಅವಕ್ಕೆ ಎಳ್ಳಷ್ಟೂ ಬೆಲೆಯಿಲ್ಲ. ವಾಸ್ತವಿಕವಾಗಿ, ನಿಮ್ಮಷ್ಟಕ್ಕೆ ನೀವೇ ವಿಚಲಿತಗೊಳ್ಳುವಿರೇ ಹೊರತು, ವಿಚಾರಗಳು ನಿಮ್ಮನ್ನು ವಿಚಲಿತಗೊಳಿಸುವುದಿಲ್ಲ. ಅವುಗಳನ್ನು ನಿವಾರಿಸಿಕೊಳ್ಳಲು, ನಾನು ಪುನಃ ಪುನಃ ಹೇಳಿದ ಮಾರ್ಗವೆಂದರೆ, ಅವುಗಳತ್ತ ಉದಾಸೀನದಿಂದಿದ್ದು, ಅವುಗಳನ್ನು ಕರೆಯದೆ ಬಂದ ಅತಿಥಿಗಳಂತೆ ಭಾವಿಸುವುದು. ಅವು ಮೇಲೆದ್ದು ಬರುವುದೇ, ಬಿದ್ದು ಹೋಗುವುದಕ್ಕಾಗಿ, ದೈವಿಕ ಶಕ್ತಿಯು ಹರಿದುಬರಲು ಅನುವು ಮಾಡಿಕೊಡಲು ಅವು (ವಿಚಾರಗಳು) ತಮ್ಮ ನೆಲೆಯನ್ನು ತೆರವು ಮಾಡಿಕೊಡುತ್ತವೆ. ಧ್ಯಾನದ ಶಕ್ತಿಯು ತಾಪದ ತೆರೆಯನ್ನು ಹರಿದೊಗೆದಾಗ, ಉಂಟಾಗುವ ಕಿಂಚಿತ್ ಶೂನ್ಯತೆಯಿಂದಾಗಿ ಯೋಚನೆಗಳು ಆಕರ್ಷಿಸಲ್ಪಡುತ್ತವೆ. ವಿಚಾರಗಳುಂಟಾದಾಗ ನೀವು ನೀವೇ ತೊಂದರೆಪಡುವಿರೇ ಹೊರತು ಅವು ನಿಮ್ಮ ಕೆಲಸದಲ್ಲಿ ತಲೆಹಾಕುವುದಿಲ್ಲ. ಬದಲಾಗಿ ನೀವು ಅವುಗಳ ಗೊಡವೆಗೆ ಹೋಗುತ್ತೀರಿ. ಕೆಲವರು ಪ್ರೇಮವನ್ನು ಕುರಿತು ಮಾತನಾಡಿದರೆ, ಇನ್ನು ಕೆಲವರು ‘ಭಯ’ದ ಬಗ್ಗೆ ದೂರುತ್ತಾರೆ. ‘ಪ್ರೇಮ’ ಮತ್ತು ‘ಭಯ’ ಇವೆರಡರ ಕೇಂದ್ರ ಒಂದೇ ಎಂದು ನಾನವರಿಗೆ ಹೇಳುವುದು, ನಾವು ನಮ್ಮನ್ನು ಪ್ರಾಪಂಚಿಕತೆಯತ್ತ ಎಳೆದುಕೊಂಡರೆ, ಭಯಾವಹ ವಿಷಯಗಳು ತಮ್ಮ ಸ್ವಭಾವವನ್ನು ತೋರತೊಡಗುತ್ತವೆ. ಬದಲಾಗಿ, ನಾವು ದೈವಿಕತೆಯತ್ತ ವಾಲಿದರೆ, ಎಲ್ಲವೂ ದೈವಲೀಲೆ’ಯಾಗಿ ಪರಿಣಮಿಸುತ್ತದೆ. ಒಂದೇ ಕೇಂದ್ರಕ್ಕೆ ಸೇರಿದವುಗಳಾದ್ದರಿಂದ, ಪ್ರೇಮ, ಮತ್ತು ಭಯ ಇವೆರಡೂ ಗಣನೀಯವಾದವುಗಳೇ. ಆದರೆ, ಯೋಗ್ಯವಾದುದನ್ನು ಸ್ವೀಕರಿಸಿ, ಅಸಮರ್ಪಕವಾದುದನ್ನು ತಿರಸ್ಕರಿಸುವ ವಿವೇಕ ನಮ್ಮದಿರಬೇಕು. ಇದೆಲ್ಲವೂ ನಮ್ಮ ಒಳಿತಿಗಾಗಿಯೇ.
