ಒಬ್ಬ ಅಭ್ಯಾಸಿಯು ಗುರುಗಳಿಗೆ -“ಮೊದಲು ನಾನು ದೇವರನ್ನು ನೋಡಬೇಕು. ಅನಂತರ ನಾನು ಪೂಜೆ ಪ್ರಾರಂಭಿಸುವೆ” -ಎಂದು ಪತ್ರಬರೆದಿದ್ದನು. ಅದಕ್ಕೆ ಪೂಜ್ಯಗುರುಗಳು – “ಯಾವುದು ನಿಮ್ಮ ಎಲ್ಲ ಚಟುವಟಿಕೆಯ ಕೊನೆಯಾಗಿದೆಯೋ, ಅದನ್ನು ನಿಮ್ಮ “ಅನುಭವದಲ್ಲಿ ತಂದುಕೊಳ್ಳಬೇಕೆನ್ನುವಿರಿ. ಇದು, ಒಬ್ಬ ಹುಡುಗನು ಮೊದಲು ಷೇಕ್ಸಪಿಯರ್‌ನನ್ನು, ಮಿಲ್ಟನ್‌ನನ್ನು ಅರ್ಥಮಾಡಿಕೊಳ್ಳುವೆ, ಅನಂತರ ಎ ಬಿ ಸಿ ಡಿ -ಅಕ್ಷರ ಮಾಲೆಯನ್ನು ಕಲಿಯುತ್ತೇನೆಂದು ಬಯಸಿದಂತಿದೆ” – ಎಂದು ಉತ್ತರಿಸಿದರು. ನೀವು ಅರಸುತ್ತಿರುವ ವಸ್ತುವೇ ನಿಮ್ಮ ಮುಂದೆ ಬಂದು ನಿಂತರೆ, ಆಗ ಪೂಜೆ ಮಾಡಬೇಕೆಂದು ಕೇಳಲು ಯಾರು ಧೈರ್ಯ ಮಾಡುವರು ?

ಒಟ್ಟಿನಲ್ಲಿ ಪೂಜೆ ಎನ್ನುವುದು ಯಾವುದೋ ಗುರಿಯನ್ನು ಸಾಧಿಸುವ ಒಂದು ಸಾಧನ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಗುರಿ ಅಥವಾ ಗಮ್ಯವನ್ನು ಸಾಧಿಸಿದ ಮೇಲೆ, ಅದು ಎಲ್ಲ ಪೂಜೆಗಳ ಅಂತ್ಯವೇ ಆಗುತ್ತದೆ. ಗುರಿಯು ದೃಷ್ಟಿಯಿಂದ ಮರೆಯಾಗಿ ಹೋದಾಗ ಮಾತ್ರವೇ, ಸಾಧನಗಳು ಒಂದು ವಿಸ್ತಾರವಾದ ಕಟ್ಟುನಿಟ್ಟಿನ ರೂಪ ತಾಳುವುದು. ವಿಭಿನ್ನವಾದ, ಅಸಂಖ್ಯಾತ ಮತ್ತು ಜಟಿಲವಾದ ಯಾಂತ್ರಿಕ ಪೂಜಾ ವಿಧಾನಗಳು ಇರುವುವೆಂಬುದಕ್ಕೆ ಇದೇ ಕಾರಣವಾಗಿದೆ.

ದೇವರೊಂದಿಗೆ ತನ್ನ ಏಕತೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಹಾಗೂ ಅದರಲ್ಲಿ ಶಾಶ್ವತವಾಗಿ ನೆಲೆಸುವ ಗುರಿಯನ್ನು ನಿರ್ಧರಿಸಿದ ನಂತರ ಅದರ ಪ್ರಾಪ್ತಿಗಾಗಿ ಸಾಧನೆಗಳನ್ನು ಕಂಡುಕೊಳ್ಳಬೇಕು. ಅಲ್ಲದೆ, ದೇವರ ಕಲ್ಪನೆಯ ಕುರಿತಾದ ತೊಂದರೆಯನ್ನು ಬಗೆಹರಿಸಿಕೊಳ್ಳಬೇಕು. ದೇವರು ಸಾಕಾರ, ನಿರಾಕಾರ, ವ್ಯಕ್ತ, ಅವ್ಯಕ್ತ, ಇಂದ್ರಿಯಾತೀತ, ಪರಿಮಿತ, ಅಪರಿಮಿತ, ಸಗುಣ, ನಿರ್ಗುಣ ಇತ್ಯಾದಿ, ದೇವರನ್ನು ಕುರಿತ ಅನೇಕ ವ್ಯಾಖ್ಯೆಗಳುಂಟು. ಈಯೆಲ್ಲ ಕಲ್ಪನೆಗಳ ಜೊತೆಗೆ ಮನಸ್ಸನ್ನು ಆಟವಾಡಲು ಬಿಟ್ಟರೆ ಅದು ಇವೆಲ್ಲವುಗಳ ಗೊಂದಲ ಮಾಡಿಕೊಳ್ಳುವುದು ನಿಶ್ಚಿತ. ಆದ್ದರಿಂದ ದೇವರನ್ನು ಕುರಿತ ಸರಿಯಾದ ಕಲ್ಪನೆಯನ್ನು ಹೊಂದಬೇಕಿದ್ದರೆ, ಸಮಗ್ರ ದಾರಿಯನ್ನು ಕ್ರಮಿಸಿದ ಯೋಗ್ಯ ಗುರುವಿನ ಸಹಾಯ ಪಡೆಯಬೇಕಾಗುವುದು. ಸಮರ್ಥನಾದ ಗುರುವು, ಪ್ರಾಣಾಹುತಿ ಶಕ್ತಿಯ ಮೇಲೆ ಪ್ರಭುತ್ವ ಹೊಂದಿರುವವನಾಗಿದ್ದರೆ, ಭಗವಂತನ ಸೂಕ್ಷ್ಮಭಾವವನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಧಾರೆಯೆರೆಯುವನು; ಮತ್ತು ಮನಸ್ಸು ಕೃಷಿತವಾಗಿದ್ದರೆ ತನ್ನದೇ ಸೂಕ್ಷ್ಮ ರೀತಿಯಲ್ಲಿ ಗ್ರಹಿಸಿ ದೃಢವಾಗಿ ಹಿಡಿದುಕೊಳ್ಳುವುದು. ಅದರ ಫಲಿತಾಂಶವೆಂದರೆ ಒಂದು ಬಗೆಯ ಸಮಾಧಾನ, ಅಷ್ಟೇ ಅಲ್ಲ, ದೃಢವಾದ ನೆಲೆಯೊಂದನ್ನು ಕಂಡುಕೊಂಡ ಒಂದು ತರಹದ ಭಾವನೆ, ಅಲ್ಲದೆ ಅದಕ್ಕೂ ಹೆಚ್ಚಾಗಿ ತನ್ನದೇ ಸುಪ್ತ ಹಂಬಲದ ಸಾಕ್ಷಾತ್ಕಾರ. ಅಗೋ ! ಅಂತಿಮ ಸ್ಥಿತಿಯಿಂದಲೇ ಆರಂಭದಿಂದಲೇ ಮಾಡಿದಂತಾಯಿತು.

ಈಗ ಪೂಜೆಯ ವಿಷಯಕ್ಕೆ ಬರೋಣ. ಗುರು ಕೃಪೆಯಿಂದ ಪ್ರಾರಂಭದಲ್ಲಿಯೇ ಗುರಿಯನ್ನು ಪಡೆದ ಮೇಲೆ ಪೂಜೆಯನ್ನೇಕೆ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಬಹುದು. ಅದಕ್ಕೆ ಉತ್ತರವೆಂದರೆ, ಹೀಗೆ ಸಾಧಿಸಲ್ಪಟ್ಟ ಗುರಿಯು, ಇನ್ನೂ ಗೂಢ, ಗುಪ್ತ, ಸೂಕ್ಷ್ಮವಾಗಿದೆ ಅಥವಾ, ಹೆಚ್ಚೆಂದರೆ, ಅಜ್ಞಾನದ, ಮತ್ತು ಅಂಧಕಾರದ ಪಾತಾಳದಲ್ಲಿಯ ಒಂದು ಕ್ಷಣಿಕ ಮಿಂಚು ಅದಾಗಿರುತ್ತದೆ. ಅಂತರಾಳದಲ್ಲಿ ಹೃದಯವು ಪ್ರಕಾಶಿತವಾಗಿರುವುದೆಂಬುದು ನಿಃಸಂದೇಹ, ಆದರೆ, ಸಮಗ್ರ ಹಾಗೂ ಸಂಪೂರ್ಣ ಪರಿವರ್ತನೆಯಾಗಿ ಪರಿಣಮಿಸುವಂತಾಗಲು, ಎಚ್ಚರಿಕೆಯಿಂದ ಹಾಗೂ ನಿರಂತರವಾಗಿ ಉದ್ದೀಪನಗೊಳಿಸುತ್ತಿರಬೇಕು.