ನೈಜ ಪ್ರೇಮವು ತನ್ನ ದೈವಿಕ ಗುಣಗಳೊಡನೆ, ಪರಿಶುದ್ಧ ಮನದಲ್ಲಿ ಮಾತ್ರ ಅರಳುತ್ತದೆ. ನಮ್ಮನ್ನು ನಾವು ಮರೆತಾಗಮಾತ್ರ ನಾವು ಅಜ್ಞಾತವನ್ನು ಅರಿಯಬಹುದು. ಕೆಲವೊಮ್ಮೆ ಈ ಸಂಗತಿಗಳು ಬಂದು, ಸರಿದುಹೋಗುತ್ತವೆ ; ಆದರೆ ನಾವು ಅವುಗಳನ್ನು ದೃಢವಾಗಿ ಹಿಡಿದು, ನಮ್ಮೊಳಗೆ ಸ್ಥಿರಗೊಳ್ಳುವಂತೆ ಮಾಡಬೇಕು. ಅಲ್ಲಿಂದಾಚೆಗೇನೆ, ನೀವು ಮೇಲ್ಮಟ್ಟಕ್ಕೇರುವುದು. ಇಲ್ಲಿ ನೆರೆದಿರುವ ನಿಮ್ಮದಷ್ಟೇ ಅಲ್ಲ, ಇಡೀ ಮಾನವಕುಲದ ಜೀವನವೂ, ‘ನೈಜ ಜೀವನವೇ ಮೈ ತಳೆದಂತೆ” ಆಗಬೇಕೆಂಬುದೇ ನನ್ನ ಜೀವನದ ಗುರಿ. ಅಂದರೆ, ನಾನು ಪದೇ ಪದೇ ಹೇಳುವಂತೆ, ಜೀವನದೊಳಗಿನ ಜೀವನ’ವಾಗಬೇಕು. ನಿಮ್ಮಲ್ಲನೇಕರು ಉದ್ಯಾನದ ಸುಂದರ ಪುಷ್ಪಗಳನ್ನು ಇನ್ನೂ ಪೂರ್ಣವಾಗಿ ಕಂಡಿಲ್ಲ ; ಅವುಗಳ ಪರಿಮಳವನ್ನು ಸವಿದಿಲ್ಲ. ನೀವೆಲ್ಲರೂ ಅದನ್ನು ಪೂರ್ಣವಾಗಿ ಸವಿಯುವಂತಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಇದನ್ನು ಪಡೆಯುವುದಕ್ಕೋಸ್ಕರವೇ, ಹಿಂದೆ ರಾಜ ಮಹಾರಾಜರು ತಮ್ಮ ಸಿಂಹಾಸನಗಳನ್ನೇ ತೊರೆದು ತಪಸ್ಸು ಮಾಡಲು ಕಾಡಿಗೆ ತೆರಳುತ್ತಿದ್ದರು. ಆದರೆ, ಸಾಮಾನ್ಯ ಪ್ರಾಪಂಚಿಕ ಜೀವನ ನಡೆಸಿಕೊಂಡು ಹೋಗುವಾಗಲೇ, ನಮ್ಮೆಲ್ಲ ಕಾರ್ಯಗಳೂ ತಪಸ್ಸಾಗುವ ರೀತಿಯಲ್ಲಿ ಬಾಳಿ ಉನ್ನತೋನ್ನತ ಗುರಿಯನ್ನು ಅರ್ಥಾತ್, ಪರಾತ್ಪರನನ್ನು ಪಡೆಯುವ ಒಂದು ಪದ್ದತಿಯನ್ನು ಸಹಜವಾರ್ಗವು ಒದಗಿಸುತ್ತದೆ. ಈ ದಿಸೆಯಲ್ಲಿ ನಾನು ನನ್ನ ಶಕ್ತಿಮೀರಿ ಸಹಾಯಮಾಡಬಲ್ಲೆನಾದರೂ, ನಿಮ್ಮ ಸ್ವಂತ ಪ್ರಯತ್ನವೇ ಅತ್ಯಂತ ಗಣನೀಯ. ನೀವೆಲ್ಲರೂ ಪ್ರಾಮಾಣಿಕತೆಯಿಂದ, ಮನಃಪೂರ್ವಕವಾಗಿ ಈ ಸಾಧನೆಗಳನ್ನು ಕೈಗೊಳ್ಳಲು ಶಕ್ತರಾಗಲೆಂದು ಹಾರೈಸುತ್ತೇವೆ.
ಇದೇ ನಿಮ್ಮೆಲ್ಲರಿಗಾಗಿ ನಾನು ಮಾಡುವ ಪ್ರಾರ್ಥನೆ.