ಈ ಉದ್ದೀಪನಗೊಳಿಸುವ ಕಾರ್ಯವೇ ಪೂಜೆ, ಅಥವಾ ಅಭ್ಯಾಸ. ಗುರಿಯನ್ನು ಅಷ್ಟು ಸೂಕ್ಷ್ಮವಾಗಿ ಸಾಧಿಸಲಾಗಿದೆಯೆಂಬುದು ಕಂಡು ಬಂದಂತೆಯೇ, ಸ್ವಾಭಾವಿಕವಾಗಿ, ಅಭ್ಯಾಸವೂ ಕೂಡ ಸುಲಭವೂ, ಸರಳವೂ ಆಗಿರಬೇಕು. ಅಭ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ಮಾಡಿದ್ದಾದರೆ, ವಿಶೇಷವಾಗಿ ಮಾರ್ಗದರ್ಶಕನ (ಗುರುವಿನ) ಪ್ರಾಣಾಹುತಿ ಶಕ್ತಿಯಿಂದ ಅದು * ಬೆಂಬಲಿಸಲ್ಪಟ್ಟಾಗ, ದಿನ ದಿನಕ್ಕೂ ಹೆಚ್ಚು ಹೆಚ್ಚು ಸೂಕ್ಷ್ಮತರವಾಗುತ್ತ ಹೋಗುವುದು ಒಂದು ಸಾಮಾನ್ಯ ಅನುಭವದ ಸಂಗತಿಯಾಗಿದೆ; ಅದನ್ನು ಅಭ್ಯಾಸಿಗಳು ಚೆನ್ನಾಗಿ ಬಲ್ಲರು.

ಸಹಜಮಾರ್ಗ ಪದ್ಧತಿಯಲ್ಲಿ ಅಭ್ಯಾಸಿ ಮತ್ತು ಭಗವಂತನ ನಡುವೆ ಒಂದು ಸೂಕ್ಷ್ಮ ಸಂಬಂಧವು ಪ್ರಾರಂಭದಲ್ಲಿಯೇ ಸ್ಥಾಪಿಸಲ್ಪಡುವುದು. ಹೀಗೆ ಸ್ಥಾಪಿಸಲ್ಪಟ್ಟ ಸಂಬಂಧದ ಕೊಂಡಿಯನ್ನು ಬಲಪಡಿಸಲು ಯತ್ನಿಸುವುದು ಅಭ್ಯಾಸದಲ್ಲಿ ಒಳಗೊಂಡಿದೆ. ಈ ಅಭ್ಯಾಸದಲ್ಲಿ ಚಿಂತನೆಯೇ ಪ್ರಧಾನವಾಗಿದೆ. ಅಷ್ಟೇ ಅಲ್ಲ, ಪ್ರಮುಖ ಪರಿಣಾಮಕಾರಿ ಅಂಗವಾಗಿದೆ. ಪ್ರತಿಯೊಂದು (ಬಗೆಯ) ಅಭ್ಯಾಸದಲ್ಲಿಯೂ ಅದು ಹೀಗೆಯೇ ಇದೆ. ಸದಾಕಾಲಕ್ಕೂ ಅದೊಂದು ಜೀವಂತ ಅನುಭವವಾಗುವವರೆಗೆ ಚಿಂತನವನ್ನು ಗುರುವಿನಿಂದ ಎರೆಯಲ್ಪಟ್ಟ ಪವಿತ್ರ ಭಾವದ ಮೇಲೆ ಮತ್ತೆ ಮತ್ತೆ ಹೆಚ್ಚು ಹೆಚ್ಚಾಗಿ ನೆಲೆಗೊಳ್ಳುವಂತೆ ಮಾಡುವುದು ಪೂಜೆಯ ಇಡೀ ತಂತ್ರ ಅಥವಾ ಕೌಶಲವಾಗಿದೆ.

ಗುರುವಿನ ಕುರಿತಾದ ಪ್ರೇಮ ಮತ್ತು ಆಸಕ್ತಿಯು ಅಭ್ಯಾಸವನ್ನು ತೀವ್ರತರವನ್ನಾಗಿಸುವುದು. ಒಬ್ಬನು ಪ್ರೇಮಿ ಹಾಗೂ ಪ್ರಿಯತಮ, ಮಗು ಮತ್ತು ತಾಯಿ, ಅಥವಾ ಸೇವಕ ಮತ್ತು ಒಡೆಯ, ಮುಂತಾದ ಮಾನವರಿಗೆ ಗೊತ್ತಿರುವ ಯಾವುದೇ ಸಂಬಂಧದ ಭಾವವನ್ನು ಬೆಳೆಸಿಕೊಂಡರೆ ಈ ಪ್ರೇಮವು ಶೀಘ್ರವಾಗಿ ವರ್ಧಿಸುವುದು. ತನ್ನ ರುಚಿಗೆ ತಕ್ಕಂತೆ ತಾನು ಯಾವ ಭಾವವನ್ನು ತೆಗೆದುಕೊಳ್ಳಬೇಕೆಂಬುದನ್ನು ಒಬ್ಬನು ನಿರ್ಧರಿಸಿಕೊಳ್ಳಬಹುದು. ಮನುಷ್ಯ ಮತ್ತು ಭಗವಂತನ ನಡುವಣ ನೈಜ ಸಂಬಂಧದ ಭಾವವು ಬೆಳೆಯಿತೆಂದರೆ, ಸಮಸ್ಯೆಯು ತತ್‌ಕ್ಷಣವೇ ಪರಿಹಾರವಾಗುವುದು. ಆದರೆ ಮನುಷ್ಯರಿಗೆ ಸಾಮಾನ್ಯವಾಗಿ ಈ ನೈಜ ಸಂಬಂಧದ ಅರಿವು ಇರುವುದಿಲ್ಲ. ಆದ್ದರಿಂದ, ನೈಜ ವಸ್ತುವಿನ ಒಂದು ಪ್ರತಿಬಿಂಬ ಅಥವಾ ನಿಕಟ ಪ್ರತಿರೂಪದ ಭಾವವನ್ನು ಬೆಳೆಸಿಕೊಳ್ಳುವುದು ಸೂಕ್ತವೆನಿಸುವುದು. ಒಡೆಯ ಮತ್ತು ಸೇವಕ ಭಾವವನ್ನು ಕೆಲವು ವರಿಷ್ಠ ಆಚಾರ್ಯರು ಪ್ರತಿಪಾದಿಸಿದ್ದಾರೆ, ಮತ್ತು ಅದು ಸರಿಯೂ ಇದೆ. ಈ ಸಂಬಂಧವೇ ಮಾನವ ಮತ್ತು ಭಗವಂತನ ನಡುವೆ ವಾಸ್ತವವಾಗಿ ಇರುವುದು. ಈಗ, ಅವನೊಡನೆ ಸಲುಗೆಯಿಂದಿರುವಂತೆ ಅನುವು ಮಾಡಿಕೊಡುವುದು ಅವನ ಕೃಪೆಯನ್ನೇ ಅವಲಂಬಿಸಿದೆ. ಅವನು ಹಾಗೆ, ಸಾಮಾನ್ಯವಾಗಿ ಅನುವು ಮಾಡಿಕೊಡುತ್ತಾನೆ.

ನನ್ನ ಅಭ್ಯಾಸದ ಅವಧಿಯಲ್ಲಿ ಮನಸ್ಸನ್ನು ಕಾರ್ಯನಿರತಗೊಳಿಸಬೇಕೆಂಬುದಕ್ಕೆ ನಾನೇನು ಮಾಡಿದೆ ಎಂದು ನಾನು ನಿಮಗೆ ಹೇಳಬಹುದು. ಎಲ್ಲ ಕಾಲಕ್ಕೂ, ಈಗಲೂ ಇರುವಂತೆಯೇ ನನ್ನ ಗುರುಗಳೇ ನನ್ನ ಈ ಸರ್ವಸ್ವವಾಗಿದ್ದರು. ನನ್ನ ಹೃದಯದ ಒಳಗೆ ಹಾಗೂ ಹೊರಗೆ ಕೂಡ ಅವರ ಆಕಾರದ ಮೇಲೆ ಧ್ಯಾನ ಮಾಡಿದೆ. ಆದರೆ ನಿಮಗೆ ಇದನ್ನು ನಾನು ಶಿಫಾರಸು ಮಾಡುವುದಿಲ್ಲ. ಯಾಕೆಂದರೆ, ನೀವು ಅವರನ್ನು ನೋಡಿಲ್ಲ. ಈ ವಿಧಾನದಿಂದ ನಾನು ಗಳಿಸಿದ ಲಾಭ ವರ್ಣನೆಗೆ ಮೀರಿದುದು. ಪತಂಜಲಿಯ 1-37ನೆಯ ಸೂತ್ರವು (ವೀತರಾಗ ಏಷಯಂ ವಾ ಚಿತ್ತಮ್) ಇದಕ್ಕೆ ಪೂರ್ಣ ಸಮರ್ಥನೆ ನೀಡುತ್ತದೆ. ಆದರೂ ಕೆಲವು ಜನರಿಗೆ ಇದರ ಬಗ್ಗೆ ಆಕ್ಷೇಪಣೆ ಇರಬಹುದು.

– ಶ್ರೀ ಬಾಬೂಜಿ